Sunday, 15th December 2024

ಕುಟುಂಬ ಮೋಹದಲ್ಲಿ ಪ್ರಜಾಪ್ರಭುತ್ವ

ಅಶ್ವತ್ಥಕಟ್ಟೆ

ranjith.hoskere@gmail.com

ವಿಶ್ವದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು. ಸಾಮಾನ್ಯ ವ್ಯಕ್ತಿಯೂ ಅರಸನಾಗಿ ದೇಶ, ರಾಜ್ಯವನ್ನು ಮುನ್ನಡೆಸಬಹುದು ಎನ್ನುವುದು ಭಾರತ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಈ ಹಿಂದಿದ್ದ ರಾಜರ ಆಳ್ವಿಕೆ ಪದ್ಧತಿಯನ್ನು ವಿರೋಧಿ ಸಿಯೇ ಸ್ವಾತಂತ್ರ್ಯಾ ನಂತರದಲ್ಲಿ ನವಭಾರತದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ, ವಂಶಾಡಳಿ ತದ ಬದಲಿಗೆ, ಪ್ರತಿಯೊಬ್ಬರಿಗೂ ಸಮಾನ ಹಕ್ಕು ಸಿಗುವಂತಾಗಬೇಕು ಎನ್ನುವ ಆಶಯವನ್ನು ಹೊಂದಲಾಗಿತ್ತು.

ಈ ರೀತಿ ಸಮಾನ ಹಕ್ಕನ್ನು ನೀಡಬೇಕು ಎನ್ನುವ ಉದ್ದೇಶದಿಂದಲೇ ಸಂವಿಧಾನದ ರಚನೆಯ ವೇಳೆ ಜನಪ್ರತಿನಿಧಿಗಳ ಆಯ್ಕೆ ವಿಷಯದಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಜಾತಿ, ಧರ್ಮ, ಆಸ್ತಿಗಳೆಲ್ಲವನ್ನೂ ಮೀರಿ ಜನಪ್ರತಿನಿಧಿಗಳ ಆಯ್ಕೆಗೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದರೆ ಇಂಥ ಅದ್ಭುತ ಪರಿಕಲ್ಪನೆಯಲ್ಲಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಪದೇಪದೆ ಚರ್ಚಿತವಾಗುವ ವಿಷಯ, ಪಕ್ಷಗಳ ಮೇಲೆ ಆರೋಪಿಸಲು ಬಳಸಿಕೊಳ್ಳುವ ಸಾಮಾನ್ಯ ಆರೋಪವೆಂದರೆ ‘ಕುಟುಂಬ ರಾಜಕಾರಣ’ ಎನ್ನುವುದಾಗಿದೆ.

ಹಲವು ದಶಕಗಳಿಂದ ಈ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬರುತ್ತಿರುವ ಅನೇಕರು ಇದಕ್ಕೆ ಕಡಿವಾಣ ಹಾಕಬೇಕು. ಜನಪ್ರತಿನಿಽಗಳ ಮಕ್ಕಳೇ ಜನಪ್ರತಿನಿಧಿಗಳಾಗಬೇಕು ಎನ್ನುವ ನಿಯಮವಿಲ್ಲ. ಆದ್ದರಿಂದ ಕೆಲಸ ಮಾಡಿದವರಿಗೆ, ಮಾಡುವವರಿಗೆ ಅವಕಾಶ ನೀಡಬೇಕು ಎನ್ನುವ ಮಾತುಗಳು ಕೇಳಿಬರುತ್ತವೆ. ಎಲ್ಲ ಪಕ್ಷಗಳ ನಾಯಕರೂ ‘ನಮ್ಮಲ್ಲಿ ಸರ್ವರಿಗೂ ಸಮಪಾಲು ಎನ್ನುವ ತತ್ವವಿದೆ, ಆದ್ದರಿಂದ ಕುಟುಂಬ ರಾಜಕಾರಣಕ್ಕೆ ಒಪ್ಪಿಗೆ ನೀಡುವುದಿಲ್ಲ’ ಎನ್ನುವ ಭಾಷಣವನ್ನು ಮಾಡುತ್ತಾರೆ. ಆದರೆ ಚುನಾವಣೆಯ ಸಮಯದಲ್ಲಿ ಮಾತ್ರ ‘ಗೆಲ್ಲುವ ಅರ್ಹತೆ’ ಎನ್ನುವ ಮಾನ ದಂಡವನ್ನು ಮುಂದಿಟ್ಟು ಕೊಂಡು ವಂಶಾಡಳಿತಕ್ಕೆ ಅವಕಾಶ ನೀಡುವುದು ಸಾಮಾನ್ಯವಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಒಂದು ಬಾರಿ ಶಾಸಕ ಅಥವಾ ಸಂಸದನಾಗಿ ಆಯ್ಕೆಯಾದರೆ, ತನ್ನೆಲ್ಲ ಬಳಗವೂ ಒಂದಲ್ಲೊಂದು ರೀತಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಲು ಶುರುಮಾಡುತ್ತಾನೆ. ಒಂದು ವೇಳೆ ತನಗೆ ಸ್ಪಽಸಲು ಸಮಸ್ಯೆಯಾಗುವುದು ಖಚಿತವಾಗುತ್ತಿದ್ದಂತೆ, ಮಕ್ಕಳು, ಹೆಂಡತಿ, ಸಹೋದರರನ್ನು ಇಳಿಸುವ ಮೂಲಕ ‘ಹೊಸ ಮುಖ’ಕ್ಕೆ ಅವಕಾಶ ಎನ್ನುವ ಸಮರ್ಥನೆ ಮಾಡುವುದು ತೀರಾ ಸಾಮಾನ್ಯವೆನಿಸಿದೆ. ಈ ಕುಟುಂಬ ರಾಜಕಾರಣದ ಆರೋಪಕ್ಕೆ ಯಾವ ಪಕ್ಷವೂ ಹೊರತಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳು ಕುಟುಂಬವೊಂದರ ಹಿಡಿತದಲ್ಲಿರುತ್ತವೆ ಎನ್ನುವುದು ಹಲವರ ಮಾತು. ಆದರೆ ಗಾಂಧಿ ಕುಟುಂಬದ ನೆರಳಿಲ್ಲದೆ ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ ಪಕ್ಷವನ್ನು ಊಹಿಸಿಕೊಳ್ಳುವುದು ಕಷ್ಟ ಎನ್ನುವುದನ್ನು ಹಲವರು ಮರೆಯುತ್ತಾರೆ. ಮುಂದಿನ ತಿಂಗಳು ಎದುರಾಗಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳನ್ನೇ ಗಮನಿ
ಸಿದರೆ, ಎಲ್ಲ ಪಕ್ಷಗಳಲ್ಲಿನ ಅಭ್ಯರ್ಥಿಗಳಲ್ಲಿ ಕನಿಷ್ಠ ಶೇ.೫೦ಕ್ಕಿಂತ ಹೆಚ್ಚು ಮಂದಿ ಸಕ್ರಿಯ ರಾಜಕಾರಣದಲ್ಲಿರುವ ಒಂದಿಲ್ಲೊಂದು ಕುಟುಂಬದ ಸದಸ್ಯರೇ ಆಗಿರುವುದು ಅರಿವಾಗುತ್ತದೆ. ಈ ಹಿಂದೆ ಜೆಡಿಎಸ್ ಅನ್ನು ದೇವೇಗೌಡ ಕುಟುಂಬಕ್ಕೆ ಸೀಮಿತವಾಗಿರುವ ಪಕ್ಷವೆಂದು ಮೂದಲಿಸುತ್ತಿದ್ದ ಕಾಂಗ್ರೆಸ್ ಈ ಬಾರಿ ಐವರು ಸಚಿವರ ಪುತ್ರ-ಪುತ್ರಿಯರಿಗೆ, ಮಾಜಿ ಸಚಿವರ ಮಕ್ಕಳಿಗೆ, ಸಹೋದರ ನಿಗೆ ಟಿಕೆಟ್ ನೀಡಿದೆ.

ಸಚಿವರಾದ ರಾಮಲಿಂಗಾರೆಡ್ಡಿ, ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಅವರ ಪುತ್ರ-ಪುತ್ರಿಯರು ಚುನಾವಣಾ ಕಣದಲ್ಲಿದ್ದಾರೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಿದ್ದು, ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಪುತ್ರ ಮನ್ಸೂರ್ ಆಲಿ ಖಾನ್, ಮಾಜಿ ಉಪಸ್ಪೀಕರ್ ವೆಂಕಟಪ್ಪ ಪುತ್ರ ಪ್ರೊ.ರಾಜೀವ್ ಗೌಡ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಕಣದಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರು ಕಣದಲ್ಲಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರು ಹಾಲಿ ಸಂಸದರಿದ್ದು, ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಮೂಲಕ ಘೋಷಣೆ ಯಾಗಿರುವ ೨೪ ಕ್ಷೇತ್ರಗಳಲ್ಲಿ ಟಿಕೆಟ್ ಪಡೆದಿರುವ ೧೧ಕ್ಕೂ ಹೆಚ್ಚು ಮಂದಿಯ ಕುಟುಂಬದವರು ‘ಸಕ್ರಿಯ’ ರಾಜಕಾರಣದಲ್ಲಿರುವವರೇ ಆಗಿದ್ದಾರೆ.

ಇನ್ನೂ ಘೋಷಣೆಯಾಗಬೇಕಿರುವ ಕೋಲಾರದಿಂದ ಸಚಿವ ಕೆ.ಎಚ್. ಮುನಿಯಪ್ಪ ಅಳಿಯನಿಗೆ ಹಾಗೂ ಚಾಮರಾಜನಗರ ದಿಂದ ಸಚಿವ ಎಚ್ .ಸಿ. ಮಹದೇವಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಈ ಕ್ಷಣದವರೆಗೆ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿಯೂ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ. ರಾಘವೇಂದ್ರ, ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ್ ಅವರ ಬದಲಿಗೆ ಅವರ ಪತ್ನಿ ಗಾಯತ್ರಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪತಿ ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕ ರವಿಸುಬ್ರಹಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ, ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ.ಸಿ.ಎನ್ ಮಂಜುನಾಥ್ ಅವರಿಗೆ ಮಣೆಹಾಕಿದೆ.

ಈ ಎರಡು ರಾಷ್ಟ್ರೀಯ ಪಕ್ಷಗಳ ಹೊರತಾಗಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ಗೆ ಸಿಕ್ಕಿರುವ ಮೂರು ಸ್ಥಾನಗಳ ಪೈಕಿ ಎರಡ ರಲ್ಲಿ ದೇವೇಗೌಡರ ಮೊಮ್ಮಕ್ಕಳು ಅಥವಾ ಮಗ ಕುಮಾರಸ್ವಾಮಿ ಅವರನ್ನು ನಿಲ್ಲಿಸುವುದು ನಿಶ್ಚಿತವಾಗಿದೆ. ಹಾಗೆ ನೋಡಿದರೆ, ಎರಡೂ ರಾಜಕೀಯ ಪಕ್ಷಗಳು ಈ ಕುಟುಂಬ ರಾಜಕಾರಣದ ವಿರುದ್ಧ ಮೊದಲಿನಿಂದಲೂ ಧ್ವನಿ ಎತ್ತಿದ್ದವು. ಅದರಲ್ಲಿಯೂ ಕಾಂಗ್ರೆಸ್ ಕಳೆದ ವರ್ಷ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕುಟುಂಬ ರಾಜಕಾರಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎನ್ನುವ ನಿರ್ಣಯವನ್ನು ಕೈಗೊಂಡಿತ್ತು. ಆ ಕಾರ್ಯಕಾರಣಿಯಲ್ಲಿ ಪ್ರಮುಖವಾಗಿ ಒಬ್ಬರಿಗೆ ಒಂದೇ ಹುದ್ದೆ ಹಾಗೂ ಕುಟುಂಬ ರಾಜಕಾರಣದ ಹೊರತಾಗಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗಿತ್ತು. ಆ ಕಾರಣಕ್ಕಾಗಿಯೇ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದ ಹೊರತಾಗಿ ಬೇರೆಯವರಿಗೆ ನೀಡಬೇಕೆಂದು ತೀರ್ಮಾನಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡಲಾಯಿತು.

ಈ ರೀತಿ ಕಠಿಣ ತೀರ್ಮಾನ ಕೈಗೊಂಡಿದ್ದರಿಂದ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆ, ಅರ್ಧಿಕಾರ ಹಂಚಿಕೆ ವಿಷಯದಲ್ಲಿ ಕೆಲವೊಂದ ಷ್ಟು ಬದಲಾವಣೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಅನೇಕರಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಕ್ಕಮಟ್ಟಿಗೆ ರಾಜ್ಯ ನಾಯಕರು ಇದನ್ನು ಪಾಲಿಸುವಲ್ಲಿಯೂ ಯಶಸ್ವಿಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ‘ಟಾರ್ಗೆಟ್ ೨೦’ ಕೊಡುತ್ತಿದ್ದಂತೆ, ‘ಒತ್ತಡ’ಕ್ಕೆ ಮಣಿದು ಸಚಿವರ ಮಕ್ಕಳು, ಹೆಂಡತಿ, ಅಳಿಯಂದಿರಿಗೆ ನೀಡಬೇಕಾಗಿದೆ ಬಂದಿದೆ. ಹಾಗೆ ನೋಡಿದರೆ, ಈ ಹಿಂದೆ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದು ನಿಂತಿದ್ದು ಇದೇ ಬಿಜೆಪಿ.

ಕುಟುಂಬ ರಾಜಕಾರಣವನ್ನು ಬಹುದೊಡ್ಡ ಮಟ್ಟದಲ್ಲಿ ವಿರೋಧಿಸಿಯೇ ಅದು ರಾಷ್ಟ್ರಮಟ್ಟದಲ್ಲಿ ಅಸ್ತಿತ್ವ ಕಂಡುಕೊಂಡಿದ್ದು. ಆದರೀಗ ಸ್ವತಃ ಬಿಜೆಪಿಯಲ್ಲಿಯೇ ಕುಟುಂಬ ರಾಜಕಾರಣದ ಆರೋಪ ಕೇಳಿಬರುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ಕೇಳಿಬರುತ್ತಿದೆ. ಈ ಕುಟುಂಬ ರಾಜಕಾರಣ ಆರೋಪಕ್ಕಾಗಿಯೇ ಟಿಕೆಟ್ ಹಂಚಿಕೆ ಯಾದ ದಿನದಿಂದಲೂ ಪಕ್ಷದಲ್ಲಿ ಬಂಡಾಯ ಕಾಣಿಸಿಕೊಂಡಿದ್ದು, ಬಿಜೆಪಿಯ ಕಟ್ಟಾಳುವಾಗಿದ್ದ ಈಶ್ವರಪ್ಪ ಸಹ ವರಿಷ್ಠರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಮಜಾ ಎಂದರೆ, ಯಾವ ಕುಟುಂಬ ರಾಜಕಾರಣವನ್ನು ಖಂಡಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮಾತುಗಳನ್ನು ಈಶ್ವರಪ್ಪ ಅವರು ಆಡುತ್ತಿದ್ದಾರೋ, ಅವರು ಬಂಡಾಯವೇಳುವುದಕ್ಕೂ ಇದೇ ಪುತ್ರಪ್ರೇಮವೇ ಕಾರಣ. ಹಾವೇರಿಯಲ್ಲಿ ಪುತ್ರ ಕಾಂತೇಶ್‌ಗೆ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಇದೀಗ ಯಡಿಯೂರಪ್ಪ ವಿರುದ್ಧ ಮುನಿಸಿ ಕೊಂಡು, ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರನ್ನು ಸೋಲಿಸಲು ಬಂಡಾಯದ ಕಹಳೆಯನ್ನು ಈಶ್ವರಪ್ಪ ಮೊಳಗಿಸಿ ದ್ದಾರೆ.

ಈ ರೀತಿ ತಮ್ಮ ಕುಟುಂಬದವರೊಬ್ಬರಿಗೆ ಟಿಕೆಟ್ ಸಿಗಲಿಲ್ಲವೆಂದು, ತಮಗೆ ಟಿಕೆಟ್ ಸಿಗಲಿಲ್ಲವೆಂದು ನಾಯಕರುಗಳು ಬಂಡಾಯ ವೇಳುವುದು ಸರ್ವೇಸಾಮಾನ್ಯ. ಆದರೆ ರಾಜ್ಯ, ರಾಷ್ಟ್ರ ರಾಜಕೀಯದ ಇತಿಹಾಸದಲ್ಲಿ ಯಾವುದೇ ಒಬ್ಬ ನಾಯಕರು, ‘ಈ ಕಾರ್ಯ ಕರ್ತನಿಗೆ ಅವಕಾಶ ಸಿಗಲಿಲ್ಲ’ ಎನ್ನುವ ಕಾರಣಕ್ಕೆ ಬಂಡಾಯವೆದ್ದಿರುವುದು ಕಂಡುಬಂದಿಲ್ಲ. ಕಾಂಗ್ರೆಸ್‌ನಲ್ಲಿರುವ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುವ ಬಿಜೆಪಿಯಲ್ಲಿರುವ ರಾಜಕೀಯದ ‘ಮಾಡೆಲ್’ನಲ್ಲಿ ಕೊಂಚ ಬದಲಾವಣೆ ಯಿದೆ.

ಕಾಂಗ್ರೆಸ್ ನಲ್ಲಿ ನಾಯಕರು ಅವರ ಕುಟುಂಬದವರಿಗೆ ಕೇಳಿದವರಿಗೆಲ್ಲ ಟಿಕೆಟ್ ನೀಡಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿ ಚುಕ್ಕಾಣಿ ಹಿಡಿದ ಬಳಿಕ, ‘ಆಯ್ದ’ವರಿಗೆ ಟಿಕೆಟ್ ನೀಡುವ ಸಮಯದಲ್ಲಿ ಮಾತ್ರ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಬಾರದು ಎನ್ನುವ ಕಾರಣಕ್ಕೆ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಮಾತುಗಳನ್ನು ಹೇಳಿ ಟಿಕೆಟ್ ನಿರಾಕರಿಸಲಾಗುತ್ತದೆ. ಉದಾಹರಣೆಗೆ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ಕೊಡುವುದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎನ್ನುವ ಮಾತನ್ನು ಆಡಿದ್ದ ಬಿಜೆಪಿ ನಾಯಕರು, ಇದೇ ಸೂತ್ರವನ್ನು ಯಡಿಯೂರಪ್ಪ ಪುತ್ರ
ರಾಘವೇಂದ್ರ ಅವರಿಗೆ ಅಳವಡಿಸಲಿಲ್ಲ.

ಇದಿಷ್ಟೇ ಅಲ್ಲದೆ, ದಾವಣಗೆರೆ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಕೆಲಸ ಮಾಡಿಲ್ಲವೆಂದು ಆಡಳಿತವಿರೋಧಿ ಅಲೆಯಿದೆ
ಎಂದು ಅವರ ಪತ್ನಿ ಗಾಯತ್ರಿ ಅವರಿಗೆ ನೀಡಲಾಗಿದೆ. ೨೦೧೯ರ ಚುನಾವಣೆಗೂ ಮೊದಲು ಮೃತಪಟ್ಟ ದಿ.ಅನಂತಕುಮಾರ್ ಅವರ ಟಿಕೆಟ್ ಅನ್ನು ತೇಜಸ್ವಿನಿ ಅನಂತಕುಮಾರ್ ಅವರಿಗೆ ನೀಡದಿರಲು ಬಿಜೆಪಿ ನಾಯಕರು ನೀಡಿದ ಕಾರಣವೆಂದರೆ, ‘ಕುಟುಂಬ ರಾಜಕಾರಣ’, ಅನುಕಂಪದ ಅಲೆಯಲ್ಲಿ ಗೆಲ್ಲುವುದನ್ನು ಪಕ್ಷ ಸಹಿಸುವುದಿಲ್ಲವೆಂದು. ಆದರೆ ಅದಾದ ಕೆಲವೇ ವರ್ಷದಲ್ಲಿ ಕರೋನಾದಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯ ಈ ದ್ವಂದ್ವ ನೀತಿಯೇ ಹಲವರನ್ನು ಗೊಂದಲಕ್ಕೀಡುಮಾಡಿದೆ.

ಅನಿವಾರ್ಯತೆಯೋ ಅಥವಾ ನಾಯಕರ ಕುಟುಂಬ ಮೋಹವೋ ಒಟ್ಟಿನಲ್ಲಿ ಕುಟುಂಬ ರಾಜಕೀಯ ಎನ್ನುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗಿಕೊಂಡು ಹೋಗಿದೆ. ಅರಸೊತ್ತಿಗೆಯಲ್ಲಿ ವಂಶಪಾರಂಪರಿಕೆಗೆ ಬೇಸತ್ತು ಪ್ರಜಾಪ್ರಭುತ್ವಕ್ಕೆ ಒಗ್ಗಿಕೊಂಡ ಭಾರತದಲ್ಲಿ ಈಗಲೂ ಜನಪ್ರತಿನಿಧಿಯ ಹೆಸರಲ್ಲಿ ಕುಟಂಬದ ಒಬ್ಬರಲ್ಲ ಒಬ್ಬರನ್ನು ಕರೆತರುವ ಪ್ರಯತ್ನ ನಿರಂತರ ವಾಗಿ ನಡೆದಿದೆ. ಈ ಕುಟುಂಬ ರಾಜಕೀಯವನ್ನು ಮೀರಿ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎನ್ನುವ ‘ಘೋಷಣೆ’ಗಳನ್ನು ಮಾಡಿದ ನಾಯಕರೂ, ಮಕ್ಕಳಿಗೆ ರಾಜಕೀಯ ಭವಿಷ್ಯ ಕಲ್ಪಿಸಿದರಷ್ಟೇ ತಮ್ಮ ರಾಜಕೀಯದ ದಾರಿ ಸಂಪೂರ್ಣವಾಗುತ್ತದೆ ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಇಂಥ ಕುಟುಂಬ ರಾಜಕಾರಣದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿ, ಈ ಸಂಸ್ಕೃತಿಯ ವಿರುದ್ಧ ಮತ ಹಾಕುವ ತನಕ ಇದಕ್ಕೆ ಕೊನೆಯಿಲ್ಲ ಎನ್ನುವುದಂತೂ ಸತ್ಯ.