Saturday, 7th September 2024

ಆತ ಆಟಗಾರ, ಮಾಟಗಾರ, ಮಾತುಗಾರ

ವಿದೇಶವಾಸಿ

dhyapaa@gmail.com

ಆತ ಅಷ್ಟು ಅತ್ತಿದ್ದನ್ನು ನೋಡಿಯೇ ಇರಲಿಲ್ಲ. ಆತ ಯಾವತ್ತೂ ಆ ರೀತಿಯಾಗಿ ಅತ್ತವನಲ್ಲ. ಆತ ಗೆಲ್ಲಲಿ-ಸೋಲಲಿ, ಎಂದೂ ಮಾನಸಿಕ ಸಮತೋಲನ ಕಳೆದುಕೊಂಡವ ನಲ್ಲ. ಸೋತಾಗ ಕಣ್ಣೀರು ಹಾಕುವುದು, ಗೆದ್ದಾಗ ಜಿಗಿಯುವುದು, ಹಾಕಿಕೊಂಡ ಅಂಗಿ ಕಿತ್ತೆಸೆಯುವುದು, ಚೀರುವುದು, ಊಹೂ… ಯಾವುದೂ ಇಲ್ಲ.

ಅಂಥ ವ್ಯಕ್ತಿ ಅಷ್ಟು ಅಳುತ್ತಾನೆ ಎಂದರೆ ನಂಬಲು ಸಾಧ್ಯವೇ? ಅಂದು ಅವನಷ್ಟೇ ಅಲ್ಲ, ಅವನ ಜತೆಗೆ ಕ್ರೀಡಾಂಗಣದಲ್ಲಿದ್ದ ಹದಿನಾರು ಸಾವಿರಕ್ಕೂ ಹೆಚ್ಚು ಜನ ಅಳುತ್ತಿದ್ದರು. ಅಂದು ವಿಶ್ವದಾದ್ಯಂತ ಕೋಟಿ ಕೋಟಿ ಜನರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಅದರಲ್ಲಿ ಅವನ ಪ್ರತಿಸ್ಪರ್ಧಿಗಳೂ
ಇದ್ದರು. ಅವನ ಜತೆ ಸೆಣಸಿ ಗೆದ್ದವರು, ಸೋತವರು ಎಲ್ಲರೂ ಇದ್ದರು. ಅಂದು ಆತ ತನ್ನ ಬದುಕಿನ ಕೊನೆಯ ಸೆಣೆಸಾಟ ಮುಗಿಸಿದ್ದ.

‘ರೋಜರ್ ಫೆಡ್ರರ್’ ಹೆಸರು ಕೇಳದ ಕ್ರೀಡಾ ಸಕ್ತರು ಇಲ್ಲ ಎಂದೇ ಹೇಳಬಹುದು. ಇದ್ದರೂ ಅಂಥವರ ಸಂಖ್ಯೆ ತೀರಾ ಕಮ್ಮಿ. ಚಿಕ್ಕಂದಿನಿಂದಲೇ
ಟೆನಿಸ್ ಆಟವನ್ನು ಆರಾಧಿಸಿದವ ಫೆಡ್ರರ್. ಸ್ವಿಡ್ಜರ್ ಲ್ಯಾಂಡ್‌ನ ಬಾಸೆಲ್ ನಗರದ ಟೆನಿಸ್ ಕ್ರೀಡಾಂಗಣದಲ್ಲಿ ‘ಬಾಲ್ ಬಾಯ’ (ಚೆಂಡು ಹೆಕ್ಕುವ ಹುಡುಗ) ಆಗಿ ಆರಂಭಿಸಿ, ತನ್ನ ಹದಿನಾರನೆಯ ವಯಸ್ಸಿನಲ್ಲಿ ಪ್ರಥಮ ಅಂತಾರಾಷ್ಟ್ರೀಯ ಪಂದ್ಯ ಆಡಲು ಕಾಲಿಗೆ ಬೂಟು ಕಟ್ಟಿಕೊಂಡವ. ಆಡಿದ ಮೊದಲ ಪಂದ್ಯದಲ್ಲಿ ರೆಟೊ ಶ್ಮಿಡ್ಲಿ ವಿರುದ್ದ ಒಂದೂ ಸೆಟ್ ಗೆಲ್ಲಲಾಗದೇ ಹೀನಾಯವಾಗಿ ಸೋತವ. ಅದರಿಂದ ಕಂಗಾಲಾಗದೆ, ಸತತ ಪರಿಶ್ರಮದಿಂದ ನಂತರದ ಕಾಲು ಶತಮಾನದವರೆಗೆ ಸಾಧನೆಯ ಶಿಖರವನ್ನೇರಿ ಕುಳಿತ ಅಸಾಮಾನ್ಯ ಸಾಹಸಿ ಫೆಡ್ರರ್. ಇಪ್ಪತ್ತೈದು ವರ್ಷದ ಸುದೀರ್ಘ ಟೆನಿಸ್ ಬದುಕಿನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಸಿಂಗಲ್ಸ ಪಂದ್ಯ ಆಡಿ, ಇಪ್ಪತ್ತು ಗ್ರ್ಯಾಂಡ್ ಸ್ಲಾಮ್ ಸೇರಿದಂತೆ ಒಟ್ಟೂ ನೂರಮೂರು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೆದ್ದು, ಟೆನಿಸ್ ಇತಿಹಾಸದ ಅತಿ ಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದ್ದ ಫೆಡ್ರರ್, ಬರೀ ಟೆನಿಸ್ ಪ್ರಶಸ್ತಿ ಯೊಂದಿಗೆ ಗಳಿಸಿದ ಮೊತ್ತವೇ ನೂರ ಮೂವತ್ತು ಮಿಲಿಯನ್ ಡಾಲರ್ (ಸಾವಿರದ ಎಂಬತ್ತೈದು ಕೋಟಿ)ಗೂ ಹೆಚ್ಚು. ಇನ್ನು ಜಾಹೀತಾರು, ಇತರೆ ಉದ್ಯಮದಿಂದ ಗಳಿಸಿದ್ದು ಬೇರೆ.

ಸತತ ಇನ್ನೂರ ಮೂವತ್ತೇಳು ವಾರವೂ ಸೇರಿದಂತೆ ಕ್ರೀಡಾ ಪಯಣದಲ್ಲಿ ಒಟ್ಟೂ ಮುನ್ನೂರ ಹತ್ತು ವಾರ, ಐದು ವರ್ಷ ಎಟಿಪಿ ಶ್ರೇಯಾಂಕದಲ್ಲಿ
ಅಗ್ರಸ್ಥಾನದಲ್ಲಿ ಮೆರೆದವ. ಒಮ್ಮೆ ಮೈದಾನಕ್ಕಿಳಿದರೆ ತನ್ನ ಆಟದಿಂದ, ನಡವಳಿಕೆಯಿಂದ, ಶಿಷ್ಟಾಚಾರ ದಿಂದ ಪ್ರೇಕ್ಷಕರನ್ನು ಮೋಡಿಮಾಡುವ ಜಾದೂ
ಗಾರ. ಫೆಡ್ರರ್ ಕೇವಲ ಆಟಗಾರ ಮಾತ್ರವಲ್ಲ, ಮಾಟಗಾರನಾಗಿ ಕಾಣಿಸುತ್ತಿದ್ದ. ಆ ಕಾಲಘಟ್ಟದಲ್ಲಿ ಫೆಡ್ರರ್‌ಗೆ ಟಕ್ಕರ್ ಕೊಡುತ್ತಿದ್ದದ್ದು ರಫೆಲ್ ನಡಾಲ್ ಮಾತ್ರ.

ಫೆಡ್ರರ್- ನಡಾಲ್ ಪಂದ್ಯ ಎಂದರೆ ನಮ್ಮ ಕಡೆ ಭಾರತ- ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದಂತೆ. ನಡಾಲ್‌ನ ಸಾಧನೆಯೂ ಕಮ್ಮಿಯೇನಲ್ಲ, ಇಪ್ಪತ್ತೆರಡು
ಗ್ರ್ಯಾಂಡ್ ಸ್ಲಾಮ್ ಸೇರಿದಂತೆ ಒಟ್ಟೂ ತೊಂಬತ್ತೆರಡು ಪ್ರಶಸ್ತಿ ಜಯಿಸಿದವ. ಎರಡುನೂರ ಎಂಬತ್ತು ವಾರ, ಐದು ವರ್ಷ ಎಟಿಪಿ (Association of
Tennis Professionals) ಶ್ರೇಯಾಂಕದಲ್ಲಿ ಮೊದಲನೆಯವನಾಗಿದ್ದವ. ಈಗ ನಡಾಲ್ ಸ್ಥಾನ ಇನ್ನೂರ ಅರವತ್ತಕ್ಕಿಂತಲೂ ಕೆಳಗೆ ಇಳಿದಿದೆ. ಎದುರಾಳಿ ಯಾಗಿ ಫೆಡ್ರರ್ ಇಲ್ಲದಿರುವುದೂ ಅದಕ್ಕೆ ಒಂದು ಕಾರಣವಾಗಿರಬಹುದು ಎಂದು ಎಷ್ಟೋ ಬಾರಿ ಅನ್ನಿಸಿದ್ದಿದೆ.

ನಡಾಲ್ ಮತ್ತು ಫೆಡ್ರರ್ ನಡುವಿನ ಟೆನಿಸ್ ಪೈಪೋಟಿಯನ್ನು ಕ್ರೀಡಾ ಕ್ಷೇತ್ರದ ಇತಿಹಾಸದಲ್ಲಿಯೇ ಅತಿಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಅವರಿಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ನಲವತ್ತು ಬಾರಿ ಎದುರಾಳಿಗಳಾಗಿ ಆಡಿದ್ದಾರೆ. ಅದರಲ್ಲಿ ನಡಾಲ್ ಇಪ್ಪತ್ನಾಲ್ಕು ಪಂದ್ಯದಲ್ಲಿ, ಫೆಡ್ರರ್ ಹದಿನಾಲ್ಕು ಪಂದ್ಯ ದಲ್ಲಿ ಜಯಿಸಿದ್ದಾರೆ. ಪ್ರಶಸ್ತಿಗಾಗಿ ಅವರಿಬ್ಬರ ನಡುವೆ ನಡೆದ ಇಪ್ಪತ್ನಾಲ್ಕು ಅಂತಿಮ ಪಂದ್ಯದಲ್ಲಿ, ಫೆಡ್ರರ್ ಹತ್ತು ಬಾರಿ, ನಡಾಲ್ ಹದಿನಾಲ್ಕು ಬಾರಿ ಗೆದ್ದಿದ್ದಾರೆ. ಟೆನಿಸ್ ಪ್ರಿಯರಾದವರು ೨೦೦೮ ರ ಜುಲೈನಲ್ಲಿ ವಿಂಬಲ್ಡನ್ ಪ್ರಶಸ್ತಿಯ ಅಂತಿಮ ಪಂದ್ಯ ನೋಡುವುದನ್ನು ತಪ್ಪಿಸಿಕೊಂಡಿರಲಿಕ್ಕಿಲ್ಲ. ಅಂದು ವಿಶ್ವದ ಮೊದಲನೆಯ ಸ್ಥಾನದಲ್ಲಿದ್ದ ಫೆಡ್ರರ್ ಮತ್ತು ಎರಡನೆಯ ಸ್ಥಾನದಲ್ಲಿದ್ದ ನಡಾಲ್, ಪ್ರಶಸ್ತಿಗಾಗಿ ಐದು ತಾಸು ಸೆಣೆಸಿದ್ದರು.

ಮೊದಲ ಎರಡು ಸೆಟ್ ನಡಾಲ್ ಗೆದ್ದಿದ್ದರೆ, ನಂತರದ ಎರಡು ಸೆಟ್ ಫೆಡ್ರರ್ ಜಯಿಸಿದ್ದರು. ಐದನೆಯ ಮತ್ತು ಅಂತಿಮ ಪಂದ್ಯ ಸಮನಾಗಿ, ನಂತರ ಎರಡು ಪಾಯಿಂಟ್ ಅಂತರ ದಿಂದ ನಡಾಲ್ ಗೆದ್ದಿದ್ದರು. ಟೆನಿಸ್ ಇತಿಹಾಸದಲ್ಲಿ ದಾಖಲೆ ಮಾಡಿದ ಪ್ರತಿಸ್ಪರ್ಧಿಗಳ ನಡುವೆ ನಡೆದ ಆ ಅಂತಿಮ ಪಂದ್ಯ, ಶ್ರೇಷ್ಠ ಟೆನಿಸ್ ಪಂದ್ಯಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರವಾಯಿತು. ಅಂತಹ ಎದುರಾಳಿಗಳಲ್ಲಿ ಯಾರಾದರೂ ಒಬ್ಬರು ಇನ್ನು ಮುಂದೆ ಇರುವುದಿಲ್ಲ ಎಂದರೆ ಇನ್ನೊಬ್ಬರಿಗೆ ಖುಷಿಯಾಗಬೇಕಿತ್ತು. ಆದರೆ ಹಾಗಾಗಲಿಲ್ಲ.

ಫೆಡ್ರರ್ ಇನ್ನು ಟೆನಿಸ್ ಆಡುವುದಿಲ್ಲ ಎಂಬ ಸುದ್ದಿ ಕೇಳಿದಾಗ ಫೆಡ್ರರ್‌ಗಿಂತ ಹೆಚ್ಚು ನೊಂದವ ನಡಾಲ. ಕ್ರೀಡೆ ಗೆಲ್ಲುವುದು ಇಂಥವರಿಂದ. ಇಂಥ ಆಟಗಾರರು ಇದ್ದರೆ ಕ್ರೀಡೆ ಕ್ರೀಡಾಂಗಣದ ಒಳಗಷ್ಟೇ ಅಲ್ಲ, ಹೊರಗೂ ಗೆಲ್ಲುತ್ತದೆ. ಆ ನಿರ್ಣಯ ಕೈಗೊಳ್ಳುವಾಗ ಫೆಡ್ರರ್ ವಯಸ್ಸು ನಲವತ್ತೊಂದು ದಾಟಿತ್ತು. ಆಗಲೇ ನಾಲ್ಕು ಬಾರಿ ಶಸ್ತ್ರಚಿಕಿತ್ಸೆಯೂ ಆಗಿತ್ತು. ಆತ ತನ್ನ ಕೊನೆಯ ಪಂದ್ಯ ಆಡುವುದಾಗಿ ನಿರ್ಧರಿಸಿದ್ದ. ಅದಕ್ಕೆ ತಾನೇ ಆರಂಭಿಸಿದ ಲೆವರ್ ಕಪ್ ಪಂದ್ಯಾಟವನ್ನು ಆರಿಸಿಕೊಂಡಿದ್ದ.

೨೦೨೨ ಸೆಪ್ಟೆಂಬರ್ ತಿಂಗಳಿನಲ್ಲಿ ಲಂಡನ್ ನಗರದಲ್ಲಿ ಪಂದ್ಯಾಟ ನಿಗದಿಯಾಗಿತ್ತು. ಮೊದಲ ಬಾರಿ ಪರಸ್ಪರ ಎದುರಾಳಿಗಳಾಗಿದ್ದ ಫೆಡ್ರರ್ ಮತ್ತು
ನಡಾಲ್ ಒಂದೇ ತಂಡದಲ್ಲಿ ಆಡುತ್ತಿದ್ದರು. ಅಷ್ಟೇ ಅಲ್ಲ, ಡಬಲ್ಸ ಪಂದ್ಯದಲ್ಲಿ ಜೊತೆಯೂ ಆದರು. ಲೆವರ್ ಕಪ್ ಬಗ್ಗೆ ಸಣ್ಣ ಮಾಹಿತಿ ಹೇಳುವುದಾ
ದರೆ, ೨೦೧೭ ರಲ್ಲಿ ಫೆಡ್ರರ್ ಆರಂಭಿಸಿದ ಪಂದ್ಯಾಟ ಇದು. ಇದರಲ್ಲಿ ಯುರೋಪ್ ದೇಶದ ಖ್ಯಾತ ಆಟಗಾರರದ್ದು ಒಂದು ತಂಡವಾದರೆ ವಿಶ್ವದ ಇತರ
ಹೆಸರಾಂತ ಆಟಗಾರರ ಒಂದು ತಂಡ. ಪ್ರತಿ ತಂಡ ದಲ್ಲೂ ಇಬ್ಬರು ಇತರೆ ಆಟಗಾರರೂ ಸೇರಿದಂತೆ ಎಂಟು ಆಟಗಾರರು.

ಸಿಂಗಲ್ಸ್, ಡಬಲ್ಸ್ ಆಟದಲ್ಲಿ ಜಯಿಸಿದ ಅಂಕಗಳ ಮೇಲೆ ವಿಜೇತ ತಂಡದ ನಿರ್ಣಯ. ಇರಲಿ, ಈ ವಿಷಯ ಯಾಕೆ ಹೇಳುತ್ತಿದ್ದೇನೆ ಎಂದರೆ, ಫೆಡ್ರರ್ ಮನಸ್ಸು ಮಾಡಿದ್ದರೆ ಪಂದ್ಯಾಟವನ್ನು ತನ್ನ ಹೆಸರಿನಲ್ಲಿಯೇ ಆರಂಭಿಸಬಹುದಾಗಿತ್ತು. ಬೇಡ ತಂದೆ, ತಾಯಿ, ಅಜ್ಜ, ಮುತ್ತಜ್ಜ, ಕುಟುಂಬದ ಹೆಸರಿನಲ್ಲಿ ಮಾಡಬಹುದಾಗಿತ್ತು. ಅದೂ ಬೇಡ, ತನ್ನ ದೇಶದ ಶ್ರೇಷ್ಠ ಕ್ರೀಡಾ ಪಟುವಿನ ಹೆಸರಿಡಬಹುದಾಗಿತ್ತು. ಆದರೆ ಫೆಡ್ರರ್ ಕ್ರೀಡಾ ಕ್ಷೇತ್ರದಲ್ಲಿದ್ದವನೇ ಹೊರತು ರಾಜಕೀಯ ಕ್ಷೇತ್ರದಲ್ಲಿದ್ದವನಲ್ಲ. ಆತ ರಾಜಕಾರಣಿಯೂ ಅಲ್ಲ, ಸ್ವಾರ್ಥಿಯೂ ಅಲ್ಲ. ಅವನ ಕ್ಷೇತ್ರ ಟೆನಿಸ್ ಆಟ. ಆ ಕ್ಷೇತ್ರದಲ್ಲಿ ಹನ್ನೊಂದು ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದ ಆಸ್ಟ್ರೇಲಿಯಾದ ರಾಡ್ ಲೆವರ್ ಹೆಸರನ್ನು ಪಂದ್ಯಾಟಕ್ಕೆ ಇಟ್ಟಿದ್ದ ಫೆಡ್ರರ್. ಮತ್ತೊಮ್ಮೆ ಹೇಳುತ್ತೇನೆ, ಕ್ರೀಡೆ ಗೆಲ್ಲುವುದು ಇಂಥವರಿಂದ.

ಅಂದು ಲೆವರ್ ಕಪ್‌ನ ಮೊದಲದಿನವಾಗಿತ್ತು. ಮೊದಲ ಸೆಟ್ ಗೆದ್ದ ಫೆಡ್ರರ್-ನಡಾಲ್ ಜೋಡಿ ನಂತರದ ಎರಡು ಸೆಟ್‌ಗಳಲ್ಲಿ ಜ್ಯಾಕ್ ಸಾಕ್ -ಫ್ರಾನ್ಸಿಸ್ ಟಿಯಾ- ವಿರುದ್ಧ ಸೋತಿತ್ತು. ಪಂದ್ಯಾಟದ ಸಂದರ್ಭದಲ್ಲಿ ನಡಾಲ್ ಹೇಳಿದ ಹೇಳಿದ್ದ, ‘ನಾನು ಫೆಡ್ರರ್ ಆತವನ್ನು ಟಿವಿಯಲ್ಲಿ ನೋಡುತ್ತಿದ್ದೆ. ನಂತರದ ದಿನಗಳಲ್ಲಿ ಆತದ ಮೈದಾನಕ್ಕಿಳಿದಾಗ ಅವನನ್ನೇ ಪ್ರತಿಸ್ಪರ್ಧಿಯಾಗಿ ಎದುರಿಸಿದೆ.

ಇನ್ನು ಮೈದಾನದಲ್ಲಿ ಅವನೇ ಇರುವುದಿಲ್ಲ ಎಂದರೆ ನಂಬಲಾಗುತ್ತಿಲ್ಲ. ಕೊನೆಯ ಪಂದ್ಯಾಟದಲ್ಲಿ ಅವನ ತಂಡದಲ್ಲಿದ್ದು ಅವನ ಜತೆ ಆಡುತ್ತಿದ್ದೇನೆ ಎಂಬ ಖುಷಿ ಇದ್ದರೂ, ಇನ್ನು ಮುಂದೆ ಮೈದಾನದಲ್ಲಿ ಆತ ಇರುವುದಿಲ್ಲ ಎಂಬ ದುಃಖವೂ ಇದೆ. ಯಾವುದೇ ಕ್ಷೇತ್ರವಾದರೂ ಹೊಸಬರುಬರುತ್ತಾರೆ, ಹಳೆಯವರು ಮರೆಯಾಗುತ್ತಾರೆ. ಆದರೆ ಈ ಆಟದಲ್ಲಿ ಇತಿಹಾಸ ನಿರ್ಮಿಸಿದವ ನಿರ್ಗಮಿಸುತ್ತಿದ್ದಾನೆ ಎಂದಾಗ ನೋವಾಗುತ್ತಿದೆ’ ಎಂದು ಗಳಗಳನೆ
ಅತ್ತಿದ್ದ. ಅದೊಂದು ಭಾವುಕ ಕ್ಷಣ ಅಂದು ಫೆಡ್ರರ್ ಸೇರಿದಂತೆ ಇತರ ಟೆನಿಸ್ ತಾರೆಗಳು, ಕ್ರೀಡಾಂಗಣದಲ್ಲಿದ್ದವರು, ಅಲ್ಲರ ಕಣ್ಣೂ ಒದ್ದೆಯಾಗಿತ್ತು.
ಲ್ಲಿಯವರೆಗೂ ಫೆಡ್ರರ್ ಅಷ್ಟು ಭಾವುಕನಾದದ್ದನ್ನು, ಆ ಪರಿ ಅತ್ತಿದ್ದನ್ನು ನಾನಂತೂ ನೋಡಿರಲಿಲ್ಲ.

ಅಂದು ಡ್ರೆಸ್ಸಿಂಗ್ ರೂಮಿಗೆ ಬಂದ ಫೆಡ್ರರ್ ಹೇಳಿದ್ದ, ‘ಇನ್ನೂ ಎರಡು ದಿನದ ಆಟ ಬಾಕಿ ಇದೆ. ನಾನು ಆಡುವುದಿಲ್ಲ ನಿಜ, ಆದರೆ ನಾಳೆಯಿಂದ
ಎರಡು ದಿನವೂ ನಿಮ್ಮನ್ನು ಹುರುದುಂಬಿಸಲು ಮೈದಾನದಲ್ಲಿ ನಿಮ್ಮ ಜತೆಯೇ ಇರುತ್ತೇನೆ.’ ಆದರೆ ತಂಡದಲ್ಲಿ ಫೆಡ್ರರ್, ನಡಾಲ, ನೋವಾಕ್‌ನಂತಹ
ಆಟಗಾರರಿದ್ದರೂ ಯೊರೋಪ್ ತಂಡ ಸೋಲುತ್ತದೆ. ಟೆನಿಸ್ ದಿಗ್ಗಜ ಫೆಡ್ರರ್‌ಗೆ ದುಃಖದ ವಿದಾಯ ವಾಗುತ್ತದೆಯೇ ವಿನಃ ಸಂತೋಷದ ವಿದಾಯ
ವಾಗುವುದಿಲ್ಲ.

ಏನು ಗೊತ್ತೆ? ಫೆಡ್ರರ್ ಇದನ್ನು ‘ವಿದಾಯ’ ಎಂದು ಹೇಳುವುದಿಲ್ಲ, ಬದಲಾಗಿ ಇದನ್ನು ‘ಪದವಿ’ ಎಂದು ಕರೆಯುತ್ತಾನೆ. ಇತ್ತೀಚೆಗೆ ಫೆಡ್ರರ್‌ಗೆ ಆತ ಕಲಿತ ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್ ನೀಡಲಾಯಿತು. ಟೆನಿಸ್ ಆಡಲು ಕಾಲೇಜು ಬಿಟ್ಟಿದ್ದ ಫೆಡ್ರರ್, ಜೀವನದಲ್ಲಿ ಎರಡನೆಯ ಬಾರಿ ಕಾಲೇಜು ಮೆಟ್ಟಿಲು ಹತ್ತಿದ್ದ, ಅದೂ ಡಾಕ್ಟರೇಟ್ ಪಡೆಯಲು. ಆ ಸಭೆಯಲ್ಲಿ ಆತ ಮೊದಲು ಹೇಳಿದ ಮಾತೇ ಅದು. ‘ನಾನು ಟೆನಿಸ್‌ಗೆ ವಿದಾಯ ಹೇಳಿದೆ, ಅದರಿಂದ ನಿವೃತ್ತನಾದೆ ಎಂದು ಹೇಳುವುದಿಲ್ಲ. ಕಾಲೇಜು ಶಿಕ್ಷಣ ಮುಗಿಸಿದ ನಂತರ ನಾವು “ಪದವೀಧರರು” ಎಂದು ಕರೆಸಿಕೊಳ್ಳುತ್ತೇವೆಯೇ ವಿನಃ ಕಾಲೇಜಿನಿಂದ ನಿವೃತ್ತರಾದೆವು ಎಂದು ಹೇಳುವುದಿಲ್ಲ.

ಹಾಗೆಯೇ ನಾನು ಈಗ ಟೆನಿಸ್ ಪದವೀಧರನಾಗಿದ್ದೇನೆ’. ‘ಜನರು ನನ್ನ ಮುಂದಿನ ಯೋಜನೆಗಳ ಬಗ್ಗೆ ಕೇಳುತ್ತಾರೆ. ಸದ್ಯಕ್ಕೆ ಏನೂ ಇಲ್ಲ. ನನ್ನ ಮಕ್ಕಳನ್ನು ಶಾಲೆಗೆ ಬಿಡುತ್ತೇನೆ, ಮನೆಯನ್ನು ಸ್ವಚ್ಛಗೊಳಿಸುತ್ತೇನೆ, ಆಗಂತುಕರೊಂದಿಗೆ ಆನ್‌ಲೈನ್‌ನಲ್ಲಿ ಚೆಸ್ ಆಡುತ್ತೇನೆ. ಇದೆಲ್ಲವೂ ನನಗೆ ಖುಷಿ ಕೊಡುತ್ತಿದೆ. ಜನ ನಾನು ಟೆನಿಸ್ ಆಡುವಾಗ, ಈತ ಹೆಚ್ಚು ಬೆವರು ಸುರಿಸುವುದಿಲ್ಲ, ಶ್ರಮಪಡದೆ ಸಲೀಸಾಗಿ ಟೆನಿಸ್ ಆಡುತ್ತಾನೆ, ಅವನಲ್ಲಿ ಪ್ರತಿಭೆ ಇದೆ ಎನ್ನುತ್ತಿದ್ದರು. ಅದು ಸುಳ್ಳು. ಜೀವನದಲ್ಲಿ ಶ್ರಮಪಡದೆ ಏನೂ ಸಿಗುವುದಿಲ್ಲ. ಆ ಕ್ಷಣದಲ್ಲಿ ನೋಡುವವರಿಗೆ ಸಲೀಸು ಎಂದೆನಿಸಿದರೂ ಅದರ ಹಿಂದೆ ಸಾಕಷ್ಟು ಬೆವರಿನ ಹನಿಗಳು ಭುವಿಗೆ ಬಿದ್ದಿರುತ್ತವೆ. ಪ್ರತಿಭೆಯೊಂದಿಗೆ ಬಹುಮಾನ ಬರುವುದಿಲ್ಲ.

ಜೀವನದಲ್ಲಿ ಶಿಸ್ತು, ತಾಳ್ಮೆ, ನಮ್ಮನ್ನು ನಾವು ನಂಬುವುದು, ನಾವು ರೂಪುಗೊಳ್ಳುವ ಪ್ರಕ್ರಿಯೆಯೆನ್ನು ಇಷ್ಟಪಡುವುದು, ಎಲ್ಲವೂ ಪ್ರತಿಭೆಯೇ. ಬಹುಮಾನ ಬೇಕಾದರೆ ಪ್ರತಿಭೆಯನ್ನು ಹದಗೊಳಿಸಬೇಕು. ನಾವು ಗೆಲ್ಲಬೇಕಾದರೆ ಪ್ರತಿಸ್ಪರ್ಧಿಯೊಂದಿಗೆ ಸೆಣಸಲು ಸಿದ್ಧರಾಗಬೇಕು. ಅದಕ್ಕೆ ನಮ್ಮಲ್ಲಿಯೇ ನಮಗೆ ನಂಬಿಕೆ ಬರಬೇಕು. ನಂಬಿಕೆ ಬರಬೇಕಾದರೆ ಅದಕ್ಕೆ ನಾವು ಸಿದ್ಧರಾಗಬೇಕು’.

‘ಕೆಲವೊಮ್ಮೆ ಒಂದು ಅಂಕವೂ ಮಹತ್ವದ್ದಾಗುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ ೨೦೦೮ ರ ವಿಂಬಲ್ಡನ್ ಅಂತಿಮ ಪದ್ಯ. ಒಂದು ಅಂಕದಿಂದ
ನಾನು ನಡಾಲ್ ವಿರುದ್ಧ ಸೋತೆ. ಅದು ಕೇವಲ ಸೋಲಾಗಿರಲಿಲ್ಲ. ಅದರಿಂದ ನಾನು ಸತತ ಆರು ಬಾರಿ ವಿಂಬಲ್ಡನ್ ಜಯಿಸುವುದರಿಂದ ವಂಚಿತ
ನಾದೆ. ಶ್ರೇಯಂಕದಲ್ಲಿ ಅಗ್ರ ಸ್ಥಾನವನ್ನು ಕಳೆದು ಕೊಂಡೆ. ನನ್ನ ಟೆನಿಸ್ ವೃತ್ತಿ ಮುಗಿಯಿತು ಎಂದು ಜನ ಮಾತನಾಡಲು ಆರಂಭಿಸಿದರು. ಆದರೆ ನನಗೆ ಭರವಸೆಯಿತ್ತು. ನಾನು ಆಡಿದ ಪಂದ್ಯಗಳಲ್ಲಿ ಶೇಕಡಾ ಎಂಬತ್ತರಷ್ಟನ್ನು ಗೆದ್ದಿದ್ದೇನೆ. ಗೆದ್ದ ಪಂದ್ಯಗಳಲ್ಲಿ ಪಡೆದ ಅಂಕಗಳು (ಪಾಯಿಂಟ್ಸ) ಶೇಕಡಾ
ಐವತ್ತಕ್ಕಿಂತ ಸ್ವಲ್ಪ ಎಚ್ಚು ಅಷ್ಟೇ. ಕೆಲವೊಮ್ಮೆ ಒಂದು ಅಂಕ ಕಳೆದುಕೊಳ್ಳುತ್ತೇವೆ, ಪಂದ್ಯ, ಪಂದ್ಯಾಟ ಕಳೆದುಕೊಳ್ಳುತ್ತೇವೆ.

ಕೆಲವೊಮ್ಮೆ ಉದ್ಯೋಗ, ಹಣ, ಪ್ರೀತಿ, ಖುಷಿಯನ್ನೂ ಕಳೆದುಕೊಳ್ಳುತ್ತೇವೆ. ಅದನ್ನೆಲ್ಲ ಪುನಃ ಗಳಿಸುವುದು ಹೇಗೆ ಎಂದು ತಿಳಿದು ಪುನಃ ಗಳಿಸಿ ಕೊಳ್ಳು ತ್ತೇವೆ, ಗೆಲ್ಲುತ್ತೇವೆ. ಆಟದಲ್ಲಿ ಇರುವಂತೆ ಜೀವನದಲ್ಲಿಯೂ ಈ ರೀತಿಯ ಏರಿಳಿತಗಳು ಇದ್ದದ್ದೇ. ನಾವು ಕಳೆದುಕೊಂಡದ್ದನ್ನು ಪುನಃ ಗಳಿಸುವುದು ಹೇಗೆ ಎಂದು ಕಲಿಯಬೇಕು, ಆ ಕಡೆ ಲಕ್ಷ್ಯ ಹರಿಸಬೇಕು’ ಮುಂದುವರಿದು ಫೆಡ್ರರ್ ಹೇಳುತ್ತಾನೆ, ‘ನಮ್ಮ ಬದುಕು ಟೆನಿಸ್ ಮೈದಾನಕ್ಕಿಂತ ದೊಡ್ದದು. ಟೆನಿಸ್ ನನಗೆ ಜಗತ್ತನ್ನು ತೋರಿಸಿತ್ತು ಆದರೆ ಟೆನಿಸ್ ಆಟವೇ ಜಗತ್ತಾಗಲು ಸಾಧ್ಯವಿಲ್ಲ ಎಂಬುದೂ ನನಗೆ ತಿಳಿದಿತ್ತು.

ನೀವೂ ಕೂಡ ಈಗ ಬೇರೆ ಬೇರೆ ಕ್ಷೇತ್ರಕ್ಕೆ ಹೋಗುತ್ತಿದ್ದೀರಿ, ಕ್ಷೇತ್ರ ಯಾವುದೇ ಆದರೂ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ’. ಕೊನೆಯದಾಗಿ, ‘ನಾನು ನಿಮ್ಮ ಸಹಪಾಠಿ ಎನ್ನುವುದನ್ನು ಮರೆಯದಿರಿ. ಎಲ್ಲಾ ಕಂಡರೂ ಮಾತನಾಡಿಸಿ, ನಾನು ಮತ್ತು ನೀವು ಒಟ್ಟಿಗೇ ಪದವಿ ಪಡೆದಿದ್ದೇವೆ ಎಂಬುದನ್ನು ನೆನಪಿಸಿ’. ಫೆಡ್ರರ್ ಬರೀ ಆಟಗಾರ, ಮಾಟಗಾರನಷ್ಟೇ ಅಲ್ಲ, ಮಾತುಗಾರನೂ ಹೌದು ಎಂದೆನಿಸಿತು.

ಮೊನ್ನೆ ಜೂನ್ ಇಪ್ಪತ್ತನೇ ತಾರೀಖು, ಅಮೆಝಾನ್ ಪ್ರೈಮ್ ವಿಡಿಯೋದಲ್ಲಿ ಒಂದೂವರೆ ಗಂಟೆಯ Federer: Twelve final days ಎಂಬ ಕಿರು ಸಾಕ್ಷ್ಯಚಿತ್ರ ಬಿಡುಗಡೆಯಾಗಿದೆ. ೨೦೨೨ ರ ಸೆಪ್ಟೆಂಬರ್ ೧೪ ರಿಂದ -ಡ್ರರ್ ಜೀವನದ ಹನ್ನೆರಡು ದಿನಗಳು ಹೇಗಿದ್ದವು ಎಂದು ಹೇಳುವ ಚಿತ್ರ ಅದು. ಸಾಧ್ಯವಾದರೆ ನೋಡಿ. ಒಂದು ಕೆಟ್ಟ ಸಿನಿಮಾ ನೋಡದ ಸಮಾಧಾನ ನಿಮ್ಮದಾಗುತ್ತದೆ. ಒಬ್ಬ ರಿಯಲ್ ಹೀರೋ ನೋಡಿದ ಖುಷಿ ಸಿಗುತ್ತದೆ. ಇದು ‘ಹ್ಯಾಪಿ ಎಂಡಿಂಗ್’ ಚಿತ್ರವೋ ಅಥವಾ ‘ಸ್ಯಾಡ್ ಎಂಡಿಂಗ್’ ಚಿತ್ರವೋ ಎನ್ನುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.

ಕೊನೆಯದಾಗಿ; ‘ಟೆನಿಸ್ ಆಟದಲ್ಲಿ ರೋಜರ್ ಫೆಡ್ರರ್‌ನಷ್ಟು ಲೀಲಾಜಾಲವಾಗಿ, ಸೊಗಸಾಗಿ ಆಡುವ, ಪರಿಪೂರ್ಣ ಆಟಗಾರ ಇನ್ನು ಮುಂದೆ
ಬರಲಿಕ್ಕಿಲ್ಲ’. ಇದು ಫೆಡ್ರರ್ ಕುರಿತು ಅವನ ಪ್ರತಿಸ್ಪರ್ಧಿ ನಡಾಲ್ ಹೇಳಿದ ಮಾತು.

Leave a Reply

Your email address will not be published. Required fields are marked *

error: Content is protected !!