Sunday, 15th December 2024

ದಿಕ್ಕು ತಪ್ಪಿದ ರೈತ ಚಳವಳಿ

ಅಭಿವ್ಯಕ್ತಿ

ಮಾನಸ ಹೆಗ್ಡೆ

ಪ್ರಸ್ತುತದಲ್ಲಿ ಸುದ್ದಿವಾಹಿನಿಯಲ್ಲಿ ಮುಖಂಡರ ಮಾತನ್ನು ಕೇಳುತ್ತಿದ್ದರೆ, ಅವರ ಹಠವನ್ನು ನೋಡುತ್ತಿದ್ದಾಗ ಅನಿಸಿದ್ದು, ಚಳವಳಿ ದಿಕ್ಕುತಪ್ಪಿ ದಿಕ್ಕಾಪಾಲಾಗಿದೆ ಎಂದು!

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕೆಲ ಸ್ವ – ಘೋಷಿತ ರೈತ ನಾಯಕರ ಪ್ರತಿಷ್ಠೆಯ ಕಾರಣ ಚಳವಳಿ ಛಲವಳಿ ಯಾಗಿದೆ. ಉತ್ತರ ಕಾಣದೇ ಕಂಗಾಲಾದ ರಣಾಂಗಣದಂತಾಗಿದೆ. ಯಾವುದೇ ಚಳವಳಿಯಿರಲಿ ತಾತ್ವಿಕ ಬದ್ಧತೆ ಇಲ್ಲದಿದ್ದರೆ ಹೀಗೇ ಆಗುವುದು. ಉಗುರಿನಲ್ಲಿ ಹೋಗುವಂತದ್ದಕ್ಕೆ ಕೊಡಲಿ ಎತ್ತಿಕೊಂಡಂತೆ. ಎತ್ತಿದ ಕೊಡಲಿಯನ್ನು ಎತ್ತಿಕೊಂಡಿರಲೂ ಆಗದೇ, ಇಳಿಸಲೂ ಆಗದೇ ಅಂತ್ಯ ಕಾಣದೇ, ಅತಂತ್ರ ಪರಿಸ್ಥಿತಿಗೆ ಬಂದು ನಿಂತಿದೆ.

ಈ ಚಳವಳಿ ಕೆಲವಷ್ಟು ಯುವಕರಿಗೂ ಮುನ್ಸೂಚನೆಯಾಗಿದೆ. ಕುರುಡಾಗಿ ಇನ್ನೊಬ್ಬರನ್ನು ಅವರುಗಳ ಹೇಳಿಕೆಯನ್ನು ಹಿಂಬಾಲಿಸಿದರೆ, ಕಾನೂನಿನ ಗಾಳದೊಳಗೆ ಸಿಲುಕಿ ನರಳಬೇಕಾದೀತು. ಇಡೀ ದೇಶದ ಜನರ ಮನದೊಳಗೆ ಈ ರೈತ ಚಳವಳಿ ಕರುಣೆಯನ್ನು ಗಿಟ್ಟಿಸಿಕೊಳ್ಳುವತ್ತ ದಾಪುಗಾಲಿಕ್ಕಿತ್ತು. ಒಮ್ಮೊಮ್ಮೆ ಅನಿಸಿದ್ದೂ ಸುಳ್ಳಲ್ಲ. ಮೋದಿಯವರು ಕಾನೂನಿನ ಸಾಧಕ – ಬಾಧಕಗಳ ಅರಿವು ಮೂಡಿದ ನಂತರ ಕಾಯಿದೆಯನ್ನುಜಾರಿಮಾಡಬಹುದಿತ್ತು ಎಂದು.

ಈಗ ನೋಡಿದರೆ, ರಾಷ್ಟ್ರದ್ರೋಹಿಗಳು ದೇಶವನ್ನು ತುಂಡುಮಾಡ ಬಯಸುವವರೇ ಚಳವಳಿಗೆ ಮೂಲಕಾರಣ ಎನ್ನುವುದು ಸಾಬೀತಾಗಿದೆ. ಈ ಸಮಸ್ಯೆಗೆ, ಸಮೂಹ ಮಾಧ್ಯಮಗಳು ಹಾಗೂ ಪ್ರಜ್ಞಾವಂತರು, ಎನ್.ಜಿ.ಒಗಳ ಮುಖಾಂತರ ಕಾಯಿದೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಾಗಬೇಕು. ಅಲ್ಲಿಯವರೆಗೆ ರೈತ ಕಾಯಿದೆಯನ್ನು ಅಮಾನತ್ತಿನಲ್ಲಿಡ ಬೇಕು. ಪ್ರತಿಯೊಬ್ಬ ರೈತನ ಅಭಿಪ್ರಾಯ ನೀಡುವ, ಅದನ್ನು ಸಂಗ್ರಹಿಸುವ ಕೆಲಸವಾಗಬೇಕು. ರೈತರು ಸಹ ‘ಕಿಸಾನ್ ಸಮ್ಮಾನ್’ದಿಂದ ಸನ್ಮಾನಿತರಾದರೆ ಸಾಲದು, ಸಂಯಮದಿಂದ ಸರಕಾರ ಹಾಗೂ ಸಮಾಜದೊಂದಿಗೆ ಮತ್ತಷ್ಟು ಸನ್ಮಾನಿತರಾಗಬೇಕು. ರೈತ ದೇಶದ ಬೆನ್ನೆಲುಬು ಎಂಬ ಉಕ್ತಿ ರೈತ ದೇಶದ ಬೆನ್ನನ್ನೇ ಮುರಿದ ಎನ್ನುವಂತಾಗಬಾರದಲ್ಲವೇ? ರೈತರಾಗಿ ಅನಿಸಿದ್ದು ಇಷ್ಟು…: ಮೊದಲ ಬಾರಿಗೆ ಜನಪರ ಸರಳ ಸರಕಾರ ಆಡಳಿತಕ್ಕೆ ಬಂದಿದೆ.

ಎಲ್ಲರನ್ನೂ ಒಂದಾಗಿ ನೋಡುವ ಪ್ರಧಾನಿ ನಮ್ಮವರು. ದೂರ ದೃಷ್ಟಿಯಿಂದ ನಮ್ಮ ದೇಶವನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರು ಎಷ್ಟೋ ಯೋಜನೆಗಳನ್ನು ರೂಪಿಸುತ್ತಿzರೆ. ವಿಶ್ವವೆಲ್ಲ ಭಾರತದ ಪ್ರಗತಿಪರ ನಡೆಯನ್ನು ಶ್ಲಾಘಿಸುವಂತೆ ಮಾಡಬೇಕು, ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂದು ಸತತವಾಗಿ ಪ್ರಯತ್ನಿಸುತ್ತಿದ್ದಾರೆ.

ಈ ಕಾಯಿದೆಯನ್ನು ಸರಳ ರೀತಿಯಲ್ಲಿ ವಿವರಿಸಬೇಕೆಂದರೆ, ಮೊದಲನೆಯದಾಗಿ, ರೈತ ಬೆಳೆದ ಬೆಳೆಯನ್ನು ಯಾರಿಗೆ ಬೇಕಾದರೂ ಮಾರಬಹುದು. ಸರಕಾರದ ಬೆಂಬಲ ಬೆಲೆಯ ಮೇಲೆ ಉತ್ತಮ ಬೆಲೆಯನ್ನು ನಿಗದಿಪಡಿಸಬಹುದು. APMC ಗಳೂ ಸಹ ಚಾಲ್ತಿಯಲ್ಲಿರುತ್ತದೆ. ಎರಡನೇ ಮಸೂದೆಯ ಪ್ರಕಾರ, ಏಜೆಂಟರುಗಳು ಯಾವುದೇ ಬೆಳೆಯನ್ನು ಸಂಗ್ರಹಿಸಬಹುದು.

ಇನ್ನು ಮೂರನೇ ಕಾಯಿದೆ ಪ್ರಕಾರ, ರೈತರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅವರು ಹೇಳಿದ ಬೆಳೆಯನ್ನು ಯೋಗ್ಯ ದರದೊಂದಿಗೆ ಬೆಳೆಯಬಹುದು. ಕೃಷಿಯ ಉದಾರೀಕರಣದಿಂದಾಗಿ ರೈತ ವರ್ಗದ ಆದಾಯ ಹೆಚ್ಚಳವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ಇದರ ಬಗ್ಗೆ ಉಂಟಾದ ಗೊಂದಲಗಳನ್ನು ಕೇಂದ್ರ ಸರಕಾರ ನಿವಾರಿಸಬೇಕಾಗಿದೆ. ಈ ಕಾನೂನಿನ ಸಾಧಕ – ಬಾಧಕಗಳ ಅರಿವು ಮೂಡಿಸುವುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ.

ರೈತರೂ ಸಹ ಹೊಸತನಕ್ಕೆ ಹೊಂದಿಕೊಳ್ಳಬೇಕಾಗಿದೆ. ಎಲ್ಲರೂ ಸೇರಿ ಈ ಗೊಂದಲದಿಂದ ಹೊರಬಂದು ಶ್ರೇಷ್ಠ ಭಾರತ ನಿರ್ಮಾಣ ಮಾಡುವತ್ತ ಎಲ್ಲರ ಚಿತ್ತವಿರಲಿ.