Saturday, 26th October 2024

Dr SadhanaSree Column: ಕ್ರಮರಹಿತ ವ್ಯಾಯಾಮ ಮಾಡಿದರೆ ಬರುವನು ಆ ಯಮ!

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ನಾವು ವ್ಯಾಯಾಮ ಮಾಡುವುದೆಂದರೆ ಕೇವಲ ಯಾವುದೋ ಒಂದು ನಿರ್ದಿಷ್ಟ ಪ್ರಮಾಣದ ಗುರಿಯನ್ನು ಮುಟ್ಟುವುದಷ್ಟೇ ಅಂದುಕೊಂಡಿದ್ದೇವೆ. ಉದಾಹರಣೆಗೆ, ತಲೆಸುತ್ತಿ ಬಿದ್ದರೂ ಪರವಾಗಿಲ್ಲ ಆದರೆ ಒಂದು ಗಂಟೆಗಳ ಕಾಲ ಬಿಡದೆ ವಾಕಿಂಗ್ ಮಾಡುವುದು ಇತ್ಯಾದಿ ಇತ್ಯಾದಿ. ಇಲ್ಲಿ ನಮ್ಮ ಗಮನ ಕೇವಲ ನಿಗದಿಪಡಿಸಿದ ಗುರಿಯ ಮೇಲೆ ಇದೆಯೇ ಹೊರತು ಬೇರೆ ಎಲ್ಲ ವಿಷಯಗಳನ್ನು ನಾವು ನಿರ್ಲಕ್ಷಿಸುತ್ತಿದ್ದೇವೆ.’

ಆಯುರ್ವೇದದ ವೈದ್ಯಕೀಯ ಅಭ್ಯಾಸದಲ್ಲಿ ಇತ್ತೀಚೆಗೆ ಎದ್ದು ಕಾಣುತ್ತಿರುವ, ದಿನೇ ದಿನೇ ಹೆಚ್ಚಾಗುತ್ತಿರುವ ತೊಂದರೆಗಳೆಂದರೆ ಸ್ಥೌಲ್ಯಕ್ಕೆ ಸಂಬಂಧಿಸಿದ ರೋಗಗಳು. ಉದಾಹರಣೆಗೆ- ಮಧುಮೇಹ, ಗಲಗಂಡ, ಹೃದ್ರೋಗ, ಗರ್ಭಾಶಯಗ್ರಂಥಿ ಮುಂತಾದವುಗಳು. ಕೆಲವು ವರ್ಷಗಳ ಹಿಂದೆ ಹತ್ತರಲ್ಲಿ ಒಬ್ಬರು ಮಧುಮೇಹಿಗಳಾಗಿದ್ದರೆ,
ಇತ್ತೀಚೆಗೆ ಇಬ್ಬರಲ್ಲಿ ಒಬ್ಬರು ಮಧುಮೇಹಿಗಳಿದ್ದಾರೆ.

ಈ ರೀತಿ ದೇಹದಲ್ಲಿ ಬೊಜ್ಜು ಹೆಚ್ಚಾಗಿ ಬರುವ ಖಾಯಿಲೆಗಳು ಶುರುವಾಗಲು ಮುಖ್ಯ ಕಾರಣವೆಂದರೆ ‘ಸ್ವಪ್ನ ಸುಖಮ’- ಅಂದರೆ ನಾವು ಕುಳಿತು- ಮಲಗಿ ಕಳೆಯುತ್ತಿರುವ ಈ ಆಧುನಿಕ ಐಷಾರಾಮಿ ಜೀವನ. ವ್ಯಾಯಾಮವಿಲ್ಲದ ಶರೀರ-ಮನಸ್ಸುಗಳು ದಿನದಿಂದ ದಿನಕ್ಕೆ ಕಾಯಿಲೆಗಳ ಗೂಡಾಗುತ್ತಿದೆ. ಅಂತೆಯೇ, ಆರೋಗ್ಯ ಪಾಲನೆಯಲ್ಲಿ ವ್ಯಾಯಾಮದ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಅತಿಯಾಗಿ ದೇಹವನ್ನು ದಂಡಿಸುವವರ ಶರೀರದಲ್ಲೂ ಬೇರೆ
ರೀತಿಯ ಕಾಯಿಲೆಗಳನ್ನು ಕಾಣಬಹುದು. ‘ಅವ್ಯಾಯಾಮ’ದಂತೆ ‘ಅತಿವ್ಯಾಯಾಮ’ವು ಸಹ ನಮ್ಮ ಜೀವಕ್ಕೆ ಹಾನಿ ಕರ. ಆದ್ದರಿಂದ, ಇತಿ ಮಿತಿಯಲ್ಲಿ ಮಾಡುವ ವ್ಯಾಯಾಮದ ಬಗ್ಗೆ ಇಂದು ಚರ್ಚಿಸುವ ಅಗತ್ಯ ಅತಿಯಾಗಿದೆ. ಇಂದಿನ ಈ ಲೇಖನವು ವ್ಯಾಯಾಮದ ವಿವಿಧ ಆಯಾಮಗಳ ಚರ್ಚೆಗೆ ಸಮರ್ಪಿತ.

ಶಾಸದಲ್ಲಿದೆ, ‘ವ್ಯಾಧಯೋ ನೋಪಸರ್ಪಂತಿ ಸಿಂಹಂ ಕ್ಷುದ್ರಮೃಗಾ ಇವ’ ಅಂದರೆ- ಕ್ಷುದ್ರ ಮೃಗಗಳು ಸಿಂಹದ ಹತ್ತಿರ ಸುಳಿಯದಂತೆ ನಿತ್ಯ ವ್ಯಾಯಾಮ ಮಾಡುವವರ ಬಳಿ ಯಾವ ರೋಗವು ಬರಲಾರವು ಎಂದು. ಹಾಗಾಗಿ ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ವ್ಯಾಯಾಮವು ಸಿಂಹ ಪಾಲನ್ನೇ ತೆಗೆದುಕೊಳ್ಳುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ, ವ್ಯಾಯಾಮದ ಆಳ- ಅಗಲಗಳನ್ನು ತಿಳಿಯದೆ ಮಾಡುವ ವ್ಯಾಯಾಮದಿಂದ ಕಷ್ಟದಲ್ಲಿ ಸಿಲುಕಿದವರನ್ನು ನಾವು ಸರ್ವೇಸಾಮಾನ್ಯವಾಗಿ ಕ್ಲಿನಿಕ್ ನಲ್ಲಿ ಇಂದು ಕಾಣುತ್ತೇವೆ. ಹಾಗಾಗಿ ಮೊದಲಿಗೆ ‘ವ್ಯಾಯಾಮ’ ಎಂದರೆ ಏನು ಅನ್ನುವ ಬಗ್ಗೆ ಕೊಂಚ ಗಮನಹರಿಸೋಣ.

ಆಯುರ್ವೇದದಲ್ಲಿ ವ್ಯಾಯಾಮವೆಂದರೆ ‘ಶರೀರಾ ಯಸಜನನಂ ಕರ್ಮ ವ್ಯಾಯಾಮ ಉಚ್ಯತೆ’ ಅಂದರೆ
ಆಯಾಸವನ್ನುಂಟು ಮಾಡುವ ಶಿಸ್ತುಬದ್ಧವಾದ ಶಾರೀರಿಕ ಕ್ರಿಯೆಗಳೇ ವ್ಯಾಯಾಮ. ವಿಕೃತವಾದ ಅಂಗಗಳ
ಚಲನೆಯನ್ನು ವ್ಯಾಯಾಮ ಎಂದು ಕರೆಯಲು ಸಾಧ್ಯವಿಲ್ಲ. ಅಂಗೋಪಂಗಗಳನ್ನು ಅಭ್ಯಾಸ ಬಲದಿಂದ
ಬೇಕಾದ ರೀತಿಯಲ್ಲಿ ಬಗ್ಗಿಸಲು ಸಾಧ್ಯವಾದರೂ ಹಾಗೆ ಮಾಡಬಾರದು. ಅವುಗಳ ಸಹಜ ಕ್ರಿಯೆಗಳಿಗೆ
ವಿರುದ್ಧವಾಗದಂತೆ ಕಾರ್ಯೋನ್ಮುಖಗಳನ್ನಾಗಿಸಬೇಕು.

ತುಂಬಾ ಆಯಾಸವನ್ನುಂಟು ಮಾಡುವ ಅಥವಾ ಯಾವುದೋ ಒಂದು ಅಂಗದ ಕಾರ್ಯವನ್ನೇ ಹೆಚ್ಚಿಸುವಂತಹ ವ್ಯಾಯಾಮವು ಸೂಕ್ತವಾದ ವ್ಯಾಯಾಮವಲ್ಲ. ಒಟ್ಟಾರೆ, ದೇಹದ ಅಂಗೋಪಂಗಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಅವುಗಳನ್ನು ಶಿಸ್ತು ಬದ್ಧವಾಗಿ ಚಲಿಸುವುದೇ ವ್ಯಾಯಾಮ.

ವ್ಯಾಯಾಮದ ಭೇದಗಳು ಹೇಗಿವೆ: ನಿತ್ಯ ವ್ಯಾಯಾಮ, ನೈಮಿತ್ತಿಕ ವ್ಯಾಯಾಮ ಮತ್ತು ಕಾಮ್ಯ ವ್ಯಾಯಾಮ. ನಿತ್ಯ ವ್ಯಾಯಾಮವೆಂದರೆ-ತೈಲ ಅಭ್ಯಂಗದ ನಂತರ ಮಾಡುವ, ದಿನನಿತ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳು ವಂತಹ ವ್ಯಾಯಾಮ ಇದು. ನೈಮಿತ್ತಿಕ ವ್ಯಾಯಾಮಗಳೆಂದರೆ ವಿವಿಧ ರೋಗಗಳಿಂದ ಮುಕ್ತಿ ಪಡೆಯಲು ಮಾಡುವ ವ್ಯಾಯಾಮಗಳು. ಉದಾಹರಣೆಗೆ – ಮಧುಮೇಹಿಗಳಿಗೆ ವಾಕಿಂಗ್, ಸಂಧಿ ಶೂಲ ಇದ್ದವರಿಗೆ ಫಿಸಿಯೋಥೆರೆಪಿ ಇತ್ಯಾದಿ. ಕಾಮ್ಯ ವ್ಯಾಯಾಮವೆಂದರೆ ನಿರ್ದಿಷ್ಟ ಗುರಿ ಸಾಧನೆಗಾಗಿ ಮಾಡುವ ವ್ಯಾಯಾಮ.

ಉದಾಹರಣೆಗೆ

  • ದೇಹ ಸೌಂದರ್ಯಕ್ಕಾಗಿ/ ಸಿಕ್ಸ್ ಪ್ಯಾಕ್ಸ್ ಸಾಧನೆಗಾಗಿ‌ ಮಾಡುವ ವ್ಯಾಯಾಮ ಇರಬಹುದು ಅಥವಾ ಗರಡಿ ಮನೆಯಲ್ಲಿ ಬಲಿಷ್ಠ ಶರೀರ ಪ್ರಾಪ್ತಿಗಾಗಿ ಮಾಡುವ ವ್ಯಾಯಾಮವಿರಬಹುದು ಇತ್ಯಾದಿ.
  • ವ್ಯಾಯಾಮ ಯಾರಿಗೆ ಹಿತ?
  • ಆರೋಗ್ಯವಂತರಿಗೆ / ಬಲವಂತರಿಗೆ ವ್ಯಾಯಾಮ ಒಳ್ಳೆಯದು. ನಿತ್ಯವೂ ತಮ್ಮ ಆಹಾರದಲ್ಲಿ ಹಾಲು,
    ತುಪ್ಪ, ಬೆಣ್ಣೆ, ಮೊಸರು ಮುಂತಾದ ಹಾಲಿನ ಉತ್ಪನ್ನಗಳನ್ನು ಮತ್ತು ಜಿಡ್ಡಿನ ಪದಾರ್ಥಗಳನ್ನು ಸೇವಿಸುವವರಿಗೆ ಮಾತ್ರ ವ್ಯಾಯಾಮ ಹಿತಕರ.
  • ವ್ಯಾಯಾಮವನ್ನು ಯಾರು ಮಾಡಬಾರದು?
  • ಬಾಲಕರು-ಸುಮಾರು ೧೬ ವರ್ಷದೊಳಗಿನ ಮಕ್ಕಳು, ವೃದ್ಧರು-ಸುಮಾರು ೬೦ ವರ್ಷಗಳ ನಂತರದವರು,
    ಗರ್ಭಿಣಿಯರು, ಹೆಂಗಸಿನ ಮುಟ್ಟಿನ ಸಮಯದಲ್ಲಿ, ರಾತ್ರಿ ಜಾಗರಣೆ ಮಾಡುವವರು, ಶರೀರದಲ್ಲಿ
    ಅಜೀರ್ಣವಿzಗ, ಕ್ಷೀಣ ರೋಗಿಗಳು, ಧಾತು ಪರಿಪೋಷಣೆ ಸರಿಯಾಗಿಲ್ಲದವರು, ವಾತ-ಪಿತ್ತ ಪ್ರಕೃತಿಯವರು, ಬಿಸಿಲು ಕಾಲ/ ಬಿಸಿಲಿನ ಸಮಯದಲ್ಲಿ ಮತ್ತು ಜಿಡ್ಡಿನ ಪದಾರ್ಥವನ್ನು ಆಹಾರದಲ್ಲಿ ಸೇವಿಸದವರು ವ್ಯಾಯಾಮಕ್ಕೆ ನಿಷಿದ್ಧರು.
  • ಅಂತೆಯೇ, ಯಾವುದೇ ಘನವಾದ, ದ್ರವವಾದ (ಕಾಫಿ, ಟೀ, ನೀರು) ಆಹಾರವನ್ನು ಸೇವಿಸಿದ ನಂತರವೂ ಸಹ ವ್ಯಾಯಾಮವನ್ನು ಮಾಡಬಾರದು.
  • ವ್ಯಾಯಾಮವನ್ನು ಯಾವ ಕಾಲದಲ್ಲಿ ಮಾಡಬೇಕು?
    ಆಯುರ್ವೇದದ ಪ್ರಕಾರ ವ್ಯಾಯಾಮಕ್ಕೆ ಸೂಕ್ತವಾದ ಸಮಯವೆಂದರೆ ಬೆಳಗಿನ ಸಮಯ. ಬೆಳಿಗ್ಗೆ ಬ್ರಾಹ್ಮಿ
    ಮುಹೂರ್ತದಲ್ಲಿ ಎದ್ದು, ಮಲ ಮೂತ್ರಗಳನ್ನು ವಿಸರ್ಜಿಸಿ, ಬೆಚ್ಚಗಿನ ಎಣ್ಣೆಯನ್ನು ಮೃದುವಾಗಿ ಮೈಗೆ
    ಸವರಿಕೊಂಡು, ಖಾಲಿ ಹೊಟ್ಟೆಯಲ್ಲಿ ಮಾಡುವ ವ್ಯಾಯಾಮ ಅತ್ಯಂತ ಶ್ರೇಯಸ್ಕರ. ಕಾರಣ ಬೆಳಗ್ಗೆ
    ಶರೀರವು ಆಲಸ್ಯದಿಂದ ಕೂಡಿದ್ದು, ಸಂಧಿ ಮತ್ತು ಮಾಂಸಗಳು ಜಡವಾಗಿರುತ್ತದೆ. ಆದ್ದರಿಂದ ಮಿತವಾದ
    ವ್ಯಾಯಾಮವು ಈ ಜಡತೆಯನ್ನು ನಿವಾರಿಸಿ ಇಡೀ ದಿನ ಉತ್ಸಾಹದಿಂದ ಕಾರ್ಯವನ್ನು ನೆರವೇರಿಸಲು
    ಶರೀರ-ಮನಸ್ಸುಗಳಿಗೆ ಉತ್ಸಾಹವನ್ನು ತುಂಬುತ್ತದೆ.
  • ಅಂತೆಯೇ ಬೆಳಿಗ್ಗೆ ಕಫ ಪ್ರಧಾನವಾದ ಕಾಲ. ದೇಹ ದಲ್ಲಿನ ಈ ಹೆಚ್ಚಾದ ಕ-ವನ್ನು ಸಮತೋಲನಕ್ಕೆ ತಂದು
    ಹಸಿವೆಯನ್ನು ಹೆಚ್ಚಾಗಿಸಿ ಮೈ ಮನಸ್ಸುಗಳನ್ನು ಚುರುಕುಗೊಳಿಸಲು ಬೆಳಗ್ಗಿನ ವ್ಯಾಯಾಮ ಅತ್ಯವಶ್ಯಕ.
    ಆದರೆ, ಸಂಜೆ ಮಾಡುವ ವ್ಯಾಯಾಮವು ಆಯುರ್ವೇದದ ಪ್ರಕಾರ ನಿಷಿದ್ಧ. ಇದು ದೇಹದಲ್ಲಿ ವಾತವನ್ನು
    ಹೆಚ್ಚಿಸಿ, ನಿದ್ದೆಯನ್ನು ಕಡಿಮೆ ಮಾಡಿ, ಶರೀರದಲ್ಲಿ ಮುಪ್ಪಿನ ಲಕ್ಷಣಗಳನ್ನು ಬೇಗ ಪ್ರಾರಂಭ ಮಾಡುತ್ತದೆ.
    ಹಾಗಾಗಿ, ಯಾವಾಗಲೂ ನಿಮ್ಮ ದಿನಚರಿಯಯಲ್ಲಿ ವ್ಯಾಯಾಮವು ಪ್ರಾತಃಕಾಲದ ಇರಲಿ.
  • ಇನ್ನು ಋತುವಿಗನುಸಾರವಾಗಿ ಹೇಳಬೇಕಾದರೆ, ಚಳಿಗಾಲದಲ್ಲಿ ಮತ್ತು ನಂತರ ಬರುವ ವಸಂತ ಋತುವಿನಲ್ಲಿ ವ್ಯಾಯಾಮ ಆರೋಗ್ಯವಂತರಿಗೆ ಹಿತ. ಅಂದರೆ ಸುಮಾರು ಅಕ್ಟೋಬರ್ ತಿಂಗಳಿಂದ ಮಾರ್ಚ್ ತನಕದ ಸಮಯವು ವ್ಯಾಯಾಮಕ್ಕೆ ಸೂಕ್ತ. ಇನ್ನು, ಬೇಸಿಗೆ ಕಾಲದಲ್ಲಿ ಹಾಗೂ ಮಳೆಗಾಲದಲ್ಲಿ ವ್ಯಾಯಾಮವು ಸರ್ವರಿಗೂ ನಿಷಿದ್ಧ.
  • ವ್ಯಾಯಾಮದ ಮುನ್ನ ಪಾಲಿಸಬೇಕಾದ ನಿಯಮಗಳೇನು?
    ವ್ಯಾಯಾಮಶೀಲನಾದ ವ್ಯಕ್ತಿಯ ಆಹಾರವು ಜಡ್ಡಿನಿಂದ ಕೂಡಿರಬೇಕು. ಬೆಳಿಗ್ಗೆ ಎದ್ದಾಗ ಹಿಂದಿನ ದಿನ
    ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗಿ ಸುಖವಾಗಿ ಮಲ ಪ್ರವೃತ್ತಿಯಾಗಿರಬೇಕು. ವ್ಯಾಯಾಮವನ್ನು ಸಂಪೂರ್ಣವಾದ ಖಾಲಿ ಹೊಟ್ಟೆಯಲ್ಲಿ ಮಾಡತಕ್ಕದ್ದು. ಬೆಚ್ಚಗಿನ ಎಣ್ಣೆಯನ್ನು ಇಡೀ ಮೈಗೆ ಸವರಿಕೊಂಡ ನಂತರವೇ ವ್ಯಾಯಾಮ ಹಿತಕರ.
  • ವ್ಯಾಯಾಮದ ಪ್ರಮಾಣವೆಷ್ಟಿರಬೇಕು?
    ಆಯುರ್ವೇದ ಒತ್ತಿ ಒತ್ತಿ ಹೇಳುವ ವಿಷಯವಿದು. ಒಬ್ಬ ವ್ಯಕ್ತಿಯು ಸದಾ ತನ್ನ ‘ಅರ್ಧ ಶಕ್ತಿ’ಯಷ್ಟೇ
    ವ್ಯಾಯಾಮವನ್ನು ಮಾಡಬೇಕು. ಅರ್ಧ ಶಕ್ತಿ ಎಂದರೆ ಹಣೆ ಕಂಕಳು ಕೈ ಕಾಲು ತೊಡೆ ಸಂದುಗಳಲ್ಲಿ ಬೆವರು
    ಬರುವವರೆಗೆ ಅಥವಾ ಏದುಸಿರು ಬರುವವರೆಗೆ ವ್ಯಾಯಾಮ ಮಾಡುವುದು ಯಾವಾಗಲೂ ಸುಖಕರ
    ಮತ್ತು ಹಿತಕರ. ಮೊದಲು ಏದುಸಿರು ಬರಲು ಪ್ರಾರಂಭವಾಗುತ್ತದೆ. ಇಲ್ಲಿಗೆ ನಿಲ್ಲಿಸಿದರೆ ಇದು ಮೃದು
    ವ್ಯಾಯಾಮ ಎನಿಸುತ್ತದೆ. ಇದನ್ನು ಬೇಸಿಗೆಕಾಲದಲ್ಲಿ/ ಮಳೆಗಾಲದಲ್ಲಿ/ ದೇಹದ ಬಲ ಕಡಿಮೆ ಇರುವ
    ಕಾಲದಲ್ಲಿ ಅಗತ್ಯವಿದ್ದರೆ ಮಾಡಬಹುದು. ಹಣೆ ಕಂಕಳುಗಳಲ್ಲಿ ಬೆವರುವುದು ಇದು ದೇಹದ ಅರ್ಧ
    ಶಕ್ತಿಯ ಅಳತೆ.

  • ಆದರೆ ನಾವು ನಮ್ಮ ಅರ್ಧ ಶಕ್ತಿಯನ್ನು ಗಮನಿಸದೆ, ಮೇಲೆ ಹೇಳಿದ ಲಕ್ಷಣಗಳನ್ನು ಮೀರಿ, ನಮ್ಮ ದೇಹದ
    ಶಕ್ತಿ ಅಗತ್ಯಕ್ಕಿಂತಲೂ ಹೆಚ್ಚಾದ ವ್ಯಾಯಾಮವನ್ನು ಮಾಡಿದರೆ, ದೇಹದಲ್ಲಿ ಶಕ್ತಿ ಉತ್ಪತ್ತಿಯಾಗುವ ಬದಲು
    ವ್ಯಯವಾಗಿ ವಾತ -ಪಿತ್ತ -ರಕ್ತಗಳ ವಿಕೃತಿ ಉಂಟಾಗಿ ದೇಹದಲ್ಲಿ ವಿವಿಧ ರೀತಿಯ ತೊಂದರೆಗಳು ಉಂಟಾಗು ತ್ತದೆ. ಅತಿಯಾಗಿ ಆಯಾಸ ಪಡುವುದರಿಂದ ಆಗುವ ದುಷ್ಪರಿಣಾಮಗಳೆಂದರೆ ಅತಿಯಾಗಿ ಬಾಯಾರಿಕೆ ಯಾಗುವ ತೃಷ್ಣಾ ಎಂಬ ರೋಗ, ದಮ್ಮುರೋಗ, ಪದೇ ಪದೇ ಕಾಡುವ ಮೇಲೆ ಮೇಲೆ ಬರುವ ಒಣ
    ಕೆಮ್ಮು ಮತ್ತು ರಾತ್ರಿಕೆಮ್ಮು, ಜ್ವರ, ಅತಿಯಾದ ಮೈಕೈ ಸೆಳೆತ, ಮಾಂಸ ಖಂಡಗಳ ನೋವು, ಸಂಧಿನೋವು,
    ಸಂಧಿಗಳ ಒಣಗುವಿಕೆ, ಮೂಳೆಗಳ ಸವಕಳಿ, ರಕ್ತಪಿತ್ತವೆಂಬ ವಿವಿಧ ಪ್ರದೇಶಗಳಿಂದ ರಕ್ತ ಒಸರುವ ವ್ಯಾಧಿ, ಕೆಲಸ ಮಾಡದಿದ್ದರೂ ದೇಹದಲ್ಲಿ ಆಯಾಸ ಮತ್ತು ನಿರುತ್ಸಾಹ, ನಿದ್ರೆ ಕ್ಷಯವಾಗುವುದು, ತಲೆ ಸುತ್ತು, ಮೂರ್ಚೆ ಹೋಗುವುದು, ಕರುಳಿನಲ್ಲಿ ಗಡ್ಡೆ, ಯಕೃತ್ಲಿಹಾಗಳ ಬಾವು, ಗರ್ಭಾಶಯದ ತೊಂದರೆ, ಮುಟ್ಟಿನ ತೊಂದರೆ ಇತ್ಯಾದಿ.

  • ವ್ಯಾಯಾಮ ಮಾಡಿದ ನಂತರದ ನಿಯಮಗಳೇನು?
    ಇಡೀ ದೇಹವನ್ನು ಸುಖವಾಗಿ ತಿಕ್ಕುವುದು/ ಮರ್ದನ ಮಾಡುವುದು. ವ್ಯಾಯಾಮ ಮಾಡಿದ ನಂತರ ತಕ್ಷಣ
    ನೀರು/ ಜ್ಯೂಸ್ ಇತ್ಯಾದಿ ದ್ರವಗಳ ಸೇವನೆ ಅಥವಾ ಆಹಾರ ಸೇವನೆ ಮಾಡಬಾರದು. ವ್ಯಾಯಾಮ
    ಮಾಡಿ, ಮೈ ಬೆವರಿ, ಬಿಸಿಯಾದ ತಕ್ಷಣವೇ ಫ್ಯಾನ್ ಎದುರು ನಿಲ್ಲುವುದು/ ತಣ್ಣೀರಲ್ಲಿ ಸ್ನಾನ ಮಾಡುವುದು ಹಾನಿಕರ. ಉಸಿರಾಟವು ಸಹಜ ಸ್ಥಿತಿಗೆ ಬಂದ ನಂತರ, ದೇಹದ ತಾಪವು ಮೊದಲಿನಂತೆ ಆದಾಗ, ತ್ವಚೆಗೆ
    ಹಿತಕರವಾದ ಹಿಟ್ಟುಗಳಿಂದ ಅಥವಾ ಕಡಿಮೆ ಕ್ಷಾರವುಳ್ಳ ಸೋಪುಗಳಿಂದ ಮೃದುವಾಗಿ ಉಜ್ಜಿ ಸ್ನಾನ
    ಮಾಡಬೇಕು.
  • ವ್ಯಾಯಾಮವಾದ ನಂತರ ಯಾವ ರೀತಿಯ ಆಹಾರವನ್ನು ಸೇವಿಸಬೇಕು?
    ಆಯುರ್ವೇದ ಹೇಳುವ ಪ್ರಕಾರ ನಮ್ಮ ಆಹಾರವು ಉಷ್ಣ, ಸ್ನಿಗ್ಧ ಮತ್ತು ಶರೀರವನ್ನು ಪೋಷಿಸುವಂತಹ
    ಒಳ್ಳೆಯ ಜಿಡ್ಡಿನಿಂದ ಕೂಡಿರಬೇಕು. ಉದಾಹರಣೆಗೆ – ಹಾಲು ಮತ್ತು ತುಪ್ಪದಿಂದ ಮಾಡಿದ ಪಾಯಸವನ್ನು
    ಸೇವಿಸಬಹುದು. ಆಹಾರದಲ್ಲಿ ಅಕ್ಕಿ, ಗೋಧಿ, ಹೆಸರು ಬೇಳೆ, ರಾಗಿ, ದ್ರಾಕ್ಷಿ ಮತ್ತು ಬಾದಾಮಿಯಂತಹ ಒಳ್ಳೆ
    ಯ ಹಿತಕರ ದ್ರವ್ಯಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳಬೇಕು. ಮಾಂಸ ರಸಗಳನ್ನು ಹೇರಳವಾಗಿ ಬಳಸಬಹುದು. ಆದರೆ ನಿತ್ಯ ವ್ಯಾಯಾಮ ಮಾಡುವವರು ಹೆಚ್ಚಾದ ಉಪ್ಪು-ಖಾರ-ಹುಳಿ-ಮಸಾಲೆಗಳಿಂದ ಕೂಡಿದ ಆಹಾ
    ರವನ್ನು, ಒಣಗಿದ ಆಹಾರವನ್ನು, ಬಹಳ ಉಷ್ಣವಾದ ಆಹಾರವನ್ನು ವರ್ಜಿಸಬೇಕು. ಅತಿ ಯಾದ ಹಸಿ
    ತರಕಾರಿಗಳಿಂದ ಮಾಡಿದ ಆಹಾರವನ್ನು, ವೆಜಿಟೆಬಲ್ ಜ್ಯೂಸ್, ಸ್ಪ್ರೌಟ್ಸ್‌ಗಳನ್ನು ಸೇವಿಸುವು ದರಿಂದ
    ಆರೋಗ್ಯದಲ್ಲಿ ಏರುಪೇರು ಉಂಟಾಗುವುದು ಖಚಿತ.
  • ಹಿತ-ಮಿತವಾದ ನಿತ್ಯ ವ್ಯಾಯಾಮದ ಪ್ರಯೋಜನಗಳೇನು?
    ಶರೀರದ ಬೆಳವಣಿಗೆ- ತಿಂದ ಆಹಾರವನ್ನು ಚೆನ್ನಾಗಿ ವ್ಯಾಯಾಮ ಮಾಡಿ ಅರಗಿಸಿಕೊಂಡಾಗ
    ಮಾತ್ರ ಸರಿಯಾದ ರೂಪದಲ್ಲಿ ಶರೀರ ವೃದ್ಧಿ ಸಾಧ್ಯ. ಕಾಂತಿಯುಕ್ತ ಶರೀರ- ವ್ಯಾಯಾಮದ ಮೂಲಕ
    ಶರೀರದಲ್ಲಿ ಸಂಚಿತವಾದ ಮಲಗಳು ಹೊರ ಹೋಗುವುದರಿಂದ ದೇಹವು ಕಾಂತಿಯುಕ್ತವಾಗುತ್ತದೆ.
  • ಸುಪುಷ್ಟ ಶರೀರ- ವ್ಯಾಯಾಮದಿಂದ ಮಾಂಸ ಖಂಡಗಳಲ್ಲಿ ವಿಭಜನೆಯಾಗಿ ಶರೀರದ ದಾರ್ಢ್ಯತೆ ಉಂಟಾಗುತ್ತದೆ.
  • ಒಳ್ಳೆಯ ಹಸಿವು- ದೇಹದ ಶಕ್ತಿ ಖರ್ಚಾಗುವ ಕಾರಣ ಧಾತುಗಳಲ್ಲಿ ಬೇಡಿಕೆ ಹೆಚ್ಚುತ್ತದೆ, ಇದರಿಂದ ಚೆನ್ನಾಗಿ ಹಸಿವೆಯಾಗುತ್ತದೆ. ಚುರುಕುತನ- ವ್ಯಾಯಾಮದಿಂದ ಶರೀರ ಮತ್ತು ಮನಸ್ಸಿನ ಜಾಡ್ಯ ದೂರವಾಗಿ ಆಲಸ್ಯ ನೀಗುತ್ತದೆ. ಸ್ಥಿರತೆ- ಆರೋಗ್ಯದಲ್ಲಿ ಏರುಪೇರು ನಿವಾರಣೆಯಾಗಿ ಸ್ಥಿರತೆ ಉಂಟಾಗುತ್ತದೆ. ಹಗುರತೆ- ಶರೀರವು ಹಗುರವಾಗಿ ವಿವಿಧ ಚಟುವಟಿಕೆಗಳು ಸುಲಭವಾಗಿ ನೆರವೇರುತ್ತದೆ. ಶರೀರ ಶುದ್ಧಿ- ರಕ್ತ, ಮಾಂಸ, ಮೇದಸ್ಸು ಮತ್ತು ಸಂಧಿಗಳಲ್ಲಿ ಸಂಚಿತವಾಗಬಹುದಾದ ಮಲಗಳು ಪ್ರತಿನಿತ್ಯ ಪಚನವಾಗಿ ದೇಹವು ಶುದ್ಧಿಯಾಗುತ್ತದೆ.
    ಸಹಿಷ್ಣುತೆ- ನಿತ್ಯ ವ್ಯಾಯಾಮ ಮಾಡುವವನು ವಾತಾವರಣದ ಏರುಪೇರುಗಳನ್ನು ಸುಲಭವಾಗಿ ತಾಳುವ ಮತ್ತು ಚಳಿ, ಮಳೆ, ಬಿಸಿಲು, ಹಸಿವೆ, ನೀರಡಿಕೆಗಳನ್ನು ತಾಳಕೊಳ್ಳಬಲ್ಲ ಶಕ್ತಿ ಉಂಟಾಗುತ್ತದೆ.

ಈ ಪ್ರಯೋಜನಗಳು ‘ಹಿತಮಿತ’ ವ್ಯಾಯಾಮದೊಂದಿಗೆ ಮಾತ್ರ ಉಚಿತವಾಗಿ ಲಭ್ಯ ‘ಕಂಡಿಷನ್ ಅಪ್ಲೈ ಸ್ನೇಹಿತರೆ, ಇಂದು ನಾವು ವ್ಯಾಯಾಮ ಮಾಡು‌ವುದೆಂದರೆ ಕೇವಲ ಯಾವುದೋ ಒಂದು ನಿರ್ದಿಷ್ಟ ಪ್ರಮಾಣದ ಗುರಿಯನ್ನು ಮುಟ್ಟುವುದಷ್ಟೇ ಅಂದುಕೊಂಡಿದ್ದೇವೆ. ಉದಾಹರಣೆಗೆ, ಶತಾಯ ಗತಾಯ ದಿನವೂ ೧೦,೦೦೦ ಹೆಜ್ಜೆಗಳನ್ನ ಪೂರೈಸು ವುದು, ಆಗುತ್ತೋ ಇಲ್ಲವೋ ೪೫ ನಿಮಿಷಗಳ ಕಾಲ ವೇಟ್ ಲಿಫ್ಟಿಂಗ್ ಮಾಡುವುದು, ತಲೆಸುತ್ತಿ ಬಿದ್ದರೂ
ಪರವಾಗಿಲ್ಲ ಆದರೆ ಒಂದು ಗಂಟೆಗಳ ಕಾಲ ಬಿಡದೆ ವಾಕಿಂಗ್ ಮಾಡುವುದು ಇತ್ಯಾದಿ ಇತ್ಯಾದಿ.

ಇಲ್ಲಿ ನಮ್ಮ ಗಮನ ಕೇವಲ ನಿಗದಿಪಡಿಸಿದ ಗುರಿಯ ಮೇಲೆ ಇದೆಯೇ ಹೊರತು ಬೇರೆ ಎಲ್ಲ ವಿಷಯಗಳನ್ನು ನಾವು
ನಿರ್ಲಕ್ಷಿಸುತ್ತಿದ್ದೇವೆ. ಬೇರೆ ಯಾರೋ ತಮ್ಮ ಶರೀರಕ್ಕನುಗುಣವಾಗಿ ನಿಗದಿಪಡಿಸಿದ ಈ ಅಂಕಿಗಳನ್ನು ನಾವು ನಮ್ಮ ಶರೀರದ ಸಾಮರ್ಥ್ಯವನ್ನು ಗಮನಿಸದೆ ಸಾಧಿಸಲು ಹೋದಾಗ ಸ್ವಾಸ್ಥ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಬದಲಿಗೆ, ವ್ಯಾಯಾಮ ಮಾಡುವಾಗ ನಮ್ಮ ವಯಸ್ಸು, ಶಾರೀರಿಕ ಬಲ, ಶರೀರದ ಸ್ವಭಾವ, ನಾವು ವಾಸಿಸುವ ಸ್ಥಳ, ಸದ್ಯದ ಋತುಕಾಲ, ನಮ್ಮ ಆಹಾರ ಅಭ್ಯಾಸ, ನಮ್ಮ ಆರೋಗ್ಯದ ಸ್ಥಿತಿಗಳನ್ನು ಗಮನಿಸಿ ಸೂಕ್ತವಾದ ವ್ಯಾಯಾಮವನ್ನು
ಸಂಯೋಜಿಸಿಕೊಂಡಾಗ ವ್ಯಾಯಾಮವು ನಮ್ಮನ್ನು ನೂರು ಕಾಲ ಕಾಪಾಡುತ್ತದೆ. ಅವ್ಯಾಯಾಮವು ದೇಹಕ್ಕೆ ತೊಂದರೆ ಮಾಡುವಂತೆ ಅತಿ ವ್ಯಾಯಾಮವು ಸ್ವಾಸ್ಥ್ಯಕ್ಕೆ ಮಾರಕ. ಈ ಎಚ್ಚರದ ಮಾತು ನಿಮಗೆ ಸದಾ ನೆನಪಿರಲಿ –

ಅಯಥಾಬಲಮಾರಂಭಃ ಪ್ರಾಣೋಪರೋಧಿ ನಾಮ್ ಐಐ ನಮ್ಮ ಶಕ್ತಿಗಿಂತ ಹೆಚ್ಚು ವ್ಯಾಯಾಮ ಮಾಡುವುದು, ಪ್ರಾಣವನ್ನು ನಾಶ ಮಾಡುವ ವಿಷಯಗಳಲ್ಲಿ ಮೊದಲನೆಯದು!

ಇದನ್ನೂ ಓದಿ: Dr SadhanaShree Column: ಶರತ್‌ ಋತುವಿನ ವಿಹಾರದ ಷರತ್ತುಗಳು!