Sunday, 10th November 2024

ಪ್ರತಿಯೊಬ್ಬರ ಅಂತಿಮ ಕಥೆಯೂ ಒಂದೇ

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ? ಒಮ್ಮೆ ಪತ್ರಕರ್ತ ವೈಎನ್‌ಕೆ ಈ ಪ್ರಶ್ನೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿದ್ದಂತೆ, ‘ನೋ..ನೋ.. ನೀವು ಹೇಳುತ್ತಿರುವುದು ಜಗತ್ತಿನ ಅತ್ಯಂತ ದೊಡ್ಡ ಕತೆ. ನಾನು ಕೇಳಿದ್ದು ಜಗತ್ತಿನ ಅತಿ ಸಣ್ಣ ಕತೆ ಯಾವುದು ಅಂತ?’ ಎಂದು ಹೇಳಿ ಕಾಲೆಳೆದಿದ್ದರು.

‘ಇಲ್ಲ, ನನಗೆ ಗೊತ್ತಿಲ್ಲ, ನೀವೇ ಹೇಳಿ?’ ಎಂದಾಗ, ಅವರು ಹೇಳಿದ್ದರು. ‘ಕನಸಿನಲ್ಲಿ ಡೈನೋಸಾರಸ್ ಕಂಡೆ, ಕಣ್ ಬಿಟ್ಟಾಗ ಎದುರಿಗಿತ್ತು.’ ಈ ಕತೆ ಕೇಳಿ, ‘ಹೌದಲ್ಲ, ಹತ್ತಾರು ಪುಟಗಳಲ್ಲಿ ಹೇಳಬಹುದಾದ್ದನ್ನು ಐದಾರು ಪದಗಳಲ್ಲಿ ಹೇಳಬಹುದ?’ ಎಂದು ವಿಸ್ಮಯವಾಗಿತ್ತು. ಅನಂತರ ವೈಎನ್‌ಕೆ ‘ಇನ್ನೂ ಚಿಕ್ಕದಾದ ಕತೆ ಇದೆ. ಅದು ಯಾವುದು ಗೊತ್ತಾ?’ ಎಂದು ಕೇಳಿದ್ದರು. ನಾನು ಇಲ್ಲ ಎಂದು ತಲೆ ಅಡಿಸಿದಾಗ ಹೇಳಿದ್ದರು. ‘ಅವನ ಮದುವೆಯಾಯಿತು. ಅಲ್ಲಿಗೆ ಕತೆ ಮುಗಿಯಿತು.’

ಅಂದಿನಿಂದ ನಾನು ಈ ಸಣ್ಣ ಕತೆಗಳ ಗೀಳಿಗೆ, ಸಹವಾಸಕ್ಕೆ ಬಿದ್ದೆ. ‘ಒಂದು ಕತೆ, ನೀಳ್ಗತೆ ಹೇಳುವ ಭಾವನೆ ಗಳನ್ನು ಇಂಥ ಸಣ್ಣ ಕತೆಗಳು ಹೇಳಬೇಕು. ಆ ಎರಡು-ಮೂರು ಸಾಲುಗಳು ನಮ್ಮ ಭಾವನೆಗಳ ಜತೆ ಸದಾ ದಾಳಿ ಮಾಡುತ್ತಿರಬೇಕು. ಈ ಭಾವನೆಗಳೇ ನಮ್ಮನ್ನು ಆಗಾಗ ತೋಯಿಸುತ್ತಿರಬೇಕು. ಅವು
ನಮ್ಮಲ್ಲಿರುವ ಭಾವ ತರಂಗಗಳನ್ನು ಮೀಟುತ್ತಿರಬೇಕು. ಆಗ ನಾವು ಹೆಚ್ಚು ಮಾನವಂತರಾಗುತ್ತೇವೆ.’ ಎಂದು ವೈಎನ್‌ಕೆ ಹೇಳುತ್ತಿದ್ದ ಮಾತುಗಳು ಈಗಲೂ ಕಿವಿಯ ಬಾಗಿಲಲ್ಲಿ ಕುಳಿತಿವೆ.

ಇತ್ತೀಚೆಗೆ ನಾನೊಂದು ಸಣ್ಣ ಕತೆಯನ್ನು ಓದಿದೆ. ಬಹಳ ಸಂಕಟವಾಯಿತು. ಮುಂದೆ ಓದಲಾಗದೇ ಕೆಲ ಹೊತ್ತು ಅಲ್ಲಿಯೇ ನಿಂತು ಬಿಟ್ಟಿದ್ದೆ. ಆ ಕತೆಯನ್ನು ನನ್ನ ಹತ್ತಾರು ಸ್ನೇಹಿತರಿಗೆ ಕಳಿಸಿಕೊಟ್ಟೆ. ಅವರೂ ಸಹ ಅಂಥದೇ ಅಭಿಪ್ರಾಯ ಕಳಿಸಿಕೊಟ್ಟರು. ಇನ್ನು ಕೆಲವರು ಪ್ರತಿಕ್ರಿಯೆಯಾಗಿ ಅಳುಮುಖದ ಇಮೊಜಿ ಕಳಿಸಿದರು. ಈಗಲೂ ಆ ಸಣ್ಣ ಕತೆ ನೆನಪಾದರೆ ಒಂದು ಕ್ಷಣ ಆರ್ದ್ರನಾಗುತ್ತೇನೆ. ಅಂದ ಹಾಗೆ ಆ ಕತೆ- ‘ಶವಪೆಟ್ಟಿಗೆ ಚಿಕ್ಕದಾದಷ್ಟೂ ಹೊರಲಾಗದಷ್ಟು ಭಾರ!’ ಚಿಕ್ಕ ಮಕ್ಕಳ ಅಕಾಲಿಕ ನಿಧನವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಹೇಳುವ ಸಣ್ಣ ಕತೆಯಿದು.

ಈ ಕತೆಯನ್ನು ಓದಿದ ಕವಿ ಡಾ.ಚಂದ್ರಶೇಖರ ಕಂಬಾರರು, ‘ದಿನವೆ ಚಡಪಡಿಸಿದೆ’ ಎಂದು ಹೇಳಿದ್ದರು. ಸಣ್ಣ ಕತೆಗಳು ಬೀರುವ ಪರಿಣಾಮ ಅಂಥದ್ದು. ಅನೇಕ ರಲ್ಲಿ ಸಣ್ಣ ಕತೆಯೆಂದರೆ ಕಡಿಮೆ ಪದಗಳಲ್ಲಿ ಬರೆದದ್ದು ಎಂಬ ಭಾವನೆಯಿದೆ. ಕತೆಯ ಗಾತ್ರದ ದೃಷ್ಟಿಯಿಂದ ಅದು ನಿಜವಿರಬಹುದು. ಆದರೆ, ಅದು ಬೀರುವ
ಪ್ರಭಾವ, ಪರಿಣಾಮ ಮಾತ್ರ ಅಗಾಧ. ಅದು ಹತ್ತಾರು ಸಾವಿರ ಪದಗಳಲ್ಲಿ ಹೇಳುವ ಕತೆಗಳಿಗೆ ಸಮಾನ. ಸಣ್ಣಕತೆ ಗಳಲ್ಲಿ ಪದಗಳ ಚುಟುಕುತನಕ್ಕಿಂತ ಭಾವನೆಗಳ ಮೇಲೆ ಅದು ಉಂಟು ಮಾಡುವ ಕುಟುಕುತನವೇ ಮುಖ್ಯ. ಸ್ವರೂಪದಲ್ಲಿ ಅದು ಚಿಕ್ಕದಿರಬಹುದು, ಆದರೆ, ಅದು ಭಾವಭಾರ! ಓದುತ್ತಿದ್ದಂತೆ ಮನಸ್ಸು ಹಗುರ! ಸಣ್ಣಕತೆಗಳು ಭಾವಸಾಂದ್ರ ವಾದಾಗಲೇ ಅದು ಪದಗಳ ಮಿತಿಯ ವ್ಯಾಪ್ತಿಯನ್ನು ದಾಟಿ ಬೆಳೆಯುತ್ತವೆ.

‘ಅವಳನ್ನು ಒಂದೇ ಪದದಲ್ಲಿ ಬಣ್ಣಿಸು’
‘ಅಸಾಧ್ಯ!’

ಈ ಒಂದು ಸಣ್ಣಕತೆ ನಮ್ಮ ಮನಸ್ಸಿನಲ್ಲಿ ಹುಟ್ಟಿಸುವ ಯೋಚನೆಗಳು ನೂರಾರು. ಅವರವರ ಭಾವಕ್ಕೆ ತಕ್ಕ ಹಾಗೆ ಈ ಕತೆಯನ್ನು ಲಂಬಿಸುತ್ತಾ ಹೋಗಬಹುದು. ಲಂಬಿಸಿ ಲಂಬಿಸಿ ಕೊನೆಯಲ್ಲಿ ನಿಂತಾಗಲೂ ಅದಕ್ಕೆ ಪೂರ್ಣವಿರಾಮ ಎಂಬುದಿಲ್ಲ. ಅದು ಇನ್ನೂ ಮುಂದುವರಿಯುತ್ತಲೇ ಇರುತ್ತದೆ. ಒಂದು ಕತೆಯ ಅಪರಿಮಿತ ಸಾಧ್ಯತೆಯೇ ಅದು. ಅದು ಹೇಳಿದ್ದನ್ನು ದಾಟಿ ತನ್ನ ಪಾತಳಿಯನ್ನು ವಿಸ್ತರಿಸುತ್ತಾ ಹೋಗಬೇಕು. ಓದುಗನಲ್ಲಿ ಒಂಥರದ ಚಡಪಡಿಕೆ (restlessness) ಹುಟ್ಟಿಸ ಬೇಕು.

ಕೊನೆಯಲ್ಲಿ ಒಂದು ನಿರ್ಧಾರಕ್ಕೆ ಬರುವಂತೆ ಓದುಗನನ್ನು ಕುಳ್ಳರಿಸಲು ಬಿಡಬಾರದು. ಅದನ್ನು ಕಡಿಮೆ ಪದಗಳಲ್ಲಿ ಹೇಳುವುದು ಸಾಧ್ಯವಾದರೆ ಅದು ಭಾವನೆಯ ಜತೆಗೆ ಭಾಷೆಯ ಗೆಲುವು, ಅಷ್ಟೇ. ಕೊನೆಗೂ ಕತೆ ನಮ್ಮಲ್ಲಿ ಉಳಿಯುವುದು ಭಾವಗಟ್ಟಿಗಳಾಗಿಯೇ. ‘ಅವಳು ಸಿಕ್ಕಳು. ಆದರೂ ಹುಡುಕುತ್ತಿದ್ದೇನೆ’ ಎಂಬ ಕತೆ
ನೂರು ಜನರಲ್ಲಿ ನೂರು ರೀತಿಯ ಭಾವ ಸ್ಪುರಣಕ್ಕೆ ಕಾರಣವಾಗಬಹುದು. ಇಲ್ಲಿ ಕತೆ ಮುಗಿದರೂ ಅದು ಸಾಗುತ್ತಲೇ ಇರುತ್ತದೆ. ತಾಣ ತಲುಪಿದ ನಂತರವೂ
ಪಯಣ ಮುಂದುವರಿದಿರುತ್ತದೆ. ಕತೆ ಮುಗಿದ ನಂತರವೂ ಕತೆಯ ಸಾಧ್ಯತೆಗಳು ಬೆಳೆಯುತ್ತಲೇ ಇರುತ್ತವೆ. ಹೊಸ ಹೊಸ ರೂಪು ಪಡೆಯುತ್ತಲೇ ಇರುತ್ತವೆ.
ನನ್ನ ದೃಷ್ಟಿಯಲ್ಲಿ ಜಗತ್ತಿನ ಅತಿ ಸಣ್ಣ ಕತೆ ಅಂದರೆ, ಕೊನೆಯಲ್ಲಿ ಎಲ್ಲರೂ ಕತೆಗಳೇ!

ಸಣ್ಣ ಕತೆಗಳ ವೈಶಿಷ್ಟ್ಯವಿರುವುದು ಅವು ಮುಗಿಯದಿರುವುದರಲ್ಲಿ. ಕೊನೆಯಾದರೂ ಅಂತ್ಯವಾಗುವುದಿಲ್ಲ. ಇದು ಕತೆಯ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಉದಾಹರಣೆಗೆ, ಈ ಕತೆ: ನನ್ನ ನೋಡಿ ಸುಮ್ಮನಾದಳು. ಮೌನಕ್ಕೂ ಪದಗಳಿವೆ ಎಂದು ತಿಳಿಯಿತು. ಸಣ್ಣ ಕತೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಅದಕ್ಕೆ ಪಾತ್ರ ಧಾರಿಗಳೇ ಬೇಕಿಲ್ಲ. ಅಮೂರ್ತತೆಯೂ ಅದರ ಮುಖ್ಯ ಧಾತುವೇ. ಈ ಸಾಧ್ಯತೆಯೇ ಅದರ ಹಂದರವನ್ನು ವಿಸ್ತರಿಸುತ್ತದೆ. ಸಣ್ಣ ಕತೆ ಒಂಥರಾ ನಿಂತು ನಿಂತು ಹೊರಡುವ ಬಸ್ ಇದ್ದಂತೆ. ಆದರೂ ಪಯಣ ಮಾತ್ರ ವೇಗ ಮತ್ತು ಸರಾಗ. ಟ್ಯಾಕ್ಸಿಯಲ್ಲಿ ನನ್ನ ಪಕ್ಕ ಕುಳಿತ ಅಪರಿಚಿತ ತನ್ನಷ್ಟಕ್ಕೆ ಬಿಕ್ಕುತ್ತಿದ್ದ.

ನಾನು ಒಂಟಿ ಅಲ್ಲ ಎನಿಸಿತು. ಈ ಸಣ್ಣಕತೆ ಭಾವದಲ್ಲಿ ಹದವಾಗಿ ಅದ್ದಿದ ಮೊಸರನ್ನ. ವಿಷಾದ, ಹತಾಶೆ, ಸಂತಸ, ವ್ಯಂಗ್ಯ, ಹುಯ್ದಾಟ, ತೀವ್ರತೆ.. ಮುಂತಾದ ಮಾನವ ಸಹಜ ಒಗ್ಗರಣೆ ಇದ್ದರೆ ಅದರ ಮಜಾವೇ ಬೇರೆ. ‘ನನ್ನೊಳಗೆ ಎಷ್ಟೊಂದು ಸಣ್ಣಕತೆಗಳಿದ್ದವು ಎಂಬುದು ಗೊತ್ತೇ ಇರಲಿಲ್ಲ’ ಎಂಬುದು ಸಣ್ಣಕತೆಗಳೇ
ಪಾತ್ರಧಾರಿಯಾದ ಒಂದು ಕತೆ.

ನನ್ನೊಳಗೆ ಹೀಗೆ ಆಗಾಗ ಹುಟ್ಟಿದ ಸಣ್ಣಕತೆಗಳಿಗೆ ಈಗ ಬಿಡುಗಡೆ ಸಮಯ. ಕಳೆದ ಹಲವಾರು ವರ್ಷಗಳಲ್ಲಿ ಹುಟ್ಟಿದ ಈ ‘ಪಾತರಗಿತ್ತಿ’ಗಳನ್ನೆಲ್ಲ ಸೇರಿಸಿ ಒಂದು ಉದ್ಯಾನ ಮಾಡಬೇಕು ಎಂದು ಅಂದುಕೊಳ್ಳುತ್ತಲೇ ಇದ್ದೆ. ಇವುಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಮಾಡಬೇಕು ಅಂದುಕೊಳ್ಳುತ್ತಿರುವಾಗ ಅದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಣ್ಣಕತೆಗಳನ್ನೆ ಸೇರಿಸಿ ಒಂದು ಪುಟ್ಟ ಪುಸ್ತಕ ನಿಮ್ಮ ಕೈಗಿಡಬೇಕೆಂಬ ಆಸೆ ಈಡೇರುವ ದಿನ ಹತ್ತಿರ ಬರುತ್ತಿದೆ. ‘ಪಾತರಗಿತ್ತಿ’ಗಳು ಹಾರು ತ್ತಿದ್ದರೇ ಚೆಂದ! ಆ ಕೃತಿಯಲ್ಲಿರುವ ಕೆಲವು ಸಣ್ಣಕತೆಗಳನ್ನು ಇಲ್ಲಿ ಹಾರಿಬಿಡುತ್ತಿದ್ದೇನೆ.

ಆತ ಆಕೆಯನ್ನು ಪ್ರೀತಿಸಿದ.

ಆಕೆಯೂ ಆತನನ್ನು ಪ್ರೀತಿಸಿದಳು.

ಅವರ ಪ್ರೀತಿ ಗಟ್ಟಿಯಾಗಿತ್ತು. ಕಾರಣ ಆತನ ಕಣ್ಣು ಅದನ್ನು ನೋಡಲಿಲ್ಲ.

ಆಕೆಯ ಕಿವಿ ಅದನ್ನು ಕೇಳಲಿಲ್ಲ.

?
ಅವಳಿಗಾಗಿ ತಂದ ಉಂಗುರವನ್ನು
ಜೇಬಿನಲ್ಲಿಟ್ಟುಕೊಂಡು
ಅವಳನ್ನ ಭೇಟಿ ಮಾಡದೇ
ಆತ ಹೊರಟುಹೋದ
?
ಕೊನೆಗೂ ನಾನು ಅಷ್ಟು ವರ್ಷಗಳಿಂದ
ಹುಡುಕುತ್ತಿದ್ದ ಅನುರೂಪ ಸಂಗಾತಿ
ಸಿಕ್ಕಳು. ಆದರೆ ಅವಳಿಗೆ ಸಿಗಲಿಲ್ಲ.
?
ತಂದೆ ಯುದ್ಧಭೂಮಿಗೆ ಹೋದರು.
ರಾಷ್ಟ್ರಧ್ವಜ ಮನೆಗೆ ಬಂದಿತು.
?
‘ನೀನು ಹಿಂದುವಾ, ಮುಸ್ಲಿಮನಾ?’
ಎಂದು ಕೇಳಿದೆ.
‘ನನಗೆ ನೀರು ಕೊಡಿ.
ವಿಪರೀತ ಬಾಯಾರಿಕೆ ಆಗಿದೆ’ ಎಂದ.
?
ಇಪ್ಪತ್ತು ವರ್ಷಗಳ ನಂತರ
ಆಕೆಗೆ ಫೋನ್ ಮಾಡಿದೆ.
ಹಲೋ ಎಂದೆ.
ರಾಂಗ್ ನಂಬರ್ ಎಂದು -ನಿಟ್ಟಳು.
?
ಮೊದಲ ಬಾರಿಗೆ ಅವನ ಬ್ಯಾಂಕ್
ಅಕೌಂಟಿಗೆ ಕೋಟಿ ರುಪಾಯಿ
ಬಂದು ಜಮೆ ಆಯಿತು.
ತಾನು ಗಣಿತದಲ್ಲಿ ಫೇಲ್
ಆಗಿದ್ದೆ ಎಂಬುದನ್ನು ನೆನೆದು
ಸಣ್ಣಗೆ ನಕ್ಕ.
?
ಒಂದು ವರ್ಷದ ನಂತರ
ಅವರಿಬ್ಬರೂ ಭೇಟಿಯಾದರು.
ಆ ಅವಽಯಲ್ಲಿ ಕಳಿಸಿದ
ಚಾಟ್ ಮೆಸೇಜ್‌ಗಳನ್ನು
ಓದಿದರು.
?
ಭಯ, ನೋವು, ವಿಷಾದ,
ಹತಾಶೆ, ಕ್ರೌರ್ಯ ಇಲ್ಲದಿರುವ
ಜಾಗವನ್ನು ಹುಡುಕುತ್ತಿದ್ದೇನೆ.
ಇನ್ನೂ ಸಿಕ್ಕಿಲ್ಲ.
ಭೂಮಿ ಮೇಲೆ
ಇವ್ಯಾವೂ ಇಲ್ಲದಿರುವ
ತಾಣವೆಂದರೆ ತಾಯಿ ಗರ್ಭ ಮಾತ್ರ!
?
ಅವನು ಒಂದು ಕತೆ ಬರೆದ.
ಅದರಲ್ಲಿನ ಪಾತ್ರಧಾರಿಗಳಿಗೆ
ಅದು ಇಷ್ಟವಾಗಲಿಲ್ಲ.
?
‘ಯಾರಾರೂ ಸೌಂಡ್‌ಸಿಸ್ಟಂ
ವಾಲ್ಯೂಮ್ ಕಡಿಮೆ ಮಾಡ್ತೀರಾ?’
ಆತ ಹೇಳಿದ್ದು ಯಾರಿಗೂ
ಕೇಳಲಿಲ್ಲ.
?
ಆತ ನಿಜ ಹೇಳಿದ
ಯಾರೂ ನಂಬಲಿಲ್ಲ.
ಸುಳ್ಳು ಹೇಳಿದ
‘ಈಗ ನಿಜ ಹೇಳಿದ’
ಎಂದರು.
?
ಆತನಿಗೆ ಮಾತಾಡಲು ಬಹಳ ವಿಷಯಗಳಿದ್ದವು.
ಆದರೆ ಕೇಳುವವರು ಯಾರೂ ಇರಲಿಲ್ಲ.
?
ಕಳೆದ ಮೂವತ್ತು ವರ್ಷಗಳಿಂದ ಆತ
ಅದೇ ಊರಿನಲ್ಲಿ ಭಿಕ್ಷುಕನಾಗಿ
ಜೀವನ ಸಾಗಿಸಿಕೊಂಡು ಹೋಗುತ್ತಿದ್ದ.
ಎರಡು ಜನ್ಮಕ್ಕಾಗುವಷ್ಟು ಗಳಿಸಿದ್ದ.
ಆದರೆ ಭಿಕ್ಷುಕ ಪಟ್ಟ ಮಾತ್ರತಪ್ಪಿರಲಿಲ್ಲ
?
ಬೇರೆ ವಸ್ತುಗಳಂತಲ್ಲ, ಪ್ರೀತಿಯನ್ನು
ಎಲ್ಲಿ ಕಳೆದುಕೊಂಡಿದ್ದೇವೋ, ಅಲ್ಲಿ
ಅದಕ್ಕಾಗಿ ಹುಡುಕಿದರೆ ಸಿಗುವುದಿಲ್ಲ
?
ಆತ ಆಕೆಗೆ ಎರಡು ಮಿಸ್ಡ್‌ಕಾಲ್ ಕೊಟ್ಟ,
ಅವಳೂ ಮೂರು ಮಿಸ್ಡ್‌ಕಾಲ್ ಕೊಟ್ಟಳು,
ಹೇಳಬೇಕಾದುದನ್ನು
ಇಬ್ಬರೂ ಹೇಳಿದ್ದರು.
?
ಆತ ತಂದೆಯನ್ನು ವೃದ್ಧಾಶ್ರಮಕ್ಕೆ
ಹೋಗಿ ಬಿಟ್ಟು ಬಂದ.
‘ಬೇಸರಿಸಿಕೊಳ್ಳಬೇಡಿ ಡ್ಯಾಡಿ,
ನಾನೂ ನಿಮ್ಮ ಮುಪ್ಪಿನಲ್ಲಿ ಅಲ್ಲಿಯೇ
ಬಿಡುತ್ತೇನೆ, ಪ್ರಾಮಿಸ್’ ಎಂದ
ಅವನ ಮಗ.
?
ಯಾರೋ ಬಾಗಿಲು ಬಡಿದರು.
ಹೋಗಿ ತೆಗೆದರೆ, ಭಿಕ್ಷುಕ.
‘ಊಟ ಮಾಡಿ ಬಂದಿದ್ದೇನೆ. ಅಡುಗೆ ಮಾಡುವ
ತೊಂದರೆ ತೆಗೆದುಕೊಳ್ಳಬೇಡಿ’ ಎಂದು ಹೇಳಿ ಹೋದ.
?
ಕೊನೆಯಲ್ಲಿ ನಾವೆಲ್ಲರೂ
ಯಾರದ್ದೋ ಆತ್ಮಕಥೆಯಲ್ಲಿ
ಪಾತ್ರಗಳಾಗುತ್ತೇವೆ.
ಇಲ್ಲವೇ ನೆನಪುಗಳಾಗುತ್ತೇವೆ.
?
ನೀವು ಎಷ್ಟೇ ಮಹತ್ವದ, ಮಹಾನ್
ವ್ಯಕ್ತಿಯೇ ಆಗಿರಬಹುದು,
ನೀವಿಲ್ಲದಿದ್ದರೂ ಈ ಜಗತ್ತು
ಸಾಗುತ್ತದೆ.
?
ಅಂಬೆಗಾಲಿನಿಂದ ಮಗು ಹೆಜ್ಜೆ ಹಾಕಲು
ಪ್ರಯತ್ನಿಸುತ್ತಿತ್ತು. ಮನೆಮಂದಿಯೆಲ್ಲ
ಸುತ್ತಲೂ ಇದ್ದರು. ಆಗ ತಾತ ಹೇಳಿದ:
ನಡೆಯಲು ಕಲಿಯುವಾಗ ನೀವ್ಯಾರೂ ಬೀಳೋಕೆ
ಬಿಡೊಲ್ಲ. ನಡೆಯಲು ಕಲಿತ ನಂತರ ಎಲ್ಲರೂ
ಬೀಳಿಸೋಕೆ ಪ್ರಯತ್ನಿಸುತ್ತಾರೆ.
?
ನಾನು ಯಾರೇ ಬರಲಿ, ಅವರನ್ನು
ಭೇಟಿಮಾಡಲು ಬಯಸುತ್ತೇನೆ.
ಕಾರಣ ಪ್ರತಿಯೊಬ್ಬರಿಂದಲೂ
ಕಲಿಯುವುದು ಏನಾದರೂ
ಇದ್ದೇ ಇರುತ್ತದೆ.
?
ವೃದ್ಧಾಶ್ರಮದಿಂದ ಮಗನಿಗೆ ಫೋನ್ ಬಂತು.
‘ನಿಮ್ಮ ನಾಯಿ ಕಳೆದು ಹೋಗಿದೆ
ಎಂಬ ಜಾಹೀರಾತನ್ನು ಪತ್ರಿಕೆಯಲ್ಲಿ
ನೋಡಿದೆವು. ಆ ನಾಯಿ ಸಿಕ್ಕಿದೆ.
ಅದು ಇಲ್ಲಿ ನಿಮ್ಮ ತಾಯಿ
ಜತೆ ಆಡುತ್ತಿದೆ’.
?
ಸಕ್ಕರೆ ಹೇಳಿತು ನೀನು ನನ್ನಂತೆ ಇದ್ದೀಯಾ
ಹೆಸರು ಮಾತ್ರ ಬೇರೆ.
ಉಪ್ಪು ಹೇಳಿತು
ಹೆಸರು ತಗೊಂಡು ಏನ್ ಮಾಡ್ತಿಯಾ?
?
ಆತ ಐನೂರು ವರ್ಷಗಳ ಕುರ್ಚಿಯನ್ನು
ಖರೀದಿಸಿ ತಂದ. ಆತನ ಪಾಲಿಗೆ ಅದು
ಅದೃಷ್ಟದ ಕುರ್ಚಿ. ಆದರೆ ಕುರ್ಚಿ ಅಂದಿಕೊಂಡಿತು:
‘ಮತ್ತೊಬ್ಬ ಬಕರ ಬಿದ್ದ!’
?
‘ನಿಮಗೆ ನೆನಪಿರುವ ಕೊನೆಯ
ಸಂಗತಿಯೇನು?’ ಡಾಕ್ಟರರು ಕೇಳಿದರು.
ತುಸು ಆಲೋಚಿಸಿ ಅವಳು ಹೇಳಿದಳು:
‘ನನಗೆ ಸರಿಯಾಗಿ ಗೊತ್ತಿಲ್ಲ. ಪ್ರಾಯಶಃ
ಪ್ರಶ್ನಾರ್ಥಕ ಚಿಹ್ನೆ ಇರಬೇಕು.’
?
ಅದೆಷ್ಟೋ ವರ್ಷಗಳು ಕಳೆದರೂ
ಅವಳು ಅವನಿಗೆ ಇನ್ನೂ
ಪತ್ರ ಬರೆಯುತ್ತಿದ್ದಾಳೆ.
ಅವಳ ಪ್ರಕಾರ,
ಪ್ರೀತಿ ಈಗಷ್ಟೇ
ಆರಂಭವಾಗಿದೆ.
?
ಜಗತ್ತಿನ ಎರಡು ಮೂಲೆಗಳು
ಹಾಗೂ ಬೇರೆ ಬೇರೆ ಟೈಮ್‌ಝೋನ್‌ಗಳು
ಕೆಲವು ಸಲ ಎರಡೆರಡು
ಸೆಲಬ್ರೇಷನ್‌ಗಳಾಗುತ್ತವೆ.
?
ಹಳೆಯ ಸ್ಕ್ರೀನ್ ಶಾಟ್‌ಗಳು
ನೆನಪಿನಲ್ಲಿರಲಿ ಎಂದು
ಹೊಸೆದು ಕೊಂಡಂಥವು
ಈಗ ಅದನ್ನೇ ಕೆಲವರು
ಸಾಕ್ಷಿಗಳಂತೆ ಬಳಸುತ್ತಾರೆ.
?