Friday, 20th September 2024

ವಿಪರೀತದ ಹಿಂಸೆ ತಡೆಯಲು ಹೊಸ ಕ್ರಮಗಳು ಬೇಕಿವೆ

ಕಳಕಳಿ

ಪ್ರೊ.ಆರ್‌.ಜಿ.ಹೆಗಡೆ

ಮಾನವರ ಮನಸ್ಸನ್ನು ಪೂರ್ತಿಯಾಗಿ ಅರ್ಥೈಸಲು, ‘ಇದು ಹೀಗೆಯೇ’ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ಕಂಡು ಹಿಡಿದವನು ೨೦ನೇ ಶತಮಾನದ ಮನಶ್ಶಾಸಜ್ಞ ಸಿಗ್ಮಂಡ್ -ಯ್ಡ್. ಮನುಷ್ಯರಿಗೆ ಕನಸುಗಳು ಬೀಳುವುದೇಕೆ ಎಂಬ ಸಂಶೋಧನೆಯಲ್ಲಿ ತೊಡಗಿದ್ದ ಅವನಿಗೆ, ಮನಸ್ಸಿಗೆ ಸಂಬಂಧಿಸಿದ ಆಳವಾದ ಹಲವು ವಿಷಯಗಳು ಅಕಸ್ಮಾತ್ತಾಗಿ ಗಮನಕ್ಕೆ ಬಂದವು. ಅವುಗಳಲ್ಲಿ ಮುಖ್ಯವಾದದ್ದು: ಮಾನವ
ಮನಸ್ಸಿನಲ್ಲಿ ನಮಗೆ ಅರ್ಥವಾಗದಿರುವ ಒಂದು ‘ಕಪ್ಪು ಭೂಖಂಡ’ವಿದೆ.

ಅಂದರೆ ನಮ್ಮ ಅರಿವಿಗೆ ಮೀರಿದ ಒಂದು ಕಾರ್ಯಕ್ಷೇತ್ರವಿದೆ. ಅದು ಏನು ಮಾಡುತ್ತದೆ, ಅದರ ಕಾರ್ಯವ್ಯಾಪ್ತಿಯೇನು, ವೈಶಾಲ್ಯವೇನು, ಮನುಷ್ಯನ ಮನಸ್ಸು ಮತ್ತು ಚಟುವಟಿಕೆಗಳ ಮೇಲೆ ಅದು ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಬಹುಶಃ ಅದು ಮನುಷ್ಯನನ್ನು ಎಷ್ಟು ಹೊತ್ತಿಗೆ, ಹೇಗೆ ನಡೆದುಕೊಳ್ಳಲು ಪ್ರೇರೇಪಿಸುತ್ತದೆ ಎಂಬುದನ್ನು ಹೇಳುವಂತಿಲ್ಲ. ಹಾಗಾಗಿ ಮನುಷ್ಯನ ‘ಮೂಲಗುಣ’ ಯಾವುದು ಎಂದು ಹೇಳುವಂತಿಲ್ಲ. ಪ್ರಾಣಿಗಳ ಪ್ರಪಂಚಕ್ಕೆ ಬಂದರೆ, ಆಯಾ ಪ್ರಾಣಿಜಾತಿಗೆ ವಿಶಿಷ್ಟವಾದ, ಸ್ಪಷ್ಟವಾದ, ಖಂಡಿತವಾದ ಗುಣಗಳಿರುತ್ತವೆ. ಉದಾಹರಣೆಗೆ ಹುಲಿ. ಈ ಪ್ರಾಣಿಯು ಯಾವಾಗಲೂ ಹಾಗೆಯೇ ವರ್ತಿಸುತ್ತದೆ. ನರಿ ನರಿಯೇ, ಅದರ ವ್ಯವಹಾರ ಬದಲಾಗುವುದಿಲ್ಲ. ಆದರೆ ಮನುಷ್ಯನನ್ನು ‘ಹೀಗೆಯೇ’ ಎಂದು ಹೇಳಲಾಗುವುದಿಲ್ಲ.

ಯಾಕೋ, ಯಾವುದೋ ಒಂದು ಕ್ಷಣದಲ್ಲಿ ಅಥವಾ ಒತ್ತಡದಲ್ಲಿ ಆತನ/ಆಕೆಯ ಮನಸ್ಸು ಹೇಗೆ ಬೇಕಾದರೂ ವರ್ತಿಸಬಹುದು. ಆತ ಪರಮಕ್ರೂರಿ ಅಥವಾ ನೀಚನಾಗಬಹುದು ಅಥವಾ ಮಹಾನ್ ಕರುಣಾಳುವಾಗಬಹುದು. ಏನೂ ಆಗಬಹುದು. ಹಾಗಿರುವುದರಿಂದ ಮಾನವ ಮಿದುಳಿನ ಸ್ವರೂಪ ವನ್ನು ಖಂಡತುಂಡವಾಗಿ ವಿವರಿಸಲಾಗುವುದಿಲ್ಲ.  ಅಲ್ಲದೆ, ಮನುಷ್ಯನಿಗೆ ಆ ರೀತಿಯ ಬುದ್ಧಿಯನ್ನು ಮಾನವ ಮಿದುಳಿನೊಳಗಿನ ಯಾವ ಅಂಶ ನೀಡುತ್ತದೆ ಅಥವಾ ಪ್ರಚೋದಿಸುತ್ತದೆ ಗೊತ್ತಿಲ್ಲ.

ಈ ಎಲ್ಲ ಸಂಗತಿಗಳು ಫ್ರಾಯ್ಡ್‌ಗೆ ಅರ್ಥವಾಗಿಹೋದವು. ಆತನ ವಾದದ ಅರ್ಥವೆಂದರೆ, ನಮ್ಮ ಮನಸ್ಸು ಹೇಗಿದೆ ಎನ್ನುವುದು ಸ್ವತಃ ನಮಗೂ ಗೊತ್ತಿಲ್ಲ. ಹಾಗಾಗಿ ಮನುಷ್ಯರನ್ನು ‘ಹೀರೋ’ ಅಥವಾ ‘ವಿಲನ್’, ‘ಒಳ್ಳೆಯವರು’ ಅಥವಾ ‘ಕೆಟ್ಟವರು’ ಹೀಗೆ ಕಪ್ಪು-ಬಿಳುಪು ವಿಭಾಗಗಳಲ್ಲಿ ವಿಂಗಡಿಸಲು ಸಾಧ್ಯವಿಲ್ಲ. ಹೀರೋ ಆಗಿ ಕಾಣಿಸುವವನೇ ವಿಲನ್ ಅಥವಾ ಜೋಕರ್ ಕೂಡ ಆಗಿರಲು ಸಾಧ್ಯವಿದೆ. ಸಂತನೇ ಮೃಗೀಯವಾಗಿಯೂ ಇರಬಹುದು. ಸಾಮಾನ್ಯರಂತೆ ಕಾಣುವ ಮನುಷ್ಯನೊಳಗೆ ರಾಕ್ಷಸತ್ವ ಎದ್ದು ನಿಲ್ಲಬಹುದು. ಮನುಷ್ಯ ವ್ಯವಹಾರದಲ್ಲಿ‘ಸಾಮಾನ್ಯ’ ಮತ್ತು ‘ಅಸಾಮಾನ್ಯ’ ಎನ್ನುವ  ವರ್ಗೀಕರಣ ಅಸಾಧ್ಯ. ‘ಸಾಮಾನ್ಯ’ವೇ ಅಸಾಮಾನ್ಯ ಮತ್ತು ‘ಅಸಾಮಾನ್ಯ’ವೇ ಸಾಮಾನ್ಯ ಕೂಡ ಆಗಬಹುದು.

ಹೀಗೆ ಫ್ರಾಯ್ಡ್, ನಾವು ಮನುಷ್ಯರನ್ನು ನೋಡುವ, ಗ್ರಹಿಸುವ  ವಿಧಾನವನ್ನೇ ತಲೆಕೆಳಗೆ ಮಾಡಿದ.ಆತ ಬಂದು ಹೋದ ನಂತರ ಪಾಶ್ಚಿಮಾತ್ಯ ಕಾದಂಬರಿ ಗಳು, ನಾಟಕಗಳು, ಸಿನಿಮಾಗಳಲ್ಲಿ ಮನುಷ್ಯ ಪಾತ್ರಗಳನ್ನು ಗ್ರಹಿಸುವ, ಸೃಷ್ಟಿಸುವ ಪರಿಯೇ ಬದಲಾಗಿಹೋಯಿತು. ಪ್ರಸಿದ್ಧ ಕಾದಂಬರಿ ಕಾರ ಬರ್ನಾಡ್ ಶಾ, ಪರಂಪರಾಗತವಾಗಿ ಇಂಗ್ಲಿಷ್ ಸಾಹಿತ್ಯದಲ್ಲಿ ಬರುತ್ತಿದ್ದ ‘ಆದರ್ಶ’, ‘ರೊಮ್ಯಾಂಟಿಕ್’ ಪಾತ್ರಗಳನ್ನೆಲ್ಲ, ‘ಒಳ್ಳೆಯ’ ಮನುಷ್ಯರನ್ನೆಲ್ಲ ಗೇಲಿಮಾಡಿದ. ಮನುಷ್ಯ ವ್ಯವಹಾರದಲ್ಲಿ ಆದರ್ಶ ಎನ್ನುವುದು ಆಷಾಢಭೂತಿತನ ಎಂದು ಹೇಳಿದ.

ಫ್ರಾಯ್ಡ್‌ನ ವಾದವನ್ನು ನಾವು ಸಂಪೂರ್ಣವಾಗಿ ಒಪ್ಪಲಿ ಅಥವಾ ಬಿಡಲಿ, ಅವನ ಮಾತಿನಲ್ಲಿ ಸತ್ಯದ ಅಂಶಗಳಿವೆ ಎಂಬುದು ನಮಗೆ ಬಹಳ ಸಂದರ್ಭ ಗಳಲ್ಲಿ ನೋವಿನಿಂದ ಅರಿವಾಗಿಹೋಗಿದೆ. ಉದಾಹರಣೆಗೆ, ಕೆಲ ವರ್ಷಗಳ ಹಿಂದೆ ಅಮೆರಿಕ ಮತ್ತು ಇರಾಕ್ ನಡುವೆ ನಡೆದ ಯುದ್ಧದಲ್ಲಿ ಸೆರೆ ಸಿಕ್ಕ ಸೈನಿಕರ ಜತೆ ಅತಿಘೋರ, ಅಮಾನವೀಯ, ಬಾಯಿಬಿಟ್ಟು ಹೇಳಬಾರದ ರೀತಿಯ ವರ್ತನೆಗಳು ನಡೆದವು. ಅಂದರೆ ಅವು ಸಾಮಾನ್ಯವಾಗಿ ಇಂಥ
ಸಂದರ್ಭಗಳಲ್ಲಿ ನಡೆಯುವ ಹಿಂಸೆಗಳನ್ನೂ ಮೀರಿದ ವಿಕೃತಹಿಂಸೆಗಳು. ಕೆಲವು ಇರಾಕಿಸೈನಿಕರನ್ನು ಅಮೆರಿಕದ ‘ಗುವಾಂಟಾನಾಮೋ ಬೇ’ ಎನ್ನುವ ಜೈಲಿಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಲಾಯಿತು. ಅದು ಕಲ್ಪನೆಗೂ ನಿಲುಕದ ಚಿತ್ರಹಿಂಸೆ.

ಅದರ ವಿವರಗಳು ಹೊರಬರುತ್ತಿದ್ದಂತೆ ಜಗತ್ತು ಬೆಚ್ಚಿ ಬಿತ್ತು. ತಾನು ಪ್ರಜಾಪ್ರಭುತ್ವದ ಮತ್ತು ಮಾನವೀಯ ಮೌಲ್ಯಗಳಿಗೆ ಬದ್ಧವಾದ ದೇಶ ಎಂದು ಹೇಳಿಕೊಳ್ಳುತ್ತಿದ್ದ ಅಮೆರಿಕಕ್ಕೆ ಮುಜುಗರವಾಯಿತು. ಅದು ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಚಿತ್ರಹಿಂಸೆ ನಡೆಸಿದ್ದ ಸೈನಿಕರನ್ನು (ಅವರೆಲ್ಲ ೨೫-೩೦ ವರ್ಷ ವಯಸ್ಸಿನವರು; ಅವರಲ್ಲಿ ಕೆಲವರು ಹೆಣ್ಣು ಮಕ್ಕಳೂ ಇದ್ದರು) ಮನಶ್ಶಾಸೀಯ ಪರೀಕ್ಷೆಗೆ ಒಳಪಡಿಸಿತು. ಅವರೆಲ್ಲಾ
‘ನಾರ್ಮಲ್’ ಆಗಿದ್ದಾರೆಯೇ ಅಥವಾ ಹುಚ್ಚರಾಗಿಬಿಟ್ಟಿದ್ದಾರೆಯೇ ಎಂಬುದನ್ನು ಕಂಡುಕೊಳ್ಳುವುದು ಇದರ ಉದ್ದೇಶವಾಗಿತ್ತು. ಆ ಪರೀಕ್ಷೆಯ
ಫಲಿತಾಂಶಗಳು ಬಂದ ಮೇಲೆ ಜಗತ್ತು ಇನ್ನೊಮ್ಮೆ ಬೆಚ್ಚಿ ಬಿತ್ತು; ಏಕೆಂದರೆ, ಅಂಥ ಹೀನಕೃತ್ಯ ನಡೆಸಿದ ಸೈನಿಕರೆಲ್ಲರೂ ಮಾನಸಿಕವಾಗಿ ‘ಸರಿಯಾಗಿಯೇ’ ಇದ್ದರು. ಇದರರ್ಥ, ಮಾನಸಿಕವಾಗಿ ಸರಿಯಾಗಿರುವವರು ಕೂಡ ಘೋರ, ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡುಬಿಡಬಹುದು.

ಬಹುಶಃ ಈ ವಿಷಯವನ್ನು -ಯ್ಡ್ ಹೇಳುವುದಕ್ಕೂ  ಮೊದಲೇ ಅಂದಾಜಿಸಿದ್ದ ನಾಗರಿಕತೆಗಳು ಮನುಷ್ಯನ ಕ್ರೌರ್ಯಕ್ಕೆ ಮಿತಿ ಹಾಕಲು, ಸಂಕೋಲೆ ತೊಡಿಸಲು ಹಲವು ವಿಧಾನಗಳನ್ನು ಹುಡುಕಿದ್ದವು. ಅದಕ್ಕಾಗಿಯೇ ಅವು ಸಮಾಜ, ಕುಟುಂಬ, ಧರ್ಮ, ಪ್ರಜಾಪ್ರಭುತ್ವ, ವಿವಾಹ ಇತ್ಯಾದಿ ಕಟ್ಟಳೆ ಗಳನ್ನು ಸೃಷ್ಟಿಸಿಟ್ಟಿದ್ದು. ಶ್ರೇಷ್ಠ ಮಾನವ ಮೌಲ್ಯಗಳನ್ನು ಸಾರುವ ಮಹಾಕಾವ್ಯಗಳು, ಧಾರ್ಮಿಕ ಪಠ್ಯಗಳು ಇತ್ಯಾದಿ ‘ಕಥಾನಕಗಳನ್ನು’  ನರೇಟಿವ್) ಮತ್ತು ‘ಸಂಸ್ಕೃತಿ’ ಇತ್ಯಾದಿ ನೈತಿಕ ಪರಿಽಗಳನ್ನು ಸೃಷ್ಟಿಸಿ ಮನುಷ್ಯರ ಮನಸ್ಸನ್ನು ಹತೋಟಿಯಲ್ಲಿಡಲು ಅವು ಪ್ರಯತ್ನಿಸಿದ್ದವು. ಎಲ್ಲ ನಾಗರಿಕತೆಗಳೂ ಹೀಗೆ ಮಾಡಿವೆ. ಮನುಷ್ಯರ ನಡವಳಿಕೆಯನ್ನು ಹತೋಟಿಯಲ್ಲಿಡುವುದರಲ್ಲಿ ಸಾಂಸ್ಕೃತಿಕ ಕಾನೂನುಗಳು ನಾಗರಿಕ ಕಾನೂನುಗಳಿಗಿಂತಲೂ ಹೆಚ್ಚು ಯಶಸ್ವಿಯಾಗಿವೆ ಎಂದೇ ಹೇಳಬೇಕು.

ಹಾಗೆಯೇ ವಿಪರೀತದ ಮಾನವ ಕ್ರೌರ್ಯವನ್ನು ತಡೆಹಿಡಿಯುವ ಸಲುವಾಗಿ, ಹಿಂಸೆಯ ಮನಸ್ಥಿತಿಯವರಲ್ಲಿ ಭಯ ಹುಟ್ಟಿಸುವುದಕ್ಕಾಗಿ, ಸಮಾಜವನ್ನು ರಕ್ಷಿಸುವುದಕ್ಕಾಗಿ ನಾಗರಿಕತೆಗಳು ಇನ್ನೂ ಹೆಚ್ಚು ಕ್ರೌರ್ಯದ ಕಾನೂನುಗಳನ್ನೂ ಸೃಷ್ಟಿಸಿದ್ದವು. ನಮಗೆ ಗೊತ್ತಿರುವ ಹಾಗೆ ಈಜಿಪ್ಟ್‌ನ ದೊರೆ ಹಮ್ಮುರಾ ಬಿಯ ಕಾಲದಲ್ಲಿ ಕಣ್ಣಿಗೆ ಕಣ್ಣು, ಕಾಲಿಗೆ ಕಾಲು, ತಲೆಗೆ ತಲೆ ತೆಗೆಯುವುದು ಇಂಥ ಕಾನೂನಿತ್ತು. ಅಪರಾಧಿಗಳನ್ನು ಸಾರ್ವಜನಿಕವಾಗಿ ನೇಣುಹಾಕುವ ಶಿಕ್ಷೆ ಇಂದೂ ಕೆಲವು ದೇಶಗಳಲ್ಲಿ ಜಾರಿಯಲ್ಲಿದೆ. ಅದು ಇರಲಿ, ಇಂದಿನ ಸಾಮಾಜಿಕ ಸ್ಥಿತಿಯಲ್ಲಿ ‘ವಿಚಿತ್ರ’, ‘ಅಮಾನವೀಯ’ ಹಿಂಸೆ ಹೆಚ್ಚುತ್ತಿರುವಂತೆ ಅನ್ನಿಸುತ್ತಿರುವ ಈ ದಿನಗಳಲ್ಲಿ, ಅಂಥ ಹಿಂಸೆಯನ್ನು ಹತೋಟಿಯಲ್ಲಿಡಲು ನಾಗರಿಕ ಸಮಾಜ ಹೊಸದಾಗಿ ಏನು ಮಾಡಬಹುದು ಎನ್ನುವುದು ಈಗ ನಮ್ಮ ಮುಂದೆ ಇರುವ ಪ್ರಶ್ನೆ. ಅಂಥ ಅತಿರೇಕದ ಕ್ರೌರ್ಯದ ಘಟನೆಗಳನ್ನು ಇತ್ತೀಚೆಗೆ ಪದೇಪದೆ ನೋಡುತ್ತಿದ್ದೇವೆ.

ತಾಯಿಯೇ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಅಡ್ಡಾಡುವುದು ಇತ್ಯಾದಿ ಇದಕ್ಕೆ ಉದಾಹರಣೆ (ಯುದ್ಧಗಳಿಗೆ ಸಂಬಂಧಿಸಿದ ಹಿಂಸೆಗಳನ್ನು ಬಿಟ್ಟುಬಿಡೋಣ; ಅದು ಬೇರೆಯೇ ಚರ್ಚೆ). ಸಮಾಜದೊಳಗೆ ನಡೆಯುತ್ತಿರುವ ಇಂಥ ರಾಕ್ಷಸೀಯ ‘ನಾಗರಿಕ’ ಹಿಂಸೆಗಳನ್ನು ಪೂರ್ತಿ
ಇಲ್ಲವಾಗಿಸಲು ಸಾಧ್ಯವಿಲ್ಲದಿದ್ದರೂ ಕಡಿಮೆಗೊಳಿಸುವುದು ಹೇಗೆ ಎನ್ನುವುದು ಇಲ್ಲಿನ ಪ್ರಶ್ನೆ. ಉತ್ತರವಾಗಿ ಕೆಲವು ವಿಷಯಗಳನ್ನು ಪರಿಶೀಲಿಸಬಹುದು. ಒಂದನೆಯದು, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ, ಅಂದರೆ ಯಾವುದೇ ಸಂಸ್ಕೃತಿಯ ಕುರಿತಾಗಿ ಗೌರವವನ್ನು ಹುಟ್ಟಿಸಿ, ಮಕ್ಕಳನ್ನು ಆ ಸಂಸ್ಕೃತಿಯ ಭಾಗವಾಗಿಸಬಲ್ಲ (ಬೇರೊಂದು ಸಂಸ್ಕೃತಿ ಯನ್ನು ದೂಷಿಸದ) ಶಿಕ್ಷಣಕ್ಕೆ, ವಿಶೇಷವಾಗಿ ಪ್ರಾಥಮಿಕ- ಮಾಧ್ಯಮಿಕ ಶಿಕ್ಷಣಕ್ಕೆ ಕ್ರೌರ್ಯದ ಮನಸ್ಥಿತಿ ಬೆಳೆಯದಂತೆ ಮಾಡುವ ಶಕ್ತಿ ಇದೆ.

ಆದರೆ ವಿಷಾದವೆಂದರೆ, ಸಂಸ್ಕೃತಿಯ ಕುರಿತಾದ ‘ಎಡ-ಬಲ’ಗಳ ನಡುವಿನ ಸಂಘರ್ಷದಿಂದಾಗಿ ‘ಸಂಸ್ಕೃತಿಯ ರಗಳೆಯೇ ಬೇಡ’ ಎಂದು ತೀರ್ಮಾನಿ
ಸಿರುವ ಇಂದಿನ ಬಹುತೇಕ ಅಧ್ಯಯನ ಮಂಡಳಿಗಳು ತಯಾರಿಸುತ್ತಿರುವ ಪಠ್ಯಗಳು ಸಾಂಸ್ಕೃತಿಕವಾಗಿ ‘ನ್ಯೂಟ್ರ ಲ್’ ಆದವು. ಅಂದರೆ, ಸಂಸ್ಕೃತಿಯ ಕುರಿತು ಮೌನವಾದವು. ನಮ್ಮ ಇತಿಹಾಸ ಮತ್ತು ಭಾಷಾ ಪುಸ್ತಕಗಳು ನಿಜವಾಗಿ ಸಾಂಸ್ಕೃತಿಕತೆಯ ಪ್ರಸರಣಾ ಕೇಂದ್ರಗಳು. ಹಾಗೆಯೇ ಕಲಾಪ್ರಕಾರಗಳು, ದೃಶ್ಯಮಾಧ್ಯಮಗಳು ಕೂಡ. ಅವು ಹೇಗೆ ಸಂಸ್ಕೃತಿಯ ಪಾಠಗಳಾಗಿ ಯಶಸ್ವಿಯಾಗಬಲ್ಲವು, ಯಶಸ್ವಿಯಾಗಿದ್ದವು ಎನ್ನುವುದನ್ನು ಗಮನಿಸಲು ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು  ನೋಡಬೇಕು. ಅತಿಶ್ರೇಷ್ಠ ಉದಾಹರಣೆಗಳು ಅವು.

ಯಕ್ಷಗಾನಕ್ಕೂ ಅಂಥ ಶಕ್ತಿಯಿದೆ. ಜತೆಗೇ ಬಹುಶಃ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಕೂಡ ಈ ದಿಸೆಯಲ್ಲಿ ಮಹತ್ವದ ಕಾರ್ಯ ನಿರ್ವಹಿಸಬಹುದು. ಹೇಗೆಂದರೆ ಅವು ಮಾನಸಿಕವಾಗಿ ಅಸ್ಥಿರವಾಗಿರುವ ವಿದ್ಯಾರ್ಥಿಗಳನ್ನು ಗಮನಿಸಬಹುದು ಮತ್ತು ಪ್ರತಿಯೊಂದು ಶಾಲೆಯೂ ತಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ವೃತ್ತಿನಿರತ ಕೌನ್ಸೆಲಿಂಗ್ ನೀಡಬಹುದು. ಇದು ಸಾಧ್ಯವಿದೆ. ತಂದೆ-ತಾಯಿಯವರದಂತೂ ಈ ವಿಷಯದಲ್ಲಿ ದೊಡ್ಡ ಪಾತ್ರವಿದೆ. ಕೆಲವು ತಂದೆ- ತಾಯಿಯರಿಗೆ ಕೂಡ ಕೌನ್ಸೆಲಿಂಗ್ ಬೇಕಿದೆ. ಎರಡನೆಯ ವಿಷಯ ಕಾನೂನುಗಳದು. ವಿಪರೀತ ಕ್ರೌರ್ಯವನ್ನು, ಅಂದರೆ ಮಜಾಕ್ಕಾಗಿ ಕ್ರೌರ್ಯ ಎಸಗುವ ಪ್ರವೃತ್ತಿಯನ್ನು ಹತೋಟಿಯಲ್ಲಿಡಲು ಎಂಥ ಹೊಸ ಕಾನೂನುಗಳು ನಮಗೆ ಬೇಕು ಎನ್ನುವುದನ್ನು ಗುರುತಿಸುವುದಕ್ಕೆ ಬಹುಶಃ ರಾಷ್ಟ್ರೀಯ ಚರ್ಚೆಯ ಅಗತ್ಯವಿದೆ.

ಏಕೆಂದರೆ, ‘ಮೋಜಿಗಾಗಿ ಕ್ರೌರ್ಯ’ ಇಂದು ವ್ಯಾಪಕವಾಗಿ ಬೆಳೆಯುತ್ತಿರುವ ಕ್ರೌರ್ಯದ ಹೊಸ ಆಯಾಮ ಮತ್ತು ಭಾರಿ ಅಪಾಯಕಾರಿ ಆಯಾಮ. ಇಂಥ ವಿಲಕ್ಷಣವಾದ, ಸಾಮಾಜಿಕ ಮೌಲ್ಯಗಳನ್ನೇ ಪ್ರಶ್ನಿಸುವ, ಕಾನೂನು ವ್ಯವಸ್ಥೆಯನ್ನೇ ಅಣಕಿಸಬಲ್ಲ ಪ್ರಕರಣಗಳಿಗೆ ಅನ್ವಯಿಸುವಂತೆ ಬಹಳ ನೇರವಾದ, ಶಿಕ್ಷೆ ವಿಧಿಸಲು ಕಡಿಮೆ ಸಮಯ ತೆಗೆದುಕೊಳ್ಳಬಹುದಾದ ವಿಶೇಷ ನ್ಯಾಯಾಲಯಗಳ ಅಗತ್ಯ ಬಹಳ ಇದೆ.

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು
ಪ್ರಾಧ್ಯಾಪಕರು)