Sunday, 15th December 2024

ಅಫ್ಘನ್‌ನ ಪ್ರತಿಯೊಬ್ಬ ನಾಗರಿಕನೂ ಸೈನಿಕನಾಗಬೇಕು

ಪ್ರಚಲಿತ

ಲತಾ ಆರ್‌.

lathar.1997@gmail.com

ತಾಲಿಬಾನ್‌ಗಳು ವೀರರೂ ಅಲ್ಲ, ಶೂರರೂ ಅಲ್ಲ. ವಿದೇಶಿ ಸೇನೆಯನ್ನು ಎದುರಿಸಲಾಗದೇ ದೇಶ ಬಿಟ್ಟು ಹೋದಂತಹ ರಣಹೇಡಿಗಳು. ಅವರ ಪೌರುಷ ಏನೇ ಇದ್ದರೂ ಅಸಹಾಯಕ ನಾಗರಿಕರ ಮೇಲೆಯೇ. ಇಂಥವರನ್ನು ಎದುರಿಸುವಂತಹ ಶಕ್ತಿ ಅಫ್ಘನ್ ಜನರಿಗೆ ಖಂಡಿತಾ ಇದೆ. ತಾಲಿಬಾನಿಗಳಿಗೆ ಎದುರುಕೊಂಡು ಕೆಲವು ಅಫ್ಘನ್ ಸೈನಿಕರು ಓಡಿ ಹೋಗಿರಬಹುದು. ಆದರೆ, ಸ್ವತಂತ್ರ ಯೋಧರಾಗಿ ಸಾಯಲು ಸಿದ್ಧ ಹೊರತು ತಾಲಿಬಾನ್‌ಗಳಿಗೆ ತಲೆ ಬಗ್ಗಿಸುವುದಿಲ್ಲ ಎನ್ನುವ
ದೇಶಭಕ್ತ ಸೈನಿಕರು ತಾಲಿಬಾನ್ ವಿರುದ್ಧ ಕಾದಾಟಕ್ಕೆ ಸಿದ್ಧರಿದ್ದಾರೆ.

ತಾಲಿಬಾನ್‌ಗಳು ಅಫ್ಘನಿಸ್ತಾನವನ್ನು ಕೈವಶ ಮಾಡಿಕೊಂಡ ನಂತರ ಅಲ್ಲಿಂದ ಬರುತ್ತಿರುವ ಸುದ್ಧಿಗಳು ಮನ ಕಲಕುವುದರೊಂದಿಗೆ ಬೆಚ್ಚಿ ಬೀಳಿಸುತ್ತಿವೆ. ಭಯೋತ್ಪಾದಕರ ಅಟ್ಟಹಾಸಕ್ಕೆ ಇಡೀ ಅಫ್ಘನಿಸ್ತಾನ ನಲುಗಿ ಹೋಗಿದೆ. ಸುಲಿಗೆ, ಲೂಟಿ-ಹಿಂಸೆಯೊಂದಿಗೆ ಮಹಿಳೆ-ಮಕ್ಕಳ ಮೇಲೆ ಮನಸ್ಸೋ ಇಚ್ಛೆ ಕ್ರೌರ್ಯ ಮೆರೆಯಲಾಗುತ್ತಿದೆ. ಮತಾಂಧರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘನ್ ಅಕ್ಷರಶಃ ನರಕವಾಗಿದೆ. ಅಲ್ಲಿನ ಜನರ ನೋವಿನ ಕೂಗು ಅರಣ್ಯ ರೋಧನವಾಗಿದೆ. ನಮ್ಮ ನೆರವಿಗೆ ಯಾರಾದರೂ ಬರಬಹುದಾ ಎಂದು ನೊಂದ ಜನ ಜಗತ್ತಿನ ಎದುರು ಭರವಸೆಗಣ್ಣಿನಿಂದ ನೋಡುತ್ತಿದ್ದಾರೆ.

ಜಗತ್ತಿನ ಯಾವ ದೇಶವೂ ಅವರ ರಕ್ಷಣೆಗೆ ಹೋಗುತ್ತಿಲ್ಲ. ತಾಲಿಬಾನ್ ನರರಾಕ್ಷಸರಿಂದ ಜೀವ ಉಳಿಸಿಕೊಳ್ಳಲು ಹುಟ್ಟ ಬಟ್ಟೆಯಲ್ಲೇ ಜನ ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಫ್ಘನಿಗರ ಈ ಪರಿಸ್ಥಿತಿಗೆ ಕಾರಣ ಏನು? ಅಮೆರಿಕದ ಹಿತಾಸಕ್ತಿ, ಅಫ್ಘನ್ ನಾಯಕರ ದೂರ ದೃಷ್ಟಿಯ ಕೊರತೆ, ಆಡಳಿತದಲ್ಲಿ ಭ್ರಷ್ಟಚಾರ, ದೇಶಪ್ರೇಮ ಇಲ್ಲದ ದುರ್ಬಲ ಮನಸ್ಸಿನ ಶಕ್ತಿಹೀನ ಸೇನೆ ಇವು ಇಂದು ಅಫ್ಘನ್ ಜನತೆಯನ್ನು ಈ ದುಸ್ಥಿತಿಗೆ ತಳಿವೆ. ಬಹಳ ಹಿಂದಕ್ಕೆ ಹೋಗು ವುದು ಬೇಡ. ಕೇವಲ 25 ವರ್ಷಗಳಿಂದೀಚೆಗೆ ಅಫ್ಘನಿಸ್ತಾನ್ ವನ್ನು ಅವಲೋಕನ ಮಾಡೋಣ.

1996ರಲ್ಲಿ ಅಫ್ಘನ್ ಆಡಳಿತ ಹಿಡಿದ ತಾಲಿಬಾನ್‌ಗಳು ಶರಿಯಾ ಕಾನೂನುಗಳನ್ನು ಜಾರಿಗೆ ತರುವುದರ ಮೂಲಕ ಜನರನ್ನು ಹಿಂಸೆಗೆ ತಳ್ಳಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೇ ಜನ ಗುಲಾಮರಂತೆ ಬದುಕುತ್ತಿದ್ದರು. ಇನ್ನೂ ಮಹಿಳೆಯರಿಗಂತೂ ನರಕ ದರ್ಶನವಾಗಿತ್ತು. ೨೦೦೧ರಲ್ಲಿ ಅಲ್‌ಖೈದಾ ಭಯೋತ್ಪಾದಕರು ಅಮೆರಿಕದ ಅವಳಿ ಕಟ್ಟಡದ ಮೇಲೆ ದಾಳಿ ಮಾಡಿದ ನಂತರ ಅಫ್ಘನ್‌ನಲ್ಲಿ ಒಂದು ಹೊಸ ರಾಜಕೀಯ ಶಕೆಯೇ ಪ್ರಾರಂಭವಾಯಿತು. ಭಯೋತ್ಪಾದನೆ ವಿರುದ್ಧ ಇಡೀ ಜಗತ್ತು ಹೋರಾಟ ಮಾಡಬೇಕು ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಪ್ರತಿಪಾದಿಸಿಕೊಂಡೇ ಬಂದಿತು.

ಆದರೆ, ಯುರೋಪ್ ರಾಷ್ಟ್ರಗಳಾಗಲೀ, ಅಮೆರಿಕವಾಗಲೀ ಈ ಎಚ್ಚರಿಕೆ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲೇಇಲ್ಲ. ಯಾವಾಗ ಅಲ್‌ಖೈದಾ ಭಯೋ ತ್ಪಾದಕರು ಅಮೆರಿಕದ ವಿಮಾನಗಳನ್ನೇ ತೆಗೆದುಕೊಂಡು WTO ಮೇಲೆ ದಾಳಿ ಮಾಡಿದ್ದರೋ ಆಗ ಭಯೋತ್ಪಾದನೆಯ ಬಿಸಿ ಅಮೆರಿಕಕ್ಕೆ ತಟ್ಟಿತು. ವಿಶ್ವದ ಮುಂದೆ ಮುಖ ಉಳಿಸಿಕೊಳ್ಳಲು ತಾಲಿಬಾನ್ ರಕ್ಷಣೆಯಲ್ಲಿ ಅಡಗಿ ಕುಳಿತಿದ್ದ ಅಲ್‌ಖೈದಾ ನಾಯಕ ಬಿನ್ ಲಾಡೆನ್ ಸಂಹಾರಕ್ಕೆ ಮಿತ್ರ ಪಡೆಗಳೊಂದಿಗೆ ಅಮೆರಿಕ ಅಫ್ಘನ್ ಮೇಲೆ ದಾಳಿ ಮಾಡಿತು.

ಅಮೆರಿಕದ ಸೇನೆಯನ್ನು ಎದುರಿಸಲಾಗದೇ ತಾಲಿಬಾನ್‌ಗಳು ಅಘಾನ್‌ನಿಂದ ಓಡಿ ಹೋದರು. ನಂತರ ಅಘಾನ್‌ನಲ್ಲಿ ಪ್ರಜಾತಂತ್ರ ಸರಕಾರ ತರುವಲ್ಲಿ
ಯಶಸ್ವಿಯಾದ ಅಮೆರಿಕ 10 ವರ್ಷಗಳ ಸತತ ಪ್ರಯತ್ನದಿಂದ ಬಿನ್ ಲಾಡೆನ್‌ನನ್ನು ಪಾಕ್‌ನಲ್ಲಿ ಸಂಹಾರ ಮಾಡಿತು. ಅಮೆರಿಕ ಯಾವ ಉದ್ದೇಶಕೋಸ್ಕರ ಹೋಗಿತ್ತೋ ಆ ಉದ್ದೇಶ ಈಡೇರಿದ ಕಾರಣ ಅಂದಿನ ಅಮೆರಿಕಾ ಅಧ್ಯಕ್ಷ ಒಬಾಮಾ ನ್ಯಾಟೋ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದರು. ಅಫ್ಘನ್‌ನಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಮುಂದೆ ಬಂದ ಟ್ರಂಪ್ ಸರಕಾರ ತಾಲಿಬಾನ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಕರೆದುಕೊಳ್ಳಲು ತೀರ್ಮಾನಿಸಿತು. ತಾಲಿಬಾನ್ ಯಾವುದೇ ಕಾರಣಕ್ಕೂ ಅಫ್ಘನ್‌ನಲ್ಲಿ ಹಿಂಸೆಗೆ ಇಳಿಯಬಾರ ದೆಂದು ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು. ಟ್ರಂಪ್ ಅಧಿಕಾರದಲ್ಲಿ ಮುಂದುವರೆದಿದ್ದರೆ ಅಫ್ಘನ್‌ನಲ್ಲಿ ಏಕಾಏಕಿ ಸೇನೆಯನ್ನು ವಾಪಸ್ ತೆಗೆದುಕೊಳ್ಳುತ್ತಿರ ಲಿಲ್ಲ.

ಬದಲಾಗಿ ತಾಲಿಬಾನ್‌ಅನ್ನು ಅಧಿಕಾರದಲ್ಲಿ ಪಾಲುದಾರನ್ನಾಗಿ ಮಾಡಿ ಹಂತ ಹಂತವಾಗಿ ವ್ಯವಸ್ಥಿತವಾಗಿ ಸೇನೆಯನ್ನು ವಾಪಸ್ಸು ತೆಗೆದುಕೊಳ್ಳುತ್ತಿದ್ದರು. ಆದರೆ, ಜೋ ಬೈಡನ್ ಏಕಾಏಕಿ ಸೇನೆ ವಾಪಸ್ ತೆಗೆದುಕೊಂಡಿದ್ದು ತಾಲಿಬಾನ್‌ಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ಸುಲಭವಾಗಿ ಅವಕಾಶ ಮಾಡಿ ಕೊಟ್ಟಂತಾಯಿತು. ಇದು ಇವತ್ತಿನ ಈ ಅಫ್ಘನ್ ದುರಂತಕ್ಕೆ ಕಾರಣ ಎಂಬುವುದರಲ್ಲಿ ಎರಡು ಮಾತಿಲ್ಲ. ಅಮೆರಿಕ ಬಿಟ್ಟು ಹೋಗಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನು ಇಟ್ಟಿಕೊಂಡು ದಾಳಿಗೆ ಇಳಿದಿರುವ ತಾಲಿಬಾನ್‌ಗಳು ಮನುಷ್ಯತ್ವ ಮರೆತು ಮೃಗಗಳಂತೆ ಮಕ್ಕಳು-ಮಹಿಳೆಯರ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ.

ಸಾಮಾನ್ಯ ಜನರನ್ನು ಹಿಂಸಿಸುವುದರ ಮೂಲಕ ರಕ್ತದ ಓಕಳಿ ಹರಿಸುತ್ತಿದ್ದಾರೆ. ತಾಲಿಬಾನ್ ಎಂದರೆ ವಿದ್ಯಾರ್ಥಿ ಎಂದರ್ಥ. ಈ ಕ್ರೂರಿ ವಿದ್ಯಾರ್ಥಿಗಳಿಗೆ ವಿದ್ಯೆ ಹೇಳಿಕೊಟ್ಟ ಮಹಾ ಕ್ರೂರಿ ಯಾರೋ? ಇವರ ಹಿಂಸೆ ಹಾಗೂ ಉಗ್ರ ರೂಪಕ್ಕೆ ಬೆಚ್ಚಿ ಬದ್ದಿರುವ ಜನ ದೇಶ ಬಿಟ್ಟು ಓಡಿ ಹೋಗಲು ಏರ್‌ಪೋರ್ಟ್ ಒಳಗೆ ನುಗ್ಗಿ, ನಮ್ಮ ಹಳ್ಳಿಗಳಲ್ಲಿ ಬಸ್ ಮೇಲೆ ಕುಳಿತುಕೊಳ್ಳುವ ರೀತಿಯಲ್ಲಿ ವಿಮಾನದ ರೆಕ್ಕೆಯ ಮೇಲೆ ಏರಿ ಕುಳಿತು ಯಾವುದೋ ಒಂದು ದೇಶಕ್ಕೆ ಹೋಗಿ ಪ್ರಾಣ ಉಳಿಸಿಕೊಳ್ಳೋಣ ಅನ್ನುವ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಶೋಚನೀಯ.

ಕೆಲವು ಮಹಿಳೆಯರು ಅಂತೂ ನಮ್ಮನ್ನ ಈ ದೇಶದಲ್ಲಿ ಬಿಟ್ಟು ನೀವು ಹೊರಟು ಹೋಗಬೇಡಿ ಎಂದು ಅಮೆರಿಕ ಸೈನಿಕರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವುದು ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ಎಂಥಹ ಭಯದ ವಾತಾವರಣ ಇದೆ ಎಂಬುದು ಕಂಡುಬರುತ್ತಿದೆ. ಅಮೆರಿಕ ಅಫ್ಘನ್‌ಗೆ ತೆರಳಿದ್ದು ತನ್ನ ಶತ್ರು ಬಿನ್
ಲಾಡೆನ್ ಅನ್ನು ಕೊಂದು ಹಾಕುವುದರ ಮೂಲಕ ಅಲ್‌ಖೈದಾ ನಡಾ ಮುರಿಯುವುದಕ್ಕೆ. ಆದರೂ ಸಹ ಅಮೆರಿಕ 20 ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ
ಡಾಲರ್‌ಗೂ ಹೆಚ್ಚಿದ ಹಣ ವೆಚ್ಚ ಮಾಡುವುದರ ಮೂಲಕ ಅಫ್ಘನಿಸ್ತಾನದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ.

ಜತೆಗೆ ಅಫ್ಘನ್ ಸೈನಿಕರಿಗೆ ಉತ್ತಮ ತರಬೇತಿ ನೀಡುವುದರೊಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೂಡ ಒದಗಿಸಿತ್ತು. 20 ವರ್ಷಗಳ ಕಾಲ ದೇಶವ್ನನಾಳಿದ ಅಫ್ಘನ್ ನಾಯಕರು ಅಮೆರಿಕ ನೀಡಿದ ನೆರವನ್ನು ಸದ್ಬಳಕೆ ಮಾಡಿಕೊಂಡು ದೇಶ ಕಟ್ಟುವುದರಲ್ಲಿ ಸಂಪೂರ್ಣವಾಗಿ ವಿಫಲರಾದರು ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯ. ಅಮೆರಿಕ ಸೇನೆ ಶಾಶ್ವತವಾಗಿ ಅಫ್ಘನ್‌ನಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಅದನ್ನು ಅವರು ಅರ್ಥ ಮಾಡಿಕೊಂಡು ತಾಲಿಬಾನ್‌ಗಳನ್ನು ಎದುರಿಸುವಂತಹ ಒಂದು ಶಕ್ತಿಯನ್ನ ತನ್ನ ಸೇನೆಗೆ ಅಫ್ಘನ್ ನಾಯಕರು ತುಂಬಾ ಬೇಕಾಗಿತ್ತು. ತಾಲಿಬಾನ್ ನಮ್ಮ ಶತ್ರು ಅನ್ನುವ ಭಾವನೆಯನ್ನು ಸೈನಿಕರಲ್ಲಿ ಮೂಡಿಸಬೇಕಾಗಿತ್ತು. ಆದರೆ, ಅದ್ಯಾವುದನ್ನೂ ಅಫ್ಘನ್ ನಾಯಕರು ಮಾಡಲಿಲ್ಲ.

ಬದಲಾಗಿ ಕೇವಲ 90 ಸಾವಿರ ಸೈನಿಕರನ್ನು ನೇಮಕ ಮಾಡಿಕೊಂಡು 3 ಲಕ್ಷ ಸೈನಿಕರ ಲೆಕ್ಕ ತೋರಿಸಿ ಅಮೆರಿಕದಿಂದ ಹಣ ಪಡೆದು ಭ್ರಷ್ಟಚಾರದಲ್ಲಿ ಭಾಗಿ ಯಾದರು. ಇದೆಲ್ಲಾದರ ಪರಿಣಾಮ ದೇಶೀಯ ಸೇನೆ ದುರ್ಬಲ ವಾಯಿತು, ತಾಲಿಬಾನ್‌ಗೆ ಅಪ್ಘಾನ್ ಸುಲಭ ತುತ್ತಾಯಿತು. ಭಾರತದಲ್ಲಿ ಒಂದು ಸಣ್ಣ ಘಟನೆ ಯಾದರೂ ಸಾಕು ಇಡೀ ಜಗತ್ತೇ ಕೇಳೋ ಥರ ನಮ್ಮ ವಿಚಾರವಾದಿಗಳು, ಬುದ್ಧಿಜೀವಿಗಳು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕು, ಮಹಿಳೆಯರ ಮೇಲಿನ ದೌರ್ಜನ್ಯ ಎನ್ನುವ ಹೆಸರಿನಲ್ಲಿ ಉದೂದ್ದ ಲೇಖನ ಬರೆಯುವುದರೊಂದಿಗೆ ಬೀದಿ ಬೀದಿಯಲ್ಲಿ ನಿಂತುಕೊಂಡು ಪ್ರತಿಭಟನೆ ಮಾಡುವುದರ ಮೂಲಕ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆಯುತ್ತಾರೆ.

ಪ್ಯಾಲೆಸ್ಟೈನ್‌ನಲ್ಲಿ ಒಂದೇ ಒಂದು ಬಾಂಬ್ ಬಿದ್ದರೆ ಸಾಕು, ಇವರೂ ಟೌನ್‌ಹಾಲ್ ಮುಂದೆ ಬಂದು ಧರಣಿ ಕುಳಿತುಕೊಳ್ಳುತ್ತಾರೆ. ಆದರೆ, ಅಪ್ಘಾನ್‌ನಲ್ಲಿ ನರ ರಾಕ್ಷಸ ತಾಲಿಬಾನ್‌ಗಳು ಅಮಾಯಕ ಜನರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದರ್ಪ, ಕ್ರೌರ್ಯ ಹಾಗೂ ಹಿಂಸೆಯನ್ನು ನಡೆಸುತ್ತಿದ್ದಾರೆ. ಅಫ್ಘನ್‌ನ ಈ ನರಮೇಧದ ಬಗ್ಗೆ ಒಂದೂ ಮಾತನಾಡದೇ ಯಾವ ಬಿಲದಲ್ಲಿ ಹೊಕ್ಕಿ ಕುಳಿತಿದ್ದಾರೆ ಈ ನಮ್ಮ ಪ್ರಗತಿಪರರು? ಅಮೆರಿಕ ನಾನು ಶಾಂತಿದೂತ. ಜಗತ್ತಿನ ಎಲ್ಲಾ
ಸಮಸ್ಯೆಗಳಿಗೂ ನಾನೇ ನಿವಾರಕ ಎನ್ನುವ ರೀತಿ ದೊಡ್ಡಣ್ಣ ತರ ಪೋಸ್ ಕೊಡುತ್ತದೆ. ಆದರೆ, ಅದು ಯಾವಾಗ ಲೂ ತನ್ನ ಹಿತಾಸಕ್ತಿಗೆ ಅನುಗುಣವಾಗಿಯೇ ನಡೆದು ಕೊಳ್ಳುವುದು.

ಅಫ್ಘನ್‌ನಲ್ಲಿ ಆಗಿದ್ದು ಅದೆನೇ. ಈಗ ಅಪ್ಘಾನ್ ನಾಗರಿಕರು ಎಚ್ಚೆತ್ತುಕೊಂಡಿದ್ದಾರೆ. ನಮ್ಮ ರಕ್ಷಣೆಯನ್ನ ನಾವೇ ಮಾಡಿಕೊಳ್ಳಬೇಕು ಅನ್ನೋ ಸ್ಥಿತಿಗೆ ತಲುಪಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ತಾಲಿಬಾನ್ ಭಯೋತ್ಪಾದಕರ ಎದುರೇ ಮಹಿಳೆಯರು ವಿರೋಧಿ ಫ್ಲೆಕ್ಸ್‌ಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ದೇಶದ ನಾಗರಿಕರು ಭಯೋತ್ಪಾದಕರ ಬಂದೂಕುಗಳಿಗೆ ಭಯ ಪಡದೇ ತಾಲಿಬಾನ್ ಧ್ವಜ ಕಿತ್ತೆಸೆದು ನಮ್ಮ ಧ್ವಜವೇ, ನಮ್ಮ ಶಕ್ತಿ ಎಂದು ಅಫ್ಘನ್ ಧ್ವಜವನ್ನು ಹಾರಿಸಿ ಘೋಷಣೆ ಕೂಗುವುದರ ಮೂಲಕ ೧೦೩ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದ್ದಾರೆ.

ತಾಲಿಬಾನ್‌ಗಳು ವೀರರೂ ಅಲ್ಲ, ಶೂರರೂ ಅಲ್ಲ. ವಿದೇಶಿ ಸೇನೆಯನ್ನು ಎದುರಿಸಲಾಗದೇ ದೇಶ ಬಿಟ್ಟು ಹೋದಂತಹ ರಣಹೇಡಿಗಳು. ಅವರ ಪೌರುಷ ಏನೇ
ಇದ್ದರೂ ಅಸಹಾಯಕ ನಾಗರಿಕರ ಮೇಲೆಯೇ. ಇಂಥವರನ್ನು ಎದುರಿಸುವಂತಹ ಶಕ್ತಿ ಅಫ್ಘನ್ ಜನರಿಗೆ ಖಂಡಿತಾ ಇದೆ. ತಾಲಿಬಾನಿಗಳಿಗೆ ಎದುರುಕೊಂಡು ಕೆಲವು ಅಫ್ಘನ್ ಸೈನಿಕರು ಓಡಿ ಹೋಗಿರಬಹುದು. ಆದರೆ, ಸ್ವತಂತ್ರ ಯೋಧರಾಗಿ ಸಾಯಲು ಸಿದ್ಧ ಹೊರತು ತಾಲಿಬಾನ್‌ಗಳಿಗೆ ತಲೆ ಬಗ್ಗಿಸುವುದಿಲ್ಲ ಎನ್ನುವ ದೇಶಭಕ್ತ ಸೈನಿಕರು ತಾಲಿಬಾನ್ ವಿರುದ್ಧ ಕಾದಾಟಕ್ಕೆ ಸಿದ್ಧರಿದ್ದಾರೆ.

ತಾಲಿಬಾನ್‌ಗಳು ಅಫ್ಘನ್‌ನ ೩೨32 ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದರೂ ಸಹ ಪಂಜ್‌ಶಿರ್ ವ್ಯಾಲಿ ಪ್ರಾಂತ್ಯವನ್ನು ಮುಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ, ಅಲ್ಲಿನ ತಜಕ್ ಬುಡಕಟ್ಟು ಜನಾಂಗ ತಾಲಿಬಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ 300ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಪಂಜ್‌ಶಿರ್ ಪ್ರಾಂತ್ಯದ ಪಡೆ ಹತ್ಯೆಗೈದಿರುವ ಬಗ್ಗೆ ವರದಿಗಳು ಬರುತ್ತಿವೆ. ಅಫ್ಘನ್‌ನಲ್ಲಿ ತಾಲಿಬಾನ್ ಕೈ ಮೇಲಾಗಿರುವಂತೆ ಕಂಡು ಬಂದರೂ ಅವರ ವಿರೋಧಿಗಳ ಶಕ್ತಿಯೇನೂ ಕಡಿಮೆ ಇಲ್ಲ. ಇತ್ತೀಚೆಗೆ ಅವರು ಪ್ರಬಲ ರಾಗುತ್ತಿದ್ದಾರೆ. ಆದರೆ, ಅವರೆಲ್ಲರೂ ಒಂದಾಗಿ ಹೋರಾಡುತ್ತಿಲ್ಲ. ಈ ತಾಲಿಬಾನ್ ವಿರೋಧಿಗಳನ್ನೆಲ್ಲಾ ಒಂದೇ ಸಂಘಟನೆಯಲ್ಲಿ ತಂದು ಒಟ್ಟಾಗಿ ಹೋರಾಟ ಮಾಡುವಂತಹ ದೇಶೀಯ ನಾಯಕ ಅಲ್ಲಿ ಹುಟ್ಟಬೇಕು.

ಆ ಮೂಲಕ ತಾಲಿಬಾನ್‌ಗೆ ಸರಿಯಾದ ಪೆಟ್ಟು ನೀಡಬಹುದು. ಅಫ್ಘನ್ ನಾಗರಿಕರ ರಕ್ಷಣೆಗೆ ಯಾವ ದೇಶವೂ ಸೈನ್ಯವನ್ನು ಕಳುಹಿಸಬೇಕಾಗಿಲ್ಲ. ತಾಲಿಬಾನ್
ವಿರೋಧಿ ಪಡೆಗಳಿಗೆ ಆರ್ಥಿಕ ನೆರವಿನೊಂದಿಗೆ ಶಸ್ತ್ರಾಸ್ತ್ರಗಳು ಹಾಗೂ ತಂತ್ರಜ್ಞಾನವನ್ನು ದೊರಕಿಸಿಕೊಡಬೇಕು. ಜಾಗತಿಕ ಬೆಂಬಲದೊಂದಿಗೆ ತಾಲಿಬಾನ್ ವಿರುದ್ಧ ಅಫ್ಘನ್ ಜನತೆ ಹೋರಾಟಕ್ಕೆ ಸಜ್ಜಾಗಬೇಕು. ಅಫ್ಘನ್ ಜನತೆಗೆ ಉಳಿದಿರುವುದು ಈಗಾ ಒಂದೇ ಮಾರ್ಗ, ಅಫ್ಘನ್ ತಾಲಿಬಾನ್‌ನಿಂದ
ಮುಕ್ತವಾಗಬೇಕಾದರೆ ದೇಶದ ಪ್ರತಿಯೊಬ್ಬ ನಾಯಕನೂ ಸೈನಿಕನಾಗಬೇಕು.