Sunday, 15th December 2024

ಟಿಪ್ಪು ಸುಲ್ತಾನನ ಮಗ ಅಂದು ಅಧಿಕಾರ ಹಿಡಿದಿದ್ದರೆ !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಇತಿಹಾಸದ ವಿಶೇಷ ಜ್ಞಾನ ಇಲ್ಲದ ಜನಸಾಮಾನ್ಯರಿಗೆ ಒಮ್ಮೊಮ್ಮೆ ಅನ್ನಿಸುವುದುಂಟು-ವ್ಯಾಪಾರಕ್ಕಾಗಿ ಬಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯವರು ನಮ್ಮ ದೇಶದಂತಹ ವಿಶಾಲ, ವ್ಯವಸ್ಥಿತ ಮತ್ತು ಸಾಕಷ್ಟು ಬಲಶಾಲಿ ರಾಜರುಗಳಿದ್ದ ಭೂಪ್ರದೇಶವನ್ನು ಅಷ್ಟು ಸುಲಭವಾಗಿ ಹೇಗೆ ವಶಪಡಿಸಿಕೊಂಡರು? ನಮ್ಮ
ಜನರು ಅವರನ್ನು ವಿರೋಧಿಸಲಿಲ್ಲವೆ? ದೂರದ ಪುಟ್ಟ ದ್ವೀಪದ ಎನಿಸಿದ ಇಂಗ್ಲೆಂಡಿನಿಂದ ಬಂದ ಕೆಲವೇ ಸಾವಿರ ಯುರೋಪಿಯನ್ ಸೈನಿಕರನ್ನು ನಮ್ಮ
ಸೈನಿಕರು ಮಟ್ಟ ಹಾಕಲು ಸಾಧ್ಯವಾಗಿಲ್ಲವೇಕೆ ಎಂದು ಜನಸಾಮಾನ್ಯರಿಗೆ ಅನುಮಾನ ಬರುವುದುಂಟು.

ನಿಜವೆಂದರೆ, ಸಾಕಷ್ಟು ಕಡೆ ನಮ್ಮವರು ಬ್ರಿಟಿಷರನ್ನು ಎದುರಿಸಿ, ಅವರ ಹುಟ್ಟಡಗಿಸುವ ಪ್ರಯತ್ನವನ್ನು ಮಾಡಿದ್ದುಂಟು. ಅವುಗಳ ವಿವರಗಳನ್ನು ಇತಿಹಾಸಕಾರರು, ಅದರಲ್ಲೂ ಮುಖ್ಯವಾಗಿ ಬ್ರಿಟಿಷ್ ಇತಿಹಾಸ ಕಾರರು ಅವರ ದೃಷ್ಟಿಕೋನದಿಂದ ಬರೆದಿಟ್ಟಿರುವುದು ನಿಜವಾದರೂ, ಅಂತಹ ಅದೆಷ್ಟೋ ದಾಖಲೆಗಳ ವ್ಯವಸ್ಥಿತ ಅಧ್ಯಯನ ನಡೆದಿಲ್ಲ ವೆಂಬುದೂ ಅಷ್ಟೇ ನಿಜ. ಜತೆಗೆ, ಲಭ್ಯ ಮಾಹಿತಿಯ ಹಲವು ಅಂಶಗಳು ಇಂದಿನ ತಲೆಮಾರಿಗೆ ಸರಿಯಾಗಿ ತಲುಪಿಲ್ಲ ಎಂದರೂ ಅತಿಶಯೋಕ್ತಿ ಎನಿಸದು.

ಅದರಲ್ಲೂ ಮುಖ್ಯವಾಗಿ, ಭಾರತೀಯ ದೃಷ್ಟಿಕೋನದಿಂದ ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳನ್ನು ದಾಖಲಿಸುವ, ಪ್ರಸ್ತುತಪಡಿಸುವ, ಅಧ್ಯಯನಕ್ಕೆಒಳಪಡಿಸುವ ಕೆಲಸ ಸಮರ್ಪಕವಾಗಿ ಆಗಿಲ್ಲ. 1857ರ ಬ್ರಿಟಿಷರ ವಿರುದ್ಧದ ಸಶಸ ಹೋರಾಟವನ್ನು ‘ಸಿಪಾಯಿ ದಂಗೆ’ ಎಂದು ಬ್ರಿಟಿಷರು ಕರೆದದ್ದು ಏಕೆಂದರೆ, ಅದು ಅವರ ದೃಷ್ಟಿಕೋನದ ನಾಮಕರಣ, ಯುರೋಪಿಯನ್ ಲೇಖನಿಯಿಂದ ಮಾಡಿದ ದಾಖಲೀಕರಣ. ಆ ಹೋರಾಟವನ್ನು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’ ಎಂದು ಈಗ ಮರುನಾಮಕರಣ ಮಾಡಲಾಗಿದ್ದು, ಅದೇ ರೀತಿ ಕರೆಯುವ ಪದ್ಧತಿ ಬಳಕೆಗೆ ಬಂದಿದ್ದರೂ, ಈಗಲೂ ಕೆಲವರು 1857ರ ಹೋರಾಟವನ್ನು ಸಿಪಾಯಿದಂಗೆ ಎಂದೇ ಕರೆಯುವುದನ್ನು ಕಾಣಬಹುದು.

1857ರ ಹೋರಾಟಕ್ಕಿಂದ ಸುಮಾರು ಅರ್ಧ ಶತಮಾನದ ಮುಂಚೆ, ದಕ್ಷಿಣ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವೊಂದು ನಡೆದಿದ್ದು, ಅದನ್ನು ‘ವೆಲ್ಲೂರು ದಂಗೆ’ ಎಂದು ಬ್ರಿಟಿಷ್ ದಾಖಲೆಗಳು ಹೆಸರಿಸಿರುವುದು ಸಹ ಇದೇ ರೀತಿಯ ಮನಸ್ಥಿತಿಯಿಂದ. ವೆಲ್ಲೂರು ಕೋಟೆಯಲ್ಲಿ 1806ರಲ್ಲಿ ಭಾರತೀಯ ಸೈನಿಕರು ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಟ ನಡೆಸಿ, ನೂರಕ್ಕೂ ಹೆಚ್ಚು ಜನ ಇಂಗ್ಲಿಷರನ್ನು ಸಾಯಿಸಿದರೂ, ಆ ಹೋರಾಟವನ್ನು ಒಂದೇ ದಿನದಲ್ಲಿ ಬ್ರಿಟಿಷರು ಬಗ್ಗು ಬಡಿದು ತಣ್ಣಗಾಗಿಸಿದರು.

ಅದನ್ನು ವೆಲ್ಲೂರು ದಂಗೆ ಎಂದು ಕರೆದು, ಆ ದಂಗೆಯನ್ನು ಒಂದೇ ದಿನದಲ್ಲಿ ತಮ್ಮ ಸೈನ್ಯ ಅಡಗಿಸಿತು ಎಂದು ಹೆಮ್ಮೆಯಿಂದ ಹೇಳಿಕೊಂಡು, ಅವರ ದೃಷ್ಟಿ ಕೋನದ ವ್ಯಾಖ್ಯೆಯನ್ನು ಇತಿಹಾಸದ ಪುಟಗಳಲ್ಲಿ ಬರೆದಿಟ್ಟರು. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 50 ವರ್ಷಗಳ ಮುಂಚೆಯೇ, ಬ್ರಿಟಿಷರ ವಿರುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು ಎಂಬ ವಿಚಾರ ಈಗ ಬಹುಮಟ್ಟಿಗೆ ಮರೆತೇ ಹೋಗಿದೆ. ಜತೆಗೆ ಆ ಹೋರಾಟವನ್ನು ನಮ್ಮ ದೇಶದ ದೃಷ್ಟಿಕೋನ ದಿಂದ ವ್ಯಾಪಕ ಸಂಶೋಧನೆಗೂ ಒಳಪಡಿಸಿಲ್ಲ ಎಂಬುದೂ ಸಹ ಮುಖ್ಯ ಎನಿಸುತ್ತದೆ.

10 ಜುಲೈ 1806. ಅಂದಿನ ದಿನಗಳ ಉತ್ತಮ ಕೋಟೆ ಎನಿಸಿದ್ದ, ವಿಜಯನಗರ ಅರಸರು ನಿರ್ಮಿಸಿದ್ದ ವೆಲ್ಲೂರು ಕೋಟೆಯಲ್ಲಿ ಎಂದಿನಂತೆ ಬೆಳಗಾಗುತ್ತಿತ್ತು.
ಆದರೆ, ಬೆಳಗಿನ ನಸುಕಿನ ಪ್ರಶಾಂತ ವಾತಾವರಣ ಅಂದು ಇರಲಿಲ್ಲ. ಬ್ರಿಟಿಷ್ ಸೈನ್ಯದಲ್ಲಿ ಸಂಬಳಕ್ಕಾಗಿ ಕೆಲಸಕ್ಕೆ ಸೇರಿದ್ದ ಸುಮಾರು 500 ಜನ ಸೈನಿಕರು, ತಮ್ಮ ಬಂದೂಕುಗಳನ್ನು ಕೈಗೆತ್ತಿಕೊಂಡು, ನಿಶ್ಶಬ್ದವಾಗಿ ಬ್ರಿಟಿಷ್ ಅಧಿಕಾರಿಗಳ ಮನೆ ಮತ್ತು ಬ್ರಿಟಿಷ್ ಸೈನಿಕರು ವಾಸಿಸಿದ್ದ ಬ್ಯಾರಕ್‌ಗಳನ್ನು ಸುತ್ತುವರಿದಿದ್ದರು.
ಎರಡು ಫಿರಂಗಿಗಳಿಗೆ ಮದ್ದು ತುಂಬಿ, ತಮ್ಮ ನಾಯಕನ ಸೂಚನೆ ಬಂದ ಕೂಡಲೆ ಉಡಾಯಿಸಿದರು.

ಬೆಳಗಿನ ಜಾವದ ನಿದ್ದೆಯಲ್ಲಿದ್ದ ಬ್ರಿಟಿಷ್ ಸೈನಿಕರು ಇದೆಂತಹ ಸದ್ದು ಎಂದು ಅರಿಯುವ ಮೊದಲೇ, ಭಾರತೀಯ ಸೈನಿಕರ ಬಂದೂಕುಗಳು ಗುಂಡಿನ ಮಳೆ ಗರೆದವು. ಅರೆನಿದ್ರೆಯಲ್ಲಿದ್ದ ಯುರೋಪಿಯನ್ ಸೈನಿಕರಿಗೆ ಆ ಕ್ಷಣದಲ್ಲಿ ಏನೂ ಮಾಡಲಾಗಲಿಲ್ಲ. ತಪತಪನೆ ಸತ್ತು ಬಿದ್ದರು. ವೆಲ್ಲೂರು ಕೋಟೆಯು, ಬೆಳಗಾಗುವ ಮುನ್ನವೇ ಭಾರತೀಯ ಸೈನಿಕರ ವಶವಾಗಿತ್ತು.

ಆ ಸಮಯದಲ್ಲಿ ವೆಲ್ಲೂರು ಕೋಟೆಯಲ್ಲಿ ಸುಮಾರು 350 ಇಂಗ್ಲಿಷ್ ಸೈನಿಕರಿದ್ದರು. ಆ ಬೆಳಗಿನ ಜಾವ ಭಾರತೀಯ ಸೈನಿಕರು ಸಿಡಿಸಿದ ಗುಂಡಿನ ದಾಳಿಗೆ 15 ಮಂದಿ ಬ್ರಿಟಿಷ್ ಅಧಿಕಾರಿಗಳು ಮತ್ತು 100 ಕ್ಕೂ ಹೆಚ್ಚು ಬ್ರಿಟಿಷ್ ಸೈನಿಕರು ಹತರಾಗಿದ್ದರು. ಕೋಟೆಯ ಮುಖ್ಯ ಅಧಿಕಾರಿಯಾಗಿದ್ದ ಕರ್ನಲ್ ಜಾನ್ ಫಾಂಕರ್ಟ್ ಎಂಬಾತನು ಭಾರತೀಯರ ಬಂದೂಕಿಗೆ ಬಲಿಯಾಗಿದ್ದ. ಕೋಟೆಯಲ್ಲಿದ್ದ ಶೇ.40ರಷ್ಟು ಸೈನಿಕರು ಹತರಾಗಿದ್ದರು. ಭಾರತೀಯ ಸೈನಿಕರು ಅಂದು ವೆಲ್ಲೂರು ಕೋಟೆಯನ್ನು ಗೆದ್ದಿದ್ದರು. ಅವರು ಕೋಟೆಯೊಳಗಿದ್ದ ಇಂಗ್ಲಿಷ್ ಅಧಿಕಾರಿಗಳ ಮನೆಗಳನ್ನು ಲೂಟಿ ಮಾಡಲು ಆರಂಭಿಸಿದರು. ಈ ನಡುವೆ ಕೋಟೆಂiಲ್ಲಿದ್ದ ಮೇಜರ್
ಕೂಪ್ಸ್ ಎಂಬ ಇಂಗ್ಲಿಷ್ ಅಧಿಕಾರಿಯು ಒಂದು ಪತ್ರ ಬರೆದು, ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹತ್ತಿರದ ಆರ್ಕಾಟಿಗೆ ಕುದುರೆ ಸವಾರರ ಮೂಲಕ ಪತ್ರವನ್ನು
ಕಳಿಸುವಲ್ಲಿ ಯಶಸ್ವಿಯಾಗಿದ್ದ. ಸುಮಾರು 25 ಕಿಮೀ ದೂರದಲ್ಲಿದ್ದ ಆರ್ಕಾಟಿನಲ್ಲಿ ಬ್ರಿಟಿಷರ ಸೇನಾ ತುಕಡಿ ಇತ್ತು.

ಅಲ್ಲಿಂದ ಸಹಾಯ ಬಂದರೆ, ಬಚಾವಾಗಬಹುದೆಂಬ ಇರಾದೆ ಇಂಗ್ಲಿಷರದ್ದು. ಇತ್ತ ವೆಲ್ಲೂರು ಕೋಟೆಯಲ್ಲಿ ಹಾರುತ್ತಿದ್ದ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಲಾಯಿತು. ಸ್ಥಳೀಯ ಸೈನಿಕರನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ಗುಂಡು ಹಾರಿಸುವಂತೆ ಪ್ರಚೋದಿಸಿದ್ದ ಹೋರಾಟದ ಮುಂಚೂಣಿಯಲ್ಲಿದ್ದ ಜಮೇದಾರ್ ಶೇಕ್ ಖಾಸಿಂ
ಎಂಬಾತನು, ವೆಲ್ಲೂರು ಕೋಟೆಯ ಮೇಲೆ ತಮ್ಮ ಬಾವುಟವನ್ನು ಹಾರಿಸಿದ್ದ. ಅವನು ಹಾರಿಸಿದ್ದ ಬಾವುಟ ಯಾವುದು ಗೊತ್ತೆ? 1799ರ ತನಕ ಮೈಸೂರು
ರಾಜ್ಯದಲ್ಲಿ ಹಾರುತ್ತಿದ್ದ ಟಿಪ್ಪು ಸುಲ್ತಾನನ ಬಾವುಟ!

ನಿಜ, ಅಂದು ಆ ಅರ್ಧ ಸಾವಿರ ಸೈನಿಕರು ಮೈಸೂರಿನ ಟಿಪ್ಪುವಿನ ನೆನಪಿನಲ್ಲಿ, ಟಿಪ್ಪು ಸುಲ್ತಾನ ಸಾವಿಗೆ ಪ್ರತೀಕಾರವೆಂಬಂತೆ, ವೆಲ್ಲೂರಿನಲ್ಲಿ ಬಂಡಾಯದ
ಬಾವುಟ ಹಾರಿಸಿದ್ದರು. ಸುಮಾರು 140 ಇಂಗ್ಲಿಷ್ ಸೈನಿಕರನ್ನು ಸಾಯಿಸಿ, ಬೆಳಗಿನ ಹೊತ್ತಿನಲ್ಲಿ ವೆಲ್ಲೂರು ಕೋಟೆಯನ್ನು ವಶಪಡಿಸಿ ಕೊಂಡು, ಹೊಸ
ರಾಜ್ಯವನ್ನು ಸ್ಥಾಪಿಸುವ ಪ್ರಯತ್ನ ನಡೆಸಿದ್ದರು. ಮೈಸೂರಿನ ರಾಜನಾಗಿದ್ದ ಟಿಪ್ಪುವಿನ ಎರಡನೆಯ ಮಗ -ತೇ ಹೈದರ್‌ನನ್ನು ಪುನಃ ವೆಲ್ಲೂರಿನಲ್ಲಿ ಅಧಿಕಾರಕ್ಕೆ ತರುವ ಪ್ರಯತ್ನವನ್ನು ಅವರು ನಡೆಸಿದ್ದರು.

ಎಲ್ಲವೂ ಸರಿಯಾಗಿ ನಡೆದು, ಸುತ್ತಲಿನ ಇತರ ಭಾರತೀಯ ರಾಜರು ಬೆಂಬಲ ನೀಡಿದ್ದರೆ, ಅದು ಸಾಧ್ಯವಾಗುತ್ತಿತ್ತೇನೋ. ಏಕೆಂದರೆ, ಟಿಪ್ಪುವಿನ ಮಕ್ಕಳು, ಹೆಂಡತಿ, ತಾಯಿ ಮತ್ತು ಆತನ ಪರಿವಾರ ಅಂದು ವೆಲ್ಲೂರು ಕೋಟೆಯಲ್ಲಿ ವಾಸ ಮಾಡುತ್ತಿದ್ದರು! 4 ಜುಲೈ1799ರಂದು ಟಿಪ್ಪುವನ್ನು ಸಾಯಿಸಿದ ಬ್ರಿಟಿಷರು, ಶ್ರೀರಂಗಪಟ್ಟಣದಲ್ಲಿದ್ದ ಸಂಪತ್ತನ್ನು ಕೊಳ್ಳೆಹೊಡೆದರು. ಈಸ್ಟ್ ಇಂಡಿಯಾ ಕಂಪೆನಿಯ ಮುಖ್ಯ ಉದ್ದೇಶವೇ ಅದೇ ತಾನೆ, ಭಾರತದಿಂದ ಸಂಪತ್ತನ್ನು ತಮ್ಮ ದೇಶಕ್ಕೆ ಸಾಗಿಸುವುದು? ಶ್ರೀರಂಗ ಪಟ್ಟಣದಲ್ಲಿ ಅವರು ಟಿಪ್ಪುವಿನ ಮಗಳ ವಶದಲ್ಲಿದ್ದ ಬಂಗಾರದ ಆಭರಣಗಳನ್ನು ದೋಚಿದಾಗ, ಅದನ್ನು ಸಾಗಿಸಲು ಆರು ಗಾಡಿಗಳು ಬೇಕಾದವಮತೆ!

ಟಿಪ್ಪು ಸುಲ್ತಾನನ 12 ಗಂಡು ಮಕ್ಕಳನ್ನು, ಎಂಟು ಹೆಣ್ಣು ಮಕ್ಕಳ ಪೈಕಿ ಆರು ಮಕ್ಕಳನ್ನು, ಹೆಂಡತಿ, ತಾಯಿ ಸೇರಿದಂತೆ, ಸುಮಾರು 1370 ಜನರನ್ನು ವಶಕ್ಕೆ
ಪಡೆದುಕೊಂಡು, ವೆಲ್ಲೂರು ಕೋಟೆಗೆ ಕರೆತಂದಿದ್ದರು. ಅಲ್ಲಿ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಯಿತು. ಅವರಿಗೆ ಪಿಂಚಣಿ ಯನ್ನೂ ನಿಗದಿ ಪಡಿಸಿ, ವೆಲ್ಲೂರು ಕೋಟೆಯಲ್ಲಿದ್ದ ಬಂಗಲೆಗಳಲ್ಲಿ ಅವರನ್ನು ವಾಸಿಸಲು ಅವಕಾಶ ಮಾಡಿ ಕೊಡಲಾಗಿತ್ತು. ಸಾಮ್ರಾಜ್ಯ ಕಳೆದುಕೊಂಡ ಆಘಾತ ದಿಂದ ಹೊರಬಂದ ಆ
ಕುಟುಂಬವು, ತನ್ನ ಪಾಡಿಗೆ ತಾನು ದಿನಚರಿಯನ್ನು ಮುಂದುವರಿಸಿತ್ತು. ಟಿಪ್ಪು ಸುಲ್ತಾನನ ಮಕ್ಕಳ ಮದುವೆಗಳು ಒಂದೊಂದಾಗಿ ನಡೆಯುತ್ತಿದ್ದವು.

ದಂಗೆಯ ಮುಂಚಿನ ದಿನ ಅಂದರೆ 9 ಜುಲೈ 1806ರಂದು ಟಿಪ್ಪು ಸುಲ್ತಾನನ ಮಗಳ ಮದುವೆಯ ವೆಲ್ಲೂರಿನ ಕೋಟೆಯೊಳಗೆ ಆಯೋಜನೆಗೊಂಡಿತ್ತು.
ಈ ಸಮಾರಂಭದ ನೆಪದಲ್ಲಿ ಸೇರಿದ್ದ ಸೈನಿಕರು, ದಂಗೆಯ ರೂಪುರೇಷೆಗಳನ್ನು ತಯಾರಿಸಿದ್ದರು. ಆದರೆ, ಯಾವ ರೀತಿಯ ಸಂಚು ನಡೆದಿತ್ತು, ಅದರ
ರೂವಾರಿಗಳು ಯಾರು ಎಂಬುದರ ಕುರಿತು ಇನ್ನಷ್ಟು ಸಂಶೋಧನೆ ನಡೆದು, ಅದರ ವಿವರಗಳು ನಮ್ಮ ರಾಜ್ಯದ ಜನಸಾಮಾನ್ಯರಿಗೆ ತಲುಪಬೇಕಿದೆ. ಅಂದಿನ
ದಿನಗಳಲ್ಲಿ ಭಾರತದಾದ್ಯಂತ ಸಂಚರಿಸುತ್ತಿದ್ದ ಫಕೀರರು ಇಂತಹ ಹೋರಾಟಗಳಿಗೆ ಪ್ರಚೋದನೆ ನೀಡುತ್ತಿದ್ದರು ಎಂಬ ವಿಚಾರವನ್ನೂ ಪ್ರತಿಪಾದಿಸ ಗಿದೆ.

19 ನೆಯ ಶತಮಾನದಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಸನ್ಯಾಸಿ – ಫಕೀರರ ಪಡೆಯು ಬ್ರಿಟಿಷರ ವಿರುದ್ಧ ಹೋರಾಟವನ್ನು ಯೋಜಿಸಿದ್ದ ವಿಚಾರವು ಈಗಾಗಲೇ ಸಂಶೋಧನೆಗೆ ಒಳಪಟ್ಟು ದಾಖಲಾಗಿದೆ. ದಕ್ಷಿಣ ಭಾರತದಲ್ಲೂ ಫಕೀರರ -ಸನ್ಯಾಸಿಗಳ ಗುಂಪು ಇಂತಹ ಹೋರಾಟಕ್ಕೆ ಸ್ಪೂರ್ತಿ, ಬೆಂಬಲ, –ಚೋದನೆ ನೀಡಿದ್ದರೇ ಎಂಬ ವಿಚಾರದ ಕುರಿತು ಸಾಕಷ್ಟು ಚರ್ಚೆ ನಡೆಯಬೇಕಾದ ಅಗತ್ಯವಿದೆ. ವೆಲ್ಲೂರು ಕೋಟೆಯ ಮೇಲಿದ್ದ ಬ್ರಿಟಿಷರ ಬಾವುಟವನ್ನು ಕೆಳಗಿಳಿಸಿ, ಟಿಪ್ಪು ಸುಲ್ತಾನನ ಬಾವುಟವನ್ನು ಹಾರಿಸಿದ ಭಾರತೀಯ ಸೈನಿಕರು, ಆತನ ಎರಡನೆಯ ಮಗ -ತೇಹ್ ಹೈದರನನ್ನು ಹೋರಾಟದ ನಾಯಕತ್ವ ವಹಿಸುವಂತೆ ಕೇಳಿ
ಕೊಂಡರು. ನೀವೇ ನಮ್ಮ ಮುಂದಿನ ರಾಜ ಎಂಬ ಆಹ್ವಾನವನ್ನು ನೀಡಿದ್ದರು. ಆದರೆ, ಬೆಳಗಿನ ಆ ಹೊತ್ತಿನಲ್ಲಿ ಹೋರಾಟದಿಂದ ಆದ ಹಾನಿಯ ಪೂರ್ಣ
ಸ್ವರೂಪ ಬಯಲಾಗಿರಲಿಲ್ಲ.

ಆಗ ಕೋಟೆಯಲ್ಲಿದ್ದ 350ಕ್ಕೂ ಹೆಚ್ಚಿನ ಇಂಗ್ಲಿಷ್ ಸೈನಿಕರ ಪೈಕಿ ಶೇ.40ರಷ್ಟು ಹತರಾಗಿದ್ದರೂ, ಮಿಕ್ಕವರು ಪ್ರತಿಹೋರಾಟಕ್ಕೆ ಸಿದ್ಧತೆ ಮಾಡಿದ್ದರೇ ಎಂಬ ಬಗ್ಗೆ ಗೊಂದಲವಿತ್ತು. ಕೋಟೆಯ ಅಧಿಕಾರಿಯಾಗಿದ್ದ ಜಾನ್ ಫಾಂಕೊರ್ಟ್‌ನ ಮೃತ ದೇಹವನ್ನು ತಾನು ನೋಡಬೇಕು ಎಂದು ಟಿಪ್ಪುವಿನ ಮಗ ಹಠಹಿಡಿದ ಎನ್ನಲಾ ಗಿದೆ. ಈ ಕ್ಷಣದಲ್ಲಿ ಕೋಟೆಯನ್ನು ವಶಪಡಿಸಿಕೊಂಡರೆ, ಮುಂದಿನ ಹೋರಾಟ ಹೇಗೆ ಎಂಬ ಪರಿಕಲ್ಪನೆ ಅವರಿಗೆ ಇರಲಿಲ್ಲ; ಜತೆಗೆ ಈ ವಿಷಯದ ಕುರಿತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಲು ಇನ್ನಷ್ಟು ಸಮಯ ಬೇಕೆಂದು ಟಿಪ್ಪುವಿನ ಮಕ್ಕಳು ಅಂದುಕೊಂಡಿರಬೇಕು.

ಅಷ್ಟರಲ್ಲಿ ಬ್ರಿಟಿಷ್ ಸೈನ್ಯ ಜಾಗ್ರತವಾಗಿತ್ತು. 25 ಕಿಮೀ ದೂರದಲ್ಲಿದ್ದ ಆರ್ಕಾಟಿನಿಂದ ರಾಬರ್ಟ್ ರೋಲೋ ಜಿಲ್ಲೆಸ್ಪಿ ಎಂಬಾತನು ಇಪ್ಪತ್ತು ಸೈನಿಕರೊಂದಿಗೆ ವೆಲ್ಲೂರಿಗೆ ಧಾವಿಸಿದ. ಬೆಳಗಿನ 9.30ರ ಸಮಯದಲ್ಲಾಗಲೇ ಆತ ಬಂದು, ಹೊರಭಾಗದಲ್ಲಿ ಬೀಡುಬಿಟ್ಟಿದ್ದ. ಕೆಲವೇ ಗಂಟೆಗಳಲ್ಲಿ ಕರ್ನಲ್ ಕೆನಡಿ ಎಂಬ ಸೇನಾಧಿಕಾರಿ, ಆರ್ಕಾಟಿನಿಂದ ಫಿರಂಗಿ ಮತ್ತು ಸೈನಿಕರ ಜತೆ ವೆಲ್ಲೂರು ತಲುಪಿದ ತಕ್ಷಣ, ಕೊಟೆಯ ಬಾಗಿಲನ್ನು ಒಡೆಸಿ, ಒಳನುಗ್ಗಿದರು. ಕೋಟೆಯಲ್ಲಿ
ಬದುಕಿದ್ದ ನೂರಕ್ಕೂ ಅಧಿಕ ಇಂಗ್ಲಿಷ್ ಸೈನಿಕರು ಜತೆಯಾದರು. ಕೋಟೆಯನ್ನು ವಶಪಡಿಸಿಕೊಂಡಿದ್ದ ಸಾವಿರಕ್ಕೂ ಅಧಿಕ ಸೈನಿಕರಿಗೆ ಸೂಕ್ತ ನಾಯಕತ್ವ
ದೊರಕಲಿಲ್ಲವಾದ್ದರಿಂದ, ಅವರು ಅಲ್ಲೆಲ್ಲಾ ಚದುರಿ ಕುಳಿತು ಪ್ರತಿಹೋರಾಟ ನಡೆಸಿದರು. ಆದರೆ ಬ್ರಿಟಿಷರ ಕೈ ಮೇಲಾಯಿತು.

ಸುಮಾರು 800 ಜನ ಭಾರತೀಯ ಸೈನಿಕರನ್ನು ಅಂದು ಸಾಯಿಸಲಾಯಿತು. ಬಂಧನಕ್ಕೆ ಒಳಗಾದ ನೂರಾರು ಸೈನಿಕರನ್ನು ಗುಂಡಿಟ್ಟು ಕೊಂದರು. ಮಧ್ಯಾಹ್ನ 2.00 ಗಂಟೆಯ ಸಮಯಕ್ಕೆ ಕೋಟೆಯು ಬ್ರಿಟಿಷರ ವಶಕ್ಕೆ ಬಂದಿತ್ತು. ವೆಲ್ಲೂರಿನಲ್ಲಿ ಭಾರತೀಯ ಸೈನಿಕರ ರಕ್ತ ಹರಿದಿತ್ತು. ಬ್ರಿಟಿಷರ ಧ್ವಜ ಪುನಃ ಮೇಲಕ್ಕೇರಿತು.
ಶ್ರೀರಂಗಪಟ್ಟಣದಲ್ಲಿ 1799ರಲ್ಲಿ ಟಿಪ್ಪು ಸುಲ್ತಾನನ್ನ ಹತ್ಯೆಯಾದ ಏಳು ವರ್ಷಗಳಲ್ಲಿ ವೆಲ್ಲೂರಿನ ಕೋಟೆಯಲ್ಲಿ ಆತನ ಎರಡನೆಯ ಮಗನಿಗೆ ಅಧಿಕಾರ
ಕೊಡಿಸಲು ನಡೆದ ಈ ಸಶಸ್ತ್ರ ಹೋರಾಟ ಬಹಳ ಕುತೂಹಲಕಾರಿ. ಇತರ ಭಾರತೀಯ ನವಾಬರು ಅಂದು ಬೆಂಬಲ ನೀಡಿದ್ದರೆ, ಟಿಪ್ಪುನಿನ ಮಕ್ಕಳು ಪುನಃ
ಅಧಿಕಾರಿ ಹಿಡಿಯಲು ಸಾಧ್ಯವಾಗಿದ್ದರೆ, ದಕ್ಷಿಣ ಭಾರತದ ಇತಿಹಾಸವೇ ಬೇರಾಗುತ್ತಿತ್ತು. ಆದರೆ ಈಸ್ಟ್ ಇಂಡಿಯಾ ಕಂಪೆನಿ ಎಂಬ ವ್ಯಾಪಾರೀ ಸಂಸ್ಥೆಯ
ಸೈನಿಕರು ಅದಕ್ಕೆ ಅವಕಾಶ ನೀಡಲಿಲ್ಲ. ಟಿಪ್ಪುವಿನ ಮಕ್ಕಳು, ಕುಟುಂಬ ಮತ್ತು ಪರಿವಾರವು ವೆಲ್ಲೂರಿನಲ್ಲಿದ್ದರೆ ಅಪಾಯ ಎಂದು, ದೂರದ ಕೊಲ್ಕೊತ್ತಾಕ್ಕೆ ಅವರನ್ನು ಸಾಗಹಾಕಲಾಯಿತು.

ಭಾಷೆ ಬಾರದ ಆ ಅಪರಿಚಿತ ನಾಡಿನಲ್ಲಿ ಗೃಹಬಂಧನಕ್ಕೆ ಒಳಗಾದ ಆ ಕುಟುಂಬವು, ಕ್ರಮೇಣ ಬಡತನಕ್ಕೆ ಒಳಗಾಗಿದ್ದು ಇತಿಹಾಸ. ವೆಲ್ಲೂರು ಕೋಟೆಯ ಮುಖ್ಯಸ್ಥನಾಗಿದ್ದ, ಭಾರತೀಯ ಸೈನಿಕರ ಗುಂಡಿಗೆ ಬಲಿಯಾದ ಕರ್ನಲ್ ಜಾನ್ ಫಾಂಕೋರ್ಟ್‌ನ ಹೆಂಡತಿಯು ಆಗ ಕೋಟೆಯೊಳಗಿದ್ದಳು. ತನ್ನ ಗಂಡ ಸತ್ತರೂ, ತಾನು ಮತ್ತು ಮಕ್ಕಳು ಹೇಗೆ ಬದುಕುಳಿದೆವು ಎಂದು ಆಕೆ ವಿವರವಾಗಿ ಬರೆದಿಟ್ಟ ದಾಖಲೆಗಳಿಂದಾಗಿ, ‘ವೆಲ್ಲೂರು ದಂಗೆ’ಯ ಸಾಕಷ್ಟು ವಿವರಗಳು ಲಭ್ಯವಿವೆ. ಆದರೆ, ಅದು ಯುರೋಪಿಯನ್ ದೃಷ್ಟಿಕೋನದ ಕಥನ.

ದಕ್ಷಿಣ ಭಾರತದ ಈ ಪ್ರಮುಖ ಘಟನೆಯನ್ನು ಬ್ರಿಟಿಷರ ವಿರುದ್ಧ ಸ್ಥಳೀಯರು ನಡೆಸಿದ ಹೋರಾಟ ಎಂಬ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ, ಸಂಶೋಧನೆಗೆ
ಒಳಪಡಿಸುವ, ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಅನಿಸುತ್ತದೆ, ಅಲ್ಲವೆ?