Saturday, 14th December 2024

ಕಠಿಣ ಕ್ರಮವಿಲ್ಲದಿದ್ದರೆ ಇನ್ನಷ್ಟು ಪರೀಕ್ಷಾ ಅಕ್ರಮ ಖಚಿತ

ಅಶ್ವತ್ಥಕಟ್ಟೆ

ranjith.hoskere@gmail.com

ರಾಷ್ಟ್ರಮಟ್ಟದಲ್ಲಿ ಕಳೆದೊಂದು ವಾರದಿಂದ ಬಹುಚರ್ಚಿತ ಹಾಗೂ ಬಹು ವಿವಾದಿತ ವಿಷಯವೆಂದರೆ, ಪರೀಕ್ಷೆಗಳ ಸಾಲುಸಾಲು ಅಕ್ರಮದ ಆರೋಪ. ಆರಂಭದಲ್ಲಿ ವೈದ್ಯಕೀಯ ಪ್ರವೇಶಕ್ಕಿರುವ ನೀಟ್‌ನಲ್ಲಿನ ಅಕ್ರಮ ಬೆಳಕಿಗೆ ಬಂದು, ಮರುಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಇದಾದ ಕೆಲವೇ ದಿನಗಳಲ್ಲಿ ಉಪನ್ಯಾಸ ಹುದ್ದೆಯ ‘ಅರ್ಹತೆ’ಗೆ ನಡೆಯುವ ಯುಜಿಸಿ ನೆಟ್‌ನಲ್ಲಿ ‘ಪಾರದರ್ಶಕ’ ಕೊರತೆ ಎನ್ನುವ ಕಾರಣಕ್ಕೆ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿದೆ. ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ದೇಶದ ಜನರಿಗೆ ಹೊಸದಲ್ಲ. ಆದರೆ ಅತಿ ವಿಶ್ವಾಸವಿಟ್ಟಿರುವ ಸಂಸ್ಥೆಗಳಿಂದ ನಡೆದ ಪರೀಕ್ಷೆಗಳಿಗೂ ಈ ‘ಅಕ್ರಮ’ದ ಭೂತ ಮೆಟ್ಟಿರುವುದು ಅನೇಕರ ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ.

ನೀಟ್, ಯುಜಿಸಿ ನೆಟ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ವತಿಯಿಂದ ನಡೆಸಲಾಗುತ್ತದೆ. ಸಾಮಾನ್ಯವಾಗಿ ಎನ್‌ಟಿಎ ವತಿಯಿಂದ ನಡೆಯುವ ಪರೀಕ್ಷೆಗಳೆಂದರೆ, ಶಿಸ್ತು, ಪಾರದರ್ಶಕ ಹಾಗೂ ಕಠಿಣ ನಿಯಮಗಳಲ್ಲಿ ನಡೆಯುತ್ತವೆ ಎನ್ನುವ ನಂಬಿಕೆಯಿದೆ. ಅದಕ್ಕೆ ಪೂರಕವಾಗಿ ಪರೀಕ್ಷೆಯ ದಿನ ಕೊಠಡಿಯೊಳಗೆ ಅಭ್ಯರ್ಥಿಗಳನ್ನು ಬಿಡುವಾಗ ಮಾಡುವ ‘ಸ್ಟ್ರಿಕ್ಟ್’ ಪರಿಶೀಲನೆಯೂ ಅನೇಕರಿಗೆ ಕಿರಿಕಿರಿಯನ್ನು ಮಾಡಿದರೂ, ಪಾರದರ್ಶಕತೆಯ ಕಾರಣಕ್ಕೆ ಬಹುತೇಕರು ಇದನ್ನು ಒಪ್ಪಿಕೊಳ್ಳುತ್ತಾರೆ.

ಅಂತಹ ಕಠಿಣಾತಿಕಠಿಣ ಪ್ರಕ್ರಿಯೆಗಳನ್ನು ಅಳವಡಿಸುವ ಎನ್‌ಟಿಎದಿಂದ ನಡೆದಿರುವ ಪರೀಕ್ಷೆಯಲ್ಲಿಯೂ ‘ಭಾರಿ ಅವ್ಯವಹಾರ’ ನಡೆದಿರುವುದು
ಅನೇಕರಿಗೆ ಹುಬ್ಬೇರುವಂತೆ ಮಾಡಿದೆ. ಹಾಗೇ ನೋಡಿದರೆ, ದೇಶದಲ್ಲಿ ನಡೆದಿರುವ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ಇದೇ ಮೊದಲಲ್ಲ. ಕರ್ನಾಟಕದಲ್ಲಿಯೇ ಕಳೆದ ವರ್ಷ ಪಿಎಸ್‌ಐ, ಪಿಡ್ಲೂಡಿ ಎಂಜಿನಿಯರ್ ಗಳ ನೇಮಕದಲ್ಲಿನ ಅಕ್ರಮ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಈ ಎಲ್ಲವೂ ಇನ್ನು ತನಿಖಾ ಹಂತದಲ್ಲಿವೆ.

ಇನ್ನು ಇದೇ ವರ್ಷ ಸಿಇಟಿ ಪರೀಕ್ಷೆಯಲ್ಲಿನ ಎಡವಟ್ಟು, ಕೆಲ ವರ್ಷದ ಹಿಂದೆ ಪಿಯುಸಿಯ ಒಂದೇ ವಿಷಯದ ಪ್ರಶ್ನೆ ಪತ್ರಿಕೆ ಮೂರು ಬಾರಿ ಸೋರಿಕೆ ಯಾಗಿದ್ದರಿಂದ ಪರೀಕ್ಷೆ ಮುಂದಕ್ಕೆ ಹೋಗಿದ್ದು… ಹೀಗೆ ಸಾಲು ಸಾಲು ಆರೋಪಗಳು ಪಟ್ಟಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಪಶ್ಚಿಮ ಬಂಗಾಳ ದಲ್ಲಿ ಶಿಕ್ಷಕರ ನೇಮಕದಲ್ಲಿನ ಅಕ್ರಮಕ್ಕೆ, ಇಡೀ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ್ದ ಘಟನೆ ತೀರಾ ಇತ್ತೀಚಿಗೆ ನಡೆದಿತ್ತು. ಇದೇ ರೀತಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ವರ್ಷಕ್ಕೊಂದರಂತೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯ ಅಕ್ರಮದ ವಾಸನೆ ಕೇಳಿಬಂದಿವೆ, ಬರುತ್ತಿವೆ.

ಇವುಗಳನ್ನು ಹೊರತುಪಡಿಸಿ, ದೇಶಾದ್ಯಂತ ನಡೆಯುವ ೧೦ನೇ ಹಾಗೂ ೧೨ನೇ ತರಗತಿ ಪರೀಕ್ಷೆಯ ಸಮಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದಾಗೆ ಕೇಳಿಬರುವುದು ಸಹಜ. ಆದರೆ ಕೇಂದ್ರ ಸರಕಾರದಿಂದ ನಡೆಯುವ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಈ ರೀತಿಯ ಆರೋಪ ಕೇಳಿಬರುತ್ತಿರಲಿಲ್ಲ. ಯುಪಿಎಸ್‌ಸಿ ಪರೀಕ್ಷೆಯ ಬಳಿಕ, ‘ಅತಿ’ ಪಾರದರ್ಶಕವಾಗಿ ಪರೀಕ್ಷೆ ನಡೆಯುವುದೇ ಎನ್‌ಟಿಎದಿಂದ ನಡೆಯುವ ಪರೀಕ್ಷೆಗಳು ಎನ್ನುವ ಮಾತುಗಳಿದ್ದವು. ಆದರೆ ಈ ಬಾರಿ ನೀಟ್ ನಲ್ಲಿನ ಎಡವಟ್ಟು, ಒಂದುವರೆ ಸಾವಿರ ವಿದ್ಯಾರ್ಥಿಗಳ ಮರುಪರೀಕ್ಷೆ ಎನ್‌ಟಿಎದ ಪ್ರಕ್ರಿಯೆಯನ್ನು ಅನುಮಾನದಿಂದ ನೋಡು ವಂತೆ ಮಾಡಿತ್ತು. ಆ ಪ್ರಕರಣದ ವಿವಾದ, ವಿಚಾರಣೆ ಮುಗಿಯುವ ಮೊದಲೇ, ಯುಜಿಸಿ ನೆಟ್ ಪರೀಕ್ಷೆಯಲ್ಲಿಯೇ ‘ಕಾಂಪ್ರಮೈಸ್’ ಆಗಿದೆ ಎನ್ನುವ ಕಾರಣಕ್ಕೆ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವ ತೀರ್ಮಾನಕ್ಕೆ ಕೇಂದ್ರ ಸರಕಾರ ಬಂದಿತ್ತು. ಇದಿಷ್ಟೇ ಅಲ್ಲದೇ, ಪ್ರಕರಣಗಳನ್ನು ಸಿಬಿಐನಿಂದ ತನಿಖೆ ನಡೆಸಲು ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪರೀಕ್ಷಾ ಪ್ರಕ್ರಿಯೆ, ವಿದ್ಯಾರ್ಥಿಗಳು ಪಡೆಯುತ್ತಿರುವ ಅಂಕಗಳನ್ನು ಗಮನಿಸಿದರೆ ಅನೇಕರು, ಪರೀಕ್ಷಾ ಮೌಲ್ಯವೇ ಕಳೆದು ಕೊಳ್ಳುತ್ತಿವೆ ಎನ್ನುವ ಆರೋಪವನ್ನು ಮಾಡುತ್ತಿದ್ದಾರೆ. ಅದರಲ್ಲಿಯೂ ‘ಔಟ್ ಆಫ್ ಔಟ್’ ಎನ್ನುವ ಸಂಸ್ಕೃತಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಗಳಲ್ಲಿ ಹಾಗೂ ವಿಜ್ಞಾನ, ವಾಣಿಜ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆಯುತ್ತಿರುವುದರಿಂದ ಮೌಲ್ಯಮಾಪನದ ಮೇಲೆಯೇ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಮತ್ತೊಂದು ಕಡೆ ರಾಜ್ಯ ಸರಕಾರಗಳು ನಡೆಸುವ ಔದ್ಯೋಗಿಕ ಪರೀಕ್ಷೆಗಳಲ್ಲಿನ ಗೋಲ್‌ಮಾಲ್‌ಗಳು ಒಂದೊಂದೇ ಹೊರಬರುತ್ತಿದ್ದಂತೆ, ಪ್ರತಿ ಪರೀಕ್ಷೆಯನ್ನೂ ‘ಭ್ರಷ್ಟಾಚಾರ’ದ ಕನ್ನಡಕದಲ್ಲಿಯೇ ನೋಡುವ ಪರಿಸ್ಥಿತಿಗೆ ಈಗಾಗಲೇ ಬಂದಿದ್ದೇವೆ. ಈ ಎಲ್ಲದರ ಹೊರತಾಗಿಯೂ ಎನ್‌ಟಿಎ ಸಂಸ್ಥೆ ನಡೆಸುವ ಪರೀಕ್ಷೆಗಳ ಮೇಲೆ ಈಗಲೂ ಜನ ವಿಶ್ವಾಸ ಉಳಿಸಿಕೊಂಡಿದ್ದಾರೆ.

ಅದನ್ನು ಹಾಗೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರೀಕ್ಷಾ ಏಜೆನ್ಸಿಗಳು ಕಾರ್ಯನಿರ್ವಹಿಸಬೇಕಿದೆ. ಯಾವುದೇ ಪರೀಕ್ಷೆಗಳಲ್ಲಿ ಅಕ್ರಮ ನಡೆದರೆ, ಅದು
ಅಕ್ಷಮ್ಯ. ಶಾಲಾ, ಕಾಲೇಜು ಹಂತಗಳಲ್ಲಿ ನಡೆಯುವ ಅಕ್ರಮದಿಂದ ವಿದ್ಯಾರ್ಥಿಗಳಿಗೆ ಪೆಟ್ಟು ಬೀಳುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಅದರ ಪರಿಣಾಮ ದೀರ್ಘಾವಽಗೆ ಇರುವುದಿಲ್ಲ. ಆದರೆ ಔದ್ಯೋಗಿಕ ಪರೀಕ್ಷೆಗಳಲ್ಲಿ ಈ ರೀತಿಯ ಅಕ್ರಮ ನಡೆದರೆ ಅರ್ಹ ಅಭ್ಯರ್ಥಿಗಳ ಕೆಲಸವನ್ನು ಕಸಿದುಕೊಂಡ ರೀತಿಯಾಗುತ್ತದೆ. ಅದೇ ವೈದ್ಯಕೀಯ ಸೀಟು ಪಡೆಯುವ ನೀಟ್, ಉಪನ್ಯಾಸಕರ ಹುದ್ದೆಗೆ ಅತ್ಯಾವಶ್ಯಕವಾಗಿರುವ ಯುಜಿಸಿ ನೆಟ್‌ನಂತಹ
ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಂದ ಭವಿಷ್ಯದ ಒಂದು ಜನರೇಷನ್ ಹಾಳಾಗುವ ಸಾಧ್ಯತೆ ದಟ್ಟವಾಗಿರುತ್ತದೆ.

ಉದಾಹರಣೆಗೆ, ಕಾಪಿ ಹೊಡೆದೋ ಅಥವಾ ಸೋರಿಕೆಯಾಗಿರುವ ಪೇಪರ್ ಅನ್ನು ನೋಡಿಕೊಂಡೋ ಯುಜಿಸಿ ನೆಟ್‌ನಲ್ಲಿ ಅನರ್ಹನೊಬ್ಬ ಉತ್ತೀರ್ಣ ನಾಗಿ, ಯಾವುದೋ ಒಂದು ಕಾಲೇಜಿನಲ್ಲಿ ಅಧ್ಯಾಪಕನಾಗಿ ಮೂರು ದಶಕಗಳ ಸೇವೆ ಸಲ್ಲಿಸಿದರೆ, ಆ ಮೂರು ದಶಕಗಳ ಕಾಲ ‘ಅನರ್ಹ’ ಉಪನ್ಯಾಸಕನ ಬಳಿ ಕಲಿಯುವ ೩೦ ಬ್ಯಾಚ್‌ನಲ್ಲಿನ ವಿದ್ಯಾರ್ಥಿಗಳಿಗೆ ಏನು ಹೇಳಿಕೊಡಬಹುದು? ಎನ್ನುವುದನ್ನು ಯೋಚಿಸಬೇಕಿದೆ. ಇದೇ ವರ್ಷದ ನೀಟ್‌ನ್ನು ಗಮನಿಸಿದರೆ, ಒಂದುವರೆ ಸಾವಿರ ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಈ ಅಕ್ರಮ ಬಯಲಾಗದೇ, ಈ ಎಲ್ಲರೂ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದುಕೊಂಡು ವೈದ್ಯ ವೃತ್ತಿಗೆ ಎಂಟ್ರಿಯಾದರೆ
ಅನರ್ಹ ಅಭ್ಯರ್ಥಿಗಳಿಗೆ ಉತ್ತಮ ಚಿಕಿತ್ಸೆ ಸಾಧ್ಯವೇ? ಕೇವಲ ಅನರ್ಹರಿಗೆ ಸೀಟು ಸಿಗುತ್ತದೆ ಎನ್ನುವುದಕ್ಕಿಂತ, ಅತ್ಯುತ್ತಮ ವೈದ್ಯರಾಗಬಹುದಾದ ಎಲ್ಲ ಅರ್ಹತೆಯಿರುವ ಬಡ ಅಭ್ಯರ್ಥಿಗಳಿಗೆ ಈ ಅಕ್ರಮದಿಂದಾಗಿ ಸೀಟು ತಪ್ಪಿದರೆ ಅದು ಯಾರಿಗೆ ನಷ್ಟ? ಎನ್ನುವುದನ್ನು ಯೋಚಿಸಬೇಕಿದೆ. ಹಾಗೆಂದ ಮಾತ್ರಕ್ಕೆ, ಪರೀಕ್ಷಾ ಅಕ್ರಮಗಳೆಲ್ಲ ನಡೆದಾಗ ಕೇಂದ್ರ ಸರಕಾರ ಅಥವಾ ರಾಜ್ಯದಲ್ಲಿ ನಡೆದಾಗ ರಾಜ್ಯ ಸರಕಾರ ಕಾರಣವೆಂದು ಹೇಳಲು ಬರುವುದಿಲ್ಲ.

ಈ ರೀತಿಯ ಅಕ್ರಮಗಳು ಬಹುತೇಕ ಸಮಯದಲ್ಲಿ ಸಚಿವರು ಹೋಗಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಮಟ್ಟದ ಗಮನದಲ್ಲಿಯೂ ಇರುವು ದಿಲ್ಲ. ಬದಲಿಗೆ ಇಲಾಖೆಯಲ್ಲಿರುವ ಕೆಲ ಕೆಳ ಹಂತದ ಸಿಬ್ಬಂದಿಗಳ ‘ಅಕ್ರಮ’ದ ಕಾರಣಕ್ಕೆ ಇಂತಹ ಸಮಸ್ಯೆಗಳು ಎದುರಾಗುತ್ತದೆ. ಈ ರೀತಿ ಪರೀಕ್ಞಾ ಅಕ್ರಮಕ್ಕೆ ಅವಕಾಶ ಕೊಡುವ ಕೆಲವರನ್ನು ಸರಿಯಾದ ರೀತಿಯಲ್ಲಿ ‘ಶಿಕ್ಷಿಸುವ’ ಕೆಲಸವಾಗದಿರುವುದು ಹೆಚ್ಚಿಕೊಳ್ಳಲು ಪ್ರಮುಖ ಕಾರಣವೆಂದರೆ ತಪ್ಪಾಗುವುದಿಲ್ಲ.

ಅಕ್ರಮದಲ್ಲಿ ಸಿಕ್ಕಿಹಾಕಿಕೊಳ್ಳುವ ಇಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ನಮ್ಮಲ್ಲಿರುವ ಕಾನೂನಿನಲ್ಲಿ ಈ ರೀತಿಯ ಆರೋಪದಲ್ಲಿ ಜೈಲು ಸೇರಿದ ಕೆಲವೇ ದಿನಗಳಲ್ಲಿ ಅವರಿಗೆ ಜಾಮೀನು ಸಿಗುತ್ತದೆ. ಜಾಮೀನು ಸಿಕ್ಕು, ಆರು ತಿಂಗಳಲ್ಲಿ ಪುನಃ ಕೆಲಸಕ್ಕೆ ಹಾಜರಾಗುತ್ತಾರೆ. ಮತ್ತೆ ಅದೇ ಛಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ದಶಕಗಳಿಂದ ಕರ್ನಾಟಕ ಸೇರಿದಂತೆ ದೇಶಾದ್ಯಂತ ಪರೀಕ್ಷಾ ಅಕ್ರಮಗಳು ಪತ್ತೆಯಾಗುತ್ತಿದ್ದರೂ, ಈವರೆಗೆ ಕಠಿಣ
ಎನ್ನುವಂತಹ ಕಾನೂನು ರೂಪಿಸಬೇಕು ಎಂದು ಆಡಳಿತದಲ್ಲಿದ್ದ ಬಹುತೇಕರಿಗೆ ಅನಿಸದಿರುವುದೇ ದುರಂತ.

ಈ ರೀತಿಯ ಪ್ರಕರಣಗಳ ಆರೋಪಿಗಳ ವಿರುದ್ಧ ಬಹುತೇಕ ಸಮಯದಲ್ಲಿ ‘ಸಾಕ್ಷ್ಯಾಧಾರ’ದ ಕೊರತೆಯ ನೆಪದಲ್ಲಿ ಬಹುತೇಕ ಪ್ರಕರಣಗಳು ಖುಲಾಸೆ ಯಾಗುತ್ತವೆ. ಇದರಿಂದ ಈ ಕೃತ್ಯದಲ್ಲಿ ಭಾಗವಹಿಸುವವರಿಗೆ ಹೆದರಿಕೆಯಿಲ್ಲವಾಗಿದೆ. ಈ ವಿಷಯದಲ್ಲಿ ಯಾವುದೇ ಒಂದು ಸರಕಾರ, ಪಕ್ಷದ ವಿರುದ್ಧ ಬೊಟ್ಟು ಮಾಡುವ ಬದಲು ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯತೆಯಿದೆ. ಯಾವ ಪಕ್ಷ ಅಧಿಕಾರದಲ್ಲಿರುವಾಗ ಪ್ರಶ್ನೆ ಪತ್ರಿಕೆ ಸೋರಿಕೆ ಯಾಯಿತು ಎನ್ನುವುದಕ್ಕಿಂತ, ಇದರಿಂದ ಇಡೀ ಸಮುದಾಯ ಮೇಲಾಗುವ ಪರಿಣಾಮದ ಬಗ್ಗೆ ಆಲೋಚಿಸಬೇಕಿದೆ. ಉದಾಹರಣೆಗೆ ಕಳೆದ ವಾರವಷ್ಟೇ ಯುಜಿಸಿ ನೆಟ್ ಪರೀಕ್ಷೆಯ ರದ್ದತಿಯಿಂದ ಎಂಟರಿಂದ ೧೦ ಲಕ್ಷ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಇನ್ನು ಈ ರೀತಿಯ ಅಕ್ರಮದಲ್ಲಿ ತೊಡಗಿರುವವರ ವಿರುದ್ಧ ಈವರೆಗೆ ಕಠಿಣ ಕಾನೂನು ಇಲ್ಲದಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ ವೆಂದರೆ ತಪ್ಪಾಗುವುದಿಲ್ಲ.

ಆದ್ದರಿಂದ ಪರೀಕ್ಷಾ ಅಕ್ರಮದಲ್ಲಿ ತೊಡಗುವವರು ಇನ್ನೊಮ್ಮೆ ಮೇಲೇಳಲು ಸಾಧ್ಯವಾಗದ ರೀತಿಯಲ್ಲಿ ಕ್ರಮವಹಿಸಬೇಕಿದೆ. ಈ ನಿಟ್ಟಿನಲ್ಲಿ
ಈಗಾಗಲೇ ಕೇಂದ್ರ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದರೆ ಈ ಕಾನೂನು ಸಮರ್ಪಕವಾಗಿ ಜಾರಿಯಾಗಬೇಕಿರುವುದು ಇಂದಿನ ಅನಿವಾರ್ಯ.

ಸಾಲು ಸಾಲು ಪರೀಕ್ಷಾ ಅಕ್ರಮದ ಬಳಿಕ ಕೇಂದ್ರ ಸರಕಾರ ಇದೀಗ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರಿಗೆ ಒಂದು ಕೋಟಿ ರು.ವರೆಗೆ ದಂಡ ಹಾಗೂ ೧೦ ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಮೇಲ್ನೋಟಕ್ಕೆ ಈ ರೀತಿಯ
ಕಠಿಣ ಕಾನೂನುಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮವನ್ನು ನಿಯಂತ್ರಿಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ರೀತಿಯ ಆರೋಪದ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ‘ತಾರ್ತಿಕ ಅಂತ್ಯ’ವನ್ನೇ ಕಾಣುವುದಿಲ್ಲ. ಆರಂಭದಲ್ಲಿ ಪರೀಕ್ಷಾ ಅಕ್ರಮಗಳ ಪ್ರಕರಣಗಳಲ್ಲಿರುವ
ಉತ್ಸಾಹ, ಕೆಲ ತಿಂಗಳ ಬಳಿಕ ಇರುವುದಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುವ ಸಮಯದಲ್ಲಿ, ಸೂಕ್ತ ‘ಸಾಕ್ಷ್ಯಧಾರ’ದ ಕೊರತೆಯಿಂದ ಬಹುತೇಕ ಪ್ರಕರಣಗಳು ಖುಲಾಸೆಯಾಗಿರುವುದನ್ನು ನೋಡಿದ್ದೇವೆ.

ಆದ್ದರಿಂದ ಆಡಳಿತದಲ್ಲಿರುವವರು, ಕಠಿಣ ಕಾನೂನು ಜಾರಿಗೊಳಿಸುವುದಷ್ಟೇ ಅಲ್ಲದೇ, ಅದನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕಿದೆ. ನ್ಯಾಯಾಂಗದಲ್ಲಿ ಪ್ರಕರಣ ಗಟ್ಟಿಯಾಗಿ ನಿಲ್ಲುವಂತೆ ಹಾಗೂ ಸಾಧ್ಯವಾದಷ್ಟು ಬೇಗ ಪ್ರಕರಣ ಇತ್ಯರ್ಥವಾಗುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ವರ್ಷಕ್ಕೊಮ್ಮೆ, ಎರಡು ವರ್ಷಕ್ಕೊಮ್ಮೆ ಪ್ರಶ್ನೆಪತ್ರಿಕೆ ಸೋರಿಕೆ ಎನ್ನುವ ಪ್ರಕರಣಗಳು ಬರುತ್ತವೆ… ಹೋಗುತ್ತವೆ. ಪ್ರಕರಣಗಳು ಬೆಳಕಿಗೆ ಬಂದರೆ, ‘ಕಠಿಣ ಕ್ರಮ’ದ ಎಚ್ಚರಿಕೆ. ಅದಾದ ಮೂರು ತಿಂಗಳ ಬಳಿಕ ಜನರು, ವಿದ್ಯಾರ್ಥಿಗಳು ಸರಕಾರ ಎಲ್ಲರೂ ಮರೆಯುತ್ತಾರೆ. ಜಾಮೀನಿನ ಮೇಲೆ ಹೊರ ಬರುವ ಆರೋಪಿಗಳು ಮತ್ತೊಂದು ಪರೀಕ್ಷೆಯಲ್ಲಿ ಮತ್ತೊಂದು ಅಕ್ರಮಕ್ಕೆ ಸದ್ದಿಲ್ಲದೇ ಸಜ್ಜಾಗುತ್ತಿರುತ್ತಾರೆ ಅಷ್ಟೇ!