Sunday, 15th December 2024

ಮುಖಗಳು ಮತ್ತು ಮುಖವಾಡಗಳು

ಅಭಿಮತ

ಡಾ.ಕೆ.ಪಿ.ಪುತ್ತೂರಾಯ

drputhuraya@yahoo.co.in

ಮಾನವನ ಮಿದುಳು ಹಾಗೂ ಅದರಲ್ಲಿ ಅಂತರ್ಗತವಾಗಿರುವ ಅವನ ಮನಸ್ಸು ಭಗವಂತನ ಅದ್ಭುತ ಸೃಷ್ಟಿಗಳಲ್ಲೊಂದು. ಇದರ ರಚನೆ ಮತ್ತು ಕಾರ್ಯ ವಿಧಾನಗಳನ್ನು ತಿಳಿಯಲೆತ್ನಿಸಿದಷ್ಟು ಉತ್ತರ ಸಿಗದ ಪ್ರಶ್ನೆಗಳನ್ನು ಒಡ್ಡುತ್ತಲೇ ಬಂದಿರುವ ಸೃಷ್ಟಿಯ ಸೋಜಿಗ, ಅಚ್ಚರಿಗಳ ಆಗರವಿದು.

ನೂರಾರು ಬೃಹತ್ ಗಣಕಯಂತ್ರಗಳು ಮಾಡುವ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಬಲ್ಲ, ಇದರ ಕಾರ್ಯ ವೈಖರಿ ನಿಜಕ್ಕೂ ಒಂದು ವಿಸ್ಮಯವೇ ಸರಿ.
ನಮ್ಮ ದೇಹದ ಶಕ್ತಿ ಸಾಮರ್ಥ್ಯಗಳಿಗೆ ಇತಿಮಿತಿಗಳಿವೆ. ಆದರೆ ಮನಸ್ಸಿನ ಶಕ್ತಿ ಸಾಮರ್ಥ್ಯಗಳಿಗೆ ಇತಿಮಿತಿಗಳಿಲ್ಲ. ಜಗತ್ತನ್ನೇ ವ್ಯಾಪಿಸಬಲ್ಲ, ಕ್ಷಣಾರ್ಧದಲ್ಲಿ ವಿಶ್ವದಾದ್ಯಂತ ಸಂಚರಿಸಬಲ್ಲ ವೇಗ ಅದರದು.

ನಮ್ಮ Mind speed  ಎಷ್ಟು ವೇಗವಾಗಿದೆಯೆಂದರೆ, ನಾವು ಕೂತಲ್ಲೆ, ಸೆಕೆಂಡುಗಳಲ್ಲಿ, ನಾವು ಹೋಗಿ ಬಂದಿರುವ, ಸಾವಿರಾರು ಮೈಲಿಗಳ ದೂರದಲ್ಲಿರುವ ನಮ್ಮ ಬಂಧು ಮಿತ್ರರ ಮನೆಯ ಚಿತ್ರಣವನ್ನು, ಅವರ ಮುಖಗಳನ್ನು ನೋಡುವ ಅನುಭವವನ್ನು ಇಲ್ಲಿಂದಲೇ ಪಡೆದುಕೊಳ್ಳಬಹುದು. ಮನುಷ್ಯರ ಸ್ವರೂಪಗಳು ಬೇರೆ ಬೇರೆಯಾಗಿದ್ದಂತೆ, ಅವರ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತವೆ. ಇದಕ್ಕೆ ಕಾರಣ, ಅವರ ಮನಸ್ಸು. ಅನುಕಂಪ, ಪ್ರೀತಿ, ಪ್ರೇಮ, ದಯೆ, ಕರುಣೆ, ಕಾಳಜಿ, ಕನಿಕರಗಳೆಂಬ ಹಲವಾರು ಸದ್ಗುಣಗಳ ಜನ್ಮಸ್ಥಾನವೂ ನಮ್ಮ ಮನಸ್ಸೇ. ಅಂತೆಯೇ, ಕಾಮ, ಕ್ರೋಧ-ಲೋಭ-ಮೋಹ- ಮದ-ಮತ್ಸರಗಳೆಂಬ ಅರಿಷಡ್‌ವೈರಿಗಳ ತವರೂರು ನಮ್ಮ ಮನಸ್ಸೇ.

ಈ ದೃಷ್ಟಿಯಲ್ಲಿ ಮನುಷ್ಯನ ಮನಸ್ಸೆಂಬುದು ಗುಣದ ತೊಟ್ಟಿಲೂ ಆಗಬಹುದು; ಕಸದ ತೊಟ್ಟಿಯೂ ಆಗಬ ಹುದು. ಸ್ಥಿಮಿತ ತಪ್ಪಿದರೆ, ಒಂದು ರಣರಂಗವಾದೀತು; ಸಂಯಮತೆ ಕಾಪಾಡಿಕೊಂಡರೆ, ಒಂದು ಸುಂದರ ಹೂವಿನ ತೋಟವೇ ಆಗಬಹುದು. ನಮ್ಮ ಮನಸ್ಸಿನೊಳಗೆ ರಾಮನೂ ಇದ್ದಾನೆ; ರಾವಣನೂ ವಾಸವಾಗಿ
ದ್ದಾನೆ. ನಿಯತ್ತಿನ ನಾಯಿಯೂ ಇದೆ; ಮೋಸಮಾಡ ಬಲ್ಲ ನರಿಯೂ ಇದೆ. ಈ ಸತ್ಯವನ್ನು ಡಿ.ವಿ.ಜಿಯವರು ಹೀಗೆ ಬಿಚ್ಚಿಟ್ಟರು “ತಲೆಯೊಳಗೆ ನೆರೆದಿಹವು ನೂರಾರು ಹಕ್ಕಿಗಳು ಗಿಳಿ, ಗೂಗೆ, ಕಾಗೆ, ಕೋಗಿಲೆ, ಹದ್ದು, ನವಿಲು, ಕಿಲಕಿಲನೆ ಗೊರಗೊರನೆ ಕಿರುಚಿ ಕೂಗುತ್ತಿಹವು ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ”. ಎಲ್ಲಿ ಮನಸ್ಸು ಬಡವಾಗಿದೆಯೋ, ಜಡವಾಗಿದೆಯೋ, ದುರ್ಬಲವಾಗಿದೆಯೋ, ದುರಾಸೆಗಳಿಂದ ತುಂಬಿದೆಯೋ ಅಲ್ಲಿ ಕ್ರೌರ್ಯ, ಹಿಂಸಾ ಪ್ರವೃತ್ತಿಗಳು ಹುಟ್ಟಿಕೊಳ್ಳು ತ್ತವೆ.

ಎಲ್ಲಿ ಮನಸ್ಸು ಕ್ರಿಯಾಶೀಲ ವಾಗಿರುತ್ತದೋ, ಸದ್ಗುಣಗಳಿಂದ ತುಂಬಿರುತ್ತದೋ ಅಲ್ಲಿ ಅದು ಸೃಜನಶೀಲತೆಯತ್ತ ಸಾಗುತ್ತಿರುತ್ತದೆ. ನಮ್ಮೊಳಗಿನ ಸಾತ್ವಿಕ ಶಕ್ತಿ ನಿಷ್ಕ್ರಿಯವಾದಾಗ, ತಾಮಸ ಶಕ್ತಿ ವಿಜೃಂಭಿಸುತ್ತದೆ. ಮನಸ್ಸು ಮುದದಿಂದ ತುಂಬಿರ ಬೇಕಾದರೆ, ಮನದ ಕದವನ್ನು ತೆರೆದಿಡಬೇಕು; ಮನದಂಗಳವನ್ನು ನಿತ್ಯ ಗುಡಿಸಿ, ಮನದ ವೀಣೆಯನ್ನು ಹದಗೊಳಿಸಿ ನುಡಿಸಬೇಕು ಹಾಗೂ ಮನಸ್ಸು ಸದ್ಗುಣಗಳ ವಸತಿಗೆ, ಮುಕ್ತವಾಗುವಂತೆ, ಯುಕ್ತವಾಗುವಂತೆ ನೋಡಿಕೊಳ್ಳಬೇಕು.
ಮುಚ್ಚಿದ ಮನಸ್ಸು ಒಂದು ಸೆರೆಮನೆಯಂತೆ; ಬಿಚ್ಚಿದ ಮನಸ್ಸು ಅರಮನೆಯಂತೆ.

ನಿಂತ ನೀರು ಮಲಿನಗೊಂಡು, ಕ್ರಿಮಿಕೀಟಗಳಿಗೆ ಮೊಟ್ಟೆ ಇಡಲು ಅವಕಾಶ ಮಾಡಿ ಕೊಡುತ್ತದೆ. ಅಂತೆಯೇ, ನಿಷ್ಕ್ರಿಯವಾದ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಜನ್ಮ ತಾಳುತ್ತವೆ. ಹೇಗೆ ಗುಳು ಗುಳು ಕುಡಿಯುವ ನೀರಿನಲ್ಲಿ ಸ್ವಚ್ಛ ಪ್ರತಿಬಿಂಬವನ್ನು ಕಾಣಲಾಗದೋ, ಅಂತೆಯೇ ತಳಮಳ ಕಳವಳ ತುಂಬಿದ ಮನದಲ್ಲಿ ಶಾಂತಿಯನ್ನು ಕಾಣಲಾಗದು. ಆದುದರಿಂದ ಮನಸ್ಸು ಸದಾ ಪ್ರಶಾಂತವಾಗಿರಲಿ; ಪ್ರಸನ್ನವಾಗಿರಲಿ. ಗಾಳಿಗೆ ಬೀಸುವ ಸ್ವಭಾವ: ಬೆಂಕಿಗೆ ಸುಡುವ ಸ್ವಭಾವ;
ನೀರಿಗೆ ಹರಿಯುವ ಸ್ವಭಾವ. ಅಂತೆಯೇ ಚಂಚಲತೆಯೇ ಮನಸ್ಸಿನ ಸ್ವಭಾವ (ಚಂಚಲಂ ಹಿ ಮನಃ) ಮನುಷ್ಯನ ಮನಸ್ಸಿನಷ್ಟು ಚಂಚಲ ವಸ್ತು ಇನ್ನೊಂದಿಲ್ಲ.

ಒಮ್ಮೆ ಹೀಗೆ ತೋಚಿದರೆ, ಇನ್ನೊಮ್ಮೆ ಹಾಗೆ ತೋಚುತ್ತದೆ. ಇಂದು ಇದ್ದ ಮನೋಸ್ಥಿತಿ ನಾಳೆಗಿಲ್ಲ. ನಾಳೆಯಲ್ಲಿದ್ದುದು ನಾಡಿದ್ದೂ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ವಿಷಯದಿಂದ ವಿಷಯಕ್ಕೆ ಹಾರುತ್ತಿರುತ್ತದೆ. ಮನಸ್ಸು ಒಂದು ಹುಚ್ಚು ಕುದುರೆ ಇದ್ದಂತೆ. ಕಡಿವಾಣ ಹಾಕದಿದ್ದರೆ, ಬೀದಿ ಬೀದಿ ಸುತ್ತುತ್ತಿರುತ್ತದೆ. ಹಿಡಿತದಲ್ಲಿದ್ದರೆ ಅದು ಹಾಲು ಕರೆಯುವ ಹಸು; ಹಿಡಿತ ತಪ್ಪಿದರೆ, ಎಲ್ಲೆಂದರಲ್ಲಿ ನುಗ್ಗುವ ಗೂಳಿ. ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ನಮ್ಮ ಸ್ನೇಹಿತನಂತೆ; ಅದರ ನಿಯಂತ್ರಣ ದಲ್ಲಿ ನಾವಿದ್ದರೆ, ಅದು ನಮ್ಮ ಶತ್ರುವಿನಂತೆ.

ಕೆಲವೊಮ್ಮೆ ಅತ್ಯುತ್ತಮ ಸೇವಕ; ಕೆಲವೊಮ್ಮೆ ಅಸಮರ್ಥ ಯಜಮಾನ. ಈ ಸತ್ಯವನ್ನೇ ಭಗವದ್ ಗೀತೆ ಹೇಳುತ್ತೆ ‘ಅಪಕ್ವ ಮನಸ್ಸು ನಮ್ಮ ಶತ್ರುವಿನಂತೆ, ಪಳಗಿದ ಮನಸ್ಸು ನಮ್ಮ ಮಿತ್ರನಂತೆ ವರ್ತಿಸುತ್ತದೆ’. ನಮ್ಮ ನಿಯಂತ್ರಣದಲ್ಲಿರುವವರೆಗೆ ನಮ್ಮ ವಾಹನ ನಮಗೆ ಸಹಕಾರಿ; ನಿಯಂತ್ರಣ ತಪ್ಪಿದ ಮೇಲೆ, ನಮ್ಮ ವಾಹನವೇ ನಮಗೆ ಮಾರಕವಾದೀತು. ಅಂತೆಯೇ ಹತೋಟಿಯಲ್ಲಿರುವವರೆಗೆ, ನಮ್ಮ ಮನಸ್ಸು ನಮಗೆ ಬಂಧು; ಅಂಕೆ ತಪ್ಪಿದ ಮೇಲೆ ನಮಗೇ ಶತ್ರು. ಒಟ್ಟಿನಲ್ಲಿ ನಮ್ಮ ಶ್ರೇಯಸ್ಸಿಗೂ, ದುರಂತಕ್ಕೂ, ನಮ್ಮ ಮನಸ್ಸೇ ಕಾರಣ.

ಒಟ್ಟಿನಲ್ಲಿ ಮನಸ್ಸು ಹತೋಟಿಯಲ್ಲಿದ್ದರೆ ಮಾತ್ರ ಮಹತ್ಕಾರ್ಯಗಳು ಸಾಧ್ಯ. ಹಾಗೆಂದು ಮನಸ್ಸನ್ನು ಹತೋಟಿಯಲ್ಲಿ ಡೋದು ಸುಲಭದ ಕೆಲಸವಲ್ಲ. ಇದಕ್ಕೆ ಮನೋಬಲವಿರಬೇಕು; ಇಂದ್ರಿಯ ನಿಗ್ರಹವಿರಬೇಕು. ಧ್ಯಾನ-ಮೌನ, ಯೋಗ-ಜಪ-ತಪಗಳೇ ಮುಂತಾದ ಚಟುವಟಿಕೆ ಗಳಿಂದ ಇದು ಸಾಧ್ಯ. ಅಂತೆಯೇ ಮನುಷ್ಯನ ಮನಸ್ಸು ಅತಿ ಸೂಕ್ಷ್ಮವಾದುದು ಕೂಡಾ. ಬೇಡದ ಕ್ಷುಲ್ಲಕ ವಿಷಯಗಳಿಗಾಗಿ, ಅದರಷ್ಟು ರಾಡಿಯಾಗುವ; ಚಿಂದಿಚಿಂದಿಗೊಳ್ಳುವ ವಸ್ತು ಬೇರೊಂದಿಲ್ಲ. ಮನಸ್ಸು ಒಂದು ಗೊಬ್ಬರದ ಗುಂಡಿಯಂತಾದರೆ, ಎಸೆದು ಬಿಟ್ಟ ಆ ಕಸ, ಕೊಳೆತು ನಾರಲು ಆರಂಭಿಸುತ್ತದೆ. ಹೀಗಾಗದಂತೆ, ಮನಸ್ಸನ್ನು ಆಗಾಗ ಶುದ್ಧಿ ಗೊಳಿಸುತ್ತಿರಬೇಕು. ಮನಸ್ಸನ್ನು ದ್ವೇಷ, ದುರಾಸೆ, ದುರ್ಗುಣಗಳಿಂದ ಮುಕ್ತಗೊಳಿಸಬೇಕು.

ಕಳಂಕಿತ ಮನಸ್ಸಿನಲ್ಲಿ ಸತ್ಯ ದರ್ಶನವಾಗದು. ಮನಸ್ಸೆಂಬ ಹೂ ತೋಟದಿಂದ, ನಮಗರಿವಿಲ್ಲದೇ ಬೆಳೆದ ಕಳೆಗಿಡಗಳನ್ನು ಆಗಾಗ ಕಿತ್ತೆಸೆಯುತ್ತಿರಬೇಕು. ಇದನ್ನೇ ಡಿ.ವಿ.ಜಿ. ಯವರು ಬರೆದರು “ಚಿತ್ತದನು ಭವ ಭಾವ ಸುಭಾವನೆಗಳೆಲ್ಲ ಭತ್ತ; ಅದನು ವಿಚಾರ ಯುಕ್ತಿಗಳು ಕುಟ್ಟಿ ತತ್ವ ತುಂಡಲ ದೊರೆಗುವಂದು ವಿವೇಚಿತ ತತ್ವ, ನಿತ್ಯ ಭೋಜನ ನಮಗೆ ಮಂಕುತಿಮ್ಮ.” ಅರ್ಥಾತ್, ಅನುಭವ ಚಿಂತನೆಗಳೆಂಬ ಭತ್ತವನ್ನು ವಿಚಾರ ವಿವೇಕ ಗಳಿಂದ ಕುಟ್ಟಿ, ತವುಡು ಹೊಟ್ಟು ಬೇರ್ಪಡಿಸಿದರೆ, ಉಳಿದ ಶುದ್ಧ ಅಕ್ಕಿ ವಿವೇಚನಾ ಪೂರ್ಣ ಸಾರ. ಇದೇ ಆತ್ಮಾವಲೋಕಿಗೆ ಭೋಜನ. ಇದನ್ನೇ ಮನಸ್ಸನ್ನು ಶುದ್ಧೀಕರಿಸುವ ಆತ್ಮಸ್ನಾನವೆನ್ನ ಬಹುದು. ಇದನ್ನು ಮಾಡಿಕೊಳ್ಳದವರು ಶುದ್ಧರಾಗಲು ಸಾಧ್ಯವಿಲ್ಲ.

ಭೂಮಿಯ ಮೆಲೆ ಬರುವಾಗ ನಮ್ಮ ಮನಸ್ಸು ಮುಗ್ಧವಾಗಿತ್ತು; ಶುದ್ಧ ವಾಗಿತ್ತು. ಜೀವನ ಪರ್ಯಂತ ಹಾಗೆಯೇ ಇದ್ದು, ಈ ಜಗತ್ತನ್ನು ಬಿಟ್ಟು ಹೋಗುವಾಗಲೂ ಹಾಗೆಯೇ ಇರಲಿ. ಆದುದರಿಂದ ನಮಗೆ ಮಕ್ಕಳಂತಹ ಮನಸ್ಸಿರಲಿ; ಆದರೆ ಮಕ್ಕಳಾಟಿಕೆ ಬೇಡ. ಮನಸ್ಸು ಶರೀರವನ್ನು ಆಳುತ್ತದೆ. ಆದರೆ ಮನಸ್ಸನ್ನು ಆಳುವ ವರು ಯಾರು? ಅದು ನಮ್ಮೊಳಗಿನ ಅಂತರಾತ್ಮದಿಂದ ಸಾಧ್ಯ ಹಾಗೂ ಧ್ಯಾನ-ಮೌನ, ಜಪ-ತಪ, ಯೋಗಗಳೆಂಬ ಚಟುವಟಿಕೆಗಳಿಂದ ಸಾಧ್ಯ. ಇವೆಲ್ಲವೂ ಏಕಾಗ್ರತೆಯನ್ನು ಇಂದ್ರಿಯ ನಿಗ್ರಹವನ್ನು ತಂದೊಡ್ಡುತ್ತವೆ.

ಮನಸ್ಸನ್ನು ಒಂದು ಸಂಗೀತವಾದ್ಯಕ್ಕೆ ಹೋಲಿಸಬಹುದು. ವಾದ್ಯದ ತಂತಿಗಳು ಅತಿ ಬಿಗಿ ಯಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಸುಶ್ರಾವ್ಯ ಸಂಗೀತವನ್ನು ನುಡಿಸಲಾಗದು. ಅಂತೆಯೇ ಮೊದಲು ನಮ್ಮ ಮನಸ್ಸನ್ನು ಶ್ರುತಿಗೊಳಿಸಬೇಕು; ಕೇಂದ್ರೀಕರಿಸಬೇಕು. ಇದು ಇವೆಲ್ಲವುಗಳಿಂದ ಸಾಧ್ಯ. ಧ್ಯಾನ ಮನಸ್ಸನ್ನು ಚಂಚಲತೆಯಿಂದ ಏಕಾಗ್ರತೆಯ ಸ್ಥಿತಿಗೆ ಕೊಂಡೊಯ್ಯುತ್ತದೆ. ಮನುಷ್ಯನ ಮನಸ್ಸನ್ನು ಮನೋ ವೈಜ್ಞಾನಿಕ ದೃಷ್ಟಿಯಿಂದ ಅರ್ಥಮಾಡಿಕೊಳ್ಳಬೇಕು. ಅದು ಯಾವಾಗಲೂ ಒಂದೇ ತೆರನಾಗಿರೋದಿಲ್ಲ. ಸುಪ್ತ ಮನಸ್ಸು ಜಾಗೃತ ಮನಸ್ಸು, ಅರಳಿದ ಮನಸ್ಸು, ಕೆರಳಿದ ಮನಸ್ಸು, ಪ್ರಶ್ನಿಸುವ ಮನಸ್ಸು, ಸಂಶಯ ಚಿತ್ತ, ಶಾಂತ ಚಿತ್ತ, ಸಮಾಧಾನ ಚಿತ್ತ- ಹೀಗೆ ಮನಸ್ಸಿಗೆ ನಾನಾ ಮುಖಗಳಿವೆ.

ಈ ಎಲ್ಲಾ ಸಂದರ್ಭಗಳಲ್ಲಿ ಮನಸ್ಸು 2 ರೀತಿಯಲ್ಲಿ ವ್ಯವಹರಿಸುತ್ತದೆ- ಬುದ್ಧಿ ಪೂರ್ವಕವಾಗಿ ಮತ್ತು ಭಾವಪೂರ್ವಕವಾಗಿ, ವಿವೇಕ, ಬುದ್ಧಿ ಪೂರ್ವಕವಾಗಿ ಮಾಡಿದ ಕೆಲಸದ ಪರಿಣಾಮ ವಾದರೆ, ಉದ್ರೇಕ, ಉದ್ವೇಗಗಳು ಭಾವಪರವಶವಾದ ಪರಿಣಾಮ. ಭಾವನಾತ್ಮಕ ಮನಸ್ಸು ಬಹಳ ಬೇಗ ಭಾವನೆಗಳ ಸುಳಿಗೆ ಸಿಲುಕು ತ್ತದೆ. ವಾಸ್ತವಿಕತೆಯಿಂದ ದೂರವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಮನಸ್ಸಿ ನಿಂದ ಭಾವನಾತ್ಮಕ ಅಂಶಗಳನ್ನು ಸರಿಸಿ, ಬುದ್ಧಿಯನ್ನು ಕೆಲಸ ಮಾಡಲು ಬಿಡಬೇಕು.

ಪ್ರತಿಯೊಬ್ಬರಲ್ಲೂ, ಮನಸ್ಸಿನ ಎಲ್ಲಾ ಮುಖಗಳು, ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಲೇ ಇರುತ್ತವೆ. ಈ ಕಾರಣದಿಂದಲೇ ವ್ಯಕ್ತಿ ಭಿನ್ನ ಭಿನ್ನವಾದ
ಮುಖವಾಡಗಳನ್ನು ಹೊಂದಿರುತ್ತಾನೆ ಹಾಗೂ ಅವನ್ನು ಬದಲಾಯಿಸುತ್ತಿರುತ್ತಾನೆ. ಇದನ್ನು ಒಂದು ರೀತಿಯ ಪ್ರತಿರಕ್ಷಣೆ (Defence mechanism) ಹಾಗೂ
ಬಂಧನಮುಕ್ತವಾಗುವ (Release pheno menon) ಎನ್ನಬಹುದು. ಇದನ್ನು ಬಹಳ ಅರ್ಥ ಗರ್ಭಿತವಾಗಿ ಡಿ.ವಿ.ಜಿ. ಯವರು ಹೀಗೆ ವಿವರಿಸಿದರು. “ಮೊಗ ನಾಲ್ಕು ನರನಿ ಗಂತೆಯೇ ನಾರಿಗಂ ಬಗೆಯ ಜಗಕೆ ಕಾಣಪುದೊಂದು, ಮನೆಯ ಜನಕೊಂದು ಸೊಗಸಿನೆಳಸಿಕೆಗೊಂದು ತನ್ಮಾತ್ಮಕಿನ್ನೊಂದು ಬಗೆಯೆಷ್ಟೋ ಮೊಗವೆಷ್ಟೋ ಮಂಕುತಿಮ್ಮ” ತಾತ್ಪರ್ಯವಿಷ್ಟೆ: ಮನುಷ್ಯನ ಮುಖ ಒಂದೇ ಆಗಿದ್ದರೂ, ಮುಖವಾಡಗಳು ಬೇರೆ ಬೇರೆ ಆಗಿರುತ್ತವೆ.

ಈ ಮುಖವಾಡಗಳು ಅವನ ಮನೋ ಸ್ಥಿತಿಯನ್ನು ಅವಲಂಬಿಸಿರುತ್ತವೆ. ಈ ಹಿನ್ನಲೆಯಲ್ಲಿ ಮನುಷ್ಯನಿಗೆ ಸಾಮಾನ್ಯವಾಗಿ ನಾಲ್ಕು ಮುಖವಾಡಗಳಿರುತ್ತವೆ.
೧. ಮನೆಯಲ್ಲಿ ಮಡದಿ ಮಕ್ಕಳ ಜೊತೆಯಿರುವಾಗ ಒಂದು ಮುಖ. ತಾನೆಲ್ಲರ ಕಾಳಜಿವಹಿಸುವವ ಎಲ್ಲರ ಸೇವೆ ಮಾಡುವ ಕುಟುಂಬದ ಸದಸ್ಯನೆಂಬ ಚಿತ್ರಣ ವನ್ನು ಬಿಂಬಿಸುವ, ಎಲ್ಲರ ಪ್ರೀತಿ ವಿಶ್ವಾಸ ಗಳನ್ನು ಗಳಿಸುವ ಪ್ರಯತ್ನದ ಪರಿಣಾಮವಿದು.

೨. ಆತ್ಮೀಯ ಗೆಳೆಯರ ಜತೆ ಇದ್ದಾಗ ಇನ್ನೊಂದು ಮುಖ. ಹೆಂಡತಿಯೂ ಸೇರಿ ಯಾರಿಗೂ ಹೇಳದ ವಿಷಯವನ್ನು ಈತ ತನ್ನ ಆತ್ಮೀಯರ ಜೊತೆ ಹಂಚಿ
ಕೊಳ್ಳುತ್ತಾನೆ ಹಾಗೂ ಸತ್ಯವನ್ನೇ ನುಡಿಯುತ್ತಿರುತ್ತಾನೆ.

೩. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ರೀತಿಯೇ ಬೇರೆ. ಇದು ಎಲ್ಲರನ್ನೂ ಮೆಚ್ಚಿಸಲು ನಡೆದುಕೊಳ್ಳುವ ರೀತಿ. ಸರ್ವೆ ಸಾಮಾನ್ಯವಾಗಿ ಇದು ಅಸಹಜವಾಗಿ
ರುತ್ತದೆ; ನಾಟಕೀಯವಾಗಿರುತ್ತದೆ ಹಾಗೂ ಸತ್ಯಾಂಶಗಳಿಂದ ದೂರವಾಗಿರುತ್ತದೆ. ಇದರಿಂದ ಜನ ಮೋಸ ಹೋಗೋದು ಖಂಡಿತ.

೪. ತಾನೊಬ್ಬನೇ ಇರುವಾಗ ಇವನ ರೂಪವೇ ಬೇರೆ. ಇಂತಹ ಸಂದರ್ಭಗಳಲ್ಲಿ ಇವನ ನಿಜವಾದ ಗುಣಸ್ವಭಾವಗಳು ಹೊರಗೆ ಬರುತ್ತಿರುತ್ತವೆ. ಇದುವೇ
ಇವನ ನೈಜ ಸ್ವರೂಪ. ಮುಖಕ್ಕೆ ಬಣ್ಣ ಹಚ್ಚಿ ನಾಟಕವಾಡುವವರನ್ನು ಗುರುತಿಸಬಹುದು; ಆದರೆ ಮನಸ್ಸಿಗೆ ಬಣ್ಣ ಹಚ್ಚಿಕೊಂಡು ತಿರುಗಾಡುವವರನ್ನು
ಗುರುತಿ ಸೋದು ಕಷ್ಟ. ಒಟ್ಟಿನಲ್ಲಿ ಮುಖವಾಡಗಳು ಏನೇ ಇರಲಿ, ಎಷ್ಟೇ ಇರಲಿ, ನಮ್ಮ ಆತ್ಮವಂಚನೆಯನ್ನು ಮಾಡಿಕೊಳ್ಳಬಾರದು.

ಎಲ್ಲಾ ಸಂದರ್ಭಗಳಲ್ಲಿ ನೈಜವಾಗಿ ನಾವು ಏನಾಗಿದ್ದೇವೋ ಹಾಗೆಯೇ ಇರೋದು ಒಳ್ಳೆಯದು. ಕಾರಣ ಮುಖವಾಡಗಳು ಬಹಳ ಕಾಲ ಉಳಿಯದು, ಬಾಳದು. ಉಳಿಯುವುದು ವ್ಯಕ್ತಿಯ ಮೂಲರೂಪವೊಂದೇ, ಮತ್ತೇಕೆ ಬೇಕು ಈ ಆತ್ಮವಂಚನೆ? ಈ ಮುಖವಾಡ