Saturday, 14th December 2024

ಸಾಹಿತ್ಯದ್ವೇಷಿ ತಂದೆಗೆ, ಸಾಹಿತ್ಯದಿಂದಲೇ ಮೋಕ್ಷ ಕೊಡಿಸಿದ ಕಥೆ

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್‌

ಬಾಲ್ಯದಿಂದಲೂ ನಾನು ಸ್ನೇಹಜೀವಿ, ಸಂಘಜೀವಿ, ಏಕಾಂತ, ಒಂಟಿತನ ನನ್ನನ್ನು ಸಮೀಪಿಸಲೇ ಇಲ್ಲ. ಅದಕ್ಕೆ ತಕ್ಕಂತೆ ನನ್ನ ಊರೂರು ತಿರುಗುವ ಈ ವೃತ್ತಿಯಾದ ಹಾಸ್ಯ ಸಂಜೆಗಳು ನನ್ನ ಮನೋಭೂಮಿಕೆಯನ್ನೂ ಕಣ್ಣಿಗೆ ಕಾಣುವ ಕರ್ನಾಟಕದ ಭೂಮಿಯಲ್ಲಿ ಇರುವ ಊರುಗಳೂ ಇದನ್ನು ಇನ್ನಷ್ಟು ವಿಸ್ತರಿಸುತ್ತಲೇ ಇವೆ.

ನಾನು ಒಬ್ಬನೇ, ಒಂದೇ ಎಂದೂ ಇರಲಾರೆ. ಒಬ್ಬಂಟಿಯಾಗಿ ನಾನು ಏನನ್ನೂ ಆಸ್ವಾದಿಸಲಾರೆ. ಸುಖವಾಗಲಿ, ದುಃಖವಾಗಲಿ, ನಾನೆಂದೂ ಒಬ್ಬನೇ ನುಂಗಿ ಕೊಂಡವನಲ್ಲ. ಇತರರಿಗೂ ಅದನ್ನು ಹಂಚಿಕೊಂಡಾಗಲೇ, ಹೇಳಿಕೊಂಡಾಗಲೇ ನನಗೆ ಸಮಾಧಾನ. ನಾನು ಕಷ್ಟಗಳನ್ನು ಅವಮಾನಗಳನ್ನು ಸೋಲುಗಳನ್ನು ಹೇಳಿಕೊಂಡಾಗ ಮೆಚ್ಚಿ, ಸಂತೈಸಿದ ಜನರು, ಅದೇ ನನ್ನ ಯಶಸ್ಸು, ಸಾಧನೆ, ಸನ್ಮಾನಗಳನ್ನು ಹೇಳಿಕೊಂಡಾಗ ‘ತನ್ನದೇ ತಾನು ಹೇಳಿಕೊಳ್ಳುತ್ತಾನೆ’ ಎಂದದ್ದು, ಎನ್ನುವುದೂ ಉಂಟು.

ಎಲ್ಲವನ್ನೂ ಹೇಳಿಕೊಳ್ಳುವ ನನಗೆ ಜನರ ಈ ವರ್ತನೆ ಆಶ್ಚರ್ಯ ಉಂಟುಮಾಡುತ್ತದೆ. ನನಗಿದರಲ್ಲಿ ವ್ಯತ್ಯಾಸ ಕಾಣುವುದಿಲ್ಲ. ಆದರೆ, ಇದನ್ನು ಜನ ವ್ಯತ್ಯಾಸವಾಗಿ ಸ್ವೀಕರಿಸುವ ಅವರ ಇಬ್ಬಂದಿ ವ್ಯಕ್ತಿತ್ವಕ್ಕೆ ಉತ್ತರ ಸಿಗುತ್ತಿಲ್ಲ. ಒಟ್ಟಿನಲ್ಲಿ ನನಗೆ ಎಲ್ಲವನ್ನು ಹೇಳಿಕೊಳ್ಳುವ ರಕ್ತಗತ ಗುಣ.

ಇದು, ನಮ್ಮ ತಂದೆಯಿಂದ ಬಂದುದಲ್ಲ. ನಮ್ಮ ತಂದೆ ಮಹಾ ಮೌನಿ, ಗಂಭೀರ ವ್ಯಕ್ತಿ. ಆತನಿಗೆ ಯಾವುದನ್ನೂ ಹೇಳಿಕೊಳ್ಳಲು ಬರುತ್ತಿರಲಿಲ್ಲ. ಸ್ವಭಾವವೂ ಹೌದು. ಶಬ್ದ ದಾರಿದ್ರ್ಯವೂ ಹೌದು. ಈ ಗಂಭೀರ ಹಾಗೂ ಮೌನಿ ವ್ಯಕ್ತಿಗಳಲ್ಲಿ ಅಧ್ಯಯನ ಹಾಗೂ ಅನುಭವದ ಕೊರತೆ ಜತೆಗೆ ಅವರಿಗೆ ಸ್ನೇಹಿತರೂ ಇರುವುದಿಲ್ಲ. ಇದ್ದರೂ ಇವರು ಅವರೊಂದಿಗೆ ಬೆರೆಯುವುದಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಸಮಾನ ವಯಸ್ಕರು ಗೆಳೆಯರೊಂದಿಗೆ ಆಟ, ತಿರುಗಾಟ, ತಿನಿಸು, ತೀರ್ಥಗಳಲ್ಲಿ ಒಂದಾಗುತ್ತಾರೆ.

ಆದರೆ ಅದೇ ಸಮಾನ ಮನಸ್ಕರು, ಒಂದೇ ಮನಸ್ಸಿನ ಗೆಳೆಯರು ಓದು, ಚರ್ಚೆ, ಸಾಹಿತ್ಯ ಸಮ್ಮೇಳನಗಳಿಗೆ ಹೋಗುವುದು,
ಊರಲ್ಲಿ ಯಾರೇ ಭಾಷಣಕಾರರು ಬಂದರೂ ಹೋಗಿ ಕೂತು ಅವರ ವಿಚಾರಗಳನ್ನು ಕೇಳುವುದು ಮಾಡುತ್ತಾರೆ. ಅನೇಕ ಬಾರಿ ಇವರೇ ಸಂಘ – ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಊರಿಗೆ ಬುದ್ಧಿಜೀವಿ, ವಿಚಾರವಂತರನ್ನು ಕರೆಸುವ, ಗೌರವಿಸುವ, ಅವರ ಮಾತುಗಳನ್ನು ಕೇಳುವ ಕೆಲಸಗಳನ್ನು ಮಾಡುತ್ತಾರೆ.

ಇಂಥವರಿಗೆ ಎಂದೂ ಮುಪ್ಪಾಗಲಿ, ಜೀವನ ಬೇಸರವಾಯಿತು ಎಂದಾಗಲಿ ಎನಿಸುವುದಿಲ್ಲ. ಎಲ್ಲವನ್ನೂ ಸಹನೆಯಿಂದ ಕಾಯ್ದುನೋಡಿ ಸ್ವೀಕರಿಸುವ, ತಿರಸ್ಕರಿಸುವ ಗುಣ ತಾನಾಗಿಯೇ ಮೈಗೂಡಿಬಿಡುತ್ತದೆ. ನಮ್ಮ ತಂದೆ ಆರಕ್ಕೇರಲಿಲ್ಲ, ಮೂರಕ್ಕಿಳಿ ಯಲಿಲ್ಲ. ಬಂದುದನ್ನು ಸ್ವೀಕರಿಸುತ್ತಿದ್ದರು. ಸಹನೆ, ಮೌನ ಈ ಎರಡು ಶಬ್ದಗಳು ಅವರ ರಕ್ತದಲ್ಲಿಯೇ ‘ಹಿಮೋಗ್ಲೋಬಿನ್’ ಕ್ಕಿಂತ ಹೆಚ್ಚಿತ್ತು. ಅವರಿಗೆ ಚೇಳು ಕಡಿದರೆ ಮೈಯೆಲ್ಲ ಶೀತಮಯವಾಗುವ ಪ್ರಕೃತಿ ಇತ್ತು. ಇದನ್ನು ಎಂದೂ, ಯಾರಿಗೂ ಹೇಳಿರಲಿಲ್ಲ. ಆಗೆಲ್ಲ ಅಂದರೆ ೭೦-೮೦ರ ದಶಕದಲ್ಲಿ ಒಂದು ಪುಟ್ಟ ಮಣ್ಣಿನ ಮನೆಯಲ್ಲಿ ತೊಲೆ, ಜಂತಿಯಲ್ಲಿ ಹಾವು, ಚೇಳು, ಏನೆನೋ
ಕ್ರಿಮಿಕೀಟಗಳ ವಾಸ.

ಅದು ನಮ್ಮ ನೆತ್ತಿಯ ಮೇಲೆಯೇ ಅವನ್ನು ಕತ್ತೆತ್ತಿ ನೋಡಿಬಿಟ್ಟರೆ ಸಾಕು, ಅವು ಕೆಳಗೆ ಬಂದು ನಮ್ಮನ್ನೇನೂ ಮಾಡುವುದಿಲ್ಲ, ಕಚ್ಚುವುದಿಲ್ಲ, ಕಾಡುವುದಿಲ್ಲ ಎಂಬುದು ನಮ್ಮ ತಾಯಿ ನಮಗೆ ತುಂಬುತ್ತಿದ್ದ ಧೈರ್ಯ. ಹೀಗಾಗಿ ನಾವು ಅಂಗಾತ ಮಲಗಿ ಮೇಲೆ ಮಣ್ಣಿನ, ತೊಲೆ, ಜಂತಿಗಳ ಮಧ್ಯದಲ್ಲಿ ಹಾವು, ಚೇಳುಗಳನ್ನು ನೋಡಿದರೂ, ಆಯಿತು ನೋಡಿದೆವು. ಕಣ್ಣಿಗೆ ಬಿದ್ದವು, ಇನ್ನು ನಮ್ಮನ್ನೇನೂ ಮಾಡುವುದಿಲ್ಲ ಎಂದು ನಿಶ್ಚಿಂತೆಯಿಂದ ಮಲಗುತ್ತಿದ್ದೆವು.

ನಮ್ಮ ಅಣ್ಣ ಪಲ್ಹಣ್ಣ ಬಲು ಪುಕ್ಕಲನಾಗಿದ್ದ. ನಾನು ಆತ ಪಕ್ಕ ಪಕ್ಕದಲ್ಲಿಯೇ ಮಲಗಿದಾಗ ನನಗೆ ತೊಲೆ – ಜಂತಿಗಳ ಮಧ್ಯೆ
ಹರಿದಾಡಿದ ಹಾವು, ಚೇಳು ಕಂಡು ಆತನೂ ನೋಡುವಷ್ಟರ‍ಲ್ಲಿ ಅವು ಮರೆಯಾಗಿ ಬಿಟ್ಟರೆ, ‘ಅಯ್ಯಯ್ಯೋ, ನನಗೆ ಕಾಣಲಿಲ್ಲ. ಅಂದರೆ ನನಗೆ ಕಚ್ಚುತ್ತವೆ ಎಂದು ಹೌಹಾರಿ ಬಿಡುತ್ತಿದ್ದ, ಹೇಗಾದರೂ ಅವನ್ನು ನೋಡಬೇಕು, ಅವುಗಳ ಕೃಪೆ ಸಂಪಾದಿಸ ಬೇಕೆಂದು ಹಾಸಿಗೆಯಿಂದ ದಿಗ್ಗನೆ ಎಂದು ಬ್ಯಾಟರಿ ಹಿಡಿದು, ಕಾಲಕೆಳಗೆ ಸ್ಟೂಲು ಹಾಕಿಕೊಂಡು ಅವುಗಳನ್ನು ನೋಡಲು ಹೋರಾಟವನ್ನೇ ಮಾಡುತ್ತಿದ್ದ.

ಕಾಣದಾದಾಗ ನನ್ನ ಮೇಲೆ ರೇಗುತ್ತಿದ್ದ. ಖರೆ ನೋಡಿ ಇಲ್ಲೋ, ಹೇಳು. ಹಲ್ಲಿ ನೋಡಿ ಹಾವು ಅಂತ ಹೇಳ್ತಿಯೋ? ಎಂದು ಒದರಾಡುತ್ತಿದ್ದ. ಕಡೆಗೂ, ಕಾಣದಾದಾಗ ಇಡೀ ದಿನ, ಮರುದಿನ, ರಾತ್ರಿ ಕೃಷ್ಣ.. ಕೃಷ್ಣ.. ಕೃಷ್ಣ.. ಎನ್ನುತ್ತಾ ಜಂತಿ – ತೊಲೆ ಕಡೆ ನೋಡುತ್ತಿದ್ದ. ಆತ ಕೃಷ್ಣನ ಪರಮ ಭಕ್ತನಾಗಿದ್ದ. ಉಸಿರಿಗೊಮ್ಮೆ ಕೃಷ್ಣ.. ಕೃಷ್ಣ.. ಎನ್ನುವುದು ಆತನ ಪರಿಪಾಠವಾಗಿತ್ತು. ಸಂಡಾಸ್ ಅರ್ಜಂಟ್ ಆದರೂ ಕೃಷ್ಣ.. ಕೃಷ್ಣ.. ಎನ್ನುತ್ತಲೇ ಓಡುತ್ತಿದ್ದ.

ಹೀಗಿರಲು ಒಂದು ದಿನ ರಾತ್ರಿ, ಅದೇನೂ ಮಧ್ಯರಾತ್ರಿಯಲ್ಲ. ನಮ್ಮ ತಂದೆ 7:30, 8ಕ್ಕೆಲ್ಲ ಮಲಗಿ ಬಿಡುತ್ತಿದ್ದರು. 9 ರ ಹೊತ್ತಿಗೆ ಜಂತಿ, ತೊಲೆ ಸಂದಿಯ ಒಂದು ಚೇಳು, ತಂದೆಯವರ ಹಾಸಿಗೆಗೆ ಬಿದ್ದು, ಇವರು ಹೊರಳಾಡಿದಾಗ ಬೆನ್ನಿಗೆ ಕಚ್ಚಿಬಿಟ್ಟಿದೆ. ಮಲಗಿದಲ್ಲೆ ಇವರು ಬೆನ್ನನ್ನು ಹಾಸಿಗೆಗೆ ಉಜ್ಜಿದ್ದರಿಂದ ಅದು ಅಲ್ಲೇ ಸತ್ತೂ ಹೋಗಿದೆ. ಮನೆಗೆ ಕರೆಂಟ್ ತೆಗೆದುಕೊಂಡಿರಲಿಲ್ಲ. ಕಂದೀಲ ಬೆಳಕೇ ಬೆಳಕು. ಅದೂ ರಾತ್ರಿ ಮಲಗಿದ ಮೇಲೆ ದೊಡ್ಡ ಕಂದೀಲು ಆರಿಸಿ, ಚಿಕ್ಕ ಬುಡ್ಡಿ ಚಿಮಣಿ ಇದಕ್ಕೆ ಗುಬ್ಬಿ ಪಾನ ಚಿಮಣಿ ಎಂದೂ ಕರೆಯತ್ತಿದ್ದರು. ಇಂತಹದನ್ನು ಹಚ್ಚಿಕೊಂಡು ಮಲಗುತ್ತಿದ್ದರು.

ನಮ್ಮ ತಂದೆಯವರಿಗೆ ಚೇಳಿನ ವಿಷ ಏರುತ್ತಿರಲಿಲ್ಲವಂತೆ. ಆದರೆ ಇಡೀ ಮೈ ಶೀತಗೊಳ್ಳುತ್ತಿತ್ತಂತೆ. ಕಾರಣ, ನಮ್ಮ ತಂದೆಯ ತಾಯಿ ಜೀವಮ್ಮ ನಮ್ಮ ಅಜ್ಜಿ. ಮದುವೆಯಾದ ಹೊಸದರಲ್ಲೆ ನಮ್ಮ ತಾಯಿಗೆ ಈ ವಿಷಯ ಹೇಳಿದ್ದೆನೆಂದರೆ, ವೆಂಕೋಬನಿಗೆ (ನಮ್ಮ ತಂದೆಯ ಹೆಸರು, ಅವರು ಕರೆಯುತ್ತಿದ್ದುದು) ಚೇಳಿನ ವಿಷ ಏರಂಗಿಲ್ಲ, ಯಾಕಂದ್ರೆ ಅವನನ್ನು ನಾನು ಬಸಿರಿದ್ದಾಗ ನನಗೆ ಚೇಳು ಕಡಿದಿತ್ತು, ಹೀಗಾಗಿ ಅವನಿಗೆ ಅದು ಏರುವುದಿಲ್ಲ.

ಆದರೆ ಅವನಿಗೆ ಚೇಳು ಕಡಿದರೆ, ಶೀತ ಮುಚ್ಚುತ್ತದೆ, ಆತನಿಗೆ ಆಗ ಎಚ್ಚರ ವಾಗಿಡಬೇಕು, ಮಲಗಿದನೆಂದರೆ, ‘ಸನ್ನಿ’ ಮುಚ್ಚಿ
ಅಪಾಯವಾಗುತ್ತದೆ ಎಂದು ಹೇಳಿದ್ದಳಂತೆ. ಹೀಗಾಗಿ ನಮ್ಮ ತಾಯಿ ಬೆಳಗಿನವರೆಗೂ ಕ್ಷಣಕ್ಷಣಕ್ಕೂ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸುತ್ತಾ, ಕಂಬಳಿ ಹೊದೆಸುತ್ತಾ ಆತನ ಆರೈಕೆ ಮಾಡಿದ್ದಾಳೆ. ನಮ್ಮ ಅಪ್ಪ ನರಳಿಲ್ಲ, ಕೂಗಾಡಿಲ್ಲ ಯಾರನ್ನಾದರೂ ಕೂಗಿಲ್ಲ. ಫೋನ್ ಗಳಿಲ್ಲದ ಕಾಲವದು. ಅಷ್ಟು ಸಹನಾ ಜೀವಿ. ಬೆಳಗ್ಗೆ ನಾವೆದ್ದು, ಅಂದರೆ ನಾವು ಚಿಕ್ಕ ಮನೆಯಾದ್ದರಿಂದ ನಾವು ಮಕ್ಕಳೆಲ್ಲ ಓಣಿಯ ಕಂಡವರ ಮನೆ ಕಟ್ಟೆಗಳು, ಕಂಡವರ ಮನೆ ಮಾಳಿಗೆಗಳ ಮೇಲೆ ಹಾಸಿಗೆ ಸುರುಳಿ, ಗೋಣಿ ತಟ್ಟನ್ನು ತೆಗೆದುಕೊಂಡು ಮಲಗಲು ಹೋಗುತ್ತಿದ್ದೆವು.

ಬೆಳಿಗ್ಗೆ ನಮ್ಮ ಓಣಿಯಲ್ಲೇ ಇದ್ದ ‘ಅಲ್’ ಡಾಕ್ಟರ್ ನ್ನು ಕರೆಸಿ ಒಂದು ಅಲ್ ಇಂಜೆಕ್ಷನ್ ಮಾಡಿಸಿ, ನಮ್ಮ ತಂದೆ ಸುಧಾರಿಸಿ ಕೊಂಡರು. ನಮ್ಮ ಓಣಿಯ ಈ ಅಲ್ ಡಾಕ್ಟರ್ ನಿಜ ಹೆಸರು ಯಾರಿಗೂ ಗೊತ್ತಿರಲಿಲ್ಲ. ಏಕೆ ಆ ಹೆಸರು ಅವರಿಗೆ ಕಾಯಂ ಆಗಿತ್ತೆಂದರೆ, ಅವರು ಎಲ್ಲಾ ಕಾಯಿಲೆಗಳಿಗೂ ‘ಅಲ್’ ಇಂಜೆಕ್ಷನ್ ಮಾಡುತ್ತಿದ್ದರು, ಅದಕ್ಕೆ ಅವರಿಗೆ ಈ ಹೆಸರು. ಈ ಹೆಸರು ಅನ್ನಲೂ ಬಾರದ ನಮ್ಮ ಓಣಿಯ ಕೂಲಿ ಕಾರ್ಮಿಕ, ಬಡ ರೋಗಿಗಳು ಇವರನ್ನು ಐದು ರುಪಾಯಿ ಡಾಕ್ಟರ್ ಎಂದೂ ಕೂಡಾ ಕರೆಯುತ್ತಿದ್ದರು.

ಅದೂ ಅವರೆದುರಿಗೇ, ಅವರ ಮುಖಕ್ಕೆ ಹೇಳುತ್ತಿದ್ದರು. ಕಾರಣ ಅವರು ‘ಫೀ’ ಐದು ರುಪಾಯಿ ಮಾತ್ರವೇ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಬಂದಿರುವ ಜ್ವರ ಇತ್ಯಾದಿ ಕಡಿಮೆ ಆಗದಿದ್ದಾಗ, ಅವರಿಗಿಂತ ಸೀನಿಯರ್ ಡಾಕ್ಟರ್, ಅಂದರೆ ಹತ್ತು ರುಪಾಯಿ ತೆಗೆದು ಕೊಳ್ಳುವ ಡಾಕ್ಟರ್ ಬಳಿ ಹೋಗುತ್ತಿದ್ದರು. ಒಮ್ಮೊಮ್ಮೆ ಈ ಐದು ರುಪಾಯಿ ಡಾಕ್ಟರ್ರೇ, ಖುದ್ದಾಗಿ ‘ನನ್ನ ಕೈಲಿ ಆಗಲ್ಲ, ಕಾಯಿಲೆ ಬಲೀತಿದೆ, ನೀವು ಹತ್ತು ರುಪಾಯಿ ಡಾಕ್ಟರ್ ಬಳಿ ಹೋಗಿ’ ಎಂದೇ ಹೇಳುತ್ತಿದ್ದರು.

ಐದು, ಹತ್ತು ಡಾಕ್ಟರ್‌ಗಳಿಗೂ ಇದು ಕಾಯಿಲೆ ಬಗ್ಗಲಿಲ್ಲವೆಂದರೆ, ಇಲ್ಲಿ ಆಗಲ್ಲ ಬಳ್ಳಾರಿ ಓ.ಪಿ.ಡಿಗೆ ಹೋಗಿ ಎನ್ನುತ್ತಿದ್ದರು. ಬಳ್ಳಾರಿಗೆ ಕರಕೊಂಡು ಹೋಗಿರಿ ಅಂದರಂತೆ ಡಾಕ್ಟ್ರು ಎಂದು ಸುದ್ದಿ ಕೇಳಿದರೆ ಸಾಕು, ರೋಗಿಯ ಸಂಬಂಧಿಕರು, ಮನೆಯವರು ‘ಹೋ..’ ಎಂದು ಅಳುತ್ತಿದ್ದರು. ಇದು ಆಗಿನ ಪರಿಸ್ಥಿತಿ. ಆದರೆ ನಮ್ಮ ತಂದೆಗೆ ಐದು ರುಪಾಯಿಗೇ ಈ ಚೇಳಿನ ಉರಿ, ಶೀತ, ಸನ್ನಿ ಗುಣವಾದ್ದರಿಂದ ನಮಗೆ ಮುಂದಿನ ಎಲ್ಲ ಚಿಂತೆ ದೂರವಾಯಿತು. ಹೀಗೆ ನಮ್ಮ ತಂದೆ ಅಸಾಧ್ಯ ಸಹಿಸುವ ಗುಣವುಳ್ಳವ ರಾಗಿದ್ದರು.

ತಮ್ಮ ಸುತ್ತ ಒಂದು ಸರ್ಕಲ್ ಹಾಕಿಕೊಂಡು ಅದರೊಳಗೆ ಬದುಕಿದವರು, ಅವರು ಪುಸ್ತಕ ಹಿಡಿದು ಓದುತ್ತಾ ಕೂತಿದ್ದನ್ನು, ಮೈಕಿನಲ್ಲಿ ಮಾತನಾಡಿದ್ದನ್ನು ನಾನೆಂದೂ ನೋಡಲೇ ಇಲ್ಲ. ಸ್ನೇಹಿತ ರೊಂದಿಗೆ ನಗು, ಮಾತು, ಪಾರ್ಟಿ, ಪಿಕ್‌ನಿಕ್, ಸಿನಿಮಾ ಊ..ಹ್ಞೂ.. ಒಂದಕ್ಕೂ ಹೋಗಲಿಲ್ಲ. ತನ್ನ ಶಾಲೆ, ತನ್ನ 10*20 ಮನೆ ಆತನ ಜಗತ್ತು. ಬೇರೆ ಊರುಗಳನ್ನು ಆತನ ನೋಡಲಿಲ್ಲ. 60-70ರ ದಶಕದ ಹಳ್ಳಿಗಳ ಶಾಲೆಗೇನೇ ಮೂರು ವರ್ಷಕ್ಕೊಮ್ಮೆ ಟ್ರಾನ್ಸ್ ಫರ್ ಆದರೆ, ಹೋಗುತ್ತಿದ್ದವನಾಗಲೀ, ಮತ್ಯಾವ ಊರಿಗೂ ಹೋದಾತ ಅಲ್ಲ.

ಸ್ವಾತಂತ್ರ್ಯ ಯೋಧನಿದ್ದು, ಆತನಿಗೆ ಕೇಂದ್ರ ಸರಕಾರ ರೈಲ್ವೇ ಫ್ರೀ ಪಾಸ್‌ನ್ನು ನೀಡಿತ್ತು. ಅದರಲ್ಲಿ ಒಮ್ಮೆ ಎ.ಸಿ., ಫಸ್ಟ್‌ಕ್ಲಾಸ್ ಬೋಗಿಯಲ್ಲಿ ಒಂದೇ ಬಾರಿ, ಅದೂ ನನ್ನ ಜತೆ ಮಾಡಿಕೊಂಡು ಬೆಂಗಳೂರಿನಲ್ಲಿದ್ದ ತನ್ನ ತಮ್ಮಂದಿರಾದ ಗಂಗೇನಹಳ್ಳಿಯಲ್ಲಿದ್ದ ಶೋಭಾ ಆರ್ಟ್ಸ್‌ನ ದಿ|| ನಾರಾಯಣಾ ಚಾರ್ ಮನೆಗೂ ಹಾಗೂ ಮುನ್ಸಿಪಲ್ ಕಮೀಷನರ್ ಆಗಿದ್ದ ಮತ್ತಿಕೇರಿಯಲ್ಲಿದ್ದ ರಾಮಾಚಾರ್ ಇವರ ಮನೆಗೂ ಹೋಗಿದ್ದ.

ಇವರಿಬ್ಬರನ್ನು ನೋಡಲು ಎನ್ನವುದಕ್ಕಿಂತ ತನಗೆ ಬಂದಿರುವ ಫ್ರೀ ರೈಲ್ವೆ ಪಾಸಿನ ಪರೀಕ್ಷೆಗೆ ಹೋಗಿದ್ದು ಬಿಟ್ಟರೆ, ಮತ್ತೆಲ್ಲೂ ಆತ ನಾನಾ ಕಡೆ ತಿರುಗಲೇ ಇಲ್ಲ. ‘ನಿಂದಾಸ್ತುತಿಗಳ ತಾಳಿರೋ, ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದಷ್ಟರಿಂದಲೆ ಬಾಳಿಕೋ, ಗೋವಿಂದ ನಿನ್ನವನೆಂದು ಹೇಳಿಕೋ ಅಂಜಬ್ಯಾಡಲೋ ಎಲೆ ಜೀವ.. ಅಂಜಬ್ಯಾಡ..’ ಎಂಬ ದಾಸರ ಸೂಕ್ತಿಯಂತೆ ಇಂಥ ಸೂಕ್ತಿಗಳನ್ನು ಓದದೆಯೇ, ಕೇಳದೆಯೇ ತನ್ನ ಈ ಲೋಕದ ಕರ್ತವ್ಯ ಮುಗಿಸಿದ.

ಹೆಚ್ಚು ಓದಲಿಲ್ಲ, ಹೆಚ್ಚಿನದು ಬಯಸಲಿಲ್ಲ. ಆದರೆ ಆತನಿಂದ ಈ ಭೂಮಿಗೆ ಬಂದ ನಾನು, ಎಲ್ಲ ಮಾನ, ಅಪಮಾನ, ಗೌರವ, ಸನ್ಮಾನ, ಸುಖಗಳನ್ನು ಕಂಡೆ. ಸಾಹಿತ್ಯ, ಸಂಗೀತವೆಂದರೆ, ಅವು ಅನ್ನ ಕೊಡದ, ಕೆಲಸವಿಲ್ಲದ ಜನ ಮಾಡುವ, ಹೊತ್ತುಹೋಗ ದವರ ಹವ್ಯಾಸಗಳೆನ್ನುತ್ತಿದ್ದ ನನ್ನ ತಂದೆಗೆ ಇಂತಹ ಸಾಹಿತ್ಯ, ಭಾಷಣಗಳಿಂದಲೇ ಬದುಕುವ ಮಗ ಹುಟ್ಟಿಬಿಟ್ಟೆ. ಸಭೆ, ಸಮಾರಂಭಗಳ ಕಡೆ ತಲೆ ಹಾಕದ ಆತನ ಹೆಸರನ್ನು ಇಂದು ಪ್ರತಿನಿತ್ಯ ನನ್ನ ಕಾರ್ಯಕ್ರಮಗಳ ವೇದಿಕೆಯಲ್ಲಿ ನನ್ನ ಪರಿಚಯ ಭಾಷಣ ಮಾಡುವಾಗ ಸಂಘಟಕರು ಗಂಗಾವತಿ ಪ್ರಾಣೇಶರವರ ತಂದೆಯ ಹೆಸರು ಬಿ.ವೆಂಕೋಬಾಚಾರ್ ಎಂದು ಓದುವಾಗ, ನಮ್ಮ ಅಪ್ಪ ಇದ್ದಿದ್ದರೆ, ಒಳ ಬಂದು ನನ್ನನ್ನು ಒದ್ದು ಹೊರಗೆಳೆದುಕೊಂಡು ಹೋಗಿ ಯಾವದಾದರೂ ಕೆಲಸಕ್ಕೆ ಹಚ್ಚುತ್ತಿದ್ದ ಎನಿಸುತ್ತದೆ.

ಹರಿದ್ವೇರಣ್ಯಕಶ್ಯಪನಿಗೆ ಪ್ರಲ್ಹಾದ ಹುಟ್ಟಿದ ಹಾಗೆ, ಸಾಹಿತ್ಯ ದ್ವೇಷಿಯಾದ ನನ್ನ ತಂದೆಗೆ ಪ್ರಾಣೇಶ ಹುಟ್ಟಿ, ಸಾಹಿತ್ಯ ದಿಂದಲೇ ಆತನಿಗೆ ಮೋಕ್ಷ ಕೊಡಿಸಿದ್ದೇನೆಂದು ಹೆಮ್ಮೆ ಪಡುತ್ತಿರುತ್ತೇನೆ. ಆತ ಇದನ್ನು ಒಪ್ಪಿದ್ದಾನೋ ಇಲ್ಲವೋ ನಾನರಿಯೇ.