Friday, 13th December 2024

ತಗ್ಗುವುದೇ ಕುಟುಂಬದ ಅವಲಂಬನೆ !

ಅಶ್ವತ್ಥಕಟ್ಟೆ

ranjith.hoskere@gmail.com

ದೇಶದ ಹಲವು ರಾಜ್ಯಗಳಲ್ಲಿ ಹಿಡಿತ ಹೊಂದಿದ್ದ ಕಾಂಗ್ರೆಸ್ ಕಳೆದೊಂದು ದಶಕದಲ್ಲಿ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುವುದಕ್ಕೂ ಗಾಂಧಿ ಕುಟುಂಬದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ ಎನ್ನುವುದು ಸ್ಪಷ್ಟ. ಕಾಂಗ್ರೆಸ್ ನಾಯಕರಲ್ಲಿರುವ ಈ ಮನಸ್ಥಿತಿ, ಮತದಾರರಲ್ಲಿ ಉಳಿದಿಲ್ಲ.

ದೇಶದಲ್ಲಿ ಲೋಕಸಭಾ ಚುನಾವಣೆ ಭರದಿಂದ ಸಾಗಿದ್ದು, ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಬಾಕಿಯಿರುವ ೧೪ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ದೇಶಾದ್ಯಂತ ನಡೆಯುತ್ತಿರುವ ಮೂರನೇ ಹಂತದ ಚುನಾವಣೆಯ ನಡುವೆ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಹಗರಣ. ಅದನ್ನು ಬಿಟ್ಟರೆ ಗಣನೀಯವಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ, ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಕೈ ಚಿಹ್ನೆಯಡಿ, ಗಾಂಧಿ ಕುಟುಂಬಕ್ಕೆ ಹೊರತಾದ ‘ಸಾಮಾನ್ಯ’ ಕಾರ್ಯಕರ್ತ ಸ್ಪರ್ಧಿಸುತ್ತಿದ್ದಾನೆ ಎನ್ನುವುದಾಗಿದೆ.

ಇಡೀ ದೇಶದಲ್ಲಿ, ಕಾಂಗ್ರೆಸ್‌ನಿಂದ ಎಲ್ಲಿಂದಲೇ ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎನ್ನುವ ಗ್ರಹಿಕೆ ದಶಕಗಳ ಹಿಂದಿತ್ತು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ನಂತರ ಈ ಹಂತದಲ್ಲಿ ಕಾಂಗ್ರೆಸ್ ಇರದಿದ್ದರೂ, ಉತ್ತರ ಪ್ರದೇಶ ಹಾಗೂ ಇನ್ನುಳಿದ ಕ್ಷೇತ್ರಗಳನ್ನು ಕಾಂಗ್ರೆಸ್‌ನ ‘ಭದ್ರಕೋಟೆ’ ಎಂದೇ  ಹೇಳಲಾ ಗಿತ್ತು. ಅದರಲ್ಲಿಯೂ ಉತ್ತರ ಪ್ರದೇಶದ ಅಮೇಥಿ ಹಾಗೂ ರಾಯ್‌ಬರೇಲಿ ಲೋಕಸಭಾ ಕ್ಷೇತ್ರಗಳನ್ನು ಗಾಂಧಿ ಕುಟುಂಬದ ಪಾಲಿನ ‘ಮೀಸಲು’ ಕ್ಷೇತ್ರಗಳು ಎಂದೇ ಬಿಂಬಿಸಲಾಗಿತ್ತು ಹಾಗೂ ಸ್ವಾತಂತ್ರ್ಯದ ಬಳಿಕ ಈ ಎರಡೂ ಕ್ಷೇತ್ರದಲ್ಲಿ ಬಂದಿರುವ ಫಲಿತಾಂಶವನ್ನು ಗಮನಿಸಿದರೆ, ಈ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ.

ರಾಯ್‌ಬರೇಲಿ ಹಾಗೂ ಅಮೇಥಿ ಕ್ಷೇತ್ರದ ಇತಿಹಾಸವನ್ನು ನೋಡಿದರೆ, ಜವಾಹರಲಾಲ್ ನೆಹರು ಅವರಿಂದ ಶುರುವಾಗಿ, ಇಂದಿರಾ ಗಾಂಧಿ, ಸಂಜಯ್
ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಲ್ಲರೂ ಈ ಎರಡರಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದು ಸಂಸತ್ ಪ್ರವೇಶ ಪಡೆದಿದ್ದಾರೆ. ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಿ ಹೋದರೆ, ಗೆದ್ದ ಬಳಿಕವೇ ಈ ಕ್ಷೇತ್ರಕ್ಕೆ ಗಾಂಧಿ ಕುಟುಂಬ ಕಾಲಿಡುತ್ತಿತ್ತು. ಆ ಪ್ರಮಾಣದಲ್ಲಿ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಪಾಲಿಗೆ ಈ ಎರಡೂ ಕ್ಷೇತ್ರಗಳ ಮತದಾರರು ನಿಷ್ಠೆ ತೋರಿದ್ದರು. ಆದರೆ ೨೦೧೯ರ ಚುನಾವಣೆಯಲ್ಲಿ ಅಮೇಥಿಯ ಜನ ರಾಹುಲ್ ಗಾಂಧಿ ಅವರನ್ನು ಸ್ಮೃತಿ ಇರಾನಿ ವಿರುದ್ಧ ೫೫ ಸಾವಿರ ಮತಗಳಿಂದ ಸೋಲಿಸುವ ಮೂಲಕ ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ
ಒಂದೆನಿಸಿದ್ದ ಅಮೇಥಿಯನ್ನು ಬಿಟ್ಟುಕೊಟ್ಟಿದ್ದರು.

ಇದೀಗ ೨೦೨೪ರಲ್ಲಿ ಅಮೇಥಿಯಲ್ಲಿ ಗೆಲುವು ಕಷ್ಟ ಎನ್ನುವುದು ಅರಿವಾಗುತ್ತಿದ್ದಂತೆ, ಅಲ್ಲಿಂದ ನಿರ್ಗಮಿಸಿ ರಾಯ್ ಬರೇಲಿಯಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಅಮೇಥಿಯ ಇತಿಹಾಸವನ್ನು ನೋಡಿದರೆ, ೧೬ ಬಾರಿ ಲೋಕಸಭೆ ಚುನಾವಣೆ ಹಾಗೂ ಉಪಚುನಾವಣೆಗಳು ನಡೆದಿದ್ದು, ಸಂಜಯ್ ಗಾಂಧಿ ಅವರ ನಿಧನದ ಬಳಿಕ ೧೦ ವರ್ಷಗಳ ಕಾಲ ರಾಜೀವ್ ಗಾಂಧಿ, ಐದು ವರ್ಷ ಸೋನಿಯಾ ಗಾಂಧಿ ಹಾಗೂ ೧೫ ವರ್ಷಗಳ ಕಾಲ ರಾಹುಲ್ ಗಾಂಧಿ ಸಂಸದರಾಗಿದ್ದಾರೆ. ಕಾಂಗ್ರೆಸ್‌ನಿಂದ ಗಾಂಧಿ ಕುಟುಂಬ ಸ್ಪರ್ಧಿಸಿದಾಗಲೆಲ್ಲ ಕನಿಷ್ಠ ೭೫ ಸಾವಿರ ಅಂತರದ ಗೆಲುವನ್ನೇ ಸಾಽಸಿರುವುದು ಇತಿಹಾಸದಲ್ಲಿ ನೋಡಿದ್ದೇವೆ.

ಆದರೆ ಕಳೆದ ೧೦ ವರ್ಷದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೂ, ರಾಹುಲ್ ಗಾಂಧಿ ಅವರ ತಪ್ಪು ನಿರ್ಧಾರ ಹಾಗೂ ಅಸಡ್ಡೆಯಿಂದ ಎಂದರೆ ತಪ್ಪಾಗುವುದಿಲ್ಲ. ಈ ಬಾರಿ ಪುನಃ ಅಲ್ಲಿಂದಲೇ ಸ್ಪರ್ಧಿಸಬೇಕು ಎನ್ನುವ ಒತ್ತಡ ಕೇಳಿಬಂದರೂ ನಿಂತರೆ ಸೋಲು ಖಚಿತ ಎನ್ನುವುದು
ಗೊತ್ತಾಗುತ್ತಿದ್ದಂತೆ ಗಾಂಧಿ ಕುಟುಂಬದ ಪರಮಾಪ್ತ, ದಶಕಗಳಿಂದ ಗಾಂಧಿ ಕುಟುಂಬದ ಪರವಾಗಿ ಅಮೇಥಿ ಹಾಗೂ ರಾಯ್‌ಬರೇಲಿಯನ್ನು ನೋಡಿ ಕೊಳ್ಳುತ್ತಿರುವ ಕಿಶೋರಿ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ.

ಆರಂಭದಲ್ಲಿ ಅಮೇಥಿಯಿಂದ ರಾಹುಲ್, ರಾಯ್ ಬರೇಲಿಯಿಂದ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಮೇಥಿಯಲ್ಲಿ ಕಷ್ಟ ಎನ್ನುವುದು ತಿಳಿಯುತ್ತಿದ್ದಂತೆ ರಾಹುಲ್‌ರನ್ನು ರಾಯ್‌ಬರೇಲಿಗೆ ಕಳುಹಿಸಲು ತೀರ್ಮಾನಿಸಿ, ಪ್ರಿಯಾಂಕಾರನ್ನು ಅಮೇಥಿಯಿಂದ ಅದೃಷ್ಟ ಪರೀಕ್ಷೆಗೆ ಒಡ್ಡಲು ನಿರ್ಧರಿಸಲಾಗಿತ್ತು. ಆದರೆ ಮೊದಲ ಚುನಾವಣೆಯಲ್ಲಿಯೇ ‘ಸೋಲಿನ’ ಪಟ್ಟಿ ಹತ್ತುವುದು ಬೇಡ ಎನ್ನುವ ಕಾರಣಕ್ಕೆ ಗಾಂಧಿ ಕುಟುಂಬವನ್ನೇ ದೂರವಿಟ್ಟು ಮೂರನೇ ವ್ಯಕ್ತಿಗೆ ಅವಕಾಶ ನೀಡಲಾಗಿದೆ. ಹಾಗೆ ನೋಡಿದರೆ, ವಯಾನಾಡ್ ನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡನೇ ಕ್ಷೇತ್ರದ
ಸಹವಾಸವೇ ಬೇಡ ಎನ್ನುವ ಲೆಕ್ಕಾಚಾರದಲ್ಲಿದ್ದರು. ಇದಕ್ಕೆ ಸೋನಿಯಾ ಹಾಗೂ ಪ್ರಿಯಾಂಕಾ ಅವರ ಒಪ್ಪಿಗೆಯೂ ಇತ್ತು. ಆದರೆ ಗಾಂಧಿಯೇತರ ಕುಟುಂಬದಿಂದ ರಾಯ್ ಬರೇಲಿ ಗೆಲುವು ಅಸಾಧ್ಯ ಎನ್ನುವ ‘ಜಡ್ಡು’ ಮನಸ್ಥಿತಿ ಹಾಗೂ ಒತ್ತಡಕ್ಕೆ ಮಣಿದು ಸ್ಪರ್ಧಿಸುವ ಸ್ಥಿತಿ ಎದುರಾಗಿದೆ.

ಅಮೇಥಿಗೆ ಹೋಲಿಸಿದರೆ ರಾಯ್‌ಬರೇಲಿ ಗಾಂಧಿ ಕುಟುಂಬಕ್ಕೆ ಅತಿಹೆಚ್ಚು ‘ಆಪ್ತ’ವಾಗಿರುವ ಲೋಕಸಭಾ ಕ್ಷೇತ್ರ. ಫಿರೋಜ್ ಗಾಂಧಿ ಅವರಿಂದ ಆರಂಭವಾಗಿ, ಸೋನಿಯಾ ಗಾಂಧಿಯವರವರೆಗೆ ಈ ಕ್ಷೇತ್ರದಿಂದಲೇ ಗಾಂರ್ಧಿ ಕುಟುಂಬದವರು ಆಯ್ಕೆಯಾಗಿ ಹೋಗಿದ್ದಾರೆ. ದಶಕಗಳ ಕಾಲ ಫಿರೋಜ್ ಗಾಂಧಿ, ೧೫ ವರ್ಷ ಇಂದಿರಾ ಗಾಂಧಿ ಬಳಿಕ ಸುಮಾರು ನಾಲ್ಕು ಬಾರಿ ಸತತವಾಗಿ ಸೋನಿಯಾ ಗಾಂಧಿ ಆಯ್ಕೆಯಾಗಿದ್ದಾರೆ. ಅಮೇಥಿಗೆ ಹೋಲಿಸಿದರೆ, ರಾಯ್‌ಬರೇಲಿಯಲ್ಲಿ ಗಾಂಧಿ ಕುಟುಂಬ ಭದ್ರವಾಗಿರಲು ಪ್ರಮುಖವಾಗಿ ಈ ಕ್ಷೇತ್ರದಲ್ಲಿ ‘ಮುಸ್ಲಿಂ’ ಮತಗಳೇ ನಿರ್ಣಾಯಕವಾಗಿರುವುದರಿಂದ ಗೆಲುವು
ಪ್ರಯಾಸಕರವೇನಲ್ಲ. ಆದ್ದರಿಂದಲೇ ಅಮೇಥಿಯಿಂದ ರಾಹುಲ್ ಸ್ಪರ್ಧೆ ಬೇಡವೆಂದು ಕಾಂಗ್ರೆಸಿಗರು ರಾಯ್ ಬರೇಲಿಯಿಂದ ನಿಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಪಾಲನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕಾರ್ಯಾರಂಭವಾಗಿದೆ ಎಂದು ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಂಡು ಬರುತ್ತಿದ್ದರೂ, ಪಕ್ಷದ ನಾಯಕರಿಗೆ ಗಾಂಧಿ ಕುಟುಂಬದ ಸರ್‌ನೇಮ್ ಬೇಕಾಗಿದೆ. ಆ ಕಾರಣಕ್ಕಾಗಿಯೇ, ‘ನಾವು ನಿಲ್ಲುವುದಿಲ್ಲ; ಬೇರೆಯ ವರಿಗೆ ಕೊಡಿ’ ಎಂದು ರಾಹುಲ್ ಗಾಂಧಿ ಹೇಳಿದರೂ, ನೀವೇ ನಿಲ್ಲಬೇಕು ಎಂದು ದುಂಬಾಲು ಬೀಳುವ ಮನಸ್ಥಿತಿಯಲ್ಲಿಯೇ ಅನೇಕ ಕಾಂಗ್ರೆಸಿಗರಿದ್ದಾರೆ.

ಆದರೆ ಕಳೆದ ಒಂದೂವರೆ ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಯಾಗಿದೆ. ‘ಕೈ’ ಚಿಹ್ನೆಯಿಂದ ಯಾರು, ಎಲ್ಲಿಂದ ನಿಂತರೂ ಗೆಲ್ಲುತ್ತಾರೆ ಎನ್ನುವ ಸ್ಥಿತಿ ಹೋಗಿ, ಬಿಜೆಪಿಗೆ ಪೂರಕ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಸ್ಥಿತ್ಯಂತರಕ್ಕೆ ಬಿಜೆಪಿಗೆ ಸಿಕ್ಕ ಮೋದಿ ಹಾಗೂ ಅಮಿತ್ ಶಾ ನಾಯಕತ್ವಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ನಲ್ಲಿನ ಸಮಸ್ಯೆಗಳು ಕಾರಣ ಎಂದರೆ ತಪ್ಪಾಗುವುದಿಲ್ಲ. ಗಾಂಧಿ ಕುಟುಂಬವೇ ನಮ್ಮನ್ನು ಮುನ್ನಡೆಸಬೇಕು ಎನ್ನುವ ಕಾಂಗ್ರೆಸಿಗರ ಮನಸ್ಥಿತಿಯನ್ನು ಅನೇಕರು ಒಪ್ಪದಿದ್ದರೂ, ಗಾಂಧಿ ಕುಟುಂಬದ ಆಪ್ತ ವಲಯದಲ್ಲಿರುವವರು ಇಂಥ ಗೋಡೆಯೊಂದನ್ನು ‘ಕಟ್ಟಿದ್ದಾರೆ’.

ಈ ರೀತಿಯ ಕಾರಣಕ್ಕಾಗಿಯೇ, ಅನೇಕರು ಪಕ್ಷಬಿಟ್ಟು ಬೇರೆಬೇರೆ ಪಕ್ಷಗಳಿಗೆ ವಲಸೆ ಹೋದರು. ಇದಿಷ್ಟು ಸಾಲದು ಎನ್ನುವಂತೆ ಕಾಂಗ್ರೆಸ್‌ನ ಹಲವು
ಭದ್ರಕೋಟೆಗಳನ್ನು ನಿರ್ಲಕ್ಷ್ಯ ಮಾಡಿ, ‘ಹೇಗಿದ್ದರೂ ನಮಗೆ ಮತ ಹಾಕುತ್ತಾರೆ’ ಎನ್ನುವ ಮನಸ್ಥಿತಿಯೇ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣವೆಂದರೆ ತಪ್ಪಾಗುವುದಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ಹಿಡಿತ ಹೊಂದಿದ್ದ ಕಾಂಗ್ರೆಸ್ ಕಳೆದೊಂದು ದಶಕದಲ್ಲಿ ಒಂದೊಂದೇ ರಾಜ್ಯವನ್ನು ಕಳೆದು ಕೊಳ್ಳುವುದಕ್ಕೂ ಗಾಂಧಿ ಕುಟುಂಬದ ಮೇಲಿನ ಅತಿಯಾದ ಅವಲಂಬನೆಯೇ ಕಾರಣ ಎನ್ನುವುದು ಸ್ಪಷ್ಟ.

ಕಾಂಗ್ರೆಸ್ ನಾಯಕರಲ್ಲಿರುವ ಈ ಮನಸ್ಥಿತಿ, ಮತದಾರರಲ್ಲಿ ಉಳಿದಿಲ್ಲ. ಅನೇಕರು ವಂಶಪಾರಂಪರ್ಯವಾಗಿ ಹೊರತುಪಡಿಸಿ, ಹೊಸಬರಿಗೆ ಅವಕಾಶ ನೀಡುವುದರಲ್ಲಿ ತಪ್ಪೇನಿದೆ ಎನ್ನುವ ಮನಸ್ಥಿತಿ ತಲುಪಿದ್ದಾರೆ. ಇದರೊಂದಿಗೆ ರಾಷ್ಟ್ರಮಟ್ಟದಲ್ಲಿರುವ ಕಾಂಗ್ರೆಸ್ ‘ಥಿಂಕ್ ಟ್ಯಾಂಕ್’ನಲ್ಲಿ ಹೊಸ ಅಥವಾ ವಾವ್ ಎನ್ನುವ ಯಾವ ಆಲೋಚನೆಗಳೂ ಸುಳಿದಿಲ್ಲ. ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಂಡರೂ, ಅದು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆ ಎದುರಾಗುವ ಮೊದಲೇ, ಅದರ ಕಾವು ತಣ್ಣಗಾಗಿತ್ತು.

ಹಾಗೆ ನೋಡಿದರೆ, ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಾಲಿಗೆ ಉತ್ತರ ಪ್ರದೇಶ ‘ಚಿನ್ನದಮೊಟ್ಟೆ’ಯಿಡುವ ಕೋಳಿ ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ೧೯೪೭ರಿಂದ ೨೦ ವರ್ಷಗಳ ಕಾಲ ಸತತವಾಗಿ ಕಾಂಗ್ರೆಸ್ ಆಡಳಿತ ನಡೆಸಿತ್ತು. ಅದಾದ ಬಳಿಕ ಸ್ಥಳೀಯ ಪಕ್ಷಗಳಾದ ಕ್ರಾಂತಿ ರಂಗ, ಜನತಾ ಪಕ್ಷ, ಸಮಾಜವಾದಿ, ಬಿಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳು ಅಽಕಾರದ ಗದ್ದುಗೆ ಏರಿದರೂ, ಕಾಂಗ್ರೆಸ್ ‘ಹವಾ’ ಕಡಿಮೆಯಾಗಿರಲಿಲ್ಲ. ಆದರೆ ೨೦೧೩ರಿಂದ ಈಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲುಗಳ ಮೂಲಕ ಉತ್ತರ ಪ್ರದೇಶದಲ್ಲಿ ಅಸ್ತಿತ್ವವನ್ನು ಹುಡುಕಬೇಕಾದ ಪರಿಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಸ್ವಾತಂತ್ರ್ಯದ ಬಳಿಕ ನಡೆದ ಮೊದಲ ಚುನಾವಣೆ ಅಂದರೆ ೧೯೫೧ರಲ್ಲಿ ನಡೆದ ಮೊದಲ ಚುನಾವಣೆ ಯಲ್ಲಿ ೮೬ ಕ್ಷೇತ್ರಗಳ ಪೈಕಿ ೮೧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.

ತುರ್ತು ಪರಿಸ್ಥಿತಿಯ ಬಳಿಕ ನಡೆದ ಲೋಕಸಭಾ ಚುನಾವಣೆಯ ಬಳಿಕ ಒಂದೇ ಒಂದು ಸ್ಥಾನ ಗೆಲ್ಲದ ಸ್ಥಿತಿ ತಲುಪಿತ್ತು. ಇದಾದ ಬಳಿಕ ನಡೆದ ಬಹುತೇಕ
ಚುನಾವಣೆಯಲ್ಲಿ ಶೇ.೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದುಕೊಂಡೇಬಂದಿತ್ತು. ಆದರೆ ೧೯೯೯ರಿಂದ ಶುರುವಾದ ಕಾಂಗ್ರೆಸ್‌ನ ಅಧಃಪತನ ೨೦೧೪ರ ವೇಳೆಗೆ ಎರಡು ಸ್ಥಾನಕ್ಕೆ ಬಂದು ತಲುಪಿತ್ತು. ಕಳೆದ ಚುನಾವಣೆಯಲ್ಲಿ ಇದು ಒಂದು ಸ್ಥಾನಕ್ಕೆ ಇಳಿಯಿತು.

ಹಾಗೆ ನೋಡಿದರೆ, ೨೦೧೪ ಹಾಗೂ ೨೦೧೯ರಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳುವುದಕ್ಕೂ, ಉತ್ತರ ಪ್ರದೇಶದಲ್ಲಿನ ಕಳಪೆ ಪ್ರದರ್ಶನವೂ ಕಾರಣ ಎನ್ನುವುದು ಸ್ಪಷ್ಟ. ಈ ಬಾರಿಯೂ ಕಾಂಗ್ರೆಸ್‌ಗೆ ಉತ್ತರ ಪ್ರದೇಶದಲ್ಲಿ ಹೇಳಿಕೊಳ್ಳುವಷ್ಟು ‘ಸ್ಥಾನ’ ಸಿಗುವುದಿಲ್ಲ ಎನ್ನುವುದು ಈಗಾಗಲೇ ಕಾಂಗ್ರೆಸ್ ನಾಯಕರ ಅರಿವಿಗೆ ಬಂದಿದೆ ಎಂದರೆ ಸ್ಪಷ್ಟ. ಒಂದು ಕಾಲದಲ್ಲಿ ದೇಶದ ಯಾವುದೇ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಹೆಸರಲ್ಲಿ ಅಭ್ಯರ್ಥಿ ಸ್ಪರ್ಧೆ ಮಾಡಿದರೆ, ಗೆಲುವು ಖಚಿತ ಎನ್ನುವ ಮಾತಿತ್ತು. ಅಂಥ ಪಕ್ಷದ ವರಿಷ್ಠರೇ ಇಂದು ಸ್ಪಽಸಬೇಕೇ? ಬೇಡವೇ? ಎನ್ನುವ ಗೊಂದಲಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ಕುಟುಂಬದ ಮೇಲಿನ ಅತಿಯಾದ ಅವಲಂಬನೆ ಯಿಂದಾಗಿರುವ ಈ ಸಮಸ್ಯೆಯನ್ನು ಕಾಂಗ್ರೆಸ್ ಯಾವ ರೀತಿ ಸರಿಪಡಿಸಿಕೊಳ್ಳುತ್ತದೆ ಅಥವಾ ಈ ಚುನಾವಣೆಯಲ್ಲಿ ಕೇವಲ ಸ್ಟಾರ್ ಪ್ರಚಾರಕಿಯನ್ನಾಗಿ ಪ್ರಿಯಾಂಕಾ ಗಾಂಧಿ ಅವರನ್ನು ತೋರಿಸಿರುವ ಕಾಂಗ್ರೆಸ್, ಮುಂದಿನ ಚುನಾವಣೆಯಲ್ಲಿ ಚುನಾವಣಾ ರಾಜಕೀಯಕ್ಕೆ ಅವರನ್ನು ತರುತ್ತದೆಯೇ ಎನ್ನುವುದು ಈಗಿರುವ ಕುತೂಹಲ.