ಅಭಿಪ್ರಾಯ
ಕೆ.ರಾಮಮೂರ್ತಿ ರಾವ್
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೂ ಕಳೆದ ಸುಮಾರು ಐದು ದಶಕಗಳಿಂದ ವಿಶೇಷ ಸಂಗೀತ – ನೃತ್ಯ ತಾಳವಾದ್ಯ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಲಿದೆ. ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಎಂಬ ನಾಲ್ಕು ದರ್ಜೆಗಳಲ್ಲಿ ನಡೆಸಲಾಗುತ್ತಿದ್ದ ಈ ಪರೀಕ್ಷೆಗಳು ಪ್ರತಿ ವರ್ಷ ಮೇ ತಿಂಗಳಿನಲ್ಲಿ ತಪ್ಪದೆ ನಡೆಯುತ್ತಿತ್ತು.
ಪ್ರತಿ ವರ್ಷವೂ ಈ ಪರೀಕ್ಷೆಗಳಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರು. ನಮ್ಮ ನಾಡಿನ ಶಾಸ್ತ್ರೀಯ ಸಂಗೀತ ನೃತ್ಯ ಕಲೆಗಳ ಶಿಕ್ಷಣ, ಪ್ರದರ್ಶನ, ಹಾಗೂ ಅವುಗಳ ಉಳಿವು ಮತ್ತು ಬೆಳವಣಿಗೆಗೆ ಈ ಪರೀಕ್ಷೆಗಳು ಅತ್ಯಂತ ಪ್ರೇರಕ ಹಾಗೂ ಅತ್ಯಂತ ಪೋಷಕವಾಗಿತ್ತು. ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಜೋರಾಗಿ ಇದ್ದರೂ, ಮೇ ತಿಂಗಳಿನಲ್ಲಿ ನಡೆಸಬೇಕಾಗಿದ್ದ ಪರೀಕ್ಷೆಗಳನ್ನು ಮಂಡಳಿಯು ಡಿಸೆಂಬರ್ ತಿಂಗಳಿನಲ್ಲಿಯಾದರೂ ತುಂಬಾ ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ (ಆ ಪರೀಕ್ಷೆಗಳ ಅಂಕಪಟ್ಟಿಗಳು ಇನ್ನೂ ವಿದ್ಯಾರ್ಥಿಗಳ ಕೈಸೇರಿಲ್ಲದಿರುವುದು ಬೇರೆ ವಿಚಾರ) ಈ ವರ್ಷ ಕೋವಿಡ್ ಎರಡನೆ ಅಲೆಯ ಮದ್ಯೆಯೂ ಎಂಟು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ಮಂಡಳಿ ಯದ್ದಾಗಿದೆ.
ಆದರೆ, ಈ ವರ್ಷ ಆಗ ತಿಂಗಳು ಮುಗಿಯುತ್ತಿದ್ದರೂ ಮಂಡಳಿಯೂ ಸಂಗೀತ – ನೃತ್ಯ – ತಾಳವಾದ್ಯ ಪರೀಕ್ಷೆ ಗಳನ್ನು ನಡೆಸುವ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲದಿರುವುದು ದುರದೃಷ್ಟಕರ. ಈ ಬಗ್ಗೆ ಮಂಡಳಿಯ ಅಧಿಕಾರಿಗಳನ್ನು ನೃತ್ಯ ಅಧ್ಯಾಪಕರು ಹೋಗಿ ಪ್ರಶ್ನಿಸಿದರೆ- ಇಲ್ಲ. ಈ ಪರೀಕ್ಷೆಗಳನ್ನು ಮೈಸೂರಿನ ಗಂಗೂ ಬಾಯಿ ಸಂಗೀತ ನೃತ್ಯ ವಿಶ್ವವಿದ್ಯಾನಿಲಯಕ್ಕೆ ವಹಿಸಲಾಗಿದೆ ಎಂಬ ಹಾರಿಕೆಯ ಸಬೂಬು ಹೇಳುತ್ತಿದ್ದಾರೆ.
ಈ ಬಗ್ಗೆ ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಅಽಕಾರಿಗಳನ್ನು ಕೇಳಿದರೆ- ಹೌದು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ತೀರ್ಮಾನ ತೆಗೆದುಕೊಂಡು ಸರಕಾರಕ್ಕೆ ಪತ್ರ ಬರೆದದ್ದು ನಿಜ ಆದರೆ, ಪತ್ರ ಬರೆದು ಒಂದು ವರ್ಷ ಕಳೆದಿದ್ದರೂ ಇನ್ನೂ ಉನ್ನತ ಶಿಕ್ಷಣ ಇಲಾಖೆಯಿಂದ ನಮಗೆ ಇನ್ನೂ ಯಾವುದೇ ಆದೇಶ, ಒಪ್ಪಿಗೆ ಅಥವಾ ಮಾರ್ಗಸೂಚಿಯ ಹಸಿರು ನಿಶಾನೆ ಬಂದಿಲ್ಲ. ಮಂಡಳಿಯೂ ಈ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ ಎನ್ನುತ್ತಾರೆ. ಈ ಗೊಂದಲ ಗಳಿಂದಾಗಿ ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನವಾಗಿದೆ.
ಕೋವಿಡ್‌ನಿಂದಾಗಿ ಪ್ರತ್ಯಕ್ಷ ಪಾಠ ಪ್ರವಚನಗಳು ನಿಂತು ಹೋಗಿದ್ದು ವೃತ್ತಿಪರ ಖಾಸಗಿ ಶಿಕ್ಷಕರು ಕಂಗಾಲಾಗಿzರೆ. ಇನ್ನು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಆನ್‌ಲೈನ್ ಮೂಲಕ ಸಂಗೀತ ನೃತ್ಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೂ ಪರೀಕ್ಷೆಗಳು ನಡೆಯುವ ಬಗ್ಗೆ ಉಂಟಾಗಿರುವ ಅನಿಶ್ಚಿತತೆಗಳಿಂದ ಶಿಕ್ಷಣದಿಂದ ದೂರ ಸರಿಯುತ್ತಿದ್ದಾರೆ. ನಮ್ಮ ಸರಕಾರಕ್ಕೆ ಸಂಗೀತ ನೃತ್ಯ ಮುಂತಾದ ಕಲೆ, ಸಂಸ್ಕತಿಗಳ ರಕ್ಷಣೆಯ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲವೇ? ಇದಕ್ಕೆ ಈಗ ಉತ್ತರಿಸಬೇಕಾದವರು ಯಾರು? ಆದ್ದರಿಂದ ಈ ಬಗ್ಗೆ ಸರಕಾರದ ಪ್ರೌಢ ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳು ತಕ್ಷಣವೇ ಗಮನ ಹರಿಸಿ ಈ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಕಲಾ ಶಿಕ್ಷಣ ಕ್ಷೇತ್ರಕ್ಕೆ ಮಹದುಪಕಾರ ಮಾಡಬೇಕೆಂಬುದು ಕಲಾ ರಂಗದ ವೃತ್ತಿಪರರ ಆಶಯವಾಗಿದೆ.