Thursday, 12th December 2024

ಯಾವತ್ತೂ ಅಸಾಮಾನ್ಯ ಎಂದೆನಿಸಿಕೊಳ್ಳುವುದರ ಮೂಲ ಕಲ್ಪನೆ ಸಾಮಾನ್ಯ

ನೂರೆಂಟು ವಿಶ್ವ

vbhat@me.com

ಯಾವತ್ತೂ ಅಸಾಮಾನ್ಯ ಎಂದೆನಿಸಿಕೊಳ್ಳುವುದರ ಮೂಲ ಕಲ್ಪನೆ ಸಾಮಾನ್ಯವಾಗಿರುತ್ತದೆ. ರೂಬಿಕ್ ಕ್ಯೂಬ್‌ನಲ್ಲಿ ಒಂದೇ ಬಣ್ಣ ಇರುವ ಮೈಯನ್ನು ಒಂದೆಡೆ ಜೋಡಿಸುವುದು ಕಷ್ಟ. ಆದರೆ ಆ ರೂಬಿಕ್ ಕ್ಯೂಬ್ ಇರುವುದೇ ಹಾಗೆ ಜೋಡಿಸಲು ಎಂಬುದು ತೀರಾ ಸರಳ. ನೂರಾರು ಆಫ್, ಹತ್ತಾರು ಗ್ಯಾಜೆಟ್ಟುಗಳ ಬಳಕೆಯಿಂದಾಗಿ, ಪಾಸ್ ವಾರ್ಡ್ ಬಳಕೆ ಜಾಸ್ತಿಯಾದಂತೆಲ್ಲ, ಅದನ್ನು ಮರೆಯುವವರ ಸಂಖ್ಯೆಯೂ ಜಾಸ್ತಿಯಾಯಿತು. ಮೊದಲಾ ಗಿದ್ದರೆ ಪಾಸ್ ವಾರ್ಡ್ ಮರೆತು ಹೋದರೆ, ಕೀಲಿ ಕಳೆದು ಹೋದಾಗ ಬಾಗಿಲು ಒಡೆಯುವಂತೆ, ಆ ಉಪಕರಣವೇ ಅನುಪಯುಕ್ತವೆನಿಸಿಬಿಡುವುದೋ ಎಂಬ ಆತಂಕವಾಗುತ್ತಿತ್ತು. ಅದ್ಯಾವನೋ ಒಟಿಪಿ (One Time Password) ಎಂಬ ಐಡಿಯಾ ಕೊಟ್ಟ! ಇಂದು ಒಟಿಪಿ ಹಣ ಸಂದಾಯ, ವರ್ಗಾವಣೆಯನ್ನು ಸುರಕ್ಷಿತವಾಗಿಸಿದೆ.

ಈ ನಿಸರ್ಗವನ್ನೊಮ್ಮೆ ಧೇನಿಸಿ ನೋಡಿ, ನಮಗೆ ಅರ್ಥವಾಗದ, ಗಡುಚಾದ ಯಾವ ವಿಷಯಗಳೂ ಇಲ್ಲ. ನಾವು ಯಾವುದೋ ರಹಸ್ಯವನ್ನು ಭೇದಿಸಬೇಕಿಲ್ಲ. ಎಲ್ಲವೂ ನಮಗೆ ದೃಗ್ಗೋಚರ. ಯಾವು ದನ್ನಾದರೂ ಅರ್ಥ ಮಾಡಿಕೊಳ್ಳಬಹುದು. ಸಂಕೀರ್ಣವಾದವು ಯಾವುವೂ ಇಲ್ಲ. ವ್ಯವಸ್ಥಿತ ವಾದ ಎಲ್ಲ ಸಂಗತಿಗಳೂ ಯೋಜನಾಬದ್ಧ ವಾಗಿರುತ್ತವೆ, ಅಲ್ಲಿ ಗೊಂದಲಗಳಿರುವುದಿಲ್ಲ. ಬೇಕಾದರೆ ನೋಡಿ, ಮಹಾನ್ ವ್ಯಕ್ತಿಗಳ ಸಂದೇಶಗಳು, ಸಿದ್ಧಾಂತಗಳು ಸಹ ಸರಳವಾಗಿರುತ್ತವೆ.

ಎಂಥವರಿಗಾದರೂ ಅರ್ಥವಾಗುತ್ತವೆ. ಗಾಂಧಿ, ಬುದ್ಧ, ಬಸವ, ಓಶೋ, ಪರಮಹಂಸ, ವಿವೇಕಾ ನಂದರ ಸಂದೇಶಗಳನ್ನು ಯಾರಾದರೂ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ‘ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ಸಂದೇಶವನ್ನು ನಮಗೆ ಬೇರೆಯವರು ವಿವರಿಸಬೇಕಿಲ್ಲ. ಅದೇ ರೀತಿ ಘೋಷವಾಕ್ಯಗಳು. ಅವು ಮನಸ್ಸಿಗೆ, ಹೃದಯಕ್ಕೆ ನೇರ ತಟ್ಟುವಂಥವು. ಅವುಗಳಲ್ಲಿನ ಸಂದೇಶ ಅಷ್ಟೊಂದು ಪರಿಣಾಮಕಾರಿಯಾಗಿರುತ್ತವೆ. ಹಾಗೆಯೇ ‘ಮಹಾನ್’ (Great) ಎಂದು ಕರೆಯಿಸಿಕೊಳ್ಳುವ ಐಡಿಯಾಗಳು ಸಹ ಯಾವತ್ತೂ ಸರಳವಾಗಿರುತ್ತವೆ.

ಆ ಐಡಿಯಾಗಳಲ್ಲಿ ಗೋಜಲು, ಗೊಂದಲಗಳಿರುವುದಿಲ್ಲ. ಯಾರು ಬೇಕಾದರೂ ಸುಲಭವಾಗಿ ಮನನ ಮಾಡಿಕೊಳ್ಳಬಹುದು. ಆ ಐಡಿಯಾಗಳನ್ನು ಆಧರಿಸಿ, ರೂಪಿಸಿದ, ವಸ್ತುಗಳು ಸಹ ಉಪಯೋಗ-ಸ್ನೇಹಿ (user&friendly) ಆಗಿರುತ್ತವೆ. ಅವುಗಳನ್ನು ಬಳಸಲು ಬಹಳ ತಲೆ ಕೆಡಿಸಿಕೊಳ್ಳ ಬೇಕಿಲ್ಲ. ಎಲ್ಲ ವಯೋಮಾನದವರಿಗೂ ಬಳಸಲು ಸುಲಭವಾಗುವಂತೆ ಅವನ್ನು ರೂಪಿಸಲಾಗಿರುತ್ತವೆ. ಅಷ್ಟೇ ಅಲ್ಲ, ಅವು ಬಳಕೆಗೂ ಸುರಕ್ಷಿತ ವಾಗಿರುತ್ತವೆ. ಮಾರುಕಟ್ಟೆಯಲ್ಲಿ ಗೆದ್ದ ಯಾವುದೇ ಪ್ರಾಡಕ್ಟುಗಳನ್ನು ನೋಡಿದರೂ ಈ ಸಂಗತಿ ಅರಿವಿಗೆ ಬರುತ್ತದೆ. ಅವುಗಳನ್ನು ಗೆಲ್ಲಿಸಲು ಬೇಕಾದ ಘೋಷಣೆ ಗಳೂ ಸರಳವಾಗಿರುತ್ತವೆ.

ಬೇಕಾದರೆ ಕಂಪ್ಯೂಟರನ್ನೇ ನೋಡಿ. ಅದನ್ನು ಯಾವ ವಯೋಮಾನದವರಾದರೂ ಬಳಸಬಹುದು. ಕೀ ಬೋರ್ಡಿನ ಯಾವ ಕೀಯನ್ನು ಅಮುಕಿದರೂ ಅದು ಹಾಳಾಗುವುದಿಲ್ಲ. ಅದರೊಳಗೆ ಅವೆಷ್ಟೇ ಮಾಹಿತಿಯನ್ನು ಅಪ್ ಲೋಡ್ ಮಾಡಿ, ತುರುಕಿ, ಅದರ ಭಾರ ಹೆಚ್ಚಾಗುವುದಿಲ್ಲ. ಒಮ್ಮೆ ಸಂಗ್ರಹವಾದ ವಿಷಯ, ಮಾಹಿತಿ, ಅಥವಾ ಡಾಟಾ ಯಾವತ್ತೂ ಅಲ್ಲಿಯೇ ಇರುತ್ತವೆ. ಕಂಪ್ಯೂಟರನ್ನು ಹಾಳು ಮಾಡುವುದು ಕೂಡ ಅಷ್ಟು
ಸುಲಭವಲ್ಲ. ಹಾಗೆಯೇ ಅದನ್ನು ಬಳಸುವುದು ಸಹ ಸುಲಿದ ಬಾಳೆಹಣ್ಣು. ಹೀಗಾಗಿ ಇಂದು ಜಗತ್ತಿನಲ್ಲಿ ಕಂಪ್ಯೂಟರ್ ಅನಿವಾರ್ಯವಾಗಿರುವುದು. ಅದಿಲ್ಲದೇ ಇಂದು ಬದುಕೇ ಇಲ್ಲ.

ಅದು ಇಲ್ಲದ ಆಫೀಸುಗಳೇ ಇಲ್ಲ. ಈ ಕಾರಣಕ್ಕಾಗಿಯೇ ಮೈಕ್ರೋಸಾಫ್ಟ್ ಸಂಸ್ಥೆಯ ಬಿಲ್ ಗೇಟ್ಸ್ ಕಂಪ್ಯೂಟರುಗಳ ಬಗ್ಗೆ I think it’s fair to say that personal computers have become the most empowering tool we’ve ever created. They’re tools of
communication, they’re tools of creativity, and they can be shaped by their user ಎಂದು ಹೇಳಿರುವುದು.

ಪ್ರತಿ ವಸ್ತು ಅಥವಾ ಪ್ರಾಡಕ್ಟ್‌ಗಳ ಹಿಂದಿರುವುದು ಸರಳವಾದ, ಆದರೆ ಮಹಾನ್ ಎಂದು ಅಂದುಕೊಳ್ಳಬಹುದಾದ ಆಲೋಚನೆಗಳು. ಅದನ್ನು
ರೂಪಿಸಲು ಬಹಳ ಕಷ್ಟವಾಗಿರಬಹುದು, ತಂತ್ರಜ್ಞರು ಬಹಳ ಕಷ್ಟಪಟ್ಟಿರಬಹುದು. ಆದರೆ ಅದನ್ನು ಉಪಯೋಗಿಸುವವರು ಮಾತ್ರ ಪುಣ್ಯವಂತರು. ಅವರಿಗೆ ಅದರ ಗೊಡವೆಯೇ ಇಲ್ಲ. ಅದು ಸಿದ್ಧವಾಗಿ ಬರುವ ಹೊತ್ತಿಗೆ ಎಲ್ಲವೂ ಸ್ಪಟಿಕದಷ್ಟು ಸ್ಪಷ್ಟ. ಅವೆಲ್ಲವುಗಳ ಹಿಂದೆ ಇರುವುದು ಮಹಾನ್ ಆದರೆ ಬಳಕೆಗೆ ಅತ್ಯಂತ ಸುಲಭವೆನಿಸುವ ಸಂಗತಿಗಳು. ಇಪ್ಪತ್ತೈದು ವರ್ಷಗಳ ಹಿಂದೆ, ಮೊಬೈಲ್ ಫೋನ್ ಮಾರುಕಟ್ಟೆಗೆ ಬಂದಾಗ, ಅದರ ಸ್ಕ್ರೀನ್ ಚಿಕ್ಕದಾಗಿತ್ತು, ದೇಹ ದೊಡ್ಡದಾಗಿತ್ತು. ಅದರ ಬಹುಪಾಲು ಕೀಬೋರ್ಡ್ ಆಕ್ರಮಿಸಿತ್ತು.

ಜತೆಗೆ ಅರ್ಧ ಇಟ್ಟಿಗೆಯಷ್ಟು ಭಾರ! ಆಪಲ್ ಸಂಸ್ಥೆ ಮಾಡಿದ ಮ್ಯಾಜಿಕ್ ಬಹಳ ಸರಳವಾಗಿತ್ತು. ಅದು ಮೊಬೈಲಿನ ಒಂದು ಪಾರ್ಶ್ವ ಅಥವಾ ಮುಖವನ್ನು ಪರದೆಯನ್ನಾಗಿ ಮಾಡಿಬಿಟ್ಟಿತು. ಹೀಗಾಗಿ ಇಮೇಜುಗಳು ಸಹಜವಾಗಿ ದೊಡ್ಡದಾಗಿ ಕಾಣಿಸಲಾರಂಭಿಸಿದವು. ಈ ಪರದೆ ಟಚ್ ಸ್ಕ್ರೀನ್ ಸಹ ಆಗಿತ್ತು. ಅಂದರೆ ಕೀ ಬೋರ್ಡ್ ಮಾಯವಾಗಿತ್ತು. ಕೀ ಬೋರ್ಡ್ ಇಲ್ಲದೆಯೂ ಮೊಬೈಲ್ ಫೋನನ್ನು ರೂಪಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು. (ಈ ತಂತ್ರಜ್ಞಾನವನ್ನು ಮೊದಲು ಜಾರಿಗೊಳಿಸಿದ್ದು ಮೊಟೊರೊಲಾ ಎನ್ನುವವರಿದ್ದಾರೆ, ಇರಲಿ) ಅಲ್ಲಿಯ ತನಕ, ಮೊಬೈಲ್ ಅಂದ್ರೆ ಕೀ ಬೋರ್ಡ್ ಇರಲೇಬೇಕು ಎಂಬ ನಿಯಮಪಾಲನೆ ಜಾರಿಯಲ್ಲಿತ್ತು. ಟಚ್ ಸ್ಕ್ರೀನ್ ತಂತ್ರಜ್ಞಾನ ಒಮ್ಮೆಗೆ ಇನ್ನಿತರ ಹತ್ತಾರು ಸೌಲಭ್ಯ (ಫೀಚರ್)ಗಳನ್ನು ಮೊಬೈಲಿಗೆ ಜೋಡಿಸಿದವು. ಅಲ್ಲಿ ತನಕ ಕೇವಲ ಫೋನ್ ಆಗಿ ಬಳಕೆಯಾಗುತ್ತಿದ್ದ ಆ ಉಪಕರಣ, ಹತ್ತು-ಹಲವು ಬೇರೆ
ಉಪಕರಣಗಳನ್ನು ಆಪೋಶನ ಮಾಡಿ, ಬ್ರಹ್ಮರಾಕ್ಷಸನಂತೆ ಬೆಳೆದುಬಿಟ್ಟಿತು.

‘ಮೊಬೈಲ್ ಫೋನ್’ ಹೋಗಿ ಮೊಬೈಲ್ ಆಯಿತು. ಹತ್ತಾರು ಫೀಚರುಗಳ ಮಧ್ಯೆ ಫೋನ್ ಕೂಡ ಒಂದು ಅಂಶವಾಯಿತು. ಟಿವಿ, ಟೇಪ್
ರೆಕಾರ್ಡರ್‌, ಮ್ಯೂಸಿಕ್ ಪ್ಲೇಯರ್, ಸ್ಪೀಕರ್, ಕಂಪಾಸ್, ಅಲಾರ್ಮ್, ವಾಚ್… ಹೀಗೆ ಅವೆಷ್ಟೋ ಉಪಕರಣಗಳನ್ನು ಇಂದು ಮೊಬೈಲ್ ತಿಂದು ಹಾಕಿಬಿಟ್ಟಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಮತ್ತೇನೂ ಬೇಕಿಲ್ಲ. ಬೇರೆಲ್ಲ ಇದ್ದರೂ ಮೊಬೈಲನ್ನೇ ಹಿಡಿದು ಕುಳಿತುಕೊಳ್ಳುವುದು ಈ ಕಾರಣಕ್ಕೆ. ಟಚ್ ಸ್ಕ್ರೀನ್ ಎಂಬ ಸರಳ ಉದ್ದೇಶದ ಮಾಯಾ ಪರದೆ ಚಮತ್ಕಾರವನ್ನೇ ಮಾಡಿಬಿಟ್ಟಿತು. ಅದೇ ನಂತರ ಐಪ್ಯಾಡ್, ಐವಾಚ್‌ನಂಥ ಗ್ಯಾಜೆಟ್ಟುಗಳ ಹುಟ್ಟಿಗೂ ಕಾರಣವಾಯಿತು.

Believe it or not, I’m a bit clumsy with technology. It’s probably why I’m so excited about the touchscreen & even an idiot can use it! ಎಂಬ ಟೆಕ್ ಗುರು ನಿಕೊಲಸ್ ನಿಗ್ರೋಪಾಂಟೆ ಹೇಳಿದ ಮಾತು ಅಪ್ಪಟ ಸತ್ಯ. ಇಂದು ಟಚ್ ಸ್ಕ್ರೀನ್ ಇಲ್ಲದ ಉಪಕರಣಗಳೇ ಇಲ್ಲ. ಅದರಲ್ಲೂ ಗೃಹಬಳಕೆಯ ಉಪಕರಣಗಳಲ್ಲಿ ಅದು ತೀರಾ ಸಾಮಾನ್ಯ. ಒಂದು ಸರಳ, ಸೃಜನಶೀಲ ಐಡಿಯಾ, ನಮ್ಮ ಬದುಕನ್ನು ಹಸನುಗೊಳಿಸಿದ ರೀತಿ ಮಾತ್ರ ಅನನ್ಯ.

ಒಂದು ಸರಳ ಐಡಿಯಾ ಹೇಗೆ Game Changer ಆಗಬಹುದು ಎಂಬುದಕ್ಕೆ ಇನ್ನೊಂದು ನಿದರ್ಶನವನ್ನು ಹೇಳುತ್ತೇನೆ. ನಿಮಗೆಲ್ಲ ಅಮೆಜಾನ್ ಗೊತ್ತು. ಇಂದು ಅಮೆಜಾನ್ ಅಂದ್ರೆ ಯಾರೂ ಅದೊಂದು ಕಾಡು ಎಂದು ಅಂದುಕೊಳ್ಳುವುದಿಲ್ಲ. ಅದೊಂದು ಜಗತ್ತನ್ನೇ ಆವರಿಸಿರುವ ಬೃಹತ್ ಭವ್ಯ ಆನ್ ಲೈನ್ ಮಹಾಮಳಿಗೆ! ಒಂದು ವಸ್ತು ಅಮೆಜಾನ್‌ನಲ್ಲಿ ಇದೆಯೆಂದರೆ, ಅದು ನಮ್ಮ ಮನೆಯಲ್ಲಿದ್ದಂತೆ ಎಂಬ ಮಾತು ಅಮೆರಿಕದಲ್ಲಿ ಜನಜನಿತ.
ಆರ್ಡರ್ ಮಾಡಿದ ಒಂದೆರಡು ಗಂಟೆಗಳಲ್ಲಿ, ಅರ್ಧ ದಿನದಲ್ಲಿ ಮನೆ ಬಾಗಿಲಿಗೆ ಬಂದಿರುತ್ತದೆ. ಅಮೆಜಾನ್‌ನ ಯಶಸ್ಸು ಇರುವುದು ಅದರ ಬಳಕೆಯಲ್ಲಿ. ಮೂರು ಅಥವಾ ನಾಲ್ಕು ಸ್ಟೆಪ್‌ಗಳಲ್ಲಿ ನಮಗೆ ಬೇಕಾದ ಸಾಮಾನುಗಳನ್ನು ಖರೀದಿಸಬಹುದು.

ಅದರಲ್ಲೂ ನಮ್ಮ ವಿಳಾಸ, ಕ್ರೆಡಿಟ್ ಕಾರ್ಡ್ ವಿವರಗಳನ್ನು ಮೊದಲೇ ಭರ್ತಿ ಮಾಡಿ, ಸಂಗ್ರಹಿಸಿಟ್ಟರೆ, ಇನ್ನೂ ಸುಲಭ ಮತ್ತು ಸುರಕ್ಷಿತ. ಆರಂಭದಲ್ಲಿ ಅಮೆಜಾನ್‌ನಲ್ಲಿ ಸಾಮಾನು ಖರೀದಿಸುವಾಗ ಒಂದೇ ಆಯ್ಕೆ (option) ಇತ್ತು. ಅದೇನೆಂದರೆ, Add To Cart. ನಮಗೆ ಬೇಕಾದ ಸಾಮಾನು, ವಸ್ತುಗಳನ್ನು ಆಯ್ಕೆ ಮಾಡಿ, Cart ಗೆ ಹಾಕಬೇಕಿತ್ತು. ನಂತರ ಒಂದೇ ಸಲ ಅವನ್ನು ಖರೀದಿಸಬಹುದಿತ್ತು. ಉದಾಹರಣೆಗೆ, ನೀವು ೧೦-೧೨
ಸಾಮಾನುಗಳನ್ನು ಖರೀದಿಸಿದಿರಿ ಎಂದಿಟ್ಟುಕೊಳ್ಳಿ. ಅವುಗಳ ಬೆಲೆ ಹತ್ತು ಸಾವಿರ ರುಪಾಯಿ ಆಯಿತೆನ್ನಿ. ಆಗ ನಿಮಗೆ ಅದು ದೊಡ್ಡ ಮೊತ್ತ ಎಂದೆ ನಿಸಬಹುದು. ಕಾರ್ಟಿನಲ್ಲಿ ಹಾಕುವಾಗ ಬೇಕು ಎಂದೆನಿಸಿದ್ದು, ಖರೀದಿಸುವಾಗ ಬೇಡ ಎಂದೆನಿಸಬಹುದು.

ಒಂದೇ ಸಲ ಹತ್ತಾರು ಐಟೆಮ್ಸ ಖರೀದಿಸುವಾಗ, ಸಹಜವಾಗಿ ಹಣ ಜಾಸ್ತಿಯಾಯ್ತು ಎಂಬ ಭಾವನೆ ಬರುವುದು ಸಹಜ. ಹೀಗಾಗಿ ಹತ್ತು ಐಟೆಮ್ ಗಳನ್ನು ಕಾರ್ಟಿಗೆ ಹಾಕಿದವರು, ಖರೀದಿಸುವ ಹೊತ್ತಿಗೆ ಐದೋ, ಆರೋ ಐಟೆಮ್‌ಗಳನ್ನು ಖರೀದಿಸುತ್ತಿದ್ದರು. ಹೀಗಾಗಿ ಅಮೆಜಾನ್ ವಹಿವಾಟಿನಲ್ಲಿ ಹೇಳಿಕೊಳ್ಳುವಂಥ ನೆಗೆತ ಕಂಡಿರಲಿಲ್ಲ. ಮೂರ್ನಾಲ್ಕು ವರ್ಷಗಳಾದರೂ ವಹಿವಾಟು ಒಂದೇ ಗತಿಯಲ್ಲಿತ್ತು. ಗ್ರಾಹಕರ ಕೊಳ್ಳುವ ಮನೋಭಾವದಲ್ಲಿ ಗಮನಾರ್ಹ ಬದಲಾವಣೆ ಕಂಡು ಬರಲಿಲ್ಲ. ಅದಾದ ಬಳಿಕ, ಅದ್ಯಾವನಿಗೆ ಆ ಐಡಿಯಾ ಹೊಳೆಯಿತೋ ಗೊತ್ತಿಲ್ಲ. ಅಮೆಜಾನ್ Add To Cart ಆಯ್ಕೆಯ ಜತೆಗೆ, Buy Now ಎಂಬ ಮತ್ತೊಂದು ಆಯ್ಕೆಯನ್ನು ಸೇರಿಸಿತು.

ಅಂದರೆ ನಿಮಗೆ ಬೇಕೆನಿಸಿದ ಸಾಮಾನು, ವಸ್ತು, ಉಪಕರಣವನ್ನು Add To Cart ಗೆ ಬದಲು ತಕ್ಷಣ ಖರೀದಿಸುವ ಆಯ್ಕೆಯದು. ಅದೊಂದು
ಆಯ್ಕೆಯನ್ನು ನೀಡಿದ್ದೇ ಸೈ, ಅಮೆಜಾನ್ ಹಣೆಬರಹವೇ ಬದಲಾಗಿ ಹೋಯಿತು! ಅದರ ವಹಿವಾಟು ‘ಸುಂಯ’ ಎಂದು ನಭೋಮಂಡಲಕ್ಕೆ ನೆಗೆದು ಬಿಟ್ಟಿತು. ಮನುಷ್ಯನ ಸ್ವಭಾವವೇ ಹಾಗೆ. ಈಗ ಬೇಕೆನಿಸಿದ್ದು ಇನ್ನು ಕಾಲು ಗಂಟೆಯ ಬಳಿಕ ಬೇಡ ಎನಿಸುತ್ತದೆ. Buy Now ಎಂಬ ಆಯ್ಕೆಯನ್ನು ಸೇರಿಸಿದ್ದರ ಹಿಂದೆ ಇರುವ ಟ್ರಿಕ್ ಇದೇ! Buy Now ಎಂಬ ಆಯ್ಕೆ ನೀಡಿದ ಬಳಿಕ ಸಾಮಾನುಗಳು ಶೀಘ್ರವಾಗಿ ಖಾಲಿಯಾಗತೊಡಗಿಡವು.
ಅಷ್ಟೇ ಅಲ್ಲ, Add To Cart ನಲ್ಲಿಟ್ಟ ಸಾಮಾನುಗಳನ್ನು ಸಹ ಬೇಗ ಖರೀದಿಸಲಾರಂಭಿಸಿದರು.

ಆqs ಘೆಟಡಿ ಮೂಲಕ ಒಂದೆರಡು ಸಾಮಾನುಗಳನ್ನು ಖರೀದಿಸುವ ಬದಲು, Add To Cart ನಲ್ಲಿ ಹತ್ತಾರು ಸಾಮಾನುಗಳನ್ನು ಹಾಕಿ, ಇಂದೇ ಖರೀದಿಸುವ ಜಾಯಮಾನ ಆರಂಭವಾಯಿತು. ಒಂದು ಸಾಮಾನು ಡೆಲಿವರಿ ಮಾಡಲು ಬರುವ ಬದಲು, ಹತ್ತಾರನ್ನೂ ಒಂದೇ ಸಲ ಡೆಲಿವರಿ ಮಾಡಬಹುದು ಎಂಬ ಭಾವನೆ ಗ್ರಾಹಕನ ಮನಸ್ಸಿನಲ್ಲಿ ಮೂಡುತ್ತಿದ್ದುದೇ ಅದಕ್ಕೆ ಕಾರಣವಾಗಿತ್ತು. Buy Now ಆಯ್ಕೆ ಆರಂಭಿಸಿದ ಬಳಿಕ, Add To Cart ಭರ್ತಿ ಆಗಲಾರಂಭಿಸಿತು. ಇವೆರಡೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಾರಂಭಿಸಿದವು.

ಪರಿಣಾಮ, ವಹಿವಾಟಿನಲ್ಲಿ ಅಗಾಧ ಜಿಗಿತ! ಒಂದು ಸಣ್ಣ ಐಡಿಯಾ, ಜಗತ್ತಿನೆಡೆ ಇರುವ ಗ್ರಾಹಕರ ಕೊಳ್ಳುವ ಸಂಸ್ಕೃತಿಯನ್ನೇ ಬದಲಿಸಿಬಿಟ್ಟಿತು. ಒಂದೇ ವರ್ಷ, ಎಂಟು ವರ್ಷದ ವಹಿವಾಟನ್ನು ಮಾಡಿಬಿಟ್ಟಿತು! ಆqs ಘೆಟಡಿ ಆಯ್ಕೆಯಿಂದಾಗಿ, ಅಮೆಜಾನ್ ನಲ್ಲಿ ಒಂದೇ ದಿನ ಐದಕ್ಕಿಂತ ಹೆಚ್ಚು ಸಲ ತಮಗೆ ಬೇಕಾದ ಸಾಮಾನುಗಳನ್ನು ಖರೀದಿಸುವವರಿzರೆ. ಕೆಲವರಿಗೆ ಇದೊಂದು ವ್ಯಸನವಾಗಿಬಿಟ್ಟಿದೆ. ಬೇಕಾದುದನ್ನು ತಕ್ಷಣ ಖರೀದಿಸಲು
ಅಮೆಜಾನ್ ಪಕ್ಕದ ಮನೆ ಅಂಗಡಿಯಂತಾಗಿದೆ.

ಯಾವತ್ತೂ ಅಸಾಮಾನ್ಯ ಎಂದೆನಿಸಿಕೊಳ್ಳುವುದರ ಮೂಲ ಕಲ್ಪನೆ ಸಾಮಾನ್ಯವಾಗಿರುತ್ತದೆ. ರೂಬಿಕ್ ಕ್ಯೂಬ್ ನಲ್ಲಿ ಒಂದೇ ಬಣ್ಣ ಇರುವ ಮೈಯನ್ನು ಒಂದೆಡೆ ಜೋಡಿಸುವುದು ಕಷ್ಟ. ಆದರೆ ಆ ರೂಬಿಕ್ ಕ್ಯೂಬ್ ಇರುವುದೇ ಹಾಗೆ ಜೋಡಿಸಲು ಎಂಬುದು ತೀರಾ ಸರಳ. ನೂರಾರು ಆಫ್, ಹತ್ತಾರು ಗ್ಯಾಜೆಟ್ಟುಗಳ ಬಳಕೆಯಿಂದಾಗಿ, ಪಾಸ್ ವಾರ್ಡ್ ಬಳಕೆ ಜಾಸ್ತಿಯಾದಂತೆಲ್ಲ, ಅದನ್ನು ಮರೆಯುವವರ ಸಂಖ್ಯೆಯೂ ಜಾಸ್ತಿಯಾಯಿತು.

ಮೊದಲಾಗಿದ್ದರೆ ಪಾಸ್ ವಾರ್ಡ್ ಮರೆತು ಹೋದರೆ, ಕೀಲಿ ಕಳೆದು ಹೋದಾಗ ಬಾಗಿಲು ಒಡೆಯುವಂತೆ, ಆ ಉಪಕರಣವೇ ಅನುಪಯುಕ್ತವೆನಿಸಿ ಬಿಡುವುದೋ ಎಂಬ ಆತಂಕವಾಗುತ್ತಿತ್ತು. ಅದ್ಯಾವನೋ ಒಟಿಪಿ (One Time Password) ಎಂಬ ಐಡಿಯಾ ಕೊಟ್ಟ! ಇಂದು ಒಟಿಪಿ ಹಣ ಸಂದಾಯ, ವರ್ಗಾವಣೆಯನ್ನು ಸುರಕ್ಷಿತವಾಗಿಸಿದೆ. ಅದ್ಯಾವನೋ ಏನನ್ನೋ ಮಾಡಲು ಹೋಗಿ, ಕೈಗೆ ಮೆತ್ತಿಕೊಳ್ಳದ, ಕಿತ್ತು ಮತ್ತೆ ಅಂಟಿಸ ಬಹುದಾದ, ಅಂಟನ್ನು ಕಂಡು ಹಿಡಿದುಬಿಟ್ಟ! ಅದನ್ನು ನೋಡಿದ ಮತ್ತೊಬ್ಬ ’ಪೋಸ್ಟ್ -ಇಟ್’ ಸ್ಟಿಕ್ಕರ್ ಕಂಡುಹಿಡಿದ. ಅದನ್ನು 3M ಎಂಬ ಕಂಪನಿ ಸಾವಿರಾರು ಕೋಟಿ ರುಪಾಯಿ ಕೊಟ್ಟು, ಆ ಅಂಟನ್ನು ತಯಾರಿಸುವ ಪೇಟೆಂಟ್ ಖರೀದಿಸಿತು.

ಅದನ್ನು ಭಾರತದಲ್ಲಿ ಮಾರಾಟ ಮಾಡುವ ಗುತ್ತಿಗೆಯನ್ನು ಬಿರ್ಲಾ ಕಂಪನಿ ಪಡೆಯಿತು. ಇಂದು ಅಂಟಿಯೂ ಅಂಟದ, ಕಿತ್ತರೂ ಮತ್ತೆ ಅಂಟುವ ಆ ಪೋಸ್ಟ್-ಇಟ್ ಎಂಬ ಸ್ಟಿಕ್ಕರ್ ಭಾರತದಂದೇ 800 ಕೋಟಿ ರುಪಾಯಿ ವಹಿವಾಟು ಮಾಡುತ್ತದೆ. ಇನ್ನು ಜಗತ್ತಿನೆಡೆ ಇದರ ವಹಿವಾಟಿನ ಪ್ರಮಾಣ ಏನಿದ್ದಿರಬಹುದು! ಅಂಟಿಸು ಮತ್ತು ಕೀಳುವ (Press and Peel) ಅಂಟು ಕಂಡುಹಿಡಿದವನಿಗೆ ಪೋಸ್ಟ್-ಇಟ್ ಎಂಬ ಸ್ಟಿಕ್ಕರನ್ನು ಮಾಡಬಹುದು ಎಂಬ ಐಡಿಯಾ ಇರಲಿಲ್ಲ. ಆದರೆ ಆ ಅಂಟನ್ನು ನೋಡಿದವನ ತಲೆಯಲ್ಲಿ ಇಂಥದೊಂದು ವಸ್ತುವನ್ನು ಸಿದ್ಧಪಡಿಸಿ ಮಾರಾಟ ಮಾಡಬಹುದು ಎಂಬ
ಐಡಿಯಾ ಹೊಳೆಯಿತು. ನೀವು ಬಹಳ ಗಹನವಾದ ವಿಚಾರದಲ್ಲಿ ಮಗ್ನರಾಗಬೇಕಿಲ್ಲ, ಈ ಜಗತ್ತನ್ನು ಆಳುತ್ತಿರುವುದು ಸರಳ ಆಲೋಚನೆಗಳು. ಅದು ಅರಿವಾದರೆ, ನಮ್ಮ ಚಿಂತನೆಯೇ ಬದಲಾಗುತ್ತದೆ!