Wednesday, 11th December 2024

ಷರತ್ತಿನೊಂದಿಗೆ ನೆರವಾದ ಫರೀದ್

ವಿದೇಶವಾಸಿ

dhyapaa@gmail.com

ಇತ್ತೀಚೆಗೆ ಒಬ್ಬ ಅಸಾಮಾನ್ಯ ವ್ಯಕ್ತಿಯ ಪರಿಚಯವಾಯಿತು. ಮೂಲತಃ ಅವರು ಬಹ್ರೈನ್ ಪ್ರಜೆ. ಬಹ್ರೈನ್‌ನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದವರು. ಬಹ್ರೈನ್ ದೇಶದ ‘ಚೇಂಬರ್ ಆಫ್ ಕಾಮರ್ಸ್’ನ ಪದಾಧಿಕಾರಿಗಳಲ್ಲಿ ಅವರೂ ಒಬ್ಬರು. ವೃತ್ತಿಯಲ್ಲಿ ಉದ್ಯಮಿ.

ಬಹ್ರೈನ್, ಸೌದಿ ಅರೇಬಿಯಾ ಸೇರಿದಂತೆ ಇತರ ಕೊಲ್ಲಿ ರಾಷ್ಟ್ರಗಳಲ್ಲೂ ಅವರ ವ್ಯಾಪಾರ-ವಹಿವಾಟು. ೨೦೧೮ರಲ್ಲಿ ಪ್ರವಾಹ ಕ್ಕೊಳಗಾದ ಕೇರಳಕ್ಕೆ ನೆರವಾದವರಲ್ಲಿ ಅವರೂ ಒಬ್ಬರು. ಅಂದು ರೋಟರಿ ಕ್ಲಬ್ ಜತೆ ಸೇರಿ ಕೇರಳದಲ್ಲಿ ಹತ್ತು ಮನೆ ನಿರ್ಮಿಸು ವುದರಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರ ಹೆಸರು ಫರೀದ್ ಬದರ್. ಸುಮಾರು ೬೭-೬೮ ವರ್ಷ ವಯಸ್ಸಿನ ಫರೀದ್, ಸಗಟು ವ್ಯಾಪಾರ, ಕಟ್ಟಡ ನಿರ್ಮಾಣ, ಬಂಡವಾಳ ಹೂಡಿಕೆ ಸೇರಿದಂತೆ ಹತ್ತು ಹಲವು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಅದರಲ್ಲೂ ನೂತನ ತಂತ್ರಜ್ಞಾನದ ಕಡೆಗೆ ಹೆಚ್ಚಿನ ಒಲವು. ಅವರ ಕಚೇರಿಗೆ ಭೇಟಿ ನೀಡಿದರೆ ಮೊದಲು ಕಾಣುವುದು, ೯೨ ವರ್ಷದ ಅವರ ತಂದೆಯೊಂದಿಗೆ ಇರುವ ದೊಡ್ಡದೊಂದು ಭಾವಚಿತ್ರ. ಜತೆಗೆ ಒಂದಷ್ಟು ನೂತನ ತಂತ್ರಜ್ಞಾನದ ಕೈಪಿಡಿಗಳು, ಮಾದರಿಗಳು ಇತ್ಯಾದಿ. ಅವರ ಕಚೇರಿಗೆ ಹೋಗಿ, ಅಷ್ಟನ್ನೇ ನೋಡಿಕೊಂಡು, ವ್ಯವಹಾರದ ಮಾತುಕತೆ ಮುಗಿಸಿ ಹಿಂತಿರುಗಿ ಬರುವಂತಿಲ್ಲ. ಅವರನ್ನು ಇನ್ನಷ್ಟು ಮಾತಿಗೆ ಎಳೆಯಬೇಕು. ಸಮಾಜ ಸುಧಾರಣೆಯ ಕುರಿತು ಅವರಲ್ಲಿರುವ ಕಾಳಜಿ,
ದುರ್ಬಲರ ಕಡೆಗೆ ಅವರಿಗಿರುವ ಕಳಕಳಿ, ಇವನ್ನೆಲ್ಲ ಕೇಳಬೇಕು.

ವ್ಯಾಪಾರ-ವ್ಯವಹಾರ ಒಂದು ಕಡೆಯಾದರೆ, ಸಮಾಜಮುಖಿ ಕಾರ್ಯಗಳು ಇನ್ನೊಂದು ಕಡೆ. ಎರಡನ್ನೂ ಸಮನಾಗಿ ವಿಭಾಗಿಸಿ ಸ್ವೀಕರಿಸಿದವರು ಫರೀದ್. ಮನೆಯಲ್ಲಿ ಹಿರಿಯರು ಹಾಕಿಕೊಟ್ಟ ಬುನಾದಿ ಮತ್ತು ನೀಡಿದ ಉತ್ತಮ ಶಿಕ್ಷಣದಿಂದಾಗಿ ಫರೀದ್ ಒಬ್ಬ ಯಶಸ್ವಿ ಉದ್ಯಮಿಯಾಗುವುದರ ಜತೆಗೆ ಜನರ ಕಷ್ಟಗಳಿಗೆ ಸ್ಪಂದಿಸುವ, ಸಮಾಜಕ್ಕೆ ಕೊಡುಗೆ ನೀಡುವ ಮಹಾನ್ ವ್ಯಕ್ತಿಯೂ ಆಗಿದ್ದಾರೆ. ಉದ್ಯಮಿಯಾಗಿ ಯಶಸ್ವಿ ಯಾದವರೆಲ್ಲರೂ ಸಮಾಜಕ್ಕೆ ನೆರವಾಗುತ್ತಾರೆ ಎನ್ನಲು ಸಾಧ್ಯವಿಲ್ಲ.

ನೆರವಾಗುವವರೆಲ್ಲರೂ ಅದರ ಕುರಿತು ಮಾತಾಡುವುದಿಲ್ಲ. ಕೆಲವರು ಮೌನವಾಗಿಯೇ ನೆರವಾಗುತ್ತಿರುತ್ತಾರೆ. ಕೆಲವರು ಸೇವೆ ಮಾಡುವುದರೊಂದಿಗೆ ಮಾತನ್ನೂ ಆಡಿ, ಉಳಿದವರೂ ನೆರವಾಗುವಂತೆ ಪ್ರೇರೇಪಿಸುತ್ತಾರೆ. ಫರೀದ್ ಆ ವರ್ಗಕ್ಕೆ ಸೇರಿದವರು.
ಬಹಳಷ್ಟು ಜನ ಸಮಾಜಕ್ಕೆ ಒಳಿತು ಮಾಡಲು ಸಂಘ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ. ಇನ್ನು ಕೆಲವರು ತಂದೆ-ತಾಯಿಯ ಅಥವಾ ತಮ್ಮದೇ ಹೆಸರಿನಲ್ಲಿ ಸಂಸ್ಥೆ, ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ದಾನ ಧರ್ಮಾದಿಗಳನ್ನು ಮಾಡುತ್ತಾರೆ.

ಫರೀದ್ ಯಾವುದೇ ಸಂಘ, ಸಂಸ್ಥೆಗಳನ್ನು ನಿರ್ಮಿಸಿಕೊಂಡಿಲ್ಲ. ಅವರದ್ದೇನಿದ್ದರೂ ಸಂದರ್ಭಕ್ಕೆ ತಕ್ಕಂತೆ ಸಹಾಯ. ಒಂದೆರಡು ಘಟನೆ ಹೇಳಿದರೆ ಫರೀದ್ ಅವರ ಕಾರ್ಯವೈಖರಿ ಹೇಗೆ ಮತ್ತು ಅವರ ವ್ಯಕ್ತಿತ್ವ ಏನು ಎಂದು ಅರ್ಥವಾಗುತ್ತದೆ. ಜತೆಗೆ ನಮ್ಮಂಥ ವರಿಗೆ ಪಾಠವೂ ಆಗುತ್ತದೆ. ಸುಮಾರು ಹತ್ತು ವರ್ಷದ ಹಿಂದೆ ಫರೀದ್ ಒಮ್ಮೆ ಲಂಡನ್ ಪ್ರವಾಸದಲ್ಲಿದ್ದರು. ಒಂದು ದಿನ
ಸಾಯಂಕಾಲ ಊಟ ಮುಗಿಸಿ, ತಾವು ಉಳಿದ ಹೋಟೆಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ದಾರಿ ಬದಿಯಲ್ಲಿ ಹರುಕು ಕಂಬಳಿ ಹೊದ್ದು ಮಲಗಿದ ಮನುಷ್ಯನ ಆಕೃತಿಯ ಕಡೆಗೆ ಅವರ ಗಮನ ಹರಿಯಿತು.

ಆಕೃತಿಯ ಬಳಿ ಹೋಗಿ ಕಂಬಳಿ ಎಳೆದು ನೋಡಿದರೆ, ಹರುಕುಬಟ್ಟೆ, ಗಬ್ಬು ವಾಸನೆ, ಕ್ಷೌರ ಮಾಡದೇ ವರ್ಷಗಳೇ ಆಗಿದ್ದ ಒಬ್ಬ
ವ್ಯಕ್ತಿಯನ್ನು ಕಂಡರು. ನಿಜ, ಲಂಡನ್ ಅಷ್ಟೇ ಅಲ್ಲ, ಯುರೋಪಿನ ಕೆಲವು ನಗರಗಳಲ್ಲಿ ಇಂಥ ವ್ಯಕ್ತಿಗಳು ಅಲ್ಲಲ್ಲಿ ಕಾಣಸಿಗು ತ್ತಾರೆ. ಅವರನ್ನು ಸಂಪೂರ್ಣ ಭಿಕ್ಷುಕರು ಎಂದು ಕರೆಯಲೂ ಆಗುವುದಿಲ್ಲ. ಏಕೆಂದರೆ ಭಿಕ್ಷೆ ಬೇಡುವುದು ಅವರ ಪೂರ್ಣಾ ವಧಿಯ ಕೆಲಸವಲ್ಲ. ಹಸಿವಾದಾಗ ಮಾತ್ರ ಯಾರಲ್ಲಾದರೂ ಏನಾದರೂ ಬೇಡುವುದು, ಹೊಟ್ಟೆ ತುಂಬಿದ ನಂತರ ತಮ್ಮ ಸ್ಥಳಕ್ಕೆ ಹೋಗಿ ಕಂಬಳಿ ಹೊದ್ದು ಮಲಗುವುದು ಇಂಥವರ ನಿತ್ಯದ ಬದುಕು.

ಇಂಥವರು ಅತಿಯಾದ ಡ್ರಗ್ಸ್ ಸೇವಿಸಿರುತ್ತಾರೆ ಎಂಬುದು ಕೆಲವರ ಅಭಿಪ್ರಾಯವಾದರೂ ಅದಕ್ಕೆ ಸೂಕ್ತ ಪುರಾವೆ ಇಲ್ಲ. ಆದರೆ ಇವರು ಅತಿಯಾದ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ ಎನ್ನುವುದಂತೂ ನಿಜ. ಇರಲಿ, ಕಂಬಳಿ ಎಳೆದು ಹತ್ತು ಸಲ ‘ಹಲೋ’
ಎಂದರೂ ಆ ವ್ಯಕ್ತಿ ಏಳಲಿಲ್ಲ. ಆದರೆ ಫರೀದ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಹಾಗೆ ಸುಮ್ಮನಾಗುವುದು ಅವರ ಜಾಯಮಾನವೂ ಅಲ್ಲ. ಹಲವು ಬಾರಿ ಮೈ ತಟ್ಟಿ ಎಬ್ಬಿಸುವ ಪ್ರಯತ್ನ ಮಾಡಿದ ನಂತರ ಮಲಗಿದ್ದ ವ್ಯಕ್ತಿ ಅರ್ಧ ಕಣ್ಣು ತೆರೆದು ಸಿಟ್ಟಿನಿಂದಲೇ
‘ಏನು?’ ಎಂದು ಕೇಳಿದ. ‘ನಾನು ನಿನಗೆ ನೆರವಾಗಬೇಕು ಅಂದುಕೊಂಡಿದ್ದೇನೆ’ ಎಂದರು ಫರೀದ್.

‘ನೀವು ಯಾರು? ನನಗೇಕೆ ನೆರವಾಗುತ್ತೀರಿ, ಮೊದಲು ಹೊರಡಿ ಇಲ್ಲಿಂದ, ನನ್ನಷ್ಟಕ್ಕೆ ನನ್ನನ್ನು ಬಿಟ್ಟುಬಿಡಿ’ ಎಂದು ಕಂಬಳಿ
ಹೊದ್ದು ಮಲಗಲು ಯತ್ನಿಸಿದ. ಫರೀದ್ ಬಿಡಲಿಲ್ಲ. ‘ನೀನು ಏನೇ ಹೇಳಿದರೂ ನಾನು ಇಲ್ಲಿಂದ ಹೋಗುವುದಿಲ್ಲ, ನಿನ್ನ ಬಳಿ ಒಂದೆರಡು ನಿಮಿಷ ಮಾತಾಡಿ, ನಿನಗೆ ಸ್ವಲ್ಪ ಹಣ ಕೊಟ್ಟೇ ಹೋಗುತ್ತೇನೆ’ ಎಂದರು. ಪಟ್ಟು ಬಿಡದ ಫರೀದ್ ಮುಂದೆ ಆ ವ್ಯಕ್ತಿ ಸೋತಿದ್ದ.

ಫರೀದ್ ಆತನನ್ನು ಮಾತಿಗೆಳೆದರು. ಮೊದಲ ಅರ್ಧ ನಿಮಿಷ ‘ನಿನ್ನ ಹೆಸರೇನು? ಇಲ್ಲೇಕೆ ಮಲಗಿರುವೆ?’ ಇತ್ಯಾದಿ ಕುಶಲೋಪರಿ ಗಳಲ್ಲಿ ಕಳೆಯಿತು. ಆತ ‘ನನ್ನ ಹೆಸರು ಜಾನ್. ಇದೇ ನನ್ನ ವಾಸಸ್ಥಳ, ನನಗೆ ತಂದೆ-ತಾಯಿ, ಹೆಂಡತಿ ಮಕ್ಕಳು ಯಾರೂ ಇಲ್ಲ, ಕೆಲಸವೂ ಇಲ್ಲ, ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ, ನನ್ನ ಜೀವನ ಹೀಗೆಯೇ’ ಎಂದ. ‘ನನಗೆ ಹಣ ಕೊಡುವೆ ಎಂದಿರಲ್ಲ, ಎಷ್ಟು
ಕೊಡುತ್ತೀರಿ ಹೇಳಿ, ಕೊಟ್ಟು ಹೊರಟುಬಿಡಿ’ ಎಂದ. ‘ಖಂಡಿತ ಕೊಡುತ್ತೇನೆ. ನಾನು ನಿನಗೆ ಮೋಸ ಮಾಡುವುದಿಲ್ಲ, ಆದರೆ ಅದಕ್ಕೆ ಒಂದು ಷರತ್ತಿದೆ’ ಎಂದರು ಫರೀದ್. ‘ನನಗೆ ಅದರ ಅಗತ್ಯವಿಲ್ಲ’ ಎಂದ ಜಾನ್ ಫರೀದ್‌ರನ್ನು ಬೈಯುತ್ತಾ, ಪುನಃ ಮಲಗಲು ಯತ್ನಿಸಿದ.

‘ನಾನು ಹೋಗುತ್ತೇನೆ, ಆದರೆ ಹೋಗುವುದಕ್ಕಿಂತ ಮೊದಲು ಮತ್ತೊಮ್ಮೆ ಯೋಚಿಸು, ಒಂದೆರಡಲ್ಲ ೧೦೦ ಪೌಂಡ್ ಕೊಡ
ಬೇಕೆಂದಿದ್ದೇನೆ’ ಎಂದರು ಫರೀದ್. ‘೧೦೦ ಪೌಂಡ್’ ಎಂಬುದನ್ನು ಕೇಳುತ್ತಲೇ ಪುನಃ ಎದ್ದು ಕುಳಿತ ಜಾನ್, ‘ಏನು ನಿಮ್ಮ ಷರತ್ತು?’ ಎಂದು ಕೇಳಿದ.

‘ನಾನು ನಿನಗೆ ನೂರು ಪೌಂಡ್ ಕೊಡಬೇಕು ಅಂದುಕೊಂಡಿದ್ದೆ, ಈಗ ಅದರ ಬದಲು ಇನ್ನೂರು ಪೌಂಡ್ ಕೊಡುತ್ತೇನೆ. ಆದರೆ ಅದರಲ್ಲಿ ನೀನು ನೂರು ಪೌಂಡ್ ಅನ್ನು ನಿನಗಿಂತ ಬಡವರಿಗೆ ದಾನ ಮಾಡಬೇಕು’ ಎಂದರು ಫರೀದ್. ಅದಕ್ಕೆ ಜಾನ್, ‘ನನ್ನ ಹತ್ತಿರ ಹಣ ಇಲ್ಲ ಎಂದು ನೀವು ನೆರವಾಗುತ್ತಿದ್ದೀರಿ, ಇದರಲ್ಲಿ ನಾನು ಯಾರಿಗೆ ನೆರವಾಗಲಿ? ನನಗಿಂತ ಬಡವರನ್ನು ಎಲ್ಲಿ ಹುಡುಕಲಿ? ನನಗಿಂತ ಬಡವರು ಈ ಪ್ರಪಂಚದಲ್ಲಿಯೇ ಇರಲಿಕ್ಕಿಲ್ಲ, ಇದು ಸಾಧ್ಯವಿಲ್ಲದ ಮಾತು’ ಎಂದ.

ಅದಕ್ಕೆ ಫರೀದ್, ‘ನೋಡು, ವಿಚಾರ ಮಾಡು, ನಿನ್ನಂಥವರು ಎಲ್ಲಿರಬಹುದು ಎಂದು ನೀನೇ ಹುಡುಕು. ಅಂಥವರು ಸಿಕ್ಕು, ನೀನು ಅವರಿಗೆ ಹಣ ಕೊಟ್ಟ ನಂತರ ನನಗೆ ಕರೆ ಮಾಡಿ ಹೇಳು. ಆಗ ನಾನು ನಿನಗೆ ಇನ್ನೂ ಒಂದು ನೂರು ಪೌಂಡ್ ಕೊಡುತ್ತೇನೆ’ ಎಂದರು. ಜಾನ್ ಅದಕ್ಕೆ ಒಪ್ಪಿದ. ಕೆಲವು ತಿಂಗಳು ಕಳೆಯಿತು. ಜಾನ್‌ನಿಂದ ಯಾವುದೇ ಕರೆ ಬರಲಿಲ್ಲ. ಫರೀದ್ ಕೂಡ ಈ
ವಿಷಯ ಮರೆತಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಲಂಡನ್‌ನ ಒಂದು ನಂಬರ್‌ನಿಂದ ಫರೀದ್‌ಗೆ ಕರೆ ಬಂತು. ಯಾರೆಂದು ಕೇಳಿದಾಗ ಆ ಕಡೆಯಿಂದ ಧ್ವನಿ ಬಂತು, ‘ನಾನು ಜಾನ್, ನೀವು ಇನ್ನೂರು ಪೌಂಡ್ ಕೊಟ್ಟಿದ್ದಿರಲ್ಲ, ಅದೇ ಜಾನ್’. ಫರೀದ್‌ಗೆ ಆಶ್ಚರ್ಯವಾಗಿತ್ತು.

ಇಷ್ಟು ದಿನದ ನಂತರ ಅವರು ಈ ಕರೆ ಬರುತ್ತದೆಂದು ಊಹಿಸಿರಲಿಲ್ಲ. ‘ಜಾನ್… ಈಗ ನೆನಪಾಯಿತು, ನಾನು ಕೊಟ್ಟ ಹಣದಲ್ಲಿ ನೀನು ಬೇರೆಯವರಿಗೆ ಸಹಾಯ ಮಾಡಿದೆಯಾ?’ ಪ್ರಶ್ನಿಸಿದ್ದರು ಫರೀದ್. ‘ಹೌದು ಮಾಡಿದ್ದೇನೆ, ಆದರೆ ನೂರು ಪೌಂಡ್ ಅಲ್ಲ, ಐವತ್ತು ಪೌಂಡ್ ಮಾತ್ರ ಮಾಡಿದ್ದೇನೆ. ಅದೂ ಒಂದು ಬಾರಿಯಲ್ಲ, ಒಂದೇ ವ್ಯಕ್ತಿಗೆ ೨೫ ಪೌಂಡ್‌ನಂತೆ ಎರಡು ಬಾರಿ ಮಾಡಿ ದ್ದೇನೆ. ಆತನೂ ನನ್ನಂತೆ ಆಹಾರಕ್ಕಾಗಿ ಮ್ಯಾಕ್‌ಡೊನಾಲ್ಡ್ ಹತ್ತಿರ ಬಂದಿದ್ದ. ಅವನ ಬಳಿ ಹಣ ಇರಲಿಲ್ಲ. ಅಲ್ಲಿಯೇ ಎರಡು ಬಾರಿ ಭೇಟಿಯಾದ.

ಇಬ್ಬರೂ ಸ್ನೇಹಿತರಾದೆವು. ನನ್ನ ಬಳಿ ನೀವು ಕೊಟ್ಟ ನೂರು ಪೌಂಡ್ ಇನ್ನೂ ಬಾಕಿಯಿತ್ತು. ಅದರಲ್ಲೇ ಸಣ್ಣಪುಟ್ಟ ವಸ್ತು ಖರೀದಿಸಿ, ಇಬ್ಬರೂ ಸೇರಿ ಮಾರಾಟ ಮಾಡುವುದೆಂದು ನಿರ್ಧರಿಸಿದೆವು. ಇಂದು ಲಂಡನ್ ನಗರದ ಪ್ರಮುಖ ಬೀದಿಯ ಪಕ್ಕದಲ್ಲಿ ಸಣ್ಣ ಪುಟ್ಟ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದೇವೆ. ಈಗ ನಾವು ಬೀದಿಯಲ್ಲಿ ಮಲಗುವುದಿಲ್ಲ. ಸಣ್ಣ ಕೊಠಡಿ ಯನ್ನು ಬಾಡಿಗೆಗೆ ಪಡೆದಿದ್ದೇವೆ. ನಾನೊಬ್ಬನೇ ಅಲ್ಲ, ನಾನು-ನನ್ನ ಸ್ನೇಹಿತ ಇಬ್ಬರೂ ಮೊದಲಿಗಿಂತ ಉತ್ತಮವಾಗಿ ಬದುಕು ತ್ತಿದ್ದೇವೆ. ನಿಮ್ಮ ೨ ನಿಮಿಷದ ಮಾತು, ಇನ್ನೂರು ಪೌಂಡ್ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು’ ಎಂದ ಜಾನ್.

ಅಂದು ಫರೀದ್ ಅವರ ಎದೆ ಸಾತ್ವಿಕ ಅಹಂನಿಂದ ಉಬ್ಬಿತ್ತು. ಇನ್ನೊಂದು ಘಟನೆ, ಫರೀದ್ ಒಮ್ಮೆ ಆಸ್ಪತ್ರೆಯಲ್ಲಿದ್ದರು. ಅವರ ಪಕ್ಕದ ಮಂಚದಲ್ಲಿ ಅಹ್ಮದ್ ಎಂಬ ಬಹ್ರೈನ್ ದೇಶದವನೇ ಮಲಗಿದ್ದ. ಫರೀದ್ ಮತ್ತು ಅಹ್ಮದ್ ಪರಿಚಿತರಾದರು. ಫರೀದ್‌ಗೆ ಯಾಕೋ ಅಹ್ಮದ್ ದೈಹಿಕ ನೋವಿಗಿಂತ ಮಾನಸಿಕ ನೋವನ್ನು ಅನುಭವಿಸುತ್ತಿದ್ದಾನೆ ಅನ್ನಿಸಿತು. ‘ನಿನ್ನನ್ನು ಬರೀ ದೈಹಿಕ  ಮಸ್ಯೆಯಲ್ಲ, ಬೇರೇನೋ ಕಾಡುತ್ತಿದೆ ಎನಿಸುತ್ತಿದೆ. ಏನದು?’ ಎಂದು ಆಪ್ತವಾಗಿ ಕೇಳಿದರು. ಅದಕ್ಕೆ ಅಹ್ಮದ್, ‘ನನಗೆ ಸಂಸಾರ ವಿದೆ. ಹೆಂಡತಿ-ಮಕ್ಕಳಿದ್ದಾರೆ.

ಆದರೆ ಸದ್ಯ ಯಾವುದೇ ಕೆಲಸವಿಲ್ಲ. ಸ್ವಲ್ಪ ಸಾಲವಿದೆ. ಅದನ್ನು ತೀರಿಸುವುದು ಹೇಗೆಂಬ ಚಿಂತೆಯಿದೆ’ ಎಂದ. ‘ಎಷ್ಟು ಸಾಲ ಇದೆ?’ ಎಂದು ಕೇಳಿದಾಗ, ‘೨೦೦೦ ದಿನಾರ್’ ಎಂದ. ಅದರಲ್ಲಿ ಹೆಚ್ಚಿನವು ಟೆಲಿಫೋನ್, ವಿದ್ಯುತ್, ನೀರಿನ ಬಿಲ್ ಕಟ್ಟಲು ಮಾಡಿದ ಸಾಲ. ಅಂದು ಅಹ್ಮದ್‌ಗೆ ಸಹಾಯ ಮಾಡುವುದಾಗಿ ಹೇಳಿದ ಫರೀದ್, ಅಲ್ಲಿಯೂ ಒಂದು ಷರತ್ತು ವಿಧಿಸಿದ್ದರು. ‘ನಾನು ೨೦೦೦ ದಿನಾರ್ ಕೊಡುತ್ತೇನೆ, ಆದರೆ ನಿನ್ನ ಕೈಯಲ್ಲಲ್ಲ, ನಿನ್ನ ಹೆಂಡತಿಯ ಕೈಯಲ್ಲಿ. ಆಕೆ ಎಲ್ಲ ಸಾಲವನ್ನೂ ತೀರಿಸಲಿ. ನೀನು
ಗುಣಮುಖನಾಗಿ ಆಸ್ಪತ್ರೆಯಿಂದ ಹೊರಗೆ ಬಂದ ಮೇಲೆ ನನ್ನನ್ನು ಭೇಟಿಯಾಗು. ನಿನಗೆ ನಾನು ಉದ್ಯೋಗವನ್ನೂ ಕೊಡುತ್ತೇನೆ. ಆದರೆ ಆ ಉದ್ಯೋಗಕ್ಕೆ ಸಂಬಳ ಇಲ್ಲ, ಬದಲಾಗಿ ಲಾಭಾಂಶ (ಕಮಿಷನ್) ಇರುತ್ತದೆ. ನೀನು ಹೆಚ್ಚು ವ್ಯವಹಾರ ಮಾಡಿದಷ್ಟೂ ಹೆಚ್ಚು ಲಾಭ ಗಳಿಸುತ್ತೀಯ’ ಎಂದರು.

ಅದರಂತೆ ಅಹ್ಮದ್‌ನ ಹೆಂಡತಿಗೆ ಹಣ ನೀಡಿದ್ದು, ಸಾಲ ತೀರಿದ್ದು, ಎಲ್ಲವೂ ಆಯಿತು. ಆಸ್ಪತ್ರೆಯಿಂದ ಆಚೆ ಬಂದ ಅಹ್ಮದ್ ಫರೀದ್‌ರನ್ನು ಭೇಟಿಯಾದ. ಫರೀದ್ ತಮ್ಮದೇ ಸಂಸ್ಥೆಯಲ್ಲಿ ಅವನಿಗೆ ಉದ್ಯೋಗ ನೀಡಿದರು. ಮನೆಗೆ, ಕಚೇರಿಗೆ ಬಾಡಿಗೆದಾರ ರನ್ನು ಹುಡುಕುವುದು, ಖಾಲಿ ಜಾಗ ಮಾರಾಟ ಮಾಡಿಸುವುದು ಇತ್ಯಾದಿ ಆತನ ಕೆಲಸವಾಗಿತ್ತು. ಅವನಿಗೆ ಅದರಿಂದ ಸಂಸಾರ
ನಡೆಸಲು ಸಾಕಾಗುವಷ್ಟು ಹಣವೂ ದೊರಕುತ್ತಿತ್ತು. ಒಂದೆರಡು ವರ್ಷ ಹೀಗೆಯೇ ನಡೆಯಿತು.

ಫರೀದ್ ಒಂದು ದೊಡ್ಡ ಜಾಗ ಮಾರಾಟ ಮಾಡುವುದಕ್ಕೆ ಮುಂದಾಗಿದ್ದರು. ಅಹ್ಮದ್‌ನಲ್ಲಿ ವಿಷಯ ತಿಳಿಸಿದರು. ಅಹ್ಮದ್ ತನಗಿರುವ ಸಂಪರ್ಕದಿಂದ ಒಬ್ಬ ಒಳ್ಳೆಯ ಗ್ರಾಹಕರನ್ನು ಕರೆತಂದಿದ್ದ. ಮಾತುಕತೆಯ ನಂತರ ವ್ಯಾಪಾರ ಕುದುರಿತು. ಜಾಗ ಮಾರಾಟವೂ ಆಯಿತು. ಆ ಒಂದೇ ವ್ಯಾಪಾರದಲ್ಲಿ ಅಹ್ಮದ್‌ಗೆ ೫೦,೦೦೦ ದಿನಾರ್ (ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು) ಕಮಿಷನ್ ದೊರಕಿತ್ತು. ಅಲ್ಲಿಯವರೆಗೂ ಪ್ರತಿ ತಿಂಗಳು ಸುಮಾರು ೫೦೦ ದಿನಾರ್ ಗಳಿಸುತ್ತಿದ್ದ ಅಹ್ಮದ್ ತನ್ನ ಕೌಶಲದಿಂದ ನೂರು ಪಟ್ಟು ಹೆಚ್ಚಿನ ಹಣವನ್ನು ಒಂದೇ ಬಾರಿ ಗಳಿಸಿಕೊಂಡಿದ್ದ. ಅದರಲ್ಲಿ ಫರೀದ್ ಬದರ್‌ಗೂ ಸಂತೋಷವಿತ್ತು.

ಫರೀದ್ ಬದರ್ ಅವರಲ್ಲಿ ಇಷ್ಟವಾಗುವ ಗುಣ ಎಂದರೆ ಇದೇ. ಅವರ ಜತೆ ಇಂಥ ಸಾಕಷ್ಟು ಘಟನೆ ನಡೆದಿದೆ. ಅವರು ಎಷ್ಟೇ ದಾನ ಮಾಡಿದರೂ ಪುಕ್ಕಟೆ ಮಾಡುವುದಿಲ್ಲ. ಅವರಿಂದ ಪಡೆದವ ಮತ್ತೆ ಅದೇ ಕಾರಣಕ್ಕೆ ಅವರಲ್ಲಾಗಲಿ, ಬೇರೆಯವರಲ್ಲಿ
ಹಣ ಕೇಳಬಾರದು ಎನ್ನುವುದು ಒಂದಾದರೆ, ಸಿಕ್ಕ ಸಣ್ಣ ಅವಕಾಶದಲ್ಲೇ ತನ್ನ ಬದುಕು ಕಟ್ಟಿಕೊಳ್ಳುವ ಸಣ್ಣ ಆಶಾಕಿರಣ ಮೂಡಿ ಸುವುದು ಇನ್ನೊಂದು. ಇದರಿಂದ ಕೊಡುವವನಿಗೂ ಒಳ್ಳೆಯದು, ಪಡೆದವನಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.
ನಿಜವಾಗಿ ಬದುಕು ಕಟ್ಟಿಕೊಳ್ಳುವ ಮನಸ್ಸಿದ್ದರೆ ಫರೀದ್ ಬದರ್‌ರಂಥವರು ಎಲ್ಲಾದರೂ ಹೇಗಾದರೂ ಸಿಗುತ್ತಾರೆ.

ಅದರ ಸದುಪಯೋಗವಾಗ ಬೇಕು ಅಷ್ಟೇ. ಸಹಾಯ ಮಾಡುವುದೇ ಆದರೂ ಷರತ್ತು ವಿಧಿಸಿ ಸಹಾಯ ಮಾಡುವುದು ಒಳ್ಳೆಯದು. ಅಷ್ಟಕ್ಕೂ ಅದು ಸಾಲವಲ್ಲ, ಹಣ ಹಿಂತಿರುಗಿಸುವಂತೆಯೂ ಕೇಳುವುದಿಲ್ಲ. ಆದರೆ ಕೊಟ್ಟಿದ್ದು ಕೊಚ್ಚೆಯಲ್ಲಿ ಕೊಚ್ಚಿ ಹೋಗಬಾ ರದು ಅಲ್ಲವೇ? ಅಂದಹಾಗೆ, ಇದಕ್ಕೂ, ಸರಕಾರ ನೀಡುವ ಉಚಿತ ಭಾಗ್ಯಗಳಿಗೂ ಯಾವುದೇ ಸಂಬಂಧವಿಲ್ಲ