Saturday, 14th December 2024

ಮೆಸ್ಸಿ, ರೋನಾಲ್ಡೋ ಅಭಿಯಾನದಲ್ಲಿ, ಛೆಟ್ರಿನ ಮರೆತ ಜನ !

ಕ್ರೀಡಾಂಗಣ

ಗಣೇಶ್ ಭಟ್, ವಾರಣಾಸಿ

ಇದೀಗ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಗಳು ಮುಗಿದಿವೆ. ಫೈನಲ್‌ನಲ್ಲಿ ಅರ್ಜೆಂಟಿನಾವು ಫ್ರಾನ್ಸಿನ ಎದುರು ಗೆಲುವನ್ನೂ ಸಾಧಿಸಿ ಆಗಿದೆ. ಅರ್ಜೆಂಟಿನಾದ ಗೆಲುವಿಗೆ ಕಾರಣವಾದ ಲಿಯೋನೆಲ್ ಮೆಸ್ಸಿ ಜಗತ್ತಿನಾದ್ಯಂತ ಮನೆ ಮಾತಾಗಿದ್ದಾನೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲುಗಳನ್ನು ಬಾರಿಸಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಡೆದ -ನ ಕೀಲಿಯಾನ್ ಎಂಬೆಪ್ಪೆ ಈಗ ಫುಟ್ಬಾಲ್ ಜಗತ್ತಿನ ಭರವಸೆಯ ಆಟಗಾರನಾಗಿ ಮೂಡಿ ಬಂದಿದ್ದಾನೆ. ಈ ವಿಶ್ವಕಪ್ ಆರಂಭವಾದ ದಿನಗಳಲ್ಲಿ ವಿಶ್ವಕಪ್ ಪಂದ್ಯಗಳು ಪೋರ್ಚುಗಲ್‌ನ ಕ್ರಿಸ್ಚಿಯಾನೋ ರೋನಾಲ್ಡೋ, ಅರ್ಜೆಂಟೀನಾದ ಮೆಸ್ಸಿ, ಬ್ರೆಝಿಲ್‌ನ ನೇಮಾರ್‌ಗಳ ನಡುವಿನ ಜಿದ್ದು ಎಂಬ ರೀತಿಯ ಬಿಂಬಿಸಲ್ಪಟ್ಟಿತ್ತು.

ಹೀಗಾಗಿ ಭಾರತದ ಫುಟ್ಬಾಲ್ ಪ್ರಿಯರ ರಾಜ್ಯಗಳಾದ ಕೇರಳ, ಪಶ್ಚಿಮ ಬಂಗಾಲ, ಗೋವಾ, ಮಣಿಪುರ ಮೊದಲಾದ ರಾಜ್ಯಗಳಲ್ಲಿ ರೊನಾಲ್ಡೋ, ಮೆಸ್ಸಿ, ನೇಮಾರ್‌ಗಳ ಆಳೆತ್ತರದ ಕಟೌಟ್, ಬ್ಯಾನರ್‌ಗಳನ್ನು ರಸ್ತೆ ಬದಿಯಲ್ಲಿ ಪ್ರದರ್ಶಿಸಿದ್ದ ಜನರುಗಳು ತಮ್ಮ ಮೆಚ್ಚುಗೆಯ ಆಟಗಾರನ ಬಗ್ಗೆ ಅಭಿಮಾನವನ್ನು ಪ್ರದರ್ಶಿಸಿದ್ದರು.

ಆದರೆ…. ಕ್ರಿಕೆಟ್ ಎಂಬ ಕ್ರೀಡೆಯ ನೆರಳಿನಲ್ಲಿ ಫುಟ್ಬಾಲೂ ಸೇರಿದಂತೆ ಉಳಿದೆ ಕ್ರೀಡೆಗಳು ಬದಿಗೆ ಸರಿಸಲ್ಪಟ್ಟಿರುವ ಭಾರತದಲ್ಲಿ ಸುನೀಲ್ ಛೆಟ್ರಿ ಹೆಸರಿನ ಓರ್ವ ಮಹಾನ್ ಸಕ್ರಿಯ ಫುಟ್ಬಾಲ್ ಆಟಗಾರ ಇದ್ದಾನೆ ಎಂಬುದು ಎಷ್ಟು ಜನರಿಗೆ ಗೊತ್ತು? ಈ ವರ್ಷದ ಸೆಪ್ಟೆಂಬರ್ ೨೭ ರಂದು ಅಂತಾರಾಷ್ಟ್ರೀಯ ಫುಟ್ಬಾಲ್ ಒಕ್ಕೂಟವಾದ ಫೀ-ವು ಸಕ್ರಿಯವಾಗಿ ಫುಟ್ಬಾಲ್ ಆಡುತ್ತಿರುವ ಪುರುಷ ಫುಟ್ಬಾಲಿಗರಲ್ಲಿ ಜಾಗತಿಕವಾಗಿ ೩ನೇ ಅತೀ ಹೆಚ್ಚು ಗೋಲು ಗಳನ್ನು ಬಾರಿಸಿರುವ ಆಟಗಾರ ಎಂದು ಸುನೀಲ್ ಛೆಟ್ರಿಯನ್ನು ಹೆಸರಿಸಿ ಆತನ ಸಾಧನೆಗಳ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಹೆಸರಿ ನಲ್ಲಿ ಮೂರು ಕಂತುಗಳ ವೀಡಿಯೋ ಸರಣಿಯನ್ನು ಪ್ರಕಟಿಸಿ ಆತನಿಗೆ ಗೌರವವನ್ನು ಸಲ್ಲಿಸಿತ್ತು.

ಈಗ ಸಕ್ರಿಯವಾಗಿ ಆಡುತ್ತಿರುವ ಫುಟ್ಬಾಲ್ ಆಟಗಾರರಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿರುವ
ಕ್ರಿಶ್ಚಿಯಾನೋ ರೊನಾಲ್ಡೋ ಮೊದಲ ಸ್ಥಾನ ದಲ್ಲಿದ್ದರೆ, ೯೫ ಗೋಲುಗಳನ್ನು ಬಾರಿಸಿರುವ ಲಿಯೋನೆಲ್ ಮೆಸ್ಸಿ ಎರಡನೇ
ಸ್ಥಾನದಲ್ಲಿದ್ದಾನೆ. ೮೪ ಗೋಲುಗಳನ್ನು ಬಾರಿಸಿರುವ ಸುನೀಲ್ ಛೆಟ್ರಿ ಮೂರನೆಯ ಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕವಾಗಿ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಗೋಲುಗಳನ್ನು ಬಾರಿಸಿರುವವರ ಪಟ್ಟಿಯಲ್ಲೂ ೫ ಸ್ಥಾನದಲ್ಲಿರುವ ಛೆಟ್ರಿ ದೇಶದ ಹೆಮ್ಮೆ!

ಇವರು ಭಾರತದ ಪರವಾಗಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಗಳನ್ನು ಆಡಿರುವ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಭಾರತೀಯ ಸೇನೆಯ ನೇಪಾಳೀ ಗೂರ್ಖಾ ರೆಜಿಮೆಂಟ್ ನಲ್ಲಿ ಕರ್ನಲ್ ಆಗಿದ್ದ ಕೆ.ಬಿ.ಛೆಟ್ರಿ ಹಾಗೂ ಸುಶೀಲಾ ಛೆಟ್ರಿಯ ಮಗನಾಗಿ ೧೯೮೪ ರಲ್ಲಿ ಸುನೀಲ್ ಛೆಟ್ರಿ ಜನಿಸಿದರು. ಅವರ ಅಪ್ಪ ಭಾರತೀಯ ಸೇನೆಯಲ್ಲಿ -ಟ್ಬಾಲ್ ಆಟಗಾರನಾಗಿ ಹಾಗೂ ತಾಯಿ ನೇಪಾಳದ ಮಹಿಳಾ ಫುಟ್ಬಾಲ್ ತಂಡದಲ್ಲಿ ಆಡಿದವರು.

ತಂದೆ ಮನೆಯಲ್ಲಿರದಿದ್ದ ಕಾರಣ ಬಾಲಕ ಛೆಟ್ರಿ ತನ್ನ ತಾಯಿಯೊಡನೆ ಫುಟ್ಬಾಲ್ ಆಡುತ್ತಾ ಬೆಳೆದನು. ೧೧ ವಯಸ್ಸಿಗೆ ತಲುಪು ವಾಗ ಫುಟ್ಬಾಲ್‌ನಲ್ಲಿ ತಾಯಿಯನ್ನೇ ಸೋಲಿಸುವಷ್ಟು ಪ್ರಾವೀಣ್ಯತೆಯನ್ನು ಗಳಿಸಿಕೊಂಡನು. ರಜೆಯಲ್ಲಿ ಅಪ್ಪ ಊರಿಗೆ
ಮರಳಿರುವ ಸಂದರ್ಭದಲ್ಲೂ ಅಪ್ಪನ ಜೊತೆಗೆ ಫುಟ್ಬಾಲ್ ಆಟ ಸಾಗುತ್ತಿತ್ತು. ಇಟ್ಟಿಗೆ ತುಂಡುಗಳನ್ನು ಗೋಲ್ ಪೋನಂತೆ
ಇಟ್ಟು ಕೆಲವೊಮ್ಮೆ ಚಪ್ಪಲಿಗಳನ್ನೂ ಇಟ್ಟು ಆಟವಾಡುತ್ತಿದ್ದರಂತೆ ಅಪ್ಪ ಮಗ. ಶಾಲಾ ಕಾಲೇಜುಗಳಲ್ಲಿ ಉತ್ತಮ ಸಾಧನೆ ಯನ್ನು ಮಾಡಿದ ಛೆಟ್ರಿಗೆ ೨೦೦೨-೦೩ ರಲ್ಲಿ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಆಗಿದ್ದ ಮೋಹನ್ ಬಗಾನ್ ಪರವಾಗಿ ಆಡುವ ಅವಕಾಶವು ಲಭಿಸಿತು.

ವೃತ್ತಿ ಜೀವನದ ಏಳುಬೀಳುಗಳ ನಡುವೆಯೂ ೨೦೦೫ ರಲ್ಲಿ ಭಾರತದ ತಂಡಕ್ಕೆ ಆಯ್ಕೆಯಾದ ಛೆಟ್ರಿ ಹೊಡೆದ ಮೊದಲ
ಅಂತಾರಾಷ್ಟ್ರೀಯ ಗೋಲು ಪಾಕಿಸ್ತಾನದ ವಿರುದ್ಧ ಬಂದದ್ದು ಎನ್ನುವುದು ವಿಶೇಷ. ೨೦೦೭ ರಲ್ಲಿ ಛೆಟ್ರಿ ಬಾರಿಸಿದ ಗೋಲುಗಳ
ಸಹಾಯದಿಂದ ಭಾರತದ ತಂಡವು ನೆಹರೂ ಕಪ್ ಪ್ರಶಸ್ತಿಯನ್ನು ಮುಡಿಗೆ ಏರಿಸಿಕೊಂಡಿತು. ಈ ಪಂದ್ಯಾವಳಿಗಳಲ್ಲಿ ಅವರು
ಕಾಂಬೋಡಿಯಾ ವಿರುದ್ಧ ೨ ಗೋಲುಗಳು ಹಾಗೂ ಸಿರಿಯಾ ಹಾಗೂ ಕಿರ್ಗಿಸ್ತಾನ್ ವಿರುದ್ಧ ತಲಾ ಒಂದು ಗೋಲನ್ನು ಬಾರಿಸಿ ದ್ದರು. ಭಾರತದ ಪರವಾಗಿ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿರುವ ಮೊದಲ ಆಟಗಾರ ಛೆಟ್ರಿಯೇ. ಅವರು ೨೦೦೮ ರಲ್ಲಿ ತಝಕಿಸ್ತಾನ, ೨೦೧೦ ರಲ್ಲಿ ವಿಯೆಟ್ನಾಂ ಹಾಗೂ ೨೦೧೮ ರಲ್ಲಿ ಚೈನೀಸ್ ವಿರುದ್ಧ ಹೀಗೆ ಇವರು ಮೂರು ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಸಾಧಿಸಿದ್ದಾರೆ.

ಛೆಟ್ರಿ ೪೫ ದೇಶಗಳ ವಿರುದ್ಧ ಪಂದ್ಯಗಳನ್ನಾಡಿದ್ದಾರೆ ಹಾಗೂ ಈ ಪಂದ್ಯಗಳಲ್ಲಿ ೩೧ ದೇಶಗಳ ವಿರುದ್ಧ ಗೋಲುಗಳನ್ನು
ದಾಖಲಿಸಿದ್ದಾರೆ. ಸ್ಯಾ- ಚಾಂಪಿಯನ್ಶಿಪ್, ಎ.ಎಫ್.ಸಿ. ಚ್ಯಾಲೆಂಜ್ ಕಪ್, ನೆಹರೂ ಕಪ್, ಎ.ಎ-.ಸಿ. ಏಶಿಯನ್ ಕಪ್, ಕಿಂಗ್ಸ್ ಕಪ್,
ಫೀಫಾ ವಿಶ್ವಕಪ್ ಅರ್ಹತಾ ಪಂದ್ಯಗಳು, ಸೌಹಾರ್ದ ಪಂದ್ಯಗಳು ಸೇರಿದಂತೆ ಇವರು ಇದುವರೆಗೂ ಆಡಿರುವ ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆ ೧೩೧. ೨೦೦೪ ರಲ್ಲಿ ಏಶಿಯನ್ ಗೇಮ್ಸನ ಬೆಳ್ಳಿ ಪದಕವನ್ನು ಹಾಗೂ ೨೦೦೮ ರಲ್ಲಿ ಎ.ಎಫ್.ಸಿ. ಚ್ಯಾಲೆಂಜ್ ಕಪ್ ಅನ್ನು ಇವರಿದ್ದ ಭಾರತ ತಂಡ ಗೆದ್ದಿತ್ತು.

೨೦೦೭, ೨೦೦೯ ಹಾಗೂ ೨೦೧೧ ರಲ್ಲಿ ಭಾರತವು ನೆಹರೂ ಕಪ್ ಅನ್ನು ಗೆಲ್ಲಲು ಛೆಟ್ರಿ ನೀಡಿದ ಕೊಡುಗೆ ಅಪಾರವಾದದ್ದು. ಕಳೆದ ಹತ್ತು ವರ್ಷಗಳಿಂದ ಸುನೀಲ್ ಛೆಟ್ರಿ ಭಾರತದ ಫುಟ್ಬಾಲ್ ತಂಡದ ಕ್ಯಾಪ್ಟನ್‌ನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ೨೦೧೧, ೨೦೧೫ ಹಾಗೂ ೨೦೨೧ ರಲ್ಲಿ ಭಾರತವು ಸ್ಯಾಫ್(ಸೌತ್ ಏಶಿಯನ್ ಫುಟ್ಬಾಲ್ ಫೆಡರೇಶನ್) ಚಾಂಪಿಯನ್ಶಿಪ್ ಅನ್ನು ಗೆಲ್ಲಲು ಛೆಟ್ರಿ ನೀಡಿದ ಕೊಡುಗೆ ಅನನ್ಯವಾದುದು.

ಸ್ಯಾಫ್ ಚ್ಯಾಂಪಿಯನ್ಶಿಪ್‌ನಲ್ಲಿ ೨೨ ಪಂದ್ಯಗಳನ್ನಾಡಿರುವ ಅವರು ೧೮ ಗೋಲುಗಳನ್ನು ಗಳಿಸಿದ್ದಾರೆ. ಇವರು ಯುರೋಪಿನ ಫುಟ್ಬಾಲ್ ಕ್ಲಬ್ ಒಂದಕ್ಕೆ ಆಹ್ವಾನವನ್ನು ಪಡೆದ ಏಕೈಕ ಭಾರತೀಯ ಎಂಬ ಅಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ಪೋರ್ಟಿಂಗ್ ಕ್ಲಬ್ ಪೋರ್ಚುಗಲ್ ತಂಡದ ಬಿ ಟೀಮ್ ನಲ್ಲಿ ಇವರಿಗೆ ೨೦೧೨-೧೩ ರಲ್ಲಿ ೩ ಪಂದ್ಯಗಳನ್ನು ಆಡುವ ಅವಕಾಶವು ಲಭಿಸಿತು. ಅಲ್ಲಿ ೩ ಪಂದ್ಯಗಳನ್ನು ಅವರು ಆಡಿದರೂ ಅಲ್ಲಿ ಅವರಿಗೆ ಒಂದೇ ಒಂದು ಗೋಲು ಗಳಿಸುವ ಅವಕಾಶವು ಲಭಿಸಲಿಲ್ಲ. ಹೀಗಾಗಿ ಅವರು ಸ್ಪೋರ್ಟಿಂಗ್ ಕ್ಲಬ್ ಜೊತೆಗಿನ ಒಪ್ಪಂದವನ್ನು ಸಮಾಪ್ತಿಗೊಳಿಸಿ ಭಾರತಕ್ಕೆ ಹಿಂತಿರುಗಿದರು.

ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿದ್ದರೂ ಅವರಿಗೆ ತಮ್ಮ ಆಟದ ತಂತ್ರಗಾರಿಕೆಯನ್ನು ಉತ್ತಮ ಗೊಳಿಸುವಿಕೆ ಹಾಗೂ ಉತ್ತಮ ದೈಹಿಕ ದಾರ್ಢ್ಯತೆಯನ್ನು ಸಾಽಸುವೆಡೆಗೆ ಸಹಕಾರಿಯಾಯಿತು. ದೇಶೀಯ ಫುಟ್ಬಾಲ್ ಕ್ಲಬ್ ಪಂದ್ಯಾಟಗಳಲ್ಲಿ ಸುನೀಲ್ ಛೆಟ್ರಿ ಕಳೆದ ೨೦ ವರ್ಷಗಳಿಂದ ಸಕ್ರಿಯವಾಗಿ ಆಡುತ್ತಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಈ ಬೆಂಗಾಲ, ಡೆಂಪೋ, ಚಿರಾಗ್ ಯುನೈಟೆಡ್, ಚರ್ಚಿಲ್ ಬ್ರದರ್ಸ್,ಮುಂಬೈ ಸಿಟಿ ಹಾಗೂ ಬೆಂಗಳೂರು ಎಫ್ ಸಿ ಗಳ ಪರವಾಗಿ ಇವರು ಆಡಿದ್ದಾರೆ.

೨೦೧೫ ರ ನಂತರ ಅವರು ಬೆಂಗಳೂರು ಎಫ್ ಸಿ ಪರವಾಗಿಯೇ ಆಟವಾಡುತ್ತಿದ್ದಾರೆ. ಬೆಂಗಳೂರು ತಂಡವು ೨೦೧೬ ರಲ್ಲಿ ಐ
ಲೀಗ್ ಅನ್ನು ಗೆಲ್ಲಲು, ೨೦೧೮-೧೯ ರಲ್ಲಿ ಇಂಡಿಯನ್ ಸೂಪರ್ ಲೀಗ್ ಅನ್ನು ಗೆಲ್ಲಲು, 2022 ರಲ್ಲಿ ಡ್ಯುರಾಂಡ್ ಕಪ್ ಗೆಲ್ಲಲು
ಛೆಟ್ರಿ ಸಹಾಯ ಮಾಡಿದ್ದಾರೆ. ಸುನೀಲ್ ಛೆಟ್ರಿ ೨೦೦೭ರಿಂದ 2022 ರ ವರೆಗಿನ ಅವಧಿಯಲ್ಲಿ ದಾಖಲೆಯ ೭ ಬಾರಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ವರ್ಷದ ಆಟಗಾರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ೨೦೧೧ ರಲ್ಲಿ ಇವರಿಗೆ ಭಾರತ ಸರಕಾರವು ಕೊಡಮಾಡುವ ಅರ್ಜುನ್ ಪ್ರಶಸ್ತಿ ಸಿಕ್ಕಿತು. ೨೦೧೯ ರಲ್ಲಿ ಭಾರತ ಸರಕಾರ ನಾಲ್ಕನೇ ಅತ್ಯುಚ್ಛ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿಯೂ ಇವರ ಮುಡಿಗೆ ಏರಿತು. ೨೦೨೧ ರಲ್ಲಿ ಸುನೀಲ್ ಛೆಟ್ರಿಗೆ ಭಾರತ ಸರಕಾರವು ಕ್ರೀಡಾ ವಿಭಾಗದಲ್ಲಿ ಕೊಡುವ ಅತೀ ದೊಡ್ಡ ಪ್ರಶಸ್ತಿಯಾದ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯು ಲಭಿಸಿತು.

ಫುಟ್ಬಾಲ್ ಕ್ಷೇತ್ರದಲ್ಲಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಅಗ್ಗಳಿಕೆ ಸುನೀಲ್ ಛೆಟ್ರಿಯವರದ್ದು. ೧೩೦ ಕೋಟಿ ಜನಸಂಖ್ಯೆಯ ಭಾರತವಿನ್ನೂ ವಿಶ್ವಕಪ್ ಪಂದ್ಯಗಳಿಗೆ ಅರ್ಹತೆಯನ್ನು ಪಡೆದಿಲ್ಲ. ಇದಕ್ಕೆ ಕಾರಣ ಭಾರತದ ಫುಟ್ಬಾಲ್ ಕ್ರೀಡೆ ಹಾಗೂ ಆಟಗಾರರನ್ನು ಪ್ರೋತ್ಸಾಹಿಸಬೇಕಾಗಿದ್ದ ಆಲ್ ಇಂಡಿಯಾ ಫುಟ್ಬಾಲ್ ಫೆಡೆರೇಶನ್ (ಎಐಎಫ್ಎಫ್) ನ ಭ್ರಷ್ಟಾಚಾರ ಹಾಗೂ ಆಂತರಿಕ ಜಗಳ. ಇದರ ಪರಿಣಾಮವಾಗಿ ಇತ್ತೀಚೆಗೆ ಜಾಗತಿಕ ಫುಟ್ಬಾಲ್ ಸಂಸ್ಥೆ ಫೀಫಾವು ಭಾರತದ ಎಐಎಫ್ಎಫ್ನ ಮೇಲೆ ನಿಷೇಧವನ್ನು ಹೇರಿತ್ತು. ರಾಜಕಾರಣಿ ಪ್ರಫುಲ್ ಪಟೇಲ್ ಸತತ ೧೨ ವರ್ಷ ಗಳಿಂದ ಎಐಎಫ್ಎಫ್ನ ಅಧ್ಯಕ್ಷರಾಗಿರುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿತ್ತು.

ಪದಚ್ಯುತಿಯಾದ ಸಿಟ್ಟಿಗೆ ಪ್ರಫುಲ್ ಪಟೇಲ್ ಮೂರನೆಯ ಪಕ್ಷವು ಎಐಎಫ್ಎಫ್ ಮೇಲೆ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿ ಎಐಎಫ್ಎಫ್ ಅನ್ನು ನಿಷೇಧಿಸಲು ಶಿಫಾರಸು ಮಾಡಿ ಫೀಫಾಗೆ ಪತ್ರ ಬರೆದಿದ್ದರು. ಹೀಗಾಗಿ ಫೀಫಾ ಎಐಎಫ್ಎಫ್ ಮೇಲೆ ನಿಷೇಧವನ್ನು ಹೇರಿತು. ಇದರ ಪರಿಣಾಮವಾಗಿ ಭಾರತದಲ್ಲಿ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆಯಲಿದ್ದ ೧೭ ವರ್ಷದೊಳಗಿನ ಮಹಿಳೆಯರ ಫುಟ್ಬಾಲ್ ವರ್ಲ್ಡ್ ಕಪ್ ಪಂದ್ಯಾಟಗಳೂ ರದ್ದಾಗುವ ಅಪಾಯವಿತ್ತು. ಆದರೆ ಭಾರತ ಸರಕಾರದ ಕುಶಲ ರಾಜತಾಂತ್ರಿಕ ನಡೆಗಳು ಹಾಗೂ ಸುಪ್ರೀಂ ಕೋರ್ಟಿನ ಸಕಾಲಿಕ ಮಧ್ಯಪ್ರವೇಶದಿಂದ ಫೀಫಾವು ಎಐಎಫ್ಎಫ್ನ ಮೇಲಿನ ನಿಷೇಧವನ್ನು ತೆಗೆದು ಹಾಕಿತು ಹಾಗೂ ೧೭ ವರ್ಷದೊಳಗಿನ ಮಹಿಳೆಯರ ಫುಟ್ಬಾಲ್ ವರ್ಲ್ಡ್ ಕಪ್ ಪಂದ್ಯಾಟಗಳೂ ಸಾಂಗವಾಗಿ
ನೆರವೇರಿತೆನ್ನಿ.

ಈ ಘಟನೆ ಭಾರತದ ಫುಟ್ಬಾಲ್ ಸಂಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಫುಟ್ಬಾಲ್ ವಿಕಸನಹೊಂದುವುದಾದರೂ ಹೇಗೆ? ಸ್ವಯಂ ಫೀಫಾ ಸಂಸ್ಥೆಯೇ ಸುನೀಲ್ ಛೆಟ್ರಿಯ ಸಾಧನೆಯ ಬಗ್ಗೆ ಹಾಡಿ ಹೊಗಳಿದ್ದರೂ ಅವರ ಬಗ್ಗೆ ಬಹುತೇಕ ಭಾರತೀಯರಿಗೆ ಗೊತ್ತಿಲ್ಲ. ಕ್ರಿಕೆಟ್ ಆಟಕ್ಕೆ ನಾವು ನೀಡುತ್ತಿರುವ ಅತೀ ಪ್ರಾಧಾನ್ಯತೆಯಿಂದ ಫುಟ್ಬಾಲ್, ಹಾಕಿಯಂತಹ ಕ್ರೀಡೆಗಳು ಮೂಲೆಗೆ ಒತ್ತಲ್ಪಟ್ಟಿವೆ.

ಇತ್ತೀಚೆಗೆ ಎಫ್ಐಹೆಚ್ ನೇಶ ಹಾಕೀ ಕಪ್‌ನ ಮೊದಲ ಆವೃತ್ತಿಯನ್ನು ಭಾರತೀಯ ಮಹಿಳಾ ತಂಡವು ಗೆದ್ದಿರುವುದು ಎಲ್ಲಿಯೂ ಸುದ್ದಿ ಆಗಲೇ ಇಲ್ಲ. ಮಾಧ್ಯಮಗಳು ಕೂಡಾ ಕ್ರಿಕೆಟ್ ಹೊರತಾದ ಕ್ರೀಡೆಗಳಿಗೆ ಮಹತ್ವವನ್ನು ಕೊಡುವುದೇ ಇಲ್ಲ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾನಿಗೂ ಸೆಲೆಬ್ರಿಟಿ ಸ್ಥಾನಮಾನವಿಲ್ಲ. ೨೫ ಬಾರಿ ಇಂಟರ್‌ನ್ಯಾಷನಲ್ ಬಿಲಿಯರ್ಡ್ ಮತ್ತು ಸ್ನೂಕರ್ ಫೆಡೆರೇಶನ್ ವಿಶ್ವಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿರುವ ಪಂಕಜ್ ಆಡ್ವಾಣಿ ಎಂದರೆ ಯಾರೆಂದೇ ಗೊತ್ತಿಲ್ಲ.

ಐದು ಬಾರಿ ವಿಶ್ವ ಚದುರಂಗ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದಿದ್ದ ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಅನ್ನು ನಾವು ಮರೆತಾಗಿದೆ. ಚೆಸ್ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅನ್ನು ಸತತವಾಗಿ ಸೋಲಿಸಿದ ರಮೇಶ್ ಬಾಬು ಪ್ರಗ್ನಾನಂದ ಯಾರೆಂದು ಗೊತ್ತಿಲ್ಲ. ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಗೆ ಸಿಗಬೇಕಾದ ಪ್ರಚಾರ ಸಿಕ್ಕಿಲ್ಲ. ಫುಟ್ಬಾಲ್, ಹಾಕಿ ಸೇರಿದಂತೆ ಇತರ ಕ್ರೀಡೆಗಳಲ್ಲಿ ತಮ್ಮ ಮಕ್ಕಳನ್ನು ತೊಡಗಿಸಲು ಹೆತ್ತವರು ಹಾಗೂ ಶಾಲೆಗಳು ಮನಸ್ಸು ಮಾಡಬೇಕು. ಮಾಧ್ಯಮಗಳು ಇತರ ಕ್ರೀಡೆಗಳ ಎಡೆಗೂ ಗಮನ ಹರಿಸಬೇಕು, ಪ್ರೇಕ್ಷಕರ ಪ್ರೋತ್ಸಾಹವೂ ಬೇಕು, ಕ್ರೀಡಾ ಪ್ರಾಧಿಕಾರಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ನಿಲ್ಲಬೇಕು. ಆಗ ಮಾತ್ರ ಇತರ ಕ್ರೀಡೆಗಳು ದೇಶದಲ್ಲಿ ಅಭಿವೃದ್ಧಿಯಾಗಲಿವೆ.

Read E-Paper click here