Sunday, 13th October 2024

ಫೆವಿಕಾಲ್‌ ಆದ್ರೂ ಬಿಟ್ಟೀತು, ಈ ಅಂಟು ಬಿಡುವುದಿಲ್ಲ

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್‌ 

ಇದು ಅರಣ್ಯರೋಧನವೆಂದು ಗೊತ್ತಿದೆ. ಇದಕ್ಕೆ ಕಡಿವಾಣ ಸಾಧ್ಯವಿಲ್ಲ ಎನ್ನುವುದೂ ತಿಳಿದಿದೆ. ಈ ವಿಷಯದಲ್ಲಿ ಹೆಚ್ಚಿನವರು ತಮಗೆ ಸಂಬಂಧವಿಲ್ಲದವರಂತೆ ಸುಮ್ಮನೆ ಕುಳಿತಿರುತ್ತಾರೆ ಎಂಬ ಅರಿವೂ ಇದೆ.

ಆದರೂ, ತಪ್ಪು ನಡೆಯುತ್ತಿರುವಾಗ ಕಂಡೂ ಕಾಣದಂತೆ ಸೊತ್ತದೆ ಸುಮ್ಮನೆ ಕುಳಿತರೆ ತಪ್ಪು ಮಾಡುತ್ತಿರುವರೊಂದಿಗೆ ನಾವೂ ಭಾಗೀದಾರರಾದಂತೆಯೇ ಎಂಬ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಮೊನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೊ ಹರಿದಾಡುತ್ತಿದೆ. ಯಕ್ಷಗಾನದ ವೇಷ ಧರಿಸಿದವ ನೊಬ್ಬ ಚೆಂಡೆಯ ಹಿಮ್ಮೇಳದೊಂದಿಗೆ ಅಂಗಡಿಯೊಳಕ್ಕೆ ಬರುತ್ತಾನೆ.

‘ಸ್ವಾಮೀ ನಾನು ಇಲ್ಲಿಯವನಲ್ಲ, ಗಂಧರ್ವ ಲೋಕದವನು, ಹಿಂದೊಮ್ಮೆ ನಾನು ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ ನನ್ನ ಸಿಂಹಾಸನ ಮುರಿದುಬಿತ್ತು, ಕಾರಣ ಏನೆಂದು ಕೇಳಿದಾಗ ಭೂಲೋಕದಿಂದ ಸಾಮಾನ್ಯ ಅಂಟನ್ನು ತಂದು ಸಿಂಹಾಸನ ನಿರ್ಮಿಸಿದ್ದಾಗಿ ತಿಳಿಯಿತು. ಭೂಲೋಕದಿಂದ ಫೇವಿಕಾಲ್ ತಂದವರಿಗೆ ಬಹುಮಾನ ಘೋಷಿಸಿದೆ. ನನ್ನ ಪ್ರಜೆಯೊಬ್ಬ ಭೂಲೋಕಕ್ಕೆ ಹೋಗಿ ಫೇವಿಕಾಲ್ ತಂದು ಸಿಂಹಾಸನ ರಚಿಸಿಕೊಟ್ಟ.

ಸ್ವರ್ಗಕ್ಕೆ ಇಂದ್ರನಿದ್ದರೆ ಶೋಭೆ, ಚಂದ್ರನಿಗೆ ನಕ್ಷತ್ರಗಳಿದ್ದರೆ ಶೋಭೆ (!) ನಿಮ್ಮ ಅಂಗಡಿಗೆ ಫೇವಿಕಾಲ್ ಇದ್ದರೆ ಮಾತ್ರ ಶೋಭೆ, ಭೂಲೋಕದ ಜನರಿಗೆ ಇದರ ಅರಿವಿಲ್ಲ. ಅದಕ್ಕಾಗಿ ಮಾಹಿತಿ ನೀಡಲು ಬಂದಿದ್ದೇನೆ…’ ಇತ್ಯಾದಿ, ಇತ್ಯಾದಿ. ಇದು ಸಂಸ್ಥೆಯವರ
ಮೊದಲ ಪ್ರಯತ್ನವೇನಲ್ಲ, ಇದಕ್ಕೂ ಮೊದಲು ಟಿವಿಯಲ್ಲಿ ಒಂದು ಜಾಹೀರಾತು ಬಂದಿತ್ತು (ಈಗಲೂ ಬರುತ್ತಿದೆ). ರಂಗಸ್ಥಳ ದಲ್ಲಿ ಕಿರೀಟ ವೇಷಧಾರಿ ಯೊಬ್ಬ ‘ಸಭೆಯಲ್ಲಿ ನೀನಿರಲಿ, ಇನ್ಯಾರೇ ಇರಲಿ, ಎಲ್ಲಾ ಒಂದೇ’ ಎನ್ನುತ್ತಾ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ ಸಿಂಹಾಸನ ಮುರಿದು ಬೀಳುತ್ತದೆ.

ಅದನ್ನು ನೋಡಿದ ಇನ್ನೊಬ್ಬ ವೇಷಧಾರಿ’ ಎಲ್ಲಾ ಒಂದೇ ಎಂದು ನಗುತ್ತಾನೆ. ಕೋಪಗೊಂಡ ಮೊದಲ ವೇಷಧಾರಿ ಎರಡನೆ ಯವನನ್ನು ಇನ್ನೊಂದು ಸಿಂಹಾಸನದ ಕಡೆ ನೂಕುತ್ತಾನೆ. ಆ ಸಿಂಹಾಸನವೂ ಮುರಿದು ಬೀಳುತ್ತದೆ. ಮುಂದುವರಿದ ನೂಕಾಟ ದಲ್ಲಿ ಅಲಂಕಾರಕ್ಕೆಂದು ರಂಗಸ್ಥಳ ದಲ್ಲಿ ಜೋಡಿಸಿದ ಮರದ ವಸ್ತುಗಳೆಲ್ಲ ಮುರಿದು ಬೀಳುತ್ತವೆ.

ಫೇವಿಕಾಲ್‌ನಿಂದ ಜೋಡಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂಬ ಸಂದೇಶ ದೊಂದಿಗೆ ಜಾಹೀರಾತು ಮುಕ್ತಾಯಗೊಳ್ಳುತ್ತದೆ. ಅಬ್ಬಾ ಫೇವಿಕಾಲ್ ಕಂಪನಿಯ ಯಕ್ಷಗಾನ ಪ್ರೀತಿಯೇ! ಇದೇ ಪ್ರೀತಿಯಲ್ಲಿ ವರ್ಷಕ್ಕೆ ನಾಲ್ಕು ಆಟ (ಯಕ್ಷಗಾನವನ್ನು ಆಟ ಎಂದೂ ಕರೆಯುವುದುಂಟು) ಆಡಿಸಿದ್ದರೆ ಕಲೆಗೂ, ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತಿತ್ತು. ವರ್ಷಕ್ಕೆ ಒಂದು ಸಾವಿರ ಕೋಟಿ ರುಪಾಯಿಗಿಂತ ಹೆಚ್ಚು ನಿವ್ವಳ ಲಾಭ ಮಾಡುವ ಕಂಪನಿಯೊಂದು ಮನಸು ಮಾಡಿದರೆ ಅದೆಲ್ಲ ಯಾವ ಲೆಕ್ಕ? ಇರಲಿ, ವಿಷಯ ಅದಲ್ಲ. ಗಮನಿಸಬೇಕಾದ ಅಂಶವೆಂದರೆ ದೈವೀ ಕಲೆಯೆಂದೇ ಪ್ರಸಿದ್ಧವಾದ ಪುರಾತನ ಯಕ್ಷಗಾನ ಕಲೆಯನ್ನು ಹೇಗೆ ಬೇಕಾದರೂ, ಎಲ್ಲಿ ಬೇಕಾದರೂ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ? ಈ ರೋಗ ಇಂದು ನಿನ್ನೆಯದೆಂದು ತಿಳಿದರೆ ಅದು
ಘೋರ ತಪ್ಪು.

೨೦೦೮ರಲ್ಲಿ ತೆರೆಕಂಡ ಜನಪ್ರಿಯ ಕನ್ನಡ ಚಲನಚಿತ್ರ ‘ಗಾಳಿಪಟ’ವನ್ನು ತಾವು ನೋಡಿರಬಹುದು. ಯೋಗರಾಜ್ ಭಟ್ ನಿರ್ದೇಶನದ, ಅನಂತ ನಾಗ್, ಗಣೇಶ್, ದಿಗಂತ್, ಡೈಸಿ ಬೋಪಣ್ಣ ಅಭಿನಯಿಸಿದ ಚಿತ್ರ ಅದು. ಅದರಲ್ಲಿ ಕೆ.ಎಸ್. ಚಿತ್ರಾ ಹಾಡಿರುವ ‘ನ ಧೀಂ ಧೀಂ ತನ’ ಹಾಡನ್ನು ನೀವು ಕೇಳಿರಬಹುದು. ಸುಂದರವಾದ ಹಾಡು, ಎರಡನೆಯ ಮಾತೇ ಇಲ್ಲ. ಸಾಹಿತ್ಯ (ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ ಭಟ್ ಸೇರಿ ಬರೆದಿದ್ದು ಎಂಬ ಮಾಹಿತಿ ಇದೆ) ವಿ. ಹರಿಕೃಷ್ಣ ಅವರ ಸಂಗೀತ, ಕೆ.ಎಸ್. ಚಿತ್ರಾ ಅವರ ಗಾಯನ ಎಲ್ಲವೂ ಪರ್ಫೆಕ್ಟ್. ಆ ಹಾಡು ಕೇಳಲು ಎಷ್ಟು ಖುಷಿಯೋ, ನೋಡಲು ಅಷ್ಟೇ ಹಿಂಸೆ. ಒಂದು ಒಳ್ಳೆಯ ಹಾಡನ್ನು ಲಗಾಡಿ ತೆಗೆಯುವುದು ಹೇಗೆಂದು ಈ ಹಾಡನ್ನು ನೋಡಿ ಕಲಿಯಬೇಕು.

ಈಗಲೂ ಆ ಹಾಡನ್ನು ನೋಡಿದರೆ ಮೈಮೇಲೆ ಹಲ್ಲಿ ಬಿದ್ದ ಅನುಭವ ವಾಗುತ್ತದೆ. ಆ ಹಾಡಿನ ನೃತ್ಯ ನಿರ್ದೇಶಕ ಮಹಾನುಭಾವ ಯಾರೋ ಗೊತ್ತಿಲ್ಲ. ಹಾಡಿನಲ್ಲಿ ನಾಯಕ, ನಾಯಕಿಯರ ಹಿಂದಿರುವ ನೃತ್ಯ ತಂಡದಲ್ಲಿ ಮೂವತ್ತು ನಲವತ್ತು ಯಕ್ಷಗಾನದ ವೇಷಗಳನ್ನು ನೀವು ನೋಡಬಹುದು. ಎಲ್ಲರೂ ನ್ಯಾಯಬೆಲೆ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರಂತೆ
ನಿಲ್ಲುತ್ತಾರೆ. ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಹಾವ ಭಾವ.

ಮುಖವರ್ಣಿಕೆಯಿಂದ ಹಿಡಿದು ವೇಷಭೂಷಣದವರೆಗೆ ಎಲ್ಲವೂ ಕಾಕುಪೋಕು. ಆಕಾರ, ಮುದ್ರೆ, ಅಭಿನಯವಂತೂ ಹರೋಹರ. ಆ ಹಾಡಿನಲ್ಲಿರುವ ಅಷ್ಟೊಂದು ವೇಷಗಳಲ್ಲಿ ಎಲ್ಲಾ ವಿಭಾಗದಲ್ಲೂ ಯಕ್ಷಗಾನಕ್ಕೆ ಒಗ್ಗುವ ಒಂದೇ ಒಂದು ವೇಷವನ್ನು ತೋರಿಸಿಕೊಟ್ಟರೂ ನಾನು ನೃತ್ಯ ನಿರ್ದೇಶಕರ ಕಾಲು ಹಿಡಿದು ದೀರ್ಘದಂಡ ನಮಸ್ಕಾರ ಮಾಡುತ್ತೇನೆ.

ಒಂದು ಕಲೆಯನ್ನು ಪರದೆಯ ಮೇಲೆ ಪ್ರಸ್ತುತಪಡಿಸುವಾಗ ಒಬ್ಬ ಅನುಭವಿ ಕಲಾವಿದರ ಸಲಹೆ ಕೇಳಿದ್ದರೆ ಯಾವ ಗಂಟೂ
ಖರ್ಚಾಗುತ್ತಿರಲಿಲ್ಲ. ಬೆಲೆ ತಿಳಿಯದವರಿಗೆ ಯಕ್ಷಗಾನವೂ ಸೇರಿದಂತೆ ಯಾವ ಕಲೆಯಾದರೂ ‘ಹತ್ತು ರುಪಾಯಿಗೆ ಒಂದು…!’

ಈ ಕಲೆಯ ಮೇಲಿನ ಬಲಾತ್ಕಾರ ಅಲ್ಲಿಗೇ ನಿಲ್ಲಲಿಲ್ಲ, ಆಗಾಗ ಅಂದು, ಇಂದು ಸಿನಿಮಾ ಹಾಡುಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ಇದು ಮುಂದುವರಿದು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗೂ ದಾಳಿ ಇಟ್ಟಿದೆ. ಯಾವುದೋ ಹಾಡಿನ ನೃತ್ಯಕ್ಕೆ, ಸಂಬಂಧವಿರಲಿ, ಬಿಡಲಿ, ಒಂದಷ್ಟು ಯಕ್ಷಗಾನದ ವೇಷಗಳು ನುಸುಳುತ್ತಿವೆ. ಪ್ರಧಾನ ನರ್ತಕರ ಹಿಂದೆ ನಿಂತು, ಪಾಶ್ಚಾತ್ಯ ನೃತ್ಯಕ್ಕೆ ಒಂದಿಷ್ಟು ಹೆಜ್ಜೆ ಹಾಕುತ್ತವೆ. ನಾನು ಕೆಲವು ನೃತ್ಯ ನಿರ್ದೇಶಕರಲ್ಲಿ ಕೇಳಿದಾಗ ಅವರ ಕೊಟ್ಟ ಕಾರಣ, ‘ಬಣ್ಣ ಬಣ್ಣದ ವೇಷಗಳು ವೇದಿಕೆ ಯಲ್ಲಿ ಎದ್ದು ಕಾಣುತ್ತವೆ, ಪ್ರೇಕ್ಷಕರನ್ನು ಆಕರ್ಷಿಸುತ್ತವೆ’ ಎಂದು.

ಅಂದರೆ ಪ್ರಧಾನ ನರ್ತಕರನ್ನು ನೋಡುವುದು ಬೇಡವಾ? ತಮ್ಮ ನೃತ್ಯ ಸಂಯೋಜನೆಯ ಮೇಲೆ ಅವರಿಗೇ ಭರವಸೆ ಇಲ್ಲವಾ? ಅದೇ ಹೌದಾದರೆ ಹೋಳಿ ಹಬ್ಬದಲ್ಲಿ ಬಣ್ಣದೋಕುಳಿ ಆಡಿ ಬಂದವರು ಯಾವುದಕ್ಕೆ ಕಮ್ಮಿ? ನೃತ್ಯ ದಲ್ಲಿ ಯಕ್ಷಗಾನದ ಕಥಾಭಾಗವೊಂದನ್ನೋ, ಯಕ್ಷಗಾನ ನಾಟ್ಯದ ಒಂದು ತುಣುಕನ್ನೋ ಸೇರಿಸಿದರೆ ತಕರಾರಿಲ್ಲ, ಅದುಬಿಟ್ಟು ವೇಷ ಒಂದು ನೃತ್ಯ ಇನ್ನೊಂದು ಆದರೆ ಅದು ಪಕ್ವಾನ್ನವಲ್ಲ, ಹಳಸಿದ ಚಿತ್ರಾನ್ನ ಎಂದು ನೃತ್ಯ ನಿರ್ದೇಶಕರಿಗೆ ಅರಿವಾಗಬೇಕು. ಮಾವಿನ ಹಣ್ಣಿನ ಜಾಮ್ ತಿನ್ನುವುದಕ್ಕಿಂತ ಹೆಚ್ಚಿನ ಸ್ವಾದ ಹಣ್ಣಿನಲ್ಲಿಯೇ ಇದೆ ಎಂದು ಅರ್ಥವಾಗಬೇಕು.

ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮದ ಆಯೋಜಕರಿಗೆ ಇನ್ನೊಂದು ಖಯಾಲಿ ಶುರುವಾಗಿದೆ. ಅತಿಥಿಗಳ ಸ್ವಾಗತಕ್ಕೆ ಇಕ್ಕೆಲಗಳಲ್ಲಿ ಯಕ್ಷಗಾನದ ವೇಷ ತೊಡಿಸಿ ನಿಲ್ಲಿಸುವುದು. ರಣ ಬಿಸಿಲೇ ಆದರೂ ಮಣ ಭಾರದ ವೇಷ ತೊಟ್ಟು ಕೈಮುಗಿದು ನಿಲ್ಲಬೇಕು. ಯಕ್ಷಗಾನವೆಂದರೆ ಹಾದಿ ಬದಿಯಲ್ಲಿ ಸಿಗುವ ಸೋವಿಯ ಸರಕಾ? ಯಾವುದೇ ವಸ್ತುವಿನ ಬೆಲೆ ತಿಳಿಯದಿದ್ದಾಗ ಮಾತ್ರ ಅದು ರಸ್ತೆ
ಬದಿಯಲ್ಲಿನ ಸಸ್ತಾ ಮಾಲು ಆಗುವುದು.

ಯಕ್ಷಗಾನದಲ್ಲಿ ಬರೀ ಸುಮ್ಮನೇ ಒಂದು ವೇಷ ಎಂಬುದಿಲ್ಲ, ಅಲ್ಲಿ ಬರುವ ಪ್ರತಿಯೊಂದು ವೇಷವೂ ಒಂದು ಪಾತ್ರ. ದೇವತೆಗಳು,
ರಾಜ, ಮಂತ್ರಿ, ಹೀಗೆ. ಪಾತ್ರಕ್ಕೆ ತಕ್ಕ ಉಡುಗೆ ತೊಡುಗೆಯಿರಬೇಕು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತೊಡುವ ಅಂಗಿ, ಪಗಡೆ ಅಥವಾ ಮುಂಡಾಸಿನ ಬಣ್ಣದಿಂದ, ಆಭರಣದಿಂದ, ನಾಮ, ಮುದ್ರೆಗಳಿಂದ ಇದು ಇಂತಹ ಪಾತ್ರವೆಂದು ಹೇಳಬಹುದು.
ಒಂದೇ ಪ್ರಸಂಗದಲ್ಲಿ ಹತ್ತು ಪಗಡೆ ವೇಷವಿರಲಿ, ಕಿರೀಟ ವೇಷವಿರಲಿ, ದೇವತೆಗಳಾಗಲೀ, ರಾಕ್ಷಸರಾಗಲೀ ಅವರನ್ನು
ಪ್ರತ್ಯೇಕವಾಗಿ ಗುರುತಿಸುವುದು ಇದರಿಂದಲೇ.

ಆಲೋಚಿಸಿ, ಕಾರ್ಯಕ್ರಮ ಕ್ಕೆ ಬರುವ ಅತಿಥಿ ಯಾರೇ ಆದರೂ ಅವರ ಸ್ವಾಗತಕ್ಕೆ ಕೈಮುಗಿದು ನಿಲ್ಲುವವರು ಯಾರು? ದೇವತೆಗಳಾ ಅ ರಕ್ಕಸರಾ? ಹಾಗಾದರೆ ಬರುವ ಅತಿಥಿ ಒಂದೋ ದೇವತೆಗಳು, ರಾಜರು, ಸಾಮಂತರಿಗಿಂತ ಮಿಗಿಲಾಗಿರಬೇಕು
ಅಥವಾ ರಕ್ಕಸರ ಗುರುವಾಗಿರಬೇಕು! ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಇತ್ತೀಚೆಗೆ ನಡೆಯುವ ಡಾನ್ಸ್ ರಿಯಾಲಿಟಿ ಶೋಗಳಲ್ಲಿಯೂ ಯಕ್ಷಗಾನದ ವೇಷ ಹಾಕಿ ಪಾಶ್ಚಾತ್ಯ ನೃತ್ಯ ಮಾಡುವಲ್ಲಿಯವರೆಗೆ ತಲುಪಿದೆ.

ಯಕ್ಷಗಾನದ ಕಿರೀಟ, ಪಗಡೆಗಳನ್ನು ಧರಿಸಿ ತಲೆಯನ್ನು ತೊಡೆ ಸಂಧಿಯಲ್ಲಿ ಸಿಕ್ಕಿಸುವುದು, ತಲೆ ಕೆಳಗೆ, ಕಾಲು ಮೇಲೆ
ಮಾಡುವುದು ಇತ್ಯಾದಿ ಪ್ರಯೋಗಗಳು ನಡೆದೇ ಇವೆ. ಇದಕ್ಕೆ ಯಕ್ಷಗಾನದ ಎಬಿಸಿಡಿ ತಿಳಿಯದ ಒಂದಿಷ್ಟು ಪ್ರೇಕ್ಷಕರು, ಎಲ್ಲಕ್ಕಿಂತ ಹೆಚ್ಚಾಗಿ ನಿರ್ಣಾಯಕರುಗಳದ್ದೂ ‘ವ್ಹಾ… ವ್ಹಾ…’ ಸಿಕ್ಕರೆ ಕೇಳಬೇಕೆ? ಕಿರೀಟಕ್ಕಾಗಲೀ, ಪಗಡೆಗಾಗಲೀ ಅದರದ್ದೇ ಆದ ಘನತೆ ಯಿದೆ, ಶಿರದ ಮೇಲೆ ಇಡುವುದಕ್ಕೆ ಮುನ್ನ ಕೆಲವೊಮ್ಮೆ ಕಿರೀಟವನ್ನು ದೇವರ ಪಕ್ಕದಲ್ಲಿಟ್ಟು ಪೂಜಿಸಿದರೆ ಕೆಲವೊಮ್ಮೆ ಕಿರೀಟವನ್ನೇ ದೇವರೆಂದು ಪೂಜಿಸುವ ಪರಿಪಾಠ ವಿದೆಯೆಂದು ಇವರಿಗೆ ಹೇಳುವವರು ಯಾರು? ಶಿಳ್ಳೆ ಚಪ್ಪಾಳೆಗಳ ನಡುವೆ
ಯಾರz ಭಕ್ತಿ, ಭಾವನೆಗಳು ಕಳೆದು ಹೋದರೆ ಇವರಿಗಾಗುವ ನಷ್ಟವಾದರೂ ಏನು? ಇದರಿಂದ ನೋವಾಗುವುದು ನಿಜವಾದ ಕಲಾವಿದನಿಗೆ, ಕಲೋಪಾಸಕ ನಿಗೆ. ಆತನಿಗೆ ತಾನು ಪ್ರತಿನಿತ್ಯ ಪೂಜಿಸುವ ವಿಗ್ರಹದ ಜಾಗದಲ್ಲಿ ಆಗಾಗ ಲಂಗ ತೊಟ್ಟ ಲಕ್ಷಿಯದ್ದೇ, ಸ್ಕರ್ಟ್ ತೊಟ್ಟ ಸರಸ್ವತಿಯದ್ದೆ, ಶೇರವಾನಿ ತೊಟ್ಟ ಶಿವನದ್ದೇ ಫೋಟೊ ಕಂಡರೆ ಆಗುವ ಅನುಭವವಾಗುವುದು ನಿಶ್ಚಿತ.

ಇಷ್ಟೆಲ್ಲ ಮಾಡಿ ಇವರಿಗೆ ಸಿಗುವುದೇನು? ಕೆಲವರಿಗೆ ಸಣ್ಣ ಪ್ರಮಾಣದ ಹಣ, ಕೆಲವರಿಗೆ ತಾನೂ ಒಂದು ವೇಷ ಹಾಕಿದೆನೆಂಬ ಗೊಡ್ಡು ತೃಪ್ತಿ, ಇನ್ನುಳಿದವರಿಗೆ ಫೇಸ್ಬುಕ್, ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಲು ಒಂದಷ್ಟು ಫೋಟೋಗಳು, ಅದಕ್ಕೆ ಒಂದಷ್ಟು ಲೈಕ್‌ಗಳು. ಇದರ ಹೊರತಾಗಿ ಇನ್ನೇನಾದರೂ ಇದೆಯಾ!? ಇದು ಒಂದು ಹುಚ್ಚಲ್ಲದೇ ಇನ್ನೇನು? ಒಂದೊಮ್ಮೆ ಫೇವಿಕಾಲ್ ಅಂಟನ್ನಾದರೂ ಬಿಡಿಸಬಹುದು, ಈ ಹುಚ್ಚು ಅಂಟಿಕೊಂಡರೆ ಬಿಡಿಸುವುದು ಕಷ್ಟ.

ಇಷ್ಟೆಲ್ಲ ಹೇಳುವುದಕ್ಕೂ ಕಾರಣವಿದೆ. ಯಕ್ಷಗಾನ ವೆಂಬುದು ಸಾಮಾನ್ಯ ಕಲೆಯಲ್ಲ. ಈ ಕಲೆಯ ವಿಷಯ ತಿಳಿಯದವರಿಗಾಗಿ ಹೇಳುವುದಾದರೆ, ಯಕ್ಷರ ಗಣಗಳಿಂದಾಗಿ ಈ ಕಲೆಗೆ ‘ಯಕ್ಷಗಾನ’ ಎಂಬ ಹೆಸರು ಬಂತೆದು ಹೇಳುತ್ತಾರೆ. ಸುಮಾರು ಐದು ಶತಮಾನಗಳ ಹಿಂದೆಯೇ ಯಕ್ಷಗಾನದ ಪ್ರಯೋಗಗಳು ನಡೆದಿದ್ದವು ಎನ್ನುವ ದಾಖಲೆಗಳಿವೆ. ಆ ಕಾಲದಲ್ಲಿ ರಾಜರ, ಸಾಮಂತರ ಆಸ್ಥಾನದ ಛತ್ರ ಚಾವಡಿಯಲ್ಲಿ ಇದರ ಪ್ರಯೋಗಗಳು ನಡೆಯುತ್ತಿದ್ದವು.

ಯಕ್ಷಗಾನವೆಂಬುದು ಸಾಹಿತ್ಯ, ಗಾಯನ, ನರ್ತನ, ಬಣ್ಣಬಣ್ಣದ ವೇಷಭೂಷಣ, ಪ್ರಸಾದನ, ಅರ್ಥಗಾರಿಗೆ, ಅಭಿನಯ ಎಲ್ಲವನ್ನೂ ಒಳಗೊಂಡ ಸಂಪೂರ್ಣ ಕಲಾ ಪ್ರಕಾರ. ಭಾರತದ ಶಾಸೀಯ ಸಂಗೀತದಲ್ಲಿರುವ ಸುಮಾರು ಎಂಬತ್ತು ರಾಗಗಳ ಪೈಕಿ ಬಹುತೇಕ ಎಲ್ಲಾ ರಾಗಗಳು ಯಕ್ಷಗಾನದಲ್ಲಿವೆ. ಅದರಲ್ಲಿರುವ ಎಲ್ಲಾ ಏಳು ತಾಳಗಳ ಬಳಕೆಯೂ ಈ ಕಲೆಯಲ್ಲಿದೆ. ಇದರಲ್ಲಿ ಪ್ರಮುಖವಾಗಿ ತೆಂಕು ಮತ್ತು ಬಡಗು ಎಂಬ ಎರಡು ತಿಟ್ಟುಗಳು (ವಿಧಗಳು). ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ
ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಗಳಲ್ಲಿ ಮತ್ತು ಕೇರಳದ ಕಾಸರಗೋಡಿನಲ್ಲಿ ಇದನ್ನು ಕಾಣಬಹುದಾಗಿದೆ.

ಭಾಗವತ, ರಾಮಾಯಣ, ಮಹಾಭಾರತದ, ಪುರಾಣದ ಕಥೆಗಳು, ಇತ್ತೀಚೆಗೆ ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳನ್ನೂ ಯಕ್ಷಗಾನದಲ್ಲಿ ಆಡಿ ತೋರಿಸಲಾಗುತ್ತದೆ. ಕಥೆಯ ಆರಂಭಕ್ಕೆ ಮುನ್ನ, ನಂತರ ಚೌಕಿ ಮನೆಯಲ್ಲಿ (ಗ್ರೀನ್ ರೂಮ) ದೇವರ ನಾಮಸ್ಮರಣೆ ನಡೆಯುತ್ತದೆ. ಕಥಾಭಾಗ ಆರಂಭವಾಗುವುದಕ್ಕೆ ಮುನ್ನ ರಂಗಸ್ಥಳದಲ್ಲೂ ಪೂಜೆ ನಡೆಯುತ್ತದೆ. ಆದ್ದರಿಂದ ಇದು ಧರ್ಮಕ್ಕೆ, ಭಾವನೆಗೆ ತೀರಾ ಹತ್ತಿರವಾದ ಕಲಾ ಪ್ರಕಾರಗಳಂದು. ರಾತ್ರಿ ಬೆಳಗಿನವರೆಗೆ ನಡೆಯುವ ಆಟದಲ್ಲಿ ಬೇರೆ ಭಾಷೆಯ
ನುಸುಳುವಿಕೆ ಇರುವುದಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಬಹು ದೊಡ್ದ ಪಾಲು ಯಕ್ಷಗಾನದ್ದು.

ಅಂದು ರಾಜ ಮಹಾರಾಜರ ಅರಮನೆಯಲ್ಲಿ ಪ್ರಯೋಗಿಸಲ್ಪಡುತ್ತಿದ್ದ ಈ ಕಲೆ ಇಂದು ದೇಶ ವಿದೇಶಗಳಲ್ಲೂ ಪ್ರದರ್ಶಿಸ ಲ್ಪಡುತ್ತಿದೆ. ನನ್ನ ಅನುಭವದಲ್ಲಿ ಹೇಳುವುದಾದರೆ ಇಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ದೂತಾವಾಸದ ಅಽಕಾರಿಗಳು ಕರ್ನಾಟಕದ ವಿಷಯ ಬಂದಾಗ ಯಕ್ಷಗಾನ ಪ್ರದರ್ಶನ ನೀಡುವಂತೆ
ಕೇಳಿಕೊಳ್ಳುತ್ತಾರೆ. ಅಲ್ಲಿಗೆ ಯಕ್ಷಗಾನ ಕರ್ನಾಟಕದ ‘ಗಂಡು ಮೆಟ್ಟಿದ ಕಲೆ’ ಎಂಬುದು ಸಾರ್ಥಕ ವಾಗಿದೆ.

ಇಂದು ಕರ್ನಾಟಕದಲ್ಲಿ ಸುಮಾರು ಮೂವತ್ತು ವೃತ್ತಿಪರ ಮೇಳ (ತಂಡ)ಗಳಿದ್ದು, ಒಂದೊಂದು ಮೇಳದಲ್ಲೂ ಸುಮಾರು
ಮುವತ್ತರಿಂದ ನಲವತ್ತು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನ ಕಲಾವಿದರ ಇತಿಹಾಸ ಕೆದಕಿ ನೋಡಿದರೆ, ಅಲ್ಲಲ್ಲಿ ಒಬ್ಬಿಬ್ಬರನ್ನು ಬಿಟ್ಟು ಹೆಚ್ಚಿನವರು ಬಡ ಕಲಾವಿದರೇ. ಆ ಬಡತನ ಆರ್ಥಿಕವಾಗಿಯೇ ಹೊರತು ಅವರ ಪ್ರತಿಭೆಯಲ್ಲಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಹೆಸರುಗಳಿಸಿದವರು, ಮಹಾನ್ ಕಲಾವಿದರೆಂದು ಕರೆಸಿಕೊಂಡವರು, ಯಕ್ಷಗಾನ ವನ್ನು ಸರಿಯಾಗಿ ಅರ್ಥೈಸಿಕೊಂಡವರು, ಕಲೆಯನ್ನು ಪೂಜಿಸುವವರು, ಆರಾಧಿಸುವವರು ಯಾರೂ ಇಂತಹ ಕ್ಷುಲ್ಲಕ ಕಾರ್ಯಕ್ಕೆ ಇಳಿಯಲಿಲ್ಲ.

ಇವರೆಲ್ಲ ಬಾಳ್ವೆಯ ಬಾಧ್ಯತೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ತಮ್ಮ ತಲೆಯಮೇಲೆ ವೇಷಭೂಷಣದ ಪೆಟ್ಟಿಗೆ ಹೊತ್ತು ಊರಿಂದ
ಊರಿಗೆ ತಿರುಗಿ ಪೂರ್ಣ ಪ್ರಮಾಣದ ಕಾರ್ಯಕ್ರಮ ನೀಡಿದರೇ ಹೊರತು ಮುಖಕ್ಕೆ ಬಣ್ಣ ಬಳಿದುಕೊಂಡು ಬೀದಿಗಿಳಿಯಲಿಲ್ಲ, ಹಾದಿ ಬದಿಯಲ್ಲಿ ನಿಲ್ಲಲಿಲ್ಲ. ಯಕ್ಷಗಾನವೆಂಬ ಶ್ರೀಮಂತ ಕಲೆಯ ಚೌಕಟ್ಟಿನಲ್ಲಿ ಬಡವನಾಗಿಯೇ ಬದುಕಲು ಇಷ್ಟಪಟ್ಟರೇ ವಿನಃ ಕಲೆಯ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆಯಾಗಲೀ, ಮಟಮಟ ಮಧ್ಯಾಹ್ನವಾಗಲೀ, ನಡು ರಸ್ತೆಯಲ್ಲಿ, ಅಂಗಡಿ ಮುಂಗಟ್ಟಿನಲ್ಲಿ ನಿಂತು ಭಿಕ್ಷೆ ಬೇಡಲಿಲ್ಲ.

ನಿಜವಾದ ಕಲೆಯ ಆರಾಧಕರು ಸ್ವಪ್ನದಲ್ಲಿಯೂ ಇಂತಹ ಸಾಹಸಕ್ಕೆ ಕೈಹಾಕುವುದಿಲ್ಲ. ದೇವಿ ಮಹಾತ್ಮೆ ಪ್ರಸಂಗದಲ್ಲಿ ಪಾತ್ರ ಮಾಡುವಾಗ ತಿಂಗಳುಗಟ್ಟಲೆ ವ್ರತ ಆಚರಿಸುವ ಕಲಾವಿದರು ನಮ್ಮ ನಡುವೆ ಇನ್ನೂ ಜೀವಂತವಾಗಿದ್ದಾರೆ. ಒಬ್ಬ ವ್ಯಕ್ತಿ ಕಲಾವಿದನಾಗಿ ರೂಪುಗೊಳ್ಳುವ ಮೊದಲು ಕೆಲವು ವರ್ಷಗಳ ಅಭ್ಯಾಸ ಬೇಕು. ಶ್ರಮಪಡಬೇಕು, ಲೀಟರ್‌ಗಟ್ಟಲೆ ಬೆವರು ಸುರಿಸಬೇಕು. ಹೆಜ್ಜೆ, ತಾಳ, ಪ್ರಸಾದನ, ವೇಷಭೂಷಣಗಳ ಇಂಚಿಂಚೂ ಅರಿವಿರಬೇಕು.

ಪದ್ಯ ಅರ್ಥೈಸಿಕೊಳ್ಳಬೇಕು, ಸಾಹಿತ್ಯದ ಮೇಲೆ ಹಿಡಿತ ಸಾಧಿಸಿಕೊಳ್ಳಬೇಕು. ತಾನು ಮಾಡಬಹುದಾದ ಪಾತ್ರದ ಕುರಿತು ಚಿಂತಿಸಬೇಕು. ಇದೆಲ್ಲದರ ಜತೆಗೆ ಸೃಷ್ಟಿಶೀಲನಾಗಿರಬೇಕು. ಇಲ್ಲವಾದರೆ ನೋಡಿದ್ದನ್ನೇ ನೋಡುವ ಪ್ರೇಕ್ಷಕನೂ ಬೇಸರ ಗೊಳ್ಳುತ್ತಾನೆ, ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲಾಗದ ಕಲಾವಿದನೂ ಸೋಲುತ್ತಾನೆ. ಹಾಗಂತ ಪ್ರೇಕ್ಷಕನನ್ನು ರಂಜಿಸಲು ಚೌಕಟ್ಟನ್ನು ಮೀರುವಂತೆಯೂ ಇಲ್ಲ. ಒಬ್ಬ ಯಕ್ಷಗಾನ ಕಲಾವಿದ ರಾತ್ರಿಯಿಂದ ಬೆಳಗಿನವರೆಗೆ ನಿದ್ದೆಗೆಟ್ಟು, ಮಣ ಭಾರ ಹೊತ್ತು ರಂಗಸ್ಥಳಕ್ಕೆ ಬಂದು ಪ್ರೇಕ್ಷಕರಿಗೆ ರಸದೌತಣ ಉಣಿಸುತ್ತಾನೆ.

ತನ್ನ ಪಾತ್ರದಲ್ಲಿ ಲೀನವಾಗಿ ಆ ಪಾತ್ರವನ್ನು ನೋಡುಗರಿಗೆ ತಲುಪಿಸುವಲ್ಲಿ ಸಂಪೂರ್ಣ ಪ್ರಯತ್ನ ಮಾಡುತ್ತಾನೆ. ಮೂರು ಕಾಸಿನ ಕಿಮ್ಮತ್ತಿಲ್ಲದ ವೇಷ ಮಾಡಿ ಹಾದಿ ಬೀದಿಗೆ ಬರುವುದೆಂದರೆ ಅದು ಸಾಧಕರಿಗೆ ಮಾಡುವ ಅಪಮಾನ. ಇದು ಯಕ್ಷಗಾನ
ಕಲೆಗಷ್ಟೇ ಸೀಮಿತವಲ್ಲ. ಸಂಗೀತ, ಶಾಸೀಯ ನೃತ್ಯ, ನಾಟಕ, ಚಿತ್ರಕಲೆ ಯಾವುದೂ ಇದಕ್ಕೆ ಹೊರತಲ್ಲ. ಪರಿಶ್ರಮ,
ಸಾಧೆನೆಯ ಮಂತ್ರಗಳು ಎಲ್ಲ ಕಲೆಗೂ ಅನ್ವಯ.

ಕಲೆ ಕಲೆಯಾಗಿಯೇ ಇದ್ದರೆ ಸೊಗಸು. ಕಲೆಗಾಗಿಯೇ ಕಲೆ ಇದ್ದರೆ ಮಾತ್ರ ಅದು ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಸರ್ಕಸ್ಸೇ ಆದರೂ ರಸ್ತೆಯಲ್ಲಿ ಮಾಡಿದಾಗ ದೊಂಬರಾಟವೆಂದು ಕರೆಸಿಕೊಳ್ಳುತ್ತದೆ. ಜಾಮೂನನ್ನು ಜಾಮೂನಾಗಿ ಸವಿದರೇ ಸರಿ. ಜಾಮೂನನ್ನು ಸಗಣಿಯಲ್ಲಿ ಅದ್ದಿ ತಿನ್ನುತ್ತೇನೆ ಅನ್ನುವವರಿಗೆ ಯಾವ ಮದ್ದೂ ಇಲ್ಲ. ಅಂಥವರಿಗೆ ಒಂದು ಹನಿ ಅಶ್ರು ಜಲವೂ ವೇಸ್ಟ್