ಕೃಷಿರಂಗ
ಬಸವರಾಜ ಶಿವಪ್ಪ ಗಿರಗಾಂ
ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಸರಕಾರದ ಹಾಗೂ ರೈತರ ಆರ್ಥಿಕತೆಯ ಸುಧಾರಣೆಯಲ್ಲಿ ಕಬ್ಬು ಬೆಳೆಯ ಪಾತ್ರ ಬಹಳಷ್ಟಿದೆ. ದೇಶದ ಕಬ್ಬು ಉತ್ಪಾದನೆಯಲ್ಲಿ ಕರ್ನಾಟಕವು ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಂತರದ ಸ್ಥಾನದಲ್ಲಿದೆ.
ರಾಜ್ಯದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳು ಕಬ್ಬು ಕೃಷಿಗೆ ಪೂರಕವಾಗಿದ್ದು, ದೇಶದಲ್ಲಿಯೇ ಪಶ್ಚಿಮ ಘಟ್ಟ ಹಾಗೂ ಬೆಳಗಾಂ ಜಿಲ್ಲೆಯ ಕೆಲಭಾಗವು ಪ್ರತಿಟನ್ ಕಬ್ಬಿನಿಂದ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ಪ್ರದೇಶ ವಾಗಿವೆ. ಕೃಷಿ ಕಾರ್ಮಿಕರ ಅಭಾವವಿರುವ ಇಂದಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಡಿಮೆ ಕಾರ್ಮಿಕ ಲಭ್ಯತೆಯ ಹಾಗೂ ಭರವಸೆಯ ಬೆಲೆಯಿರುವ ಏಕೈಕ ಬೆಳೆ ಕಬ್ಬು. ಹೀಗಾಗಿ ಕಬ್ಬು ಕ್ಷೇತ್ರವು ಬರಗಾಲದ ಅವಧಿ ಹೊರತುಪಡಿಸಿ ಇನ್ನುಳಿದ ಕಾಲಾವಧಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ ೩ ದಶಕಗಳಾಚೆ ಸೈಕಲ್ಲಿಗೆ ಗತಿಯಿಲ್ಲದ ಹಲವಾರು ರೈತರು ಇಂದು ಹಲವು ಸಮಸ್ಯೆಗಳನ್ನು ಎದುರಿಸಿಯೂ ಕಬ್ಬು ಬೆಳೆ ಹಾಗೂ ಸಕ್ಕರೆ ಕಾರ್ಖಾನೆಗಳ ಕೃಪೆಯಿಂದ ಎ.ಸಿ. ಕಾರುಗಳಲ್ಲಿ ತಿರುಗಾಡು ವಷ್ಟರ ಮಟ್ಟಿಗೆ ಜೀವನಮಟ್ಟವನ್ನು ಸುಧಾರಿಸಿಕೊಂಡಿರುವುದು ಸುಳ್ಳೇನಲ್ಲ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಹಾಗೂ ಕಾರ್ಯಕ್ಷಮತೆಯ ಹೆಚ್ಚಳದಿಂದ, ಲಭ್ಯವಿರುವ ಕಬ್ಬು ಖರೀದಿಗಾಗಿ ಕಾರ್ಖಾನೆಗಳ ಮಧ್ಯದಲ್ಲಿನ ಅನಾರೋಗ್ಯಕರ ಪೈಪೋಟಿಯಿಂದಾಗಿ ಕಬ್ಬಿನ ದರ ಕೊಡುವು ದರಲ್ಲಿ ‘ನಾ ಮುಂದು ತಾ ಮುಂದು’ ಅಂತಾಗಿರುವುದು ಸುಳ್ಳೇನಲ್ಲ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಸಾಕಷ್ಟು ಪ್ರಯೋಜನವಾಗಿರುವುದನ್ನು ಒಪ್ಪಿಕೊಳ್ಳಲೇಬೇಕು. ಸರಕಾರವು ಕಬ್ಬು ಬೆಳೆಗಾರರ ಹಿತಕಾಪಾಡಲು ಕಾರ್ಖಾನೆಗಳ ಮೇಲೆ ನಿಯಂತ್ರಣ ಸಾಽಸು ವುದು ತಪ್ಪೇನಲ್ಲ. ಆದರೆ ಸಕ್ಕರೆ ಉದ್ದಿಮೆಯ ಮೇಲೆ ಹಿಡಿತವಿರುವಷ್ಟು ಇನ್ನಿತರ ಯಾವುದೇ ಕೃಷಿ ಉದ್ದಿಮೆಗಳ ಮೇಲೆ ಹಿಡಿತವಿಲ್ಲ. ಇಷ್ಟೊಂದು ಹಿಡಿತ ಹೊಂದಿರುವ ಸರಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದಂತೆ ಸಕ್ಕರೆ ಉದ್ದಿಮೆಯ ಸಮಸ್ಯೆಗಳನ್ನು ಪರಿಹರಿಸಬೇಕು.
ಸಹಕಾರಿ ರಂಗದ ಹಲವು ಸಕ್ಕರೆ ಕಾರ್ಖಾನೆಗಳು ಹಿಂದೆ ದೇಶದಲ್ಲಿಯೇ ಅತಿಹೆಚ್ಚು ಬೆಲೆ ಕೊಡುತ್ತಿದ್ದವು. ಆದರೆ ಇಂದು ಬೆಲೆ ಹೆಚ್ಚು ಕೊಡುವುದು ಒತ್ತಟ್ಟಿಗಿರಲಿ ನೆರೆಯ ಖಾಸಗಿ ಸಕ್ಕರೆ ಕಾರ್ಖಾನೆಗಳಷ್ಟು ಕಬ್ಬಿನ ದರ ಕೊಡಲೂ ಹರ ಸಾಹಸ ಪಡುತ್ತಿವೆ. ಸರಕಾರದ ಸ್ವಾಮ್ಯದಲ್ಲಿರುವ ಮೈಶುಗರ್ ಹಾಗೂ ಭದ್ರಾವತಿಯ ಎಂಪಿಎಂ ಸಕ್ಕರೆ ಕಾರ್ಖಾನೆಗಳು ರಾಜ್ಯದ ಕಾರ್ಖಾನೆಗಳಿಗೆ ಮಾದರಿಯಾಗಬೇಕಿತ್ತು. ಆದರೆ ಇವೆಲ್ಲವು ನಷ್ಟದಲ್ಲಿರುವುದಲ್ಲದೆ ಇಲ್ಲಿಯವರೆಗೆ ಸರಕಾರ
ದಿಂದ ಪಡೆದ ಅನುದಾನದ ಲೆಕ್ಕ ಹಾಕಿದರೆ ಇಂಥ ಹಲವು ಕಾರ್ಖಾನೆಗಳನ್ನು ಹೊಸದಾಗಿ ನಿರ್ಮಿಸಬಹುದಾಗಿತ್ತು.
ಕೇವಲ ಭಾವನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿರುವ ಮೈಶುಗರ್‌ನ ಹಾನಿ ಯಾವ ಪುರುಷಾರ್ಥಕ್ಕೆ? ಪೈಪೋಟಿ ಯುಕ್ತ ದಿನಮಾನಗಳಲ್ಲಿ ಅನುದಾನ ನಿರೀಕ್ಷಿಸದೆ ರೈತರಿಗೆ ಸರಕಾರದ ಮಾರ್ಗದರ್ಶನದಂತೆ ಯೋಗ್ಯ ಬೆಲೆ ಕೊಡುತ್ತಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು ರೈತ ವಿರೋಧಿಗಳಾ? ಕಬ್ಬು ಬೆಳೆಗಾರರಿಗೆ ನಷ್ಟವಾದಲ್ಲಿ ಕಬ್ಬನ್ನು ಬಿಟ್ಟು ಬೇರೆ ಬೆಳೆಯತ್ತ ಆಕರ್ಷಿತರಾಗಬಹುದು ಎಂಬ ಭಯದಿಂದ ಸಕ್ಕರೆ ಕಾರ್ಖಾನೆಗಳು ಎಷ್ಟು ಸಾಧ್ಯವೋ ಅಷ್ಟು ನ್ಯಾಯಯುತ ಬೆಲೆಯನ್ನು ಕೊಡುತ್ತಿವೆ. ಸಾವಿರಾರು ಕೋಟಿ ಬಂಡವಾಳ ತೊಡಗಿಸಿ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತವನ್ನು ವಿಶ್ವದಲ್ಲಿಯೇ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರವನ್ನಾಗಿ ಮಾಡಿದ ಕೀರ್ತಿ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಸಲ್ಲುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಎಥೆನಾಲ್ ಉತ್ಪಾದಿಸುವ ಮೂಲಕ ವಿದೇಶಿ ವಿನಿಮಯ ಉಳಿತಾಯದ, ಸ್ವಾವಲಂಬಿ ಇಂಧನದ ಭಾರತವಾದರೂ ಅಚ್ಚರಿ ಪಡಬೇಕಿಲ್ಲ.
? ರೈತರಿಗೂ ಕಾರ್ಖಾನೆಗಳಿಗೂ ಲಾಭದಾಯಕವಾಗುವ ಕ್ರಮಗಳು ೪ತಮಿಳುನಾಡು ಮಾದರಿಯಂತೆ ಕಾರ್ಖಾನೆಗಳಿಗೆ ಕಾರ್ಯಕ್ಷೇತ್ರವನ್ನು ನಿಗದಿಪಡಿಸ ಬೇಕು. ಇದರಿಂದ ಗುಣಮಟ್ಟದ ಕಬ್ಬು ಪೂರೈಕೆಯಾಗಿ ರೈತರಿಗೆ ಉತ್ತಮ ಬೆಲೆ ಹಾಗೂ ತೂಕ ದೊರೆಯುವುದಲ್ಲದೆ, ಕಾರ್ಖಾನೆಗೆ ಗುಣಮಟ್ಟದ ಉತ್ಪನ್ನಗಳು ಮತ್ತು ಸರಕಾರಕ್ಕೆ ಉತ್ತಮ ರಾಜಸ್ವ ಲಭಿಸುತ್ತದೆ.
ಸರಕಾರವು ಹೊಸ ಕಾರ್ಖಾನೆಗೆ ಮತ್ತು ಕಾರ್ಯ ಕ್ಷಮತೆಯ ಹೆಚ್ಚಳಕ್ಕಾಗಿ ಅನುಮತಿ ಕೊಡುವಾಗ ಕೇವಲ ಕಿಲೋಮೀಟರ್‌ಗಳ ಅಂತರವನ್ನು ಮಾತ್ರ
ಪರಿಗಣಿಸದೆ ಕಾರ್ಖಾನೆಗೆ ದೀರ್ಘ ಅವಧಿಯವರೆಗೆ ಕಬ್ಬು ಅರೆಯಲು ಕಬ್ಬಿನ ಕ್ಷೇತ್ರದ ಲಭ್ಯತೆಯನ್ನು ಪರಿಗಣಿಸಬೇಕು.
ಕಾರ್ಯಕ್ಷೇತ್ರದಲ್ಲಿ ಕಬ್ಬು ಹೆಚ್ಚಾಗಿದ್ದಲ್ಲಿ ಕಡಿಮೆ ಕ್ಷೇತ್ರರುವ ಸಮೀಪದ ಕಾರ್ಖಾನೆಗೆ ಹೆಚ್ಚಾಗಿರುವ ಕ್ಷೇತ್ರವನ್ನು ವರ್ಗಾಯಿಸುವುದು.
ಕಬ್ಬು ಕ್ಷೇತ್ರ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಖಾನೆಗಳು ಕಬ್ಬು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವುದು. ಇದರಿಂದ ಕೃಷಿ ಇಲಾಖೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಕಾರ್ಖಾನೆಗಳು ಕಬ್ಬು ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ಸಕ್ಕರೆ ಸಚಿವರು ಹೇಳಿದ್ದಾರೆ. ಆದರೆ ಯಾರೋ ಅಭಿವೃದ್ಧಿಪಡಿಸಿದ ಕಬ್ಬನ್ನು ಇನ್ನಾರೋ ಅರೆಯ
ಬಹುದೆಂಬ ಭಯ ಎಲ್ಲ ಕಾರ್ಖಾನೆಗಳಲ್ಲಿದೆ. ಆದ್ದರಿಂದ ಕಾರ್ಖಾನೆಗಳಿಗೆ ನಿರ್ದಿಷ್ಟ ಕ್ಷೇತ್ರವನ್ನು ನಿಗದಿಪಡಿಸಿದಲ್ಲಿ ಸಚಿವರ ಸಲಹೆಯಂತೆ ಕಬ್ಬು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದು.
ಕಬ್ಬು ಕಟಾವು ಹಾಗೂ ಸಾಗಣೆದಾರರು ತಮ್ಮ ಕ್ಷೇತ್ರ ವ್ಯಾಪ್ತಿಯ ಕಾರ್ಖಾನೆಗಳಲ್ಲಿಯೆ ಕಾರ್ಯನಿರ್ವಸಬೇಕು. ಕ್ಷೇತ್ರವ್ಯಾಪ್ತಿಯಲ್ಲಿ ಸದರಿ ಗುತ್ತಿಗೆದಾರರು ಹೆಚ್ಚಾಗಿದ್ದಲ್ಲಿ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಅವಶ್ಯರುವ ಕಾರ್ಖಾನೆ ಯೊಂದಿಗೆ ಒಪ್ಪಂದ ಏರ್ಪಡಿಸಬೇಕು. ಈ ಹೆಚ್ಚುವರಿ ಗುತ್ತಿಗೆದಾರರು ತಮ್ಮ ಸ್ವಂತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸದೆ ಒಪ್ಪಂದ ಮಾಡಿಕೊಂಡ ಕಾರ್ಖಾನೆಗಳ ಕಾರ್ಯಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು. ಇದರಿಂದ ರೈತರಿಗೆ ಹಾಗೂ ಕಾರ್ಖಾನೆಗಳಿಗೆ ಸದರಿ ಗುತ್ತಿಗೆದಾರರಿಂದ ನಡೆಯುತ್ತಿರುವ ಕೋಟ್ಯಂತರ ಹಣದ ವಂಚನೆ ತಡೆಗಟ್ಟಬಹುದು.
ಕಬ್ಬನ್ನು ನಾಟಿ ಹಾಗೂ ಕೂಳೆ ದಿನಾಂಕಗಳ ಜೇಷ್ಠತೆ ಯನ್ವಯ ಕಟಾವು ಮಾಡಬೇಕು. ಸದ್ಯ ಇದಕ್ಕೆ ಸರಕಾರದಿಂದ ಆದೇಶವಿದ್ದರೂ ಪೈಪೋಟಿಯ ಪರಿಣಾಮ ಜಾರಿ ಯಾಗುತ್ತಿಲ್ಲ. ಇದರ ಜಾರಿಯಿಂದ ರೈತರಿಗೆ ನಿರ್ದಿಷ್ಟ ಅವಧಿಯಲ್ಲಿ ಕಬ್ಬು ಪಕ್ವವಾಗಿ ಕಟಾವಾಗುವ ಭರವಸೆ ಯಾಗಿ ತೂಕವು ಹೆಚ್ಚಾಗುತ್ತದೆ. ಕಾರ್ಖಾನೆ ಗಳಿಗೆ ತಮ್ಮ ಕ್ಷೇತ್ರವ್ಯಾಪ್ತಿಯ ಕಬ್ಬು ಬೇರೆಡೆ ಹೋಗುವುದಿಲ್ಲವೆಂಬ ಭರವಸೆಯಾಗುವುದರಿಂದ ಅಪಕ್ವ ಕಬ್ಬನ್ನು ಪೈಪೋಟಿಯಿಂದ ಅರೆಯುವುದಿಲ್ಲ. ಕಟಾವು ದಾರರು ರೈತರಿಂದ ಅಘೋಷಿತವಾಗಿ ಸುಲಿಗೆ ಮಾಡುತ್ತಿರುವ ಲಗಾಣಿಯನ್ನು ನಿಯಂತ್ರಿಸಬಹುದು.
ಹಿಂದೆ ಕಾರ್ಖಾನೆಗಳು ಅಂದಾಜು ೨೦೦ ದಿನಗಳ ಕಾಲ ಕಬ್ಬು ಅರೆಯುತ್ತಿದ್ದವು. ಈಗ ನೈಸರ್ಗಿಕ ವಿಕೋಪಗಳು ಹಾಗೂ ಅನಾರೋಗ್ಯಕರ ಪೈಪೋಟಿ ಯಿಂದಾಗಿ ಕೇವಲ ೧೦೦ ದಿವಸಕ್ಕೆ ಸೀಮಿತವಾಗಿವೆ. ಆದರೆ ಸಂಬಳ, ಬಡ್ಡಿ ಮತ್ತು ಇತರೆ ಖರ್ಚುಗಳು ಕಾರ್ಖಾನೆಗೆ ವರ್ಷಪೂರ್ತಿಯಾಗಿರುತ್ತವೆ. ಕಾರ್ಖಾನೆಗಳಿಗೆ ಕ್ಷೇತ್ರವ್ಯಾಪ್ತಿ ನಿಗದಿ ಪಡಿಸಿದಲ್ಲಿ ವರ್ಷಾನುಗಟ್ಟಲೆ ಕಬ್ಬು ಅಭಿವೃದ್ಧಿ ಕೈಗೊಂಡು ಗುಣಮಟ್ಟದ ಕಬ್ಬು ಕ್ಷೇತ್ರ ವಿಸ್ತರಿಸಬಹುದು.
ರೈತರಿಗೆ ಕಬ್ಬು ಇಳುವರಿಯ ಹಾಗೂ ಕಾರ್ಖಾನೆಗಳಿಗೆ ಸಕ್ಕರೆ ಇಳುವರಿಯ ಗುರಿ ನಿಗದಿಪಡಿಸಬೇಕು. ಇದರಿಂದ ರೈತರು ಹಾಗೂ ಕಾರ್ಖಾನೆಗಳು ಕ್ರಮವಾಗಿ ಅಪಕ್ವ ಕಬ್ಬು ಕಟಾವು ಮಾಡುವುದಿಲ್ಲ ಮತ್ತು ಬಳಸುವುದಿಲ್ಲ.
ಕಬ್ಬು ಕಟಾವಾದ ೮ ತಾಸಿನೊಳಗಾಗಿ ಅರೆಯಬೇಕು. ತಪ್ಪಿದಲ್ಲಿ ಕನಿಷ್ಠ ಶೇ. ೦.೫ರಷ್ಟು ಸಕ್ಕರೆ ಇಳುವರಿ ಅಂದರೆ ಪ್ರತಿ ಟನ್ ಕಬ್ಬಿನಿಂದ ೫ ಕಿಲೋ ಸಕ್ಕರೆ ಕಡಿಮೆ ಉತ್ಪಾದನೆಯಾಗುತ್ತದೆ. ಕಬ್ಬು ಅರೆಯುವ ಸಮಯವು ಹೆಚ್ಚಾದಂತೆ ಸಕ್ಕರೆಯ ಉತ್ಪಾದನೆಯು ಕಡಿಮೆಯಾಗುತ್ತದೆ.
ಡಿಸೆಂಬರ್‌ನಿಂದ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ಪ್ರಾರಂಭಿಸಬೇಕು. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಕಬ್ಬಿನ ತೂಕ ಹಾಗೂ ಸಕ್ಕರೆ ಇಳುವರಿಯ ಹೆಚ್ಚಳಕ್ಕೆ ನೈಸರ್ಗಿಕವಾದ ಸೂಕ್ತ ಹವಾಮಾನ ವಿರುತ್ತದೆ.
ಹೆಚ್ಚು ಕಬ್ಬಿನ ಬಿಲ್ಲು ಕೊಡುವ, ಕಡಿಮೆ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ನಿರ್ವಹಿಸಿದ ಹಾಗೂ ಕಡಿಮೆ ಪರಿವರ್ತನಾ ವೆಚ್ಚ ಸೇರಿದಂತೆ ಹಲವು ಸಾಧನೆಗಳನ್ನು ನಿರ್ವಹಿಸಿದ ಕಾರ್ಖಾನೆಗಳಿಗೆ ಬಹುಮಾನಗಳನ್ನು ಘೋಷಿಸಬೇಕು. ಅದೇ ರೀತಿ ಕಬ್ಬು ಬೆಳೆಯಲ್ಲಿ ಸಾಧನೆ ಮಾಡಿದ ರೈತರಿಗೆ ಬಹುಮಾನ ಗಳನ್ನು ಘೋಷಿಸಬೇಕು.
ಮಾನವನಿಂದ ನೇರವಾಗಿ ಸಕ್ಕರೆಯ ಉಪಯೋಗ ಬಹಳ ಕಡಿಮೆದೆ. ಆದರೆ ಮಿಠಾಯಿ, ಚಾಕೊಲೇಟ್, ಬಿಸ್ಕಿಟ್, ತಂಪು ಪಾನೀಯ ಸೇರಿದಂತೆ ಇನ್ನಿತರ ವಾಣಿಜ್ಯ ಉದ್ದೇಶಕ್ಕಾಗಿ ಬಹುತೇಕ ಸಕ್ಕರೆಯು ಬಳಕೆಯಾಗುತ್ತದೆ. ವಾಣಿಜ್ಯ ಬಳಕೆಯ ಸಕ್ಕರೆಗೆ ವಿಶೇಷ ದರ ನಿಗದಿಯಾಗಬೇಕು.
ಕಬ್ಬು ನಾಟಿ ಮಾಡಲು ಮಣ್ಣು ಹಾಗೂ ನೀರು ಪರೀಕ್ಷೆಯ ಅಧಾರದಲ್ಲಿ ಸೂಕ್ತ ಪ್ರದೇಶ ಹಾಗೂ ಸಮಯವನ್ನು ನಿಗದಿಪಡಿಸಬೇಕು. ರೈತರು ಮನಸೋ ಇಚ್ಛೆ ಕಬ್ಬು ತಳಿ ನಾಟಿ, ಸಮಯ ಮತ್ತು ಕಟಾವು ಮಾಡುವುದನ್ನು ನಿರ್ಬಂಧಿಸಬೇಕು. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಕಬ್ಬಿನ ತಳಿಗಳ ನಾಟಿ ಹಾಗೂ ಕಟಾವು ಸಮಯದ ಮಾರ್ಗಸೂಚಿಯನ್ನು ಕಡ್ಡಾಯ ಗೊಳಿಸಬೇಕು. ಕಾರ್ಖಾನೆಗಳಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಅಲ್ಪಾವಧಿ ಕಬ್ಬಿನ ತಳಿಗಳಿಗೆ ಪ್ರಾಧಾನ್ಯ ನೀಡಬೇಕು. ಕಾರ್ಖಾನೆಗಳು ಲಾಭದಾಯಕವಾಗಿ ನಡೆದಾಗಲೇ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.
ತೂಕದಲ್ಲಾಗುವ ಮೋಸ ಗುರುತಿಸಲು ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಬೇಕು. ಸಕ್ಕರೆ ಮಾರಾಟ ಹಾಗೂ ಕಬ್ಬು ಖರೀದಿಗೆ ಪ್ರತ್ಯೇಕ ತೂಕದ ಯಂತ್ರಗಳನ್ನು ಉಪಯೋಗಿಸಬಾರದು.
ಕಾರ್ಖಾನೆಗಳು ರೈತರಿಗೆ ಕಬ್ಬು ಪೂರೈಸಿದ ೧೪ ದಿನಗಳೊಳಗಾಗಿ ಬಿಲ್ ಕೊಡುವುದು ಹೇಗೆ ಕಾನೂನಾತ್ಮಕವಾಗಿದೆಯೋ, ಹಾಗೆಯೇ ಕಾರ್ಖಾನೆಗಳ
ಉತ್ಪನ್ನಗಳಿಗೆ ೧೪ ದಿನಗಳೊಳಗಾಗಿ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಯಾಗಬೇಕು. ಇದರಿಂದ ಕೃತಕ ಅಭಾವವನ್ನು ತಡೆಗಟ್ಟಬಹುದು.
ರೈತರ ಕಬ್ಬಿನ ಗುಣಮಟ್ಟಕ್ಕೆ ಮತ್ತು ಕಾರ್ಖಾನೆಗಳ ಉತ್ಪನ್ನಗಳಿಗೆ ಅನುಪಾತದ ಆಧಾರದ ಮೇಲೆ ದರಗಳನ್ನು ನಿಗದಿಪಡಿಸಬೇಕು.
ಕಬ್ಬಿನ ಬಿಲ್ ಕೊಡುವಲ್ಲಿ ಸತಾಯಿಸುವ ಕಾರ್ಖಾನೆಗಳ ನೈಜ ಆರ್ಥಿಕ ಪರಿಸ್ಥಿತಿಯನ್ನು ಪರಿಣಿತ ಲೆಕ್ಕಪರಿಶೋಧಕ ರಿಂದ ತಪಾಸಿಸಬೇಕಲ್ಲದೆ ತೊಂದರೆಯಿದ್ದಲ್ಲಿ ಸರಕಾರವು ನೆರವು ಕಲ್ಪಿಸಬೇಕು.
ಕಾರ್ಖಾನೆಗಳಿಗೆ ತೊಂದರೆಯಾಗದಂತೆ ಆಲೆಮನೆಗಳ ಕಬ್ಬು ಅರೆಯುವಿಕೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು.
ಆದ್ದರಿಂದ ಸರಕಾರವು ತಜ್ಞರೊಂದಿಗೆ ಸಾಧಕ-ಬಾಧಕಗಳನ್ನು ಚರ್ಚಿಸಿ ಈ ಮೇಲಿನಂತೆ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಲ್ಲಿ ರೈತರೊಂದಿಗೆ ಕಾರ್ಖಾನೆಗಳ ಹಿತವನ್ನೂ ಕಾಪಾಡಿದಂತಾಗುತ್ತದೆ. ಕಾರ್ಖಾನೆಗಳ ಪರಿಸ್ಥಿತಿಯು, ಬಂಗಾರದ ಮೊಟ್ಟೆಯಿಡುವ ಕೋಳಿಯ ಹೊಟ್ಟೆಯನ್ನು ಕೊಯ್ದಂತಾಗ ಬಾರದು. ಒಂದು ಕಾರ್ಖಾನೆ ನಷ್ಟ ಅನುಭವಿಸಿದರೆ ಅದರ ಮೇಲೆ ಅವಲಂಬಿತರಾದ ಲಕ್ಷಾಂತರ ರೈತ ಹಾಗೂ ಕಾರ್ಮಿಕರ ಕುಟುಂಬಗಳು ಬೀದಿಪಾಲಾಗುತ್ತವೆ. ಕಾರ್ಖಾನೆಗಳು ಉಳಿಯಬೇಕು, ಅದರೊಂದಿಗೆ ರೈತರೂ ಬೆಳೆಯಬೇಕು ಎಂಬುದು ಬಹುಪಾಲು ಕಬ್ಬು ಬೆಳೆಗಾರರ ಅಭಿಪ್ರಾಯ ವಾಗಿದೆ.