Thursday, 19th September 2024

ಘೋಷಣೆಯಲ್ಲೇ ಎಲ್ಲವೂ ಇದೆ…

ಬುಲೆಟ್ ಪ್ರೂಫ್

ವಿನಯ್ ಖಾನ್

vinaykhan078@gmail.com

ಒಂದು ಘೋಷಣೆಯಿಂದ ಏನಾಗಬಹುದು? ಘೋಷಣೆಗೊಂದು ಅರ್ಥ ದಕ್ಕಿದರೆ, ಅದನ್ನು ಬಳಸುವವರು ರೋಮಾಂಚಿತರಾಗುತ್ತಾರೆ. ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮುಗಿದ ಮೇಲೆ ಯಾರಾದರೂ ‘ಭಾರತ್ ಮಾತಾ ಕಿ…’ ಎಂದು ಕೂಗಿದರೆ ನಮ್ಮಿಂದ ಅಪ್ರಯತ್ನವಾಗಿ ‘ಜೈ’ ಎಂಬ ಘೋಷ ಹೊಮ್ಮುತ್ತದೆ.

‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ತಂದುಕೊಡುತ್ತೇನೆ’ ಎಂಬ ಘೋಷಣೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕನ್ನೇ ಕೊಟ್ಟಿತ್ತು. ಸುಭಾಷ್ ಚಂದ್ರ ಬೋಸ್ ಅವರ ಈ ಒಂದೇ ವಾಕ್ಯವನ್ನು ಕೇಳಿ ದೇಶದ ಲಕ್ಷಾಂತರ ಜನರು ‘ಅಜಾದ್ ಹಿಂದ್ ಫೌಜ್’ಗೆ ಸೇರಿದರು. ಹಾಗೆ ಸೇರಿದವರಿಗೆ ತಾವು ಆತ್ಮಾರ್ಪಣೆ ಮಾಡಬೇಕಾಗಿ ಬರುತ್ತದೆ ಎಂಬುದು ಗೊತ್ತಿದ್ದರೂ, ದೇಶ ಪ್ರೇಮ ಎಂಬುದು ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಲು ಬಿಡಲಿಲ್ಲ. ಹೀಗಾಗಿ ಜನ ಸೇರಿದರು, ಹೋರಾಡಿದರು, ಮರಣ ಹೊಂದಿದರು.

ಕಾರಣ, ಸುಭಾಷರ ಆ ಘೋಷಣೆಗೆ ಅರ್ಥವಿತ್ತು, ಅದರಲ್ಲಿ ವಿಚಾರವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಆ ಘೋಷಣೆಯನ್ನು ಮೊಳಗಿಸುತ್ತಿರುವುದೇಕೆ ಎಂಬುದರ ಸ್ಪಷ್ಟತೆಯಿತ್ತು. ಈ ಕಾರಣದಿಂದಲೇ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸುಭಾಷ್ ಚಂದ್ರ ಬೋಸರು ಅಗ್ರಸ್ಥಾನ ದಲ್ಲಿರೋದು. ‘ವಂದೇ ಮಾತರಂ’ ಎಂಬ ಘೋಷಣೆಯೂ ಅಷ್ಟೇ, ಅದು ಸ್ವಾತಂತ್ರ್ಯ ಹೋರಾಟಕ್ಕೆ ಧುಮ್ಮಿಕ್ಕಿದ್ದ ಎಲ್ಲರ ಉಸಿರಾಗಿತ್ತು. ಅದರ ಜತೆಗೆ,
ಮಹಾತ್ಮ ಗಾಂಧಿಯವರ ‘ಮಾಡು ಇಲ್ಲವೇ ಮಡಿ’, ಶಹೀದ್ ಭಗತ್‌ಸಿಂಗ್ ಅವರ ‘ಇನ್ ಕ್ವಿಲಾಬ್ ಜಿಂದಾಬಾದ್’, ರಾಮಪ್ರಸಾದ್ ಬಿಸ್ಮಿಲ್ಲಾ ಅವರ ‘ಸರ್ಫರೋಜ್ ಕಿ ತಮನ್ನಾ ಅಬ್ ಹಮಾರಾ ದಿಲ್ ಮೇ ಹೈ’, ಮದನ್ ಮೋಹನ್ ಮಾಳವೀಯರ ‘ಸತ್ಯಮೇವ ಜಯತೆ’, ಬಾಲ ಗಂಗಾಧರ ತಿಲಕರ ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಹೀಗೆ ಅನೇಕ ಘೋಷಣೆಗಳು ೧೯೪೭ಕ್ಕಿಂತ ಮುಂಚೆ ಈ ದೇಶದ ಗಲ್ಲಿಗಲ್ಲಿಗಳಲ್ಲಿ, ದೇಶವಾಸಿಗಳ ಹೃದಯದಲ್ಲಿ ಅನುರಣಿಸುತ್ತಿದ್ದವು. ಅವು ಈಗಲೂ, ನಿಜಾರ್ಥದಲ್ಲಿ ಭಾರತೀಯರಾದವರ ಮನಸ್ಸಿನಲ್ಲಿವೆ ಎನ್ನಿ.

ಯಾವುದೇ ಹೋರಾಟ, ಭಾಷಣ ಹೀಗೆ ಎಲ್ಲ ಸಂದರ್ಭಗಳಲ್ಲೂ ಎಲ್ಲ ಕಡೆಗಳಲ್ಲೂ ಕೇಳಿಸುತ್ತಿದ್ದ ಈ ಘೋಷಣೆಗಳು ಬ್ರಿಟಿಷರ ತಲೆಯನ್ನು ಕೆಡಿಸುತ್ತಿದ್ದವು. ಇಂಥ ಘೋಷಣೆಗಳನ್ನು ಕೂಗುತ್ತಿದ್ದ ಹೋರಾಟಗಾರರಿಗೆ ಛಡಿಯೇಟಿನ ಶಿಕ್ಷೆಯೂ ದೊರೆಯುತ್ತಿತ್ತು. ಆದರೆ ದೇಶಪ್ರೇಮವೆಂಬುದು ಛಡಿಯೇಟಿನ ನೋವನ್ನು ಮರೆಸಿ, ಮತ್ತಷ್ಟು ಉಲ್ಲಸಿತರಾಗಿ ಹೋರಾಟಕ್ಕೆ ಧುಮುಕುವಂತೆ ಹೋರಾಟಗಾರರನ್ನು ಪ್ರೇರೇಪಿಸುತ್ತಿತ್ತು. ಮೌಲಾನಾ ಹಸ್ರತ್ ಮೋಹಾನಿ ಎಂಬ ಹೋರಾಟಗಾರ ಮತ್ತು ಉರ್ದು ಕವಿ, ತಾವು ಸೃಷ್ಟಿಸಿದ ‘ಇನ್‌ಕ್ವಿಲಾಬ್ ಜಿಂದಾಬಾದ್’ ಘೋಷಣೆಗೆ ೨ ವರ್ಷಗಳ
ಕಾರಾಗೃಹ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂತು.

ಎಲ್ಲವನ್ನೂ ಬಿಡಿ, ದೇಶಭಕ್ತಿಯ ಕವನವನ್ನು ಬರೆದಿದ್ದಕ್ಕೆ ದ.ರಾ.ಬೇಂದ್ರೆ ಯವರನ್ನೇ ಬ್ರಿಟಿಷರು ಬಂಧಿಸಿದ್ದರು. ಘೋಷಣೆಗಳನ್ನು ಕೂಗುವುದರಿಂದ
ಜನರನ್ನು ಸುಲಭವಾಗಿ ಆಕರ್ಷಿಸಬಹುದು ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಅದು ಈಗಿನ ‘ಜೈ ಶ್ರೀರಾಮ್’ ಆಗಿರಬಹುದು, ‘ಭಾರತ್ ಮಾತಾ ಕಿ ಜೈ’ ಇರಬಹುದು. ರಾಜಕೀಯ ಪಕ್ಷಗಳ ವಿಷಯಕ್ಕೆ ಬಂದರೆ ೨೦೧೪ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿಯವರನ್ನು ಗಮನದಲ್ಲಿಟ್ಟು
ಕೊಂಡು ಹುಟ್ಟುಹಾಕಿದ ‘ಅಬ್ ಕೀ ಬಾರ್, ಮೋದಿ ಸರಕಾರ್’, ೨೦೧೯ರ ಚುನಾವಣೆಯ ‘ಫಿರ್ ಏಕ್ ಬಾರ್, ಮೋದಿ ಸರಕಾರ್’ ಘೋಷವಾಕ್ಯಗಳು, ‘ಮೈ ಭೀ ಚೌಕಿದಾರ್’ ಎಂಬ ಘೋಷಣೆ, ಹಾಗೆಯೇ ೨೦೨೪ರ ಚುನಾವಣೆಗೆ ಬಳಸಲಾಗುತ್ತಿರುವ ‘ಅಬ್ ಕಿ ಬಾರ್, ಚಾರ್ ಸೌ ಪಾರ್’ ಹಾಗೂ ‘ಏ ದೇಶ್
ಮೇರಾ ಪರಿವಾರ್’, ಬಿಜೆಪಿ ಕಾರ್ಯಕರ್ತರು ಬಳಸುತ್ತಿರುವ ‘ಮೋದಿ ಕಾ ಪರಿವಾರ್’ ಈ ಎಲ್ಲ ಘೋಷಣೆಗಳು ಜನರ ಮನಸ್ಸನ್ನು ಚುಂಬಕದಂತೆ ಸೆಳೆಯುವಂಥವಾಗಿವೆ ಎನ್ನಲಡ್ಡಿಯಿಲ್ಲ.

ಇನ್ನು, ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸಿಗರು ಬಳಸಿದ ‘ಪಂಚ ಗ್ಯಾರಂಟಿ’ ಘೋಷಣೆಯನ್ನೇ ಈಗ ಬಿಜೆಪಿಯವರು ಕೊಂಚ ಮಾರ್ಪಡಿಸಿ ‘ಮೋದಿ ಕಿ ಗ್ಯಾರಂಟಿ’ ಎಂದು ಬಳಸಲು ಶುರುಮಾಡಿದ್ದು ಗೊತ್ತೇ ಇದೆ. ದಶಕಗಳಷ್ಟು ಹಿಂದೆ ಹೋದರೆ, ಇಂದಿರಾ ಗಾಂಧಿಯವರ
‘ಗರೀಬಿ ಹಟಾವೋ’ ಘೋಷಣೆ ಅಥವಾ ಧ್ಯೇಯವಾಕ್ಯವು ಚುನಾವಣೆಯನ್ನು ಬೇರೆಯದೇ ದಿಕ್ಕಿಗೆ ಕೊಂಡೊಯ್ದಿತ್ತು. ವಿದೇಶಗಳಲ್ಲೂ ಇಂಥ ಪರಿಪಾಠವಿದೆ.

೨೦೦೮ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೇಳೆ ಬರಾಕ್ ಒಬಾಮ ಮಾಡಿದ ‘ಯೆಸ್ ವಿ ಕ್ಯಾನ್’, ೨೦೧೬ರ ಚುನಾವಣೆಯಲ್ಲಿ ಡೊನಾಲ್ಡ್
ಟ್ರಂಪ್ ಮಾಡಿದ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷಣೆಗಳು ಅವರಿಬ್ಬರನ್ನೂ ಅಧಿಕಾರಕ್ಕೆ ಏರಿಸಿದ್ದುಂಟು. ಅಬ್ಬಬ್ಬಾ ಎಂದರೆ, ಒಂದು ಘೋಷಣೆಯಿಂದ ಏನಾಗಬಹುದು? ಏನೂ ಇಲ್ಲ; ಆದರೆ ಆ ಘೋಷಣೆಗೊಂದು ಅರ್ಥ ದಕ್ಕಿದರೆ, ಅದನ್ನು ಬಳಸುವವರ ಮೈ ರೋಮಾಂಚನ ಗೊಳ್ಳುವುದಂತೂ ಖರೆ. ಸಿನಿಮಾಗೆ ಹೋದಾಗ ಕೊನೆಯಲ್ಲಿ ರಾಷ್ಟ್ರಗೀತೆ ಮುಗಿದ ಮೇಲೆ ಯಾರಾದರೂ ‘ಭಾರತ್ ಮಾತಾ ಕಿ…’ ಎಂದು ಕೂಗಿದರೆ ನಮ್ಮ ಬಾಯಿಂದ ಅಪ್ರಯತ್ನವಾಗಿ ‘ಜೈ’ ಎಂಬ ಘೋಷ ಹೊಮ್ಮುತ್ತದೆ.

ಈಗಿನ ಯಾವುದೇ ಅನ್ಯಾಯದ ವಿರುದ್ಧದ ಹೋರಾಟವಾದರೂ ‘ಬೇಕೇ ಬೇಕು, ನ್ಯಾಯ ಬೇಕು’ ಎಂಬ ಘೋಷಣೆ ಸಹಜವಾಗೇ ಹೊಮ್ಮುತ್ತದೆ. ಯಾವುದೇ ರಾಜಕಾರಣಿ, ಸಿನಿಮಾ ತಾರೆ ಅಥವಾ ಹಾಡುಗಾರರ ಹೆಸರಲ್ಲಿ, ಅವರದ್ದೇ ಕಾರ್ಯಕ್ರಮದಲ್ಲಿ ‘ಜೈ ಜೈ’ಕಾರಗಳು ಹೊಮ್ಮುವುದು ಕಟ್ಟಿಟ್ಟ ಬುತ್ತಿ. ಮೊನ್ನೆ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗನ ವಿವಾಹಪೂರ್ವ ಸಂತೋಷ ಕೂಟದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ‘ಜೈ
ಶ್ರೀರಾಮ್’ ಎಂದು ಘೋಷಣೆ ಕೂಗಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ.

ಹೋರಾಟಗಳು, ರಾಜಕೀಯ ಸಮಾವೇಶಗಳಿಗೆ ಮಾತ್ರವೇ ಇಂಥ ಘೋಷಣೆ/ಘೋಷವಾಕ್ಯಗಳು ಸೀಮಿತವಾಗಿಲ್ಲ. ಖ್ಯಾತ ತಂತ್ರಜ್ಞಾನ ಕಂಪನಿ ಆಪಲ್‌ನ ‘ಥಿಂಕ್ ಡಿಫರೆಂಟ್’, ನೈಕಿ ಕಂಪನಿಯ ‘ಜಸ್ಟ್ ಡೂ ಇಟ್’, ಮೆಕ್ ಡೊನಾಲ್ಡ್ಸ್‌ನ ‘ಆಮ್ ಲವಿಂಗ್ ಇಟ್’ ಹೀಗೆ ಸಾಕಷ್ಟು ‘ಕಾರ್ಪೊರೇಟ್’ ಉದಾಹರಣೆ ಗಳನ್ನೂ ಕೊಡಬಹುದು. ನಮ್ಮ ನಿಮ್ಮೆಲ್ಲರ ಮೆಚ್ಚಿನ ‘ವಿಶ್ವವಾಣಿ’ ದಿನಪತ್ರಿಕೆಗೆ ‘ವಿಶ್ವಾಸವೇ ವಿಶ್ವ’ ಎಂಬ ‘ಟ್ಯಾಗ್‌ಲೈನ್’ (ಅಡಿಬರಹ) ಇರುವುದನ್ನು ಮತ್ತು ಅದು ಯಾವುದೇ ಘೋಷಣೆಗಿಂತ ಕಮ್ಮಿಯಿಲ್ಲ ಎಂಬುದನ್ನು ನೀವೆಲ್ಲ ಬಲ್ಲಿರಿ. ಕೆಲವೊಮ್ಮೆ ಘೋಷವಾಕ್ಯವೊಂದು ಕಂಪನಿಯ ಹೆಸರಿನೊಡನೆ ಸೇರಿ, ಕಂಪನಿಯ ಹೆಸರು ಮರೆತರೂ ಆ ಘೋಷವಾಕ್ಯವು ನೆನಪಲ್ಲಿ ಉಳಿಯವುದಿದೆ, ‘ಇಂಪೀರಿಯಲ್ ಬ್ಲೂ’ನ ‘ಮೆನ್ ವಿಲ್ ಬಿ ಮೆನ್’ ಎಂಬ ಸಾಲನ್ನು ಮರೆಯಲಾದೀತೇ? ಇಷ್ಟೊಂದೆಲ್ಲ ಹೇಳುವುದಕ್ಕೂ ಒಂದು ಕಾರಣವಿದೆ.

ಸಂದರ್ಭ ಏನೇ ಇರಲಿ, ಜನರ ಜಮಾವಣೆಯಾದಾಗ ಏನಾದರೊಂದು ಘೋಷಣೆ ಮೊಳಗುವುದು ನಮ್ಮ ದೇಶದಲ್ಲಿ ಮೊದಲಿನಿಂದಲೂ ಕಾಣ ಬರುತ್ತಿರುವ ಪರಿಪಾಠ. ತಿರುಪತಿಗೆ ಹೋದಾಗ ‘ಗೋವಿಂದಾ ಗೋವಿಂದ’ ಎಂದೂ, ಎಲ್ಲಮ್ಮನ ಭಕ್ತರು ‘ಉಧೋ ಉಧೋ’ ಎಂದೂ, ಗಣೇಶನ ಭಕ್ತರು
‘ಗಣಪತಿ ಬಪ್ಪಾ ಮೋರಯಾ’ ಎಂದೂ ಕೂಗುವುದು ಇದಕ್ಕೆ ಒಂದಷ್ಟು ಉದಾಹರಣೆಗಳು. ಇಂಥ ಹಲವು ಘೋಷಣೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿವೆ.

ಎಲ್ಲರಿಗೂ ಗೊತ್ತಿರುವ ಹಾಗೆ, ರಾಜರ ಕಾಲದಲ್ಲಿ ಯುದ್ಧಕ್ಕೆ ಹೋಗುವಾಗಲೂ ಸೈನಿಕರು ‘ಹರ ಹರ ಮಹಾದೇವ್’ ಎಂದು ಅಬ್ಬರಿಸುತ್ತಾ ವೈರಿ
ಪಾಳಯದ ನಿರ್ನಾಮಕ್ಕೆ ದೌಡಾಯಿಸುತ್ತಿದ್ದರು. ಆದರೆ, ನಮ್ಮ ದೇಶದಲ್ಲಿ ಒಂದಿಷ್ಟು ಘೋಷಣೆಗಳು ಕೆಲವರ ನಿದ್ರೆಗೆಡಿಸುವುದಿದೆ. ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದ್ದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾರಿನಿಂದ ಇಳಿದು, ಘೋಷಣೆ ಕೂಗಿದವರಿಗೆ ಹಿಗ್ಗಾಮುಗ್ಗಾ ಬೈದಿದ್ದಿದೆ. ಇದೇ ಘೋಷಣೆಯನ್ನು ತಡೆದುಕೊಳ್ಳುವುದಕ್ಕಾಗದೆ ನಟ ಪ್ರಕಾಶ್ ರಾಜ್/ರೈ ಅವರು ಯಾವುದೋ ವೇದಿಕೆಯ ಮೇಲೆ
ನಿಂತು ಏನೇನೋ ಹೇಳಿದ್ದನ್ನು, ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನೀವು ಕಂಡಿರಬಹುದು.

ಬಿಡಿ, ಅದೆಲ್ಲ ಅವರವರ ಭಾವಕ್ಕೆ, ಅವರವರ ಭಕುತಿಗೆ! ದೇವರು ಎಲ್ಲರಿಗೂ ಒಂದೇ ತೆರನಾದ ಬುದ್ಧಿಯನ್ನು ಕೊಟ್ಟಿರುವುದಿಲ್ಲ ನೋಡಿ! ಅದೇ ರೀತಿ, ಅರ್ಧಂಬರ್ಧ ಬುದ್ಧಿ ಬೆಳೆಸಿಕೊಂಡು ದೇಶವಿರೋಽ ಘೋಷಣೆಗಳನ್ನು ಕೂಗುವವರೂ ನಮ್ಮ ನಡುವೆಯೇ ಇದ್ದಾರೆ. ಕ್ರಿಕೆಟ್‌ನಲ್ಲೋ ಹಾಕಿಯಲ್ಲೋ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಅಥವಾ ಕೆಲವೊಂದು ಶಾಂತಿಯುತ ರ‍್ಯಾಲಿಗಳ ಸಂದ ರ್ಭದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿದ ವಿಕ್ಷಿಪ್ತ ಮನಸ್ಸಿನ ವ್ಯಕ್ತಿಗಳಿವರು. ಮೊನ್ನೆ ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಸಾಬ್ ಎನ್ನುವ ಅಭ್ಯರ್ಥಿಯೊಬ್ಬ ಗೆದ್ದಾಗ ‘ಪಾಕಿಸ್ತಾನ್ ಜಿಂದಾ ಬಾದ್’ ಎಂಬ ಕೂಗು ಹೊಮ್ಮಿದ್ದೂ ಇಂಥ ವಿಕ್ಷಿಪ್ತರಿಂದಲೇ. ಇದನ್ನೆಲ್ಲ ನೋಡಿದಾಗ, ಇಂಥ ಘೋಷಣೆ ಕೂಗುವವರು, ಅದನ್ನು ಸಮರ್ಥಿಸಿಕೊಳ್ಳು ವವರು ತಮ್ಮ ತಲೆಯಲ್ಲಿ ಏನನ್ನು ತುಂಬಿಕೊಂಡಿರುತ್ತಾರೆಂಬುದೇ ಗೊತ್ತಾಗುವುದಿಲ್ಲ.

ಏಕೆಂದರೆ, ಕಾಶ್ಮೀರದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗಿ ಕಲ್ಲನ್ನು ಎಸೆದರೆ ದುಡ್ಡು ಕೊಡುತ್ತಾರೆ ಎಂಬ ಗುಮಾನಿಗಳಿದ್ದ ಕಾಲವೊಂದಿತ್ತು. ಆದರೆ ಈಗ? ಪಾಕಿಸ್ತಾನ ಈಗಾಗಲೇ ದಿವಾಳಿಯ ಸ್ಥಿತಿಗೆ ಬಂದು ನಿಂತಿದ್ದು, ಚೀನಾ ಬಿಟ್ಟರೆ ಬೇರಾವ ದೇಶವೂ ಪಾಕಿಸ್ತಾನದ ನಿಕಟ ಸಂಪರ್ಕದಲ್ಲಿಲ್ಲ!
ಚೀನಾ ಕೂಡ ಪಾಕಿಸ್ತಾನವನ್ನು ಏಕೆ ಸಹಿಸಿಕೊಂಡಿದೆಯೆಂದರೆ, ಅದು ಭಾರತವನ್ನು ಬೆದರಿಸುವ, ತನ್ಮೂಲಕ ಭಾರತದ ಸುತ್ತಮುತ್ತ ತನ್ನ ವಸಾಹತು ಗಳನ್ನು ಸೃಷ್ಟಿಸಿಕೊಳ್ಳುವ ಹಂಬಲದಲ್ಲಿದೆ, ಅದಕ್ಕೆ! ಅದೇ ಕಾರಣಕ್ಕೆ ಚೀನಾ ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಜತೆಗೂ ಇರೋದು. ಆದರೆ ನಮ್ಮ ದೇಶದಲ್ಲೇ ಇದ್ದುಕೊಂಡು, ಇಲ್ಲಿನ ಗಾಳಿ-ನೀರು- ಅನ್ನವನ್ನು ಸೇವಿಸಿ, ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವವರನ್ನು, ಅವರನ್ನು ಸಮರ್ಥಿಸಿ ಕೊಳ್ಳುವವರನ್ನು ನೋಡಿದಾಗ ಇವರ ಬುದ್ಧಿಶಕ್ತಿಗೆ ಏನಾಗಿದೆ ಎಂಬ ಸಂಶಯ ಬರುವುದಂತೂ ಖರೆ! ಏನಂತೀರಾ?

(ಲೇಖಕರು ಪತ್ರಕರ್ತರು)

Leave a Reply

Your email address will not be published. Required fields are marked *