Friday, 13th December 2024

ಎಸ್‌ಪಿ, ಬಿಜೆಪಿ ಮಧ್ಯ ತುರುಸು

ಪ್ರಚಲಿತ

ಡಾ.ಸತೀಶ ಕೆ.ಪಾಟೀಲ್

ಪಂಚ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ರಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ದೇಶದ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಈ ಬಾರೀ ಬಿಜೆಪಿ ಕೆಲವು ಸೀಟುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದೆ.

ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ವರವಾಗಬಹುದು ಎನ್ನುವ ಅಂಶಗಳತ್ತ ಗಮನಿಸಿದರೆ, ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಈ ಸಲ ಸಮಾಜವಾದಿ ಪಕ್ಷವು ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ದೇಶದ ರಾಜಕೀಯ ಮೇಲೆ
ಅದರಲ್ಲೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಉತ್ತರಪ್ರದೇಶ ರಾಜ್ಯವು ನಿರ್ಣಾಯಕ ಪಾತ್ರ ವಹಿಸುವುದರಿಂದ ಈ ಸಲದ ಚುನಾವಣೆ ಸಾಕಷ್ಟು ಮಹತ್ವ ಪಡೆದಿದೆ.

ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಒಟ್ಟು 403 ಸ್ಥಾನಗಳ ವಿಧಾನಸಭೆಯಲ್ಲಿ 2017ರಲ್ಲಿ ಬಿಜೆಪಿ ಪಕ್ಷವು 312 ಸ್ಥಾನಗಳಿಸಿ ಅಧಿಕಾರ ಪಡೆದಿತು. ನಂತರ ಎಸ್ ಪಿ ಪಕ್ಷವು 47, ಬಿಎಸ್ಪಿ 19, ಮತ್ತು ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದಿದ್ದವು. ಆಗ ಅಧಿಕಾರರೂಢ ಎಸ್‌ಪಿ ಪಕ್ಷದ ವಿರುದ್ಧ ಇರುವ ಆಡಳಿತ ವಿರೋಽ ಅಲೆಗಳಾದ ಮುಜಾಫರ್ ಕೋಮು ಗಲಭೆ, ದಾದ್ರಿ ಘಟನೆ, ಜಾತಿ ಸಮೀಕರಣವಾದ, ಬ್ರಾಹ್ಮಣ, ಹಿಂದುಳಿದ ವರ್ಗ, ದಲಿತ ಮತಗಳ ಕ್ರೂಢೀಕರಣ ಹಿಂದೂ ಮತಗಳು ಹೆಚ್ಚಾಗಿ ಪಡೆದಿದ್ದರ ಹಾಗೂ ರೈತರ ಸಾಲ ಮನ್ನಾದಂತಹ ಘೋಷಣೆಯ ಫಲವಾಗಿ ಬಿಜೆಪಿ ಪಕ್ಷವು ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೆ ಬಂದಿತ್ತು.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹಾಗಾದರೆ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಸ್ ಪಿ ಪಕ್ಷಗಳಿಗೆ ಅಧಿಕಾರಕ್ಕೆ ಬರಲು ಇರುವ ಅನುಕೂಲಕರ ಅಂಶಗಳತ್ತ ಗಮನಿಸೋಣ. ಆಡಳಿತಾರೂಢ ಪಕ್ಷವಾದ ಬಿಜೆಪಿ ಪಕ್ಷಕ್ಕೆ ಇರುವ ಪ್ಲಸ್ ಪಾಯಿಂಟ್ ಗಮನಿಸಿದಾಗ ಐದು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಸರ್ಕಾರ ರಸ್ತೆಗಳ ಸುಧಾರಣೆ, ಹಿಂದೂ ದೇವಾಲಯದ ಶ್ರದ್ಧಾ ಕೇಂದ್ರಗಳಾದ ವಾರಣಾಸಿ, ಕಾಶಿ ಅಯೋಧ್ಯ, ಮಥೂರಾ ದಂತಹ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ.

ಈ ಸುಧಾರಣೆಗಳು ಬಿಜೆಪಿಯನ್ನು ಕೈ ಹಿಡಿಯುವ ಸಾಧ್ಯತೆಯಿದೆ. ಜೊತೆಗೆ ಮೋದಿ ಹಾಗೂ ಯೋಗಿಗೆ ಇರುವ ಜನಪ್ರಿಯತೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು, ಹೊಸ ಮುಖಗಳಿಗೆ ಟಿಕೇಟ್ ನೀಡುತ್ತಿರುವುದು, ಜಾತಿ ಸಮೀಕರಣದಲ್ಲಿ ಶೇ.14ರಷ್ಟು ಬ್ರಾಹ್ಮಣ, ಶೇ.8ರಷ್ಟು, ಠಾಕೂರ್, ಮೇಲ್ವರ್ಗದ ಮತಗಳ
ಜೊತೆಗೆ ಶೇ.34ರಷ್ಟಿರುವ ಹಿಂದುಳಿದ ವರ್ಗದ ಮತಗಳು ಹಾಗೂ ದಲಿತ ಮತಗಳನ್ನು ಸೇರಿಸಿ ಒಟ್ಟಾರೆಯಾಗಿ ಇರುವ ಶೇ.80ರಷ್ಟು ಹಿಂದೂ ಮತಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತಗೆದುಕೊಳ್ಳಲು ಬಿಜೆಪಿ ಯೋಚಿಸಿದೆ.

ಇನ್ನು ಈ ಸಲದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಪ್ರಬಲ ಸ್ಪರ್ಧೆ ಒಡ್ಡುತ್ತಿರುವ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಅಧಿಕಾರ ಪಡೆಯಲು ಇರುವ ಅನುಕೂಲಕರ ಅಂಶಗಳತ್ತ ಗಮನಿಸಿದಾಗ, ಮೊದಲನೆಯದ್ದು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆ. ಬಿಜೆಪಿ ಸರ್ಕಾರದಲ್ಲಿ ದಲಿತ, ಹಿಂದುಳಿದ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಉದಾಹರಣೆಗೆ ಉನ್ನಾವ ಅತ್ಯಾಚಾರ ದೇಶದ ಗಮನ ಸೆಳೆದಿದ್ದು, ಈ ಪ್ರಕರಣಗಳನ್ನು ತಡೆಯುವಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ ಎನ್ನುವ ಆರೋಪವಿದೆ. ಇದು
ಅಲ್ಲದೆ ಅಗತ್ಯವಸ್ತುಗಳ ಬೆಲೆ ಏರಿಕೆ, ಕೃಷಿ ಕಾಯ್ದೆ ವಿರೋಧಿಸಿ ನಡೆದ ರೈತ ಹೋರಾಟವನ್ನು ಮುಂದಿಟ್ಟುಕೊಂಡು ಸಮಾಜವಾದಿ ಪಕ್ಷ ಚುನವಾಣೆಯನ್ನು ಎದುರಿಸುತ್ತಿದೆ.

ರಾಜ್ಯದಲ್ಲಿ ದಲ್ಲಿ ಶೇ.34ರಷ್ಟು ಮತಗಳನ್ನು ಹೊಂದಿರುವ ಹಿಂದುಳಿದ ವರ್ಗದವರನ್ನು ಸೆಳೆಯಲು ಈಗಾಗಲೇ ಹಿಂದುಳಿದ ವರ್ಗದ ನಾಯಕರಾದಸ್ವಾಮಿ ಪ್ರಸಾದ್ ಮೌರ್ಯ, ರಾಣಾ ಸಿಂಗ್ ಚೌಹಾನ್, ಧರ್ಮಸಿಂಗ್ ಸೈ ಸೇರಿದಂತೆ ಹಲವು ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ಶಾಸಕರನ್ನು ಎಸ್‌ಪಿ ಪಕ್ಷವು ಸೆಳೆದಿದೆ. ಅದರಲ್ಲೂ ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಈ ಹಿಂದುಳಿದ ವರ್ಗದ ನಾಯಕರನ್ನು ಸೆಳೆಯುವ ಮೂಲಕ ಅಖಿಲೇಶ್ ಸಿಂಗ್ ಯಾದವ್ ಹಿಂದುಳಿದ ವರ್ಗದ ಮತಗಳನ್ನು ಸೆಳೆಯುವ ಪ್ಲಾನ್ ಮಾಡಿದ್ದಾರೆ. ಇನ್ನು ಈ ಚುನಾವಣೆಯಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಮಂಕಾಗಿದ್ದಾರೆ.

ಅವರ ಪಕ್ಷದ ಸಾಂಪ್ರದಾಯಿಕ ದಲಿತ ಮತಗಳು ಈ ಬಾರಿ ಎಸ್‌ಪಿ ಪಕ್ಷದ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಎಸ್‌ಪಿ ಪಕ್ಷಕ್ಕೆ ಇದು ವರವಾಗುವ ಸಾಧ್ಯತೆ ಇದೆ.
ಅದು ಅಲ್ಲದೆ ಪ್ರತಿಪಕ್ಷಗಳು ದುರ್ಬಲವಾಗಿರುವುದು- ಉದಾಹರಣೆಗೆ ಬಿಎಸ್ಪಿ ಪಕ್ಷವು ಮೊದಲಿನ ಇಮೇಜು ಉಳಿಸಿಕೊಂಡಿಲ್ಲ, ಈ ಅಂಶವು ತಮ್ಮ ನೆರವಿಗೆ ಬರುತ್ತದೆ ಎನ್ನುವ ಆಶಾಭಾವನೆಯನ್ನು ಎಸ್‌ಪಿ ಪಕ್ಷವು ಹೊಂದಿದೆ. ಇದು ಸಹಜವಾಗಿ ಈ ಅಂಶಗಳು ಎಸ್‌ಪಿ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ ಇದು ಸಹಜವಾಗಿ ಬಿಜೆಪಿ ಪಕ್ಷದ ಚಿಂತೆಗೆ ಕಾರಣವಾಗಿದೆ. ಹೆಚ್ಚುತ್ತಿರುವ ಪಕ್ಷಾಂತರ ಪರ್ವ-ಬಿಜೆಪಿ ಪಕ್ಷದಿಂದ ಈಗಾಗಲೇ ಮೂರು ಜನ ಸಚಿವರು, ಹತ್ತಕ್ಕೂ ಹೆಚ್ಚು ಶಾಸಕರು ಪಕ್ಷ ಬಿಟ್ಟು ಎಸ್‌ಪಿ ಪಕ್ಷ ಸೇರಿದ್ದು, ಇನ್ನೂ ಹಲವು ಜನ ಎಸ್‌ಪಿ ಪಕ್ಷದ ಸೈಕಲ್ ಹತ್ತುವ ಸಾಧ್ಯತೆ ಇದೆ.

ಇದು ಸಹಜವಾಗಿ ಎಸ್‌ಪಿ ಪಕ್ಷದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದರೆ, ಬಿಜೆಪಿ ಪಕ್ಷದ ಚಿಂತೆಯನ್ನು ಹೆಚ್ಚಿಸಿದೆ. ಅದು ಅಲ್ಲದೆ ಈ ಸಲ ಎಸ್‌ಪಿ ಪಕ್ಷ ದ ನಾಯಕ
ಅಖಿಲೇಶ್ ಸಿಂಗ್ ಯಾದವ್ ಅವರು ಹಿಂದು ಮತಗಳನ್ನು ಸೆಳೆಯಲು ಟೆಂಪಲ್ ರನ್ ಶುರು ಮಾಡಿದ್ದಾರೆ. ಇದು ಹಿಂದೂ ಮತಗಳನ್ನು ಸೆಳೆಯುವ ಒಂದು ತಂತ್ರವಾಗಿದೆ. ಇನ್ನು ಈ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಯುವಕರ ಆಕರ್ಷಣೆಯ ವ್ಯಕ್ತಿಯಾಗಿದ್ದಾರೆ. ಅಖಿಲೇಶ್ ಯಾದವ್ ಜನಪ್ರಿಯತೆ ತಮ್ಮ ನೆರವಿಗೆ ಬರುತ್ತದೆ ಎನ್ನುವ ಆಶಾವಾದ ಎಸ್‌ಪಿ ಪಕ್ಷ ಹೊಂದಿದೆ. ಇನ್ನು ಯಾದವ ಅವರ ಕೌಟುಂಬಿಕ ಕಲಹದಿಂದ ಜರ್ಜರಿತವಾಗಿದ್ದ ಎಸ್‌ಪಿ ಪಕ್ಷ ಈಗ ಸ್ವತಹ ಅಖಿಲೇಶ್ ಸಿಂಗ್ ಯಾದವ್ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿದ್ದು, ಇದು
ಸಹಜವಾಗಿ ಎಸ್‌ಪಿ ಪಕ್ಷದಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಅಖಿಲೇಶ್ ಸಿಂಗ್ ಯಾದವ್ ಅವರು ಉತ್ತರಪ್ರದೇಶದ ಸಣ್ಣ ಪಕ್ಷಗಳಾದ ರಾಷ್ಟ್ರೀಯ ಲೋಕದಳ, ಸುಹೇಲ್ ದೇವ್ ಅವರ
ಭಾರತೀಯ ಸಮಾಜ ಪಕ್ಷ, ಜನವಾದಿ ಸಮಾಜವಾದಿ ಪಕ್ಷ, ಮಹಾನ್ ದಳ, ಎನ್ ಸಿಪಿ ಸೇರಿದಂತೆ ಹಲವು ಪಕ್ಷಗಳೊಂದಿಗೆ ಮೈತ್ರಿ ಕೂಟ ರಚನೆ ಮಾಡಿ ಕೊಂಡಿದ್ದು, ಇದರಿಂದ ಮತಗಳ ವಿಭಜನೆ ತಪ್ಪುತ್ತದೆ ಎನ್ನುವುದು ಒಂದು ಕಾರಣವಾದರೆ ಈ ಪಕ್ಷಗಳು ಬಹುತೇಕ ಹಿಂದುಳಿದ ವರ್ಗದ ಪಕ್ಷಗಳ ಆಗಿದ್ದರಿಂದ ಸಹಜವಾಗಿ ಹಿಂದುಳಿದ ವರ್ಗದ ಮತಗಳನ್ನು ಹೆಚ್ಚಾಗಿ ಸೆಳೆಯಲು ಅನುಕೂಲವಾಗುತ್ತದೆ ಎನ್ನುವ ಇನ್ನೊಂದು ಲೆಕ್ಕಾಚಾರವಿದೆ. ಈ ಅಂಶ ಈ ಚುನಾವಣೆ ಯಲ್ಲಿ ಎಸ್‌ಪಿ ಪಕ್ಷಕ್ಕೆ ಲಾಭ ತರಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ.

ಚುನಾವಣೆಯಲ್ಲಿ ಅಖಿಲೇಶ್ ಸಿಂಗ್ ಯಾದವ್ ಪ್ರಮುಖವಾಗಿ ಯುವಕರು ಮತ್ತು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಮಹಿಳೆಯರ ಸುರಕ್ಷೆ, ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು. ಈ ಅಂಶದಿಂದ ತಮಗೆ ಯುವಕರ ಮತ್ತು ಮಹಿಳೆಯರ ಹೆಚ್ಚಿನ ಬೆಂಬಲ ಸಿಗುತ್ತದೆ ಎನ್ನುವ ನಿರೀಕ್ಷೆ ಯಲ್ಲಿ ಎಸ್‌ಪಿ ಪಕ್ಷವಿದೆ. ಅದು ಅಲ್ಲದೆ 1985ರಿಂದ ಯಾರೂ ಕೂಡ ಈ ರಾಜ್ಯದಲ್ಲಿ ಸತತವಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿಲ್ಲ, ಸಿಎಂ ಕೂಡ ಆಗಿಲ್ಲ. ಈ ಅಂಶವು ಸಹಜವಾಗಿ ಎಸ್‌ಪಿ ಪಕ್ಷಕ್ಕೆ ಅಧಿಕಾರದ ಕನಸು ಕಾಣುವಂತೆ ಮಾಡಿದೆ. ಈ ಮೇಲಿನ ಅಂಶಗಳಿಂದ ಈ ಚುನಾ ವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಕನಸನ್ನು ಎಸ್‌ಪಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ಕಾಣುವಂತೆ ಮಾಡಿದೆ.

ಇನ್ನು ಇತ್ತೀಚಿನ ವರ್ಷಗಳಲ್ಲಿ ಈ ರಾಜ್ಯದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೆಸರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರದ್ದು. ಅತ್ಯಾಚಾರದ ವಿಷಯ
ಇರಲಿ, ದೌರ್ಜನ್ಯ ಪ್ರಕರಣ ವಾಗಿರಲಿ, ಅದರ ವಿರುದ್ಧ ತೀವ್ರ ಪ್ರತಿಭಟನೆ, ಆಂದೋಲನ ಮಾಡಿ ದೇಶದ ಗಮನ ಸೆಳೆದಿದ್ದ ಪ್ರಿಯಾಂಕಾ ಗಾಂಧಿರವರ ಪಕ್ಷವಾದ ಕಾಂಗ್ರೆಸ್ಸಿನ ಸ್ಥಿತಿ ಮೇಲ್ನೊಟಕ್ಕೆ ಸಪ್ಪೆಯಾಗಿದೆ, ಈ ಚುನಾಣೆಯಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆದರೂ ಪ್ರಿಯಾಂಕ ವಾದ್ರಾ ಈ ಚುನಾವಣೆಯಲ್ಲಿ ಶೇ. 40ರಷ್ಟು ಯುವಕರಿಗೆ, ಹೋರಾಟಗಾರರಿಗೆ ಮತ್ತು ಶೇ. 40ರಷ್ಟು ಮಹಿಳೆಯರಿಗೆ, ತಮ್ಮ ಪಕ್ಷವು ಟಿಕೆಟ್ ನೀಡುತ್ತದೆ ಎನ್ನುವ ಭರ್ಜರಿ ಆಫರ್ ನೀಡಿ ಈ ವರ್ಗದ ಮತಗಳನ್ನು ಸೆಳೆಯುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ತಮ್ಮ ಹೋರಾಟ ಮತ್ತು ನೀತಿಗಳಿಂದ ಈ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸಾಧನೆ ಮಾಡುತ್ತದೆ ಎನ್ನುವ ವಿಶ್ವಾಸ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ
ಮತ್ತು ಕಾಂಗ್ರೆಸ್ ಪಕ್ಷದ್ದು. ಈ ಅಂಶದಿಂದ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಲಾಭವಾಗುತ್ತದೆ ಎನ್ನುವುದು ಫಲಿತಾಂಶದಿಂದಲೇ ಖಚಿತವಾಗಬೇಕು. ಒಟ್ಟಿನಲ್ಲಿ ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಈ ಸಲದ ಚುನಾವಣೆಯಲ್ಲಿ ಮ್ಯಾಜಿಕ್ ಸಂಖ್ಯೆ 202 ಯಾವ ಪಕ್ಷವು ಪಡೆಯುತ್ತದೆ ಮತ್ತು ಇಲ್ಲಿನ ಮತದಾರ ಪ್ರಭು
ರಾಜ್ಯದಲ್ಲಿ ಬದಲಾವಣೆಗೆ ಕಾರಣವಾಗಿ ಎಸ್‌ಪಿ ಪಕ್ಷಕ್ಕೆ ವಿಜಯದ ಮಾಲೆ ತೊಡಿಸುತ್ತಾ ನೋ ಅಥವಾ ಈಗಿನ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮರಳಿ ಅಧಿಕಾರ ನೀಡಿ ಈ ರಾಜ್ಯದಲ್ಲಿ ಇತಿಹಾಸ ನಿರ್ಮಿಸುವ ಅಂಶಕ್ಕೆ ಕಾರಣವಾಗುತ್ತಾನೋ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಫಲಿತಾಂಶದವರೆಗೆ ಕಾಯಲೇಬೇಕು.