Wednesday, 11th December 2024

ಸರಕಾರದಲ್ಲಾಗುವ ದುಂದುವೆಚ್ಚಕ್ಕೆ ಕಡಿವಾಣ ಹಾಕಿ

vidhana soudha good news

ಪ್ರಚಲಿತ

ಮಣ್ಣೆಮೋಹನ್‌

ಯಾವುದೇ ಸರಕಾರ ಬಂದರೂ, ಯಾರೇ ಮುಖ್ಯಮಂತ್ರಿಯಾದರೂ ಎಲ್ಲರದ್ದೂ ಒಂದೇ ಆಟ-ಪಾಠ, ಆರ್ಭಟ. ವರ್ಷಕೊಮ್ಮೆ ಕರೆಂಟ್ ಬಿಲ್ ದರ ಹೆಚ್ಚಳ, ಸಾರಿಗೆ ದರ ಹೆಚ್ಚಳ, ನೀರಿನ ದರ ಹೆಚ್ಚಳ ಇತ್ಯಾದಿ ಇತ್ಯಾದಿ. ಬರಿ ಏರಿಕೆಯ ಸುದ್ದಿಯೇ! ಇಡೀ ಜೀವಮಾನದಲ್ಲಿ ಇಳಿಕೆಯ ಸುದ್ದಿಯನ್ನು ಕಾಣಲಾರೆವೇನೋ.

ಮೊದಲಿಗೆ ಇಂಧನ ಇಲಾಖೆ ವಿಷಯ. ಒಂದು ಹೊಸ ಬಡಾವಣೆಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಆರಂಭದಲ್ಲಿ ಕಡಿಮೆ ಮನೆಗಳಿರುತ್ತವೆ. ಆದರೂ ವಿದ್ಯುತ್ ಇಲಾಖೆ ಎಲ್ಲಾ ಬೀದಿಗಳಿಗೆ ಕಂಬಗಳನ್ನು ನೆಟ್ಟು ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡುತ್ತದೆ. ವಿದ್ಯುತ್ ಇಲಾಖೆಗೆ ಇದಕ್ಕಾಗಿ ಹಣ ಖರ್ಚಾಗುತ್ತದೆ. ಬೆಂಗಳೂರು ನಗರದಲ್ಲಿನ ಬಡಾವಣೆಗಳ ಕಥೆ ನಿಮಗೆ ಗೊತ್ತಿದೆ. ಇಂದು ನೋಡಿದ ಬಡಾವಣೆ ಇನ್ನಾರು ತಿಂಗಳಿಗೆ ಬಂದು ನೋಡಿದರೆ ಗುರುತೇ ಸಿಗದಷ್ಟು ಬೆಳೆದಿರುತ್ತದೆ.

ಹಾಗೆಯೇ ಮನೆಗಳು ಹೆಚ್ಚುತ್ತಾ ಹೋದಂತೆ, ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಿ, ವಿದ್ಯುತ್ ಇಲಾಖೆಗೆ ವರಮಾನವೂ ಹೆಚ್ಚುತ್ತದೆ. ಅವರು ಕಂಬ ಎಳೆಯಲು ತಗುಲಿದ ವೆಚ್ಚವೆಲ್ಲ ಒಂದೆರಡು ವರ್ಷದಲ್ಲಿ ವಾಪಸ್ ಬರುತ್ತದೆ. ಮೂರನೇ ವರ್ಷದಿಂದ ಆ ಬಡಾವಣೆಯಲ್ಲಿ ವಿದ್ಯುತ್ ಇಲಾಖೆಗೆ ಯಾವುದೇ ಖರ್ಚು ವೆಚ್ಚ ಇರುವುದಿಲ್ಲ. ಸುಮ್ಮನೆ ನಿರ್ವಹಣೆ ಮಾಡಿದರೆ ಸಾಕು. ಮನೆಗಳು ಹೆಚ್ಚಾದಂತೆ, ಮನೆಗಳಲ್ಲಿರುವ ವಿದ್ಯುತ್ ಉಪಕರಣಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಾ ಹೋದಂತೆ, ವಿದ್ಯುತ್
ಬಳಸುವ ಪ್ರಮಾಣವೂ ಹೆಚ್ಚುತ್ತದೆ, ವರಮಾನವು ಹೆಚ್ಚುತ್ತದೆ.

ಅದೆಲ್ಲ ವಿದ್ಯುತ್ ಕಂಪನಿಗೆ ಲಾಭ ತಾನೇ? ಬಡಾವಣೆಯ ಜಾಗದಲ್ಲಿ ಬೆಂಗಳೂರನ್ನೂ, ಇಡೀ ರಾಜ್ಯವನ್ನೂ ಇಟ್ಟು ಹೋಲಿಸಿ ನೋಡಿ. ಪ್ರತಿವರ್ಷ ವಿದ್ಯುತ್ ಬಳಕೆದಾರರ ಸಂಖ್ಯೆ ಹಾಗೂ ವಿದ್ಯುತ್ ಬಳಸುವ ಪ್ರಮಾಣ ಹೆಚ್ಚುತ್ತಾ ಹೋಗುತ್ತಿದೆ. ಅಂದರೆ
ಆದಾಯ ಕೂಡ ಏರುಮುಖದಲ್ಲಿದೆ ಎಂದರ್ಥ. ಹೊಸ ನೇಮಕಾತಿಗಳಾಗಲಿ ಹೊಸ ಯೋಜನೆಗಳಾಗಲಿ ಅಷ್ಟಾಗಿ ಕಂಡು ಬರುತ್ತಿಲ್ಲ. ಹಾಗಾದರೆ ವಿದ್ಯುತ್ ದರ ಹೆಚ್ಚಿಸುವ ಅನಿವಾರ್ಯತೆ ಏನು? ಬಹುಶಃ ಇಲಾಖೆಯ ಅಧಿಕಾರಿಗಳು ಪ್ರಮೋಷನ್
ಪಡೆದು ಸಂಬಳ ಹೆಚ್ಚಿಸಿಕೊಳ್ಳಲು, ಟಿಎ-ಡಿಎಗಳಂತಹ ಇತರೆ ಸವಲತ್ತುಗಳನ್ನು ಸವಿಯಲು ಬಳಸುವಂತೆ ಕಾಣಿಸುತ್ತದೆ. ಇಂಧನ ಇಲಾಖೆಯಲ್ಲಿರುವ ಅಧಿಕಾರಿಗಳ ಓಡಾಟಕ್ಕೆ ಎಷ್ಟು ಸರಕಾರಿ ವಾಹನಗಳಿವೆ? ಅವುಗಳಿಗೆ ಪೆಟ್ರೋಲ್-ಡೀಸೆಲ್ ಎಷ್ಟು ಖರ್ಚಾಗುತ್ತದೆ? ಅವುಗಳ ರಿಪೇರಿಗೆಂದು ಖರ್ಚು ಮಾಡುತ್ತಿರುವ ಹಣವೆಷ್ಟು? ವಾಹನ ಚಾಲಕರುಗಳಿಗೆ ಕೊಡುತ್ತಿರುವ ಸಂಬಳವೆಷ್ಟು ಗಮನಿಸಿದ್ದೀರಾ? ಇದಕ್ಕೆ ಕೋಟ್ಯಾಂತರ ಹಣ ಖರ್ಚಾಗುತ್ತಿದೆ.

ಅಷ್ಟು ಹಣವನ್ನು ಖರ್ಚು ಮಾಡಿ ಇವರೆಲ್ಲ ಎಲ್ಲಿಗೆ ಓಡಾಡುತ್ತಾರೆ ಬಲ್ಲಿರಾ? ಸೈಟ್ ವಿಸಿಟ್, ಸ್ಪಾಟ್ ವಿಸಿಟ್ ಮಾಡಿದ್ದೇವೆಂದು ಕೆಲಸಕ್ಕೆ ಹಾಜರಾಗಿದ್ದಾವೆಂದು ಲೆಕ್ಕದ ಪುಸ್ತಕದಲ್ಲಿ ಬರೆದಿಡುವ ಇವರ ವಾಹನಗಳು ಖಾಸಗಿ ಬಳಕೆಗೆ ಉಪಯೋಗವಾಗುವುದೇ ಹೆಚ್ಚು. ಸರಕಾರಿ ವಾಹನಗಳನ್ನು ತಮ್ಮ ಸ್ವಂತದ್ದೊಂದು ಭಾವಿಸಿ ಸುತ್ತುವ ಇವರುಗಳ ದುಂದುವೆಚ್ಚಕ್ಕೆ ನಾವೇಕೆ ಬೆಲೆ ತೆರಬೇಕು? ಸಾವಿರಾರು ಕಿ.ಮೀ. ಸುತ್ತಾಡಿದ್ದೇವೆಂದು ಲೆಕ್ಕಪತ್ರದಲ್ಲಿ ತೋರಿಸುವ ಇವರುಗಳು, ಮಾಡಿದ ಸಾಧನೆಯಾದರೂ ಏನು? ಇವರ ಸುತ್ತಾಟದಿಂದ ಇಲಾಖೆಗೆ ಆದ ಪ್ರಯೋಜನವಾದರೂ ಎಷ್ಟು? ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸಿದರೆ ಸತ್ಯಾಂಶ
ಹೊರಬರುತ್ತದೆ.

ಇನ್ನು ರಾಜ್ಯಾದ್ಯಂತ ಅನೇಕ ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಬೆಳಗಿನ ವೇಳೆಯೂ ಉರಿಯುವ ಬೀದಿದೀಪಗಳನ್ನು ನೀವೆಲ್ಲ ಗಮನಿಸಿರಬಹುದು. ಆ ರೀತಿ ಪೋಲಾಗುವ ವಿದ್ಯುತ್ ಉಳಿಸಿದರೆ ಸಾಕು, ದರ ಏರಿಕೆಯ ಪ್ರಮೇಯವೇ ಬರುವುದಿಲ್ಲ. ಬೀದಿ ದೀಪಗಳ ನಿರ್ವಹಣೆಯಂತಹ ಕನಿಷ್ಠ ಕಾರ್ಯವನ್ನು ಇವರಿಗೆ ಸರಿಯಾಗಿ ನಿಭಾಯಿಸಲು ಆಗಲಿಲ್ಲವೆಂದರೆ ಇವರುಗಳು
ಇನ್ನೇನು ಸಾಧನೆ ಮಾಡಲು ಸಾಧ್ಯ? ಅವರುಗಳೇ ಉತ್ತರಿಸಬೇಕು. ಆದರೆ ಅವರೆಂದೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಕಳ್ಳರ ಮನಸ್ಸು ಹುಳ್ಳಗೆ.

ಇನ್ನು ಸಾರಿಗೆ ವಿಚಾರಕ್ಕೆ ಬರೋಣ. ಲಾಕ್‌ಡೌನ್ ಸಮಯದಲ್ಲಿ ಸಾರಿಗೆ ಬಸ್ ಸಂಚಾರ ನಿಷೇಧಗೊಂಡಿದ್ದಾಗ ಸಾರಿಗೆ ಇಲಾಖೆಗೆ ಇಷ್ಟಿಷ್ಟು ಕೋಟಿ ನಷ್ಟವಾಯಿತೆಂದು ಪತ್ರಿಕೆಗಳಲ್ಲಿ ನೀವೆ ಓದಿದ್ದೀರಾ. ಹಾಗಾದರೆ ಸಾರಿಗೆ ವಾಹನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಇಷ್ಟೆಲ್ಲ ಲಾಭವಿದೆಯೆಂದು ಅರ್ಥ ತಾನೇ? ಅದರಲ್ಲೂ ನಗರ ಸಾರಿಗೆ ಬಸ್‌ಗಳನ್ನು ನೀವು ಗಮನಿಸಿರಬಹುದು.
ಮೂರು ಬಸ್ಸಿನ ಜನ ಒಂದೇ ಬಸ್ಸಿನಲ್ಲಿ ತುಂಬಿ ಬಾಗಿಲಲ್ಲಿ ನೇತಾಡುತ್ತಿರುತ್ತಾರೆ. ಹಾಗಾದರೆ ಲಾಭವಿದ್ದರೂ ಬೆಲೆ ಏರಿಸುವುದು ಏಕೆ? ಬೆಲೆ ಏರಿಕೆಯ ಹಿಂದಿನ ನಿಜವಾದ ರಹಸ್ಯ ಹೊರಬರಬೇಕು. ಬಹುಶಃ ಇವರೆಲ್ಲ ಇಲಾಖೆಯಲ್ಲಿ ಸೋರಿಕೆಯಾಗುವ ಹಣದ ಲೆಕ್ಕಹಾಕಿ, ಅದನ್ನು ಸರಿದೂಗಿಸಲು ಬಡಪಾಯಿ ಜನರ ಮೇಲೆ ಬೆಲೆಏರಿಕೆಯ ತಲೆಭಾರ ಹೊರಿಸುತ್ತಿದ್ದಾರೆಂದು ಕಾಣುತ್ತದೆ.

ಇನ್ನು ಸಾರಿಗೆ ಡಿಪೋಗಳಲ್ಲಿ ನಡೆಯುವ ಕರ್ಮಕಾಂಡದ್ದು ಬೇರೆಯದೇ ಕಥೆ. ಚೆನ್ನಾಗಿ ಓಡಾಡುತ್ತಿರುವ ಬಸ್‌ಗಳನ್ನು ರಿಪೇರಿ ಮಾಡಿಸಿರುವುದಾಗಿ ಖರ್ಚುವೆಚ್ಚ ತೋರಿಸುವುದು, ಸಣ್ಣಪುಟ್ಟ ಸಮಸ್ಯೆ ಇರುವ ಬಸ್‌ಗಳನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ವೆಂದು ಗುಜರಿಗೆ ಹಾಕಿ, ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಕರೆಯುವುದು ಇತ್ಯಾದಿ. ಟೆಂಡರ್ ಎಂದರೆ ನಿಮಗೆಲ್ಲ ಗೊತ್ತಿರುತ್ತದೆ,
ಇಂತಿಷ್ಟು ಪರ್ಸೆಂಟ್ ಕಮಿಷನ್ ಸೇರಬೇಕಾದವರಿಗೆ ಸೇರುತ್ತದೆ. ಆ ಮೂಲಕ ಎಲ್ಲರ ಜೇಬುಗಳು ತುಂಬಿಕೊಳ್ಳುತ್ತವೆ. ಇದೀಗ ನಮ್ಮ ಪ್ರಶ್ನೆ, ಇವರ ಜೇಬುಗಳು ತುಂಬಲು ನಾವೇಕೆ ನಮ್ಮ ಬೆವರಿನ ಹಣ ನೀಡಬೇಕು? ಬರೀ ಇದಿಷ್ಟೇ ಅಂದುಕೊಂಡಿರಾ? ಸಾರಿಗೆ ನಿಗಮಕ್ಕೆ ಒಬ್ಬರು ಅಧ್ಯಕ್ಷ, ಅವರಿಗೊಂದು ಗೂಟದ ಕಾರು, ಕಾರಿನ ಖರ್ಚು ವೆಚ್ಚ, ಅವರ ಖರ್ಚುವೆಚ್ಚ, ಅವರಿಗೆ ಒಂದಷ್ಟು ಆಳುಕಾಳುಗಳು, ಅವರ ಸಂಬಳ, ಇತರೆ ವೆಚ್ಚಗಳು, ವಗೈರೆ. ಹಾಗೆಯೇ ಅಲ್ಲಿನ ನಿರ್ದೇಶಕರು, ವ್ಯವಸ್ಥಾಪಕರು, ಇತರೆ ಅಧಿಕಾರಿಗಳು, ಅವರ ಬಾಲಗಳು- ಇವರೆಲ್ಲರ ವೆಚ್ಚವೂ ನಮ್ಮ ತಲೆ ಮೇಲೆ ತಾನೇ ಬೀಳುವುದು? ಮತ್ತೊಂದು ದರ ಏರಿಕೆಯ ಇಲಾಖೆ ಜಲಮಂಡಳಿಯದ್ದು.

ಮೇಲೆ ತಿಳಿಸಿದ ಎಲ್ಲಾ ಭಾನಗಡಿಗಳು ಇಲ್ಲಿಯೂ ನಡೆಯುತ್ತದೆ. ಅವುಗಳೆಲ್ಲದರ ಜತೆಗೆ ಒಂದಷ್ಟು ಹೊಸ ವರಸೆ ಇಲ್ಲಿದೆ. ನಮಗೆ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಸೋರಿಕೆ ಪ್ರಮಾಣ ಶ.45 ಎಂದು ವರದಿಯೊಂದು ತಿಳಿಸಿತ್ತು. ಅದನ್ನು ಶೇ.33ಗೆ ಇಳಿಸಲು ಸಾವಿರಾರು ರು.ಗಳ ಯೋಜನೆ ರೂಪಿಸಲಾಗಿತ್ತು. ಕಾವೇರಿ ನದಿಯಿಂದ ಬೆಂಗಳೂರಿಗೆ 4 ಹಂತಗಳಲ್ಲಿ ನೀರು
ಸರಬರಾಜಾಗುತ್ತಿದ್ದು 5ನೇ ಹಂತ ಜಾರಿಯಲ್ಲಿದೆ.

ಇದರಲ್ಲಿ ಸುಮಾರು ಶೇ.45 ನೀರು ಸೋರಿಕೆಯಾಗುತ್ತಿದೆ ಎಂಬುದರ ಅರ್ಥ ಏನು ಗೊತ್ತಾ? 4 ಹಂತಗಳಲ್ಲಿ 2 ಹಂತದ ನೀರು ಪೋಲಾಗುತ್ತಿದೆ ಎಂದರ್ಥ. ಅಂದರೆ 2 ಹಂತದ ನೀರು ಸರಬರಾಜಿಗೆ ಖರ್ಚಾಗಿರುವ ಕೋಟ್ಯಾಂತರ ರು. ಹಣ ನೀರಲ್ಲಿ ಹೋಮ ಮಾಡಿದಂತೆ, ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದರ್ಥ. ಆಧುನಿಕ ಪರಿಕರಗಳು, ಅತ್ಯಾಧುನಿಕ ಸೌಲಭ್ಯಗಳನ್ನಿ
ಟ್ಟುಕೊಂಡು ಇಷ್ಟೊಂದು ಸೋರಿಕೆ ನೀರನ್ನು ತಡೆಗಟ್ಟಲು ನಿಮ್ಮಿಂದ ಸಾಧ್ಯವಾಗಲಿಲ್ಲವೆಂದರೆ ಏನರ್ಥ.

ನೀವೆಲ್ಲ  ನಿಷ್ಪ್ರಯೋಜಕರು ಎಂದರ್ಥ. ಇಂತಹ ನಿಷ್ಪ್ರಯೋಜಕರನ್ನು ಸಾಕಲು ನಾವೇಕೆ ದರ ಏರಿಕೆಯ ನೇಣುಗಂಬಕ್ಕೆ ತಲೆ ಕೊಡಬೇಕು? ನಿಮಗೆ ತಿಳಿದಿರಲಿ, ಇವರಲ್ಲಿ ಅನೇಕರು ಇಲಾಖೆಗಳಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲೆಂದು, ತಾಂತ್ರಿಕ ಅಧ್ಯಯನ ಕ್ಕೆಂದು, ಗುಂಪು ಕಟ್ಟಿಕೊಂಡು, ಲಕ್ಷಾಂತರ ರು.ಗಳನ್ನು ಖರ್ಚು ಮಾಡಿಕೊಂಡು, ವಿದೇಶ ಯಾತ್ರೆಯನ್ನು ಮಾಡಿ ಬಂದಿದ್ದಾರೆ.
ಅದೂ ಕೂಡ ನಮ್ಮ ನಿಮ್ಮ ತೆರಿಗೆ ಹಣ. ಇಷ್ಟೆಲ್ಲ ಪರಿಣಿತರು ಇದ್ದರೂ, ಇಂತಹ ಮಾನಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಯೋಗ್ಯತೆ ಇವರಿಗಿಲ್ಲವೇ? ಸಂಬಂಧಿಸಿದವರು ಉತ್ತರಿಸಬೇಕು. ಈ ಸರಕಾರವಾದರೂ ಇಂತಹ ಪಟ್ಟಬದ್ರ ವ್ಯವಸ್ಥೆಗೆ ಅಂತ್ಯ ಕಾಣಿಸಬೇಕಿದೆ.

ಹೀಗೆಯೇ ಬೆಲೆ ಏರಿಕೆ ಮಾಡುವ ಎಲ್ಲ ಇಲಾಖೆಗಳ ಕಥೆಯು ಇದೇ ತೆರನದ್ದು. ನಾವು ನೀವೆಲ್ಲ ನೋಡಿಲ್ಲವೇ? ಬೆಂಗಳೂರು ಡೈರಿಯ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಜಿದ್ದಾಜಿದ್ದಿನ ಚುನಾವಣೆಗಳನ್ನು. ಹಿಂಡಿ-ಬೂಸ ಚೆನ್ನಾಗಿ ಸಿಗುತ್ತದೆಂದು ತಾನೇ ಅಷ್ಟೊಂದು ಜಿದ್ದಾಜಿದ್ದಿ. ಮಿಠಾಯಿ ಇರುವೆಡೆ ನೊಣಗಳ ಹಾರಾಟ ಚೀರಾಟ ಜಾಸ್ತಿ ಅಲ್ಲವೇ? ಏನು ಸಿಗದ ಜಾಗಗಳು, ಚುನಾವಣೆಯಲ್ಲಿ ಸೋತ ಪಕ್ಷದ ಕಚೇರಿಯ ಮುಂದಿನ ಸ್ಮಶಾನ ಮೌನದಂತೆ, ಯಾರಿಗೂ ಬೇಡ.

ಏನಂತೀರಾ? ನಮ್ಮನ್ನೆಲ್ಲ ಕಾಡುವ ಇನ್ನೊಂದು ವಿಷಯ ಏನೆಂದರೆ ಇವರಿಗೆಲ್ಲ ಸರಕಾರಿ ವಾಹನಗಳು ಏಕೆ ಬೇಕು?
ಎಂಬುದು. ಲಕ್ಷಾಂತರ ರು.ಗಳ ಸಂಬಳ ಪಡೆಯುವ ಇವರುಗಳು ತಮ್ಮ ತಮ್ಮ ಮನೆಯ ಮುಂದೆ ತನಗೊಂದು, ಮಡದಿ ಗೊಂದು, ಮಕ್ಕಳಿಗೊಂದೊಂದು ಎಂಬಂತೆ ಬಹು ವೆಚ್ಚದ, ಬಹುವರ್ಣದ,ಲಕ್ಸುರಿ ಕಾರುಗಳನ್ನು ನಿಲ್ಲಿಸಿ ಕೊಂಡಿರುತ್ತಾರೆ. ಅವರ ಕಾರುಗಳ ಕಚೇರಿಗೆ ಬರಲು ಸರಕಾರವೇಕೆ ಕ್ರಮ ಕೈಗೊಳ್ಳುತ್ತಿಲ್ಲ? ಹಾಗೆ ಮಾಡಿದರೆ ಪ್ರತಿವರ್ಷ ವಾಹನಗಳ ಖರೀದಿಗೆಂದು ತಗಲುವ ಕೋಟ್ಯಂತರ ರು.ಗಳ ಉಳಿತಾಯವಾಗುತ್ತದೆ.

ಅವುಗಳ ಇಂಧನದ ಖರ್ಚು ಮಿಕ್ಕುತ್ತದೆ, ಚಾಲಕರಿಗೆ ಕೊಡುವ ಸಂಬಳ ಉಳಿಯುತ್ತದೆ, ಎಲ್ಲಕ್ಕಿಂತ ಹೆಚ್ಚಾಗಿ ಸುಖಾಸುಮ್ಮನೆ ರಿಪೇರಿಗೆಂದು ಖರ್ಚು ಮಾಡುವ ಬಾಬತ್ತು ಇರುವುದಿಲ್ಲ. ಸರಕಾರದ ಎಲ್ಲಾ ಇಲಾಖೆಗಳಿಂದ ಇಷ್ಟೆ ಹಣ ಉಳಿತಾಯವಾದರೆ ಸರಕಾರದ ಬೊಕ್ಕಸ ತುಂಬಿ ತುಳುಕುವು ದರಲ್ಲಿ ಯಾವ ಅನುಮಾನವೂ ಇರುವುದಿಲ್ಲ. ಹಾಗೆಯೇ ಜನಸಾಮಾನ್ಯರು ಬೆಲೆ ಏರಿಕೆಯ ಬಾಧೆಯಿಂದ ಬಿಡುಗಡೆಗೊಂಡಂತಾಗುತ್ತದೆ. ತೆರಿಗೆದಾರರ ತೆರಿಗೆ ಭಾರವೂ ಇಳಿಕೆಯಾಗುತ್ತದೆ.

ಇಷ್ಟಾದರೆ ಎಷ್ಟು ಚೆನ್ನ ಅಲ್ಲವೇ? ಇದರಿಂದ ಪ್ರಭುತ್ವಕ್ಕೆ ಎಷ್ಟೊಂದು ಲಾಭ. ಆದರೆ ನಮ್ಮನ್ನಾಳುವ ಪ್ರಭುಗಳಿಗೆ? ಎರಡು ಕೈಗಳಲ್ಲಿ ಬಾಯಿತುಂಬಾ ತಿನ್ನಲೆಂದೇ ಬಂದ ಅವರುಗಳು ಎಂದಿಗೂ ಇಂತಹ ವ್ಯವಸ್ಥೆಯನ್ನು ರೂಪಿಸುವುದಿಲ್ಲ, ಅಲ್ಲವೇ?
ಮುಖ್ಯಮಂತ್ರಿಗಳಲ್ಲಿ ನನ್ನದೊಂದು ಮನವಿ. ರಾಜಕೀಯದ ಮೊದಲ ಮೆಟ್ಟಿಲಿನಿಂದ ಕೊನೆಯ ಮೆಟ್ಟಿಲಿನವರೆಗೆ ತಲುಪಿದ್ದೀರಿ, ಅನೇಕ ಏರಿಳಿತಗಳನ್ನು ಕಂಡಿದ್ದೀರಿ, ಎಲ್ಲವನ್ನೂ ಅನುಭವಿಸಿದ್ದೀರಿ, ಈಗ ನಿವೃತ್ತಿಯ ಅಂಚಿನಲ್ಲಿದ್ದೀರಿ, ನಿಮಗೆ ಆಗಬೇಕಿರುವುದು ಇನ್ನೇನಿಲ್ಲ. ಇನ್ನು ಎರಡು ವರ್ಷ ನಿಮ್ಮ ಅವಧಿ ಇದೆ.

ನೀವೇಕೆ ಹೊಸ ಪ್ರಯತ್ನವೊಂದಕ್ಕೆ ಕೈಹಾಕಬಾರದು? ಈ ಕೆಟ್ಟ ವ್ಯವಸ್ಥೆಯನ್ನು ಬದಲಿಸಬಾರದು? ಸ್ವಾತಂತ್ರ್ಯ ನಂತರ ಬಹಳ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಾಕಿಕೊಟ್ಟ ಭ್ರಷ್ಟ ಪರಂಪರೆಯನ್ನು ಮುರಿಯಬಾರದು? ಯಡಿಯೂರಪ್ಪ ನವರು ಈ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳೊಬ್ಬರು ಎಂದು ಮಾಮೂಲಿಯಾಗಿ ಇತಿಹಾಸದಲ್ಲಿ ದಾಖಲಾಗುವ ಬದಲು, ಯಡಿ ಯೂರಪ್ಪನವರೊಬ್ಬರೇ ಭ್ರಷ್ಟ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕಾರಣರಾದರೆಂದು ಇತಿಹಾಸದಲ್ಲಿ ದಾಖಲಾ ದರೆ ಹೇಗಿರುತ್ತದೆ? ಇದು ಮುಖ್ಯಮಂತ್ರಿಯ ಜತೆಗೆ ಈ ಸರಕಾರದ ಮಂತ್ರಿ ಮಂಡಲದಲ್ಲಿರುವ ಎಲ್ಲಾ ಏರಿಕೆಯ ವೀರರಾದ ಮಂತ್ರಿಗಳಿಗೆ, ಜನತೆಯ ಪರವಾಗಿ ನನ್ನದೊಂದು ಇಳಿಕೆಯ ಪ್ರಶ್ನೆ.

ಇವರುಗಳು ಸಾಗುತ್ತಿರುವ ಹಾದಿ ನೋಡಿದರೆ ನನ್ನದು ತಿರುಕನ ಕನಸೆಂದು ಚೆನ್ನಾಗಿ ಅರಿವಿದೆ. ಆದರೂ, ಮನಸ್ಸಿನ ಸಮಾಧಾನಕ್ಕಾದರೂ, ಕನಸು ಕಾಣುತ್ತಿರಿ ಎಂಬ ಅಬ್ದುಲ್ ಕಲಾಂರ ಮಾತಿಗೆ ಬೆಲೆ ಕೊಡಲಾದರೂ, ಈ ರೀತಿ ಯೋಚಿಸಿ ಹಗುರಾಗಲು ಪ್ರಯತ್ನಿಸೋಣ.