ಹಿತವಚನ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ವರ್ಷವಿಡೀ ಓದಿದ್ದನ್ನು ೩ ಗಂಟೆಗಳ ಪರೀಕ್ಷೆ ನಿರ್ಧರಿಸುವುದರಿಂದ ಕೆಲವೊಂದು ಬಾರಿ ಚೆನ್ನಾಗಿ ಪ್ರಯತ್ನಿಸಿ, ಒಳ್ಳೆಯ ನಿರ್ವಹಣೆಯ ಹೊರತಾಗಿಯೂ ಉತ್ತಮ ಫಲಿತಾಂಶ ಬಾರದಿದ್ದಾಗ ಬಂದದ್ದನ್ನು ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
ಕಲಿತ ವಿದ್ಯೆಯ ಫಲಿತಾಂಶ ನಿರ್ಧಾರಕ್ಕೆ ಪರೀಕ್ಷೆಗಳು ಅನಿವಾರ್ಯ. ಪರೀಕ್ಷೆಗಳು ಪ್ರತಿಭೆಯನ್ನು ಪ್ರದರ್ಶನ ಮಾಡುವ ವೇದಿಕೆಗಳು. ಈ ಪರೀಕ್ಷಾ ಸಮಯದಲ್ಲಿ ಆತಂಕ, ಕೆಲವೊಮ್ಮೆ ಖಿನ್ನತೆ ಸ್ವಾಭಾವಿಕ. ಆದರೆ ಪರೀಕ್ಷೆಗೆ ಸಿದ್ಧವಾಗುವ ಸಮಯದಲ್ಲಿ ರೂಢಿಯಾಗುವ ಶಿಸ್ತು, ಶ್ರದ್ಧೆ, ಪರೀಕ್ಷಾ ಫಲಿತಾಂಶಕ್ಕೆ ಮಾತ್ರವಲ್ಲ ಜೀವನ ಪರ್ಯಂತ ನೆರವಿಗೆ ಬರುತ್ತವೆ ಹಾಗೂ ಪರೀಕ್ಷಾ ಸಮಯದ ಆತಂಕವನ್ನು ದೂರ ಮಾಡುತ್ತವೆ. ಶಿಸ್ತು, ಸಂಯಮ, ತಾಳ್ಮೆಯಂಥ ಅಂಶಗಳು ಉತ್ತಮ ಅಂಕ ಮತ್ತು ಶ್ರೇಣಿ ಗಳಿಸುವುದಕ್ಕಷ್ಟೇ ಅಲ್ಲದೆ ಕೆಲವು ಜೀವನ ಮೌಲ್ಯಗಳನ್ನು ಅನ್ವೇಷಿಸಿ ಅಳವಡಿಸಿಕೊಳ್ಳಲು
ನೆರವಾಗುತ್ತವೆ. ನಮ್ಮಲ್ಲಿನ ಸಾಮರ್ಥ್ಯ, ಸಂಪನ್ಮೂಲಗಳನ್ನು ಕಂಡುಕೊಂಡು ಅವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೂ ಕಲಿಸುತ್ತವೆ.
ಕಲಿಯುವ ಸಮಯದಲ್ಲಿ ಮಾನಸಿಕ ಒತ್ತಡ ಸಹಜ. ಎಲ್ಲಾ ಒತ್ತಡಗಳು ಕೆಟ್ಟದ್ದೆಂದು ಪರಿಗಣಿಸಲಾಗದು. ಒತ್ತಡ ಒಳ್ಳೆಯದೂ ಆಗಿರುತ್ತದೆ. ಕೆಲವೊಮ್ಮೆ ಈ ಒತ್ತಡವು ಗಂಭೀರ ವಾದ ಚಿಂತನೆ ಮತ್ತು ಎಚ್ಚರಿಕೆಗೆ ಹಾಗೂ ಗುರಿ ಮುಟ್ಟುವ ಮಾರ್ಗೋಪಾಯಕ್ಕೆ ಪೂರಕವಾಗುತ್ತದೆ. ಪರೀಕ್ಷೆ ಹತ್ತಿರವಾಗುತ್ತಿದೆ, ಅದಕ್ಕಾಗಿ ಓದಿ ತಯಾರಾಗಬೇಕು ಎನ್ನುವಂಥ ಸಣ್ಣ ಪ್ರಮಾಣದ ಆತಂಕ ಒಳ್ಳೆಯದೇ. ಇಂಥ ಸಕಾರಾತ್ಮಕ ಆತಂಕ ವಿಲ್ಲದಿದ್ದರೆ ಮಕ್ಕಳಲ್ಲಿ ಓದಿನ ಕಡೆಗೆ ಗಮನ ಕಡಿಮೆಯಾಗುತ್ತದೆ. ಈ ಒತ್ತಡ ಮತ್ತು ಆತಂಕ ವಿದ್ಯಾರ್ಥಿಯ ಮನಸ್ಸಿನೊಳಗಿನದಾಗಿರಬೇಕೇ ಹೊರತು ಹೊರಗಿನಿಂದ ಬಂದದ್ದಾಗಿರಬಾರದು.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡವನ್ನು ತಡೆದುಕೊಂಡು ಉತ್ತಮ ಸಾಮರ್ಥ್ಯ ತೋರುವ ಉದ್ವೇಗದಲ್ಲಿರುವಾಗ ಒಟ್ಟಾರೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಯೋಗಕ್ಷೇಮವೂ ಬಹಳ ಪರಿಣಾಮವನ್ನು ಬೀರುತ್ತವೆ. ಪರೀಕ್ಷೆಯ ದಿನವನ್ನು ಹಬ್ಬದಂತೆ ಸಂಭ್ರಮಿಸುವಂತೆ ಮಾಡಬೇಕು. ಪೋಷಕರು ತಮ್ಮ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಬೇಕು. ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪ್ರಶ್ನೆಪತ್ರಿಕೆ ದೊರೆಯುತ್ತಿದ್ದಂತೆ ಆತಂಕಗಳು ಮಾಯವಾಗಿ ಉತ್ತರ ಬರೆಯುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೀರಿ ಮತ್ತು ನಿಮ್ಮ ಎಲ್ಲಾ ಏಕಾಗ್ರತೆಯು ಪರೀಕ್ಷೆಗೆ ಬಂದ ಪ್ರಶ್ನೆಗಳು ಮತ್ತು ಅದಕ್ಕೆ ಬರೆಯಬಹುದಾದ ಉತ್ತರದ ಮೇಲೆ ಕೇಂದ್ರೀಕೃತಗೊಳ್ಳುತ್ತದೆ.
ಪ್ರಸಕ್ತ ಸನ್ನಿವೇಶದಲ್ಲಿ ಪರೀಕ್ಷೆಯೆಂಬುದು ಅಂಕ ಗಳಿಕೆಯ ಪೈಪೋಟಿಯಾಗಿ ಮಾರ್ಪಾಟಾಗಿದೆ. ವಿದ್ಯಾರ್ಥಿಗಳು, ಹೆತ್ತವರು, ಅಧ್ಯಾಪಕರು, ಶಾಲಾ ಆಡಳಿತ ಮಂಡಳಿಯ ಸದಸ್ಯರು ಎಲ್ಲರೂ ಬಯಸುವುದು ಶೇಕಡಾ ವಾರು ಅಂಕ, ರ‍್ಯಾಂಕ್ ಹಾಗೂ ಶೇ.೧೦೦ರಷ್ಟು ಫಲಿತಾಂಶ. ಈ ಅಂಕಗಳಿಕೆಯ ನಾಗಾಲೋಟದಲ್ಲಿ ಇದೀಗ ಎಸ್‌ಎಸ್ ಎಲ್‌ಸಿಯಲ್ಲಿ ೬೨೫ಕ್ಕೆ ೬೨೫, ಪಿಯುಸಿಯಲ್ಲಿ ೬೦೦ಕ್ಕೆ ೬೦೦ ಅಂಕಕ್ಕೆ ಬಂದು ನಿಂತು ನಾಲ್ಕಾರು ವರ್ಷಗಳು ಕಳೆದು ಹೋದವು.
ಎಲ್ಲಿಯಾದರೂ ಒಂದಂಕದಲ್ಲಿ ಹೆಚ್ಚು ಕಡಿಮೆ ಯಾದರೂ ಕೆಲ ವಿದ್ಯಾರ್ಥಿಗಳು ಪರೀಕ್ಷಾ ವಿಷಯದಲ್ಲಿ ಫೇಲಾದ ರೀತಿ ವರ್ತಿಸುವುದೂ ಇದೆ. ಇದು ವಾಸ್ತವ. ಏಕೆಂದರೆ ಅಂಕಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ಪ್ರವೇಶಕ್ಕೆ ಅಳತೆಗೋಲು. ಈ ಸಂಬಂಧ ವಿದ್ಯಾರ್ಥಿಗಳು ನೆನಪಿಡಬೇಕಾದ ಪ್ರಮುಖ ವಿಚಾರವೆಂದರೆ ಆ ನಿಟ್ಟಿನಲ್ಲಿ ಗುರಿ, ಛಲ, ಪ್ರಯತ್ನ, ತಾಳ್ಮೆ ಇರಬೇಕು. ಸಣ್ಣ ಸಣ್ಣ ಎಡವಟ್ಟುಗಳು ಪರೀಕ್ಷೆಯಲ್ಲಿ ಸರ್ವೇಸಾಮಾನ್ಯ, ಅದರ ಬಗ್ಗೆ
ಚಿಂತಿಸಬಾರದು. ಆಗ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಗಳನ್ನು ಆತಂಕವಿಲ್ಲದೆ ಎದುರಿಸಲು ಮತ್ತು ಸಾಧನೆಯೊಂದಿಗೆ ದಾಟಿ ಮುಂದೆ ಸಾಗಲು ಸಾಧ್ಯವಾಗುತ್ತದೆ.
ಪರೀಕ್ಷಾ ಸನ್ನದ್ಧತೆ ಅತ್ಯಂತ ಪ್ರಮುಖ ವಾದದ್ದು ಎಂಬುದ ರಲ್ಲಿ ಸಂದೇಹವಿಲ್ಲ. ಪರೀಕ್ಷೆಯನ್ನು ಎದುರಿಸುವುದು ಕೂಡಾ ಒಂದು ಕಲೆ. ಈ ಕಲೆಯನ್ನು ಮಕ್ಕಳು ಚಿಕ್ಕ ತರಗತಿಯಿಂದಲೇ ರೂಢಿಸಿಕೊಳ್ಳಲು ಹೆತ್ತವರು, ಅಧ್ಯಾಪಕರು ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಲು ಅವರು ಬಹುಮುಖ್ಯ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಪ್ರಥಮವಾಗಿ ವಿದ್ಯಾರ್ಥಿಗಳು ಹೊಣೆಗಾರಿಕೆಯನ್ನು ರೂಢಿಸಿ ಕೊಳ್ಳುವಂತೆ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವಂತೆ ಮಾಡಬೇಕು.
ಶೈಕ್ಷಣಿಕ ವರ್ಷದ ಆರಂಭದಿಂದಲೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಕಂಡುಕೊಂಡಲ್ಲಿ ಪರೀಕ್ಷೆಯ ಸಮಯ ದಲ್ಲಿ
ಅದು ಉಪಯೋಗಕ್ಕೆ ಬರುತ್ತದೆ. ಗುಂಪು ಕಲಿಕೆಯಿಂದ ಖಿನ್ನತೆ, ಒತ್ತಡ ನಿವಾರಣೆಯಾಗುವುದಲ್ಲದೆ ಆಲೋಚನಾ ಸಾಮರ್ಥ್ಯ, ಸಂಹವನಾ ಶಕ್ತಿ ಬೆಳೆಯುತ್ತದೆ. ಮೊದಲಿನಿಂದಲೂ ಸಹಪಾಠಿಗಳ ಒಡನಾಟದಲ್ಲಿ ಕಲಿಯುವ ಮಕ್ಕಳು ಓದಿನ ಕಷ್ಟ-ಸುಖಗಳನ್ನು ಪರಸ್ಪರ ಹಂಚಿಕೊಳ್ಳುವ ಕಾರಣ
ದಿಂದ ಪರೀಕ್ಷೆಯ ಸಮಯದಲ್ಲಿ ಧೈರ್ಯದಿಂದ ಇರುತ್ತಾರೆ.
ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಬರೆದು ಕಲಿಯುವಂತೆ ಮಾಡಿದರೆ ಪರೀಕ್ಷೆಯಲ್ಲಿ ಅದೇ ಅಥವಾ ಅಂಥದೇ ಪ್ರಶ್ನೆ ಬಂದಾಗ ಸುಲಭವಾಗಿ ಉತ್ತರಿಸಲು ಸಾಧ್ಯವಾಗುತ್ತದೆ. ಮಕ್ಕಳ ಅಂಕಪಟ್ಟಿಯನ್ನು ಪೋಷಕರು ತಮ್ಮ ವಿಸಿಟಿಂಗ್ ಕಾರ್ಡ್ ಎಂದು ಭಾವಿಸಬಾರದು. ಪರೀಕ್ಷೆಯು ಒಂದು ಸಂಭ್ರಮ ಎಂಬಂಥ ವಾತಾವರಣವನ್ನು ಪೋಷಕರು ಸೃಷ್ಟಿಸ ಬೇಕು. ಪ್ರಧಾನಿ ಮೋದಿಯವರು ಈ ವಿಷಯದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಮಕ್ಕಳ ಸಾಮರ್ಥ್ಯಕ್ಕಿಂತ ಹೆಚ್ಚಿನ ನಿರೀಕ್ಷೆಯಿಟ್ಟರೆ ಅದು ಮಕ್ಕಳಲ್ಲಿ ಅತಿಯಾದ ಒತ್ತಡ ಮತ್ತು ಖಿನ್ನತೆಗೂ ಕಾರಣವಾಗುತ್ತದೆ. ಆದ್ದರಿಂದ ಪೋಷಕರು
ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮವನ್ನೂ ಪೋಷಿಸುವುದು ಅಗತ್ಯ. ಪರೀಕ್ಷಾ ಸಮಯದಲ್ಲಿ ಗುಣಮಟ್ಟದ ನಿದ್ರೆಯೂ ಮುಖ್ಯವಾದದ್ದು.
ನಿದ್ರೆಯು ಅರಿವಿನ ಕ್ರಿಯೆ, ಸ್ಮರಣೆ ಮತ್ತು ಭಾವನಾತ್ಮಕತೆಯ ಪುನಶ್ಚೇತನದ ನಡುವೆ ಸಂಬಂಧ ಹೊಂದಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆಯು ಅತ್ಯವಶ್ಯಕ. ಒತ್ತಡ ನಿವಾರಣೆಗೆ ವಿದ್ಯಾರ್ಥಿಗಳು ಧ್ಯಾನ, ಸರಳ ಉಸಿರಾಟದ ಪ್ರಕ್ರಿಯೆಗಳನ್ನು ರೂಢಿಸಿಕೊಂಡರೆ ಉತ್ತಮ. ಪರೀಕ್ಷೆಯ ಅಂತಿಮ ಕ್ಷಣ ದಲ್ಲಿ ಮಾಡುವ ಗಡಿಬಿಡಿ ಬಹಳ ಹಾಳು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ವಂತೂ ಸಾಧ್ಯವೇ ಇಲ್ಲ. ಪರೀಕ್ಷೆಗಳನ್ನು ಸಮರ್ಥ ರೀತಿಯಲ್ಲಿ ಎದುರಿಸು ವುದು ಪರೀಕ್ಷೆಯ ಫಲಿತಾಂಶಕ್ಕೆ ಪೂರಕವಾಗುತ್ತದೆ.
ಮಕ್ಕಳ ಪ್ರಗತಿಗೆ ಅವರನ್ನೇ ಹೊಣೆಗಾರರಾಗಿಸುವುದನ್ನು ಪರೀಕ್ಷಾ ಕಾಲದಿಂದಲೇ ಆರಂಭಿಸುವುದು ಒಳಿತು. ಪರೀಕ್ಷೆಗೆ ಎಷ್ಟೇ ತಯಾರಾಗಿದ್ದರೂ ಪಾಸಾಗುವುದು, ಫೇಲಾಗುವುದು, ನಿರೀಕ್ಷೆಗೆ ತಕ್ಕಂತೆ ಅಂಕಗಳನ್ನು ಪಡೆಯುವುದು ಕೆಲವೊಮ್ಮೆ ವಿದ್ಯಾರ್ಥಿಗಳ ಕೈಯಲ್ಲಿರುವುದಿಲ್ಲ. ಆದರೆ ವರ್ಷವಿಡೀ
ಓದಿದ್ದನ್ನು ಎರಡೂವರೆ ಅಥವಾ ಮೂರು ಗಂಟೆಗಳ ಪರೀಕ್ಷೆ ನಿರ್ಧರಿಸುವುದರಿಂದ ಕೆಲವೊವ ಚೆನ್ನಾಗಿ ಪ್ರಯತ್ನಿಸಿ, ಒಳ್ಳೆಯ ನಿರ್ವಹಣೆಯ
ಹೊರತಾಗಿಯೂ ಉತ್ತಮ ಫಲಿತಾಂಶ ಬಾರದಿದ್ದಾಗ ಬಂದದ್ದನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಹೀಗಾದಲ್ಲಿ ಒಂದು ಮೌಲಿಕ ಜೀವನ ಕೌಶಲವನ್ನು ಅವರು ಕರಗತ ಮಾಡಿ ಕೊಂಡಂತಾಗುತ್ತದೆ. ಈ ಸಮಯದಲ್ಲಿ ಜೀವನವು ಪರೀಕ್ಷೆ ಗಳಿಗಿಂತಲೂ ಹೆಚ್ಚು ಮುಖ್ಯವೆನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಪರೀಕ್ಷೆಗಳನ್ನು ಸಮರ್ಪಕವಾಗಿ ಎದುರಿಸಲು ಅಗತ್ಯ ವಿರುವ ಒಂದಷ್ಟು ಪ್ರಾಯೋಗಿಕ, ವೈಜ್ಞಾನಿಕ ಸಲಹೆಗಳನ್ನು ಪ್ರಧಾನಿಯವರು ಇತ್ತೀಚೆಗೆ ನೀಡಿದ್ದಾರೆ. ಅವು ಪ್ರತಿಯೊಬ್ಬರಿಗೂ ಅನ್ವಯಿಸುತ್ತವೆ. ರೈಲು ಬರುವ ಮುಂಚೆ ರೈಲ್ವೇ
ಸ್ಟೇಷನ್‌ಗೆ ಹೋಗುವಂತೆ ಪರೀಕ್ಷಾ ಕೇಂದ್ರಗಳಿಗೆ ೧೦ ನಿಮಿಷ ಮುಂಚೆ ತಲುಪಬೇಕು. ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಯನ್ನು ಗಡಿಬಿಡಿ ಮಾಡಿಕೊಳ್ಳದೆ ಅರ್ಥ ಮಾಡಿಕೊಂಡರೆ ಸಮರ್ಪಕ ಉತ್ತರ ಬರೆಯಲು ಸಾಧ್ಯ.
ನೀರಿಗೆ ಇಳಿಯದೆ ಈಜು ಕಲಿಯಲು ಸಾಧ್ಯವಿಲ್ಲ; ಹಾಗೆಯೇ ಉತ್ತರ ಬರೆಯುವ ಅಭ್ಯಾಸಕ್ಕಾಗಿ ಹಳೆಯ ಪ್ರಶ್ನೆಪತ್ರಿಕೆಗಳಿಗೆ ಮತ್ತು ನಿರೀಕ್ಷಿತ ಪ್ರಶ್ನೆಗಳಿಗೆ
ಉತ್ತರ ಬರೆದು ಕಲಿತರೆ ಉತ್ತಮ. ಎಡೆಬಿಡದೆ ಓದದೆ ಮಧ್ಯೆ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳುವುದರಿಂದ, ಒಳ್ಳೆಯ ಆಹಾರ ಸೇವನೆಯಿಂದ, ಆತ್ಮವಿಶ್ವಾಸ ದಿಂದ ಪರೀಕ್ಷೆ ಬರೆಯುವ ರೂಢಿ ಮಾಡಿಕೊಳ್ಳುವುದು ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯಗತ್ಯ.
(ಲೇಖಕರು ವಿಜಯ ಬ್ಯಾಂಕ್‌ನ
ನಿವೃತ್ತ ಮುಖ್ಯ ಪ್ರಬಂಧಕರು)