Thursday, 12th December 2024

ಗೊಬ್ಬರ, ಉಳುಮೆಯ ಹಂಗಿಲ್ಲದ ಕೃಷಿಕ

ಸುಪ್ತ ಸಾಗರ

rkbhadti@gmail.com

‘ನಮ್ಮನ್ನು ಪೊರೆಯುವ ಭೂಮಿತಾಯಿಯ ಒಡಲಿಗೆ ಇನ್ನಿಲ್ಲದ ರಾಸಾಯನಿಕವನ್ನು ಸುರಿದು, ಆಕೆಯ ಆರೋಗ್ಯವನ್ನು ಹದಗೆಡಿಸುವುದು ಮಾನವತೆ ಹೇಗಾದೀತು? ಮನುಷ್ಯನೆಂದ ಮೇಲೆ ವಿವೇಚನೆ ಆತನ ಮೊದಲ ಗುಣವಾಗಿರಬೇಕು. ಅನ್ನ ಕೊಡುವ ನೆಲದ ಆರೋಗ್ಯ ಆತನ ಮೊದಲ ಆದ್ಯತೆ ಯಾಗಬೇಕು…‘ ಹಾಗೆಂದು ಯೋಚಿಸಿ ಇನ್ನೆಂದಿಗೂ ರಾಸಾಯನಿಕಗಳನ್ನು ಭೂಮಿಗೆ ಮುಟ್ಟಿಸುವುದಿಲ್ಲ, ಭೂಮಿಯನ್ನು ಉತ್ತಿ ಗಾಯಗೊಳಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿಯೇಬಿಟ್ಟರು ಆ ಸುಶಿಕ್ಷಿತ ಕೃಷಿಕ.

ಅಂದಿನಿಂದ ಇಂದಿನವರೆಗೆ ಅವರು ತಮ್ಮ ಜಮೀನಿಗೆ ನೇಗಿಲು ತಾಗಿಸಿಲ್ಲ. ಯಾವುದೇ ರಾಸಾಯನಿಕಗಳನ್ನು ಸೋಂಕಿಸಿಲ್ಲ. ಆರೋಗ್ಯಕರ ಕೃಷಿ ಯೊಂದಿಗೆ ನಮ್ಮದಿಯ ಜೀವನವನ್ನು ಕಂಡುಕೊಂಡಿದ್ದಾರೆ. ‘ಹೆಚ್ಚುತ್ತಿರುವ ಇಂದಿನ ಜನಸಂಖ್ಯೆಯ ಎದುರು ಉದ್ಬವಿಸಿರುವ ಆಹಾರದ ಕೊರತೆಯ ಸಮಸ್ಯೆಗೆ ಸಹಜ ಕೃಷಿಯಲ್ಲಿ ಮಾತ್ರವೇ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಾವಯವ ಕ್ರಮದಲ್ಲಿ ಎಕೆರೆಗ ಮೂವತ್ತು ಕ್ವಿಂಟಲ್ ವರೆಗೆ ರಾಗಿ ಬೆಳೆದ
ಉದಾಹರಣೆ ನಮ್ಮ ಪರಿಸರದ ಇದೆ. ಹೀಗಿರುವಾಗಿ ಆಹಾರ ಉತ್ಪಾದನೆಯ ಹೆಚ್ಚಳದ ಹೆಸರಿನಲ್ಲಿ ಸುಸ್ಥಿರವಲ್ಲದ ಕೃಷಿ ಪದ್ಧತಿಗಳನ್ನು ಅನುಸರಿಸಿ ನಿಸರ್ಗ ಹಾಗೂ ಜನರ ಆರೋಗ್ಯವನ್ನು ಕಸಿಯುವ ಹಕ್ಕು ಖಂಡಿತಾ ಕೃಷಿಕನಿಗೆ ಇಲ್ಲ…’ ಅತ್ಯಂತ ನೇರ ನಿಷ್ಠುರ ನುಡಿಗಳಲ್ಲಿ ಪ್ರತಿಪಾದಿಸುತ್ತಾರೆ ಅವರು.

ಕೇವಲ ಮಾತಾಡುವ, ತತ್ವ ಜ್ಞಾನ ಬೋಧಿಸುವ ವ್ಯಕ್ತಿಯಲ್ಲ. ತಾವೇನೋ ಮಾತನಾಡುತ್ತಾರೋ ಅದನ್ನೇ ಮಾಡಿ ತೋರಿಸುವವರು. ಮಾಡಿದ್ದನ್ನೇ ಮಾತಾಡುತ್ತ ಬಂದವರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಉತ್ತಮ ಅಂಕಗಳೊಂದಿಗೇ ಮುಗಿಸಿದವರು. ಆಗಿನ ಕಾಲದಲ್ಲಿ ಇಂಗ್ಲಿಷ್ ಎಂ ಎ ಮುಗಿಸಿದವರಿಗೆ ಉತ್ತಮ ಸಂಬಳದ ನೌಕರಿ ದೊರೆಯುವುದು ಕಷ್ಟವೇನಾಗಿರಲಿಲ್ಲ.

ಬೋಧಕ ವೃತ್ತಿಯಂತೂ ಸಾಕಷ್ಟು ಕೈ ಬೀಸಿ ಕರೆದಿತ್ತು. ಹೋಗಿದ್ದರೆ ಇಂದಿನ ಯುಜಿಸಿ ವೇತನ ಶ್ರೇಣಿಯಲ್ಲಿ ಮೈಕೈ ಕೆಸರು ಮಾಡಿಕೊಳ್ಳದೇ ಯಾವುದೇ ನಗರಗಳಲ್ಲಿ ಆರಾಮದಾಯಕ ಜೀವನ ನಡೆಸಬಹುದಿತ್ತು. ಆದರೆ ಓದು ಮುಗಿಸಿದವರೇ ಎಲ್ಲರಂತೆ ಯೋಚಿಸದೇ, ಮಣ್ಣಿ ಕಾಯಕಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಹಂಬಲದೊಂದಿಗೆ ಹಳ್ಳಿಗೆ ಮರಳಿದರು. ಕೃಷಿಯಲ್ಲಿ ಸಾಧನೆ ಮಾಡಿ ತೋರಬೇಕು. ಬಹುತೇಕ ಹಳ್ಳಿಯ ಮುಗ್ಧ ರೈತರು ಅನುಸರಿಸು ತ್ತಿರುವ ಅಂಧಾನುಕರಣೆಯನ್ನು ತೊಡೆದು ಹಾಕಿ ವಿಭಿನ್ನ ಹಾದಿಯಲ್ಲಿ ಯಶಸ್ಸುಗಳಿಸಿ, ಮಾದರಿಯಾಗ ಬೇಕೆಂದು ಕನಸಿದರು.

ಸತತ ಇಪ್ಪತ್ತೈದು ವರ್ಷಗಳ ದುಡಿಮೆಯಲ್ಲಿ ಅಂದುಕೊಂಡದ್ದನ್ನು ಸಾಧಸಿ ತೋರಿಸಿದ್ದಾರೆ. ರಸಗೊಬ್ಬರ, ಕ್ರಿಮಿ ನಾಶಕಗಳ ತಂಟೆಗೆ ಹೋಗದೇ, ಕೊಟ್ಟಿಗೆ ಗೊಬ್ಬರ, ಜೀವಾಮೃತಗಳೆಂಬ ಕಸರತ್ತುಗಳನ್ನು ಮಾಡದೇ, ಸಾವಯವ ಇತ್ಯಾದಿ ಕೃಷಿ ಬ್ರಾಂಡ್‌ಗಳ ಹಂಗಿಲ್ಲದೇ ಸಹಜವಾಗಿ ಪ್ರಕೃತಿ ಯೊಂದಿಗೇ ಬದುಕಲು ಕಲಿತು, ಇತರರಿಗೂ ಕಲಿಸುತ್ತಿದ್ದಾರೆ. ಪ್ರಕೃತಿಗೆ ಧಕ್ಕೆಗೊಡದೇ, ಅದರಲ್ಲಿ ಹಸ್ತಕ್ಷೇಪ ಮಾಡದೇ, ನಮಗೆ ಬೇಕಾದುದನ್ನು ಚೆಲ್ಲಿಕೊಂಡರೆ ಸಾಕು, ಪ್ರಕೃತಿಯೇ ಉಳಿದದ್ದನ್ನೆಲ್ಲ ನೋಡಿಕೊಳ್ಳುತ್ತದೆ ಎನ್ನುತ್ತಾರೆ ಅವರು.

ಅವರು, ದಾವಣಗೆರೆ ಸಮೀಪದ ಹೊನ್ನಾಳಿ ತಾಲೂಕಿನ ಯರೇಹಳ್ಳಿಯ ಹನುಮಂತಪ್ಪ. ಶಿವಮೊಗ್ಗ-ದಾವಣಗೆರೆ ರಸ್ತೆಯಲ್ಲಿ ಬರೋಬ್ಬರಿ ಮೂವತ್ತು ಎಕೆರೆಯಲ್ಲಿ ಸಹಜವಾಗಿ ಕೃಷಿ ಮಾಡುತ್ತಾ, ಅತಿ ಕಡಿಮೆ ಖರ್ಚಿನಲ್ಲಿ ಗೆದ್ದಿದ್ದಾರೆ. ಇಷ್ಟಕ್ಕೆಲ್ಲ ಪ್ರೇರಣೆ ಜಪಾನ್ ನ ಕೃಷಿ ಋಷಿ -ಕೋವೂಕಾ ಎನ್ನುವ ಹನುಮಂತಪ್ಪ, ಕಾಲೇಜು ದಿನಗಳ ಅವರ ಸಹಜ ಕೃಷಿಯ ಬಗ್ಗೆ ತಿಳಿದುಕೊಂಡವರು. -ಕೋವೂಕಾರ ‘ಒಂದು ಹುಲ್ಲಿನ ಕ್ರಾಂತಿ’ಯನ್ನು ಕನ್ನಡಕ್ಕೆ ತಂದ ಪೂರ್ಣ ಚಂದ್ರ ತೇಜಸ್ವಿಯವರ ಮಾತುಗಳ ಅವರ ಕೃಷಿ ಪದ್ಧತಿಯ ಬಗ್ಗೆ ಅರಿತುಕೊಂಡವರು. ಅಂದೇ ತಾನು ಕೃಷಿ ಕೈಗೊಳ್ಳುವುದಿದ್ದರೆ, ಈ ಕ್ರಮದ ಮಾಡಬೇಕೆಂದು ನಿರ್ಧರಿಸಿದ್ದವರು. ಎಂಎ ಮುಗಿಯುತ್ತಿದ್ದಂತೆಯೇ ಊರಿಗೆ ಮರಳಿ, ತಮ್ಮ ಜಮೀನಿನ ಪ್ರಯೋಗ ಆರಂಭಿಸಿಬಿಟ್ಟವರು.

ಇಂದು ಯರೆಹಳ್ಳಿಯ ಅವರ ಪ್ರಯೋಗ ಭೂಮಿ ಹಲವರಿಗೆ ಮಾದರಿಯಾಗಿದೆ. ಮಾತ್ರವಲ್ಲ ಹನುಮಂತಪ್ಪ ಅವರಿಗೆ ಸಹಜ ಕೃಷಿ, ನೆಮ್ಮದಿಯ ಜೀವನ ಕಟ್ಟಿಕೊಟ್ಟಿದೆ. ಇರುವ ಜಮೀನಿನಲ್ಲಿ ಹತ್ತು ಎಕರೆಯನ್ನು ಮಾತ್ರವೇ ತಾವೇ ಕೃಷಿ ಮಾಡುತ್ತಿzರೆ. ಉಳಿದದ್ದನ್ನು ಗುತ್ತಿಗೆ ನೀಡಿದ್ದು, ತಾವೇ ಮಾಡುತ್ತಿರುವ ಸಹಜ ಕೃಷಿಯ ಜಮೀನಿಗೂ, ಗುತ್ತಿಗೆ ಪಡೆದವರು ಮಾಡುತ್ತಿರುವ ರಾಸಾಯನಿಕ ಕೃಷಿಗೂ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು ಎನ್ನುತ್ತಾರೆ. ಯಾವುದೇ ರಸ ಗೊಬ್ಬರ, ಕ್ರಿಮಿನಾಶಕವನ್ನು ಬಳಸದೇ ಕಡಿಮೆ ಖರ್ಚಿನಲ್ಲಿ ಅಡಕೆ ಬೆಳೆದಿರುವ, ಭತ್ತ ಮಾಡುತ್ತಿರುವ ಅವರು ಸುತ್ತಮುತ್ತಲಿನವರಿಗಿಂತ ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ.

ಮೂರು ಎಕರೆ ಅಡಕೆ ತೋಟದಲ್ಲಿ ೨೨೦ ಕ್ವಿಂಟಲ್ ಅಡಕೆ ಇಳುವರಿ ಪಡೆದಿzರೆ. ಮೂರು ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು, ಎಕರೆಗೆ ಸರಾಸರಿ ೨೬ ಚೀಲ ಗಳಿಸುತ್ತಿದ್ದಾರೆ. ಮನೆಯ ಸುತ್ತ ಬಿಟ್ಟುಕೊಂಡಿರುವ ಒಂದು ಎಕರೆಯಲ್ಲಿ ಮನೆಯ ಖರ್ಚಿಗೆಂದು ರಾಗಿ, ತರಕಾರಿ, ಹಣ್ಣುಗಳನ್ನು ಬೆಳೆದುಕೊಂಡು ಸಂಪೂರ್ಣ ಸ್ವಾವಲಂಬನೆ ಸಾಧಿಸಿದ್ದಾರೆ. ಶೂನ್ಯ ಬಂಡವಾಳದಲ್ಲಿ ೧೦ ಎಕರೆಯಲ್ಲಿ ಯಾವುದೇ ತಲೆ ನೋವುಗಳಿಲ್ಲದೆ, ಕಷ್ಟ-ತಾಪತ್ರಯಗಳಿಲ್ಲದೇ ಸಂತಸದಿಂದ ಬದುಕುತ್ತಿದ್ದಾರೆ.

ಮೊದಲಿಗೇ ಹನುಮಂತಪ್ಪ ಅವರ ಕುಟುಂಬ ಕೈಗೊಂಡಿದ್ದದ್ದೂ ಸಾಂಪ್ರದಾಯಿಕ ಕೃಷಿಯನ್ನೇ. ಪೂಚಂತೆಯವರು ಅನುವಾದಿಸಿದ ಪುಸ್ತಕದಿಂದ ಸಹಜ ಕೃಷಿಯ ಬಗ್ಗೆ ತಿಳಿದು ಕೊಳ್ಳುತ್ತಿರುವಾಗಲೇ ಸಹಪಾಠಿ ಶಿವರಾಂ ಪೈಲೂರು (ಕ್ಯಾಮ್ ರೂವಾರಿ) ಅವರ ಮೂಲಕ ಮೈಸೂರಿನ ಎ.ಪಿ. ಚಂದ್ರ
ಶೇಖರ್ ಅವರ ತೋಟ ನೋಡುವ ಸಂದರ್ಭ ಒದಗಿಬಂತು. ಆಗಾಗ ಅವರ ತೋಟವನ್ನು ಸುತ್ತಾಡಿ ಬರತೊಡಗಿದರು. ಅ -ಕುವೋಕನ ಸಹಜ ಕೃಷಿಯ ಬಗ್ಗೆ ಆಸಕ್ತಿ ಹುಟ್ಟಿತು.

ಅದಕ್ಕೆ ಸರಿಯಾಗಿ ತೇಜಸ್ವಿ ಅವರೂ ಆಗಾಗ ಮೈಸೂರಿಗೆ ಬಂದು ಸಹಜ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅದೇ ಸಂದರ್ಭದಲ್ಲಿ ಪಾಳೇಕರ್ ಅವರ ಉಪನ್ಯಾಸವನ್ನೂ ಕೇಳಿದರು. ಅಲ್ಲಿಂದ ಮುಂದೆ ಕೃಷಿ ಕ್ರಾಂತಿಯ ನಿರ್ಧಾರ ಗಟ್ಟಿಗೊಂಡಿತು. ಕೃಷಿಕನೇ ಆಗಬೇಕೆಂದುಕೊಂಡದ್ದೂ ಅಲ್ಲಿಯೇ ಎಂದು ವಿವರಿಸುತ್ತಾರೆ ಹನುಮಂತಪ್ಪ. ‘೯೦ರ ದಶಕದಲ್ಲಿ ಊರಿಗೆ ಮರಳಿ ಸಹಜ ಕೃಷಿ ಮಾಡಲು ತೊಡಗಿದಾಗ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದ ತಂದೆ ತಾಯಿಯಿಂದ ಪ್ರತಿರೋಧ ಬಂತು. ಓದಿ ಕೃಷಿ ಎಲ್ಲ ಹಾಳು ಮಾಡುತ್ತಿದ್ದಾನೆ ಎಂದು ಅವರು ತಿಳಿದುಕೊಂಡಿದ್ದರು.

ಆದರೂ ಸಹಜಕೃಷಿ ಮಾದರಿಯಲ್ಲಿ ಭತ್ತ ಬೆಳೆದೆ. ಅದಕ್ಕೆ ರೋಗ ಬಂದು ಎಲ್ಲ ಹಾಳಾಗಿ ಹೋಯಿತು. ಅನಂತರ ತಂದೆ ತಾಯಿ ಜತೆಗೆ ಅವರ ಸಾಂಪ್ರದಾಯಿಕ ಕೃಷಿಯನ್ನೇ ಸ್ವಲ್ಪ ಸಮಯ ಮುಂದುವರಿಸಿದೆ. ಎರಡು ವರ್ಷ ತೀರಾ ಗೊಂದಲದಲ್ಲಿದೆ. ನಷ್ಟವಾಗಿ ಕೈಸುಟ್ಟುಕೊಂಡದ್ದೂ ಆಯಿತು. ಆದರೆ ದೃಢ ನಿರ್ಧಾರದಲ್ಲಿ ಮುನ್ನುಗ್ಗಿದ ಬಳಿಕ ಹಿಂತಿರುಗಿ ನೋಡಲಿಲ್ಲ’ ಎನ್ನುತ್ತಾರೆ ಅವರು. ‘೧೯೯೬ರಲ್ಲಿ ಮೊದಲ ಬಾರಿಗೆ ಸಹಜ ಕೃಷಿ ಮಾದರಿಯಲ್ಲಿ ಮೂರು ಎಕರೆ ಪ್ರದೇಶದಲ್ಲಿ ಅಡಕೆ ಹಾಕಿದೆ. ತೋಟದ ನಡುವೆ ಕ್ರಂಚ್ ಮಾಡಿ ಬೇಸಿಗೆಯಲ್ಲಿ ಅದರಲ್ಲಿ ತಿಂಗಳಿಗೊಮ್ಮೆ ನೀರು ಹರಿಸುವ ವ್ಯವಸ್ಥೆ ಮಾಡಿದೆ. ತೋಟ ಸ್ವಚ್ಛ ವಾಗಿರಬೇಕು ಎಂಬ ಕಲ್ಪನೆಯೇ ತಪ್ಪು.

ಮಣ್ಣು ಹಸಿರು ಹೊದಿಕೆ ಹೊಂದಿದ್ದರೆ ಯಾವಾಗಲೂ ತೇವಾಂಶದಿಂದ ಕೂಡಿರುತ್ತದೆ. ಜತೆಗೆ -ಲವತ್ತತೆಯನ್ನೂ ಹೊಂದಿರುತ್ತದೆ. ನಾನು ಸಿಹಿಗೆಣಸಿನ ಬಳ್ಳಿ, ವೆಲ್ವೆಟ್ ಬೀನ್ಸ್, ಸೆಣಬು ಮುಂತಾದವುಗಳನ್ನು ಹೊದಿಕೆಯಾಗಿ ಬೆಳೆಸಿದೆ. ಮೂರ್ನಾಲ್ಕು ವರ್ಷ ಬರಗಾಲ ಬಂದಾಗ ಸ್ವಲ್ಪ ಇಳುವರಿ ಕಡಿಮೆಯಾಯಿತೇ ವಿನಾ ಬೇರೇನು ಸಮಸ್ಯೆಗಳೂ ಕಾಡಲಿಲ್ಲ’ ಎಂದು ವಿವರಿಸಿದರು.

ನೈಸರ್ಗಿಕ ಮಾದರಿ ಭೂಮಿಯನ್ನು ಬರಡು ಮಾಡುವುದಿಲ್ಲ. ಗಾಳಿ, ನೀರು, ಮಣ್ಣು ಹೀಗೆ ನಿಸರ್ಗದ ಯಾವ ಅಂಗಗಳೂ ಕಲುಷಿತಗೊಳ್ಳುವುದಿಲ್ಲ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳಂಥವು ಪರಿಸರವನ್ನು ನಾಶ ಮಾಡುತ್ತಿವೆ. ಪ್ರಾಣಿ-ಪಕ್ಷಿ ಸಂಕುಲಕ್ಕೂ ಆಪತ್ತು ತರುತ್ತಿದೆ. ಇದರಿಂದ ಜನರೂ ವಿಶಾಹಾರ ಸೇವಿಸುತ್ತಿzರೆ. ನಮ್ಮ ಬದುಕನ್ನೇ ನುಂಗುತ್ತಿರುವ ಇಂಥ ಕೃಷಿಯಿಂದ ಬಿಡುಗಡೆ ಹೊಂದಬೇಕು. ಸಾವಯವ ಬದುಕು, ನೈಸರ್ಗಿಕ ಕೃಷಿ ವಿಧಾನವೇ ಇದಕ್ಕೆಪರಿಹಾರ. ಪರ್ಯಾಯ ವಿಧಾನದಿಮದ ಬೆಳೆಯುವ ಉತ್ಪನ್ನಗಳು ತೂಕ, ಗುಣಮಟ್ಟ, ರುಚಿ ಮತ್ತು ಪೋಷಕಾಂಶದ ದೃಷ್ಟಿಯಿಂದ ಉತ್ತಮ. ರೈತರಿಗೆ ಒಳ್ಳೆಯ ಮಾರುಕಟ್ಟೆಯೂ ಸಿಗುತ್ತದೆ ಎಂಬುದು ಅವರ ಅನುಭವ ಜನ್ಯ ಮಾತು.

‘ಅಡಕೆ ಯಶಸ್ವಿಯಾದ ಬಳಿಕ ಭತ್ತವನ್ನು ಕೂಡ ಇದೇ ರೀತಿ ಬೆಳೆಯಬೇಕು ಎಂದು ನಿರ್ಧರಿಸಿದೆ. ಮೂರು ಎಕರೆಯಲ್ಲಿ ಭತ್ತ ಮಾಡಲಾರಂಭಿಸಿದೆ. ಒಂದು ಬಾರಿಯೂ ಔಷಧ ಸಿಂಪಡಿಸದೇ ರಸಗೊಬ್ಬರ ಹಾಕದೇ ಬೆಳೆಯ ತೊಡಗಿದೆ. ಆರಂಭದಲ್ಲಿ ಸ್ವಲ್ಪ ತೊಂದರೆಯಾದರೂ ವರ್ಷಗಳು ಕಳೆದಂತೆ ಸಮಸ್ಯೆಗಳು ಕಡಿಮೆಯಾದವು. ಸುತ್ತ ಮುತ್ತಲಲ್ಲಿ ಹುಳದ ಹಾವಳಿ, ಬೆಂಕಿರೋಗ ಮತ್ತಿತರ ಕಾರಣ ಗಳಿಂದ ಭತ್ತ ನಾಶವಾದಾಗಲೂ ನನ್ನ ಗzಗಳಿಗೆ ಸಮಸ್ಯೆ ಕಾಡಿಲ್ಲ. ಭತ್ತದ ಬೀಜ ಕೂಡ ಸರ್ಕಾರ ನೀಡುವ ಹೈಬ್ರೀಡ್ ತಳಿಯನ್ನು ಬಳಸಬಾರದು. ಜವಾರಿ ತಳಿಯನ್ನೇ ಬಳಸಬೇಕು.

ನಮಗೆ ಬೇಕಾದ ಬೀಜವನ್ನು ನಾವೇ ತಯಾರಿಸುತ್ತೇವೆ. ಇಲ್ಲದಿದ್ದರೆ ಸಹಜ ಕೃಷಿ ಮಾಡುವ ಗೆಳೆಯರಿಂದ ಪಡೆದುಕೊಳ್ಳುತ್ತೇವೆ’ ಎಂದು ಹೆಮ್ಮೆಯಿಂದ ವಿವರಿಸಿದರು. ಅಡಕೆ ಮತ್ತು ಭತ್ತ ಮುಖ್ಯ ಬೆಳೆಯಾಗಿ ಮಾಡಿಕೊಂಡಿದ್ದಾರೆ. ಇದಲ್ಲದೇ ಮನೆಗೆ ಬೇಕಾದ ಬಹುತೇಕ ಹಣ್ಣು ಹಂಪಲು, ತರಕಾರಿಗಳನ್ನು ಬೆಳೆದಿzರೆ. ಹಕ್ಕಿಗಳು ತಂದು ಹಾಕಿದ ಬೀಜದಲ್ಲಿಯೇ ಪೇರಳೆಯ ಹಲವು ಮರಗಳಾಗಿವೆ. ತಿಂದು ಮಿಕ್ಕಿ ಮಾರಾಟ ಮಾಡುವಷ್ಟು ಪೇರಳೆ ಆಗುತ್ತದೆ
ಯಾದರೂ ಅಡಕೆ ಮತ್ತು ಭತ್ತ ಹೊರತುಪಡಿಸಿ ಮತ್ಯಾವುದನ್ನೂ ಮಾರಾಟ ಮಾಡುವುದಿಲ್ಲ. ಮನೆಗೆ ಬರುವ ಗೆಳೆಯರಿಗೆ ಉಚಿತವಾಗಿ ನೀಡುತ್ತಾರೆ.

ಬಾಳೆ, ಚಿಕ್ಕು, ಫ್ಯಾಷನ್ -ಟ್, ಥೈವಾನ್ ಹಲಸು ಒಳಗೊಂಡಂತೆ ಹಲಸಿನ ವಿವಿಧ ತಳಿಗಳು, ಮಾವಿನ ವಿವಿಧ ತಳಿಗಳು, ಈರುಳ್ಳಿ, ಅಲಸಂದೆ, ಬದನೆ, ಉಸುಕು ಬದನೆ, ಕೆಂಪು ಬೆಂಡೆ, ಎಲಿ-ಂಟ್ ಬೆಂಡೆ, ಬೆಂಡೆ, ಆವರೆ ಒಳಗೊಂಡಂತೆ ವಿವಿಧ ತರಕಾರಿಗಳು, ಅರಿವೆ, ಸಬ್ಬಸಿಗೆ, ಪಾಲಕ್, ಕೊತ್ತಂಬರಿ ಇನ್ನಿತರ ಸೊಪ್ಪುಗಳನ್ನು ಬೆಳೆದಿದ್ದಾರೆ. ಇದಲ್ಲದೇ ತೊಗರಿ, ಅರಿಶಿಣ, ಕಬ್ಬು ಕೂಡ ಇದೆ. ರಾಗಿಯನ್ನೂ ಹೊರಗಿನಿಂದ ತರುವುದಿಲ್ಲ. ಮನೆಗೆ ಅಗತ್ಯ
ಇರುವಷ್ಟು ಬೆಳೆಯುತ್ತಾರೆ.

ಈ ಎಲ್ಲ ಬೆಳೆಗಳ ಹಿಂದೆ ಹನುಮಂತಪ್ಪ ಅವರ ಪತ್ನಿ ಪರಿಮಳಾ ಅವರ ಶ್ರಮ ಇದೆ. ಅವರು ಇವುಗಳ ಜತೆಗೆ ಮನೆಯ ಸುತ್ತ ವಿವಿಧ ಹೂವಿನ ಗಿಡಗಳನ್ನೂ ಬೆಳೆಸಿದ್ದಾರೆ. ತೇಜಸ್ ಮತ್ತು ತನ್ಮಯಿ ಎಂಬ ಇಬ್ಬರು ಮಕ್ಕಳಿದ್ದು, ಸರಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ. ರೈತರು ಯಂತ್ರಗಳನ್ನು ಮತ್ತು ಶ್ರಮವನ್ನು ಕಡಿಮೆ ಮಾಡುವ ಬಗ್ಗೆ ಮೊದಲು ಚಿಂತಿಸಬೇಕು. ಇದರೊಟ್ಟಿಗೆ ಕೃಷಿ ಮಾಡುವ ಖರ್ಚನ್ನೂ ಕಡಿಮೆ ಮಾಡಬೇಕು. ಮಣ್ಣು, ನೀರಿನಲ್ಲಿ ಸಹಜವಾಗಿ ಎಲ್ಲವೂ ಬೆಳೆಯುತ್ತವೆ. ಇದೇ ಮಾದರಿಯನ್ನು ಅನುಸರಿಸಬೇಕು. ಮಣ್ಣಿನಲ್ಲಿ ಎರೆಹುಳಗಳು ಇರಬೇಕು. ಹಾಗಂತ ಹೊರಗಿನಿಂದ ಎರೆಹುಳು ತಂದು ಬಿಡುವುದಲ್ಲ. ತಮ್ಮ ಭೂಮಿಯಲ್ಲಿಯೇ ಎರೆಹುಳು ಹೆಚ್ಚಾಗುವಂತೆ ಮಾಡಬೇಕು. ಹೊದಿಕೆ, ತೇವಾಂಶ ಇರುವಂತೆ ಮಾಡಿದರೆ ಇದೆಲ್ಲ ಸಾಧ್ಯ ಎಂದು ಹನುಮಂತಪ್ಪ ರೈತರಿಗೆ ಸಲಹೆ ನೀಡಿದರು.

ರೈತರು ಮಾಡಬೇಕಾದ ಇನ್ನೊಂದು ಕೆಲಸವೆಂದರೆ ಮುಖ್ಯಬೆಳೆಯಾಗಿ ಏನೇ ಬೆಳೆದರೂ, ಮನೆಗೆ ಅಗತ್ಯ ಇರುವ ಹಣ್ಣು, ತರ್ಕಾರಿಗಳನ್ನೂ ಒಟ್ಟಿಗೆ ಬೆಳೆಯಬೇಕು. ಅವುಗಳನ್ನು ಹೊರಗಿನಿಂದ ತರುವುದಾದರೆ ಖರ್ಚು ಹೆಚ್ಚಾಗುತ್ತದೆ ಎಂಬುದು ಅವರ ಅನುಭವ. ಹನುಮಂತಪ್ಪ ಅವರ ಸಂಪರ್ಕಕ್ಕೆ: ೯೯೬೪೩೩೩೪೧೬