Thursday, 12th December 2024

ಮಧ್ಯಂತರ ಉಪವಾಸ: ಏನು? ಏಕೆ ?

ವೈದ್ಯ ವೈವಿಧ್ಯ

drhsmohan@gmail.com

ಮಧ್ಯಂತರ ಉಪವಾಸ. ಇದು ಒಬ್ಬ ವ್ಯಕ್ತಿ ತೂಕ ಕಡಿಮೆ ಮಾಡಲು ಅನುಸರಿಸಬೇಕಾದ ಆಹಾರ ಕ್ರಮ ಎಂದು ಹೇಳಬಹುದು. ಅಷ್ಟೇ ಅಲ್ಲದೇ ಅದು ಹಲವು ಜೀವನ ಕ್ರಮ ಆಧಾರಿತ ದೀರ್ಘಕಾಲೀನ ಕಾಯಿಲೆಗಳು ಬರದಿರುವಂತೆ ಸಹ ಮಾಡುತ್ತದೆ. ಈ ಮಧ್ಯಂತರ ಉಪವಾಸ ಎಂದರೆ ನಿಜವಾಗಿಯೂ ಏನು ಎಂಬುದನ್ನು ಪರಿಶೀಲಿಸೋಣ.

ಉಪವಾಸ ಮತ್ತು ಆಹಾರ ಸೇವಿಸುವ ಅವಧಿ – ಈ ಮಧ್ಯಂತರ ಉಪವಾಸ ಕ್ರಮದಲ್ಲಿ ಹಲವು ರೀತಿಗಳಿವೆ. ದಿವಸದ ೧೨ ಗಂಟೆ ಉಪವಾಸ ಇರುವುದರ ಜೊತೆಗೆ ಸತತವಾದ ದಿನಗಳ ಉಪವಾಸ – ಒಂದು ವಾರದಲ್ಲಿ ಹಲವು ರೀತಿಯಲ್ಲಿ ಮಾಡಬಹು ದಾದ ಕ್ರಮಗಳಿವೆ. ತಜ್ಞರು ಮುಖ್ಯವಾಗಿ ಮೂರು ರೀತಿಯನ್ನು ಗುರುತಿಸುತ್ತಾರೆ.

೧. ಪರಿಷ್ಕೃತ ಉಪವಾಸ ಅಥವಾ ೫:೨ ರೀತಿಯ ಆಹಾರ ಕ್ರಮ: ವಾರದಲ್ಲಿ ಎರಡು ದಿನ ಉಪವಾಸ (ಸತತ ಉಪವಾಸದ ದಿನಗಳಾಗಿರ ಬಾರದು) ಹಾಗೂ ಉಳಿದ ಐದು ದಿನಗಳು ಎಂದಿನ ರೀತಿಯ ಆಹಾರ ಸೇವನೆ.

೨. ದಿನ ಬಿಟ್ಟು ದಿನ ಉಪವಾಸ: ಒಂದು ದಿನ ಎಂದಿನ ಸಹಜ ಆಹಾರ ಸೇವನೆ ಮಾಡಿ ಅದರ ನಂತರದ ದಿನ ಸಂಪೂರ್ಣ ಉಪವಾಸ.

೩. ಸಮಯ ಆಧಾರಿತ ಆಹಾರ ಸೇವನೆ: ಇದರಲ್ಲಿ ದೈನಂದಿನ ಆಹಾರ ಸೇವನೆಯು ದಿನದ ೪-೧೨ ಗಂಟೆಯ ಅವಽಗೆ
ಸೀಮಿತಗೊಳ್ಳುತ್ತದೆ. ಹಾಗಾದಾಗ ಉಳಿದ ೧೨-೨೦ ಗಂಟೆಯ ಅವಧಿಯಲ್ಲಿ ಉಪವಾಸ. ಆಹಾರ ತೆಗೆದುಕೊಳ್ಳುವ ಅವಧಿ ಯಲ್ಲಿ ಯಾವುದೇ ಕ್ಯಾಲೋರಿ ಮಿತಿ ಇಲ್ಲದೆ ಆಹಾರ ತೆಗೆದುಕೊಳ್ಳಬಹುದು. ಈ ಮೂರರಲ್ಲಿ ಸಮಯ ಆಧಾರಿತ ಆಹಾರ ಸೇವನೆಯು ಹೆಚ್ಚು ಜನಪ್ರಿಯವಾದುದು.

ಇದರಲ್ಲಿ ೧೬-೮ ಕ್ರಮ ಎಂದರೆ ೮ ಗಂಟೆಗಳ ಅವಧಿಯಲ್ಲಿ ಆಹಾರ ಸೇವನೆ, ಉಳಿದ ೧೬ ಗಂಟೆಗಳ ಕಾಲ ಉಪವಾಸ-ಇದನ್ನು ತಜ್ಞರು ಹೆಚ್ಚಾಗಿ ಸೂಚಿಸುತ್ತಾರೆ. ಸರ್ಕೇಡಿಯನ್ ರಿದಂ ಮಧ್ಯಂತರ ಉಪವಾಸ ಮತ್ತು ಸಮಯ ಮಿತಿ
ಉಪವಾಸ- ಇವುಗಳ ಮೇಲಿನ ಹೆಚ್ಚಿನ ಸಂಶೋಧನೆಯು ನಮ್ಮ ದೇಹದ ಸರ್ಕಿಡಿಯನ್ ರಿದಮ್ ಮೇಲೆ ಈ ಉಪವಾಸವು ಏನು ಪ್ರಭಾವ ಬೀರುತ್ತದೆ ಎಂಬುದನ್ನು ಮುಖ್ಯವಾಗಿ ಗಮನಕ್ಕೆ ತೆಗೆದುಕೊಳ್ಳುತ್ತದೆ. ಸರ್ಕೇಡಿಯನ್ ರಿದಂ ಅಥವಾ
ಸರ್ಕೇಡಿಯನ್ ಗಡಿಯಾರ-೨೪ ಗಂಟೆಯ ದೇಹದ ಮೆಟಬಾಲಿಸಂ, ಇದರಲ್ಲಿ ನಿದ್ದೆ -ಎಚ್ಚರಗೊಳ್ಳುವ ಸರದಿ, ರಕ್ತದೊತ್ತಡ, ವ್ಯಕ್ತಿಯ ಮೂಡ್ ಅನ್ನು ನಿಯಂತ್ರಿಸುವುದು, ಹಾರ್ಮೋನುಗಳ ನಿಯಂತ್ರಣ-ಇವೆಲ್ಲಾ ಸೇರಿವೆ.

ಇದು ದೈನಂದಿನ ಬೆಳಕು-ಕತ್ತಲೆ, ಆಹಾರ ಸೇವಿಸುವ ಕ್ರಮ ಹಾಗೂ ಆಹಾರ ತೆಗೆದುಕೊಳ್ಳುವ ಸಮಯ-ಇವುಗಳನ್ನು ಅವಲಂಬಿಸಿದೆ. ದಿನದಲ್ಲಿ ಬಹಳ ಸುದೀರ್ಘ ಕಾಲ ಅಂದರೆ ೧೨-೧೫ ಗಂಟೆಗಳ ಕಾಲ ಆಹಾರ ತೆಗೆದುಕೊಳ್ಳುವುದರಿಂದ ದೈನಂದಿನ ಸರ್ಕೇಡಿಯನ್ ರಿದಮ್‌ಗೆ ವ್ಯತ್ಯಯ ಬರುತ್ತದೆ. ಹಾಗೆಯೇ ದೀರ್ಘಕಾಲೀನ ಕಾಯಿಲೆಗಳಾದ ಹೃದಯದ
ಕಾಯಿಲೆ, ಕ್ಯಾನ್ಸರ್ ಮತ್ತು ಟೈಪ್ ೨ ರೀತಿಯ ಡಯಾಬಿಟಿಸ್ ಇವು ಬರುವ ಸಾಧ್ಯತೆ ಜಾಸ್ತಿಯಾಗುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಈ ಸಮಯ ಮಿತಿ ಆಹಾರ ಸೇವನೆಯ ಮುಖ್ಯ ಉದ್ದೇಶ ಎಂದರೆ ರಾತ್ರಿಯ ಹೊತ್ತಿನ ಪ್ರವಾಸದ ಅವಧಿಯನ್ನು ಲಂಬಿಸಿ ಹಗಲು ಆಹಾರ ಸೇವಿಸುವ ಸಮಯವನ್ನು ಕಡಿಮೆ ಮಾಡುವುದು.

ಈ ಉಪವಾಸದ ಲಾಭಗಳು : ಇದರ ಲಾಭ ಪಡೆಯಲು ಕನಿಷ್ಠ ೧೨ ಗಂಟೆಗಳ ಕಾಲ ಉಪವಾಸ ಮಾಡಿದರೆ ಒಳ್ಳೆಯದು, ೧೬ ಗಂಟೆಗಳ ಕಾಲದ ಉಪವಾಸ ಅತ್ಯುತ್ತಮ ಎಂದು ತಜ್ಞರ ಅಭಿಪ್ರಾಯ. ಸುದೀರ್ಘ ೧೨-೩೬ ಗಂಟೆಗಳ ಕಾಲದ ಉಪವಾಸದ ಅವಧಿಯಲ್ಲಿ ಲಿವರ್ ನಲ್ಲಿರುವ ಗ್ಲೈಕೋಜನ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ, ಹಾಗೆಯೇ ದೇಹದ
ಮೆಟಬಾಲಿಕ್ ಕ್ರಿಯೆ ಬದಲಾವಣೆಗೊಳ್ಳುತ್ತದೆ. ಆರೋಗ್ಯದ ಧನಾತ್ಮಕ ಬದಲಾವಣೆಗಳು ನಮಗೆ ಕಂಡು ಬರುತ್ತವೆ. ಮುಖ್ಯವಾದ ಲಾಭಗಳು.

೧. ಕೊಲೆಸ್ಟರಾಲ್ ಮಟ್ಟ ಉತ್ತಮ ಗೊಳ್ಳುವುದು: ಮಧ್ಯಂತರ ಉಪವಾಸವು ಒಟ್ಟು ಕೊಲೆಸ್ಟರಾಲ್‌ನ ಮಟ್ಟ, ಟ್ರೈಗ್ಲಿಸರೈಡ್
ಗಳು, ಎಲ್‌ಡಿಎಲ್ ಕೊಲೆಸ್ಟರಾಲ್ ಅಥವಾ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಹಾಗೆಯೇ ಹೆಚ್‌ಡಿಎಲ್ ಅಥವಾ ಒಳ್ಳೆಯ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟೂ ಕೊಲೆಸ್ಟರಾಲ್, ಎಲ್‌ಡಿಎಲ್ ಕೊಲೆಸ್ಟರಾಲ್ ಮತ್ತು ಟ್ರೈ ಗ್ಲಿಸರೈಡ್‌ನ ಮಟ್ಟ ತುಂಬಾ ಜಾಸ್ತಿ. ಆದರೆ ಹೃದಯದ ಕಾಯಿಲೆಗಳು ಆರಂಭವಾಗಲು ರಿಸ್ಕ್ ಅಂಶಗಳು.

೨. ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ : ಸಮಯ ಮಿತಿ ಆಹಾರ ಸೇವನೆಯು ದೇಹದ ಇನ್ಸುಲಿನ್ ರೆಸಿಸ್ಟನ್ಸ್ ಕಡಿಮೆ ಮಾಡಿ ಹಾಗೂ ಇನ್ಸುಲಿನ್ ಸೆನ್ಸಿಟಿವಿಟಿ ಜಾಸ್ತಿ ಮಾಡಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಿಂದ ಉಪವಾಸದ ಸಮಯದ ರಕ್ತದಲ್ಲಿನ ಸಕ್ಕರೆಯ ಅಂಶ ಹಾಗೂ ಗ್ಲೈಕೇಟೆಡ್ ಹಿಮೋಗ್ಲೋಬಿನ್ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ.
ವಯಸ್ಕ ಪುರುಷರಲ್ಲಿ ಕೈಗೊಳ್ಳಲಾದ ಹಲವು ಪ್ರಯೋಗಗಳಲ್ಲಿ ಟೈಪ್ ೨ ಡಯಾಬಿಟಿಸ್ ಇರುವ ವ್ಯಕ್ತಿಗಳಲ್ಲಿ ಈ ಸಮಯ ಮಿತಿ ಆಹಾರ ಸೇವನೆ ಪಾಲಿಸುವುದರಿಂದ ಇನ್ಸುಲಿನ್ ತೆಗೆದುಕೊಳ್ಳಬೇಕಾದ ಅವಶ್ಯಕತೆಯನ್ನು ಬಹಳಷ್ಟು ಕಡಿಮೆ
ಮಾಡುತ್ತದೆ.

೩. ದೇಹದಲ್ಲಿನ ಬದಲಾವಣೆಗಳು : ಈ ರೀತಿಯ ಮಧ್ಯಂತರ ಉಪವಾಸವು ದೇಹದ ತೂಕ ಮತ್ತು ಕಾಂಪೋಸಿಶನ್‌ನಲ್ಲಿ ಬದಲಾವಣೆಗಳು ತೀರಾ ಗಮನಾರ್ಹವಾಗಿ ಕಂಡು ಬರುತ್ತದೆ. ಈ ರೀತಿಯ ಮಧ್ಯಂತರ ಉಪವಾಸ ಕೈಗೊಂಡ ೮ ವಾರ ಗಳಲ್ಲಿ ಶೇಕಡ ೩ ರಿಂದ ೭ ರಷ್ಟು ದೇಹದ ತೂಕ ಕಡಿಮೆಯಾಗುವುದನ್ನು ಹಲವು ಅಧ್ಯಯನಗಳು ದೃಢೀಕರಿಸಿವೆ. ಹಾಗೆಯೇ
ಈ ರೀತಿಯ ಉಪವಾಸವು ದೇಹದ ಕೊಬ್ಬಿನ ಅಂಶವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

೧೪:೧೦ ರೀತಿಯ ಉಪವಾಸ-೧೦ ಗಂಟೆಗಳ ಆಹಾರ ಸೇವನೆ ಮತ್ತು ೧೪ ಗಂಟೆಗಳ ಉಪವಾಸವು ಮೆಟಬಾಲಿಕ್ ಸಿಂಡ್ರೋಮ್‌ನ ಮೇಲೆ ಪ್ರಭಾವ ಬೀರಿ ಸೊಂಟದ ಸುತ್ತಳತೆ ಕಡಿಮೆ ಮಾಡುತ್ತದೆ,ದೇಹದ ಕೊಬ್ಬಿನ ಅಂಶ ಕಡಿಮೆ
ಕಡಿಮೆ ಮಾಡುತ್ತದೆ, ಹೊಟ್ಟೆಯೊಳಗಿನ ಕೊಬ್ಬನ್ನೂ ಕಡಿಮೆ ಮಾಡುತ್ತದೆ. ಹಾಗಾಗಿ ಮಧ್ಯಂತರ ಉಪವಾಸವು ಹೃದಯ ಕಾಯಿಲೆ ಮತ್ತು ಡಯಾಬಿಟಿಸ್‌ನ ರಿಸ್ಕ್ ಅಂಶಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

೪. ಮೆದುಳಿನಲ್ಲಿ ಹೊಸ ನರ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ಕೊಡುತ್ತದೆ. ಇದರಿಂದ ಮೆದುಳು ಚುರುಕು ಕೊಳ್ಳುತ್ತದೆ, ವ್ಯಕ್ತಿಯ ಮೂಡ್ ಉತ್ತಮಗೊಳ್ಳುತ್ತದೆ, ಕೆಲಸದಲ್ಲಿ ಗಮನ ಕೇಂದ್ರೀಕರಿಸುವುದು ಉತ್ತಮವಾಗುತ್ತದೆ. ನೆನಪಿನ ಶಕ್ತಿ ವೃದ್ಧಿಗೊಳ್ಳುತ್ತದೆ.

೫. ಇನ್ನಿತರ ಆರೋಗ್ಯದ ಲಾಭಗಳು : ೨೦೧೫ ರಲ್ಲಿ ೨೬೫೦ ಮಹಿಳೆಯರಲ್ಲಿ ಈ ಬಗ್ಗೆ ಅಧ್ಯಯನ ಕೈಗೊಳ್ಳಲಾಯಿತು. ಸಂಜೆಯ ಹೊತ್ತು ಕ್ಯಾಲೋರಿ ಕಡಿಮೆ ಮಾಡಿ ರಾತ್ರಿಯ ಹೊತ್ತು ಬಹಳ ಕಾಲ ಉಪವಾಸವಿರುವುದರಿಂದ ಹಲವು ರೀತಿಯ
ಉರಿಯೂತದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಯಿತು. ಹಾಗೆಯೇ ಸ್ತನದ ಕ್ಯಾನ್ಸರ್ ಕಾಯಿಲೆಯು ಬಹಳಷ್ಟು
ಕಡಿಮೆ ಆದದ್ದು ಗಮನಕ್ಕೆ ಬಂದಿದೆ. ೧೬ ವರ್ಷಗಳ ಕಾಲ ೨೬೦೯೨ ವಯಸ್ಕ ಪುರುಷರಲ್ಲಿ ಕೈಗೊಂಡ ಅಧ್ಯಯನದಲ್ಲಿ ರಾತ್ರಿಯ ಹೊತ್ತಿನ ಉಪವಾಸ ಅಥವಾ ಸಮಯ ಮಿತಿ ಆಹಾರ ಸೇವನೆಯಿಂದ ಹೃದಯದ ಕಾಯಿಲೆ ಬರುವ ಸಾಧ್ಯತೆ ಬಹಳಷ್ಟು ಕಡಿಮೆಯಾಯಿತು.

ಹಾಗೆಯೇ ವ್ಯಕ್ತಿಯ ಆಯಸ್ಸು ಗಮನಾರ್ಹವಾಗಿ ಜಾಸ್ತಿ ಆಯಿತು. ಮತ್ತು ನರಗಳ ಡಿಜನರೇಟಿವ್ ಕಾಯಿಲೆ ಉದಾ:
ಪಾರ್ಕಿನ್ ಸನ್ ಕಾಯಿಲೆ ಬರುವ ಸಾಧ್ಯತೆ ಬಹಳಷ್ಟು ಕಡಿಮೆಯಾಯಿತು.

ಋಣಾತ್ಮಕ ಪರಿಣಾಮಗಳು
ಮೇಲೆ ತಿಳಿಸಿದ ಹಲವು ಧನಾತ್ಮಕ ಪರಿಣಾಮಗಳ ಮಧ್ಯೆಯೂ ಕೆಲವು ಋಣಾತ್ಮಕ ಪರಿಣಾಮಗಳು ಈ ಮಧ್ಯಂತರ ಉಪವಾಸದಿಂದ ಇದೆ. ಹಸಿವೆಯಾಗುವಾಗ ವಿಪರೀತ ರೀತಿಯಲ್ಲಿ ಆಗಿ ವ್ಯಕ್ತಿಯನ್ನು ಕಂಗೆಡಿಸುತ್ತದೆ. ಆತ ಬಹಳಷ್ಟು ಚಡಪಡಿಕೆಗೆ ಒಳಗಾಗುತ್ತಾನೆ. ಆತನ ಮೂಡ್ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ. ಆಹಾರದ ಬಗ್ಗೆಯೇ ಆತ ಯೋಚಿಸುತ್ತಿರು ತ್ತಾನೆ.

ತೀವ್ರ ರೀತಿಯಲ್ಲಿ ಸುಸ್ತಾಗುತ್ತಾನೆ. ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಮಿತಿಮೀರಿ ಆಹಾರ ಸೇವಿಸುತ್ತಾನೆ. ಯಾವುದೇ ಕೆಲಸವನ್ನು ಗಮನವಿಟ್ಟು ಮಾಡಲು ಸಾಧ್ಯವಾಗುವುದಿಲ್ಲ. ಈ ಮಧ್ಯಂತರ ಉಪವಾಸದ ಮೇಲಿನ ಹೆಚ್ಚಿನ ಸಂಶೋಧನೆಗಳು ಪ್ರಾಣಿಗಳಲ್ಲಿ ಕೈಗೊಂಡಿದ್ದು, ದೀರ್ಘಕಾಲೀನ ಮಾನವರ ಮೇಲಿನ ಸಂಶೋಧನೆ ಬಹಳ ಕಡಿಮೆ ಆಗಿವೆ ಎನ್ನಲಾಗಿದೆ. ಅಲ್ಲದೇ ೧೦೪ ರಲ್ಲಿ ಕೇವಲ ೬ ಮಧ್ಯಂತರ ಉಪವಾಸದ ಆರೋಗ್ಯದ ಲಾಭಗಳು ಉತ್ತಮ ಗುಣಮಟ್ಟದ ಸಂಶೋಧನೆಯಿಂದ ಹೊರಬಂದಿದ್ದು ಉಳಿದವು  ಕಳಪೆ ಗುಣಮಟ್ಟದ ಸಂಶೋಧನೆಗಳು ಎಂದು ಗಣಿಸಲಾಗಿದೆ.

ಹಾಗಾಗಿ ಉತ್ತಮ ಗುಣಮಟ್ಟದ ದೀರ್ಘಕಾಲೀನ ಮಾನವರ ಮೇಲಿನ ಸಂಶೋಧನೆಗಳು ತೀರಾ ಅಗತ್ಯ ಎಂದು
ವಿಜ್ಞಾನಿಗಳ ಅಭಿಮತ.

ಮಧ್ಯಂತರ ಉಪವಾಸಕ್ಕೆ ಪರ್ಯಾಯವಿಲ್ಲವೇ? ಮೊದಲು ತಿಳಿಸಿದ ಆರೋಗ್ಯದ ದೃಷ್ಟಿಯಿಂದ ಲಾಭಕರ ಅಂಶಗಳಿಗೆ ಮಧ್ಯಂತರ ಉಪವಾಸ ಮಾತ್ರ ಒಂದೇ ಮಾರ್ಗವಲ್ಲ.

ಕ್ಯಾಲೋರಿಗಳನ್ನುಕಡಿಮೆ ಮಾಡುವುದು: ದಿವಸದಲ್ಲಿ ಬೇಕಾದ ಶಕ್ತಿಯ ಶೇಕಡ ೨೫ ರಷ್ಟು ಕ್ಯಾಲೊರಿಗಳಷ್ಟು ಆಹಾರವನ್ನು ಕಡಿಮೆ ಮಾಡುವುದು ಈ ದಿಸೆಯಲ್ಲಿ ಒಂದು ಉತ್ತಮ ಪರ್ಯಾಯ ಮಾರ್ಗ ಎನ್ನಲಾಗಿದೆ. ಹಾಗೆಂದು ಇದರಲ್ಲಿ ಆಹಾರ ತೆಗೆದು ಕೊಳ್ಳುವ ಸಮಯವನ್ನು ಬದಲಿಸುವ ಅಗತ್ಯವಿಲ್ಲ. ಈ ಕ್ರಮದಲ್ಲಿ ಲಭ್ಯವಾಗುವ ಆರೋಗ್ಯದ ಲಾಭಗಳು
ಮಧ್ಯಂತರ ಉಪವಾಸ ಕ್ರಮದಿಂದ ಲಭ್ಯವಾಗುವ ಆರೋಗ್ಯದ ಲಾಭಗಳಿಗಿಂತ ಏನೂ ಕಳಪೆ ಇಲ್ಲ ಎನ್ನಲಾಗಿದೆ. ತೂಕ ಮತ್ತು ಕೊಬ್ಬಿನ ಅಂಶ ಕಡಿಮೆಯಾಗುವಿಕೆ, ಮೆಟಬಾಲಿಕ್ ರಿಸ್ಕ್ ಅಂಶಗಳು ಎಲ್ಲವೂ ಎರಡೂ ಕ್ರಮಗಳಿಂದ ಒಂದೇ
ಗುಣಮಟ್ಟದಲ್ಲಿರುತ್ತವೆ ಎನ್ನಲಾಗಿದೆ. ಆದರೆ ದೀರ್ಘಕಾಲದ ಫಲಿತಾಂಶದ ದೃಷ್ಟಿಯಿಂದ ಒಬ್ಬ ವ್ಯಕ್ತಿ ಮಧ್ಯಂತರ ಉಪವಾಸವನ್ನು ಬಹಳ ಸುದೀರ್ಘ ಕಾಲ ಮಾಡಬಹುದು, ಕ್ಯಾಲೋರಿ ಕಡಿಮೆ ಮಾಡುವ ಕ್ರಮವನ್ನು ಹೀಗೆ ದೀರ್ಘಕಾಲ
ಮಾಡುವುದು ಕಷ್ಟ ಎನ್ನಲಾಗಿದೆ.

ಮೆಡಿಟರೇನಿಯನ್ ಆಹಾರ ಕ್ರಮ
ಹಳೆಯ ಆಹಾರ ಕ್ರಮಗಳಿಗನುಗುಣವಾಗಿ ಈ ಮೆಡಿಟರೇನಿಯನ್ ಆಹಾರ ಕ್ರಮ ರೂಪಿತವಾಗಿದೆ. ಮಧ್ಯಂತರ ಉಪವಾಸದ ರೀತಿಯಲ್ಲಿಯೇ ಸುದೀರ್ಘ ಕಾಲ ಈ ಮೆಡಿಟರೇನಿಯನ್ ಆಹಾರ ಕ್ರಮ ಪಾಲಿಸುವುದರಿಂದ ೫ ವರ್ಷಗಳ ನಂತರ
ಹೃದಯಾಘಾತ ಮತ್ತು ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಶೇ. ೩೦ ರಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಹಾಗೆಯೇ ಮತ್ತೊಂದು ಅಧ್ಯಯನದಲ್ಲಿ ಈ ಆಹಾರ ಕ್ರಮ ಪಾಲಿಸುವುದರಿಂದ ದೊಡ್ಡ ಕರುಳಿನ (ಕೋಲನ್) ಕ್ಯಾನ್ಸರ್ ಬರುವ ಸಾಧ್ಯತೆ ಬಹಳಷ್ಟು ಕಡಿಮೆಯಾಗುತ್ತದೆ, ಹಾಗೆಯೇ ಪಾರ್ಕಿನ್ ಸನ್ ಕಾಯಿಲೆಯಲ್ಲಿ ನರಜೀವಕೋಶಗಳ ನಷ್ಟವನ್ನು
ಬಹಳ ಕಡಿಮೆ ಮಾಡುತ್ತದೆ ಎಂದು ಗೊತ್ತಾಗಿದೆ. ಮೆಡಿಟರೇನಿಯನ್ ಸಮುದ್ರದ ಆಸು ಪಾಸಿನ ದೇಶಗಳಾದ ಗ್ರೀಸ್, ಇಟಲಿ ಮುಂತಾದ ದೇಶಗಳಲ್ಲಿ ಪ್ರಚಲಿತವಿರುವ ಸಸ್ಯಾಹಾರದ ಆಹಾರ ಕ್ರಮ. ಇದರಲ್ಲಿ ಇಡಿಯ ಕಾಳುಗಳು ತರಕಾರಿ, ಸೊಪ್ಪಿನ ತರಕಾರಿ, ವಿವಿಧ ಹಣ್ಣುಗಳು, ಗಿಡಮೂಲಿಕೆಗಳು ನಟ್‌ಗಳು – ಈ ತರಹದವು ಜಾಸ್ತಿ ಇರುತ್ತವೆ. ಈ ರೀತಿಯ ಆಹಾರ ಕ್ರಮ
ನಿಯಮಿತವಾಗಿ ಪಾಲಿಸುವುದರಿಂದ ಉಪವಾಸ ಮಾಡದೇ ಮಧ್ಯಂತರ ಉಪವಾಸ ಮಾಡುವುದರಿಂದ ಸಿಗುವ ಎಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದು. ಹಾಗಾಗಿ ಇದೂ ಒಂದು ಉತ್ತಮ ಆಹಾರ ಕ್ರಮ ಎಂದು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ.