Saturday, 5th October 2024

ಕೃಷಿ, ಪಶುಸಂಗೋಪನೆಯಲ್ಲಿ ವೇದಕಾಲೀನ ಮನೋಹರ ಸತ್ಯ!

ಸುಪ್ತ ಸಾಗರ

rkbhadti@gmail.com

ಆ ಕುಟುಂಬವೇ ಕ್ರಿಯಾಶೀಲ. ಮನೋಹರ ಮಸ್ಕಿ, ಪತ್ನಿ ವೇದಾ ಮಸ್ಕಿ, ಮಗ ಮೋಹಿತ್ ಮಸ್ಕಿ. ವರ್ಷಕ್ಕೆ ಸರಿಸುಮಾರು ಆರೇಳು ನೂರು ಕೋಟಿ ರು. ವಹಿವಾಟಿನ ‘ಸುಕೋ ಬ್ಯಾಂಕ್’ನ ರೂವಾರಿಯ ಕಟುಂಬವದು. ಮನಸ್ಸು ಮಾಡಿದ್ದರೆ ದೇಶದ ಯಾವುದೇ
ಮೆಟ್ರೋ ಸಿಟಿಯ ಹೃದಯ ಭಾಗದಲ್ಲೇ ಬಂಗಲೆ ಕಟ್ಟಿಕೊಂಡು ‘ಹವಾನಿಯಂತ್ರಿತ ಬದುಕು’ ಸಾಗಿಸಬಹುದಿತ್ತು.

ಆದರೆ, ಕೃಷಿ-ಪರಿಸರದೆಡೆಗಿನ ಉತ್ಕಟ ಪ್ರೀತಿ, ಅದಕ್ಕೂ ಮಿಗಿಲಾಗಿ ಗ್ರಾಮೀಣರಿಗೆ ಲಾಭ ದಾಯಕ, ಸುಸ್ಥಿರ ಕೃಷಿ ಬದುಕಿನ ಮಾದರಿಯನ್ನು ತೋರಿಸಬೇಕೆಂಬ ಛಲದೊದಿಗೆ ಶ್ರಮಿಸುತ್ತಿರುವವವರು. ಇದೇ ಕಾರಣಕ್ಕೆ ಗಂಡ ಕೃಷಿಕರ- ಗ್ರಾಮೀಣರ ಸಮಸ್ಯೆಗಳನ್ನು ಹೊತ್ತು ರಾಜ್ಯಾದ್ಯಂತ ಸುತ್ತಾಡುತ್ತಿದ್ದರೆ, ಹೆಂಡತಿ ಭದ್ರಾವತಿ ಬಳಿ ಅದ್ಭುತ ಕೃಷಿ- ಪಶುಸಂಗೋಪನೆಯ ಸಾಮ್ರಾಜ್ಯ ಕಟ್ಟುವುದರಲ್ಲಿ ತಲ್ಲೀನ.

ಮಗ ಮೋಹಿತ್, ಅಪ್ಪ ಕಟ್ಟಿದ ಸಹಕಾರಿ ಬ್ಯಾಂಕಿನ ಹೊಣೆ ಹೊತ್ತು ಬಳ್ಳಾರಿಯಲ್ಲಿ ನೆಲೆ ನಿಂತಿದ್ದಾರೆ. ಆರು ವರ್ಷಗಳ ಕೆಳಗೆ ನಾನು ಕನ್ನಡದಲ್ಲಿ ಕೃಷಿ-ಪರಿಸರ-ಗ್ರಾಮೀಣ ಬದುಕಿಗೆ ಮೀಸಲಾದ ಮ್ಯಾಗಜಿನ್ ‘ಹಸಿರುವಾಸಿ’ ಕಟ್ಟಲು ಮುಂದಾದಾಗ ಆರಂಭಿಕ ಬೆಂಬಲ ನೀಡಿದವರು. ಇಂದು ರಾಜ್ಯದಲ್ಲಿ ನೀರಾಕ್ಕೆ ಮತ್ತು ನೀರಾ ರೈತರಿಗೆ ಒಂದು ಗೌರವಯುತ ಸ್ಥಾನ ಹಾಗೂ ‘ಮಾನ’ ಸಿಕ್ಕಿದ್ದರೆ ಅದಕ್ಕೆ ಕಾರಣ ಮನೋಹರ ಮಸ್ಕಿಯ ವರು. ಸ್ನೇಹಜೀವಿ, ಹಿತಮಿತ ಭಾಷಿ.

ದೂರದೃಷ್ಟಿಯ ಸಹಕಾರಿ ಧುರೀಣ. ಅದೇನಾಯಿತೋ, ಮೂರ‍್ನಾಲ್ಕು ವರ್ಷಗಳಿಂದ ನನ್ನ ಸಂಪರ್ಕದಿಂದಲೇ ದೂರ ಸರಿದುಬಿಟ್ಟರು; ಫೋನ್ ಕರೆಗೂ ಸಿಗದಷ್ಟು. ಬಹುಶಃ ನನ್ನ ‘ಹಸಿರು’ ಮಾಸಿ ಹೋಗಿದ್ದಕ್ಕಿರಬಹುದೇನೋ ಎಂದುಕೊಂಡು ಸುಮ್ಮನಾಗಿಬಿಟ್ಟಿದ್ದೆ. ಒಂದು ವಾರದ ಹಿಂದೆ ಹೊಸ ವಾಟ್ಸಾಪ್ ಗ್ರೂಪ್ ಒಂದಕ್ಕೆ ನನ್ನನ್ನು ಸೇರಿಸಲಾಗಿತ್ತು. ದಿನಕ್ಕೆ ಹತ್ತು ಗ್ರೂಪ್‌ಗಳಿಗೆ ನನ್ನನ್ನು ಸೇರಿಸಿ, ಅದರಲ್ಲಿನ ಅವಾಂತರಗಳಿಂದ ಬೇಸತ್ತು ಹೋಗಿರುವಾಗ ಇದ್ಯಾವುದಪ್ಪಾ ಹೊಸ ತಲೆಬಿಸಿ ಎಂದುಕೊಂಡು ಎಗ್ಸಿಟ್ ಆಗಬೇಕೆಂದಿರುವಾಗಲೇ ‘ವೇದಾ ಬುಕ್ ಲಾಂಚ್…’ಎನ್ನುವ ಗುಂಪಿನ ಹೆಸರು ಗಮನ ಸೆಳೆಯಿತು.

Read E-Paper click here

ಕುತೂಹಲದಿಂದ ಒಳಹೊಕ್ಕರೆ ನಾನು ಅಭಿಮಾನಿಸುವ ಕೃಷಿ ಸಾಧಕಿ ‘ವೇದಾ ಮಸ್ಕಿ’ಯವರ ಎರಡು ಹೊತ್ತಗೆಗಳ ಬಿಡುಗಡೆಯ ಕಾರ್ಯಕ್ರಮದ ಬಗೆಗಿನ ಸಂವಹನಕ್ಕಾಗಿ ಸ್ವತಃ ಮನೋಹರ ಮಸ್ಕಿಯವರು ಸೇರಿಸಿದ್ದ ಸಮಾನ ಮನಸ್ಕರ ಗುಂಪು ಅದಾಗಿತ್ತು.
ಹೌದು, ವೇದಾರ ಕೃಷಿ ಸಾಧನೆಯ ಬಗೆಗಿನ ‘ವೇದ’ ಮತ್ತು ‘ಪಂಚಮವೇದ, ವೇದಾ ಬದುಕಿನ ಸಾರ’ ಎಂಬೆರಡು ಹೊತ್ತಗೆಗಳು ನಾಳೆ ಜೂನ್ ೨ರ ಭಾನುವಾರ ಬೆಳಗ್ಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿಯ ಗಾಂಧಿ ಭವನದಲ್ಲಿ ಬಿಡಗಡೆ ಆಗುತ್ತಿದೆ.

ನಿಜಕ್ಕೂ ವೇದಾ ಮೇಡಂ ಅವರ ಸಾಧನೆಯೇ ಕನ್ನಡಕ್ಕೊಂದು ಕೃಷಿ ಕೈಪಿಡಿ. ಹೀಗಿರುವಾಗ ಅವರ ಕೃಷಿ ಬದುಕಿನ ಮಾಹಿತಿ ಗಳನ್ನೊಳಗೊಂಡ ಹೊತ್ತಗೆಗಳು ಉಪಯಕ್ತವಾಗದುಳಿದೀತೇ? ಹಾಗೆಂದೇ ನಾನೂ ಈ ಹೊತ್ತಗೆಗಳ ಬಗೆಗೆ ಅತಿ ಕುತೂಹಲ ತಳೆದಿದ್ದೇನೆ. ಅಂದು ‘ಹಸಿರುವಾಸಿ’ ಮುಖಪುಟದಲ್ಲಿ ನಾವು ( ಸಹೋದ್ಯೋಗಿ ಗೆಳೆಯ ಚೈಕು ನಿರೂಪಿಸಿದ) ಕಂಡ ಅವರ ಕೃಷಿ
ಬದುಕು ಇಂದಿಗೂ ಹಸುರಾಗಿಯೇ ಉಳಿದಿದೆ. ಅದನ್ನೊಂದಿಷ್ಟು ಮೆಲುಕುವುದು ಸಕಾಲಿಕವೆನಿಸಿದ್ದೇ ಇಂದಿನ ಅಂಕಣ.

ಕೃಷಿ- ಕೃಷಿಕ ಎಂದೊಡನೆ ಹೊಲದಲ್ಲಿ ಎತ್ತುಗಳನ್ನು ಕಟ್ಟಿಕೊಂಡು ಉಳುತ್ತಿರುವ ಬಡಕಲು ಶರೀರ, ಬರುಡು ಭೂಮಿಯಲ್ಲಿ ಹಣೆ ಮೇಲೆ ಕೈಹೊತ್ತು ಕುಳಿತ ಮುದಿ ಜೀವ… ಇತ್ಯಾದಿಯ ಬದಲಾಗಿ, ಸಂಪೂರ್ಣ ಆಧುನಿಕ ತಂತ್ರಜ್ಞಾನ ಹೊಂದಿರುವ ಡೇರಿ, ಸುಮಾರು ೨೫ ಎಕರೆ ಸಾಯವಯ ಕೃಷಿ ಭೂಮಿಯನ್ನೂ ೩೦ ಮಂದಿ ಕೆಲಸಗಾರರನ್ನೂ ವಾಕಿ- ಟಾಕಿ ಹಿಡಿದು ಓಡಾಡುತ್ತಲೇ ನಿಭಾಯಿಸುವ, ಸಾವಯವ ಕೃಷಿಯಲ್ಲಿ ಸ್ವಾವಲಂಬನೆಯ ಸಂತೃಪ್ತಿ ಕಾಣುತ್ತಿರುವ ಒಬ್ಬ ರೈತ ಮಹಿಳೆಯನ್ನು ಕಲ್ಪಿಸಿಕೊಳ್ಳಲು ಕಷ್ಟವೇನು? ನೀವು ಗೂಗಲ್‌ನಲ್ಲಿ PZeZಞZqಛಿbZ.ಜ್ಞಿ ಎಂದು ಟೈಪ್ ಮಾಡಿದೊಡನೆ ದಷ್ಟಪುಷ್ಟವಾದ ಹಸುವಿನ ಹಾಲು
ಕರೆಯುತ್ತಿರುವ ಮಹಿಳೆಯ ಸುಂದರ ಪ್ರತಿಮೆ ಹಾಗೂ ಆ ಡೈರಿ ಕುರಿತಾದ ಒಂದಷ್ಟು ಮಾಹಿತಿಗಳು ಜಾಲತಾಣದಲ್ಲಿ ಸಿಗುತ್ತವೆ.

ಇದೇ ‘ಪಂಚಮವೇದ ಡೇರಿ’ಯನ್ನು ನೀವು ಭೂ ನಕ್ಷೆಯಲ್ಲಿ ಅರಸುತ್ತ ಹೋದರೆ ಗೂಗಲ್ ಮ್ಯಾಪ್ ಸಹ ನಿಮ್ಮ ಸಹಾಯಕ್ಕೆ ಬರೋದಿಲ್ಲ. ಕಾರ್ಖಾನೆಗಳ ನಗರಿ ಭದ್ರಾವತಿಯಿಂದ ತರಿಕೆರೆ ಮಾರ್ಗವಾಗಿ ಸುಮಾರು ೧೩ ಕಿ.ಮೀ.ದೂರದಲ್ಲಿರುವ ಕಾಳಿಂಗನ ಹಳ್ಳಿಯವರೆಗೆ ಸರಕಾರಿ ಬಸ್ಸಿನಲ್ಲಿ ಸಾಗಬೇಕು. ಅಲ್ಲಿಂದ ಬೆಳೆದು ನಿಂತಿರುವ ಜೋಳ, ಕಬ್ಬಿನ ಗದ್ದೆಗಳ ಮಧ್ಯೆ ಇರುವ ಕಚ್ಚಾ ರಸ್ತೆಯಲ್ಲಿ ಸುಮಾರು ೩.ಕಿ.ಮೀ ಸಾಗಿದರೆ ಗುಡ್ಡದ ಹಟ್ಟಿ ತಲುಪುತ್ತೀರಿ.

ವೇದ ಅವರ ಕನಸಿನ ‘ಪಂಚಮವೇದ’ ಇರುವುದು ಇಲ್ಲೆ. ಪಂಚಮವೇದಕ್ಕೆ ಸ್ವಾಗತಿಸುವುದೇ ಹಸುರುಂಡು, ಹೊದ್ದು ನಿಂತಿರುವ ತೋಟ, ಗದ್ದೆಗಳು. ಅಲ್ಲಿ ಸಂಪೂರ್ಣ ಸಾವಯವ ಭತ್ತ. ಬೀಜವೂ ಅಲ್ಲಿನದೇ; ಯಾವುದೇ ಔಷಧಗಳ ಬಳಕೆ ಇಲ್ಲ. ಡಯಾಂಚ ಹಾಕಿ ಮಲ್ಚಿಂಗ್‌ನ ಜತೆಗೆ ಎರೆ ಹುಳು ಹಾಗೂ ಕೊಟ್ಟಿಗೆಯ ಶುದ್ಧ ಗೊಬ್ಬರದ ಘಮಲು ಗದ್ದೆಯಲ್ಲಿ ಹಾಯುವವರಿಗೆ ಅಡರುತ್ತದೆ. ವೇದಾರ ಪ್ರಕಾರ ಅದು ಕೇವಲ ಭತ್ತದ ಗದ್ದೆಯಲ್ಲ, ಕೃಷಿಕರ ಪಾಲಿನ ಕೌನ್ಸೆಲಿಂಗ್ ಸೆಂಟರ್! ಹಾಗೆ ಕೃಷಿಭೂಮಿಯನ್ನು ಸಂಪೂರ್ಣ ಸಾವಯವೀಕರಣಗೊಳಿಸಲೆಂದೇ ಆರಂಭಿಸಿದ್ದು ಪಂಚಮ ವೇದ ಡೇರಿಯನ್ನು.

ಅಂಥ ಗದ್ದೆಯ ಎರಡೂ ಬದಿ ಎದ್ದು ನಿಂತಿರುವ ಅಡಕೆ ತೋಟದಲ್ಲಿನ ಮರಗಳು ಸೀಮಂತಕ್ಕೆ ಶೃಂಗಾರಗೊಂಡ ಬಸುರಿಯಂತೆ ಗೊನೆ ಬಿಟ್ಟುಕೊಂಡು ಮೈದುಂಬಿಕೊಂಡಿವೆ. ‘ಒಮ್ಮೆಗೇ ನೀವು ರಾಸಾಯನಿಕ ಕೃಷಿಪದ್ಧತಿ ಬಿಟ್ಟು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುತ್ತೇನೆಂದು ಮುಂದಾದರೆ ಸೋಲುತ್ತೀರಿ. ನಮಗೆ ಆಹಾರದ ವ್ಯತ್ಯಾಸ ವಾದಂತೆ ಭೂಮಿಗೂ ಏರುಪೇರಾಗುತ್ತದೆ. ಹಾಗಾಗಿ ಕ್ರಮೇಣ ರಾಸಾಯನಿಕ ಬಳಸುವುದನ್ನು ಕಡಿಮೆ ಮಾಡುತ್ತ, ಅದಕ್ಕೆ ಪೂರಕವಾದ ಸಾವಯವ ಅಂಶವನ್ನು ನೀಡಬೇಕು.

ಹೆಚ್ಚಿನ ರೈತರು ಎಡವುವುದು ಇಲ್ಲೇ. ಇದರಿಂದಾಗಿ ಸಾವಯವ ಪದ್ಧತಿಯ ಮೇಲೆ ಕಪ್ಪು ಚುಕ್ಕೆ ಬೀಳುತ್ತದೆ’ ವೇದಾರದು ಅನುಭವ ವೇದ್ಯ ಮಾತು. ಸಾವಯವಕ್ಕೂ ರಾಸಾಯನಿಕಕ್ಕೂ ಇರುವ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ತೋರಿಸಬೇಕೆಂದೇ ಒಂದಷ್ಟನ್ನು ರಾಸಾಯನಿಕ ಗೊಬ್ಬರ ಹಾಕಿಯೇ ಬೆಳೆದಿದ್ದಾರೆ. ನಷ್ಟವಾದರೂ ಬದಲಾವಣೆಗೆ ಹೊಂದಿಕೊಳ್ಳಲು ಇಂಥ ರಿಸ್ಕ್‌ಗಳನ್ನು ತೆಗೆದು ಕೊಳ್ಳಲೇಬೇಕೆಂಬ ವಿವರಣೆ ಅವರದ್ದು. ಇದು ಒಬ್ಬ ಮಾದರಿ ಕೃಷಿಕನ ಲಕ್ಷಣ ಎಂಬುದರಲ್ಲಿ ಅನುಮಾನವೇ ಇಲ್ಲ.

ಸಮುದಾಯದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗುವ ವೇದಾರಂತಹ ವ್ಯಕ್ತಿಗಳು
ಹಳ್ಳಿಗೊಬ್ಬರಿದ್ದರೂ ಸಾಕು. ಆ ತೋಟದಲ್ಲಿ ಸೀಬೆ, ನೇರಳೆ, ಹಲಸು, ಮಾವು, ಬಾಳೆ, ಪಪ್ಪಾಯ… ಹೀಗೆ ತಿನ್ನಲು ಬೇಕಾದ್ದೆಲ್ಲ ಹಣ್ಣುಗಳನ್ನು ಬೆಳೆದುಕೊಂಡಿದ್ದಾರೆ. ಇನ್ನು ರೋಗ, ಕೀಟ ಬಾಧೆಗಳಿಗೂ ಸ್ಥಳೀಯವಾಗೇ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರದ್ದು. ತೋಟದಲ್ಲಿ ಬಸವನ ಹುಳುವಿನ ಕಾಟದ ಮೂಲ ಹುಡುಕಿ ಹೋದಾಗ ಕಂಡದ್ದು ಕಸದ ರಾಶಿ. ತೋಟದಲ್ಲಿ
ಕಸ ರಾಶಿ ಹಾಕುವುದನ್ನು ನಿಲ್ಲಿಸಿದಾಗ ತಂತಾನೆ ಸಮಸ್ಯೆ ಪರಿಹಾರವಾಯಿತು.

ತೆಂಗಿನ ಮಿಳ್ಳೆಗಳು ಉದುರಲು ಕಾರಣ ಹುಡುಕಿದಾಗ ವಾತಾವರಣದ ಬದಲಾವಣೆಯಿಂದಾಗಿ ಮರದ ಬುಡದಲ್ಲಿ ನೀರು ಕಡಿಮೆಯಾಗಿರುವುದು ತಿಳಿಯಿತು. ನೀರು ಹಾಯಿಸಿದ ನಂತರ ಸರಿಯಾಯಿತು. ಹೂವಿನ ಗಿಡಗಳಿಗೆ ಬಿಳಿ ಬೂದಿಯ ರೋಗ
ಬಂದಿತ್ತು. ಆ ರೋಗ ಹರಡುವ ಹುಳುವನ್ನು ಓತಿಕೇತ ತಿನ್ನುತ್ತದೆಂದು ಗೊತ್ತಾಯಿತು. ಬೆಕ್ಕುಗಳು ಓತಿಕೇತ ಹಿಡಿಯುವುದನ್ನು ತಡೆದರಂತೆ ಆ ಸಮಸ್ಯೆಯೂ ನಿವಾರಣೆಯಾಯಿತು. ಒಬ್ಬ ಕೃಷಿಕ ಕೇವಲ ಉಳುವುದಕ್ಕೆ, ಬೆಳೆಯುವುದಕ್ಕೆ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೆ ಪ್ರಕೃತಿಯನ್ನು ಅದರ ಪ್ರಕ್ರಿಯೆನ್ನು ಅರ್ಥಮಾಡಿಕೊಂಡಾಗ ಆತನ ಸಮಸ್ಯೆಗೆ ಅಲ್ಲಿಯೇ ಉತ್ತರ ಸಿಗುತ್ತದೆ ಎಂಬುದನ್ನು ವರು ಹೀಗೆ ವಿವರಿಸುತ್ತಾರೆ.

ಶಿವಮೊಗ್ಗದ ಮಂದಿಯೇ ಪುಣ್ಯವಂತರು ಬಿಡಿ. ಯಾವುದೇ ಕೀಟನಾಶಕಗಳಿರದ, ಫರ್ಟಿಲೈಸರ್‌ಗಳಿಂದ ಹೊರತಾದ, ಆಂಟಿಬಯೋಟಿಕ್ ರಹಿತ, ಹಾರ್ಮೋನ್ ಗಳಿರದ, ಬ್ಯಾಕ್ಟೀರೀಯಾ ಮುಕ್ತ, ವಿಷರಹಿತ, ಯಾವುದೇ ಕಲಬೆರಕೆ ಇಲ್ಲದ ಸಂಪೂರ್ಣ ಸಾವಯವ ಪರಿಶುದ್ಧ ‘ಪಂಚಮವೇದ’ದ ಹಾಲು ದೊರೆಯುವುದು ಅಲ್ಲಿನ ಮಂದಿಗೆ ಮಾತ್ರ(ಈ ಬಗ್ಗೆ  ಪಂಚಮವೇದ ಡೇರಿಗೆ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನಿಂದ ಪ್ರಮಾಣಪತ್ರ ದೊರೆತಿದೆ).

ಹಾಗೆಂದು ನೀವು ಬಳಸುವ ಹಾಲಿನಲ್ಲಿ ಇವೆಲ್ಲ ಇದೆಯೇ ಎಂದು ಆತಂಕಕ್ಕೊಳಗಾಗುತ್ತಿದ್ದೀರಾ? ಒಮ್ಮೆ ಹಾಲನ್ನು ಪರೀಕ್ಷೆಗೆ ಒಡ್ಡಿ ನೋಡಿ… ಇನ್ನೂ ಒಂದು ಆಶ್ಚರ್ಯದ ಸಂಗತಿ ಕೇಳಿ, ನಿಮ್ಮಲ್ಲಿ ಹೆಚ್ಚುತ್ತಿರುವ ಅಸಹನೆಗೆ ನೀವು ಕುಡಿಯುವ ಹಾಲೂ
ಕಾರಣವಾಗುತ್ತದೆ! ಹೌದು, ಯಾವಗಲೂ ಕಟ್ಟಿ ಹಾಕಿ ಸಾಕಿದ ದನ ಒತ್ತಡಕ್ಕೆ ಒಳಗಾಗುತ್ತದೆ, ಆ ಒತ್ತಡದಿಂದಾಗಿ ಬಿಡುಗಡೆ
ಗೊಳ್ಳುವ ನೆಗೆಟಿವ್ ಹಾರ್ಮೋನ್ ಹಾಲನ್ನು ಸೇರುತ್ತದೆ.

ಅದೇ ಹಾಲು ನಮ್ಮ ದೇಹ ಸೇರಿದಾಗ ನಮ್ಮ ಒತ್ತಡವೂ ಹೆಚ್ಚಾಗುತ್ತದೆ, ಸಂಯಮ ಕಳೆದುಕೊಳ್ಳುತ್ತೇವೆ. ಈ ರೀತಿ ಸೂಕ್ಷ್ಮವಿಚಾರ ಗಳನ್ನಿಟ್ಟುಕೊಂಡು ತಾವು ಬೆಳೆಸುವ ಹಸುವಿನ ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಕರಾರುವಾಕ್ ಆಗಿ ಅಳೆದೂ ತೂಗಿ ಇಡುವ ವೇದಾ ಅವರ ‘ಪಂಚಮವೇದ’ ಡೈರಿಯೂ ಅವರ ತೋಟದಂತೆ ಸಂಪೂರ್ಣ ಸ್ವಾವಲಂಬಿ ಹಾಗೂ ಸಾವಯವ ಕೂಡ.

ಇನ್ನೂ ಹತ್ತು ತುಂಬದ ಪಂಚಮವೇದ ಡೇರಿಯಲ್ಲಿರುವುದು ಒಟ್ಟು ೫೦ ಹಸುಗಳು. ಎಚ್‌ಎಫ್, ಜರ್ಸಿ, ಸಾಯಿ ವಾಲ, ಗೀರ್, ರೆಡ್ ಸಿಂಽ, ಮಿಶ್ರ ತಳಿಗಳೂ ಇವೆ. ಇಲ್ಲಿನ ಹಸುಗಳನ್ನು ದಿವಸದಲ್ಲಿ ನಾಲ್ಕು ಗಂಟೆ ಮಾತ್ರ ಕಟ್ಟಲಾಗುತ್ತದೆ. ಉಳಿದಂತೆ ಹಾಕಿದ ಗಡಿಯೊಳಗೆ ಅವು ಸ್ವಚ್ಛಂದ ವಾಗಿ ಆಟವಾಡುತ್ತಿರುತ್ತವೆ. ಎಚ್‌ಎಫ್ ನಂತಹ ಸೂಕ್ಷ್ಮ ತಳಿಗಳಿದ್ದರೂ ಪಂಚಮವೇದಕ್ಕೆ ಪಶುವೈದ್ಯರ ಸುಳಿವಿಲ್ಲ.

ಇದಕ್ಕೆ ವೇದಾ ಅವರು ನೀಡುವ ಎರಡು ಮುಖ್ಯ ಕಾರಣ ಗಳಲ್ಲಿ ಒಂದು ಆಹಾರ, ಮತ್ತೊಂದು ಸ್ವಚ್ಛತೆ. ವೇದಾ ಅವರು ತಮ್ಮ ಹಸುಗಳಿಗೆ ಎಂದೂ ಹೊರಗಿನ ರಾಸಾಯನಿಕ ಯುಕ್ತ ಆಹಾರವನ್ನು ನೀಡುವುದಿಲ್ಲ. ಅವುಗಳಿಗೆ ಬೇಕಾಗುವ ಹಸಿ ಹುಲ್ಲುಗಳನ್ನು ತಮ್ಮ ಜಮೀನಿನಲ್ಲೇ ಬೆಳೆಯುತ್ತಾರೆ. ಮುಖ್ಯವಾಗಿ ಸಿವೈಎಫ್ ಎಸ್ ೨೯, ಗಿಣಿ, ಕೋತ್ರಿ ಜಾತಿಯ ಹುಲ್ಲು ಹಾಗೂ ಮೆಕ್ಕೆ ಜೋಳಕ್ಕೆ ಮಜ್ಜಿಗೆ ಮುಂತಾದವುಗಳನ್ನು ಸೇರಿಸಿ ಮಾಡಿದ ಸೈಲೇಜ್. ಹೀಗೆ ಸಾವಯವ ಪದ್ಧತಿಯಲ್ಲಿ ಬೆಳೆದ ಪೌಷ್ಟಿಕ ಆಹಾರವನ್ನೇ ನೀಡಲಾಗುತ್ತದೆ.

ಆದ್ದರಿಂದ ಪಶು ಆಹಾರದಲ್ಲಿರುವ ಕೆಮಿಕಲ್ಸ್‌ಗಳು ಹಾಲಿನ ರೂಪದಲ್ಲಿ ನಮ್ಮ ದೇಹ ಸೇರುವ ಪ್ರಶ್ನೆಯೇ ಇಲ್ಲಿಲ್ಲ. ಕೊಟ್ಟಿಗೆಯನ್ನು ಮನೆಯಂತೆಯೇ ಶುಭ್ರವಾಗಿಟ್ಟುಕೊಳ್ಳುವುದರಿಂದ ರೋಗರುಜಿನಗಳ ಸುಳಿವಿಲ್ಲ. ಶಬರಿ, ನರ್ಮದೆ, ಗಂಗೆ, ಮಂಗಳ, ಅಮೃತ, ಭೂಮಿ, ಜ್ಞಾನ, ರಮಣ, ಶಿಪ್ರ, ಶಿಂಸ, ಚಾಂದಿನಿ… ಇದು ಪಂಚಮವೇದದ ಪ್ರತಿಯೊಂದು ಹಸುವಿಗೂ ಇರುವ ಮುದ್ದಾದ ಹೆಸರುಗಳು. ಅಲ್ಲದೆ ಪ್ರತಿ ಹಸುವಿಗೂ ಪ್ರತ್ಯೇಕ ಡೈರಿ ಪುಸ್ತಕ ಇಡಲಾಗಿದೆ. ಇದರಲ್ಲಿ ಆ ಹಸುವಿನ ಸಂಪೂರ್ಣ
ಜಾತಕ, ಹಸುವಿಗೆ ನೀಡಲಾದ ಔಷಧದ ಹೆಸರು, ನೀಡಿದ ಸಮಯ, ಕರು ಹಾಕಿದ ದಿನ… ಹೀಗೆ ಆ ಹಸುವಿನ ಪ್ರತಿಯೊಂದು ಆಗು-ಹೋಗುಗಳನ್ನು ದಾಖಲಿಸಲಾಗುತ್ತದೆ.

ಇದು ವೇದಾ ಅವರು ವ್ಯವಸ್ಥಿತವಾಗಿ ನಡೆಸುವ ಕೃಷಿಗೆ ಹಿಡಿದ ಕೈಗನ್ನಡಿ. ಹಸುಗಳು ಅನಾರೋಗ್ಯಕ್ಕೊಳಗಾದರೆ ವೇದಾ ಅವರೆ ಆಯರ್ವೇದ ಹಾಗೂ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಾರೆ. ಕೆಲ ಆಯುರ್ವೇದ ಚಿಕಿತ್ಸೆಗಳನ್ನು ವೇದಾರೇ ಕರಗತ ಮಾಡಿಕೊಂಡಿದ್ದಾರೆ. ಅಲ್ಲದೆ ಇದರ ಕುರಿತಾಗಿ ಚೆನ್ನೈನಲ್ಲಿನ ಟಿಡಿಎಸ್ ಸೆಂಟರ್‌ನಿಂದ ನುರಿತ ವೈದ್ಯರನ್ನು ಕರೆಸಿ, ಹಳ್ಳಿಗರಿಗೆ ಈ ಬಗ್ಗೆ ಕಾರ್ಯಗಾರವನ್ನು ಆಯೋಜಿಸಿದ್ದಾರೆ. ಸುತ್ತಲಿನ ಹಳ್ಳಿಯಲ್ಲಿ ಜಾನುವಾರಗಳ ಸಮಸ್ಯೆ ಬಂದರೆ ವೇದ ಅವರೇ ಹೋಗಿ ಚಿಕಿತ್ಸೆ ನೀಡುತ್ತಾರೆ.

ಇನ್ನೂ ವಿಶೇಷ ನೋಡಿ, ಹಾಲನ್ನೆ ನಂಬಿಕೊಂಡಿರುವ ದೇಶ ನೆದರ್‌ಲೆಂಡ್. ಇಲ್ಲಿ ಉತ್ಪಾದಿಸುವ ಹಾಲು ವಿದೇಶಗಳಲ್ಲೂ
ಬಳಕೆಯಾಗುತ್ತದೆ. ಆದರೆ, ಇಲ್ಲಿನ ಹಾಲಿಗೆ ಒಂದು ದೇಶ ಅಚಾನಕ್ ಆಗಿ ನಿಷೇಧ ಹೇರಿತು! ಕಾರಣ, ಹಾಲಿನಲ್ಲಿರುವ ಆಂಟಿಬಯೋಟಿಕ್ ಅಂಶ. ಸರಿ, ಈ ಬಗ್ಗೆ ತೀವ್ರ ತಲೆಕೆಡಿಸಿಕೊಂಡ ನೆದರ್‌ಲೆಂಡ್ ಮುಖಮಾಡಿದ್ದು ಭಾರತ ದತ್ತ. ಹಸುಗಳಿಗೆ ಆಂಟಿಬಯೋಟಿಕ್ ಬದಲಾಗಿ ಆಯುರ್ವೇದಿಕ್ ಹಾಗೂ ಹೋಮಿಯೋಪಥಿ ಔಷಧಗಳನ್ನು ನೀಡುವ ಟಿಡಿಯು ಸಂಸ್ಥೆಯನ್ನು ಸಂಪರ್ಕಿಸಿ ಮೂರು ಜನರ ತಂಡವನ್ನು ಕರೆಸಿಕೊಂಡಿತು. ಮೂರು ಜನರ ಪೈಕಿ ಇಬ್ಬರು ವೈದ್ಯರಾದರೆ ಮತ್ತೊಬ್ಬರು ವೇದಾ.

ತಾವು ಡೇರಿಯಲ್ಲಿ ಆಂಟಿಬಯೋಟಿಕ್ ನೀಡದೆ ಹಸುಗಳನ್ನು ಬೆಳೆಸುತ್ತಿರುವ ಬಗ್ಗೆ ಅಂಕಿ ಅಂಶಗಳ ಸಮೇತ ಪ್ರಸೆಂಟೇಶನ್ ನೀಡಿದ ಪಂಚಮವೇದ ಡೇರಿಯ ಬಹು ಮುಖ್ಯ ಸಂಗತಿ ಇಲ್ಲಿನ ಆಧುನಿಕ ತಂತ್ರಜ್ಞಾನ. ಪಂಚಮವೇದದ ಹಾಲಿಗೆ ಎಲ್ಲಿಯೂ ಮನುಷ್ಯನ ಸ್ಪರ್ಶ ಆಗುವುದೇ ಇಲ್ಲವೆಂದರೆ ನೀವು ನಂಬಲೇ ಬೇಕು. ಸುಮಾರು ೨೨ ಲಕ್ಷ ವೆಚ್ಚದಲ್ಲಿ ಇಡೀ ಡೇರಿಯ ನಿರ್ಮಾಣವಾಗಿದೆ. ಒಟ್ಟು ಆರು ಹಾಲು ಕರೆಯುವ ಮಶಿನ್‌ಗಳಿದ್ದಾವೆ. ಒಂದು ಬಾರಿ ಆರು ಹಸುಗಳ ಹಾಲನ್ನು ಹತ್ತು ನಿಮಿಷದಲ್ಲಿ ಕರೆಯಲಾಗುತ್ತದೆ. ದನಗಳ ಕೆಚ್ಚಿನಿಂದ ಹಾಲು ಸೀದಾ ಹೋಗಿ ಬೀಳುವುದು ಹಾಲನ್ನು ಶೇಖರಿಸಲು ಇರುವ ಬಿಎಂಸಿ(ಆh Iಜ್ಝಿh ಇಟಟ್ಝಛ್ಟಿ)ಗೆ.

೨೦೦ ಲೀಟರ್ ಸಾಮರ್ಥ್ಯದ ಸ್ವಯಂಚಾಲಿತ ಬಿಎಂಸಿಯಲ್ಲಿ ನಾಲ್ಕು ಡಿಗ್ರಿ ಉಷ್ಣಾಂಶ ಮೈಂಟೇನ್ ಮಾಡಲಾಗುತ್ತದೆ.
ಹೀಗಾಗಿ ಬೆಳಗ್ಗೆ ಕರೆದ ಹಾಲನ್ನು ಅಂದೇ ಸರಬರಾಜು ಮಾಡಬೇಕಾದ ಅನಿವಾರ್ಯವಿಲ್ಲ. ಬೆಳಗ್ಗೆ ಹಾಗೂ ಸಂಜೆ ಒಟ್ಟಾಗುವ ೯೦ ಲೀಟರ್ ಹಾಲನ್ನು ಸಂಜೆ ಶಿವಮೊಗ್ಗಕ್ಕೆ ರವಾನಿಸಲಾಗುತ್ತದೆ. ಅಂದಹಾಗೆ ಒಂದು ಬಾರಿ ಹಾಲು ಕರೆದ ನಂತರ ಇಡೀ ಮಶಿನ್ ಮೂರು ಬಾರಿ ಬಿಸಿನೀರಿನಲ್ಲಿ ತಾನೆ ಸ್ವಚ್ಛಗೊಳ್ಳುತ್ತದೆ. ಒಟ್ಟಿನಲ್ಲಿ ಪಂಚಮವೇದದಿಂದ ಬರುವ ಹಾಲು ಬ್ಯಾಕ್ಟೀರಿಯಾ ಫ್ರೀ.

ಇದೀಗ ಶಿವಮೊಗ್ಗ ನಗರದಲ್ಲಿ ಪಂಚಮವೇದದ ಅಂಗಡಿಯನ್ನು ತೆರೆಯಲಾಗಿದೆ. ಇಲ್ಲಿಂದ ಮನೆಗಳಿಗೆ ಹಾಲನ್ನು ನೀಡಲಾಗು ತ್ತದೆ ಆದರೆ, ಪ್ಲಾಸ್ಟಿಕ್ ಪ್ಯಾಕೆಟ್‌ಗಳ ರೂಪದಲ್ಲಲ್ಲ, ಬದಲಾಗಿ ಉತ್ತಮಗುಣಮಟ್ಟದ ಬಾಟಲಿಗಳಲ್ಲಿ. ಅಂತೆಯೇ ವೇದಾ ಅವರೇ ತಯಾರಿಸಿದ ಉತ್ತಮ ಗುಣಮಟ್ಟದ ತುಪ್ಪ ಕೂಡ ಸೀಲ್ಡ್ ಬಾಟಲಿಗಳಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಬಿಕರಿಯಾಗುತ್ತದೆ. ತಮ್ಮ ಕೃಷಿಭೂಮಿ ನೋಡಲು ಬರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ಬರ ಮಾಡಿಕೊಂಡು ಸಂಪೂರ್ಣ ಮಾಹಿತಿ ನೀಡುವ ವೇದಾ ಅವರ ‘ಪಂಚಮವೇದ’ವನ್ನು ನೀವೂ ಒಮ್ಮೆ ಕಣ್ತುಂಬಿಕೊಂಡು ಬನ್ನಿ…