ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಹಿಂದೂ ದೇವಾಲಯಗಳ ಮೇಲಿನ ದಾಳಿ ನಿನ್ನೆ ಮೊನ್ನೆಯದೇನಲ್ಲ. ಶತಮಾನಗಳಿಂದ ಇದು ನಡೆಯುತ್ತಲೇ ಇದೆ. ಮತಾಂಧರು ದೇವಸ್ಥಾನಗಳನ್ನು ಹಾಳು ಮಾಡುವುದು, ಅವುಗಳ ಮೇಲೆ ಮಸೀದಿ ನಿರ್ಮಿಸುವುದು, ಹಿಂದೂಗಳ ಶ್ರದ್ಧೆಗೆ ಘಾಸಿ ಮಾಡಿ ವಿಕೃತ ಆನಂದ ಪಡುವುದು ವಿಶೇಷವೇನೂ ಅಲ್ಲ. ಅವರು ತಲೆತಲಾಂತರದಿಂದಲೇ ಇಂಥ ಹೇಯ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.
ಬರಿಯ ಕಲ್ಲಿನಲ್ಲೂ ದೇವರನ್ನು ಕಾಣುವ, ಜಗತ್ತಿನ ಚರಾಚರ ವಸ್ತುಗಳೆಲ್ಲವೂ ಪರಮಾತ್ಮನ ಅಂಶವೇ ಎಂಬುದನ್ನು ನಂಬುವ ಸಂಸ್ಕೃತಿ ನಮ್ಮದು.
ನಂಬಿಕೆಯೇ ಭಾರತೀಯರ ಜೀವದ್ರವ್ಯ. ಆದರೆ ಹಿಂದೂಗಳ ನಂಬಿಕೆಗಳಿಗೆ, ಭಾವನೆಗಳಿಗೆ ಧಕ್ಕೆಯಾಗುವಂಥ ಕೆಲಸ ನಡೆಯುತ್ತಲೇ ಇದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ, ಸಹಸ್ರಾರು ವರ್ಷಗಳಿಂದ ಜನರ ಶ್ರದ್ಧಾಕೇಂದ್ರ ಗಳಾಗಿದ್ದ ಅದೆಷ್ಟೋ ದೇವಾಲಯಗಳನ್ನು ಧ್ವಂಸ ಮಾಡಲಾಗುತ್ತಿದೆ. ಈ ಹಿಂದೆಯೂ ಧ್ವಂಸ ಮಾಡಿದ ಸಾವಿರಾರು ದೇವಸ್ಥಾನಗಳ ಅವಶೇಷಗಳನ್ನು ಕಾಣಬಹುದು.
ಅದರಲ್ಲಿಯೂ ಹಿಂದೂಗಳು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಇಂಥ ದುಷ್ಟ ಕೆಲಸಗಳು ಪದೇಪದೆ ನಡೆಯುತ್ತಲೇ ಇವೆ. ಇತ್ತೀಚೆಗೆ, ಭಾರತದ ೧೮ ಮಹಾ ಶಕ್ತಿಪೀಠಗಳಲ್ಲಿ ಒಂದಾದ, ಆದಿಗುರು ಶಂಕರಾಚಾರ್ಯರು ಕಟ್ಟಿಸಿದ ೫,೦೦೦ ವರ್ಷಗಳ ಪುರಾತನ ಇತಿಹಾಸರುವ ಕಾಶ್ಮೀರದ ಶ್ರೀ ಶಾರದಾ ಪೀಠದ ಸುತ್ತಲಿನ ಆವರಣ ಗೋಡೆಯನ್ನು ಪಾಕ್ ಸೇನಾಧಿಕಾರಿಗಳ ಕಾಫಿ ಹೌಸ್ ವಿಸ್ತರಣೆಗಾಗಿ ಕೆಡವಲಾಗಿದೆ. ಈ ಪೀಠವು ಮುಜಾಫರ್‌ಬಾದ್‌ನಿಂದ ಸುಮಾರು ೧೪೦ ಕಿ.ಮೀ., ಕುಪ್ವಾಡದಿಂದ ಸುಮಾರು ೧೩೦ ಕಿ.ಮೀ. ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನಿಯಂತ್ರಣ ಗಡಿರೇಖೆಗಿಂತ ೨೫ ಕಿ. ಮೀ. ದೂರದ ನೀಲಂ ಕಣಿವೆಯ ಶಾರದಾ ಗ್ರಾಮದಲ್ಲಿದೆ.
ಇದು ನಳಂದಾ ಮತ್ತು ತಕ್ಷಶಿಲಾದಂಥ ಪ್ರಾಚೀನ ಕಲಿಕಾ ಕೇಂದ್ರಗಳಿಗೆ ಸಮನಾಗಿದೆ. ಹಿಂದೆ ಕಾಶಿ ವಿದ್ಯಾಪೀಠದಲ್ಲಿ ಅಧ್ಯಯನ ಮುಗಿಸಿದವರು ಇದೇ ಪೀಠದಲ್ಲಿ ಅಧ್ಯಯನ ಮಾಡಬೇಕಾಗಿತ್ತು. ಇಲ್ಲಿ ಅಧ್ಯಯನ ಮಾಡಿದರೆ ಶಾರದಾ ದೇವಿ ಸಕಲ ವಿದ್ಯೆಗಳನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ ಈ ವಿದ್ಯಾಕೇಂದ್ರವು ‘ಸರ್ವಜ್ಞಾನ ಪೀಠ’ ಎಂದು ಪ್ರಸಿದ್ಧಿ ಪಡೆದಿತ್ತು. ಈ ಕ್ಷೇತ್ರ ಸುಮಾರು ೫,೦೦೦ ವರ್ಷಗಳ ಪುರಾತನ ಇತಿಹಾಸ ಹೊಂದಿದೆ.
ಪುರಾಣಗಳ ಪ್ರಕಾರ ಶಿವನು ಸತಿದೇವಿಯ ಮೃತದೇಹದೊಂದಿಗೆ ತಾಂಡವ ನೃತ್ಯ ಮಾಡುತ್ತಿದ್ದಾಗ, ಸತಿಯ ಬಲಗೈ ಕಾಶ್ಮೀರದ ಸ್ಥಳದಲ್ಲಿ ಬಿದ್ದುಅದು ಮುಂದೆ ಇತಿಹಾಸ ಪ್ರಸಿದ್ಧ ಶಕ್ತಿ ಪೀಠವಾಯಿತು. ಸುಮಾರು ೧೯ನೇ ಶತಮಾನದಲ್ಲಿ ಗುಲಾಬ್ ಸಿಂಗ್ ಈ ದೇವಾಲಯವನ್ನು ಕೊನೆಯದಾಗಿ ಜೀರ್ಣೋದ್ಧಾರ ಮಾಡಿದ್ದರು. ಶಾರದಾ ಪೀಠದ ಗತವೈಭವದ ಬಗ್ಗೆ ಹಲವಾರು ಐತಿಹಾಸಿಕ ಕೃತಿಗಳಲ್ಲಿ ಉಲ್ಲೇಖವಿದೆ. ಕಲ್ಹಣ ತನ್ನ ‘ರಾಜತರಂಗಿಣಿ’ ಕೃತಿಯಲ್ಲಿ ಈ ಕ್ಷೇತ್ರವನ್ನು ವರ್ಣಿಸಿದ್ದಾನೆ. ಚೀನಾ ಪ್ರವಾಸಿಗ ಹ್ಯೂಯೆನ್ ತ್ಸಾಂಗ್ ಕೂಡ ಶಾರದಾಪೀಠ ಸುಪ್ರಸಿದ್ಧ ವಿದ್ಯಾಕೇಂದ್ರವಾಗಿತ್ತು ಎಂದು
ಉಲ್ಲೇಖ ಮಾಡಿದ್ದಾನೆ. ‘ಕಾಶ್ಮೀರ’ ಎಂಬ ಹೆಸರಿನ ಉಗಮಕ್ಕೂ ನೀಲಮಾತ ಪುರಾಣದಲ್ಲಿ ಕಥೆಯಿದೆ.
‘ಕಾ’ ಎಂದರೆ ನೀರು, ‘ಶ್ಮೀರ’ ಎಂದರೆ ಶುಷ್ಕ ಅಥವಾ ನಿರ್ಜಲೀಕರಿಸುವುದು. ಬ್ರಹ್ಮನ ಮೊಮ್ಮಗ ಮಹಾನ್ ಋಷಿ ಕಶ್ಯಪ ಬಾರಾಮುಲ್ಲಾದಲ್ಲಿನ ಬೆಟ್ಟ ಗುಡ್ಡಗಳಲ್ಲಿನ ಅಂತರವನ್ನು ಕಡಿದುಹಾಕುವ ಮೂಲಕ ನೀರನ್ನು ಬರಿದುಮಾಡಿದ ಎಂಬ ಪ್ರತೀತಿ ಇದೆ. ಆ ಕಾರಣದಿಂದ ‘ಕಾಶ್ಮೀರ’ ಎಂಬ ಹೆಸರು ಬಂದದ್ದಲ್ಲದೆ ಕಾಶ್ಮೀರ ಕಣಿವೆಯ ಮುಖ್ಯ ಪಟ್ಟಣಕ್ಕೆ ‘ಕಶ್ಯಪಪುರ’ ಎಂಬ ಹೆಸರಿಡಲಾಗಿತ್ತು. ಇಂಥ ಪುರಾಣ ಪ್ರಸಿದ್ಧ ಕ್ಷೇತ್ರದ ಮೇಲೆ ಕಳೆದ ಮೂರ‍್ನಾಲ್ಕು ವಾರಗಳಿಂದ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಭಾರತೀಯ ಭಾವನೆಗಳನ್ನು ಘಾಸಿ ಮಾಡಬೇಕೆಂದು ಉದ್ದೇಶಪೂರ್ವಕವಾಗಿ ಪಾಕಿಸ್ತಾನಿ ಸೇನೆ ಹಿಂದೂ ದೇವಾಲಯವನ್ನು ಹಾನಿ ಗೊಳಿಸುತ್ತಿದೆ. ಐತಿಹಾಸಿಕ ಮಹತ್ವ ಪಡೆದಿರುವ ಹಿಂದೂಗಳ ಶ್ರದ್ಧಾಕೇಂದ್ರ ಇವತ್ತಿನ ದಿನಗಳಲ್ಲೂ ಮತಾಂಧರಿಂದ ಧ್ವಂಸಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ.
ಹಿಂದೂ ದೇವಾಲಯಗಳ ಮೇಲಿನ ದಾಳಿ ನಿನ್ನೆ ಮೊನ್ನೆಯದೇನಲ್ಲ. ಶತಮಾನಗಳಿಂದ ಇದು ನಡೆಯುತ್ತಲೇ ಇದೆ. ಮತಾಂಧರು ದೇವಸ್ಥಾನಗಳನ್ನು ಹಾಳು ಮಾಡುವುದು, ಅವುಗಳ ಮೇಲೆ ಮಸೀದಿ ನಿರ್ಮಿಸುವುದು, ಹಿಂದೂಗಳ ಶ್ರದ್ಧೆಗೆ ಘಾಸಿ ಮಾಡಿ ವಿಕೃತ ಆನಂದ ಪಡುವುದು ವಿಶೇಷವೇನೂ ಅಲ್ಲ. ಅವರು ತಲೆತಲಾಂತರದಿಂದಲೇ ಇಂಥ ಹೇಯ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ಸಾಕಷ್ಟು ಘಟನೆಗಳು ಉದಾಹರಣೆಯಾಗಿ ನಿಲ್ಲುತ್ತವೆ. ದೇಶದಲ್ಲೇ ಅತಿ ಕುಖ್ಯಾತಿ ಪಡೆದಿರುವ ಭಾರತದ ಮೊದಲ ಮಸೀದಿ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿದೆ.
೧೧೯೨ರಲ್ಲಿ ಕುತುಬ್-ಉದ್-ದಿನ್ ಐಬಕ್ ವಿಜಯದ ಸಂಕೇತವಾಗಿ ಮೆರೆದಾಡಿ ಒಟ್ಟು ೨೭ ಜೈನ ಮತ್ತು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ
ಕಟ್ಟಿದ ಕುವ್ವತ್-ಉಲ್-ಇಸ್ಲಾಂ ಮತಾಂಧರ ಕುಕೃತ್ಯಕ್ಕೆ ಸಾಕ್ಷಿ. ೧೫೨೮-೨೯ರಲ್ಲಿ ಅಯೋಧ್ಯಾ ರಾಮಮಂದಿರದ ಮೇಲೆ ಬಾಬರನು ಕಟ್ಟಿಸಿದ ಬಾಬರಿ ಮಸೀದಿ ಇದಕ್ಕೆ ಮತ್ತೊಂದು ಉದಾಹರಣೆ. ನ್ಯಾಯಾಲಯದಲ್ಲಿ ಹಿಂದೂ ಗಳಿಗೆ ಜಯ ಸಿಕ್ಕು ಸದ್ಯ ರಾಮಮಂದಿರ ನಿರ್ಮಾಣ ಕಾರ್ಯ ವೇಗಗತಿಯಲ್ಲಿ ನಡೆಯುತ್ತಿರುವುದು ಸಮಾಧಾನ ಮತ್ತು ಸಂತಸದ ಸಂಗತಿ. ಔರಂಗಜೇಬ ೧೬೬೯ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಮೇಲೆ ಜ್ಞಾನವಾಪಿ ಮಸೀದಿ
ಕಟ್ಟಿದ್ದು, ೧೬೬೯-೭೦ರಲ್ಲಿ ಮಥುರಾದಲ್ಲಿ ಶ್ರೀಕೃಷ್ಣ ಜನ್ಮಸ್ಥಾನದ ದೇಗುಲದ ಮೇಲೆ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ್ದು ಮತಾಂಧ ಕೃತ್ಯಗಳಿಗೆ ಕೆಲವು ಉದಾಹರಣೆಗಳು.
ಪುರಾತನ ಕಾಲದಲ್ಲಿ ಗಾಂಧಾರ ಎಂದು ಕರೆಸಿಕೊಳ್ಳುತ್ತಿದ್ದ ಈಗಿನ ಅಫ್ಘಾನಿಸ್ತಾನದಲ್ಲೂ ದೇವಾಲಯಗಳ ಮೇಲೆ, ದೇವರ ಪ್ರತಿಮೆಗಳ ಮೇಲೆ ದಾಳಿ ನಡೆದಿದೆ. ಬೌದ್ಧರ ಶ್ರದ್ಧಾ ಕೇಂದ್ರಗಳನ್ನೂ ಮತಾಂಧರು ಗುರಿಯಾಗಿಸಿಕೊಂಡಿರುವುದಕ್ಕೆ ಹಲವು ನಿದರ್ಶನಗಳಿವೆ. ೫-೬ನೇ ಶತಮಾನದಲ್ಲಿ ಕೆತ್ತಿದ, ಅಂದು ಪ್ರಸಿದ್ಧ ಪ್ರವಾಸಿ ಮತ್ತು ಅಧ್ಯಾತ್ಮಿಕ ಕೇಂದ್ರವಾಗಿದ್ದ ೧೮೦ ಅಡಿ ಉದ್ದದ ಬಮಿಯಾನ್ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳು ಬಾಂಬ್ ಸ್ಫೋಟಿಸಿ ಒಡೆದುಹಾಕಿ ಕ್ರೌರ್ಯ ಮೆರೆದಿದ್ದಾರೆ. ಈಗ ಅದರ ಅವಶೇಷವನ್ನು ನೋಡಲು ಜನ ಬರುತ್ತಾರೆ. ಪಾಕ್‌ನಲ್ಲಿ ೧,೭೦೦ ವರ್ಷಗಳಷ್ಟು ಹಳೆಯ ಬುದ್ಧನ ಪ್ರತಿಮೆಯನ್ನು ಕೂಡ ಹಾಳುಮಾಡಲಾಗಿದೆ. ಇತ್ತೀಚೆಗೆ ಸುಮಾರು ೧೫೦ ವರ್ಷಗಳಷ್ಟು ಪುರಾತನವಾದ ಪಾಕ್‌ನ ಸೋಲ್ಜರ್ ಬಜಾರ್
ಸಮೀಪದಲ್ಲಿರುವ ಮಾರಿಮಾತಾ ದೇವಾಲಯವನ್ನು ಧ್ವಂಸ ಮಾಡಲಾಗಿದೆ.
ಪಾಕಿಸ್ತಾನದ ಬಹುಪಾಲು ಹಿಂದೂಗಳು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಅದೇ ಪ್ರಾಂತ್ಯದಲ್ಲಿರುವ ಹಿಂಗ್ಲಾಜ್ ಮಾತಾ ಮಂದಿರವನ್ನು ಇತ್ತೀಚೆಗೆ ಕೆಡವಿದ್ದಾರೆ. ಇಸ್ಲಾಮಾಬಾದ್‌ನಲ್ಲಿನ ಕೃಷ್ಣ ಮಂದಿರ, ಲಾಹೋರ್‌ನಲ್ಲಿನ ಹನುಮಾನ್ ಮಂದಿರ, ನಾಗ್ರಾಪಾರ್ಕರ್‌ನಲ್ಲಿನ ಕೃಷ್ಣ ಮಂದಿರ, ಚಾಕ್ರೋದಲ್ಲಿನ ಮಾತಾರಾಣಿ ಭಾತಿಯಾನಿ ದೇವಿ ಮಂದಿರ ಹೀಗೆ ಅನೇಕಾನೇಕ ದೇವಾಲಯಗಳನ್ನು ಧರೆಗುರುಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿಯೂ ಸುಮಾರು ೧೪ ದೇವಾಲಯಗಳ ಮೂರ್ತಿಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ಬಾಂಗ್ಲಾದ ಜುನೈದಾ ಜಿಲ್ಲೆಯ
ದೌತಿಯ ಗ್ರಾಮದಲ್ಲಿರುವ ಕಾಳಿ ದೇಗುಲಕ್ಕೆ ನುಗ್ಗಿ ಕಾಳಿ ಮೂರ್ತಿಯನ್ನು ವಿಕೃತಗೊಳಿಸಿದ್ದಾರೆ. ಇನ್ನು ಕೆನಡಾ, ಬ್ರಿಟನ್, ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳ ಅಟ್ಟಹಾಸ ಮಿತಿಮೀರಿ ನಿಂತಿದೆ. ಹಿಂದೂಗಳ, ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವುದು, ಖಲಿಸ್ತಾನಿ ಪರ ಘೋಷಣೆಗಳನ್ನು ಕೂಗುವುದು, ಭಾರತ-ವಿರೋಧಿ ಬರಹ ಗಳನ್ನು ಗೋಡೆಯಲ್ಲಿ ಅಂಟಿಸಿ ವಿಕೃತಿ ಮೆರೆಯುವುದು ಸರ್ವೇಸಾಮಾನ್ಯ ವಿಷಯವಾಗಿದೆ. ಮುಸ್ಲಿಂ ಬಾಹುಳ್ಯ
ವಿರುವ ಪ್ರದೇಶದಲ್ಲಿ ಹಿಂದೂ ಸಂಪ್ರದಾಯಗಳನ್ನು ನಡೆಸಬಾರದು ಎಂಬ ಮುಸ್ಲಿಮರ ಒತ್ತಾಯದ ಮೇರೆಗೆ ಆಡಳಿತಾರೂಢ ಸರಕಾರ ಹಿಂದೂಗಳ ವಿರುದ್ಧ ಕಾನೂನು ವ್ಯವಸ್ಥೆ ಜಾರಿ ಮಾಡಿದ ಘಟನೆ ನೆರೆಯ ರಾಜ್ಯ ತಮಿಳುನಾಡಿನ ಪೆರಂಬಲ್ಲೂರ್‌ನಲ್ಲಿ ನಡೆದಿದೆ.
ಇದನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟು, ಸರಕಾರ ಮತ್ತು ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡು ಮತಾಂಧರ ವಿರುದ್ಧ ತೀರ್ಪನ್ನು ನೀಡಿದೆ. ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎಂದ ಮಾತ್ರಕ್ಕೆ ಹಿಂದೂ ಸಂಪ್ರದಾಯವನ್ನು ತಡೆಗಟ್ಟಬೇಕು ಅನ್ನುವುದು ಈ ದೇಶದ ಸಂವಿಧಾನದ ವಿರುದ್ಧ ಎನ್ನುವ ಮೂಲಕ ಹೈಕೋರ್ಟ್ ಹಿಂದೂಗಳ ಮೂಲಭೂತ ಹಕ್ಕನ್ನು ಎತ್ತಿ ಹಿಡಿದಿದೆ. ಈ ಮಣ್ಣಿನ ಸಂಸ್ಕೃತಿ, ಸಂಪ್ರದಾಯವನ್ನು ಆಚರಿಸಲು ಹೈಕೋರ್ಟಿನ ಮೊರೆ ಹೋಗುವ ಪರಿಸ್ಥಿತಿ ನಮ್ಮ ದೇಶದಲ್ಲೇ ಇದೆ ಎಂದರೆ, ಅದು ಸೆಕ್ಯುಲರ್ ಪದಕ್ಕೆ ಮಾಡಿದ ಅಪಮಾನ ಅಲ್ಲವೇ? ನಮ್ಮ ದೇಶದಲ್ಲೇ ಪರಿಸ್ಥಿತಿ ಹೀಗಿರುವಾಗ ಅನ್ಯದೇಶಗಳಲ್ಲಿ ಹಿಂದೂಗಳ ಕೂಗನ್ನು ಕೇಳಿಸಿಕೊಳ್ಳುವ ಭರವಸೆ ಎಲ್ಲಿದೆ? ಇಂದಿಗೂ ಹಿಂದೂಗಳು ಅನ್ಯ ಧರ್ಮೀಯರ ಪವಿತ್ರ
ಸ್ಥಳಗಳನ್ನು ನಾಶಮಾಡಿ ದೇಗುಲ ನಿರ್ಮಿಸಿದ ನಿದರ್ಶನಗಳಿಲ್ಲ.
‘ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ’ ಎಂಬ ಆಶಯ ಹಿಂದೂ ಧರ್ಮದ್ದು. ಎಲ್ಲರನ್ನೂ ತನ್ನೊಂದಿಗೆ ಸೇರಿಸಿಕೊಳ್ಳುವ, ಸೌಹಾರ್ದ ದಿಂದ ಬಾಳ್ವೆ ನಡೆಸುವ ಉದಾತ್ತ ಗುಣ ಭಾರತೀಯರದ್ದು. ಇಂಥ ಸಮರಸದ ಸಂದೇಶ ಸಾರಿದ ನಾಡಿನಲ್ಲಿ ಹಿಂದೂಗಳ ಜೀವನ ಅಪಾಯದ ಅಂಚಿನಲ್ಲಿರುವುದು ಖೇದಕರ. ‘ದೇವನೊಬ್ಬ ನಾಮ ಹಲವು’ ಎಂದು ಎಲ್ಲರಲ್ಲೂ, ಎಲ್ಲದರಲ್ಲೂ ದೇವರನ್ನು ಕಾಣುವ ಹಿಂದೂಗಳು ತಮ್ಮ ಶ್ರದ್ಧೆಯ ದೇಗುಲಗಳು ನೆಲಸಮವಾಗುವ ಘಟನೆಗಳನ್ನು ನೋಡುತ್ತಲೇ ಬಂದಿದ್ದಾರೆ.
ಹಿಂದೂ ಜನಜೀವನ, ಹಿಂದೂಗಳ ನಂಬಿಕೆ, ಶ್ರದ್ಧೆ, ಆಚರಣೆಗಳು ಶತಮಾನಗಳಿಂದ ಅಪಾಯದ ಅಂಚಿನಲ್ಲಿವೆ. ಇವುಗಳಿಗೆ ಪರಿಹಾರವನ್ನು ಹಿಂದೂ ಗಳೇ ಕಂಡುಕೊಳ್ಳಬೇಕಿದೆ. ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಮತಾಂಧ ಕೃತ್ಯಗಳನ್ನು ಹಿಂದೂ ಸಮಾಜ ಒಟ್ಟಾಗಿ ವಿರೋಧಿಸ ಬೇಕಿದೆ. ಇತ್ತೀಚೆಗೆ ಕೇಂದ್ರ ಸರಕಾರ ಶ್ರೀ ಶಾರದಾ ಪೀಠಕ್ಕೆ ಭಕ್ತರು ತೆರಳಲು ‘ಶಾರದಾ ಪೀಠ ಕಾರಿಡಾರ್’ ಅನ್ನು ೧.೨ ಕೋಟಿ ರುಪಾಯಿ ವೆಚ್ಚದಲ್ಲಿ ರೂಪಿಸಲು ಯೋಜನೆ ಹಾಕಿಕೊಂಡಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಈ ಬಗ್ಗೆ ಎಪ್ರಿಲ್‌ನಲ್ಲೇ ಪ್ರಸ್ತಾಪ ಮಾಡಿದ್ದಾರೆ. ಇದು ಒಂದು ಉತ್ತಮ ಬೆಳವಣಿಗೆ. ಹಿಂದೂ ಗಳ ರಕ್ಷಣೆಗೆ ಬದ್ಧವಾಗಿರುವ ಉತ್ತಮ ಸರಕಾರದ ಆಯ್ಕೆಮತ್ತು ತಮ್ಮನ್ನು ದೌರ್ಜನ್ಯಕ್ಕೊಳಪಡಿಸುವವರ ವಿರುದ್ಧ ಒಗ್ಗಟ್ಟಿನ ಹೋರಾಟ- ಇವೆರಡೂ ಹೊಣೆಗಾರಿಕೆ ಹಿಂದೂ ಗಳ ಮೇಲೆಯೇ ಇದೆ.