Friday, 13th December 2024

ಅಮೆರಿಕನ್ನಡಿಗರ ಅಕ್ಷರಹಬ್ಬ: ಈ ಕೆಲಸದ ಆಕರ್ಷಣೆ ಅವಳು !

ತಿಳಿರು ತೋರಣ

srivathsajoshi@yahoo.com

ಈ ಬಾರಿಯ ಸಾಹಿತ್ಯೋತ್ಸವದ ಮುಖ್ಯ ವಸ್ತು ಅಥವಾ ಥೀಮ್ ‘ಸೀ ಸಂವೇದನೆ’. ಆದ್ದರಿಂದ ಮುಖ್ಯ ಅತಿಥಿಯೆಂದು ಆಹ್ವಾನಿತರಾಗಿ ಬಂದಿರುವವರು ಪ್ರಮುಖ ಸ್ತ್ರೀವಾದಿ ಲೇಖಕಿ ಮತ್ತು ಚಿಂತಕಿ ಡಾ.ಎಚ್. ಎಸ್. ಶ್ರೀಮತಿ. ಅವರ ಪತಿ, ಖ್ಯಾತ ಲೇಖಕ ಮತ್ತು ಭಾಷಾತಜ್ಞ ಕೆ.ವಿ.ನಾರಾಯಣ ಸಹ ಬಂದಿದ್ದಾರೆ. ಸ್ತ್ರೀ ಸಂವೇದನೆ ಥೀಮ್ ಆದ್ದರಿಂದ ಈ ಸಲದ ಗ್ರಂಥದ ಹೆಸರು ‘ಅವಳು… ಸ್ತ್ರೀ ಸಂವೇದೀ ಮಾತು-ಕತೆಗಳು’ ಎಂದು.

ಅವಳು ಯಾರು? ಯಾರಾದರೂ ಆಗಬಹುದು, ಒಬ್ಬ ಸರ್ವೇಸಾಮಾನ್ಯ ಸೀ. ಶಿವರುದ್ರಪ್ಪನವರಂತೆ ಆಲೋಚಿಸುವುದಾದರೆ ‘ಸ್ತ್ರೀ ಎಂದರೆ ಅಷ್ಟೇ ಸಾಕೇ? ನಿನಗೆ ಬೇರೆ ಹೆಸರು ಬೇಕೇ?’ ಸರಿ, ಒಗಟಿನಂತೆ ಮಾತನಾಡುವುದು ಬೇಡ. ನೇರವಾಗಿ ವಿಷಯಕ್ಕೆ ಬರುತ್ತೇನೆ. ಈ ವಾರಾಂತ್ಯದಲ್ಲಿ ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ದ ಹನ್ನೊಂದನೆಯ ವಸಂತ ಸಾಹಿತ್ಯೋತ್ಸವ ನಡೆಯುತ್ತಿದೆ. ಇದು ಎರಡು ವರ್ಷಗಳಿಗೊಮ್ಮೆ ಅಮೆರಿಕದ ಯಾವುದಾದರೂ ನಗರದಲ್ಲಿ ಜರುಗುವ ಕನ್ನಡ ನುಡಿಹಬ್ಬ. ಈ ಸಲನಡೆಯುತ್ತಿರುವುದು ರಾಜಧಾನಿ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ, ಮೇರಿಲ್ಯಾಂಡ್ ರಾಜ್ಯದ ಸಿಲ್ವರ್‌ಸ್ಪ್ರಿಂಗ್ ಪಟ್ಟಣದಲ್ಲಿರುವ ಜಾನ್ ಎಫ್ ಕೆನಡಿ ಹೈಸ್ಕೂಲ್‌ನ ಸಭಾಂಗಣದಲ್ಲಿ.

ಅಂದ ಹಾಗೆ ಸಿಲ್ವರ್ ಸ್ಪ್ರಿಂಗ್ ಎಂಬ ಹೆಸರು ಗಮನಿಸಿದೊಡನೆ ಅಮೆರಿಕದಲ್ಲಿ ಊರುಗಳಿಗೆ ಆ ರೀತಿಯ ಹೆಸರೂ ಇರುತ್ತದಾ ಎಂದು ನೀವೊಮ್ಮೆ ಅಚ್ಚರಿ
ಪಟ್ಟಿರೇನೊ. ಇರುತ್ತದೆ ಮಾತ್ರವಲ್ಲ, ಐದಾರು ದಶಕಗಳ ಹಿಂದೆ ಆ ಪಟ್ಟಣದಲ್ಲಿ ನೆಲೆಸಿದ್ದ ಒಂದಷ್ಟು ಕನ್ನಡಿಗರು ಅದನ್ನು ‘ಬೆಳ್ಳಿಬುಗ್ಗೆ’ ಎಂಬ ಅಚ್ಚ ಕನ್ನಡ ಹೆಸರಿಂದ ಕರೆದದ್ದೂ ಇದೆ. ಕನ್ನಡಿಗರ ಸಂವಹನಕ್ಕೆಂದು ಅವರೆಲ್ಲ ಸೇರಿ ಪ್ರಕಟಿಸುತ್ತಿದ್ದ ಕೈಬರಹದ ಪತ್ರಿಕೆಗೆ ಬೆಳ್ಳಿಬುಗ್ಗೆ ಎಂದೇ ಹೆಸರಿಟ್ಟದ್ದೂ ಇದೆ. ಇರಲಿ, ಈಗ ವಿಷಯ ಅದಲ್ಲ. ಕನ್ನಡ ಸಾಹಿತ್ಯ ರಂಗವು ಸಾಮಾನ್ಯವಾಗಿ ಈ ವಸಂತ ಸಾಹಿತ್ಯೋತ್ಸವಗಳನ್ನು ಆಯೋಜಿಸುವುದಕ್ಕೆ ಆಯಾ ನಗರಗಳ ಸ್ಥಳೀಯ ಕನ್ನಡ ಕೂಟದ ಸಹಯೋಗ ಪಡೆದುಕೊಳ್ಳುತ್ತದೆ.

ಈ ಸರ್ತಿ ಅಂಥ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡಿದ್ದು ಮೇರಿಲ್ಯಾಂಡ್‌ನ ಶರಾವತಿ ಕನ್ನಡ ಬಳಗ. ಆದ್ದರಿಂದ ಬೆಳ್ಳಿಬುಗ್ಗೆಯಲ್ಲಿ ಅವರೆಲ್ಲರ ಕನ್ನಡ ಪ್ರೀತಿಯೆಂಬ ಮಿಂಚುಳ್ಳಿಯ ಬುಗ್ಗೆ ಎನ್ನೋಣ. ಅಮೆರಿಕದ ಕನ್ನಡ ಸಂಘಟನೆಗಳ ವಿಚಾರಕ್ಕೆ ಬಂದರೆ ನೀವು ‘ಅಕ್ಕ’ ಮತ್ತು ‘ನಾವಿಕ’ ಎಂಬೆರಡು ಹೆಸರುಗಳನ್ನು ಕೇಳಿ/ಓದಿ ತಿಳಿದಿರುವ ಸಾಧ್ಯತೆ ಹೆಚ್ಚು. ರಾಷ್ಟ್ರಮಟ್ಟದ ಈ ಸಂಘಟನೆಗಳು ಕನ್ನಡದ ಕೆಲಸ ಮಾಡುವಂಥವೇ. ಆದರೆ ಅವು ನಡೆಸುವ ಸಮ್ಮೇಳನಗಳು ಒಂಥರದಲ್ಲಿ ದೊಡ್ಡದೊಂದು ಜಾತ್ರೆ ಇದ್ದಹಾಗೆ. ಅಲ್ಲಿ ಸೇರುವ ಜನರೂ ಸಾವಿರಾರು; ಅವರ ಉದ್ದೇಶ-ಆಶಯ-ಆಸಕ್ತಿಗಳೂ ಹಲವಾರು.

ಅಲ್ಲದೇ ಕರ್ನಾಟಕದಿಂದ ಮಂತ್ರಿಗಳು, ಶಾಸಕರು, ರಾಜಕಾರಣಿಗಳೆಲ್ಲ ಆಹ್ವಾನಿತರಾಗಿ ಪಾಲ್ಗೊಳ್ಳುವುದರಿಂದ (ಕಟುವಾಗಿ ಹೇಳುವುದಾದರೆ ‘ವಕ್ಕರಿಸಿ ಅಂದಗೆಡಿಸುವುದರಿಂದ’)- ಆ ಸಮ್ಮೇಳನಗಳದು, ಅದರಿಂದಾಗಿ ಆ ಸಂಘಟನೆಗಳದು ಕೂಡ, ಹೆಚ್ಚು ಸದ್ದು, ಹೆಚ್ಚು ಸುದ್ದಿ. ಕನ್ನಡ ಸಾಹಿತ್ಯ ರಂಗ
ಹಾಗಲ್ಲ. ಇದು ಕನ್ನಡ ಸಾಹಿತ್ಯ ಎಂಬ ಸೀಮಿತ ಆಸಕ್ತಿಯ ಅಕ್ಷರಮೋಹಿತ ಅಮೆರಿಕನ್ನಡಿಗರ ಪುಟ್ಟ ಬಳಗ. ಎದೆಯೊಳಗೆ ಕನ್ನಡ ನುಡಿಪ್ರೇಮವನ್ನು ಬೆಚ್ಚಗೆ ಇಟ್ಟುಕೊಂಡಿರುವ, ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದರೂ, ಪ್ರತಿದಿನವೂ ಒಂದಿಷ್ಟಾದರೂ ಕನ್ನಡ ಅಕ್ಷರಗಳ ಓದು-ಬರಹವನ್ನು ನಿತ್ಯಕೈಂಕರ್ಯದಂತೆ ಮಾಡಿಕೊಂಡು ಬಂದಿರುವ, ಸಮಾನಾಸಕ್ತರ ವೇದಿಕೆ.

ಎಚ್.ವೈ.ರಾಜಗೋಪಾಲ್, ನಾಗ ಐತಾಳ(ಈಗ ಇಬ್ಬರೂ ನಮ್ಮೊಂದಿಗಿಲ್ಲ), ಎಚ್.ಕೆ. ಚಂದ್ರಶೇಖರ, ಮೈ.ಶ್ರೀ.ನಟರಾಜ, ನಳಿನಿ ಮೈಯ ಮುಂತಾದ ಹಿರಿತಲೆಮಾರಿನ ಅಮೆರಿಕನ್ನಡಿಗರು ನೆಟ್ಟು ನೀರುಣಿಸಿ ಪೋಷಿಸಿದ ಗಿಡ. ಈಗ ಹೊಸಬರನೇಕರೂ ಸೇರಿ ಚಿಗುರುತ್ತಿರುವ ಮರ. ಅಮೆರಿಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಬೆಳೆಸುವುದು, ಅವರನ್ನು ತಮ್ಮ ಜ್ಞಾನಾನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪ್ರೋತ್ಸಾಹಿಸುವುದು, ಅವರ ಬರವಣಿಗೆಗಳನ್ನು ಪ್ರಕಟಿಸುವುದು, ಅದನ್ನು ಕರ್ನಾಟಕದಲ್ಲಿ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಜಗತ್ತಿನೆಲ್ಲೆಡೆಯ ಕನ್ನಡಿಗರ ಗಮನಕ್ಕೆ ತರುವುದು ಈ ಸಂಘಟನೆಯ ಮುಖ್ಯ ಧ್ಯೇಯೋದ್ದೇಶ.

ಇಲ್ಲಿ ಹಾರ-ತುರಾಯಿ ಸನ್ಮಾನಗಳ ಅಬ್ಬರವಿಲ್ಲ. ಸಮ್ಮೇಳನಾಧ್ಯಕ್ಷರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಡೌಲು ಇಲ್ಲ. ವ್ಯಕ್ತಿ ಕೇಂದ್ರಿತ ಹೊಗಳಿಕೆ ತೆಗಳಿಕೆಗಳ ಉಪಟಳವಿಲ್ಲ. ರಾಜಕಾರಣಿಗಳ ಪ್ರವೇಶವಂತೂ ಇಲ್ಲವೇ ಇಲ್ಲ. ಒಳ್ಳೆಯ ಕೆಲಸವನ್ನಷ್ಟೇ ಸದ್ದಿಲ್ಲದೆ ಮಾಡುವುದರಿಂದ ಇದೊಂಥರದ ವನಸುಮ. ಹಾಗಾಗಿಯೇ, ಇಪ್ಪತ್ತು ವರ್ಷಗಳಾದ ಮೇಲೂ ಇನ್ನೂ ಅನೇಕರಿಗೆ ಗೊತ್ತೇ ಇಲ್ಲ. ಇಂತಿರುವ ಕನ್ನಡ ಸಾಹಿತ್ಯ ರಂಗ (ಕಸಾರಂ) ನಡೆಸುವ ವಸಂತ ಸಾಹಿತ್ಯೋತ್ಸವ ಕೂಡ ವಿಭಿನ್ನ. ಅತ್ಯಂತ ಸರಳವಾಗಿ ನಡೆಯುವ ಈ ಉತ್ಸವ ಸಹಜವಾಗಿಯೇ ಅಕ್ಕ-ನಾವಿಕ ಸಮ್ಮೇಳನಗಳಂತೆ
ಸುದ್ದಿಯಾಗುವುದಿಲ್ಲ.

ಆದರೆ ಭರಪೂರ ಸತ್ತ್ವಯುತ ಮತ್ತು ಅರ್ಥಪೂರ್ಣವಾಗಿರುತ್ತದೆ ಎಂದು ಇದುವರೆಗಿನ ಹೆಚ್ಚಿನೆಲ್ಲ ಉತ್ಸವಗಳಲ್ಲಿ ಭಾಗಿಯಾಗಿರುವ ನಾನು ಹೇಳಬಲ್ಲೆ. ಸಾಹಿತ್ಯೋತ್ಸವದ ಇನ್ನೊಂದು ವೈಶಿಷ್ಟ್ಯವೆಂದರೆ ಪ್ರತಿಸಲವೂ ಒಂದು ನಿರ್ದಿಷ್ಟ ವಿಷಯ ಅಥವಾ ಥೀಮ್ ಇರುತ್ತದೆ. ಮೊತ್ತಮೊದಲ ಸಾಹಿತ್ಯೋತ್ಸವ ಕುವೆಂಪು ಜನ್ಮಶತಾಬ್ದಿ ವರ್ಷದಲ್ಲಿ (೨೦೦೪) ಆಗಿದ್ದರಿಂದ ಕುವೆಂಪು ಸಾಹಿತ್ಯ ಸಮೀಕ್ಷೆಯೇ ಆ ಸಲದ ಥೀಮ್ ಆಗಿತ್ತು. ಆಮೇಲಿನ ಉತ್ಸವಗಳಲ್ಲಿ ಅನುಕ್ರಮವಾಗಿ ಕನ್ನಡ ಕಥಾಸಾಹಿತ್ಯ, ಹಾಸ್ಯಸಾಹಿತ್ಯ, ಕನ್ನಡ ಕಾದಂಬರಿ ಲೋಕ, ಪ್ರಬಂಧಸಾಹಿತ್ಯ, ಅಮೆರಿಕಕ್ಕೆ ವಲಸೆ ಬಂದು ಜೀವನ ಕಟ್ಟಿ ಕೊಂಡವರ ಅನುಭವಕಥನ, ಅನುವಾದ ಸಾಹಿತ್ಯ, ಭಕಿ ಸಾಹಿತ್ಯ, ಹೊಸ ನಾಡಿನಲ್ಲಿ ಬಂದಿಳಿದು ಹೊಸ ಜೀವನವನ್ನು ಕಂಡುಕೊಂಡು ಎದುರಿಸುವ ಬದಲಾವಣೆ, ಆಸಕ್ತಿಯಿಂದ ಅಭ್ಯಸಿಸಿ ಅರಗಿಸಿಕೊಂಡ ಅಮೆರಿಕನ್ ಜಾನಪದ- ಮುಂತಾದುವು ಮುಖ್ಯ ವಿಷಯಗಳಾದುವು.

ಪ್ರತಿ ಉತ್ಸವದಲ್ಲೂ ಮುಖ್ಯ ವಿಷಯವನ್ನು ಕುರಿತು ಅಮೆರಿಕನ್ನಡಿಗ ಬರಹಗಾರರಿಂದ ಲೇಖನಗಳನ್ನು ಬರೆಸಿ ಸಂಪಾದಿಸಿದ ಒಂದು ಗ್ರಂಥ ಬಿಡುಗಡೆಯಾಗುತ್ತದೆ. ವಿಷಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಕರ್ನಾಟಕದಿಂದ ಒಬ್ಬರು ಅಥವಾ ಇಬ್ಬರು ಪ್ರಸಿದ್ಧ ಸಾಹಿತಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ; ಅವರಿಂದ ಸಾಕಷ್ಟು ದೀರ್ಘವಾದ ಆಶಯಭಾಷಣ ಇರುತ್ತದೆ; ಅವರೊಂದಿಗೆ ಸಂವಾದವೂ ಇರುತ್ತದೆ. ಸಾಹಿತ್ಯದ
ಚೌಕಟ್ಟಿಗೆ ಹೊಂದಿಕೊಳ್ಳುವ ಮನೋರಂಜನೆಯ ಕಾರ್ಯಕ್ರಮಗಳೂ ಇರುತ್ತವೆ.

ಈ ಬಾರಿಯ ಸಾಹಿತ್ಯೋತ್ಸವದ ಮುಖ್ಯ ವಸ್ತು ಅಥವಾ ಥೀಮ್ ‘ಸ್ತ್ರೀ ಸಂವೇದನೆ’. ಆದ್ದರಿಂದ ಮುಖ್ಯ ಅತಿಥಿಯೆಂದು ಆಹ್ವಾನಿತರಾಗಿ ಬಂದಿರುವವರು ಪ್ರಮುಖ ಸ್ತ್ರೀವಾದಿ ಲೇಖಕಿ ಮತ್ತು ಚಿಂತಕಿ ಡಾ. ಎಚ್. ಎಸ್. ಶ್ರೀಮತಿ. ಅವರ ಪತಿ, ಖ್ಯಾತ ಲೇಖಕ ಮತ್ತು ಭಾಷಾತಜ್ಞ ಕೆ.ವಿ.ನಾರಾಯಣ ಸಹ ಬಂದಿದ್ದಾರೆ. ಸ್ತ್ರೀ ಸಂವೇದನೆ ಥೀಮ್ ಆದ್ದರಿಂದ ಈ ಸಲದ ಗ್ರಂಥದ ಹೆಸರು ‘ಅವಳು… ಸ್ತ್ರೀ ಸಂವೇದೀ ಮಾತು-ಕತೆಗಳು’ ಎಂದು. ಮಾತು- ಕತೆ ಏಕೆಂದರೆ ಇದರಲ್ಲಿ ಪ್ರಬಂಧ ರೀತಿಯ ೨೩ ಲೇಖನಗಳೂ ಇವೆ, ಸಣ್ಣಕತೆ ಪ್ರಕಾರದ ೧೦ ಬರಹಗಳೂ ಇವೆ.

ಎಲ್ಲವೂ ಸ್ತ್ರೀ ಸಂವೇದನೆಯನ್ನು ಪ್ರಧಾನ ವಸ್ತುವಾಗಿಟ್ಟುಕೊಂಡು ಬರೆದಂಥವು. ಗ್ರಂಥದ ಸಂಪಾದಕತ್ವದ ಹೊಣೆ ಹೊತ್ತವರೂ ಇಬ್ಬರು ಪ್ರತಿಭಾನ್ವಿತ ಅಮೆರಿಕನ್ನಡಿತಿಯರು: ಮುಖ್ಯ ಸಂಪಾದಕಿಯಾಗಿ ಮೀರಾ ಪಿ. ಆರ್, ಮತ್ತು ಸಹಸಂಪಾದಕಿಯಾಗಿ ಪೂರ್ಣಿಮಾ ಕಶ್ಯಪ್. ‘ಗ್ರಂಥದ ವಸ್ತುವನ್ನು ನಿಗದಿಪಡಿಸುವುದರಿಂದ ಹಿಡಿದು, ಲೇಖಕ-ಲೇಖಕಿಯರನ್ನು ಗುರುತಿಸಿ, ಆಹ್ವಾನಿಸಿ, ಅವರಿಂದ ಲೇಖನಗಳನ್ನು ಬರೆಯಿಸಿ, ಬಂದ ಲೇಖನಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ತಿದ್ದಿ, ಪ್ರಕಟಣೆಗೆ ಸಿದ್ಧಪಡಿಸುವ ಒಂದು ಕೈಂಕರ್ಯ ಏನಿದೆ, ಅದಕ್ಕೆ ಸಮಯ ಬೇಕು, ತಾಳ್ಮೆ ಬೇಕು, ಪ್ರತಿಭೆ ಬೇಕು, ಜಾಣ್ಮೆ ಬೇಕು, ಮತ್ತು ಕನ್ನಡದ ಪ್ರೀತಿ ಮುಖ್ಯವಾಗಿ ಇರಲೇಬೇಕು. ಈ ಇಬ್ಬರು ಮಹಿಳೆಯರು ಈ ಎಲ್ಲ ಗುಣಗಳನ್ನೂ ಹೊಂದಿರುವುದೇ ಅಲ್ಲದೇ ಬರಹಗಳ ವಸ್ತುವನ್ನು ಕೂಲಂಕಷವಾಗಿ ಓದಿ, ಚರ್ಚಿಸಿ, ಸಿದ್ಧಪಡಿಸುವ ಕಾರ್ಯ ದಲ್ಲಿ ಸಹ ಪಳಗಿದವರು.

ಇವರ ಶಿಸ್ತು, ಕಾರ್ಯವೈಖರಿ ಮೆಚ್ಚ ಬೇಕಾದ್ದು…’ ಎಂದು ಕಸಾರಂ ವಿಶ್ವಸ್ಥ ಮಂಡಲಿ ಮತ್ತು ಕಾರ್ಯಕಾರಿ ಸಮಿತಿ ಅಧ್ಯಕ್ಷರುಗಳಿಂದ ಸಕಾರಣ ವಾಗಿಯೇ ಶಭಾಸ್‌ಗಿರಿ ಪಡೆದವರು. ಗ್ರಂಥಕ್ಕೆ ಯೋಗ್ಯವಾದೊಂದು ಮುನ್ನುಡಿ ಬರೆದಿರುವವರು ಡಾ.ರಾಜೇಂದ್ರ ಚೆನ್ನಿ. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕ, ವಿಮರ್ಶಕ, ಲೇಖಕ, ಕತೆಗಾರ. ಮುನ್ನುಡಿಯಲ್ಲಿ ಒಂದುಕಡೆ ಅವರು ಬರೆದ ‘ಇಲ್ಲಿಯ ಬರಹಗಳು ತಮ್ಮ ಸ್ವಂತಿಕೆಯಿಂದಾಗಿ ಅಚ್ಚರಿ ಹುಟ್ಟಿಸುವಷ್ಟು ಸಶಕ್ತವಾಗಿವೆ. ಇಷ್ಟೊಂದು ಸಂಖ್ಯೆಯ ಸೂಕ್ಷ್ಮ ಮನಸ್ಸುಗಳೆಲ್ಲಾ ಅಮೆರಿಕಕ್ಕೆ ವಲಸೆ ಹೋಗಿವೆಯೆ ಎಂದು ನನಗೊಮ್ಮೆ ಗಾಬರಿಯೂ ಆಯಿತು!

ಇರಲಿ, ಎಲ್ಲಿದ್ದರೂ ಕನ್ನಡವೆನ್ನುವ ಕೂಡು ಕುಟುಂಬದ ಸದಸ್ಯರಲ್ಲವೆ?’ ಎಂಬ ಮಾತು ಗಮನಾರ್ಹ. ಅಂತೆಯೇ ‘ಈ ಸಂಗ್ರಹವನ್ನು ಓದಿದಾಗ ನನಗೆ ತುಂಬಾ ಸಂತೋಷವನ್ನು ಕೊಟ್ಟ ವಿಷಯವೆಂದರೆ ಇಲ್ಲಿಯ ಬರಹಗಳಲ್ಲಿ ಇರುವ ಸೂಕ್ಷ್ಮವಾದ ಸ್ಪಂದನೆ ಮತ್ತು ಮನುಷ್ಯಪರ ಚಿಂತನೆ. ದುರಂತ ವೆಂದರೆ ಇಲ್ಲಿ ಭಾರತ ದಲ್ಲಿ ನಮ್ಮ ಮಾಧ್ಯಮಗಳು ಅಮೆರಿಕನ್ ಭಾರತೀಯರು ಪಶ್ಚಿಮದಿಂದ ಏನನ್ನೂ ಕಲಿಯದ ಸಂಪ್ರದಾಯವಾದಿಗಳು
ಎಂದು ಬಿಂಬಿಸುತ್ತವೆ. ಈ ಸ್ಥಗಿತ ಚಿತ್ರಗಳನ್ನೇ ನೋಡುವವರಿಗೆ ಈ ಸಂಗ್ರಹವು ನಿಜವಾದ ಅರ್ಥದಲ್ಲಿ ಎಜ್ಯುಕೇಟಿವ್ ಆಗಿದೆ. ಇಂಥ ಮಾಧ್ಯಮ ನಿರ್ದೇಶಿತ ಪೂರ್ವಗ್ರಹಗಳಿಂದ ಹೊರಬಂದು ಅನೇಕ ಸೂಕ್ಷ್ಮ ಜಾಗೃತ ಮನಸ್ಸುಗಳೊಂದಿಗೆ ಸಂಬಂಧ ಕುದುರಿಸಿದಂಥ ಅನುಭವ ಈ ಸಂಗ್ರಹದ ಓದಿನಿಂದ ಸಿಕ್ಕುತ್ತದೆ…’ ಎಂಬ ಷರಾ ಕೂಡ. ಗ್ರಂಥದ ರಕ್ಷಾಪುಟ ವಿನ್ಯಾಸ (ಸೌಮ್ಯ ಪ್ರಭು ಕಲ್ಯಾಣಕರ್) ಸಹ ವಿಶೇಷವಾಗಿ ಮೂಡಿಬಂದಿದೆ.

ಚಿತ್ರ ಸಾಮಾನ್ಯವಾಗಿ ಕಾಣಬಹುದು, ಆದರೆ ತಿಳಿ ಬಣ್ಣದ ಅಕ್ಷರಗಳಲ್ಲಿ ಅಚ್ಚಾದ ‘ಅಬಲೆ, ಕಾಳಿ, ಗೌರಿ, ಸಬಲೆ, ದೇವಿ, ಗರತಿ, ದಾಸಿ, ಮಾಯೆ, ಮುತ್ತೈದೆ, ಸೂಳೆ…’ ಪದಗಳು ಗಾಢ ಚಿಂತನೆಗೆ ಹಚ್ಚುವಂತಿವೆ. ಗ್ರಂಥದ ಹೂರಣವನ್ನು ಸಮರ್ಥವಾಗಿ ಪ್ರತಿಬಿಂಬಿಸುವಂತಿವೆ. ಹೌದಲ್ವಾ? ಭಾರತದಲ್ಲಷ್ಟೇ ಅಂತಲ್ಲ ಜಗತ್ತಿನೆಲ್ಲೆಡೆಯೂ ಶತಶತಮಾನಗಳಿಂದಲೂ ಸ್ತ್ರೀಗೆ ಹೀಗೆ ಹತ್ತುಹಲವು ರೂಪಗಳನ್ನು ಒತ್ತಾಯಪೂರ್ವಕವಾಗಿ ತೊಡಿಸಲಾಗಿದೆ, ಹೇರಲಾಗಿದೆ, ಹೊರಿಸಲಾಗಿದೆ- ಅಂತಃಸತ್ತ್ವದಲ್ಲಿ ಆಕೆ ಪರಮಪುನೀತೆಯೇ ಆಗಿದ್ದರೂ! ಗ್ರಂಥದ ಅರ್ಪಣೆಯ ವಾಕ್ಯ- ‘ಆಡದೇ ಉಳಿವ ಮಾತುಗಳಿಗೆ…
ಕೇಳದೆಯೇ ಅರಿವ ಅಂತಃಕರಣಕ್ಕೆ…’ ಸಹ ಚಿಂತನಯೋಗ್ಯ. ಸೀಯ ಮೇಲೆ ಹೇರಲಾಗಿರುವ ಅಭಿಪ್ರಾಯ-ಪದರಗಳನ್ನೆಲ್ಲ ಭೇದಿಸಿ ಅವಳ ನಿಜರೂಪ ವನ್ನು ತಲುಪುವ, ತೋರಿಸುವ ಪ್ರಾಮಾಣಿಕ ಯತ್ನ.

‘ಅವಳು…’ ಗ್ರಂಥಕ್ಕೆ ನಾನು ಬರೆದಿಲ್ಲ. ಕಾರಣ, ಸಣ್ಣಕತೆ ಯಂತೂ ನನ್ನ ಚಹದ ಕಪ್ಪಲ್ಲ; ಗಂಭೀರ ಚಿಂತನೆಯ ಬರವಣಿಗೆ- ಅದೂ ಸ್ತ್ರೀಸಂವೇದನೆ ಯಂಥ ಅತಿಸೂಕ್ಷ್ಮ ವಸ್ತುವಿನದು, ಸಂವೇದನಾಶೀಲ ಒಳನೋಟಗಳನ್ನು ಬೇಡುವಂಥದ್ದು- ಸಹ ನನ್ನ ಸಾಮರ್ಥ್ಯದ ಬಾಬತ್ತಲ್ಲ. ಆದರೆ ಈ ಗ್ರಂಥದ ನಿರ್ಮಾಣದಲ್ಲಿ ನನ್ನದೊಂದಿಷ್ಟು ಅಳಿಲುಸೇವೆ ಇದೆ, ತಾಂತ್ರಿಕ ನೆರವಿನ ರೂಪದಲ್ಲಿ. ಬೇರೆಬೇರೆ ಬರಹಗಾರರು ಬೇರೆಬೇರೆ ರೀತಿಯ ಫಾಂಟುಗಳನ್ನು ಬಳಸಿ ಟೈಪ್ ಮಾಡಿ ಕಳುಹಿಸಿದ್ದ ಬರಹಗಳನ್ನೆಲ್ಲ ನುಡಿ ಫಾಂಟ್‌ಗೆ ಕನ್ವರ್ಟ್ ಮಾಡಿ ಪುಸ್ತಕದ ಕರಡುಪ್ರತಿಗೆ ಏಕರೂಪತೆ ತಂದದ್ದು, ತನ್ಮೂಲಕ ಪುಸ್ತಕ
ಸಂಯೋಜನೆ ಮತ್ತು ಪ್ರಸ್ತುತಿಯ ಹೊಣೆಹೊತ್ತ ಅಭಿನವ ಪ್ರಕಾಶನ ಬೆಂಗಳೂರಿನ ರವಿಕುಮಾರ್ ಅವರಿಗೆ ಸುಲಭವಾಗುವಂತೆ ಮಾಡಿದ್ದು ನನ್ನ ಕೆಲಸ.

ಇದರಿಂದ ಇಡೀ ಪುಸ್ತಕದ ಪ್ರಿವಿಲೆಜ್ಡ್-ಪ್ರಿವ್ಯೂ ನನಗೆ ಸಿಕ್ಕಿತೆನ್ನುವುದು ನಿಜ; ಪುಸ್ತಕದ ಫಾಂಟ್ ಕನ್ವರ್ಷನ್ ಹಂತದಲ್ಲಿ ನಾನು ಡಾ. ಮೈ. ಶ್ರೀ.
ನಟರಾಜರೊಡನೆ ಮಾತನಾಡುತ್ತ ‘ಅವಳು ಉಡುಪು ಬದಲಾಯಿಸಿಕೊಳ್ಳಲಿಕ್ಕೆ ಈಗ ನನ್ನ ಬಳಿಗೆ ಬಂದಿದ್ದಾಳೆ!’ ಎಂದು ಒಂದು ಟಂಗ್-ಇನ್-ಚೀಕ್ ವ್ಯಂಗ್ಯೋಕ್ತಿ ಉದುರಿಸುವುದಕ್ಕೆ, ಅವರು ಅಷ್ಟೇ ತಮಾಷೆಯಾಗಿ ‘ಹಾಗಿದ್ದರೆ ಕಣ್ಮುಚ್ಚಿಕೊಂಡು ನಾಜೂಕಾಗಿ ಆ ಕೆಲಸವನ್ನು ಮಾಡಿ!’ ಎಂದು ಉತ್ತರಿಸುವುದಕ್ಕೆ ಅವಕಾಶವಾಯ್ತೆನ್ನುವುದೂ ನಿಜ. ಅಂಥ ಚಿಕ್ಕಪುಟ್ಟ ಹಾಸ್ಯಗಳು ನನ್ನ ಮಾಮೂಲಿ ಕಾರ್ಯಶೈಲಿ; ಆದರೆ ತಮಾಷೆ ಒತ್ತಟ್ಟಿಗಿಟ್ಟರೂ ಈ ಪುಸ್ತಕದ ಕೆಲಸವು ಕನ್ನಡ ಸಾಹಿತ್ಯ ರಂಗದ ಬಗೆಗೆ, ಗ್ರಂಥಕ್ಕೆ ಬರೆದಿರುವ ಎಲ್ಲ ಅಮೆರಿಕನ್ನಡಿಗ ಲೇಖಕ-ಲೇಖಕಿಯರ ಬಗೆಗೆ, ಇಬ್ಬರು ಸಂಪಾದಕಿಯರ ಬಗೆಗೆ, ಗ್ರಂಥ ಪ್ರಕಟಣೆಯ ಅಷ್ಟೂ ವೆಚ್ಚವನ್ನು ಪ್ರಾಯೋಜಿಸಿರುವ ಅಮೆರಿಕನ್ನಡಿಗ ಹ್ಯೂಸ್ಟನ್‌ನ ವತ್ಸ ಕುಮಾರ್ ಅವರ ಬಗೆಗೆ, ನನ್ನ ಅಭಿಮಾನವನ್ನು ದುಪ್ಪಟ್ಟುಗೊಳಿಸಿದೆ ಎನ್ನುವುದು ಕೂಡ ಅಷ್ಟೇ ನಿಜ.

ಕರ್ನಾಟಕದಲ್ಲಿ ಈ ಗ್ರಂಥದ ವಿತರಣೆ ಮತ್ತು ಮಾರಾಟ ಜವಾಬ್ದಾರಿಯನ್ನು, ಕನ್ನಡ ಸಾಹಿತ್ಯ ರಂಗದ ನಿಡುಗಾಲದ ಆಪ್ತಸಖ ಅಭಿನವ ಪ್ರಕಾಶನದ ರವಿಕುಮಾರ್ (ಮೊ: ೯೪೪೮೮೦೪೯೦೫) ವಹಿಸಿಕೊಳ್ಳಲಿದ್ದಾರೆ. ಅದಷ್ಟು ಗ್ರಂಥದ ವಿಚಾರವಾಯಿತು. ಉಳಿದಂತೆ ಈ ವಸಂತ ಸಾಹಿತ್ಯೋತ್ಸವದಲ್ಲಿ ಏನೇನಿರುತ್ತದೆ ಎಂದು ಕಾರ್ಯಕ್ರಮ ಪಟ್ಟಿಯ ಮುಖ್ಯಾಂಶಗಳ ಮೇಲೊಮ್ಮೆ ಕಣ್ಣಾಡಿಸೋಣ. ಶುಕ್ರವಾರ ಸಂಜೆ ನೋಂದಣಿ, ಪುಸ್ತಕಸಂತೆ ಉದ್ಘಾಟನೆ-
ಇದರಲ್ಲಿ ಕನ್ನಡ ಸಾಹಿತ ರಂಗದ ಈ ಹಿಂದಿನ ಪ್ರಕಟಿತ ಕೃತಿಗಳು ಮತ್ತು ಅಮೆರಿಕನ್ನಡ ಬರಹಗಾರರ ಪುಸ್ತಕಗಳ ಮಾರಾಟ.

ಪ್ರಾರ್ಥನೆ-ಸ್ವಾಗತ ಇತ್ಯಾದಿ ಸಾಂಕೇತಿಕವಾಗೊಂದು ಚಿಕ್ಕ ಸಭಾ ಕಾರ್ಯಕ್ರಮದೊಡನೆ ಶುಭಾರಂಭ. ಮಕ್ಕಳಿಂದ ಸಮೂಹಗಾನ, ಶರಾವತಿ ಕನ್ನಡಕೂಟದ ಸ್ವರ ಲಹರಿ ತಂಡದವರಿಂದ ಭಾವಗೀತೆಗಳು, ಕರ್ನಾಟಕದಿಂದ ಬಂದಿರುವ ಕಲಾವಿದರು- ಸಚಿನ್ ಭಾರದ್ವಾಜ್ ಮತ್ತು ಸಾಧಿನಿ ಕೊಪ್ಪ- ಇವರಿಂದ ಸಂಗೀತ ಕಾರ್ಯಕ್ರಮ. ಶನಿವಾರ ಬೆಳಗ್ಗೆ ಒಂದು ಚಿಕ್ಕ-ಚೊಕ್ಕ ಮೆರವಣಿಗೆ, ಪುಸ್ತಕ ಬಿಡುಗಡೆ, ಮುಖ್ಯ ಅತಿಥಿಗಳ ಭಾಷಣ; ಮಧ್ಯಾಹ್ನದ ಬಳಿಕ ‘ನಮ್ಮ ಬರಹಗಾರರು’ ಸಾಹಿತ್ಯಿಕ ಕಾರ್ಯಕ್ರಮ- ಇದರಲ್ಲಿ ಅಮೆರಿಕನ್ನಡ ಬರಹಗಾರರ ಇತ್ತೀಚಿನ ಪ್ರಕಟಿತ ಕೃತಿಗಳ ಪರಿಚಯ ಮತ್ತು ಅವರೊಡನೆ ಸಂವಾದ. ಆಮೇಲೆ ‘ಸ್ತ್ರೀವಾದ- ನಿನ್ನೆ ಇಂದು ನಾಳೆ’ ಎಂಬ ವಿಚಾರಗೋಷ್ಠಿ. ‘ರಂಗಭೂಮಿ ಮತ್ತು ಸೀ’ ಎಂಬ ಇನ್ನೊಂದು ಗೋಷ್ಠಿ-
ಇದರಲ್ಲಿ ಸದ್ಯ ಅಮೆರಿಕದ ಭೇಟಿಯಲ್ಲಿರುವ ರಂಗಕಲಾವಿದ, ನಿರ್ದೇಶಕ ಟಿ.ಎಸ್.ನಾಗಾಭರಣ ಮತ್ತು ನಾಗಿಣಿ ಭರಣ ಅವರ ಭಾಗವಹಿಸುವಿಕೆ.

ಸಾಯಂಕಾಲ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ. ರವಿವಾರ ಬೆಳಗ್ಗೆ ಗಮಕ- ಭಾರತ ವಾಚನ, ಕುಮಾರವ್ಯಾಸ ಭಾರತ ಆಂಗ್ಲ ಭಾಷಾನುವಾದ ಪರಿಚಯ. ಇದೊಂದು ಮಹತ್ವಾಕಾಂಕ್ಷೆಯ ಯೋಜನೆ. ನ್ಯೂಯಾರ್ಕ್‌ನ ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಎಸ್.ಎನ್. ಶ್ರೀಧರ್ ನೇತೃತ್ವದಲ್ಲಿ ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯನ್ನು ಸಮಗ್ರವಾಗಿ ಇಂಗ್ಲಿಷ್‌ಗೆ ತರ್ಜುಮೆ ಮಾಡುವ, ಕನ್ನಡದ ಶ್ರೇಷ್ಠಕವಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸುವ ಪ್ರಯತ್ನ. ಅದಾದ ಮೇಲೆ ‘ಗಂಡಸಿಗೆ ಯಾಕೆ ಬೇಕು ಗೌರಿ ದುಃಖ’ ಎಂಬ ಇನ್ನೊಂದು ಪ್ರಸ್ತುತಿ ಇದೆ, ಬಹುಶಃ ನವರಸಭರಿತವಾಗಿರುತ್ತದೆ ಎಂದು ನನ್ನ ಅಂದಾಜು.

ತದನಂತರ ಮುಖ್ಯ ಅತಿಥಿಗಳೊಂದಿಗೆ ಸಂವಾದ ಇದೆ. ಮಧ್ಯಾಹ್ನದ ಬಳಿಕ ಸಾಹಿತ್ಯಗೋಷ್ಠಿ, ಮಕ್ಕಳಿಂದ ಪದ್ಯಪಠನ, ಚಿತ್ರಪ್ರದರ್ಶನ; ಕನ್ನಡ ನಾಡಗೀತೆ ಮತ್ತು  ವಂದನಾರ್ಪಣೆಯೊಂದಿಗೆ ಮುಕ್ತಾಯ. ಕಣ್ಣು-ಕಿವಿ-ಮನಸ್ಸುಗಳಿಗೆ ಇಷ್ಟೆಲ್ಲ ರಸದೌತಣ ಆಗುತ್ತಿರುತ್ತಲೇ ಬೆಳಗ್ಗೆ-ಮಧ್ಯಾಹ್ನ-ಸಂಜೆ ಕಾಲಕಾಲಕ್ಕೆ ಸರಿಯಾಗಿ ಪುಷ್ಕಳವಾದ ಊಟ-ತಿಂಡಿ-ಚಹ-ಕಾಫಿ ವ್ಯವಸ್ಥೆ. ಶರಾವತಿ ಕನ್ನಡಕೂಟದ ಅಧ್ಯಕ್ಷ ಸುನೀಲ್ ಮತ್ತು ಉಪಾಧ್ಯಕ್ಷೆ ಫ-ಣಿಶ್ರೀ ನಾರಾಯಣ್ ಮಾತಿನಲ್ಲೇ ಹೇಳುವುದಾದರೆ- ‘ಮೂರು ದಿನಗಳಲ್ಲಿ ನೀವು ನಿಮ್ಮನೆಗಳಲ್ಲಿ ಸ್ಟವ್ ಹಚ್ಚುವ ಮಾತೇ ಇಲ್ಲ.

ರುಚಿರುಚಿಯಾದ ಊಟ-ತಿಂಡಿ ಎಲ್ಲ ಇಲ್ಲಿ ಸಮ್ಮೇಳನ ಸ್ಥಳದಲ್ಲೇ ಇರುತ್ತದೆ!’ ಒಟ್ಟಿನಲ್ಲಿ ಇದು ಸಾಹಿತ್ಯಾಸಕ್ತ ಅಮೆರಿಕನ್ನಡಿಗರಿಗೆ ಅಕ್ಷರಶಃ ಒಂದು ಹಬ್ಬ. ಈ ಸಲ ಇನ್ನೂ ಒಂದೆರಡು ವಿಶೇಷಗಳೆಂದರೆ- ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸಕ್ತ ಅಧ್ಯಕ್ಷ, ನಾಡೋಜ ಡಾ. ಮಹೇಶ ಜೋಶಿ ಅವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದು ಕನ್ನಡ ಸಾಹಿತ್ಯರಂಗದ ವಸಂತ ಸಾಹಿತ್ಯೋತ್ಸವದಲ್ಲಿಯೂ ಭಾಗವಹಿಸುವವರಿದ್ದಾರೆ.

ಅಂತೆಯೇ ವಿಶ್ವವಾಣಿ ಪತ್ರಿಕೆಯ ವಿರಾಮ-ಆರಾಮ ಪುರವಣಿಗಳ ಸಂಪಾದಕ, ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಮತ್ತು ಲೇಖಕ ಶಶಿಧರ ಹಾಲಾಡಿ ಅವರು ಕೂಡ ಡೆಟ್ರಾಯಿಟ್‌ನಲ್ಲಿ ಮಗಳ ಮನೆಗೆ ಬಂದಿರುವವರು ವಿಶೇಷ ಆಹ್ವಾನಿತರಾಗಿ ಈ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ‘ಡೆಟ್ರಾಯಿಟ್‌ನಿಂದ ಎಂಟು ಗಂಟೆ ಕಾರ್ ಡ್ರೈವ್ ಮಾಡಿಕೊಂಡು ವಾಷಿಂಗ್ಟನ್‌ಗೆ ಬರುತ್ತೇನೆ, ಊರಿಂದ ಬಂದಿರುವ ಅಪ್ಪ-ಅಮ್ಮನಿಗೆ ಇಲ್ಲೊಂದು  ನ್ನಡದ ಕಂಪು ಸಿಗುವಂತೆ ಮಾಡುತ್ತೇನೆ’ ಎಂದು ಅವರ ಮಗಳಿಗೂ ಉತ್ಸಾಹ. ಆಕೆ ಆರೇಳು ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ಪ್ರಾಜೆಕ್ಟ್ ಮೇಲೆ ಬಂದಿರುವ ಟೆಕ್ಕಿ. ಆಸಕ್ತಿ ಉಮೇದುಗಳಿದ್ದರೆ ಭೌತಿಕ ದೂರವೆಲ್ಲ ನಗಣ್ಯ ಎನ್ನುವುದಕ್ಕೊಂದು ಸಾಕ್ಷಿ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ರಂಗದಂಥ ಸಂಘಟನೆಗಳ ಅಸ್ಮಿತೆಯೇ ಅದು: ಸಪ್ತಸಾಗರಗಳಾಚೆ, ಕನ್ನಡ ನಾಡಿನಿಂದ ಸಾವಿರಾರು ಮೈಲುಗಳ ದೂರದಲ್ಲಿ ಇದ್ದರೂ- ಕನ್ನಡ ಎನೆ ಕುಣಿದಾಡುವು ದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನಮೈ ಮರೆಯುವುದು ಎಂಬ ತುಡಿತ. ಅಂತಹ ಕನ್ನಡಪ್ರೀತಿ ಸದಾ ಬೆಚ್ಚಗಿರಲಿ.