Saturday, 7th September 2024

ಆ ರೈತರ ಬಲಿದಾನಕ್ಕೆ ಬೆಲೆಯೇ ಇಲ್ಲವೆ !

ಶಶಾಂಕಣ

shashidhara.halady@gmail.com

ನಮ್ಮ ದೇಶದ ಇತಿಹಾಸದಲ್ಲಿ ನಡೆದ ಬರ್ಬರ ಹತ್ಯಾಕಾಂಡಕ್ಕೆ ಜಲಿಯನ್‌ವಾಲಾ ಬಾಗ್ ದುರಂತವು ಹೆಸರಾಗಿದೆ. ಆದರೆ, ಅಂತಹದ್ದೇ ಹಲವು ಹತ್ಯಾಕಾಂಡಗಳನ್ನು ಬ್ರಿಟಿಷ್ ಸರಕಾರವು ನಡೆಸಿದ್ದರೂ, ಅವುಗಳ ವಿವರಗಳು ಜನಸಾಮಾನ್ಯರಿಗೆ ತಿಳಿಯದಂತೆ ವ್ಯವಸ್ಥಿತ ಕಾರಸ್ಥಾನವನ್ನು ನಡೆಸಲಾಗಿತ್ತು.

ಆಳುವವರು ತಮಗೆ ಬೇಕಾದ ರೀತಿಯಲ್ಲಿ ಇತಿಹಾಸವನ್ನು ಬರೆಯುತ್ತಾರೆ ಎಂಬ ಮಾತಿದೆ. ಆಳುವವರಿಗೆ ಅಪ್ರಿಯ ಎನಿಸುವ ಸತ್ಯಗಳನ್ನು, ಕಟು ವಾಸ್ತವಗಳನ್ನು ಇತಿಹಾಸದ ಪುಟಗಳಿಂದ ಮರೆಮಾಚುವುದುಂಟು; ಮಸುಕು ಮಾಡುವುದೂ ಉಂಟು. ನಮ್ಮ ದೇಶದಲ್ಲಿ ಬ್ರಿಟಿಷರು ಬಂದೂಕು ಹಿಡಿದು ಆಳ್ವಿಕೆ ನಡೆಸುತ್ತಿದ್ದಾಗ ನಡೆದ ಹಲವು ದಬ್ಬಾಳಿಕೆ, ಶೋಷಣೆ, ಗೋಲಿಬಾರ್
ಗಳ ವಿವರಗಳನ್ನು ಸಹಜವಾಗಿ ಅವರು ಅಳಿಸಿ ಹಾಕಿದ್ದಾರೆ.

ಕೌತುಕ ಮತ್ತು ದುರಂತ ಎಂದರೆ, ಬ್ರಿಟಿಷರ ವಿರುದ್ಧ ನಮ್ಮ ದೇಶದ ಜನರು ನಡೆಸಿದ ಕೆಲವು ಹೋರಾಟಗಳ ವಿವರಗಳು ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರವೂ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ! ಬ್ರಿಟಿಷರ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿ, ಪ್ರಾಣ ಕಳೆದುಕೊಂಡ ಅಸ್ಸಾಮಿನ ರೈತರ ತ್ಯಾಗವು ಅಂತಹ ಭೀಕರ ಘಟನೆಗಳಲ್ಲಿ ಒಂದು. ಸುಮಾರು ೧೪೦ ಜನ ರೈತರನ್ನು ಬ್ರಿಟಿಷ್ ಪೊಲೀಸರು ಗುಂಡಿಟ್ಟು ಕೊಂದು ಹಾಕಿದ ಭಯಾನಕ ಘಟನೆ ಅದು; ಆದರೆ ಆ ಬಲಿದಾನದ ಹೆಚ್ಚಿನ ವಿವರಗಳನ್ನು ತಿಳಿಯಲು, ಹುಡುಕಲು ಪ್ರಯತ್ನಿಸಿದರೆ, ಅಷ್ಟು ಸುಲಭವಾಗಿ ಲಭ್ಯವಿಲ್ಲ!

ಇಂದಿಗೂ! ಅದೇನು ಕಾರಣವೋ ಏನೊ, ಅಸ್ಸಾಂನ ರೈತರ ಆ ಬಲಿದಾನವು ಇತಿಹಾಸದ ಪುಟಗಳಲ್ಲಿ ಮರೆಯಾಗಿ ಕುಳಿತಿದೆ. ದಿನಾಂಕ : ೨೮.೧.೧೮೯೪. ಸ್ಥಳ : ಅಸ್ಸಾಂನ ಪಥಾರಿಘಾಟ್. ಪ್ರತಿಭಟನೆ ನಡೆಸಿದವರು : ಶಸ್ತ್ರರಹಿತ ರೈತರು. ಅವರ ಬಳಿ ಇದ್ದ ಆಯುಧಗಳು : ಕೋಲುಗಳು, ಕುಡುಗೋಲುಗಳು. ಅವರ ಬೇಡಿಕೆ: ಒಮ್ಮೆಗೇ ಬ್ರಿಟಿಷರು ಶೇ.೭೦ರಷ್ಟು ಹೆಚ್ಚಿಸಿದ ತೆರಿಗೆ.

ನೆರೆದಿದ್ದ ರೈತರ ಮೇಲೆ ಬ್ರಿಟಿಷ್ ಪೊಲೀಸರು ಮೊದಲಿಗೆ ಲಾಠಿ ಪ್ರಹಾರ ನಡೆಸಿದರು, ನಂತರ ಮನಬಂದಂತೆ ಗುಂಡು ಹಾರಿಸಿದರು. ಆ ದಿನ ಒಟ್ಟು ಸುಮಾರು ೧೪೦ ರೈತರು ಅಸು ನೀಗಿದರು. ಆದರೆ, ಬ್ರಿಟಿಷ್ ಸರಕಾರ ಬರೆದಿಟ್ಟ ದಾಖಲೆಗಳ ಪ್ರಕಾರ ಆ ದಿನ ಸತ್ತವರು ಕೇವಲ ೧೫ ಮಂದಿ. ಸಹಜವಾಗಿ ಬ್ರಿಟಿಷ್ ಆಡಳಿತವು ಈ ದುರ್ಘಟನೆಗೆ ಹೆಚ್ಚು ಪ್ರಚಾರ, ಪ್ರಾಮುಖ್ಯತೆ ನೀಡಲಿಲ್ಲ. ಅವರದ್ದೇ ಪೊಲೀಸು, ಅವರದ್ದೇ ನ್ಯಾಯಾಲಯ, ಅವರದ್ದೇ ಪತ್ರಿಕೆಗಳು, ಅವರದ್ದೇ ಸರಕಾರ. ಆ ಪ್ರದೇಶವು ಅಂದು ಬ್ರಿಟಿಷ್ ರಾಜ್‌ನ ರಾಜಧಾನಿಯಾಗಿದ್ದ ಕೊಲ್ಕೊತ್ತಾಕ್ಕೆ ಸಾಕಷ್ಟು ಸನಿಹವಿದ್ದ ಸ್ಥಳ.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷ್ ಪೊಲೀಸರು ನಡೆಸಿದ ಭೀಕರ ಗೋಲಿಬಾರ್ ಘಟನೆಗಿಂತಲೂ ಸುಮಾರು ೨೫ ವರ್ಷ ಮುಂಚೆಯೇ ನಡೆದ ಈ ಭಯಾನಕ ಘಟನೆಯನ್ನು, ನಂತರದ ಹೋರಾಟಗಾರರು ನೆನಪಿಸಿಕೊಂಡದ್ದಕ್ಕಿಂತ, ಮರೆತದ್ದೇ ಹೆಚ್ಚು. ಜಲಿಯನ್ ವಾಲಾ ಬಾಗ್‌ನಲ್ಲಿ ಅಮಾಯಕ ಜನರ ಮೇಲೆ ಗುಂಡು ಹಾರಿಸಿದ ಬ್ರಿಟಿಷ್ ಸರಕಾರದ ನಡೆಯು, ಕೇವಲ ಆಕಸ್ಮಿಕವಲ್ಲ, ‘ಸ್ಟ್ರೇ ಇನ್ಸಿಡೆಂಟ್’ ಅಲ್ಲ ಎಂಬುದಕ್ಕೆ ಅಸ್ಸಾಂನ ಈ ಗೋಲಿಬಾರನ್ನು ಉದಾಹರಣೆಯಾಗಿ ನೀಡಬಹುದು.

ತಾನು ವಸಾಹತು ಮಾಡಿಕೊಂಡು, ಆಳ್ವಿಕೆ ನಡೆಸುತ್ತಿರುವ ಪ್ರದೇಶಗಳಲ್ಲಿ ಜನರನ್ನು ಮನಬಂದಂತೆ ಸಾಯಿಸುವ ಮನಸ್ಥಿತಿಯು ಬ್ರಿಟಿಷ್ ಸರಕಾರದಲ್ಲಿ ಅಂತರ್ಗತವಾಗಿತ್ತು ಎಂಬುದಕ್ಕೂ ಈ ಘಟನೆಯನ್ನು ಉದಹರಿಸಬಹುದು. ಅಸ್ಸಾಂನ ಗುವಾಹತಿಯಿಂದ ಸುಮಾರು ೬೦ ಕಿ.ಮೀ. ದೂರದಲ್ಲಿರುವ ಪಥಾರಿಘಾಟ್, ಕೃಷಿ ಪ್ರಧಾನವಾಗಿದ್ದ ಪ್ರದೇಶ. ೧೮೨೬ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು (ಬ್ರಿಟಿಷ್‌ರು) ಈ ಪ್ರದೇಶವನ್ನು ಬರ್ಮಾದ ರಾಜನಿಂದ ಕಿತ್ತುಕೊಂಡಿತ್ತು; ಅದಕ್ಕಾಗಿ ಯುದ್ಧವನ್ನೂ ಮಾಡಿತ್ತು. ಆ ಸುತ್ತಲಿನ ಪ್ರದೇಶಗಳನ್ನು ಒಂದಲ್ಲ ಒಂದು ಕಾರಣ ನೀಡಿ, ಬ್ರಿಟಿಷರು ತಮ್ಮ ತೆಕ್ಕೆಗೆ ಹಾಕಿ ಕೊಳ್ಳುತ್ತಾ ಬಂದಿದ್ದರು.

೧೮೫೭ರಲ್ಲಿ ನಡೆದ ಸಿಪಾಯಿ ದಂಗೆ ಅಥವಾ ಮೊದಲನೆಯ ಸ್ವಾತಂತ್ರ್ಯ ಹೋರಾಟವು ಒಂದು ಪ್ರಮುಖ ಘಟ್ಟ; ಆ ಯುದ್ಧದ ನಂತರ, ನಮ್ಮ ದೇಶವನ್ನು ಬ್ರಿಟಿಷ್ ಸರಕಾರವು ನೇರವಾಗಿ ಆಳತೊಡಗಿತು. ಷಿಲ್ಲಾಂಗ್‌ನ್ನು ಕೇಂದ್ರವಾಗಿಸಿರಿಕೊಂಡ
ಚೀಫ್ ಕಮಿಷನರ್‌ನು ಈ ಪ್ರದೇಶವನ್ನು ೧೯೮೭ ರಿಂದ ೧೯೦೫ರ ತನಕ (ಅಂದರೆ ಬಂಗಾಳದ ವಿಭಜನೆಯ ತನಕ) ಆಳುತ್ತಿದ್ದನು. ೧೯೦೬ರ ನಂತರ ಲೆಫ್ಟಿನೆಂಟ್ ಗವರ್ನರ್‌ನ ಸುಪರ್ದಿಗೆ ಈ ಭಾಗ ಸೇರಿತು. ಅಸ್ಸಾಂನಲ್ಲಿ ಟೀ ತೋಟಗಳನ್ನು ವ್ಯಾಪಕವಾಗಿ ಅಭಿವೃದ್ಧಿ ಮಾಡಿದ ‘ಕೀರ್ತಿ’ ಬ್ರಿಟಿಷರದ್ದು. ಆದರೆ ಆ ಒಂದು ಚಟುವಟಿಕೆಯು ಸುಲಭದಲ್ಲಿ ಆಗಲಿಲ್ಲ; ಸ್ಥಳೀಯ ಜನರನ್ನು ಶೋಷಣೆಗೆ ಗುರಿಮಾಡಿ, ವಿರೋಽಸಿದವರನ್ನು ಬಂದೂಕು ಮೊನೆಯಿಂದ ಬೆದರಿಸಿಯೇ, ಟೀ ತೋಟಗಳ ಸ್ಥಾಪನೆ ಯಾಯಿತು.

ಆ ದಿನಗಳಲ್ಲಿ ಬ್ರಿಟಿಷರು ನಡೆಸಿದ ‘ಸರ್ವೇ’ಯ ಒಂದು ಉದ್ದೇಶವೇ ಕೃಷಿ ಭೂಮಿಯನ್ನು ಗುರುತಿಸುವುದು. ಟೀ ತೋಟ ಗಳಾಗಿ ಪರಿವರ್ತನೆ ಆಗದೇ ಇರುವ ಕೃಷಿ ಭೂಮಿಯ ಮೇಲೆ ಬ್ರಿಟಿಷರು, ಸಾಕಷ್ಟು ತೆರಿಗೆಯನ್ನು ಹೇರಿದರು. ರೈತರು
ಅಪೀಮನ್ನು ಬೆಳೆಯುವ ಒತ್ತಡಕ್ಕೆ ಸಿಲುಕಿದ್ದರು; ಸ್ಥಳೀಯ ಜಮೀನುದಾರರಿಂದ ವಿಪರೀತ ಬಡ್ಡಿದರದಲ್ಲಿ ಸಾಲ ಮಾಡಿ, ಕೃಷಿ ನಡೆಸಬೇಕಾದ ಅನಿವಾರ್ಯತೆ ರೈತರದ್ದು. ಸ್ಥಳೀಯ ಜಮೀನುದಾರರು ಬ್ರಿಟಿಷರ ಜತೆ ಕೈಜೋಡಿಸಿ, ಇತರ ರೈತರನ್ನು ಶೋಷಣೆ ಮಾಡುತ್ತಿದ್ದರು.

ಜತೆಗೆ, ಬ್ರಿಟಿಷರು ಸಾಕಷ್ಟು ತೆರಿಗೆಯನ್ನೂ ರೈತರ ಮೇಲೆ ವಿಧಿಸಿದ್ದರು. ೧೮೯೩ರಲ್ಲಿ ಬ್ರಿಟಿಷರು ಒಮ್ಮೆಗೇ ಕೃಷಿ ತೆರಿಗೆ
ಯನ್ನು ಶೇ.೭೦ರಿಂದ ೮೦ರಷ್ಟು ಹೆಚ್ಚಿಸಿದರು. ತೆರಿಗೆಯನ್ನು ತ್ವರಿತವಾಗಿ, ನಗದು ರೂಪದಲ್ಲಿ ನೀಡುವ ಒತ್ತಡವೂ ಇತ್ತು. ಸಹಜವಾಗಿಯೇ ಇದು ರೈತರ ಮೇಲೆ ಇನ್ನಿಲ್ಲದ ಒತ್ತಡವನ್ನು ಹೇರಿತು. ಅವರು ಕೋಪಗೊಂಡರು, ಹೆದರಿದರು, ಕಂಗಾ ಲಾದರು, ಪ್ರತಿಭಟಿಸುವ ಯೋಚನೆ ಮಾಡಿದರು; ಆದರೆ, ರೈತರ ಬಳಿ ಆಯುಧಗಳಿರಲಿಲ್ಲ, ಬ್ರಿಟಿಷರ ಬಂದೂಕು ಮೊನೆಯನ್ನು ಎದುರಿಸುವಂತಹ ಶಸ್ತ್ರಗಳೂ ಇರಲಿಲ್ಲ. ಆಗ ಅಲ್ಲಿನ ರೈತರು ಕಂಡುಕೊಂಡ ಶಾಂತಿಯುತ ಅಸ್ತ್ರವೆಂದರೆ ‘ರೈಜ್ ಮೇಳ್’ ಅಥವಾ ಶಾಂತಿಯುತ ಪ್ರತಿಭಟನೆ. ಸಾವಿರಾರು ರೈತರು ಒಂದೆಡೆ ಸೇರಿ, ತಮಗೆ ವಿಧಿಸಿರುವ ತೆರಿಗೆಯು ಅತಿ ಹೆಚ್ಚು, ಆದ್ದರಿಂದ ಕಡಿಮೆ ಮಾಡಬೇಕು ಎಂದು ಬ್ರಿಟಿಷ್ ಸರಕಾರವನ್ನು ಮನವಿ ಮಾಡುವ ವಿಧಾನವನ್ನು ರೈತರು ಅನುಸರಿಸಿದರು.

ಒಮ್ಮಿಂದೊಮ್ಮೆಗೇ ಶೇ.೭೦ರಷ್ಟು ಹೆಚ್ಚಳಗೊಂಡ ತೆರಿಗೆಯ ಭಾರವನ್ನು ತಾಳಲಾರದೆ ನೋವಿಗೆ ಒಳಗಾಗಿದ್ದ ಸಾವಿರಾರು
ರೈತರು, ಒಂದೆಡೆ ಸೇರುವುದನ್ನು ಕಂಡು ಬ್ರಿಟಿಷರು ಕೆರಳಿದರು. ಅದಕ್ಕೆ ಬಲವಾದ ಕಾರಣವೆಂದರೆ, ಬೆಂಗಾಲ್ ಪ್ರೆಸಿಡೆನ್ಸಿ ಯಲ್ಲಿ ಆಗ ಕ್ರಾಂತಿಕಾರಿ ಚಟುವಟಿಕೆಗಳು ಆರಂಭವಾಗಿದ್ದವು. ಒಬ್ಬೊಬ್ಬರೇ ಬ್ರಿಟಿಷ್ ಅಧಿಕಾರಿಗಳನ್ನು ಕ್ರಾಂತಿಕಾರಿಗಳು
ಗುಂಡಿಟ್ಟು ಸಾಯಿಸುವ ಕೆಲಸವನ್ನು ಮಾಡತೊಡಗಿದ್ದರು. ಅಸ್ಸಾಂನಲ್ಲಿ ರೈತರು ಶಾಂತಿಯುತವಾಗಿ ಸೇರಿದ್ದರೂ, ಈ ಪ್ರದೇಶಗಳು ದೇಶದ್ರೋಹದ ಚಟುವಟಿಕೆಗೆ ಇಂಬು ನೀಡುತ್ತವೆ ಎಂಬುದು ಬ್ರಿಟಿಷರ ಅಭಿಪ್ರಾಯ.

ಆಗ ಅವರು ನಡೆಸಿದ್ದೇ ಬಲಪ್ರಯೋಗ. ಯಾವುದೇ ಶಸ್ತ್ರ ಹಿಡಿಯದೇ ಇದ್ದ ರೈತರು, ಶಾಂತಿಯುತವಾಗಿ ತಮ್ಮ ಮನವಿ ಯನ್ನು ಸಲ್ಲಿಸಲು ಸೇರಿದ್ದರೂ, ಪೊಲೀಸರು ಲಾಠಿಚಾರ್ಜ್ ಮಾಡಿದರು. ನಂತರ, ಬಂದೂಕನ್ನು ಕೈಗೆತ್ತಿಕೊಂಡರು.
೨೮.೧.೧೮೯೪ ಪಥಾರಿಘಾಟ್‌ನ ದುರ್ದೈವದ ದಿನ. ಒಮ್ಮೆಗೇ ನೂರಾರು ಪೊಲೀಸರು ರೈತರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಅಮಾಯಕರ ಮೇಲೆ ಗುಂಡುಹಾರಿಸುವಂತೆ ಆದಿನ ಆದೇಶ ನೀಡಿದವನು ಜೆ.ಆರ್. ಬೆರಿಂಗ್ಟನ್ ಎಂಬಾತ.

ಅವನು ಆಗ ಮಿಲಿಟರಿ ಪೊಲೀಸ್‌ನ ಕಮಾಂಡೆಂಟ್ ಆಗಿದ್ದ. ಸುಮಾರು ೧೪೦ ಜನ ರೈತರು ಆ ದಿನ ಅಸು ನೀಗಿದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ನರೋತ್ತಮ್ ಕೊಚ್ ಎಂಬ ಪ್ರತ್ಯಕ್ಷ ದರ್ಶಿಯು ಬರೆದ ‘ದೋಲಿ ಪುರಾಣ’ ಎಂಬ ಪದ್ಯರೂಪದ
ದಾಖಲೀಕರಣದಲ್ಲಿ ೧೪೦ ಜನರು ಮೃತಪಟ್ಟರು ಎಂದು ಸೂಚಿಸಲಾಗಿದೆ. ಆದರೆ ದರಾಂಗ್ ಜಿಲ್ಲಾ ಗೆಜೆಟ್‌ನ ವರದಿಯ ಪ್ರಕಾರ ಆ ದಿನ ಕೇವಲ ೧೫ ಜನ ರೈತರು ಮೃತಪಟ್ಟರು ಮತ್ತು ೩೭ ಜನ ಗಾಯಗೊಂಡರು.

ಅಸ್ಸಾಂನ ಇತಿಹಾಸದಲ್ಲಿ ನಡೆದ ಎರಡನೆಯ ಭೀಕರ ಹತ್ಯಾಕಾಂಡ ಇದು. ೧೬೭೧ರಲ್ಲಿ ಮೊಗಲರ ಆಕ್ರಮಣದ ವಿರುದ್ಧ ಅಲ್ಲಿನವರು ನಡೆಸಿದ ಹೋರಾಟದಲ್ಲಿ, ಸಾಕಷ್ಟು ಪ್ರಾಣಹಾನಿಯಾಗಿತ್ತು, ಆದರೆ ಆ ಯುದ್ಧದಲ್ಲಿ ಮೊಗಲರನ್ನು ಸ್ಥಳೀಯರು
ಸೋಲಿಸಿದ್ದರು. ಪಥಾರಿಘಾಟ್‌ನ ಹತ್ಯಾಕಾಂಡವು ಕೇವಲ ಶಾಂತಿಯುತ ಪ್ರತಿಭಟನೆಯಾಗಿತ್ತೇ ವಿನಹ ಯುದ್ಧವಾಗಿರಲಿಲ್ಲ, ಶಸಸಹಿತ ಹೋರಾಟವಾಗಿರಲಿಲ್ಲ. ಆದರೂ, ಹತ್ಯಾಕಾಂಡದ ವಿಚಾರಕ್ಕೆ ಬಂದಾಗ, ಅಸ್ಸಾಂನಲ್ಲಿ ೧೬೭೧ರ ಘಟನೆಗೆ ಇದನ್ನು ಹೋಲಿಸಲಾಗುತ್ತದೆ. ಈಚಿನ ವರ್ಷಗಳಲ್ಲಿ ಅಸ್ಸಾಂ ನಲ್ಲಿ ಪಥಾರಿಘಾಟ್ ಹತ್ಯಾಕಾಂಡದ ವಿಚಾರ ಸಾಕಷ್ಟು ಚರ್ಚೆಗಳಾಗುತ್ತಿವೆ.

ವಿಶೇಷವೆಂದರೆ, ಪಥಾರಿ ಘಾಟ್‌ನಲ್ಲಿ, ೧೮೯೪ರ ಆ ದಿನ ನೆರೆದಿದ್ದ ಜನರು ‘ಅಸಹಕಾರ ಚಳವಳಿ’ ಯನ್ನೇ ನಡೆಸಿದ್ದರು, ಶಾಂತಿಯುತ ಪ್ರತಿಭಟನೆಯನ್ನು ಮಾಡುತ್ತಿದ್ದರು. ಅವರು, ಅಂದು ತಮ್ಮ ಮನವಿಯನ್ನು ಸಲ್ಲಿಸಲು, ತಮ್ಮ ನೋವನ್ನು ಎತ್ತಿ
ತೋರಿಸಲು ನೆರೆದಿದ್ದರು. ಈ ಹೋರಾಟದ ವಿಧಾನವು, ಗಾಂಧೀಜಿಯವರು ಆ ನಂತರ ಜನಪ್ರಿಯಗೊಳಿಸಿದ ‘ಅಸಹಕಾರ ಚಳವಳಿ’ಯ ಮತ್ತೊಂದು ಸ್ವರೂಪವಾಗಿತ್ತು ಮತ್ತು ಇಂತಹ ಅಸಹಕಾರ ಚಳವಳಿಯು, ಶಾಂತಿಯುತ ಪ್ರತಿಭಟನೆಯು ನಮ್ಮ
ದೇಶದಲ್ಲಿ ಮೊದಲಿನಿಂದಲೂ ನಡೆಯುತ್ತಿತ್ತು ಎಂದು ಅಸ್ಸಾಂನ ಜನರು ಈಚಿನ ದಿನಗಳಲ್ಲಿ ಚರ್ಚಿಸುತ್ತಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ರಚನೆಗೊಂಡ ಇತಿಹಾಸದ ಪುಸ್ತಕಗಳಲ್ಲಿ ಪಥಾರಿ ಘಾಟ್ ಹತ್ಯಾಕಾಂಡದ ವಿವರ ಗಳು ವ್ಯಾಪಕವಾಗಿ ದಾಖಲಾಗಲಿಲ್ಲ; ಪಠ್ಯಪುಸ್ತಕಗಳಲ್ಲೂ ಸಹ ಇದರ ಪ್ರಸ್ತಾಪವಿಲ್ಲ. ‘೧೯೧೯ರಲ್ಲಿ ನಡೆದ ಜಲಿಯನ್
ವಾಲಾಭಾಗ್ ಹತ್ಯಾಕಾಂಡದ ವಿವರಗಳು ನಮ್ಮ ಪಠ್ಯಪುಸ್ತಕಗಳಲ್ಲಿ ಇವೆ; ಆದರೆ ದೂರದ ಅಸ್ಸಾಂನ ರೈತರ ಬಲಿದಾನದ ವಿವರಗಳ ಪ್ರಸ್ತಾಪವಿಲ್ಲ, ಇದನ್ನು ನೆನಪಿಸಿಕೊಳ್ಳುವ ಅಗತ್ಯವಿದೆ’ ಎಂದೂ ಅಸ್ಸಾಂನ ಜನರು ಚರ್ಚಿಸಲು ಆರಂಭಿಸಿದರು.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ, ಅಸ್ಸಾಂನ ರೈತರ ಬಲಿದಾನವನ್ನು ಅಧಿಕೃತವಾಗಿ ಮತ್ತು ವ್ಯಾಪಕವಾಗಿ ದೇಶದಾದ್ಯಂತ ಗುರುತಿಸಲು ಆರಂಭವಾಯಿತು. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ದಿನಗಳು ಅವು; ಭಾರತೀಯ ಸೇನೆಯು ಅಸ್ಸಾಂನಲ್ಲಿ ಬಲಿದಾನಕ್ಕೆ ಒಳಗಾದ ರೈತರನ್ನು ಸ್ಮರಿಸುವ ಕಾರ್ಯವನ್ನು
ಆರಂಭಿಸಿತು. ಅಂತಹ ಮೊದಲ ಸ್ಮರಣೆಯು ನಡೆದದ್ದು ೨೯.೧.೨೦೦೦ ರಂದು. ಜತೆಗೆ, ಪೊಲೀಸರು ರೈತರ ಮೇಲೆ ಗುಂಡು ಹಾರಿಸಿದ ಜಾಗದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿ, ಶಸ್ತ್ರರಹಿತ ರೈತರ ಪ್ರಾಣ ತ್ಯಾಗವನ್ನು ದಾಖಲಿಸುವ ಕೆಲಸವೂ ನಡೆದಿದೆ. ಆ ನಂತರದ ವರ್ಷಗಳಲ್ಲಿ, ಪ್ರತಿವರ್ಷ ಜನವರಿ ೨೯ ರಂದು, ಭಾ ರತೀಯ ಸೇನೆಯು ಅಲ್ಲಿ ಪುಟ್ಟ
ಕಾರ್ಯಕ್ರಮ ನಡೆಸಿ, ರೈತರ ತ್ಯಾಗವನ್ನು ನೆನಪಿಸಿಕೊಳ್ಳುತ್ತಿದೆ.

ಆದರೆ, ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಆ ಬಲಿದಾನವನ್ನು ನೆನಪಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಅಸ್ಸಾಂನ ಹಲವು ಪ್ರಾಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ನಮ್ಮ ದೇಶದ ಇತಿಹಾಸದಲ್ಲಿ ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ನಡೆದ ಅತಿ ದೊಡ್ಡ ದುರ್ಘಟನೆ ಮತ್ತು ಗೋಲಿಬಾರ್ ಇದು. ಆದ್ದರಿಂದ, ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ಸ್ಮರಿಸುವ ಕಾರ್ಯ ಆಗಬೇಕು ಎಂಬ ಸ್ಥಳೀಯರ ಬೇಡಿಕೆಯಲ್ಲಿ ಹುರುಳಿದೆ. ನಮ್ಮ ಜನರಿಗೆ ಸ್ವಾತಂತ್ರ್ಯ ಬೇಕು, ಬ್ರಿಟಿಷರ ದಬ್ಬಾಳಿಕೆ ಬೇಡ
ಎಂದು ನಡೆದ ಆ ಶಾಂತಿಯುತ ಹೋರಾಟವು, ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ದಾಖಲಾಗಬೇಕು ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಗುರುತಿಸುವಂತಾಗಬೇಕು ಎಂಬುದು ಸಹ ಅಸ್ಸಾಂನ ಜನರ ಬೇಡಿಕೆ.

೧೯೧೯ರ ಜಲಿಯನ್ ವಾಲಾ ಬಾಗ್‌ನ ಹತ್ಯಾಕಾಂಡವು ಇಂದು ಸಾಕಷ್ಟು ಪ್ರಸಿದ್ಧ; ಬೈಶಾಕಿ ಹಬ್ಬದ ದಿನ ಅಲ್ಲಿ ನೆರೆದಿದ್ದ ಶಸರಹಿತ ಜನರ ಮೇಲೆ, ಗುಂಡಿನ ಮಳೆಗರೆದು, ನಾಲ್ಕು ನೂರಕ್ಕೂ ಹೆಚ್ಚು ಜನರನ್ನು ಸಾಯಿಸದ ಬ್ರಿಟಿಷರ ಕ್ರೌರ್ಯ ಇಂದು
ಎಲ್ಲೆಡೆ ಪ್ರಚುರಗೊಂಡಿದೆ. ಇಂತಹ ಹಲವು ಹತ್ಯಾಕಾಂಡಗಳನ್ನು ಬ್ರಿಟಿಷರು ನಡೆಸಿದ್ದಾರೆ ಎಂಬುದಕ್ಕೆ, ದೂರದ ಅಸ್ಸಾಂನ ಪಥಾರಿಘಾಟ್‌ನ ಹತ್ಯಾಕಾಂಡವೇ ಸಾಕ್ಷಿ. ಯಾವುದೇ ಶಸ್ತ್ರ ಹೊಂದಿರದೇ ಇದ್ದ ೧೪೦ ಜನರನ್ನು ಒಂದೇ ದಿನ ಸಾಯಿಸಿದ ಬ್ರಿಟಿಷರ ಈ ಕ್ರೌರ್ಯವು ಹೆಚ್ಚು ಪ್ರಚುರಕ್ಕೆ ಬಾರದೇ ಇರುವುದು ಸಹ ಒಂದು ಕ್ರೌರ್ಯವೇ ಅಲ್ಲವೆ!

ನಮ್ಮ ಜನರ ಇಂತಹ ಬಲಿದಾನವನ್ನು ಹೆಚ್ಚು ಜನರಿಗೆ ತಿಳಿಯುವಂತೆ ಮಾಡುವ ಕೆಲಸವನ್ನು ಸ್ವಾತಂತ್ರೋತ್ತರ ಭಾರತದ ಇತಿಹಾಸಕಾರರು ಇನ್ನಷ್ಟು ಸಮರ್ಪಕವಾಗಿ ಮಾಡಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವುದಲ್ಲದೆ, ಬೇರೇನನ್ನೂ ಮಾಡದ ಸ್ಥಿತಿಯಲ್ಲಿ ನಾವಿಂದು ಇದ್ದೇವೆ ಎಂದರೆ, ಅದು ಅತಿಶಯೋಕ್ತಿಯಲ್ಲ.

error: Content is protected !!