Sunday, 15th December 2024

ನಿರೀಕ್ಷೆಯ ಭಾರ ಹೋರುವುದೇ ಈಗಿನ ಸವಾಲು

ಅಶ್ವತ್ಥಕಟ್ಟೆ

ranjith.hoskere@gmail.com

ಕಾಂಗ್ರೆಸ್ ಸರಕಾರಕ್ಕೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ೧೫ಸಾವಿರ ಪದವೀಧರ ಶಿಕ್ಷಕರ ನೇಮಕ, ಹಲವು ನಿಗಮ
ಮಂಡಳಿಗಳಿಗೆ ಹೆಚ್ಚಿನ ಅನುದಾನದ ಒತ್ತಡ ಹಾಗೂ ಸ್ವಪಕ್ಷೀಯ ಶಾಸಕರು ತಮ್ಮ ಕ್ಷೇತ್ರಗಳಿಗೆ ವಿಶೇಷ ಅನುದಾನಕ್ಕೆ ಬೇಡಿಕೆಯಿಡುತ್ತಿದ್ದಾರೆ.

ಕರ್ನಾಟಕದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದು ೪೫ ದಿನ ಕಳೆಯುವ ಮೊದಲೇ, ಸಿದ್ದರಾಮಯ್ಯ ಅವರು ತಮ್ಮ ೧೪ನೇ ಬಜೆಟ್‌ಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಒಂದೆಡೆ ಚುನಾವಣಾ ಪ್ರಣಾಳಿಕೆಗೂ ಮೊದಲೇ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಜಾರಿ, ಪ್ರಣಾಳಿಕೆ ಯಲ್ಲಿರುವ ಯೋಜನೆಗಳ ಜಾರಿ ಹಾಗೂ ಕಾಂಗ್ರೆಸ್‌ನ ಮೇಲೆ ಜನರಲ್ಲಿರುವ ನಿರೀಕ್ಷೆಯೇ ಸರಕಾರಕ್ಕೀಗ ‘ಬಹುದೊಡ್ಡ ಭಾರ’ವಾಗಿದೆ ಎನ್ನುವುದು ಸುಳ್ಳಲ್ಲ. ನುಮಾನವೇ ಇಲ್ಲ; ಚುನಾವಣೆಯ ಮೊದಲು ರಾಜ್ಯದ ಮತದಾರರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಹೀಗಾಗಿ ಇದೀಗ ಈ ಎಲ್ಲ ಗ್ಯಾರಂಟಿಗಳನ್ನು ಮೊದಲ ವರ್ಷವೇ ಜಾರಿಗೊಳಿಸಬೇಕಾಗಿರುವುದು ಬಹುದೊಡ್ಡ ಸವಾಲಾಗಿದೆ.

ರಾಜ್ಯ ಪಾಲರು ತಮ್ಮ ಜಂಟಿ ಅಧಿವೇಶನದ ಭಾಷಣದಲ್ಲಿ ೩೪ ವರ್ಷಗಳಲ್ಲಿ ಯಾರಿಗೂ ಸಿಗದ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಈ ಸರಕಾರ ಏರಿದೆ ಎಂದು ಹೇಳಿದ್ದಾರೆ. ಈ ಪ್ರಮಾಣದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು, ಪ್ರಮುಖ ಕಾರಣವಾಗಿದ್ದು ಪಂಚ ಗ್ಯಾರಂಟಿ ಯೋಜನೆ ಹಾಗೂ ಈ ಘೋಷಣೆ ಹೊರತುಪಡಿಸಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಯಲ್ಲಿನ ಅಂಶಗಳು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇದರ ಜತೆಗೇ ಬಿಜೆಪಿ ವಿರುದ್ಧವಿದ್ದ ಆಡಳಿತ ವಿರೋಧಿ ಅಲೆ, ೪೦ ಪರ್ಸೆಂಟ್ ಕಮಿಷನ್ ಸೇರಿದಂತೆ ಸಾಲು ಸಾಲು ಭ್ರಷ್ಟಚಾರದ ಆರೋಪಗಳು ಸಹಾಯಕವಾಗಿ ನಿಂತವು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಆದರೆ, ಈ ಪ್ರಮಾಣದಲ್ಲಿ ಕಾಂಗ್ರೆಸ್ ಪರ ‘ಅಲೆ’ ಏಳುವುದಕ್ಕೆ ಸಹಕಾರಿಯಾಗಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇನ್ನುಳಿದಂತೆ ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚು ಐದು ಕೆ.ಜಿ ಅಕ್ಕಿ ಒದಗಿಸುವಲ್ಲಿ ಒಂದು ರೀತಿಯಲ್ಲಿ ಯಶಸ್ವಿಯಾಗುತ್ತಿದೆ. ಇನ್ನುಳಿದಿರುವ ಗೃಹಲಕ್ಷ್ಮೀ ಹಾಗೂ ಯುವನಿಧಿ ನಾನಾ ಹಂತಗಳಲ್ಲಿ ಜಾರಿಗೊಳ್ಳಲಿದೆ. ಆದರೆ ಇದರ ಹೊರತಾಗಿ  ಪ್ರಣಾಳಿಕೆಯಲ್ಲಿ ನೀಡಿದ್ದ ಇತರೆ ಭರವಸೆಗಳನ್ನು ಈಡೇರಿಸಲೇಬೇಕಾದ ಅನಿವಾರ್ಯ ಕಾಂಗ್ರೆಸ್ ಮುಂದಿದೆ.

ಹಾಗೇ ನೋಡಿದರೆ ಪಂಚ ಗ್ಯಾರಂಟಿಗಳಿಗಾಗಿಯೇ ಈ ಬಾರಿಯ ಬಜೆಟ್‌ನಲ್ಲಿ ಬಹುತೇಕ ಅನುದಾನವನ್ನು ಮೀಸಲಿಡಬೇಕಾಗಿದೆ. ಕೊಟ್ಟಿರುವ ಐದು ಗ್ಯಾರಂಟಿಯಲ್ಲಿ ಒಂದು ಗ್ಯಾರಂಟಿ ಅನುಷ್ಠಾನಕ್ಕೆ ಬಾರದಿದ್ದರೂ, ಅದರ ನೇರ ಹೊಡೆತ ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆ, ಬಿಬಿಎಂಪಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ ಎನ್ನುವುದು ಕಾಂಗ್ರೆಸಿಗರಿಗೂ ಗೊತ್ತಿರುವ ‘ಓಪನ್ ಸಿಕ್ರೇಟ್’. ಹಾಗೆಂದು ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವುದು ಸುಲಭದ ವಿಷಯವಲ್ಲ ಎನ್ನುವುದನ್ನು ಈಗಾಗಲೇ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಈ ಆರ್ಥಿಕ ವರ್ಷಕ್ಕೆ ಕನಿಷ್ಠ ೩೦ರಿಂದ ೩೫ ಕೋಟಿ ರು.ಗಳ ಅಗತ್ಯವಿದೆ ಎನ್ನುವುದು ಆರ್ಥಿಕ ಇಲಾಖೆಯ ಅಭಿಪ್ರಾಯ.

ಆದ್ದರಿಂದ ಬಜೆಟ್‌ನ ಮೊತ್ತವನ್ನು೩.೨೦ ಲಕ್ಷ ಕೋಟಿ ರು.ಗೆ ಏರಿಸಿದರೂ, ಬಜೆಟ್ ನ ಶೇ.೧೦ರಷ್ಟು ಮೊತ್ತ ಈ ಪಂಚ ಗ್ಯಾರಂಟಿಗಳಿಗೇ
ಬೇಕಾಗುತ್ತದೆ. ಇನ್ನುಳಿದಂತೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿರುವ ಬಜೆಟ್ ನಲ್ಲಿಯೇ ಶೇ.೬೫ಕ್ಕೂ ಹೆಚ್ಚಿನಷ್ಟು ಅನುದಾನ, ‘ಬದ್ಧತಾ ವೆಚ್ಚಕ್ಕೆಂದು’ ಮೀಸಲಿಡಬೇಕಾಗದ ಅನಿವಾರ್ಯದಲ್ಲಿ ರಾಜ್ಯ ಸರಕಾರವಿತ್ತು. ಇದೀಗ ಈ ಎರಡನ್ನು ಸೇರಿಸಿದರೆ
ಬಜೆಟ್‌ನ ಶೇ.೭೫ರಷ್ಟು ಅನುದಾನ ಖಾಲಿಯಾಗುತ್ತದೆ.

ಇನ್ನಿರುವ ಶೇ.೨೫ರಷ್ಟರಲ್ಲಿ ೨೦೧೩-೧೮ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಪುನಾರಂಭ ಮಾಡುವ ಲೆಕ್ಕಾಚಾರದಲ್ಲಿ ಸರಕಾರವಿದೆ. ಒಂದು ವೇಳೆ ಅದಾದರೆ ಶೇ.೧೫ರಷ್ಟು ಅನುದಾನದಲ್ಲಿಯೇ ಇನ್ನುಳಿದ ಎಲ್ಲ ಸರ್ಕಸ್ ಮಾಡಬೇಕಾಗುತ್ತದೆ ಎನ್ನುವುದು ಆರ್ಥಿಕ ತಜ್ಞರ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಮಾತಾಗಿದೆ. ಹೀಗಿರುವಾಗಲೇ ಈ ಬಾರಿ ಮಳೆ ಕೊರತೆಯ ಆತಂಕ ಅದಾಗಲೇ ಶುರುವಾಗಿದೆ. ಒಂದು ವೇಳೆ ಈಗಿರುವಂತೆ ಮಳೆ ಕೊರತೆ ಮುಂದುವರಿದು ಜಲಕ್ಷಾಮ ಸೃಷ್ಟಿಯಾದರೆ
ಅದಕ್ಕಾಗಿಯೇ ಕೋಟ್ಯಂತರ ರುಪಾಯಿಯನ್ನು ಮೀಸಲಿಡಬೇಕಾದ ತುರ್ತು ಸಹ ಎದುರಾಗಲಿದೆ.

ಒಂದು ವೇಳೆ ಹೆಚ್ಚು ಮಳೆಯಾಗಿ ಪ್ರವಾಹ ಬಂದರೂ, ಅದರ ನಿರ್ವಹಣೆಗೂ ಮೀಸಲು ಎತ್ತಿಡಬೇಕಾಗುತ್ತದೆ. ಈ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ಆರ್ಥಿಕ ನಿರ್ವಹಣೆಯಲ್ಲಿರುವ ಅನುಭವದಲ್ಲಿ ಈ ಎಲ್ಲ ಸವಾಲುಗಳನ್ನು ಮೀರಿ ನಿಲ್ಲುವುದಕ್ಕೆ
ಮಾರ್ಗೋಪಾಯವನ್ನೂ ಕಂಡುಕೊಳ್ಳಬಹುದು. ಆದರೆ ಆ ಎಲ್ಲವಕ್ಕೂ ಬೇಕಿರುವ ಅನುದಾನವನ್ನು ಎಲ್ಲಿಂದ ಹೊಂದಿಸುತ್ತಾರೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ. ಈ ನಡುವೆ ಮೊದಲೇ ಹೇಳಿದಂತೆ ಬಿಜೆಪಿ ಅವಧಿಯಲ್ಲಿ ಆಗದ ಅಭಿವೃದ್ಧಿಯಿಂದಲೇ ರಾಜ್ಯದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಆಡಳಿತ ವಿರೋಧ ಅಲೆ ಸೃಷ್ಟಿಯಾಗಿ, ಜನ ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ. ಆದ್ದರಿಂದ ಸಹಜವಾಗಿಯೇ ಕಾಂಗ್ರೆಸ್ ಅವಧಿಯಲ್ಲಿ ನಾನಾ ಯೋಜನೆಗಳ ಚಾಲನೆ ಹಾಗೂ ಚಾಲ್ತಿಯಲ್ಲಿರುವ ಯೋಜನೆಗಳಿಗೆ ‘ವೇಗ’ವನ್ನು ಸರಕಾರ ಕೊಡುತ್ತದೆ ಎನ್ನುವ ವಿಶ್ವಾಸದಲ್ಲಿ ಜನರಿದ್ದಾರೆ.

ರಸ್ತೆ, ನೀರಾವರಿ, ವಸತಿ, ಮೂಲಸೌಕರ್ಯ ಸೇರಿದಂತೆ ಹಲವು ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಆಗದ ಕೆಲಸವನ್ನು ಈ ಮಾಡಿ
ಮುಗಿಸಬೇಕು ಎನ್ನುವ ವಿಶ್ವಾಸದಲ್ಲಿ ಹಲವರಿದ್ದಾರೆ. ಆದರೆ ಈಗಿರುವ ಬಜೆಟ್‌ನ ‘ಅಂಕಿ-ಅಂಶ’ವನ್ನು ಗಮನಿಸಿದರೆ, ಜನರ ನಿರೀಕ್ಷಿತ ಮಟ್ಟದಲ್ಲಿ ಬಜೆಟ್‌ನಲ್ಲಿ ಅನುದಾನ ಹೊಂದಾಣಿಕೆ ಮಾಡಲು ಸಾಧ್ಯವಾಗದೇ ಇರಬಹುದು. ಬಾಕಿಯಿರುವ ಶೇ.೧೫ರಷ್ಟು ಅನುದಾನದಲ್ಲಿ ಭರವಸೆ
ಕೊಟ್ಟಿರುವಂತೆ ನೀರಾವರಿಗೆ ೩೦ ಸಾವಿರ ಕೋಟಿ ನೀಡಬೇಕಿದೆ. ಒಂದು ವೇಳೆ ಈ ಪ್ರಮಾಣದ ಮೊತ್ತವನ್ನು ನೀಡಿದರೆ, ಸರಕಾರದ ಬಳಿ ಶೇಕಡ ಆರೇಳರಷ್ಟು ಮಾತ್ರ ಉಳಿಯಲಿದೆ. ಅದರಲ್ಲಿ ಮುಂದಿನ ಆರೇಳು ತಿಂಗಳು ರಾಜ್ಯವನ್ನು ನಡೆಸುವುದು ಬಹುದೊಡ್ಡ ತಲೆನೋವಾಗುವು ದರಲ್ಲಿ ಅನುಮಾನವಿಲ್ಲ.

ಈ ಎಲ್ಲ ಸವಾಲುಗಳ ನಡುವೆ ಕಾಂಗ್ರೆಸ್ ಸರಕಾರಕ್ಕೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ೧೫ಸಾವಿರ ಪದವೀಧರ ಶಿಕ್ಷಕರ ನೇಮಕ, ಹಲವು ನಿಗಮ ಮಂಡಳಿಗಳಿಗೆ ಹೆಚ್ಚಿನ ಅನುದಾನದ ಒತ್ತಡ ಹಾಗೂ ಸ್ವಪಕ್ಷೀಯ ಶಾಸಕರು ತಮ್ಮ ಕ್ಷೇತ್ರಗಳಿಗೆ ವಿಶೇಷ ಅನುದಾನಕ್ಕೆ ಬೇಡಿಕೆಯಿಡುತ್ತಿದ್ದಾರೆ. ಶಾಸಕರನ್ನು ಸಮಾಧಾನಪಡಿಸಬಹುದಾದರೂ, ಶಿಕ್ಷಕರ ನೇಮಕ, ವೇತನ ಹೆಚ್ಚಳ ಮಾಡದಿದ್ದರೆ ಪ್ರತಿಭಟನೆಯ ಸ್ವರೂಪ ಪಡೆಯುವ ಅಪಾಯವಿದೆ. ಇದರೊಂದಿಗೆ ಈ ಹಿಂದಿನ ಸರಕಾರ ಈಗಾಗಲೇ ಮಧ್ಯಂತರ ವರದಿ ಆಧರಿಸಿ ಏಳನೇ ವೇತನ
ಆಯೋಗದ ಅನ್ವಯ ಸರಕಾರಿ ನೌಕರರ ವೇತನ ಹಾಗೂ ಪಿಂಚಣಿ ಏರಿಸಲು ತೀರ್ಮಾನಿಸಿದೆ. ಹೀಗಿರುವಾಗ, ಮಧ್ಯಂತರ ವರದಿಯಲ್ಲಿ ಹೆಚ್ಚಿಸಿರುವ ಶೇ.೧೭ಕ್ಕಿಂತ ಹೆಚ್ಚಿನ ವೇತನವನ್ನೇ ಜಾರಿಗೊಳಿಸಬೇಕು. ಒಂದು ವೇಳೆ ಮಾಡದಿದ್ದರೆ, ಬಿಜೆಪಿ ಸರಕಾರದ ಅವಽಯ ರೀತಿಯಲ್ಲಿ
ಈಗಲೂ ಇಡೀ ಸರಕಾರಿ ವ್ಯವಸ್ಥೆಯ ಸಿಬ್ಬಂದಿ ಬೀದಿಗೆ ಇಳಿಯುವುದು ನಿಶ್ಚಿತ.

ಬಿಜೆಪಿ ಅವಧಿಯಲ್ಲಿ ಆಗದೇ ಇರುವ ಎಲ್ಲ ಯೋಜನೆಗಳನ್ನು ಈಗ ಒಂದೇ ಉಸಿರಿನಲ್ಲಿ ಮಾಡಬೇಕು ಎಂದು ಪಟ್ಟು ಹಿಡಿಯುವುದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಜೆಟ್‌ನಲ್ಲಿ ಹೊಸ ಯೋಜನೆಗಳಿಗಿಂತ ಚಾಲ್ತಿಯಲ್ಲಿರುವ ಹಾಗೂ ಗ್ಯಾರಂಟಿ ಯೋಜನೆಗಳನ್ನು ‘ವ್ಯವಸ್ಥಿತ’ವಾಗಿ ಜಾರಿಗೊಳಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು, ಈ ಬಾರಿ ಹೊಸ ಯೋಜನೆಗಳನ್ನು ತರಬೇಡಿ
ಎನ್ನುವ ಸ್ಪಷ್ಟ ಸೂಚನೆಯನ್ನು ನೀಡಿದ್ದಾರೆ. ತಮ್ಮ ಪಕ್ಷದ ಶಾಸಕರ ವಿಶೇಷ ಅನುದಾನಕ್ಕೂ ‘ಕತ್ತರಿ’ ಪ್ರಯೋಗ ಮಾಡಿದ್ದಾರೆ. ಇನ್ನು ತೀರಾ ಅನಿವಾರ್ಯವಲ್ಲದ, ದುಂದು ವೆಚ್ಚ ಎನಿಸುವ ಎಲ್ಲ ಯೋಜನೆಗಳನ್ನು ಈ ಒಂದು ವರ್ಷ ‘ಹೋಲ್ಡ್’ ಮಾಡುವಂತೆ ಅಧಿಕಾರಿಗಳೂ ಸೂಚನೆ
ನೀಡಿದ್ದಾರೆ.

ಆದರೆ ಮುಂದಿನ ವರ್ಷಕ್ಕೆ ಯಾವ ರೀತಿಯಲ್ಲಿ ಆರ್ಥಿಕ ‘ಹೊಂದಾಣಿಕೆ’ ಮಾಡಿಕೊಳ್ಳುತ್ತಾರೆ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಬಹುತೇಕ ಕಾಂಗ್ರೆಸಿಗರು ಈ ಒಂದು ಬಜೆಟ್ ಸಾಗಿಸಿದರೆ, ಮುಂದಿನ ಬಾರಿಗೆ ಎಲ್ಲವೂ ಸರಿ ಹೋಗಲಿದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಆದರೆ,
ಸರಿ ಹೋಗಲು ಬೇಕಾಗುವ ಹೆಚ್ಚುವರಿ ಅನುದಾನವನ್ನು ಯಾವ ಆರ್ಥಿಕ ಮೂಲದಿಂದ ತರುತ್ತಾರೆ ಎನ್ನುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಜಿಎಸ್‌ಟಿ ಕಾಯಿದೆ ಜಾರಿಯಾದ ಬಳಿಕ ತೆರಿಗೆ ವಿಧಿಸುವ, ಏರಿಸುವ, ಇಳಿಸುವ ಎಲ್ಲ ಅಽಕಾರವೂ ಕೇಂದ್ರ ಸರಕಾರದ ಜಿಎಸ್‌ಟಿ ಮಂಡಳಿ ಪಾಲಾಗಿದೆ.

ಇನ್ನಿರುವ ಪೆಟ್ರೋಲ್-ಡಿಸೇಲ್ ಸೆಸ್, ಅಬಕಾರಿ ಮೇಲೆ ತೆರಿಗೆ ಹೆಚ್ಚುವರಿ ವಿಧಿಸಿದರೆ ಆರ್ಥಿಕವನ್ನು ಕ್ರೋಡೀಕರಿಸಬಹುದು. ಆದರೆ, ಪೆಟ್ರೋಲ್-ಡಿಸೇಲ್ ವಿರುದ್ಧ ಹೋರಾಡಿಕೊಂಡೇ ಅಽಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಮೊದಲ ಮೂರು ತಿಂಗಳೇ ಸೆಸ್ ಹೆಚ್ಚಿಸಿದರೆ ಜನರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಇನ್ನಿರುವ ಅಬಕಾರಿ ತೆರಿಗೆಯನ್ನು ಎಷ್ಟೇ ಹೆಚ್ಚಿಸಿದರೂ ಆರೇಳು ಸಾವಿರ ಕೋಟಿ
ರು. ಹೆಚ್ಚುವರಿಯಾಗಿ ಸಂಗ್ರಹಿಸಬಹುದು. ಆದರೆ ಅದು ‘ಖಾಲಿಯಾಗಿರುವ ಕೆಆರ್‌ಎಸ್‌ಗೆ ಒಂದು ಟ್ಯಾಂಕರ್ ನೀರು’ ಸುರಿದಂತಾಗುತ್ತದೆ ಹೊರತು ಹೆಚ್ಚು ಪ್ರಯೋಜವಾಗುವುದಿಲ್ಲ.

ಇನ್ನು ರಾಜ್ಯ ಸರಕಾರಕ್ಕೆ ಅಧಿಕಾರವಿರುವ ಎಲ್ಲ ತೆರಿಗೆಯಲ್ಲಿ ಯಾವುದನ್ನು ಮುಟ್ಟಿದರೂ, ಆಡಳಿತ ವಿರೋಧಿ ಅಲೆ ಏಳುವುದು ನಿಶ್ಚಿತ. ಆದ್ದರಿಂದ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಸಾಹಸಕ್ಕೆ ಕೈಹಾಕಲು ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಇನ್ನಿರುವ ಮಾರ್ಗ ‘ಸಾಲ’ ಮಾಡುವುದು. ಆದರೆ ರಾಜ್ಯ ಸರಕಾರಗಳು ‘ಆಸ್ತಿ’ ಸೃಷ್ಟಿಗೆ (ಉದಾ : ರಸ್ತೆ, ಜಲಾಶಯ, ಮೂಲಸೌಕರ್ಯ) ಸಾಲವನ್ನು ಮಾಡಿದರೆ ಅದು ಭವಿಷ್ಯ ದಲ್ಲಿ ಲಾಭವಾಗುತ್ತದೆ. ಅದನ್ನು ಬಿಟ್ಟು ದೈನಂದಿನ ಚಟುವಟಿಕೆಗೆ, ಸೋಷಿಯಲ್ ವೆಲ್ ಫೇರ್ ಯೋಜನೆಗಳಿಗೆ ಸಾಲದ ಹಣವನ್ನು ಹಾಕಿದರೆ ಭವಿಷ್ಯದಲ್ಲಿ ಅದು ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಎನ್ನುವುದು ಸ್ಪಷ್ಟ.

ಈ ಸಂಕಷ್ಟ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಅನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಹಾಗೇ ನೋಡಿದರೆ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿರುವ ಅನುಭವವಿದೆ. ಆದರೆ ಬಿಜೆಪಿ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯ ನಡುವೆ ‘ಭಾರಿ ನಿರೀಕ್ಷೆಯೊಂದಿಗೆ’ ಕಾಂಗ್ರೆಸ್‌ನಿಂದ ಎಲ್ಲವೂ ಒಂದೇ ಬಾರಿಗೆ ಆಗಬೇಕು ಎನ್ನುವ ನಿರೀಕ್ಷೆಯ ಭಾರವನ್ನು ಹೋರುವುದೇ ಸರಕಾರಕ್ಕೆ ಸವಾಲಾಗಿದೆ. ಸರಕಾರ ಈ ಎಲ್ಲ ಸವಾಲುಗಳನ್ನು ಯಾವ ರೀತಿಯಲ್ಲಿ ಮೆಟ್ಟಿನಿಲ್ಲುತ್ತದೆ ಎನ್ನುವುದನ್ನು ಜುಲೈ ೭ರ
ಬಜೆಟ್‌ನಲ್ಲಿಯೇ ಉತ್ತರ ಸಿಗಬೇಕಿದೆ.