Thursday, 12th December 2024

ಮೇಷ್ಟ್ರು ಕಲಿಸಿದ ಲಾಭದಾಯಕ ಹಾರಕದ ಕೃಷಿ ಪಾಠ

ಸುಪ್ತ ಸಾಗರ

rkbhadti@gmail.com

ಹಾರಕ- ಇಂದಿನ ಜನಾಂಗ ಹೆಸರೇ ಕೇಳಿರದ ಈ ಧಾನ್ಯ ನಮ್ಮ ಸಂಸ್ಕೃತಿಯ ಸಿರಿ, ಸಂಪ್ರದಾಯದ ಸಂಪತ್ತು, ಹೊಲದ ಸಮೃದ್ಧಿ, ನೆಲದ ನೆಮ್ಮದಿ, ನೀರಿನ ಗೆಳೆಯ, ಸಮುದಾಯದ ಆಹಾರ, ಕೃಷಿಕನ ಬದುಕು, ಜಾನುವಾರುಗಳ ಮೇವು, ವ್ಯಾಪಾರಿಯ ಕಾಂಚಣ ಎಲ್ಲವೂ ಆಗಿತ್ತು. ಬದಲಾದ ಕೃಷಿ
ಬದುಕು, ಆಹಾರ ಸಂಸ್ಕೃತಿ, ಆಧುನಿಕತೆ ಸೃಷ್ಟಿಸಿದ ಆಲಸ್ಯ, ತಂತ್ರಜ್ಞಾನದ ಪ್ರಗತಿಯ ಬೆನ್ನ ಕಾಣಿಸಿಕೊಂಡ ವಿಸ್ಮತಿ ಈ ಎಲ್ಲದರ ಪರಿಣಾಮ ಹಾರಕ ದಂಥ ಕಿರುಧಾನ್ಯ ಕಾಣೆಯಾಗುವ ಹಾದಿಯಲ್ಲಿದೆ. ಹಿರಿಯರ ನೆನಪಲ್ಲಷ್ಟೇ ಉಳಿದ ಅಪೂರ್ವ, ಶ್ರೀಮಂತ ಕಿರುಧಾನ್ಯವೊಂದರ ಬೇಸಾಯದ
ಯಶೋಗಾಥೆ ಇಲ್ಲಿದೆ.

ಅವರದನ್ನು ಬಿತ್ತಬೇಕೆಂದುಕೊಂಡಿದ್ದೇನೋ ನಿಜ. ಬೆಳೆಯುವ ಹಂಬಲವನ್ನು ಹೊತ್ತಿದ್ದೂ ಸತ್ಯ. ಅದು ಕನಸಾಗಿತ್ತು. ಆ ಬಗ್ಗೆ ಮನದ ತುಂಬ ನಿರೀಕ್ಷೆಗಳನ್ನು ತುಂಬಿಕೊಂಡಿದ್ದರು ಆ ಹಳ್ಳಿಯ ಹಸಿಮೈಯ ಯುವಕರು. ಆಸೆ-ಆಶಯಗಳೆರಡೂ ಒಂದೇ; ಅಳಿವಿನಂಚಿನ ಅಂಥದ್ದೊಂದು ಅಪೂರ್ವ ಬೆಳೆಯನ್ನು ಉಳಿಸಿಕೊಳ್ಳಬೇಕು. ಉದ್ದೇಶ ಸ್ಪಷ್ಟ; ಅಂದಿನ ತಲೆಮಾರಿಗೇ ಆಗಿ ಹೋಗಿರುವ ಆ ಧಾನ್ಯದ ಮಹತ್ವದ ಬಗ್ಗೆ ಇಂದಿನವರಲ್ಲಿ ಅರಿವು ಮೂಡಿಸಬೇಕು. ಸಂಕಲ್ಪವೇ ಅದಾಗಿತ್ತು; ಕಿರುಧಾನ್ಯದ ಸಿರಿವಂತಿಕೆಯನ್ನು ಸಾರಬೇಕು. ಅದರೊಂದಿಗೆ ಅವರು ಹನಿ ಮಳೆಗಾಗಿ ಕಾದಿದ್ದರು.

ಜತೆ ಗೊಂದಿಷ್ಟು ಯಾರದ್ದೇ ವಾಡೆಯ ಆಳದಲ್ಲಿ ಹುದುಗಿ ಕುಳಿತಿದ್ದ ಅಳುದುಳಿದ, ಬೇಡಿ ತಂದಿದ್ದ ಬೀಜಗಳಿದ್ದವು. ಅವತ್ತೊಂದು ದಿನ ಮುಗಿಲು ಕಪ್ಪಿಟ್ಟಿತು. ನೋಡ ನೋಡು ತ್ತಿದ್ದಂತೆಯೇ ಮೋಡಗಳು ದಟ್ಟೈಸಿದವು. ಅಂದುಕೊಳ್ಳುವ ಮೊದಲೇ ಮಳೆ ಸುರಿದೇ ಬಿಟ್ಟಿತು. ಭೂಮಿಗೆ ಬಿದ್ದ ಮೊದಲ
ಮಳೆಯದು. ಯುವಕರು ತಂಡದ ನಾಯಕನತ್ತ ಮುಖ ಮಾಡಿದ್ದರು. ತಡವೇಕೆ? ನೆನೆದ ನೆಲಕ್ಕೆ ಬೀರಿಬಿಡಿ ಬೀಜವನ್ನು. ಸೂಚನೆ ಬಂದಾಗಿತ್ತು. ಆತುರದಲ್ಲಿ ಅಂದುಕೊಂಡಿದ್ದನ್ನು ಮಾಡಿ ಮುಗಿಸಿಬಿಟ್ಟರು ಹುಡುಗರು. ಊರಿಗೆ ಊರೇ ನಕ್ಕಿತು. ಕೆಲ ಕೃಷಿಕರು ಕನಿಕರ ಪಟ್ಟರು. ಕೆಲವರು ಟೀಕಿಸಿ
ದರು. ಅಪಹಾಸ್ಯ ಮಾಡಿದವರಿಗೇನೂ ಕಡಿಮೆ ಇಲ್ಲ. ಅದಕ್ಕೂ ಕಾರಣಗಳಿದ್ದವು. ಬಿದ್ದ ಮಳೆಗೆ ನೆಲ ನೆನೆದದ್ದು ಕೇವಲ ಮೂರು ಇಂಚು.

ಹಸಿಯಾದದ್ದು ಮೇಲ್ಮಣ್ಣು ಮಾತ್ರವೇ. ಮತ್ತೆ ಮಳೆಯ ಸೂಚನೆಗಳಿಲ್ಲ. ಭೂಮಿ ಹದ ಮಾಡಿಲ್ಲ. ಉತ್ತಲು ಕ್ರಮ ತಿಳಿದಿಲ್ಲ. ಬಿತ್ತಲು ಬಹಳ ಶ್ರಮವೂ ಇಲ್ಲ. ಹಾಗಿದ್ದೂ ಬೀಜ ಮೊಳೆದೀತು ಹೇಗೆ? ಬೆಳೆ ಬಲಿತೀತು ಹೇಗೆ? ತೆನೆ ಹೊಮ್ಮಿಸೀತು ಹೇಗೆ? ಆತಂಕ ಕವಿಯಲಾರಂಭಿಸಿದ್ದು ಆಗಲೇ? ವೃಥಾ ಬೀಜ
ಕಳಕೊಂಡ ಸಂಕಟವೊಂದೆಡೆಯಾದರೆ, ಆಸೆಗಳು ಕಮರುವ ಆತಂಕ ಇನ್ನೊಂದೆಡೆ. ಉತ್ಸಾಹಕ್ಕೆ ಬಿದ್ದು ಮಾಡಿದ ಕೆಲಸಕ್ಕೆ ಅವಮಾನವಂತೂ ಕಟ್ಟಿಟ್ಟದ್ದು ಎಂದುಕೊಳ್ಳುತ್ತಿದ್ದರೂ ತಂಡದ ನಾಯಕನಲ್ಲಿ ಆಸೆಯ ಚಿಗುರು ಕಮರಿರಲಿಲ್ಲ. ಅಸೀಮ ವಿಶ್ವಾಸದ ನಗುವಿನೊಂದಿಗೆ ಹೇಳಿದ್ದಿಷ್ಟೇ; ಕಾಯಿರಿ ಕೆಲ ದಿನ. ಒಂದೆರಡು ಮಳೆಗೆ ಬೆಳೆಯುವ ಬೆಳೆ, ಅದೂ ಈ ಪರಿ ಒಣಭೂಮಿಯಲ್ಲಿ ಯಾವುದಿದ್ದೀತು? ಸಾಲದ್ದಕ್ಕೆ ಸಾಲುಸಾಲು ಬರಗಾಲ.

ಮುಗುಮ್ಮಾಗಿ ಉಳಿದಬಿಟ್ಟಿತು ಯುವಕರ ತಂಡ. ವಾರ ಕಳೆದಿರಲಿಲ್ಲ. ಬಿತ್ತಿದ ನೆಲ ಬಿರಯಲಾರಂಭಿಸಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ಚಿಗುರಿನ ಕಣ್ಣಾ ಮುಚ್ಚಾಲೆ. ಮೆಲ್ಲಗೆ ನೆಲದ ಮೈ ಹಸಿರಾಗತೊಡಗಿತು. ದಿನಗಳೆದಂತೆ ತೆಳೆ ಹಸಿರು ದಟ್ಟವಾಗತೊಡಗಿ, ಬಿತ್ತಿದ ಒಂದೊಂದೂ ಬೀಜವೂ ವ್ಯರ್ಥ
ವಾಗದಂತೆ ಚಿಗುರಿ, ಟಿಸಿಲೊಡೆಯತೊಡಗಿತ್ತು. ಹುರ್ರ‍ೇ, ಹಾರಕ ಹುಟ್ಟಿಬಿಟ್ಟಿದೆ. ಆ ಮುಂಜಾನೆಯ ಸೂರ್ಯ ಎಂದಿನಂತಿರಲಿಲ್ಲ. ಇಮ್ಮಡಿಯ ಉತ್ಸಾಹದಲ್ಲಿ ನಗುತ್ತ ಮೂಡಿ ಬಂದಿದ್ದ.

ಅದೇ ಉತ್ಸಾಹ ಹುಡುಗರ ಮುಖದಲ್ಲೂ. ನೆಲಮೂಲದ ಬೆಳೆಯೊಂದು ಪುನರುತ್ಥಾನಕ್ಕೆ ಪಡಿಮೂಡಿತ್ತು. ಹೌದು, ಹಾರಕ- ಇಂದಿನ ಜನಾಂಗ ಹೆಸರೇ ಕೇಳಿರದ ಈ ಧಾನ್ಯ ನಮ್ಮ ಸಂಸ್ಕೃತಿಯ ಸಿರಿ, ಸಂಪ್ರದಾಯದ ಸಂಪತ್ತು, ಹೊಲದ ಸಮೃದ್ಧಿ, ನೆಲದ ನೆಮ್ಮದಿ, ನೀರಿನ ಗೆಳೆಯ, ಸಮುದಾಯದ ಆಹಾರ, ಕೃಷಿಕನ ಬದುಕು, ಜಾನುವಾರು ಗಳ ಮೇವು, ವ್ಯಾಪಾರಿಯ ಕಾಂಚಣ ಎಲ್ಲವೂ ಆಗಿತ್ತು. ಬದಲಾದ ಕೃಷಿ ಬದುಕು, ಆಹಾರ ಸಂಸ್ಕೃತಿ, ಆಧುನಿಕತೆ
ಸೃಷ್ಟಿಸಿದ ಆಲಸ್ಯ, ತಂತ್ರeನದ ಪ್ರಗತಿಯ ಬೆನ್ನ ಕಾಣಿಸಿಕೊಂಡ ವಿಸ್ಮತಿ ಈ ಎಲ್ಲದರ ಪರಿಣಾಮ ಹಾರಕದಂಥ ಕಿರುಧಾನ್ಯ ಕಾಣೆಯಾಗುವ ಹಾದಿ ಯಲ್ಲಿದೆ. ಹೆಚ್ಚೆಂದರೆ ಎಲ್ಲಾ ಅಬ್ಬ ಇಬ್ಬ ತೀರಾ ಸಾಂಪ್ರದಾಯಿಕ ಕೃಷಿಕ ರನ ಕುಟುಂಬದ ಕಣಜದಡಿಯಲ್ಲಿ ಒಂದಷ್ಟು ಬೀಜಗಳು ಉಳಿದುಕೊಂಡಿರು ವುದು ಬಿಟ್ಟರೆ ಉಳಿದಂತೆ ಇದು ಇರುವುದು ತೀರಾ ಹಿರಿಯರ ನೆನಪಲ್ಲಿ ಮಾತ್ರ.

ನಮ್ಮದೇ ಪೂರ್ಣ ದೇಸೀ ಆಹಾರ ಧಾನ್ಯದ ಹೆಗ್ಗಳಿಕೆ ಇದರದ್ದು. ಹೀಗಿದ್ದರೂ ಕಳಕೊಳ್ಳುವ ಹಂತದಲ್ಲಿದ್ದಾಗ ಎಚ್ಚೆತ್ತವರು ತುಮಕೂರು ಜಿಲ್ಲೆ, ಚಿಕ್ಕ ನಾಯಕನಹಳ್ಳಿ ತಾಲ್ಲೂಕಿನ ಗೋಪಾಲನಹಳ್ಳಿಯ ರೈತರು. ಹಾರಕ ಕಳೆದ ವರ್ಷದಿಂದ ಹಾರಕ ಗೋಪಾಲನ ಹಳ್ಳಿಯ ಹೊಲಗಳಲ್ಲಿ ಜೀವ ತಳೆಯು ತ್ತಿದೆ. ಇಂಥ ಹೆಮ್ಮೆಯ ಹೆಜ್ಜೆಗೆ ಪ್ರೇರಕರಾದವರು ಹಳ್ಳಿಯ ಉಪನ್ಯಾಸಕರೂ ಆಗಿರುವ ಕೃಷಿಕ ಜಿ. ಎಸ್.ರಘು. ತಿಪಟೂರಿನ ಸರಕಾರಿ ಬಾಲಕಿಯರ ಕಾಲೇಜಿನ ಪೊಲಿಟಿಕಲ್ ಸೈನ್ಸ್ ಉಪನ್ಯಾಸಕ. ಕೃಷಿಯಲ್ಲಿ ಮಾತ್ರ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳೂ ಸೇರಿದಂತೆ ಯಾವುದೇ ಕೃತಕ ಪದ್ಧತಿಗಳ ಪೊಲಿಟಿಕ್ಸ್ ಸುಳಿಯಗೊಡದಂತೆ ಎಚ್ಚರ ವಹಿಸಿದವರು.

ಗಾಂಧಿ ಅನುಯಾಯಿ. ಶಿಸ್ತು, ಸಿದ್ಧಾಂತಗಳೆಂದರೆ ಪ್ರೀತಿ. ಸದಾ ಯುವಕರ ಪಡೆಕಟ್ಟಿಕೊಂಡು ಏನಾದರೊಂದು ಪ್ರಯೋಗದ ಮುಳುಗಿರುವ ಸಜ್ಜನ. ಹುಟ್ಟಿದ ನೆಲಕ್ಕೆ, ಬದುಕಿದಹಳ್ಳಿಗೆ ಏನಾದರೊಂದು ಒಳಿತು ಮಾಡುವ ಹಂಬಲ. ಪರಿಣಾಮ ಗ್ರಾಮದ ರೈತರು ಒಗ್ಗಟ್ಟಾಗಿ ಹಿರಿಯರು ಕಟ್ಟಿದ್ದ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಗುಂಡು ತೋಪು ಬೆಳೆಸುತ್ತಿದ್ದಾರೆ. ವಾರದ ಸಂತೆ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿರುವಾಗ ಅವರಿಗೆ ನೆನಪಿಗೆ ಬಂದದ್ದು
ಹಿರೀಕರು ಬೆಳೆಯುತ್ತಿದ್ದ ಹಾರಕ. ಆ ನೆನಪೀಗ ಹಸುರಾಗಿ ಸುಮಾರು ೫ ಎಕರೆಯಲ್ಲಿ ಹಾರಕ ಬೆಳೆದು ನಿಂತಿದೆ.

ಅದೊಂದು ಅನಿರೀಕ್ಷಿತ ಘಟನೆ. ರಘು ನೆನಪಿಸಿಕೊಳ್ಳುತ್ತಾರೆ; ೨೦೦೯-೧೦ ರಲ್ಲಿ ಬೆಳೆಗಳ ಕ್ಷೇತ್ರೋತ್ಸವ ನಡೆಯುತ್ತಿತ್ತು. ಜಲ ಸಂವರ್ಧನೆ ಯೋಜನೆಯ ಅಧಿಕಾರಿಗಳು ಬದಲಾದ ಆಹಾರ ಪದ್ಧತಿಯ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಕಿರುಧಾನ್ಯಗಳ ಕಣ್ಮರೆಯೂ ವಿಷಯದಲ್ಲಿ ಸೇರಿತ್ತು.
ರಘು ಅವರ ತಾಯಿ ನಮ್ ಕಾಲ್ದಲ್ಲಿ ಹಾರ್ಕ, ನವ್ಣೆ ತಿಂತಾ ಇದ್ವಿ, ಯಾವ್ ಕಾಯ್ಲೆ ಕಸಾಲೆ ಇರ್ಲಿಲ್ಲ, ೧೦-೧೫ ವರ್ಸ ಆಯ್ತು ಬೆಳೆಯೋದು ಬಿಟ್ಟು’ ಎಂದರು. ಎಲ್ಲರಲ್ಲೂ ಕುತೂ ಹಲ. ಏನಿದು, ಯಾಕೆ ಹೀಗೆ, ಎಲ್ಲಿ ಹೋಯಿತು ಹಾರಕ? ಪ್ರಶ್ನೆಗಳ ರೂಪದಲ್ಲಿ ಹೊರಬಂತು ಆ ಕುತುಹಲ. ಆ
ತಾಯಿಗೆ ಖುಷಿಯೋ ಖುಷಿ. ಮನೆಯಸಂಗ್ರಹದಲ್ಲಿದ್ದ ಯಾವುದೋ ಕಾಲದ ಹಾರಕವನ್ನೂ ತೋರಿಸಿದರು. ಆಗಲೇ ಊರಿನ ಯುವಕರಲ್ಲಿ ಹುಟ್ಟಿದ್ದು ಮತ್ತೆ ಯಾಕೆ ಬೆಳೆಯಬಾರದು ಹಾರಕವನ್ನು? ಎಂಬ ಪ್ರಶ್ನೆ. ಆ ವರ್ಷ ಪ್ರಕಾಶ, ಅನಿಲ್ ಕುರ್ಮಾ ಟೊಂಕ ಕಟ್ಟಿದರು.

ಸುಮಾರು ಎರಡು ಎಕರೆಗೆ ಹಾರಕ ಬಿತ್ತಿದರು. ಬೆಳೆಯೊಂದಿಗೆ ವಿಶ್ವಾಸವೂ ಬೆಳೆಯಿತು. ಬೆಂಗಳೂರು, ಮೈಸೂರುಗಳಲ್ಲಿನ ಸಿರಿಧಾನ್ಯ ಮೇಳಕ್ಕೂ
ಹೋದವು ಹಾರಕದ ಮಾದರಿ.

ಅ ರಾಶಿಪೂಜೆಯೂ ನಡೆಯಿತು. ಬಂದವರೆಲ್ಲೂ ಕುತೂಹಲ. ಅದೇ ಪ್ರಚಾರಕ್ಕೆ ಮುನ್ನುಡಿಯಾಯಿತು. ಒಲವು ತೋರಿದವರು ಬೆಳೆಯ ಬಗ್ಗೆ ಅರಿವು ಪಡೆದರು. ಈ ವರ್ಷ ಐದಾರು ರೈತರು ಹಾರಕ ಬಿತ್ತಿದರು. ರಘು ಅವರ ಒಂದೂ ಕಾಲು ಎಕರೆ ಜಮೀನೂ ಸೇರಿದಂತೆ ಇತರರ ಒಟ್ಟು ಐದು ಎಕರೆ
ಯಲ್ಲಿ ಹಾರಕ ತೆನೆಗೂಡಿತ್ತು. ಕೇಳದ ಬೆಳೆಯೊಂದರ ಬಗ್ಗೆ ಕೇಳ ಹೊರಟಾಗ ರಘು ಹೇಳಿದ ಮಾಹಿತಿ ನಿಜಕ್ಕೂ ಹೆಮ್ಮೆ ಮೂಡಿಸಿತ್ತು. ಕಡಿಮೆ ಮಳೆಗೆ ಬೆಳೆಯುವ, ಉತ್ಕೃಷ್ಟ ಪೋಷಕಾಂಶಗಳನ್ನೊಳಗೊಂಡ ಬೆಳೆಯಿದು ಹಾರಕ.

ಅತಿ ಕಡಿಮೆ ಫಲವತ್ತತೆಯ ವಣ್ಣಿನಲ್ಲೂ ಕೇವಲ ಐದಾರು ಮಳೆಯ ಪ್ರದೇಶದಲ್ಲೂ ಹುಲುಸಾಗಿ ಬೆಳೆಯಬಲ್ಲುದು. ಕೀಟ-ರೋಗಗಳ ಬಾಧೆಯಿಲ್ಲ. ಪ್ರಾಣಿ- ಪಕ್ಷಿಗಳ ಹಾವಳಿಯ ಚಿಂತೆಯಿಲ್ಲ. ಹಲವಾರು ವರ್ಷ ಶೇಖರಿಸಿದರೂ ಕೆಡುವುದಿಲ್ಲ. ಬೆಳೆಯಲು ಖರ್ಚೂ ಕಡಿಮೆ. ತೀರಾ ವಾಗಾತಿ(ದೇಖರೇಖಿ)ಯೂ ಬೇಡ. ಇದಕ್ಕಿಂತ ವಿಶೇಷವೆಂದರೆ ಬಿತ್ತಿದ ಮೇಲೆ ತೆನೆಯೊಡೆಯುವ ಮೊದಲು ಹಾಗೂ ತೆನೆ ಒಕ್ಕಿದ ಬಳಿಕ- ಹೀಗೆ ಎರಡೆರಡು ಬಾರಿ ಸಮೃದ್ಧ ಮೇವನ್ನು ಜಾನುವಾರುಗಳಿಗೆ ಕೊಡುತ್ತದೆ ಹಾರಕ. ಇನ್ನು ರುಚಿಗೆಯ ವಿಷಯಕ್ಕೆ ಬಂದರೆ ಮೊಸರಿನ ಜೊತೆ ಹಾರಕದಕ್ಕಿ ಅನ್ನ ಅತಿ ವಿಶಿಷ್ಟ. ಉಪ್ಪಿಟ್ಟಿಗೂ ಒಗ್ಗುತ್ತದೆ. ದೋಸೆ -ಇಡಿಗೆ ತೆಗೆದುಹಾಕುವಂತಿಲ್ಲ. ರೊಟ್ಟಿ ತಟ್ಟಿ ತಿಂದರೆ ಹೊಟ್ಟೆಗೆ ಗಟ್ಟಿ. ದುಭಾರಿಯೂ ಅಲ್ಲ. ಒಟ್ಟಿನಲ್ಲಿ ಬಡವರ ಅತಿ ಶ್ರೀಮಂತ ಆಹಾರ ಇದು.

ರಘು ವಿವರಿಸಿದ ತಮ್ಮ ಅನುಭವದಂತೆ ರಸಗೊಬ್ಬರದ ಅಗತ್ಯವಿಲ್ಲ, ರಾಸಾಯನಿಕ ಕೀಟನಾಶಕ, ಕ್ರಿಮಿನಾಶಕಗಳ ಅಗತ್ಯವಿಲ್ಲ, ಹೆಚ್ಚುವರಿ ಆರೈಕೆ ಬೇಕಿಲ್ಲ, ಮುಖ್ಯವಾಗಿ ಬರ ಸಹಿಷ್ಣು ಬೆಳೆ. ಹವಾಮಾನ ವೈಪರೀತ್ಯವನ್ನು ತಾಳಿಕೊಳ್ಳುವ ಗುಣ ಇದಕ್ಕಿದೆ. ಹಾರಕಕ್ಕೆ ಅಚ್ಚರಿ ಎನಿಸುವಷ್ಟು ಕಡಿಮೆ ನೀರು ಸಾಕು. ಕಬ್ಬು, ಬಾಳೆಗೆ ಬೇಕಾದ ನೀರಿನಲ್ಲಿ ಶೇ ೨೫ ಹಾಗೂ ಭತ್ತಕ್ಕೆ ಬೇಕಾದ ನೀರಿನಲ್ಲಿ ಶೇ ೩೦ ನೀರಿದ್ದರೆ ಬೇಕಷ್ಟಾಯಿತು. ಮಲೆನಾಡಿನದರೆ ಬೆಟ್ಟ ಬೇಣಗಳನ್ನು ಹಾರಕದಿಂದ ಉಪಯುಕ್ತಗೊಳಿಸಿಕೊಳ್ಳಬಹುದು’ ಎರಡು-ಮೂರು ದಶಕಗಳ ಹಿಂದೆ ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕ ಭಾಗ ದಲ್ಲಿ ಯಥೇಚ್ಛ ಬೆಳೆಯುತ್ತಿತ್ತು ಹಾರಕ.

ಉಳಿದ ಕಿರು ಧಾನ್ಯಗಳಾದ ಸಜ್ಜೆ, ರಾಗಿ, ನವಣೆ, ಸಾವೆ, ಜೋಳ, ಕೊರಲೆ ಮುಂತಾದವು ಈಗಲೂ ಅಲ್ಲಲ್ಲಿ ಬೆಳೆಯಲ್ಪಡುತ್ತಿವೆ, ಆದರೆ ಹಾರಕ ಅಪಾಯದಂಚಿಗೆ ತಲುಪಿದೆ. ಕಷ್ಟಪಟ್ಟು ಹುಡುಕಿದರೆ ಕೆಲ ಹಳ್ಳಿಗಳಲ್ಲಿ ೧೦-೧೫ ವರ್ಷ ಹಳೆಯ ಹಾರಕದ ಬೀಜ ಸಿಗುತ್ತದೆಯಾದರೂ ಬಿತ್ತುವವರೇ ಇಲ್ಲ. ವಯಸ್ಸಾದವರಿಗೆ ಹಾರಕದ ಹೆಸರು ಕೇಳಿದರೆ ಅದರ ರುಚಿ, ಮೃದುತ್ವ, ಔಷಽ ಗುಣಗಳ ಮಧುರ ನೆನಪನ್ನು ಕೆದಕುತ್ತಾರೆ. ಮುಂಚೆ ಸಂತೆಗಳ ಸಾಕಷ್ಟು ಸಿಕ್ತಾ ಇತ್ತು. ಈಗ ಅದರ ಸೆಲಕವೇ ಇಲ್ಲ’ ಎನ್ನುತ್ತಾರೆ ರೈತರು.

ಒಂದೇ ಸಮಸ್ಯೆ ಎಂದರೆ ಧಾನ್ಯದ ಪರಿಷ್ಕರಣೆ. ಸಿಪ್ಪೆಯ ಗಟ್ಟಿತನದಿಂದಾಗಿ ಪರಿಷ್ಕರಣೆ ಕಠಿಣ. ಇದೇ ತಳಿಯ ಉಳಿವಿಗೆ ಮಾರಕವಾಗಿದ್ದಿರಬಹುದು. ಹಾರಕದ ಕಾಳು ಕಾಫಿ ವರ್ಣ ಹೋಲುತ್ತದೆ. ಅದರಲ್ಲಿ ಏಳು ಪದರ ಸಿಪ್ಪೆ. ಅದನ್ನು ಬಿಡಿಸಿ ತೆಗೆದರೆ ಹಾರಕದಕ್ಕಿ ಲಭ್ಯ. ಇದರ ಅಕ್ಕಿ ಮಾಡುವುದು
ತುಂಬಾ ಕಷ್ಟ. ಕಾಳಿಗೆ ಕೆಮ್ಮಣ್ಣು ಹಚ್ಚಿ ಒಂದು ದಿನ ಬಿಸಿಲಲ್ಲಿ ಒಣಗಿಸುತ್ತಾರೆ. ನಂತರ ಬೀಸುಕಲ್ಲಿನಿಂದ ಬೀಸಿ ಅಕ್ಕಿ ಮಾಡುತ್ತಾರೆ. ಕಾಳಿನ ಹೊರಪದರ ಎಷ್ಟು ಗಟ್ಟಿಯೆಂದರೆ ಬೀಸುಕಲ್ಲಿಗೆ ಗೋಣಿತಾಟನ್ನು ಸುತ್ತಿ ಬೀಸಬೇಕು. ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೆ ಹೊಟ್ಟು ಬಿಡುತ್ತದೆ. ಕೆಮ್ಮಣ್ಣು
ಹಚ್ಚುವುದರಿಂದ ಹಾರಕದ ಹೊರಪದರಗಳು ಮೃದುವಾಗುತ್ತವೆ. ಕೆಲವು ಕಡೆ ಹಾರಕವನ್ನು ರಾತ್ರಿಪೂರ ಬೇಯಿಸಿ ಒಂದು ದಿನ ಒಣಗಿಸಿದ ನಂತರ ಮಿಲ್ ಗೆ ಹಾಕಿಸಿ ಅಕ್ಕಿ ಮಾಡಿಸಿ ಬಳಸುತ್ತಾರೆ. ಅಕ್ಕಿ ಮಾಡುವುದು ಇಷ್ಟು ಕಷ್ಟವಾದುದುದರಿಂದಲೇ ತಿನ್ನುವುದು ಕಡಿಮೆಯಾಗಿದೆ’ ಎಂಬುದು ರಘು ವಿವರಣೆ.

ಕರಲು ಮಣ್ಣು, ಚೌಳು ಮಣ್ಣು, ಪಾಳು ಜಮೀನು, ಕಲ್ಲು ಮಿಶ್ರಿತ ಕೆಂಪು ಮಣ್ಣು, ಸಾರವಿಲ್ಲದ ಬಂಜರು ಭೂಮಿಗಳಲ್ಲಿ ಹಾರಕ ಹುಲುಸಾಗಿ ಬೆಳೆಯುತ್ತದೆ. ಐದು ತಿಂಗಳ ಬೆಳೆಯಾದ್ದರಿಂದ ರೋಹಿಣಿ ಮಳೆಗೆ ಬಿತ್ತಬೇಕು. ಸಾಲು ಬಿತ್ತಿದರೆ ಅರಗಲು, ಕಳೆ ತೆಗೆಯಲು ಚೆಂದ. ಬಿತ್ತಿದ ಒಂದು ತಿಂಗಳ
ನಂತರ ದನ-ಕುರಿಗಳಿಂದ ಬುಡದವರೆಗೂ ಮೇಯಿಸಬೇಕು. ನಂತರ ಅಚ್ಚರಿಯ ರೀತಿಯಲ್ಲಿ ಚಿಗುರಿ ಹುಲುಸಾಗಿ ಬೆಳೆಯ ತೊಡಗಿ ತೆಂಡೆ
ಹೊಡೆಯುತ್ತದೆ.

ಮೇಯಿಸದಿದ್ದರೆ ಹುಲುಸಾಗಿ ಬೆಳೆಯುವುದಿಲ್ಲ. ಎರಡರಿಂದ ಮೂರಡಿ ಎತ್ತರಕ್ಕೆ ಬೆಳೆಯುತ್ತದೆ. ಐದು ತಿಂಗಳಲ್ಲಿ ಕಟಾವ್. ಯಾವುದೇ ರೋಗವಿಲ್ಲ. ಸರಾಸರಿ ಇಳುವರಿ ಎಕರೆಗೆ ಐದರಿಂದ ಆರು ಕ್ವಿಂಟಾಲ. ಹಾರಕದ ಹುಲ್ಲು ಜಾನುವಾರುಗಳಿಗೆ ಮೇವಾಗಿ ಬಳಸುವುದುಂಟು. ದನಗಳಿಗೆ ಜ್ವರ ಬಂದಾಗ ಹುಲ್ಲನ್ನು ಸುಟ್ಟು, ಅದರ ಹೊಗೆಯನ್ನು ತಾಗುವಂತೆ ಮಾಡುತ್ತಾರೆ ಇದರಿಂದ ಜ್ವರ ಕಡಿಮೆಯಾಗುತ್ತದಂತೆ. ಕಾಳು ಬೇರ್ಪಟ್ಟ ಹಾರಕದ ಹುಲ್ಲನ್ನು
ಮನೆಯ ಮಾಡಿಗೆ ಹಾಸುತ್ತಾರೆ, ಬೀಜ ಸಂಗ್ರಹದ ಮೂಡೆ ಕಟ್ಟಲು ಬಳಸುತ್ತಾರೆ. ಇದರಲ್ಲಿರುವ ಔಷಧಿಯ ಗುಣವು ಹುಳುಗಳ ಪ್ರವೇಶಕ್ಕೆ ಅಡ್ಡಿ.

ಭಾರತದ ಕರ್ನಾಟಕವೂ ಸೇರಿದಂತೆ ರಾಜಸ್ಥಾನ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಹಾಗೂ ಆಂಧ್ರ ಪ್ರದೇಶದಲ್ಲಿ ಹಾರಕ ಬೆಳೆ ಇದೆ. ಪೋಷಕಾಂಶಗಳ ಆಗರ ವಾದ ಹಾರಕದಲ್ಲಿ ಪ್ರತಿ ನೂರು ಗ್ರಾಂಗೆ ೮.೩% ಪ್ರೋಟೀನ್, ೯% ನಾರಿನಂಶ, ೨.೬ ಖನಿಜ, ೦.೫% ಕಬ್ಬಿಣ, ೨೭ ಮಿ.ಗ್ರಾಂ
ಕ್ಯಾಲ್ಸಿಯಂ ಇದೆ. ಅಕ್ಕಿ-ಗೋಽಗೆ ಹೋಲಿಸಿದರೆ ಈ ಪ್ರಮಾಣ ಎಷ್ಟೋ ಪಟ್ಟು ಅಽಕ. ಹೆಚ್ಚುತ್ತಿರುವ ಮಧು ಮೇಹ, ಬೊಜ್ಜು ಮುಂತಾದ ಕಾರಣಗಳಿಂದ ಇತ್ತೀಚೆಗೆ ಕಿರುಧಾನ್ಯಗಳ ಬಳಕೆಯತ್ತ ಜನರ ಒಲವು ಹೆಚ್ಚುತ್ತಿದೆ.

ಅಬ್ಬಾ, ರಘು ವಿವರಿಸುತ್ತಾ ಹೋದಂತೆಲ್ಲ, ಪುಟ್ಟ ಕಾಳಿನ ಬಗೆಗಿನ ಗೌರವ, ಸ್ಥಾನ-ಮಾನಗಳು ಎತ್ತರೆತ್ತರಕ್ಕೆ ಏರುತ್ತಲೇ ಇತ್ತು. ಗ್ರಾಮದಲ್ಲಿ ಹಾರಕ ಬೆಳೆಗಾರರ ಸಂಘ ಸ್ಥಾಪಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಬೇಕೆನ್ನುವುದು ರಘು ಮತ್ತವರ ಯುವಕರ ತಂಡದ ಬಯಕೆ. ತಮ್ಮ ಅನುಭವವನ್ನು
ಇತರರಿಗೂ ಹಂಚಿಕೊಳ್ಳಬೇಕೆನ್ನುವ ಬಯಕೆಯಿಂದ ಹಾರಕ ನೋಡೋಣ ಬನ್ನಿ ಕಾರ್ಯಕ್ರಮ ರೂಪಿಸಿzರೆ. ನಾಡಿದ್ದು ಭಾನುವಾರ (ಡಿ.೪ರಂದು) ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಹಾರಕ ಹೊಲದಲ್ಲಿ ಸುತ್ತಾಟ, ಹಾರಕ ಬೆಳೆದವರ ಕಷ್ಟ-ಸುಖ ಹಂಚಿಕೆ, ಬೆಳೆಗಾರರು ಮತ್ತು ಬಳಕೆ
ದಾರರ ಸಂವಾದ ಹಾಗೂ ಹಾರಕ ಬೀಜದ ಪ್ರದರ್ಶನ, ಮಾರಾಟವನ್ನೂ ಸಹ ಏರ್ಪಡಿಸಲಾಗಿದೆಯಂತೆ.

ನೀರಿನ ಕೊರತೆ ದಿನೇ-ದಿನೇ ಹೆಚ್ಚುತ್ತಿರುವ, ಕೃಷಿಯೇ ಬಹುಪಾಲು ನೀರನ್ನು ಕಬಳಿಸುತ್ತಿರುವ ಈ ದಿನಗಳಲ್ಲಿ ಹಾರಕದಂಥ ಕಿರುಧಾನ್ಯಗಳು ಆಪದ್ಬಾಂಧವ ಅನ್ನಿಸುವುದಿಲ್ಲವೇ? ವಿವರಕ್ಕೆ ರಘು ಅವರ ಸಂಪರ್ಕಕ್ಕೆ: ೯೪೪೯೧ ೬೨೪೧೮