ಶಿಶಿರ ಕಾಲ
ಶಿಶಿರ್ ಹೆಗಡೆ, ಚಿಕಾಗೊ
ಭಸ್ಮಾಸುರ ಮೋಹಿನಿ ಕಥೆ ಯಾರಿಗೆ ಗೊತ್ತಿಲ್ಲ. ಭಸ್ಮಾಸುರ ನಮ್ಮ ಪುರಾಣದ ನೋಟೋರಿಯಸ್ ವಿಲನ್. ಆತ ಖಳನಾಯಕ ಎಂದಾಗುವುದಕ್ಕಿಂತ ಮೊದಲು ಒಬ್ಬ ಮಹಾನ್ ಶಿವ ಭಕ್ತ. ಈ ಭಸ್ಮಾಸುರನಿಗೆ ಶಿವನಿಂದ ಇಂಥದ್ದೊಂದು ತಲೆಯ ಮೇಲೆ ಕೈ ಇಟ್ಟಕೂಡಲೇ ಭಸ್ಮವಾಗಿಸುವ ವರ ಸಿಕ್ಕಿದ ಕಥೆಯನ್ನು ಕೇಳಿದಾಗ ಲೆಲ್ಲ ಈತ ವರ ಪಡೆಯುವುದಕ್ಕಿಂತ ಮೊದಲಿನ ಹೆಸರೇನಿದ್ದಿರಬಹುದು ಎನ್ನುವ ಪ್ರಶ್ನೆ ಮೂಡುತ್ತದೆ.
ಆತನಿಗೆ ವರ ಸಿಕ್ಕನಂತರ ಆತ ಭಸ್ಮಾಸುರನಾಗಿದ್ದಿರಬಹುದಲ್ಲ? ಅದಕ್ಕಿಂತ ಮೊದಲು ಆತ ಯಾವುದೋ ಒಂದು ಅಸುರ. ನನಗಂತೂ ಆತನ ಬರ್ತ್ ಸರ್ಟಿಫಿ ಕೇಟ್‌ನಲ್ಲಿರುವ ಹೆಸರು ಗೊತ್ತಿಲ್ಲ. ಪುರಾಣ ಕಥೆ ಬದಿಗಿರಲಿ. ಆದರೆ ನಾನು ಈ ಪೌರಾಣಿಕ ಕಥೆ ಕೇಳಿದಾಗಲೆಲ್ಲ, ಅಥವಾ ಯಕ್ಷಗಾನ ನೋಡಿದಾಗಲೆಲ್ಲ ನಾವೆಲ್ಲರೂ ಇಂದಿನ ಕಾಲದ ಒಬ್ಬ ಭೋಳೆ ಭಸ್ಮಾಸುರಂತೆಯೇ ಕಾಣಿಸುವುದು. ಇಲ್ಲಿ ಈ ಸೋಷಿಯಲ್ ಮೀಡಿಯಾ ಎನ್ನುವುದು ಮೋಹಿನಿ. ನೀವು ನಿಮ್ಮ ಮೊಬೈಲ್ ಬಳಕೆಯ ವಿಧಾನವನ್ನೇ ಒಮ್ಮೆ ಗ್ರಹಿಸಿ ನೋಡಿ, ಆಗ ನಾನು ಹೇಳುವ ಹೋಲಿಕೆ ಇನ್ನಷ್ಟು ಹೊಂದಿಕೆಯಾದಂತನಿಸಬಹುದು.
ಸಾಮಾನ್ಯವಾಗಿ ಮೊಬೈಲ್ ಹಿಡಿದಾಕ್ಷಣ ನೀವು ಸುದ್ದಿಯನ್ನು ಓದಲು ಶುರುಮಾಡಿ ಅಥವಾ ಇಮೇಲ್ ಅಥವಾ ಇನ್ನೊಂದು ; ಸ್ವಲ್ಪ ಸಮಯದ ನಂತರ ಕೊನೆ ಯಲ್ಲಿ ಹೋಗಿ ಮುಟ್ಟುವುದು ಒಂದಿಲ್ಲೊಂದು ಸೋಷಿಯಲ್ ಮೀಡಿಯಾಕ್ಕೆ – ಸಾಮಾನ್ಯವಾಗಿ ಫೇಸ್‌ಬುಕ್‌ಗೆ. ಫೇಸ್‌ಬುಕ್ ಈಗ ಸುಮಾರು ಹತ್ತು ವರ್ಷ ಮೊದಲು ಹೀಗಿರಲಿಲ್ಲ. ಫೇಸ್‌ಬುಕ್ ಸ್ನೇಹಿತರೆಲ್ಲ ನಿಜವಾಗಿ ಬಲ್ಲ ಸ್ನೇಹಿತರೇ ಆಗಿದ್ದರು. ಮೂಲದಲ್ಲಿ ಇದೊಂದು ನಮ್ಮ ವರ ಜೊತೆ ಫೋಟೋ, ಉಭಯ ಕುಶಲೋಪರಿ ಹಂಚಿಕೊಳ್ಳುವ ಸಲಕರಣೆಯಾಗಿತ್ತು.
ಆಗ ಫೇಸ್‌ಬುಕ್ ಸ್ನೇಹಿತರೆಲ್ಲ ಮೊದಲು ನೈಜ ಜಗತ್ತಿನಲ್ಲಿ ಸ್ನೇಹಿತರಾದ ನಂತರ ಇಲ್ಲಿ ಸ್ನೇಹಿತರಾಗುತ್ತಿದ್ದರು. ಈಗ ಎಲ್ಲರ ಸ್ನೇಹಿತರ ಪಟ್ಟಿಯಲ್ಲೂ ಜೀವನದಲ್ಲಿ ಒಮ್ಮೆಯೂ ಭೇಟಿಯೇ ಆಗದ, ಹೆಸರೇ ಕೇಳದ ಒಂದಿಷ್ಟು ಫೇಸ್‌ಬುಕ್ ಸ್ನೇಹಿತರಿರುತ್ತಾರೆ. ಸಾಮಾನ್ಯವಾಗಿ ಈ ಗೊತ್ತೇ ಇಲ್ಲದ ಸ್ನೇಹಿತರನ್ನು ಇನ್ಸ್ಟಾಗ್ರಾಮ್ ಎಂಬಿತ್ಯಾದಿಯಲ್ಲಿ ಫಾಲೋ ಕೂಡ ಮಾಡುತ್ತಿರುತ್ತೇವೆ. ಅವರದು ಟಿಕ್ ಟಾಕ್ ಕೂಡ ಇರುತ್ತದೆ, ಯೂಟ್ಯೂಬ್ ಚ್ಯಾನಲ್ ಕೂಡ. ಇದೆಲ್ಲದರಿಂದಾಗಿ ನಮ್ಮೆದುರಿಗೆ ಒಂದು ವಿಚಿತ್ರ ರೀತಿಯ ಜಗತ್ತು ತೆರೆದುಕೊಂಡಿರುತ್ತದೆ.
ಇದರಿಂದೇನು ಸಮಸ್ಯೆ? ಅಯ್ಯೋ, ಎಲ್ಲೋ ಫೇಸ್ಬುಕ್ ನಲ್ಲಿ ಯಾರೋ ಒಬ್ಬ ಸ್ನೇಹಿತರಾಗಿಬಿಟ್ಟರೆ ಕಷ್ಟವೇನು ಅಲ್ವೇ? ನಿಜ – ಮೇಲ್ನೋಟಕ್ಕೆ ಇದೆಲ್ಲವೂ ಮುಗ್ಧ. ಇಲ್ಲಿ ಗ್ರಹಿಸಬೇಕಾದದ್ದು – ವರ್ಚುಯಲ್ ಜಗತ್ತೊಂದು ನಮ್ಮೆದುರಿಗೆ ಸೃಷ್ಟಿಯಾಗುವುದನ್ನು. ನಮಗರಿವಿಲ್ಲದಂತೆ ಈ ನಿಜ ಸ್ನೇಹಿತರು ಮತ್ತು ಫೇಸ್ಬುಕ್ ಸ್ನೇಹಿತರ ಮಿಶ್ರಿತ ಬ್ರಹ್ಮಾಂಡ ನಮ್ಮೊಳಗೆ ಹೊಸತೊಂದು ಜಗತ್ತಿನೆಡೆಗಿನ ಆಯಾಮವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಸಂಬಂಧವಿರುವ ವ್ಯಕ್ತಿಗಳ ಜೊತೆ ಜೊತೆ ಸಂಬಂಧ, ಪೂರ್ವಾಪರವಿಲ್ಲದ ವ್ಯಕ್ತಿಗಳ ಜೊತೆ ಕೂಡ ಒಂದು ಕನೆಕ್ಷನ್ ಏರ್ಪಡುತ್ತದೆ. ನಮಗೆ ಗೊತ್ತಿರುವವರನ್ನು ಫೇಸ್‌ಬುಕ್‌ನಲ್ಲಿ ಫಾಲೋ ಮಾಡುವಾಗ ಅಲ್ಲಿ ವ್ಯಕ್ತವಾಗುವ ಅಭಿಪ್ರಾಯ, ಸನ್ನಿವೇಶ ಎಲ್ಲ ಅರ್ಥ ವಾಗುತ್ತದೆ ಆದರೆ ಗೊತ್ತೇ ಇಲ್ಲದ ವ್ಯಕ್ತಿಯ ಬಗ್ಗೆ ಸತ್ಯಕ್ಕೆ ದೂರವಾದ ಕಲ್ಪನೆಗಳು ನಮ್ಮಲ್ಲಿ ಕ್ರಮೇಣ ಹುಟ್ಟಿಕೊಳ್ಳುತ್ತವೆ.
ನಮಗೆ ಗೊತ್ತಿಲ್ಲದ ವ್ಯಕ್ತಿಗಳಿಗೆ ಎಷ್ಟು ಮಕ್ಕಳು, ಅವರ ಕಾರ್ ಯಾವುದು, ಅವರ ಪ್ರವಾಸ ಎಲ್ಲೆಲ್ಲಿ, ಅವರ ಮನೆಯಲ್ಲಿ ಯಾವ ರೀತಿ ಕುರ್ಚಿಯಿದೆ, ಅವರು ಹಾಕಿದ ಅಂಗಿಯಲ್ಲಿ ಎಷ್ಟು ಕಿಸೆಗಳಿವೆ, ಅವರ ನೈಲ್‌ಪಾಲಿಶ್ ಬಣ್ಣವೆನು, ಅವರು ಕಟ್ಟುವ ವಾಚ್ ಬ್ರ್ಯಾಂಡ್ ಯಾವುದು ಹೀಗೆ ಅದೆಷ್ಟೋ ಬೇಡದ ವಿಚಾರಗಳನ್ನು ಮನಸ್ಸು ಪ್ರೋಸೆಸ್ ಮಾಡಲು ಶುರುಮಾಡುತ್ತದೆ. ಇದೆಲ್ಲ ಸೇರಿ, ಕ್ರಮೇಣ ಭ್ರಮಾ ಲೋಕ ಅಕರಾಳ – ವಿಕರಾಳವಾಗಿ ಬೆಳೆದು ಅದೇ ಸತ್ಯ ಎನ್ನುವ ವಿಚಿತ್ರ ಕಲ್ಪನೆ ಜಗತ್ತಿನೆಡೆಗೆ ರೂಪಗೊಳ್ಳುತ್ತ ಹೋಗುತ್ತದೆ.
Perceive the world ಜಗತ್ತನ್ನು ನೋಡುವ ರೀತಿ – ಗ್ರಹಿಸುವ ಪರಿ ಅದೆಷ್ಟೋ ಕೋಟಿ ವರ್ಷದಿಂದ ಬುದ್ಧಿಯುಳ್ಳ ಜೀವಿಗಳು (ಬುದ್ಧಿಜೀವಿಗಳಲ್ಲ ಮಾರಾಯ್ರೆ!!) ಬೆಳೆಸಿಕೊಂಡು, ರೂಪಿಸಿಕೊಂಡು ಬಂದ ಒಂದು ಅತ್ಯವಶ್ಯಕ ಗುಣ. ಈ ಗುಣವೇ ನಮ್ಮ ನಾಗರೀಕತೆಯನ್ನು ಬೆಳೆಸಿದ್ದು, ಇಲ್ಲಿಗೆ ತಂದು ನಿಲ್ಲಿಸಿದ್ದು. ಆದರೆ ಆ ಗ್ರಹಿಕೆಯೇ ಹೆಚ್ಚು ಹೆಚ್ಚು ಅವಾಸ್ತವಿಕವಾದಂತೆ ಜಗತ್ತು ಕ್ರಮೇಣ ನಾವಂದುಕೊಂಡಂತಿಲ್ಲ ಎಂದೆನಿಸಲು ಶುರುವಾಗುತ್ತದೆ. ನಮ್ಮ ಪರ್ಸೆಪ್ಷನ್ – ಗ್ರಹಿಕೆ ಅತ್ಯಂತ ವೇಗದಲ್ಲಿ ಬದಲಾಗಿಬಿಡುತ್ತದೆ. ಸಮಸ್ಯೆಯಾಗುವುದೇ ಇಲ್ಲಿ. ಎಲ್ಲರೂ ಬಣ್ಣ ಬಣ್ಣದ ಬಟ್ಟೆಗಳನ್ನೇ ಹಾಕುವುದು, ಅವರೆಲ್ಲ
ಮನೆಯಲ್ಲಿ ಕೂಡ ವಿನ್ಯಾಸದ ಉಡುಪುಗಳನ್ನೇ ಧರಿಸುವುದು, ಅವರೆಲ್ಲರ ಮನೆಯಲ್ಲಿ ದೊಡ್ಡ ಟಿವಿ ಬಂದಾಗಿದೆ, ಇವತ್ತಿನ ಜಗತ್ತಿನಲ್ಲಿ ಇಷ್ಟುದ್ದದ ಕಾರು
ಸಾಮಾನ್ಯ, ಅವರೆಲ್ಲರ ಬಳಿ ಐಫೋನ್ ಇದೆ, ಅವರೆಲ್ಲ ರಜೆಗೆ ವಿದೇಶಕ್ಕೆ ಹೋಗುತ್ತಾರೆ ಹೀಗೆ.
ಮನುಷ್ಯ ಏನಾದರೊಂದು ಇನ್ನೊಬ್ಬರ ಬಗ್ಗೆ ಗ್ರಹಿಸಿದ ನಂತರದಲ್ಲಿ ಮಾಡಿಕೊಳ್ಳುವುದೇ ಹೋಲಿಕೆ. ಅದು ನಮ್ಮ ಮನಸ್ಸಿನ ಮೂಲಭೂತ ಗುಣ. ಹೀಗೆ
ವಾಸ್ತವವೇ ಅಲ್ಲದ ಮನಸ್ಸಿನಲ್ಲೇ ನಿರ್ಮಾಣವಾಗುವ ತಿರುಕನ ಗಾಳಿಗೋಪುರದ ರೀತಿಯ ಕಲ್ಪನಾ ಜಗತ್ತು ಕ್ರಮೇಣ ಹೆಚ್ಚಿದಂತೆಲ್ಲ ಬೇಸರ, ತನ್ನಲ್ಲಿಲ್ಲ, ನನ್ನ ಬದುಕು ಸರಿಯಿಲ್ಲ, ನಾನು ಸುಂದರನಲ್ಲ, ನಾನು ದಡ್ಡ, ನಾನೇ ಫೇಮಸ್ ಅಲ್ಲ ಎಂಬ ಹತ್ತೈವತ್ತು ಅಡ್ಡ ವಿಚಾರಗಳು ಬೆಳೆಯುತ್ತವೆ. ಶ್ರೀಮಂತಿಕೆ, ಸುಖ, ಖುಷಿ ಇವೆಲ್ಲವೂ ನನಗೆ ಬೇಕಷ್ಟಿದೆಯೇ ಎನ್ನುವ ಪ್ರಶ್ನೆ ಇಟ್ಟೇ ಬದುಕುವ ನಮಗೆ ಋಣಾತ್ಮಕವಾಗಿ ಉತ್ತರ ಸೃಷ್ಟಿಸುವುದು ಇದೇ ಅವಾಸ್ತವಿಕ, ಕಾಲ್ಪನಿಕ ಜಗತ್ತು.
ಈ ಪ್ರಶ್ನೆಯ ಉದ್ಭವಕ್ಕೆ ಇಂಥದ್ದೇ ಮಾನದಂಡ ಎಂದೇನಿಲ್ಲ. ಶ್ರೀಮಂತಿಕೆಯನ್ನೇ ತೆಗೆದುಕೊಳ್ಳಿ, ಕೆಲವರಿಗೆ ಬಸ್ ಹತ್ತಿ ಹೋಗುವುದೇ ಒಂದು ಐಷಾರಾಮಿ,
ಇನ್ನು ಕೆಲವರಿಗೆ ಸ್ವಂತದ ಕಾರು. ಮತ್ತೆ ಕೆಲವರಿಗೆ ವಿಮಾನದಲ್ಲಿ ವಿದೇಶ ಪ್ರಯಾಣ. ವಿದೇಶಕ್ಕೆ ಮೋಜಿಗೆ ಪ್ರಯಾಣ ಮಾಡುವಷ್ಟು ಸದೃಢವಾಗಿದ್ದಲ್ಲಿ ಕೂಡ ಆತ ವಿಮಾನದಲ್ಲಿ ಮೊದಲ ಸಾಲುಗಳನ್ನು ದಾಟಿ ಹೋಗುವಾಗ ಅಲ್ಲಿನ ಬಿಸಿನೆಸ್ ಕ್ಲಾಸ್ ಸೀಟ್‌ಗಳಲ್ಲಿ ಕೂತ ಆತನಿಗಿಂತ ಹೆಚ್ಚು ಶ್ರೀಮಂತರನ್ನು ನೋಡಿ ಕುಗ್ಗಬಹುದು. ಬಿಸಿನೆಸ್ ಕ್ಲಾಸಿನಲ್ಲಿ ಕೂತವನಿಗೆ ಕಿಟಕಿಯಲ್ಲಿ ಪ್ರೈವೇಟ್ ಜೆಟ್ ಕಾಣಿಸುತ್ತದೆ.
ಹೀಗೆ ಶ್ರೀಮಂತಿಕೆ ಹೇಗೆ ಇಷ್ಟು ಸಾಕು ಎಂದು ಯಾವತ್ತೂ ಅನ್ನಿಸುವುದೇ ಇಲ್ಲವೋ ಹಾಗೆಯೇ ಉಳಿದೆಲ್ಲ ಸುಖ, ಖುಷಿಗಳು. ಈ ರೀತಿಯ ಮನಸ್ಸಿನಲ್ಲಿ ತನ್ನಲ್ಲಿಲ್ಲ ವಲ್ಲ ಎನ್ನುವ ಭಾವವನ್ನು ಹುಟ್ಟಿಹಾಕುವ ಘಟನೆಗಳು ನಡೆಯುವುದು ಮೊದಲೆಲ್ಲ ಅಪರೂಪವಾಗಿತ್ತು. ಕಾರಣ ಮನುಷ್ಯರಾದ ನಾವು, ಪ್ರತಿಯೊಬ್ಬರೂ ಹೆಚ್ಚು ಕಡಿಮೆ ಇದೆಲ್ಲ ನಮ್ಮ ಜೊತೆ ಸರಿಜೋಡಿಯಾಗುವವರ ಜೊತೆಯಷ್ಟೇ ಬದುಕುತ್ತಿರುತ್ತೇವೆ. ನಮ್ಮ ಮನೆಯ ಅಕ್ಕ ಪಕ್ಕ ಇರುವವರು ಹೆಚ್ಚು ಕಡಿಮೆ ನಮ್ಮಂಥ ವರೇ ಆಗಿರುತ್ತಾರೆ. ಆಗ, ಹೋಲಿಸಿಕೊಂಡಾಗ ಅಲ್ಲಿನ ವ್ಯತ್ಯಾಸ ಚಿಕ್ಕದು ಮತ್ತು ಇವೆಲ್ಲ ನಾವೂ ಪಡೆಯಬಹುದು ಅಥವಾ ಬೇಡವೆಂದು ಬಿಟ್ಟುಬಿಡಬಹುದು.
ಅಲ್ಲಿ ಉಂಟಾಗುವ ಅಸೂಯೆ ಕೂಡ ಬಹಳ ಚಿಕ್ಕದು ಮತ್ತು ಮರೆತುಬಿಡಬಹುದು ಅಥವಾ ನಮ್ಮನ್ನು ಸ್ಪರ್ಧೆಗೆ ಅಣಿಯಾಗಿಸಿ ನಿಲ್ಲಿಸಬಹುದು. ಹಾಗಿರುವಲ್ಲಿ ಸ್ಪರ್ಧಾತ್ಮಕ ಅಭಿವೃದ್ಧಿ, ಏಳ್ಗೆ ಸಾಧ್ಯ. ಆದರೆ ನೀವು ಅಲ್ಲೆಲ್ಲೋ ಮುರುಗೇಶ್ ಪಾಳ್ಯದಲ್ಲಿ ಕೂತು ಮುಕೇಶ್ ಅಂಬಾನಿ ಮಗಳ ಬಟ್ಟೆ ನೋಡಲು ಶುರುಮಾಡಿದರೆ? ಹಾಗೆಯೇ ಅಂಥದ್ದೇ ಇನ್ನೊಂದಿಷ್ಟು ಯಾರ‍್ಯಾರನ್ನೋ ದಿನಬೆಳಿಗ್ಗೆ ಹಿಂಬಾಲಿಸಿ ಕುರುಬಲು ಶುರುಮಾಡಿಬಿಟ್ಟರೆ? ಹೇಳಲು ಹೊರಟದ್ದು ಇಷ್ಟೇ – ಅವಾಸ್ತವಿಕ ಹೋಲಿಕೆ, ಕಲ್ಪನೆ, ಮತ್ತು ಅದೆಲ್ಲದಕ್ಕಿಂತ ಹೆಚ್ಚಾಗಿ ವಾಸ್ತವವೇ ಅಲ್ಲದ ಜಗತ್ತಿನೆಡೆಗಿನ ಹಪಾಹಪಿ ಬೆಳೆದಂತೆ ಸಮಾಜದಲ್ಲಿ ಕ್ರಮೇಣ ಮನುಷ್ಯ ನಡವಳಿಕೆ
ಬದಲಾಗುತ್ತ ಹೋಗುತ್ತದೆ. ಅದೆಲ್ಲದರ ಪರಿಣಾಮ ನಮ್ಮೆಲ್ಲರ ಸುತ್ತ ಕಾಣಿಸುತ್ತದೆ – ನಾವು ನೀವೇ ಅದರಲ್ಲಿ ಪಾತ್ರಧಾರಿಗಳಾಗಿರುತ್ತೇವೆ.
ಅಮೆರಿಕ ಸೋಷಿಯಲ್ ಮೀಡಿಯಾ ಬಳಕೆಯಲ್ಲಿ ಭಾರತಕ್ಕಿಂತ ಮುಂದೆ. ಫಿವ್ ರಿಸರ್ಚ್ ಸೆಂಟರ್ ಪ್ರಕಾರ ಇಂದು 69% ವಯಸ್ಕರು ಮತ್ತು 81% ಹದಿಹರೆ ಯದವರು ಸೋಷಿಯಲ್ ಮೀಡಿಯಾ ಬಳಸುವವರು. ನನಗೇಕೋ ಈ ಹದಿಹರೆಯದವರ ಸಂಖ್ಯೆಯ ಮೇಲೆಯೇ ಅನುಮಾನವಿದೆ. ಏಕೆಂದರೆ ಇವತ್ತು ಸೋಷಿಯಲ್ ಮೀಡಿಯಾ ಹೊಂದಿಲ್ಲದ ಹದಿಹರೆಯದವರೇ ಇಲ್ಲವೆಂಬಂತಾಗಿದೆ. ಈ 70-80% – ತೊಂಭತ್ತೈದು ನೂರಕ್ಕೆ ತಲುಪಲು ಅಷ್ಟೇನೂ ಸಮಯ ಬೇಡ. ಇರಲಿ – ಈಗ ಸೋಷಿಯಲ್ ಮೀಡಿಯಾ ಅದರಲ್ಲೂ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಅಭ್ಯಾಸ ಮಾಡಲು ಅಮೆರಿಕಾಕ್ಕಿಂತ ಒಳ್ಳೆಯ ಉದಾಹರಣೆ ಇನ್ನೊಂದಿಲ್ಲ.
ಇಲ್ಲಿ ಪ್ರತೀ ದಿನ ಸೋಷಿಯಲ್ ಮೀಡಿಯಾದ ಅಡ್ಡ ಪರಿಣಾಮದ ಬಗ್ಗೆ ಪೇಪರ್‌ನಲ್ಲಿ ಒಂದಾದರೂ ಸುದ್ದಿ, ಅಂಕಿ ಅಂಶ ಇದ್ದೇ ಇರುತ್ತದೆ. ಆದರೆ ನನಗೆ ಗಮನ ಸೆಳೆಯುವುದು ಕೆಲ ಚಿಕ್ಕ ಬಾಕ್ಸ್ ನ್ಯೂಸ್ ಗಳು. ಈಗ ಈ ಲೇಖನ ಬರೆಯುವ ಸ್ವಲ್ಪ ಸಮಯದ ಮೊದಲು ಒಂದು ಚಿಕ್ಕ ಸುದ್ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದದ್ದು ಓದಿದೆ. ಒಬ್ಬ ಹದಿಹರೆಯದ ಹುಡುಗಿ ಹೊಸತೊಂದು ಫ್ರೆಂಡ್ ಜೊತೆ ಸಿನಿಮಾಕ್ಕೆ ಹೋಗಿದ್ದಾಳೆ – ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿ ದ್ದಾಳೆ.
ಅದನ್ನು ನೋಡಿದ ಅವಳ ದೀರ್ಘಕಾಲದ ಆಪ್ತ ಗೆಳತಿ ಮನೆಯಲ್ಲಿ ಕೂತು ಬೇಸರಕ್ಕೆ ಬಾಗಿಲ ಸಂಧಿಯಲ್ಲಿ ಕೈ ಇಟ್ಟು ಗಟ್ಟಿ ಬಾಗಿಲು ಒತ್ತಿ ತನ್ನ ಬೆರಳನ್ನು ಜಜ್ಜಿ ಮುರಿದುಕೊಂಡಿದ್ದಾನೆ. ಅವಳಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಮತ್ತು ಇದು ಕೇವಲ ಬೇಸರಕ್ಕೆ ಮಾಡಿಕೊಂಡದ್ದು – ಇದು ವರದಿ. ಈ ವರದಿ
ಹೇಗಿದೆಯೆಂದರೆ ಇದೊಂದು ಸಾಮಾನ್ಯ ನಡವಳಿಕೆ ಎಂಬಂತೆ. ಅದೇ ಸೋಷಿಯಲ್ ಮೀಡಿಯಾ ಇಲ್ಲದಿದ್ದರೆ ಅವಳ ಸ್ನೇಹಿತೆ ಇನ್ನೊಂದು ಸ್ನೇಹಿತೆಯ ಜೊತೆ ಸಿನೆಮಾಕ್ಕೆ ಹೋಗಿದ್ದೇ ತಿಳಿಯುತ್ತಿರಲಿಲ್ಲ ಅಲ್ಲವೇ? ಇಂತಹ ಘಟನೆಗಳು ಲಕ್ಷ ಸಂಖ್ಯೆಯಲ್ಲಿ ಆಗುತ್ತಿದ್ದು ಇದೆಲ್ಲ ಸಮಸ್ಯೆ ಎಂದು ಗುರುತಿಸಲು ನಾವು ಇಂದು ಹಿಂಜರಿಯುತ್ತಿದ್ದೇವೆ. ಈ ಘಟನೆಯನ್ನು ನೀವು ಇಲ್ಲಿ ಪ್ರಬುದ್ಧತೆಯ ಕೊರತೆ ಎಂದು ಹೇಳಬಹುದು – ಆದರೆ ಪ್ರಬುದ್ಧತೆ ಎನ್ನುವುದು ಯಾವುದೇ ಜೀನ್ಸ್‌ನಿಂದ ಬರುವಂಥದ್ದಲ್ಲ. ಪ್ರಬುದ್ಧತೆ ಎಂದರೆ ವ್ಯಕ್ತಿ ಸಮಾಜಕ್ಕೆ ಹೇಗೆ ಎಷ್ಟು ಹೊಂದಿಕೊಳ್ಳಬಲ್ಲ ಮತ್ತು ಅದು ಇರುವಂತೆಯೇ ಹೇಗೆ ಸ್ವೀಕರಿಸಬಲ್ಲ ಎಂಬುದು.
ಆದರೆ ಹದಿಹರೆಯದ ಸಮಯದಲ್ಲಿ ಇಂಥದ್ದೊಂದು ಅವಾಸ್ತವಿಕವೆನ್ನುವ ಜಗತ್ತು ವ್ಯಕ್ತಿಗೆ ತೆರೆದುಕೊಂಡರೆ ಅಲ್ಲಿ ಹೇಗೆ ಪ್ರಬುದ್ಧತೆ ನಿರೀಕ್ಷಿಸಲು ಸಾಧ್ಯ? ಇನ್ನು ಇವೆಲ್ಲ ದೀರ್ಘಕಾಲದಲ್ಲಿ ಸೃಷ್ಟಿಸುವ ಹೊಸ ಆಯಾಮದ ಜಗತ್ತು ಹೇಗಾಗಬಹುದು?
Body Dysmorphic Disorder : ಡಿಸಾರ್ಡರ್ ಎಂದಾಕ್ಷಣ ಏನೋ ಒಂದು ಮಹಾ ಮಾನಸಿಕ ರೋಗ ಎಂದುಕೊಳ್ಳಬೇಡಿ. ಇದೊಂದು ತೀರಾ ಸಾಮಾನ್ಯ ವಾದ, ನಾವು ನೀವು ಎಲ್ಲ ಅನುಭವಿಸಿದ ಅಥವಾ ಇಂದಿಗೂ ಅನುಭವಿಸುವ ಒಂದು ಮಾನಸಿಕ ಸ್ಥಿತಿ. ಮುಖದ ಮೇಲೆ, ಅಂಗೈ, ಮುಂಗೈನಲ್ಲಿ ಹೀಗೆ ಎಲ್ಲೋ ಒಂದು ಕಡೆ ಕಾಣಿಸುವಲ್ಲಿ ತೀರಾ ಚಿಕ್ಕದೆನ್ನಿಸುವ ದೇಹ ನ್ಯೂನತೆ, ಕಲೆ, ಗಾಯದ ಗುರುತು ಇರುತ್ತದೆ. ಸಾಮಾನ್ಯವಾಗಿ ಕನ್ನಡಿಯ ಎದುರಿಗೆ ನಿಂತಾಗಲೆಲ್ಲ ನಮ್ಮ ಗಮನ ಅದರತ್ತ ಹೊರಳುತ್ತದೆ.
ಅಸಲಿಗೆ ಅದೇನು ಹೇಳಿಕೊಳ್ಳುವಂತಹ ಡೆಫೆಕ್ಟ್ ಏನೂ ಅಲ್ಲ – ಅದನ್ನು ನ್ಯೂನತೆ ಎಂದು ಕರೆಯುವುದೇ ತಪ್ಪು – ಆದರೂ ನಮ್ಮ ಗಮನ ಸದಾ ಅದರತ್ತ ಇದ್ದೇ ಇರುತ್ತದೆ. ಅಯ್ಯೋ ದೇಹದಲ್ಲಿ ಇಂಥದ್ದೊಂದು ಇಲ್ಲದಿದ್ದರೆ ಒಳ್ಳೆಯದಿತ್ತು ಎನ್ನುವ ಕೊರಗು ಆಂತರ್ಯದಲ್ಲಿ ಸದಾ ಜಾಗೃತವಾಗಿರುವ ಅವಸ್ಥೆಯದು. ನನ್ನ ಹಣೆಯ ಮೇಲೆ ಒಂದು ಚಿಕ್ಕ ಗಾಯದ ಗುರುತಿದೆ. ಆ ಗುರುತು ಒಂದು ಕಾಲದಲ್ಲಿ ನನ್ನನ್ನೂ ಕಾಡಿದ್ದಿದೆ. ಇಂತಹ ಒಂದು ಚಿಕ್ಕದೊಂದನ್ನು ಯಾವತ್ತೂ ಹೊರ ಜಗತ್ತಿನಿಂದ ಅಡಗಿಸಲು ಪ್ರಯತ್ನಿಸುತ್ತಿರುತ್ತೇವೆ. ನನ್ನ ಸ್ನೇಹಿತನ ಹದಿಹರೆಯದ ಮಗಳ ಬಲ ಮುಂಗೈ ಅಲ್ಲಿ ಒಂದು ಮಚ್ಚಿಯಿದೆ, ಆಕೆ ಆ ಕಾರಣಕ್ಕೆ ಯಾವತ್ತೂ ಎಡಗೈ ಅನ್ನೇ ಮುಂದಾಗಿ ಬಳಸುತ್ತಾಳೆ.
ಹೀಗೆ – ಇದು ಎಲ್ಲರಲ್ಲೂ ಇರುವ ಒಂದು ಭಾವ. ಸ್ಥೂಲಕಾಯ, ಐಡಿಯಲ್ – ಸರಿಯೆನ್ನಿಸುವ ಗಾತ್ರವಲ್ಲದ ದೇಹದ ಯಾವುದೊ ಒಂದು ಭಾಗ, ಅಥವಾ ಅಂಗ ಕೂಡ ಈ ಡಿಸಾರ್ಡರ್ ಅನ್ನು ಹುಟ್ಟಿಹಾಕಬಹುದು. ಈಗ ಇದರ ಹೊಸ ಅವತರಣಿಕೆ – Social Media Dysmorphia ಇದು ಇಂದಿನ ಹದಿಹರೆಯದವರಾದಿ
ಯಾಗಿ ಹೆಚ್ಚಿನವರಲ್ಲಿ, ಸೋಷಿಯಲ್ ಮೀಡಿಯಾ ಅದರಲ್ಲೂ ಫೇಸ್ಬುಕ್ ಮತ್ತು ಇನ್ಸ್ಟಾ ಬಳಕೆದಾರರಲ್ಲಿ ಜಾಸ್ತಿ. ಇಂದು ಈ ದೇಹದ ಒಂದು ಚಿಕ್ಕ ನ್ಯೂನತೆಯನ್ನು
ಅಡಗಿಸಲು ಫೋಟೋ ಫಿಲ್ಟರ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಲಭ್ಯವಿದೆ. ದಪ್ಪವಿರುವವರನ್ನು ಸಪೂರವಾಗಿಸುವ, ಮುಖವನ್ನು ಬೆಳ್ಳಗಾಗಿಸುವ, ಮುಖದ
ಮೊಡವೆಗಳನ್ನು ಮರೆಮಾಚುವ ಹೀಗೆ ತರಹೇವಾರಿ ಫಿಲ್ಟರ್ ಗಳಿವೆ. ಈ ಫಿಲ್ಟರ್ ಹಾಕಿಬಿಟ್ಟರೆ ನಮ್ಮದೇ ಫೋಟೋ ನಾವಂದುಕೊಂಡ ಆದರ್ಶ ದೇಹರಚನೆಯ ಫೋಟೋವಾಗಿ ಬಿಡುತ್ತದೆ.
ಇದರಿಂದ ಏನು ಸಮಸ್ಯೆ – ಚೆನ್ನಾಗಿ ಕಾಣಿಸಿದರೆ ಒಳ್ಳೆಯದೇ ಅಲ್ಲವೇ? ಅದು ಹಾಗಲ್ಲ ಮತ್ತು ಅಷ್ಟಕ್ಕೇ ನಿಲ್ಲುವುದಿಲ್ಲ. ಇದರಿಂದಾಗಿ ನಮ್ಮ ದೇಹದ ಆ ಚಿಕ್ಕ ಸಮಸ್ಯೆ ಕ್ರಮೇಣ ಇನ್ನಷ್ಟು ಕಾಡಲು ಶುರುವಾಗುತ್ತದೆ. ಕ್ರಮೇಣ ಫಿಲ್ಟರ್‌ಗಳೊಳಗಿನ ನಾವು ನಿಜವಾದ ನಮಗಿಂತ ಚೆನ್ನಾಗಿದ್ದೇವೆ ಎಂದು ಅನಿಸಲು ಶುರುವಾಗು ತ್ತದೆ. ಸೋಷಿಯಲ್ ಮೀಡಿಯಾ ಬಳಸುವ ಬಹುತೇಕರು ದಿನಕ್ಕೆ ಹತ್ತಿಪ್ಪತ್ತು ಬಾರಿ ನಮ್ಮದೇ ಫೋಟೋ ನೋಡಿಕೊಳ್ಳುವುದು ಸಾಮಾನ್ಯ – ಆಗೆಲ್ಲ ಈ ಡಿಸ್ಮೋರ್ಫಿಯಾ ಸಮಸ್ಯೆ ಹೆಚ್ಚುತ್ತದೆ. ಜಗತ್ತನ್ನು ತಿಳಿಯುವ ವಯಸ್ಸು ಬಾಲ್ಯ. ಆದರೆ ಹದಿಹರೆಯದ ವಯಸ್ಸು ಸಾಮಾನ್ಯವಾಗಿ ವ್ಯಕ್ತಿ ತನ್ನ ಮೇಲೆಯೇ ಹೆಚ್ಚು ಕೇಂದ್ರಿತವಾಗಿರುತ್ತಾನೆ/ಳೆ.
ಅದು sense of self / ಸ್ವಯಂ ಪ್ರಜ್ಞೆಯನ್ನು ಹೊಂದು ಕಾಲ. ಆ ಸಮಯದಲ್ಲಿಯೇ ಕನ್ನಡಿಯೊಳಗಿನ ಎಲ್ಲ ನ್ಯೂನತೆಗಳು ಕಾಣಿಸುವುದು. ಅಂತಹ ಸಮಯ ದಲ್ಲಿ Social Media Dysmorphia ಇನ್ನಷ್ಟು ಈ ಎಳೆಯ ಮನಸ್ಸುಗಳನ್ನು ಕುಗ್ಗಿಸುತ್ತದೆ. ಇದು ಕೇವಲ ಎಳೆಯ ಮನಸ್ಸನಷ್ಟೇ ಅಲ್ಲ ಎನ್ನುವುದನ್ನ ನಾವು ಗ್ರಹಿಸಬೇಕು. ಅದಲ್ಲದೇ ಈಗೀಗ ನಾವು ಬಳಸುವ ವೀಡಿಯೊ ಕಾಲ್ ಗಳಲ್ಲಿ ನಮ್ಮದೇ ಫಿಲ್ಟರ್ ಇಲ್ಲದ ಮುಖವನ್ನು ಹೆಚ್ಚು ಹೆಚ್ಚು ನೋಡುವಾಗ ಇದು ನಮಗರಿವಿಲ್ಲದಂತೆ ಇನ್ನಷ್ಟು ಕಾಡಲು ಶುರುವಾಗುತ್ತದೆ. ಇದಕ್ಕೆ ಹೆಸರು ಜೂಮ್ ಡಿಸ್ಮೋರ್ಫಿಯಾ.
ಫೇಸ್ ಬುಕ್‌ನಲ್ಲಿ ನನಗಿಷ್ಟು ಸ್ನೇಹಿತರಿದ್ದಾರೆ ಎಂದು ಲೆಕ್ಕ ಹಾಕಿ ತನ್ನ ಸಮಾಜದ ಸ್ಥಾನವನ್ನು ನಮ್ಮೊಳಗೇ ರೂಪಿಸಿಕೊಳ್ಳುವುದು, ನಾನು ಇದನ್ನು ಹಾಕಿದ್ದಕ್ಕೆ ಇಷ್ಟು ಲೈಕು ಬಂತು ಎಂದು ಹಿಗ್ಗುವುದು ಮತ್ತು ಅದೇ ಸಂಖ್ಯೆಯ ಕಾರಣಕ್ಕೆ ಕುಗ್ಗುವುದು, ಹೋಲಿಸಿಕೊಳ್ಳುವುದು ಇವೆಲ್ಲ ಇನ್ನೊಂದಿಷ್ಟು ಮಾನಸಿಕ, ಅಡ್ಡ ಪರಿಣಾಮಗಳು. ಸೋಷಿಯಲ್ ಮೀಡಿಯಾ ಬಳಸುವವರಲ್ಲಿ ಎರಡು ವಿಧ. ಮೊದಲನೆಯದು ಆಕ್ಟಿವ್ ಬಳಕೆದಾರರು – ಎರಡನೆಯದು ಇನೆಕ್ಟಿವ್ ಬಳಕೆದಾರರು. ಈ ಎರಡನೆಯ ವಿಧದವರು ಸಾಮಾನ್ಯವಾಗಿ ಫೇಸ್ಬುಕ್ ನಲ್ಲಿರುತ್ತಾರೆ ಆದರೆ ಅವರು ಏನನ್ನೂ ಅಲ್ಲಿ ಹಾಕುವುದಿಲ್ಲ – ಬದಲಿಗೆ ಅಲ್ಲಿ ಬೇರೆಯವರನ್ನು ನೋಡ ಲಷ್ಟೇ ಹತ್ತು ನಿಮಿಷಕ್ಕೆ, ಗಂಟೆಗೊಮ್ಮೆ ಹೀಗೆ ಬರುತ್ತಿರುತ್ತಾರೆ.
ಆಕ್ಟಿವ್ ಇರಲಿ – ಇನೆಕ್ಟಿವ್ ಇರಲಿ, ಇಬ್ಬರ ಮೇಲೂ ಈ ಕೆಲವು ಅಷ್ಟೇ ಪರಿಣಾಮಗಳನ್ನು ಉಂಟುಮಾಡುತ್ತದೆ. ಸೋಷಿಯಲ್ ಮೀಡಿಯಾ ಒಂದು ವರ ಎಂಬಿತ್ಯಾದಿ ಉದ್ದುದ್ದದ ಭಾಷಣ ಬಿಗಿಯುವವರನ್ನು, ಇದರ ಸಾಧ್ಯತೆಗಳನ್ನು ಹೇಳುವವರ ಬಗ್ಗೆ ನನ್ನದೇನೂ ತಕರಾರಿಲ್ಲ. ಸೋಷಿಯಲ್ ಮೀಡಿಯಾದ ಒಳ್ಳೆಯದನ್ನು ನಾನು ಕೂಡ ಅನುಮೋದಿಸುತ್ತೇನೆ. ನಾನೇನು ನಿಮ್ಮನ್ನು ಈ ಎಲ್ಲ ಕಾರಣಗಳಿಂದ ಸೋಷಿಯಲ್ ಮೀಡಿಯಾ ಬಿಟ್ಟು ದೂರ ಹೋಗಿ ಗುಹೆಯಲ್ಲಿ ಕೂತುಬಿಡಿ ಎಂದೇನೂ ಹೇಳುತ್ತಿಲ್ಲ. ಹಾಗೆ ಮಾಡುವುದನ್ನು ಕೂಡ ನಾನು ಸರಿ ಎಂದೆನ್ನುವುದಿಲ್ಲ.
ನಾನು ಕೂಡ ಫೇಸ್ ಬುಕ್, ಇನ್ಸ್ಟಾ, ಟ್ವಿಟ್ಟರ್ ಅದು ಜನಸಿದಾಗಿನಿಂದ ಬಳಸುತ್ತಿದ್ದೇನೆ. ಅದಕ್ಕಿಂತ ಮೊದಲು ಆರ್ಕುಟ್ ಕೂಡ ಬಳಸಿದ್ದೇನೆ. ಈ ಸೋಷಿಯಲ್
ಮೀಡಿಯಾ ಬಳಸಲೇ ಬಾರದು ಎಂಬ ಶಿಲಾಯುಗದ ಮನಸ್ಥಿತಿಯ ಬಗ್ಗೆಯೂ ನನ್ನದು ಅಷ್ಟೇ ತಕರಾರಿದೆ. ಆದರೆ ಬಳಸುವಾಗ ಇದೆಲ್ಲದರ ಅರಿವು ನಮ್ಮಲ್ಲಿರ ಬೇಕು, ಮತ್ತು ಇದೆಲ್ಲ ಹದ್ದುಬಸ್ತಿನಲ್ಲಿಡಬೇಕು ಎನ್ನುವುದೇ ಇಲ್ಲಿ ನನ್ನ ಆಶಯ. ಅಲ್ಲದೆ ಈ ಅರಿವನ್ನು ಚಿಕ್ಕ ಮಕ್ಕಳಲ್ಲಿ, ಹದಿಹರೆಯದವರಲ್ಲಿ ಹಂಚಿಕೊಳ್ಳುವುದು ಮುಖ್ಯವಾಗುತ್ತದೆ. ಮಿತಿಯಲ್ಲಿದ್ದರೆ ಎಲ್ಲ ಚೆನ್ನ ಹೌದು – ಆದರೆ ಅವಾಸ್ತವಿಕಕ್ಕೆ ಮಿತಿ ಕಟ್ಟುವುದೇ ಇಲ್ಲಿರುವ ಚಾಲೆಂಜ್. ಇದು ಮೋಹಿನಿಯ ಜೊತೆಯ ಭಸ್ಮಾಸುರನ ನೃತ್ಯ ಎನ್ನುವ ಜಾಗ್ರತೆ ಸದಾ ನಿಮ್ಮೊಳಗಿರಲಿ.