Friday, 22nd November 2024

ಅಂತೂ ಇಂತೂ… ಫ್ಯಾಷನ್‌ ಬಂತು !

ವಿದೇಶ ವಾಸಿ

dhyapaa@gmail.com

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೇಶ ಮುನ್ನಡೆಸುವ ಉಸ್ತುವಾರಿ ಹೊತ್ತುಕೊಂಡಾಗಿಂದ ಸೌದಿ ಅರೇಬಿಯಾ ಸಾಕಷ್ಟು ಬದಲಾವಣೆ ಕಂಡಿದೆ. ದೇಶದ ಆರ್ಥಿಕತೆಯ ಬಗ್ಗೆ ಬೇರೆಯದೇ ‘ಬ್ಲೂ-ಪ್ರಿಂಟ್’ ಹೊಂದಿರುವ ‘ಎಮ್‌ಬಿಎಸ್’ ಪ್ರವಾಸೋದ್ಯಮ, ಸಾಮಾಜಿಕ ಬದಲಾವಣೆಗೂ ಉತ್ಸುಕರಾಗಿದ್ದಾರೆ. 

ಕಳೆದ ಮೂರು ದಶಕಗಳಿಂದ ಸೌದಿ ಅರೇಬಿಯಾದಲ್ಲಿದ್ದೇನೆ. ಕಳೆದ ಮೂರು ವರ್ಷಗಳಿಂದ ಅಂಕಣ ಬರೆಯುತ್ತಿದ್ದೇನೆ. ಆ ನಿಟ್ಟಿನಲ್ಲಿ ಹೇಳುವುದಾದರೆ ನಾನು ಸೌದಿ ಅರೇಬಿಯಾದ ಕುರಿತು ಅಂಕಣ ಬರೆದದ್ದು ಬಹಳ ಕಡಿಮೆ. ನಿಜ ಹೇಳಬೇಕೆಂದರೆ ವರ್ಷಕ್ಕೆ ಮೂರು ಅಂಕಣವನ್ನೂ ಸೌದಿ ಕುರಿತು ಬರೆಯಲಿಲ್ಲ. ಅಲ್ಲಿಯ ಮರಳುಗಾಡು, ರಿಗ್, ತೈಲ, ಇತ್ಯಾದಿಗಳ ಕುರಿತು ಬರೆದಿದ್ದೆ. ಆದರೆ ಅಲ್ಲಿಯ ಜನರು, ಅವರ ಆಹಾರ ಪದ್ಧತಿ, ಜೀವನ ಶೈಲಿ, ಅಲ್ಲಿಯ ಸಂಸ್ಕೃತಿ, ಅವರ ಉಡುಗೆ-ತೊಡುಗೆ, ವೇಷಭೂಷಣ, ಆತಿಥ್ಯ, ಮನಃಸ್ಥಿತಿಯ ಕುರಿತು ಬರೆದೇ ಇಲ್ಲ ಎಂದರೂ ತಪ್ಪಿಲ್ಲ. ಅದನ್ನೆಲ್ಲ ಬರೆದರೆ ಒಂದಲ್ಲ, ಹತ್ತು ಪುಸ್ತಕವೇ ಆದೀತು.

ಆದರೆ ಕಳೆದ ಮೂರು ದಶಕದ ಸೌದಿ ವಾಸದ ಅನುಭವದಲ್ಲಿ ಒಂದಂತೂ ಹೇಳಬ, ನಾನು ಮೊದಲು ಬಂದಾಗ ನೋಡಿದ ಸೌದಿ ಅರೇಬಿಯಾಕ್ಕೂ ಇಂದು ನೋಡುತ್ತಿರುವ ಸೌದಿ ಅರೇಬಿ ಯಾಕ್ಕೂ ಸಾಕಷ್ಟು ಬದಲಾವಣೆ ಯಾಗಿದೆ. ಆ ಬದಲಾವಣೆ ಈಗಲೂ ಮುಂದುವರಿ ಯುತ್ತಿದೆ. ಸೌದಿ ಅರೇಬಿಯಾ ಕುರಿತಂತೆ ಬಹಳ ಜನ ಏನು ತಿಳಿದುಕೊಂಡಿದ್ದರು ಎಂದರೆ, ಅದೊಂದು ಶೆರಿಯಾ ಕಾನೂನು ಜಾರಿಯಲ್ಲಿರುವ ಪಕ್ಕಾ ಮುಸ್ಲಿಂ ದೇಶ ಎಂದು ಮಾತ್ರ. ಸೌದಿ ಅರೇಬಿಯಾದಲ್ಲಿ ಶೆರಿಯಾ ಕಾನೂನು ಇರುವುದು ನಿಜವೂ ಹೌದು. ಆದರೆ ಆ ಕಾನೂನು ಇರುವುದು ಕೇವಲ ಸೌದಿ ಅರೇಬಿಯಾ ದಲ್ಲಿ ಮಾತ್ರವಲ್ಲ.

ವಿಶ್ವದ ಸುಮಾರು ಹದಿನೈದು ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. ಕಾನೂನು ಒಂದೇ ಆದರೂ, ಸೌದಿ ಅರೇಬಿಯಾದ ಕಾನೂನಿಗೂ, ತಾಲಿಬಾನ್‌ನ ಕಾನೂನಿಗೂ ಆಚರಣೆಯಲ್ಲಿ ಅಥವಾ ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಸೌದಿ ಅರೇಬಿಯಾದಲ್ಲಿ ಕಳ್ಳತನ ಮಾಡಿದರೆ ಕೈ
ಕಡಿಯುತ್ತಾರಂತೆ ಎನ್ನುವುದರಿಂದ ಹಿಡಿದು ಘೋರ ಅಪರಾಧ ಮಾಡಿದರೆ ತಲೆ ಕಡಿಯುತ್ತಾರೆ ಎಂಬಲ್ಲಿ ಯವರೆಗಿನ ವಿಷಯವನ್ನೇ ಬಹುಷಃ ಎಲ್ಲರೂ
ಕೇಳಿರುವುದು. ಎಷ್ಟೋ ಬಾರಿ ನಾನು ‘ನಮ್ಮ ಬಹುತೇಕ ರಾಜಕಾರಣಿಗಳು ಇಲ್ಲಿದ್ದಿದ್ದರೆ ಅವರಿಗೆ ಕೈಇರುತ್ತಿರಲಿಲ್ಲ’ ಎಂದುಕೊಂಡಿದ್ದಿದೆ!

ಒಂದು ಕಾಲವಿತ್ತು, ಸೌದಿ ಎಂದರೆ ಮಹಿಳೆಯರಿಗೆ ಒಂದು ಚೂರೂ ಸ್ವಾತಂತ್ರ್ಯವಿಲ್ಲದ ಅಘೋಷಿತ ಗೃಹಬಂಧನ. ಅಲ್ಲಿ ಕೆಲಸಕ್ಕೆಂದು ಬಂದ
ವಿದೇಶಿಯರಿಗೂ ಸ್ವಾತಂತ್ರ್ಯವಿಲ್ಲ, ಅಲ್ಲಿಯವರಾಗಲಿ, ಬೇರೆ ದೇಶದವರಾಗಲಿ, ಮನೆಯಿಂದ ಹೊರಗೆ ಬೀಳುವುದಾದರೆ ಮಹಿಳೆಯರು ಬುರ್ಖಾ
ಧರಿಸಿಯೇ ಹೋಗಬೇಕು ಇತ್ಯಾದಿ ನಿಯಮಗಳು. ಈ ದೇಶದಲ್ಲಿ ವಿಶ್ವಮಟ್ಟದ ಯಾವುದೇ ಪಂದ್ಯಾಟಗಳು ನಡೆಯುತ್ತಿರಲಿಲ್ಲ.

ಫುಟ್ಬಾಲ್ ಬಿಟ್ಟರೆ, ಬೇರೆ ಆಟಗಳು ಇದೆಯೋ ಇಲ್ಲವೋ ಎನ್ನುವುದೂ ತಿಳಿಯುತ್ತಿರಲಿಲ್ಲ. ಅಲ್ಲಿಯೂ ಮಹಿಳೆಯರಿಗೆ ಅವಕಾಶವಿರಲಿಲ್ಲ. ಚಿತ್ರಮಂದಿರ ಗಳಿಲ್ಲ. ನಾಟಕ, ನೃತ್ಯ, ಸಂಗೀತ ಕಚೇರಿಗಳೂ ಇಲ್ಲ. ಇನ್ನು ಪಬ, ಬಾರ್, ಡಿಸ್ಕೊ ಅಂತೂ ಕೇಳಲೇಬೇಡಿ. ಹೊಟೇಲ್, ಪಾರ್ಕುಗಳಲ್ಲಿ ಕೂಡ ಪುರುಷರಿಗೆ ಬೇರೆ ಸ್ಥಳ, ಮಹಿಳೆಯರು ಅಥವಾ ಕುಟುಂಬದವರಿಗೆ ಬೇರೆ ಸ್ಥಳ. ಸೌದಿ ಅರೇಬಿಯಾ ಒಂದು ಕಾಲದಲ್ಲಿ ಹೇಗಿತ್ತು ಎಂದರೆ
ಮಹಿಳೆಯರು ಮಹಿಳೆಯರಿಗಾಗಿಯೇ ಮೀಸಲಾದ ಆಸ್ಪತ್ರೆ, ಶಾಲೆ, ಬ್ಯೂಟಿ ಪಾರ್ಲರ್, ಬ್ಯಾಂಕಿನ ಮಹಿಳಾ ಶಾಖೆ ಇತ್ಯಾದಿಗಳಲ್ಲಿ ಮಾತ್ರ ಕೆಲಸ ಮಾಡಬಹುದಾಗಿತ್ತು.

ವಿದೇಶಿ ಮಹಿಳೆಯರು ವೈದ್ಯರು, ದಾದಿಯರು, ಶಿಕ್ಷಕರು ಮತ್ತು ಆಸ್ಪತ್ರೆ, ಶಾಲೆಗಳಲ್ಲಿ ಸ್ವಚ್ಛತೆಯ ಕಾರ್ಯದಲ್ಲಿ ಮಾತ್ರ ಉದ್ಯೋಗ ಮಾಡಬಹು ದಾಗಿತ್ತು. ಅದೆಲ್ಲ ಇರಲಿ, ಮಹಿಳೆಯರು ವಾಹನ ನಡೆಸುವಂತಿರಲಿಲ್ಲ. ಆ ದೇಶ ಭೂಮಿಯ ಮೇಲೇ ಇದ್ದೇವೆಯೋ ಅಥವಾ ಅನ್ಯಗ್ರಹದಲ್ಲಿ
ದೆಯೋ ಎಂದು ಕೇಳುವವರು ಸಾಕಷ್ಟಿದ್ದರು. ಮುಂದುವರಿಯುವುದಕ್ಕಿಂತ ಮೊದಲು ನನ್ನ ಒಂದು ಸಣ್ಣ ಅನುಭವ ಹೇಳುತ್ತೇನೆ. ಸುಮಾರು
ಎರಡೂವರೆ ದಶಕದ ಹಿಂದೆ ನಡೆದ ಘಟನೆ. ನಾಲ್ಕೈದು ಸ್ನೇಹಿತರು ಸೇರಿ ಪೇಟೆಗೆ ಹೋಗಿದ್ದೆವು.

ನಮ್ಮ ಜತೆ ಮಂಗಳೂರು ಮೂಲದ ಮ್ಯಕಾನಿಕ್ ಕೃಷ್ಣ ಕೂಡ ಇದ್ದ. ಆತ ಸೌದಿ ಅರೇಬಿಯಾಕ್ಕೆ ಬಂದು ಒಂದು ತಿಂಗಳು ಮಾತ್ರ ಆಗಿದ್ದರಿಂದ ಅಲ್ಲಿಯ ಕಾನೂನಿನ ಬಗ್ಗೆ ಇನ್ನೂ ಮಾಹಿತಿ ಇರಲಿಲ್ಲ. ಪೇಟೆಯಲ್ಲಿ ಒಂದು ದೊಡ್ಡ ಕಾರು ನಿಂತಿತ್ತು. ಮೂರೋ ನಾಲ್ಕೋ ವರ್ಷದ ಒಂದು ಮುzದ ಮಗು ಕಾರಿನ ಕಿಟಕಿಯಿಂದ ಹೊರಗೆ ಇಣುಕುತ್ತಿತ್ತು. ಬುರ್ಖಾ ಧರಿಸಿದ ಮಗು ಮುಖ ಮುಚ್ಚಿಕೊಂಡಿರಲಿಲ್ಲ (ಅಥವಾ ಕಪ್ಪು ಗೌನ್ ಧರಿಸಿತ್ತು ಎನ್ನಿ). ಬುರ್ಖಾಕ್ಕೆ ಅರಬ್ಬಿ ಭಾಷೆಯಲ್ಲಿ ‘ಅಬಾಯ’ ಎನ್ನುತ್ತಾರೆ. ಕೃಷ್ಣ ಮುದ್ದಾದ ಮಗುವಿನ ನಗು ಕಂಡು ಅದರ ಗಲ್ಲ ಸವರಿದ್ದ. ಎಲ್ಲಾ ದೂರದಲ್ಲಿದ್ದ ಆ ಮಗುವಿನ ತಂದೆ ಅದನ್ನು ನೋಡಿ, ಓಡಿ ಬಂದು ಕೃಷ್ಣನ ಕೊರಳಪಟ್ಟಿ ಹಿಡಿದ. ಹತ್ತಿರದ ಇದ್ದ ಪೊಲೀಸರ ಬಳಿಗೂ ಕರೆದುಕೊಂಡು ಹೋದ. ಭಾರತದಲ್ಲಿ ಅಥವಾ ಪಾಶ್ಚಿಮಾತ್ಯ ದೇಶದಲ್ಲಿ ಮುದ್ದಾದ ಮಗುವಿನ ಗಲ್ಲ ಸವರುವುದು ಸಹಜವಾದ ಕ್ರಿಯೆ. ಅದನ್ನೇ ಮಗುವಿನ ತಂದೆಗೆ ತಿಳಿಸಿ, ಕೃಷ್ಣನನ್ನು ಬಿಡಿಸಿಕೊಂಡು ಬರಲು ಅಂದು ಒಂದು ಗಂಟೆ ಹಿಡಿದಿತ್ತು.

ಮೊದಲು ಹೇಗಿತ್ತು ಎಂದರೆ, ಹೆಣ್ಣು ಮಕ್ಕಳು ಮದುವೆ ಮನೆಗೆ ಹೋಗುವುದಿದ್ದರೂ ಬುರ್ಖಾ ಧರಿಸಿಯೇ ಹೋಗಬೇಕಿತ್ತು. ಎಷ್ಟೇ ಒಳ್ಳೆಯ ವಿನ್ಯಾಸದ ಉಡುಗೆ ತೊಟ್ಟರೂ ಮೇಲೊಂದು ಬುರ್ಖಾ. ಒಂದೇ ಮದುವೆಮನೆಯಲ್ಲಿ ಮಹಿಳೆ ಯರಿಗೆ, ಪುರುಷರಿಗೆ ಪ್ರವೇಶದ್ವಾರವೂ ಬೇರೆ, ಸಭೆ ಸೇರುವ ಸ್ಥಳವೂ ಬೇರೆ. ಮಹಿಳೆಯರ ಸಭೆಯಲ್ಲಿ ಬೇಕಾದರೆ ಬುರ್ಖಾ ತೆಗೆಯಬಹುದಾಗಿತ್ತು ಯಾಕೆಂದರೆ ಅದು ಪುರುಷ ಪ್ರವೇಶ ನಿಷೇಧದ ಸ್ಥಳ. ಆ ಕಾರಣಕ್ಕಾಗಿಯೇ ಸೌದಿ ಅರೇಬಿಯಾದಲ್ಲಿ ಬುರ್ಖಾಗಳಲ್ಲಿಯೂ ಬೇರೆ ಬೇರೆ ವಿನ್ಯಾಸ ಇರುತ್ತಿತ್ತು, ಅದು ಇಂದಿಗೂ ಇದೆ. ಬರೀ ನೂಲಿನಿಂದಷ್ಟೇ
ಅಲ್ಲದೆ, ಬೆಳ್ಳಿ, ಬಂಗಾರದ ನೂಲಿನ ಕಸೂತಿ ಹಾಕಿದ ಬುರ್ಖಾಗಳೂ ಇಲ್ಲಿ ಲಭ್ಯ. ಬಹುಷಃ ಸೌದಿ ಅರೇಬಿಯಾದಲ್ಲಿ ಸಿಗುವಷ್ಟು ಡಿಸೈನರ್ ವೇರ್
ಬುರ್ಖಾಗಳು ಇನ್ನೆಲ್ಲಿಯೂ ಸಿಗಲಿಕ್ಕಿಲ್ಲ. ಬೆಲೆ ಯಲ್ಲಿಯೂ ಅಷ್ಟೇ, ಇವುಗಳ ಮೌಲ್ಯ ಹತ್ತರಿಂದ ಹದಿನೈದು ಲಕ್ಷ ರುಪಾಯಿವರೆಗೂ ಇರುತ್ತದೆ.
ನಮಗೆ ಬೆಲೆ ಹೆಚ್ಚಾಯಿತು ಎಂದೆನಿಸಿದರೂ, ಅಲ್ಲಿಯ ಜನರಿಗೆ ಅದು ಮಾಮೂಲು!

ಇಂತಿರ್ಪ ಸೌದಿ ಅರೇಬಿಯಾದಲ್ಲಿ ಈಗ ಕಾಲ ಬದಲಾಗಿದೆ. ಚಿತ್ರ ಮಂದಿರಗಳು ಆರಂಭಗೊಂಡಿವೆ. ಪಾಪ್, ರ‍್ಯಾಪ್‌ನಂತಹ ಪಾಶ್ಚಿಮಾತ್ಯ
ಸಂಗೀತ ಸಭೆಗಳು ನಡೆಯುತ್ತಿವೆ. ಆ ಕಾನ್ಸರ್ಟ್ಗಳಲ್ಲಿ ಮಹಿಳೆಯರೂ ಭಾಗಿಯಾಗುತ್ತಾರೆ. ಫುಟ್ಬಾಲ್ ಪಂದ್ಯ ನೋಡಲು, ತಮ್ಮ ತಂಡಕ್ಕೆ
ಪ್ರೋತ್ಸಾಹ ನೀಡಲು ಮಹಿಳೆಯರಿಗೆ ಮೈದಾನದ ಒಳಗೆ ಹೋಗಲು ಅವಕಾಶವಿದೆ. ನಿಮಗೆ ಗೊತ್ತಿರಬಹುದು, ಒಂದು ಕಾಲದಲ್ಲಿ ಪ್ರತಿಬಂಧಕ್ಕೊಳಗಾಗಿದ್ದ ಭಾರತದ ಯೋಗಕ್ಕೆ ಇಂದು ಸೌದಿ ಸರಕಾರ ಮಾನ್ಯತೆ ನೀಡಿದೆ. ಯೋಗ ಕಲಿಸಲೆಂದೇ ಸಾಕಷ್ಟು ಕೇಂದ್ರಗಳು ಈಗ ಸೌದಿ ಅರೇಬಿಯಾದಲ್ಲಿ ತಲೆ ಎತ್ತಿ ನಿಂತಿವೆ. ನಿಮಗೆ ಆಶ್ಚರ್ಯವಾಗಬಹುದು, ಅನೇಕ ಸೌದಿ ಪ್ರಜೆಗಳು ಯೋಗ ಕಲಿತು, ಶಿಕ್ಷಕರಾಗಿ ಇತರರಿಗೂ ಕಲಿಸುತ್ತಿದ್ದಾರೆ.

ನೌ– ಮರ್ವಾಯಿ ಎಂಬ ಮಹಿಳೆಗೆ ಯೋಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಭಾರತ ಸರಕಾರ ‘ಪದ್ಮಶ್ರೀ’ ಪ್ರಶಸ್ತಿಯನ್ನೂ ನೀಡಿದೆ.
ಒಂದು ಕಾಲದಲ್ಲಿ ಮಹಿಳೆಯರು ಧರಿಸಲೇಬೇಕಾಗಿದ್ದ ಬುರ್ಖಾ ಈಗ ಕಡ್ಡಾಯವಲ್ಲ. ಅವರು ತಮ್ಮ ಇಷ್ಟದ ಉಡುಗೆ ತೊಡಬಹುದು. ಹಾಗಂತ ಮನ
ಬಂದಂತೆ ಬಟ್ಟೆ ತೊಡುವಂತಿಲ್ಲ. ಸಾರ್ವಜನಿಕವಾಗಿ ಓಡಾಡುವಾಗ ಮೈ ತುಂಬುವ ಬಟ್ಟೆ ಧರಿಸಿ ಓಡಾಡಬೇಕು. ಅಂಗಾಂಗ ಪ್ರದರ್ಶಿಸುವ ಸಣ್ಣ
ಬಟ್ಟೆಯನ್ನೋ ಅಥವಾ ಇನ್ಯಾವುದೋ ರೀತಿಯ ಅಕರಾಳ-ವಿಕರಾಳ ಬಟ್ಟೆ ತೊಡುವಂತಿಲ್ಲ. ಹೆಣ್ಣು ಮಕ್ಕಳು ಮಾತ್ರ ಅಂತಲ್ಲ, ಕೆಲ ವರ್ಷದ ಹಿಂದಿನವೆರೆಗೆ ಗಂಡಸರೂ ಸಾರ್ವಜನಿಕವಾಗಿ ಚಡ್ಡಿ ತೊಟ್ಟು ತಿರುಗುವಂತಿರಲಿಲ್ಲ. ರಸ್ತೆಯ ಮೇಲೆ, ಮಾಲ್ ಗಳಲ್ಲಿ ಬರ್ಮುಡಾ ಚಡ್ಡಿ ತೊಟ್ಟು ಓಡಾಡಿದರೆ ಕಾಲಿಗೆ ಸಣ್ಣ ಛಡಿ ಏಟು ಬೀಳುತ್ತಿತ್ತು. ಮಹಿಳೆಯರ ತಲೆಯ ಕೂದಲು ಕಂಡರೆ ಧರ್ಮ ಗುರುಗಳು ಹತ್ತಿರ ಬಂದು ಕೂದಲು ಮುಚ್ಚಿಕೊಳ್ಳುವಂತೆ ಹೇಳಿ ಹೋಗುತ್ತಿದ್ದರು.

ಹೀಗಿದ್ದ ಸೌದಿ ಅರೇಬಿಯಾದಲ್ಲಿ ಈಗ ಮಹಿಳೆಯರ ಫ್ಯಾಷನ್ ಷೋ ಕೂಡ ನಡೆಯುತ್ತಿದೆ ಎಂದರೆ ನಂಬುತ್ತೀರಾ? ಈಗಾಗಲೇ ನಡೆದದ್ದರಿಂದ
ನಂಬಲೇಬೇಕು! ಇದು ಆರಂಭವಾಗಿ ಸುಮಾರು ಐದು ವರ್ಷಗಳೇ ಕಳೆದವು. ನಿಜ ಸೌದಿ ಅರೇಬಿಯಾದಲ್ಲಿ ಫ್ಯಾಷನ್ ವೀಕ್ ಆರಂಭವಾದದ್ದು
೨೦೧೮ ರ ಎಪ್ರಿಲ್‌ನಲ್ಲಿ. ಅದೇ ವರ್ಷ ಅಕ್ಟೋಬರ್ ನಲ್ಲಿ ಎರಡನೆಯ ಪ್ರದರ್ಶನವೂ ನಡೆಯಿತು. ಕರೋನಾದಿಂದಾಗಿ ಎರಡು ವರ್ಷ ವಿರಾಮ ಬಿಟ್ಟರೆ ಇದು ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಅದಕ್ಕಿಂತ ಮುಂಚೆಯೂ ಸೌದಿ ಅರೇಬಿಯಾದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಆದರೆ ಅದು ಕೆಲವು ಮಹಿಳೆಯರು ಮಾತ್ರ ಸೇರಿಕೊಂಡು ಮಾಡುತ್ತಿದ್ದ ಒಂದು ಸಣ್ಣ ಕಾರ್ಯಕ್ರಮವಾಗಿರುತ್ತಿತ್ತು. ವಿನ್ಯಾಸಕರು, ಮಾಡೆಲ್‌ಗಳು ಪ್ರೇಕ್ಷಕರು ಎಲ್ಲರೂ ಸ್ಥಳೀಯ ಮಹಿಳೆಯರೇ ಆಗಿರುತ್ತಿದ್ದರು. ಅಲ್ಲಿ ಪುರುಷರಿಗೆ ಅವಕಾಶವೂ ಇರುತ್ತಿರಲಿಲ್ಲ, ಪ್ರವೇಶವೂ ಇರುತ್ತಿರಲಿಲ್ಲ. ಈಗ
ವಿದೇಶದ ಡಿಸೈನರ್, ಮಾಡೆಲ್‌ಗಳಿಗೂ ಅವಕಾಶ ಇರುವುದರಿಂದ ಸೌದಿ ಫ್ಯಾಷನ್ ವೀಕ್ ಅಂತಾರಾಷ್ಟ್ರೀಯ ಮಟ್ಟಕ್ಕೇರಿದೆ. ಇತ್ತೀಚೆಗೆ ನಡೆದ
ಶೋದಲ್ಲಿ ಹದಿನೆಂಟು ವಿದೇಶಿ ವಿನ್ಯಾಸಕರು ಭಾಗವಹಿಸಿದ್ದರು. ಮೊದಲ ಫ್ಯಾಶನ್ ಶೋದಲ್ಲಿ ಪುರುಷರಿಗೆ ಪ್ರವೇಶ ಇರಲಿಲ್ಲ, ಒಳಗೆ ಕ್ಯಾಮೆರಾ
ಕೊಂಡು ಹೋಗುವಂತೆಯೂ ಇರಲಿಲ್ಲ. ಈಗ ಅದಕ್ಕೆ ನಿರ್ಬಂಧವಿಲ್ಲ. (ಈಗಿರುವ ಒಂದೇ ನಿರ್ಬಂಧವೆಂದರೆ ತುಂಡು ಉಡುಗೆ ತೊಡಬಾರದು
ಎಂಬುದು ಮಾತ್ರ) ಸೌದಿ ಅರೇಬಿಯಾ ಎಂದಲ್ಲ, ಯಾವ ದೇಶದ ಆದರೂ ರಾತ್ರಿ ಬೆಳಗಾಗುವುದರಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. ಇಷ್ಟು
ವರ್ಷದ ನಂತರವಾದರೂ ಬದಲಾವಣೆಯ ಪಥ ದತ್ತ ಸಾಗುತ್ತಿದೆಯಲ್ಲ ಎಂಬುದು ಅಲ್ಲಿಯ ಜನರಿಗೆ ಇರುವ ಸಮಾಧಾನ. ಅಷ್ಟಾಗಿಯೂ ನಿಮಗೆ
ಇನ್ನೊಂದು ವಿಷಯ ಗೊತ್ತಾ? ವಿಶ್ವದ ಅತಿ ದೊಡ್ಡ ಲಾಭರಹಿತ ಫ್ಯಾಷನ್ ಕೌಂಸಿಲ್ ‘ಅರಬ್ ಫ್ಯಾಷನ್ ಕೌಂಸಿಲ್’ ಇರುವುದು ಅರಬ್ ರಾಷ್ಟ್ರವಾದ
ಯುಎಇಯ ದುಬೈನಲ್ಲಿ!

ಫ್ಯಾಷನ್ ವೀಕ್ ಮೊದಲ ಬಾರಿ ನಡೆದದ್ದು ಸುಮಾರು ಎಂಬತ್ತು ವರ್ಷಗಳ ಹಿಂದೆ (೧೯೪೩ ರಲ್ಲಿ). ಅದಾಗಿ ಹದಿನೈದು ವರ್ಷದ ನಂತರ
ಮಿಲಾನ್ ಮತ್ತು ಮೂವತ್ತು ವರ್ಷದ ನಂತರ ಪ್ಯಾರಿಸ್‌ನಲ್ಲಿ ಆರಂಭವಾಯಿತು. ಇಂದು ಮಿಲಾನ್ ಮತ್ತು ಪ್ಯಾರಿಸ್ ಫ್ಯಾಷನ್ ವೀಕ್ ಎಂದರೆ ವಿಶ್ವವೇ ಒಮ್ಮೆ ತಿರುಗಿ ನೋಡುವಂತಾಗಿದೆ. ಫ್ಯಾಷನ್ ಜಗತ್ತಿನಲ್ಲಿರುವವರಿಗೆ ಅದು ಹಿಮಾಲಯದ ತುದಿ ಇದ್ದಂತೆ. ಈಗ ಸುಮಾರು ಎಪ್ಪತ್ತೈದು ವರ್ಷದ ನಂತರ ಸೌದಿ ಅರೇಬಿಯಾಕ್ಕೆ ಫ್ಯಾಷನ್ ಅಧಿಕೃತವಾಗಿ ‘ಎಂಟ್ರಿ’ ಕೊಟ್ಟಿದೆ.

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೇಶ ಮುನ್ನಡೆಸುವ ಉಸ್ತುವಾರಿ ಹೊತ್ತುಕೊಂಡಾಗಿಂದ ಸೌದಿ ಅರೇಬಿಯಾ ಸಾಕಷ್ಟು ಬದಲಾವಣೆ ಕಂಡಿದೆ. ದೇಶದ ಆರ್ಥಿಕತೆಯ ಬಗ್ಗೆ ಬೇರೆಯದೇ ‘ಬ್ಲೂ-ಪ್ರಿಂಟ್’ ಹೊಂದಿರುವ ‘ಎಮ್ ಬಿಎಸ್’ ಪ್ರವಾಸೋದ್ಯಮ, ಸಾಮಾಜಿಕ ಬದಲಾವಣೆಗೂ ಉತ್ಸುಕರಾಗಿದ್ದಾರೆ. ಭಾರತದ ಭಾಷೆಯಲ್ಲಿ ಹೇಳುವುದಾದರೆ, ‘ಯುವಜನತೆಯ ಆಶಯಗಳನ್ನು ಅರ್ಥಮಾಡಿಕೊಂಡ ಯುವ ನೇತಾರ.’ ಚಲನಚಿತ್ರ ಪ್ರದರ್ಶನ, ಮಹಿಳೆಯರಿಗೆ ವಾಹನ ನಡೆಸಲು ಪರವಾನಿಗೆ, ಯೊಗಕ್ಕೆ ಕ್ರೀಡೆಯ ಮಾನ್ಯತೆ, ಫ್ಯಾಷನ್ ಷೋ, ಸಂಗೀತ ಕಛೇರಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ, ಇವೆಲ್ಲ ಎಮ್ ಬಿಎಸ್‌ರ ಕಾರ್ಯಕ್ಷಮತೆಗೆ ಕೆಲವು ಉದಾಹರಣೆಗಳು ಅಷ್ಟೇ.

ಇರಲಿ, ಇಲ್ಲಿ ಒಟ್ಟಾರೆ ಗಮನಿಸಬೇಕಾದ ಅಂಶ ಏನೆಂದರೆ, ಸೌದಿ ಅರೇಬಿಯಾದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ ಎಂಬುದು. ಸೌದಿ ಅರೇಬಿಯಾ
ಎಂದರೆ ಏನೂ ಗೊತ್ತಿಲ್ಲದ, ಅನಕ್ಷರಸ್ಥರ ದೇಶ, ಸಂಸ್ಕಾರ ಇಲ್ಲದ, ಪೆಟ್ರೋಲ್-ಡೀಸೆಲ್ ಮಾರಿ ಬಂದ ಹಣದಿಂದ ಐಷಾರಾಮಿ ಜೀವನ
ನಡೆಸುವವರಿಂದ ತುಂಬಿದ ದೇಶ ಎಂದೇ ಹೇಳಲಾಗುತ್ತಿತ್ತು. ಒಂದು ಕಾಲದಲ್ಲಿ ಅದು ನಿಜ ಇದ್ದಿರಲೂ ಬಹುದು. ಆದರೆ ನಾನು ನೋಡಿದಂತೆ
ಆ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಭಾವಂತರಿಗೆ ಅವಕಾಶ ಇರಲಿಲ್ಲ ಅಷ್ಟೇ. ಅದಕ್ಕೆ ಕಾರಣ ಏನೂ ಇರಬಹುದು. ಅದನ್ನೆಲ್ಲ ಈಗ
ಕೆದಕುವುದು ಸಮಂಜಸವಲ್ಲ. ತನ್ನ ಎಲ್ಲ ಕಟ್ಟುಪಾಡುಗಳನ್ನೂ ಮೀರಿ ಸೌದಿ ಅರೇಬಿಯಾ ಇಂದು ಜಗತ್ತಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿರುವ
ರೀತಿ ಮಾತ್ರ ಆಶ್ಚರ್ಯಕರವೂ ಹೌದು, ಅದ್ಭುತವೂ ಹೌದು, ಕುತೂಹಲಕಾರಿಯೂ ಹೌದು, ಪ್ರಶಂಸನೀಯವೂ ಹೌದು.