Thursday, 12th December 2024

ಸಾವಯವ ಕೃಷಿಗೆ ಸ್ಪಂದಿಸೋಣ

ಕೃಷಿರಂಗ

ಸಂತೋಷ್ ಅರಭಾವಿ

ಭಾರತ ಎಂದಾಕ್ಷಣ ನಮ್ಮ ಗಮನಕ್ಕೆ ಬರುವ ೨ ಪ್ರಮುಖ ಸಂಗತಿಗಳೆಂದರೆ ಋಷಿ ಪರಂಪರೆ ಮತ್ತು ಕೃಷಿ ಪರಂಪರೆ. ಋಷಿ ಪರಂಪರೆಯು ಮನಸ್ಸು ಗಳಿಗೆ ಅಧ್ಯಾತ್ಮದ ಬೀಜ ಬಿತ್ತಿ, ಸಂಸ್ಕಾರದಿಂದ ಪೋಷಿಸಿ, ಶಾಂತಿ-ಸಮಾಧಾನದ ಸತಲವನ್ನು ಬೆಳೆಸುತ್ತಾ ಬಂದಿದೆ. ಕೃಷಿ ಪರಂಪರೆಯಲ್ಲಿ ರೈತರು ಮಣ್ಣನ್ನು ಹದ ಮಾಡಿ, ಸಂಸ್ಕರಿಸಿದ ಬೀಜವನ್ನು ಬಿತ್ತಿ, ಜೈವಿಕ ಗೊಬ್ಬರಗಳಿಂದ ಪೋಷಿಸಿ, ನೀರುಣಿಸಿ, ಬಂದ ಫಲವನ್ನು ತಾವಷ್ಟೇ ಉಣ್ಣದೆ
ಎಲ್ಲರಿಗೂ ಹಂಚಿ ಕೃತಾರ್ಥರಾಗುತ್ತಾರೆ.

ಬದಲಾದ ಕಾಲಘಟ್ಟದಲ್ಲಿ ಕೃಷಿ ಪರಂಪರೆಯು ಸಾವಯವದಿಂದ ರಾಸಾಯನಿಕಕ್ಕೆ ಮಾರ್ಪಾಡುಗೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ. ಹಾಗೆಯೇ ಅದು ಭವಿಷ್ಯದ ಭಾರತಕ್ಕೆ ಮಾರಕ. ಮನುಷ್ಯನ ಉಗಮದ ನಂತರ ಹಸಿವು ನೀಗಿಸಲು ಪ್ರಾಣಿ-ಪಕ್ಷಿಗಳನ್ನೇ ಆಹಾರ ಮಾಡಿಕೊಂಡ. ಯಾವಾಗ ಈ ಆಹಾರ ಸಾಕಾಗುವುದಿಲ್ಲ ಎಂಬ ಖಾತ್ರಿಯಾಯಿತೋ ಆಗಲೇ ಹುಟ್ಟಿಕೊಂಡಿದ್ದು ಕೃಷಿ. ನಾಗರಿಕತೆ ಬೆಳೆದಂತೆ ಕೃಷಿಯ ಮಗ್ಗುಲುಗಳೂ ಬೆಳೆದವು.

ಹಸಿವಿನ ಪ್ರಮಾಣ ಜಾಸ್ತಿಯಾದಂತೆ ಇಳುವರಿ ಪ್ರಮಾಣವನ್ನು ಹೆಚ್ಚಿಸುವತ್ತ ಮನುಷ್ಯರು ಹೆಜ್ಜೆ ಹಾಕಿದರು. ಆದರೆ ಆ ಭರದಲ್ಲಿ ಮಣ್ಣಿನ ಸಂರಕ್ಷಣೆ ಯನ್ನೇ ಮರೆತರು. ನಾಗರಿಕತೆ ಬೆಳೆದಂತೆ ಮನುಷ್ಯ ಉತ್ತಿ ಬಿತ್ತುತ್ತಾನೆ, ಭೂತಾಯಿ ಅದಕ್ಕೆ ತಕ್ಕ ಪ್ರತಿ-ಲವನ್ನು ಕೊಟ್ಟುಕೊಂಡೇ ಬಂದಿದ್ದಾಳೆ. ಆದರೆ ಕೆಲ ವರ್ಷಗಳಿಂದ ಋಷಿ ಪರಂಪರೆಯಲ್ಲಿ ಕಂಡುಬಂದ ಸ್ವಾರ್ಥ ಹಾಗೂ ಲಾಭದ ಹುಚ್ಚು ಕೃಷಿ ಪರಂಪರೆಯಲ್ಲೂ ಕಾಣಬರತೊಡಗಿತು. ಅತಿಯಾ ಸೆಯ ಬೆನ್ನತ್ತಿದ ಮನುಷ್ಯ ಕೃಷಿಯ ಆಧುನಿಕತೆಯ ನೆಪದಲ್ಲಿ ಭೂತಾಯಿಯ ಒಡಲಿಗೆ ರಾಸಾಯನಿಕವನ್ನು ತುಂಬಿ ತುಂಬಿ, ನಿಜಕ್ಕೂ ಅವಳನ್ನು ಮೈಲಿಗೆ ಮಾಡಿಬಿಟ್ಟ.

ನಮ್ಮ ಪೂರ್ವಜರೆಲ್ಲರೂ ಬೇರೆ ಬೇರೆ ಕಸುಬುಗಳಲ್ಲಿ ತೊಡಗಿಸಿಕೊಂಡಿದ್ದರು. ಇತಿಹಾಸ ಹೇಳುವಂತೆ, ಅಂದಿನ ನಾಗರಿಕರು ದಿನದ ಹೊಟ್ಟೆ-ಬಟ್ಟೆಗೆ ಆಗುವಷ್ಟು ದುಡಿದು ನೆಮ್ಮದಿಯಿಂದ ನಿದ್ರಿಸಿ, ಮರುದಿನದ ಊಟಕ್ಕಾಗಿ ಶ್ರಮಿಸುತ್ತಿದ್ದರು. ಬರುಬರುತ್ತಾ, ಆಧುನಿಕತೆಯ ನೆಪದಲ್ಲಿ ಆರ್ಥಿಕತೆಯನ್ನು
ಹೆಚ್ಚಿಸುವ ಮತ್ತು ಸ್ವಾಭಾವಿಕವಾಗಿ ಬರುವ ಫಲವನ್ನು ಒತ್ತಡದಿಂದ ಹೆಚ್ಚಿಸಿ ಹೆಚ್ಚು ಲಾಭ ಪಡೆವ ದುರಾಸೆಯಿಂದ ರಸಗೊಬ್ಬರವನ್ನು ತಂದು ತಂದು ಭೂಮಿಗೆ ತುಂಬತೊಡಗಿದ ಮಾನವ. ಅದರ ಪ್ರಮಾಣವನ್ನು ಅಂದಾಜಿಸಿದರೆ ಮಣ್ಣು ಕೂಡ ರಾಸಾಯನಿಕಗಳಿಗೆ ಒಗ್ಗಿಕೊಂಡಿರುವಂತಿದೆ.

ಉದಾಹರಣೆಗೆ, ನಮ್ಮ ತಂದೆಯವರ ಕಾಲ ಬಿಟ್ಟು ೨ ತಲೆಮಾರು ಹಿಂದಿನ ಕಾಲಘಟ್ಟದಲ್ಲಿ ಮೂತ್ರಪಿಂಡದ ತೊಂದರೆಯ ಬಗ್ಗೆ ನಾವು ಕೇಳಿಯೇ ಇರಲಿಲ್ಲ. ಚೆನ್ನಾಗಿ ನೀರು ಕುಡಿದರೆ ಸಾಕು ಆರೋಗ್ಯಕರ ಬದುಕನ್ನು ಸಾಗಿಸಬಹುದಿತ್ತು. ಆದರೀಗ ಜನರಲ್ಲಿ ಮೂತ್ರಪಿಂಡದ ಸಮಸ್ಯೆ ಹೆಚ್ಚಾಗಿದ್ದು,
ಮೂತ್ರಪಿಂಡದಲ್ಲಿ ಯೂರಿಯಾ ಪ್ರಮಾಣ ಹೆಚ್ಚಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಕಂಡುಬರುತ್ತಿದೆ. ಯೂರಿಯಾ ಪ್ರಮಾಣ ಹೆಚ್ಚಾದಂತೆ ಸಮಸ್ಯೆಯೂ ಹೆಚ್ಚಾಗುತ್ತಿದೆ.

ಪರಿಶುದ್ಧತೆಯ ಕೃಷಿ ಪರಂಪರೆ ಅವನತಿ ಹೊಂದುತ್ತಿರುವುದು ನಾಡಿನ ಬಡತನವೆಂದರೆ ತಪ್ಪಾಗಲಾರದು. ಇನ್ನೂ ಕಾಲ ಮಿಂಚಿಲ್ಲ; ರೈತರು ರಸ ಗೊಬ್ಬರಗಳ ಬಳಕೆಯನ್ನು ತಗ್ಗಿಸಿ, ಜೈವಿಕ ಗೊಬ್ಬರ, ಗೋವು ಆಧರಿತ ಕೃಷಿಗೆ ಮೊರೆಹೋಗಿ ಭೂಮಿಯನ್ನು ನಿರ್ಮಲವಾಗಿಟ್ಟುಕೊಳ್ಳಬೇಕು. ಕುಡಿಯುವ ನೀರು, ತಿನ್ನುವ ಅನ್ನವನ್ನು ರಾಸಾಯನಿಕಗಳಿಂದ ಮುಕ್ತವಾಗಿಸಿದರೆ ಎಲ್ಲರೂ ಆರೋಗ್ಯದಿಂದ ಸುಖಮಯವಾಗಿ ಇರಬಹುದು. ಜತೆಗೆ, ಈಗಿನ ಪೀಳಿಗೆಯ ಯುವಕರು, ಶಿಕ್ಷಿತರು, ಪರಿಸರದ ಬಗ್ಗೆ ಅರಿತುಕೊಂಡವರು ಸಾವಯವ ಕೃಷಿಯತ್ತ ಹೆಚ್ಚೆಚ್ಚು ಒಲವು ತೋರಿಸಬೇಕು.

ಕೃಷಿ ಎಂದರೆ ಕನಿಷ್ಠದ ಕೆಲಸವಲ್ಲ. ಸಾವಯವ ಕೃಷಿಯನ್ನೇ ನೆಚ್ಚಿ, ಅದು ನೀಡಿದ ಉತ್ಪನ್ನಗಳ ಮಾರಾಟದ ಹೊಣೆಹೊತ್ತು, ಚಾಣಾಕ್ಷತನದಿಂದ ಬದುಕು ಕಟ್ಟಿಕೊಂಡಿರುವವರು ಇವತ್ತಿಗೂ ಯಾವ ಬಹುರಾಷ್ಟ್ರೀಯ ಕಂಪನಿಯ ಪ್ರತಿಷ್ಠಿತ ನೌಕರರಿಗಿಂತ ಏನೂ ಕಮ್ಮಿಯಿಲ್ಲ. ಸಮಾಜ ಬದಲಾಗ ಬೇಕಾದರೆ ಮನುಷ್ಯ ಬದಲಾಗಬೇಕಿದೆ; ಮನುಷ್ಯ ತನ್ನ ಮನಸ್ಥಿತಿ ಬದಲಿಸಿಕೊಂಡರೆ ಎಲ್ಲವೂ ಸರಿದೂಗಬಲ್ಲದು. ಐಷಾರಾಮಿ ಜೀವನದತ್ತ ಮುಖ ಮಾಡಿರುವ ನಾವು, ಸಮಾಜದ ಮತ್ತು ನಮ್ಮ ಆರೋಗ್ಯದ ಕಡೆ ಗಮನ ಹರಿಸುವುದನ್ನೇ ಮರೆತಿದ್ದೇವೆ. ಹೀಗಾಗಿ ಮಣ್ಣಿನ ಜತೆ ಮನುಷ್ಯನ ಮನಸ್ಸೂ ಸಾವಯವವಾಗಬೇಕಿದೆ.

(ಲೇಖಕರು ಸಾವಯವ ಕೃಷಿಕರು)