Wednesday, 11th December 2024

ನರಗಳಿಂದ ಕಣ್ಣಿಗೆ ಪ್ರಭಾವ ಇದೆಯೇ ?

ವೈದ್ಯ ವೈವಿಧ್ಯ

drhsmohan@gmail.com

ಮೆದುಳಿನ ಹತ್ತಿರದ ನರಗಳಲ್ಲಿ ತೊಂದರೆ ಕಾಣಿಸಿಕೊಂಡಾಗ ವ್ಯಕ್ತಿಗೆ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ. ಕಣ್ಣು ಅನಗತ್ಯವಾಗಿ ಅಲುಗಾಡಲು ಆರಂಭಿಸುತ್ತದೆ. ಗಂಟಲಲ್ಲಿ ಆಹಾರವನ್ನು ನುಂಗಲು ಕಷ್ಟವಾಗುತ್ತದೆ. ವ್ಯಕ್ತಿಯ ಬುದ್ಧಿಮತ್ತೆ ಕುಂಠಿತ ಗೊಳ್ಳುತ್ತದೆ. ಕೆಲವೊಮ್ಮೆ ಆತ ಮಾನಸಿಕ ಖಿನ್ನತೆ ಹೊಂದುತ್ತಾನೆ.

ಹಲವು ನರಗಳ ಕಾಯಿಲೆಗಳು ಕಣ್ಣಿನ ಮೇಲೆ ವಿವಿಧ ರೀತಿಯ ಪ್ರಭಾವ ಬೀರುತ್ತವೆ.

ಮಯಸ್ತೀನಿಯಾ ಗ್ರಾವಿಸ್: ದೇಹದ ಕೆಲವು ಮಾಂಸಖಂಡಗಳಲ್ಲಿ ಒಂದು ರೀತಿಯ ಸುಸ್ತು, ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಈ ಕಾಯಿಲೆಯಲ್ಲಿ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಎಂದರೆ ನರಗಳಿಗೂ ಮತ್ತು ಮಾಂಸಖಂಡ ಗಳಿಗೂ ಮಧ್ಯೆ ಇರುವ ಕೇಂದ್ರಬಿಂದುವಿನಲ್ಲಿ ತೊಂದರೆ ಉಂಟಾಗಿ, ಅಂದರೆ ನರಗಳ ನಿಶ್ಯಕ್ತಿಯಿಂದ ಮಾಂಸಖಂಡಗಳು ಕೆಲಸ ಮಾಡುವುದಿಲ್ಲ.

ಸಾಮಾನ್ಯವಾಗಿ 20 ಮತ್ತು 40 ವರ್ಷಗಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಮಹಿಳೆಯರಲ್ಲಿ ಸ್ವಲ್ಪ ಜಾಸ್ತಿ. ಮುಖ್ಯ ಲಕ್ಷಣ ವೆಂದರೆ ಸಂಜೆಯ ಹೊತ್ತು ಈ ಮಾಂಸ ಖಂಡಗಳಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ದೇಹದ ಹಲವಾರು ಮಾಂಸ ಖಂಡಗಳಂತೆ ಕಣ್ಣಿನ ಭಾಗದ ಮಾಂಸಖಂಡಗಳಿಗೂ ಆವರಿಸಿ, ತನ್ನ ಲಕ್ಷಣ ತೋರಿಸಲಾರಂಬಿಸುತ್ತದೆ.

ಈ ಕಾಯಿಲೆಯ ಸುಮಾರು ಶೇಕಡಾ 90 ರಷ್ಟು ರೋಗಿಗಳಲ್ಲಿ ಕಣ್ಣಿನ ಲಕ್ಷಣಗಳು ಇದ್ದೇ ಇರುತ್ತವೆ. ಕಣ್ಣಿನ ಮೇಲ್ಭಾಗದ ರೆಪ್ಪೆ ನಿಧಾನ ವಾಗಿ ಕೆಳಗಿಳಿದು, ಕಣ್ಣು ಕ್ರಮೇಣ ಮುಚ್ಚಿಯೇ ಹೋಗುತ್ತದೆ. ಈ ಲಕ್ಷಣಗಳು ಎರಡೂ ಕಣ್ಣುಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕಣ್ಣಿನ ಗುಡ್ಡೆ ಆ ಕಡೆ ಈ ಕಡೆ ಯಾವ ಕಾರಣವಿಲ್ಲದೆ ಅದರುತ್ತಾ ಇರುತ್ತದೆ. ಕಣ್ಣಿನ ಪಾಪೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ದೇಹದ ಇತರ ಭಾಗದ ನರ ಮತ್ತು ಮಾಂಸಖಂಡಗಳನ್ನು ಈ ಕಾಯಿಲೆ ಆವರಿಸುವುದರಿಂದ ಕೆಲವೊಮ್ಮೆ ಆ ವ್ಯಕ್ತಿಗೆ ಆಹಾರವನ್ನು ಜಗಿಯಲು ಹಾಗೂ ನುಂಗಲು ತೊಂದರೆ ಆಗುತ್ತದೆ. ಕೈ ಅಥವಾ ಕಾಲಿನ ಮಾಂಸಖಂಡಗಳಲ್ಲಿ ಕಾಣಿಸಿಕೊಂಡಾಗ ಅವುಗಳು ಆಗಾಗ ಹೊಡೆದುಕೊಳ್ಳುತ್ತವೆ. ಮುಖದ ಮಾಂಸಖಂಡಗಳಲ್ಲಿ ಕಾಣಿಸಿಕೊಂಡಾಗ ವ್ಯಕ್ತಿಗೆ ಭಾವನೆಗಳೇ ಹೊರಹೊಮ್ಮುವುದಿಲ್ಲ.

ಚಿಕಿತ್ಸೆ: ಆಂಟಿಕೋಲಿನೆಸ್ಟರೇಸ್ ಔಷಧಿ – ಪಿರಿಡೋಸ್ಟಿಗ್‌ಮೈನ್ ಮತ್ತು ದೀರ್ಘಕಾಲದವರೆಗೆ ದೇಹಕ್ಕೆ ಸ್ಟೀರಾಯ್ಡ್ ಔಷಧಿ ಕೊಡವುದು ಮುಖ್ಯ ಚಿಕಿತ್ಸೆ. ಕೆಲವೊಮ್ಮೆ ಕ್ಯಾನ್ಸರ್ ವಿರುದ್ಧದ ಕೆಲವು ಔಷಽಗಳನ್ನೂ ಉಪಯೋಗಿಸಲಾಗುತ್ತದೆ.

ಕಣ್ಣಿನ ಮಾಂಸಖಂಡಗಳ ಕಾಯಿಲೆ (ಆಕ್ಯುಲಾರ್ ಮಯೋಪತಿ): ಕೆಲವೊಮ್ಮೆ ಕಣ್ಣಿನ ಮಾಂಸಖಂಡಗಳಲ್ಲಿ ಈ ಕಾಯಿಲೆ ಕಾಣಿಸಿ ಕೊಂಡು ಕಣ್ಣಿನ ಮಾಂಸ ಮತ್ತು ನರಗಳನ್ನು ತೊಂದರೆಗೀಡುಮಾಡುತ್ತವೆ. ಕಣ್ಣಿನ ರೆಪ್ಪೆ ಕೆಳಗಿಳಿದು ಅದು ಮುಚ್ಚಿಕೊಂಡು ಬಿಡುತ್ತದೆ. ಕಣ್ಣನ್ನು ಆಚೀಚೆ ಚಲಿಸುವ ಮಾಂಸಖಂಡಗಳು ತಮ್ಮ ಚಲನೆಯನ್ನು ಕಳೆದುಕೊಳ್ಳುತ್ತವೆ.

ಕಾಯಿಲೆಯ ಲಕ್ಷಣಗಳು: ಎರಡೂ ಕಣ್ಣುಗಳ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುತ್ತವೆ, ತಲೆಯು ಒಂದು ಬದಿಗೆ ವಾಲಿಕೊಂಡಿರುತ್ತದೆ. ಕಣ್ಣಿನ ಹೊರಭಾಗದ ಎಲ್ಲ ಮಾಂಸಖಂಡಗಳು ತಮ್ಮ ಚಲನೆಯನ್ನು ಕಳೆದುಕೊಳ್ಳುತ್ತವೆ. ಕಣ್ಣನ್ನು ಆಚೀಚೆ ಚಲಿಸಲೇ ಸಾಧ್ಯವಾಗುವುದಿಲ್ಲ. ಮುಖದ ಮಾಂಸಖಂಡಗಳಲ್ಲಿ ಬಲಹೀನತೆ. ಗಂಟಲಿನ ಭಾಗದ ನರಕ್ಕೆ ಈ ಕಾಯಿಲೆ ಆವರಿಸಿದರೆ ವ್ಯಕ್ತಿಗೆ ಆಹಾರವನ್ನು ನುಂಗಲು
ಕಷ್ಟವಾಗುತ್ತದೆ. ಭುಜದ ಮಾಂಸಕಂಡಗಳ ಬಲಹೀನತೆ.

ಡಿಸ್‌ಟ್ರೋಪಿಯ ಮಯೋಟೋನಿಕ: ದೇಹದ ಹಲವು ಮಾಂಸಖಂಡಗಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಕೆಲವೊಮ್ಮೆ ಅನುವಂಶೀಯ ವಾಗಿರುತ್ತದೆ. ಕುಟುಂಬದ ಹಲವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಮುಖ್ಯ ಲಕ್ಷಣಗಳೆಂದರೆ ತಲೆಯ ಭಾಗದಲ್ಲಿ ಬಹಳ ಬೇಗ ಕೂದಲು ಉದುರುವುದು, ಪುರುಷರಲ್ಲಿ ಷಂಡತನ, ವಯಸ್ಸಿಗೂ ಮೊದಲೇ ಕಣ್ಣಿನ ಪೊರೆ ಕಾಣಿಸಿಕೊಳ್ಳುವುದು. ಈ ಕಾಯಿಲೆಯು ಸಾಮಾನ್ಯವಾಗಿ 30-35ವರ್ಷಗಳವರಲ್ಲಿ ಕಾಣಿಸಿಕೊಳ್ಳುತ್ತದೆ. ಮಾಂಸಖಂಡಗಳ ಬಲಹೀನತೆಯ ಹಲವು ಲಕ್ಷಣಗಳು ಕಂಡು ಬರುತ್ತವೆ. ಕಣ್ಣಿನ ರೆಪ್ಪೆ ನಿಧಾನವಾಗಿ ಮುಚ್ಚಿಕೊಳ್ಳುತ್ತದೆ. ಕೈಯನ್ನು ಬಿಗಿಯಾಗಿ ಮುಷ್ಟಿ ಕಟ್ಟಿದರೆ, ಅದನ್ನು ಬಿಡಿಸುವುದೇ ಕಷ್ಟವಾಗುತ್ತದೆ.

ಮುಖದ ಭಾಗದ ಮಾಂಸಖಂಡಗಳಲ್ಲಿ ಬಲಹೀನತೆ, ದುಃಖದ ಅನುಭವ ಕೊಡುವ ಮುಖದ ಭಾವನೆ. ಮುಖದ ಹಲವಾರು ಮಾಂಸ ಖಂಡಗಳು ತೀವ್ರ ರೀತಿಯ ಬಲಹೀನತೆ ಹೊಂದುತ್ತವೆ. ಗಂಟಲಿನ ಮತ್ತು ನಾಲಿಗೆಯ ಮಾಂಸಖಂಡಗಳಿಗೆ ಬಲಹೀನತೆ ಆವರಿಸುವು ದರಿಂದ ಮಾತು ತೊದಲತೊಡಗುತ್ತದೆ. ಲೈಂಗಿಕ ಅಂಗಗಳಲ್ಲಿ ಹಲವು ಬದಲಾವಣೆ ಹೊಂದಿ ಲೈಂಗಿಕ ನಿಶ್ಶಕ್ತಿ ಉಂಟಾಗುತ್ತದೆ. ತಲೆಯ ಭಾಗದ ಕೂದಲು ಉದುರುವುದು. ಹೃದಯದಲ್ಲಿ ಹಲವು ತೊಂದರೆಗಳು, ವ್ಯಕ್ತಿಯ ಮಾನಸಿಕ ಸ್ಥಿತಿಯಲ್ಲಿ ತೀವ್ರ ಏರುಪೇರು ಉಂಟಾ ಗುತ್ತದೆ.

ಕಣ್ಣಿನ ಲಕ್ಷಣಗಳು: ಎರಡೂ ಕಣ್ಣಿನ ರೆಪ್ಪೆಗಳು ಮುಚ್ಚಿಕೊಳ್ಳುವುದು. ಬಹಳ ಚಿಕ್ಕ ವಯಸ್ಸಿಗೇ (25-30 ವರ್ಷ) ಕಣ್ಣಿನಲ್ಲಿ ಪೊರೆ ಕಾಣಿಸಿ ಕೊಳ್ಳುವುದು (ಪ್ರಿ-ಸೆನೈಲ್ ಕೆಟರಾಕ್ಟ್). ಕಣ್ಣಿನ ಅಕ್ಷಿಪಟಲದ ಮಧ್ಯಭಾಗದಲ್ಲಿ ಹಲವಾರು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸಿ ಕೊಂಡು ದೃಷ್ಟಿಯನ್ನು ತೀವ್ರವಾಗಿ ಕಡಿಮೆ ಮಾಡುವುದು, ಕಣ್ಣಿನ ಪಾಪೆ ಯಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ.

ಚಿಕಿತ್ಸೆ: ಮಾಂಸಖಂಡಗಳ ಬಲಹೀನತೆಗೆ ಫಿನೈಟಾಯಿನ್ ಔಷಧಿ ಕೊಡುವುದು. ಕಣ್ಣಿನ ರೆಪ್ಪೆಗೆ ಶಸ್ತ್ರಕ್ರಿಯೆ ಮಾಡಿ ರೆಪ್ಪೆ ಇಳಿಯುವುದನ್ನು ನಿವಾರಿಸುವುದು. ಕಣ್ಣಿನ ಪೊರೆಗೆ ಶಸ್ತ್ರಕ್ರಿಯೆ ಮಾಡಿ ಒಳಭಾಗದಲ್ಲಿ ಮಸೂರ ಕೂರಿಸುವುದು.

ಮಲ್ಟಿಪಲ್ ಸ್ಲೀರೋಸಿಸ್ ಕಾಯಿಲೆ: ಇದು ಕೇಂದ್ರೀಯ ನರಮಂಡಲದ ನರಗಳಲ್ಲಿ ಕಾಣಿಸಿಕೊಳ್ಳುವ ಕಾಯಲೆ. ಮುಖ್ಯ ಲಕ್ಷಣ ಗಳೆಂದರೆ ನರಗಳ ಮತ್ತು ಮಾಂಸಖಂಡಗಳಲ್ಲಿ ಸುಸ್ತಾಗುವುದು, ದುರ್ಬಲತೆ, ಮಾಂಸಖಂಡಗಳು ಕೆಲವೊಮ್ಮೆ ಬಿಗಿಯಾಗಿ ಬಿಡುತ್ತವೆ. ಕೈ ಕಾಲು ಗಳ ನರ ಸಂವೇದನೆ ತೀವ್ರವಾಗಿ ವ್ಯತ್ಯಯಗೊಳ್ಳುತ್ತವೆ. ಬೆನ್ನು ಹುರಿಯ ನರಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳುವುದರಿಂದ ಮೂತ್ರಚೀಲ, ಲೈಂಗಿಕ ಮತ್ತು ಕರುಳಿನ ಕಾರ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ.

ಮೆದುಳಿನ ಹತ್ತಿರದ ನರಗಳಲ್ಲಿ ತೊಂದರೆ ಕಾಣಿಸಿಕೊಂಡಾಗ ಆ ವ್ಯಕ್ತಿಗೆ ಒಂದು ವಸ್ತು ಎರಡಾಗಿ ಕಾಣಿಸಿಕೊಳ್ಳುತ್ತದೆ. ಕಣ್ಣು ಅನಗತ್ಯ ವಾಗಿ ಅಲುಗಾಡಲಾರಂಭಿಸುತ್ತದೆ. ಗಂಟಲಿನಲ್ಲಿ ಆಹಾರವನ್ನು ನುಂಗಲು ಕಷ್ಟವಾಗುತ್ತದೆ. ವ್ಯಕ್ತಿಯ ಬುದ್ಧಿಮತ್ತೆ ಕುಂಠಿತ ಗೊಳ್ಳುತ್ತದೆ. ಕೆಲವೊಮ್ಮೆ ಆತ ಮಾನಸಿಕ ಖಿನ್ನತೆ ಹೊಂದುತ್ತಾನೆ. ಕಾಯಿಲೆಯು ತೀವ್ರ ರೀತಿಯದ್ದಾದರೆ ವ್ಯಕ್ತಿ ಪಾರ್ಶ್ವವಾಯು ಹೊಂದಬಹುದು. ಮಾತನಾಡಲು ತೀವ್ರ ರೀತಿಯ ತೊಂದರೆಯಾಗಬಹುದು.

ಈ ಕಾಯಿಲೆಯ ಕಣ್ಣಿನ ಲಕ್ಷಣಗಳು: ಹೆಚ್ಚಿನ ರೋಗಿಗಳು ಆಪ್ಟಿಕ್ ನ್ಯೂರೈಟಿಸ್ ತೊಂದರೆಗೆ ಒಳಗಾಗುತ್ತಾರೆ. ಮಹಿಳೆಯರಲ್ಲಿ ೭೪% ಹಾಗೂ ಪುರುಷರಲ್ಲಿ ೩೪% ಜನರು ಆಪ್ಟಿಕ್ ನರದ ಈ ರೀತಿಯ ತೊಂದರೆಗೆ ಒಳಗಾಗುತ್ತಾರೆ. ಇದರ ಲಕ್ಷಣಗಳೆಂದರೆ ಒಂದು ಕಣ್ಣಿನಲ್ಲಿ ಏನೋ ಒಂದು ತೊಂದರೆ ಎಂದು ಆರಂಭವಾಗುತ್ತದೆ. ಕಣ್ಣನ್ನು ಅಲುಗಾಡಿಸಿದಾಗ ಈ ತೊಂದರೆ ಜಾಸ್ತಿಯಾಗುತ್ತದೆ. ಜತೆಯಲ್ಲಿ ಆ ಕಣ್ಣಿನಲ್ಲಿ ದಿಢೀರ್ ಎಂದು ದೃಷ್ಟಿ ಕಾಣುವುದಿಲ್ಲ. ಈ ತರಹದ ಅಂಧತ್ವ ನಿಧಾನವಾಗಿ ಜಾಸ್ತಿಯಾಗುತ್ತಾ ಹೋಗುತ್ತದೆ. ೨ ವಾರದ ಕೊನೆಗೆ
ತೀವ್ರವಾಗುತ್ತದೆ, ೪-೬ ವಾರಗಳಲ್ಲಿ ಸುಧಾರಣೆ ಕಂಡುಬರುತ್ತದೆ. ಕಣ್ಣು ಪಾಪೆಯಲ್ಲಿ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಬಣ್ಣಗಳನ್ನು ಗುರುತಿಸುವ ವರ್ಣದೃಷ್ಟಿ ಕಡಿಮೆಯಾಗುತ್ತದೆ. ಬೆಳಕಿನ ತೀವ್ರತೆಯನ್ನು ಗುರುತಿಸುವ ಶಕ್ತಿಯೂ ಕಡಿಮೆಯಾಗುತ್ತದೆ. ಆಪ್ಟಿಕ್ ನರದ ಅಂಚು ಊದಿಕೊಂದಿದ್ದು, ಅದರ ಮೇಲೆ ಕೆಲವು ರಕ್ತಸ್ರಾವದ ತುಣುಕುಗಳು ಕಾಣಿಸಬಹುದು.

ಚಿಕಿತ್ಸೆ: ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ಸ್ಟೀರಾಯ್ಡ್ ಔಷಽಯನ್ನು ಕೊಡಬೇಕು. ತೀವ್ರ ರೀತಿಯ ಕಾಯಿಲೆಯಲ್ಲಿ ದೈಹಿಕ ಇಂಜೆಕ್ಷನ್ ರೂಪದಲ್ಲಿ ಅಥವಾ ಕಣ್ಣುಗುಡ್ಡೆಯ ಹಿಂಬಾಗದಲ್ಲಿ ಇಂಜೆಕ್ಷನ್ ರೂಪದಲ್ಲಿ ಸ್ಟೀರಾಯ್ಡ್ ಕೊಡಲಾಗುತ್ತದೆ. ಕಾಯಿಲೆ ಸಾಮಾನ್ಯ ರೀತಿಯಲ್ಲಿದ್ದಾಗ ಮಾತ್ರೆಯ ರೂಪದಲ್ಲಿ ಕೊಡಲಾಗುತ್ತದೆ.

ಕಣ್ಣು ಪಾಪೆ (ಪ್ಯೂಪಿಲ್) ಯ ತೊಂದರೆಗಳು: ಇದರಲ್ಲಿ ಹಲವು ವಿಧಗಳಿವೆ – ಆರ್‌ಗೈಲ್ ರಾಬರ್ಟ್‌ಸನ್ ಪ್ಯೂಪಿಲ್ ಎಂಬುದು
ಸಾಮಾನ್ಯವಾಗಿ ನ್ಯೂರೋಸಿಫಿಲಿಸ್ ಕಾಯಿಲೆಯಲ್ಲಿ ಕಂಡುಬರುತ್ತದೆ.

ಮುಖ್ಯ ಲಕ್ಷಣಗಳು: ಎರಡೂ ಕಣ್ಣುಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಪಾಪೆ ತುಂಬಾ ಸಣ್ಣದಿರುತ್ತದೆ, ಪಾಪೆಯ ಅಂಚುಗಳು ನಿಯಮಿತವಾಗಿರುವುದಿಲ್ಲ. ಹೊರಗಿನಿಂದ ಬೆಳಕು ಹಾಕಿದಾಗ ಪಾಪೆಯು ಸ್ಪಂದಿಸುವುದಿಲ್ಲ. ಹತ್ತಿರದ ವಸ್ತುಗಳಿಗೆ ಪಾಪೆಯು ಸ್ಪಂದಿಸುತ್ತದೆ. ಪಾಪೆಯನ್ನು ಅಗಲಿಸುವ ಔಷಽಗಳಿಂದಲೂ ಇದನ್ನು ಹಿಗ್ಗಿಸಲು ಕಷ್ಟವಾಗುತ್ತದೆ.

ಹೋಮ್ಸ್-ಆಡಿ ಪ್ಯೂಪಿಲ್: ವೈರಲ್ ಕಾಯಿಲೆಯಿಂದ ಪಾಪೆಯ ನರಕ್ಕೆ ತೊಂದರೆಯಾಗುವುದರಿಂದ ಇದು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭ ಒಂದೇ ಕಣ್ಣಿನಲ್ಲಿ ಈ ರೀತಿಯ ಪಾಪೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯವಂತ ಯುವಕರಲ್ಲಿ ಹೆಚ್ಚು ಕಾಣಿಸಿಕೊಳ್ಳು ತ್ತದೆ. ಪಾಪೆಯು ದೊಡ್ಡದಾಗಿರುತ್ತದೆ. ಪಾಪೆಯ ಅಂಚುಗಳು ನಿಯಮಿತವಾಗಿರುತ್ತವೆ. ಹೊರಗಿನ ಬೆಳಕಿಗೆ ಪಾಪೆಯು ಸ್ಪಂದಿಸುವುದಿಲ್ಲ.

ಹಾರ್ನರ‍್ಸ್ ಸಿಂಡ್ರೋಮ್: ಸಿಂಪೆಥಿಟಿಕ್ ನರವಾಹಕಗಳಲ್ಲಿ ತೊಂದರೆಯುಂಟಾಗುತ್ತದೆ. ಮುಖ್ಯ ಕಾರಣಗಳೆಂದರೆ ಪ್ಯಾನ್‌ಕಾಸ್ಟ್ ಗೆಡ್ಡೆಗಳು, ಕ್ಯಾನ್ಸರ್ ಪೀಡಿತ ಕುತ್ತಿಗೆಯ ಭಾಗದ ಹಾಲ್ರಸ ಗ್ರಂಥಿಗಳು, ಕುತ್ತಿಗೆಯ ಭಾಗಕ್ಕೆ ಹೊಡೆತ ಬಿದ್ದು ಅಥವಾ ಶಸ್ತ್ರಕ್ರಿಯೆ ಆಗಿದ್ದರೆ, ಮೆದುಳಿನ ತಳಭಾಗದ ರಕ್ತನಾಳಗಳಲ್ಲಿ ಕಾಯಿಲೆಯಾದಾಗ, ಕೆರೋಟೆಡ್ ಮತ್ತು ಅಯೋರ್ಟಿಕ್ ಅನ್ಯೂರಿಸಮ್ ಕಾಯಿಲೆಗಳು.

ಕ್ಲಸ್ಟರ್ ರೀತಿಯ ತಲೆನೋವು ಬಂದಾಗ, ಕೆಲವೊಮ್ಮೆ ಏನೂ ಕಾರಣಗಳಿಲ್ಲದೆ, ವಂಶವಾಹಿಯ ರೀತಿಯಾಗಿಯೂ ಬರಬಹುದು.
ಕಾಯಿಲೆಯ ಲಕ್ಷಣಗಳು: ಒಂದೇ ಕಣ್ಣಿನಲ್ಲಿ ಕಾಣಿಸಿಕೊಳ್ಳುತ್ತದೆ. ಕಣ್ಣಿನ ರೆಪ್ಪೆ ಸ್ವಲ್ಪ ಮುಚ್ಚಿಕೊಳ್ಳುತ್ತದೆ. ಕೆಳಗಿನ ರೆಪ್ಪೆ ಸ್ವಲ್ಪ ಮೇಲಕ್ಕೆ
ಬರುತ್ತದೆ. ಕಣ್ಣು ಪಾಪೆ ಸಣ್ಣದಾಗಿರುತ್ತದೆ. ಬೆಳಕು ಮತ್ತು ಹತ್ತಿರದ ವಸ್ತುಗಳಿಗೆ ಪಾಪೆ ಸಹಜವಾಗಿ ಸ್ಪಂದಿಸುತ್ತದೆ.

ಕಪಾಲದ ನರಗಳು: ಮೆದುಳಿನ ಮೂಲದಿಂದ ಬರುವ ಕಪಾಲದ ನರಗಳಲ್ಲಿ ೩,೪ ಮತ್ತು ೬ನೇ ನರಗಳು ಕಣ್ಣಿನ ಮಾಂಸಖಂಡಕ್ಕೆ ಸಂಬಂಧಪಟ್ಟವು. ಹಾಗಾಗಿ ಇವು ಕಣ್ಣಿನ ಚಲನೆಯನ್ನು ನಿಯಂತ್ರಿಸುತ್ತವೆ.

೩ನೇ ನರದ ಬಲಹೀನತೆ: ಲಕ್ಷಣಗಳೆಂದರೆ ರೆಪ್ಪೆಯ ಮಾಂಸಖಂಡಕ್ಕೆ ಈ ನರದ ಶಕ್ತಿ ಅವಶ್ಯಕತೆ ಇರುವುದರಿಂದ, ಈ ನರದ ಬಲಹೀನತೆಯಿಂದ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುತ್ತದೆ. ಕಣ್ಣಿನ ಹೊರಭಾಗದ ಲ್ಯಾಟೆರಲ್ ರೆಕ್ಟಸ್ ಮಾಂಸಖಂಡವು ಶಕ್ತಿಯುತ ವಾಗುವುದರಿಂದ ಕಣ್ಣಿನ ಗುಡ್ಡೆ ಒಳಭಾಗಕ್ಕೆ ತಿರುಗಿಕೊಳ್ಳುತ್ತದೆ. ಕಣ್ಣನ್ನು ಒಳತರುವ ಮೀಡಿಯಲ್ ರೆಕ್ಟಸ್ ಮಾಂಸಖಂಡವು ನರದ ಬಲಹೀನತೆಗೆ ಒಳಗಾಗುವುದರಿಂದ ಕಣ್ಣಿನ ಒಳಗಿನ ಚಲನೆ ಇಲ್ಲವಾಗುತ್ತದೆ.

ಮೇಲ್ಭಾಗದ ಚಲನೆಗೆ ಅವಶ್ಯವಾದ ಸುಪೀರಿಯರ್ ರೆಕ್ಟಸ್ ಮಾಂಸಖಂಡವೂ ಬಲಹೀನತೆಗೆ ಒಳಗಾಗುವುದರಿಂದ ಮೇಲ್ಭಾಗದ ಚಲನೆಯೂ ಸರಿಯಾಗಿ ಇರುವುದಿಲ್ಲ. ಅದೇ ರೀತಿ ಕೆಳಭಾಗದ ಚಲನೆಯೂ ನಿಯಂತ್ರಣಕ್ಕೆ ಒಳಗಾಗುತ್ತದೆ. ಇಂತಹ ವ್ಯಕ್ತಿಗೆ ಹತ್ತಿರದ ಸಣ್ಣ ಅಕ್ಷರಗಳನ್ನು ಓದಲು ಕಷ್ಟವಾಗುತ್ತದೆ.

೩ನೇ ನರದ ಬಲಹೀನತೆಯ ಕಾರಣಗಳು: ೨೫% ಸಂದರ್ಭಗಳಲ್ಲಿ ಕಾರಣಗಳು ಗೊತ್ತಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಎಂದರೆ ಹೆಚ್ಚಿನ ರಕ್ತದೊತ್ತಡ ಮತ್ತು ಡಯಾಬಿಟಿಸ್ ಕಾಯಿಲೆಗಳು. ಆದರೆ ೩ ತಿಂಗಳೊಳಗೆ ಈ ಬಲಹೀನತೆ ಸರಿಯಾಗುತ್ತದೆ. ಕೆಲವೊಮ್ಮೆ ಡಯಾಬಿಟಿಸ್ ರೋಗಿಗಳಲ್ಲಿ ಕಣ್ಣು ಗುಡ್ಡೆಯ ಮೇಲೆ ನೋವಿರುತ್ತದೆ. ಕಣ್ಣಿಗೆ ಬೀಳುವ ಹೊಡೆತವೂ ಒಂದು ಮುಖ್ಯ ಕಾರಣ. ಕಣ್ಣಿನ
ಹಿಂಭಾಗದ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುವ ಅನ್ಯೂರಿಸಂಗಳು ಮತ್ತೊಂದು ಮುಖ್ಯ ಕಾರಣ. ಉಳಿದ ಕಾಯಿಲೆಗಳೆಂದರೆ ಮೆದುಳಿನ ಗೆಡ್ಡೆಗಳು, ಸಿಫಿಲಿಸ್ ಕಾಯಿಲೆ.

ಚಿಕಿತ್ಸೆ: ಈ ತೊಂದರೆ ಕಾಣಿಸಿಕೊಂಡು ೬ ತಿಂಗಳುಗಳ ನಂತರವೂ ಕಾಯಿಲೆ ವಾಸಿಯಾಗದಿದ್ದರೆ, ಶಸಕ್ರಿಯೆ ಮಾಡಬೇಕಾಗುತ್ತದೆ.

೪ನೇ ಕಪಾಲದ ನರದ ಕಾಯಿಲೆಯ ಲಕ್ಷಣಗಳು: ಯಾವ ಕಣ್ಣಿನಲ್ಲಿ ನರದ ಬಲಹೀನತೆ ಕಾಣಿಸಿಕೊಳ್ಳುತ್ತದೋ, ಆ ಕಣ್ಣು ಮತ್ತೊಂದು ಕಣ್ಣಿಗಿಂತ ಮೇಲ್ಭಾಗದಲ್ಲಿರುತ್ತದೆ. ಸಾಮಾನ್ಯವಾಗಿ ಮುಖವು ಮತ್ತೊಂದು ಆರೋಗ್ಯವಂತ ಕಣ್ಣಿನ ಬದಿಗೆ ವಾಲಿರುತ್ತದೆ. ಕಣ್ಣಿನ ಕೆಳಗೆ ಚಲನೆ (ಒಳಭಾಗದ ಕೆಳ ಚಲನೆ) ನಿಯಂತ್ರಣಕ್ಕೆ ಒಳಗಾಗುತ್ತದೆ. ಒಂದು ವಸ್ತು ಎರಡಾಗಿ ಕಾಣಿಸುತ್ತದೆ. ಎರಡನೆಯ ಪ್ರತಿಬಿಂಬ ಮೂಲ ಪ್ರತಿಬಿಂಬದ ಮೇಲ್ಗಡೆ ಇರುತ್ತದೆ. ಇನ್ನೂ ಹಲವು ನರಗಳ ಕಾಯಿಲೆಗಳು ಕಣ್ಣಿನ ಮೇಲೆ ವಿವಿಧ ಲಕ್ಷಣಗಳನ್ನು ಬೀರಬಹುದು.