Monday, 16th September 2024

ಹೋರಾಟಗಳು ಬೇಗ ತಣ್ಣಗಾಗುವುದೇಕೆ ?

ಯಕ್ಷಪ್ರಶ್ನೆ

ಸಾಗರ್‌ ಮುಧೋಳ

‘ಅತ್ಯಾಚಾರದ ವಿರುದ್ಧದ ಹೋರಾಟಗಳು ಬಹುಬೇಗ ತಣ್ಣಗಾಗುವುದೇಕೆ? ಇಷ್ಟೇನಾ ನಿಮ್ಮ ಕಿಚ್ಚು? ಸಹಾನುಭೂತಿಯು ಬರಿಯ ೪ ಮೋಂಬತ್ತಿಗಳನ್ನು ಬೆಳಗಿಸುವುದಕ್ಕಾ ಅಥವಾ Demanding for justice ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಬ್ಬರಿಸಿ ನಾಲ್ಕು ದಿನ ಟ್ರೆಂಡ್ ಮಾಡಿ, ನಾವು ಕೂಡ ಇಂಥ ಹೋರಾಟದ ಭಾಗ ಎಂದು ತೋರಿಸಿಕೊಳ್ಳಲಿಕ್ಕಾ?’- ಈ ಪ್ರಶ್ನೆಗಳನ್ನು ಕೇಳುತ್ತಿರುವುದು ಅತ್ಯಾಚಾರಕ್ಕೊಳಗಾಗಿ ದುರಂತದ ಜೀವನ ನಡೆಸುತ್ತಿರು
ವವರು ಅಥವಾ ತಮ್ಮ ಪ್ರಾಣವನ್ನೇ ಕಳೆದುಕೊಂಡು ವರ್ಷಗಳೇ ಆದರೂ ನ್ಯಾಯಸಿಗದಂಥ ಮಹಾತಾಯಿಯರ ಆತ್ಮಗಳು.

ಮಾತ್ರವಲ್ಲ, ಅತ್ಯಾಚಾರಕ್ಕೊಳಗಾದ ಹೆಣ್ಣಿನ ನೆತ್ತರನ್ನು ನುಂಗಿದ ಭೂತಾಯಿಯ ಒಡಲು, ಆಕೆಯ ಉಸಿರಾಟವನ್ನು ಮೇಳೈಸಿಕೊಂಡ ಸುತ್ತಲಿನ ಗಾಳಿ, ಆಕೆಯ ದೇಹವನ್ನು ಸುಟ್ಟ ಬೆಂಕಿ, ನಮ್ಮಷ್ಟು ಓದದೆ-ಬರೆಯದೆ ಇದ್ದರೂ ನಮ್ಮಂತೆ ಅರಿವುಗೇಡಿಗಳಾಗದ ಪಶು-ಪಕ್ಷಿಗಳು ಹೀಗೆ ಒಂದಿಡೀ ಪ್ರಕೃತಿಯೇ ರೋದಿಸುತ್ತಿದೆ.

ಇತ್ತೀಚೆಗೆ ಕೋಲ್ಕತ್ತಾದಲ್ಲಾದ ವೈದ್ಯೆಯ ಮೇಲಿನ ಅತ್ಯಾಚಾರ ಈ ದೇಶಕ್ಕೆ ಅಂಟಿದ ಮತ್ತೊಂದು ಕಳಂಕ. ಮನೆಯ ಮಗಳಿಗೇ ಸುರಕ್ಷಿತ ವಾತಾವರಣ ವಿಲ್ಲದಿರುವಾಗ, ನಾವು ಇನ್ನೇನು ಘನಂದಾರಿ ಸಾಧನೆ ಮಾಡಲು ಹೊರಟಿದ್ದೇವೆ? ಒಂದೆಡೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ, ಆರೋಗ್ಯ ಮತ್ತು ಗೃಹಮಂತ್ರಿಯೂ ಸ್ವತಃ ಒಬ್ಬ ಮಹಿಳೆಯೂ ಆಗಿರುವ ಮಮತಾ ಬ್ಯಾನರ್ಜಿ ಸರಕಾರದ ಅಧಿನಾಯಕಿಯಾಗಿದ್ದುಕೊಂಡು ತಮ್ಮ ಸರಕಾರದ ವಿರುದ್ಧವೇ ಪ್ರತಿಭಟನೆ ಮಾಡುತ್ತಿದ್ದಾರೆ.

ಇನ್ನೊಂದೆಡೆ, ಹುಡುಗ-ಹುಡುಗಿಯರು ತುಂಬಾ ಸಲಿಗೆಯಿಂದ ಒಟ್ಟಿಗೆಯಿರುವುದರಿಂದಲೇ ಅತ್ಯಾಚಾರದಂಥ ಘಟನೆಗಳು ಮರು ಕಳಿಸುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲೂ ಹಿಂದೊಮ್ಮೆ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಾಗ ರಾಜ್ಯದ ಅಂದಿನ ಗೃಹಮಂತ್ರಿ ಮಾಧ್ಯಮ ಗಳೆದುರು, ‘ಅಲ್ರೀ, ಆ ಹುಡುಗಿ ಅಷ್ಟೊತ್ತಿಗೆ ಅಲ್ಲಿಗೇಕೆ ಹೋದಳು?’ ಎಂದು ಹೇಳಿ, ಸಂತ್ರಸ್ತೆಯದು ಕೂಡ ತಪ್ಪಿದೆ ಎಂಬ ಧಾಟಿಯಲ್ಲಿ ಮಾತಾಡಿದ್ದರು. ಅತ್ಯಾಚಾರದ ಕುರಿತಾದ ಜೋಕ್ ಒಂದನ್ನು ಶಾಸಕರೊಬ್ಬರು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಯಲ್ಲಿ ಹೇಳಿದಾಗ, ಅವರನ್ನು ಎಚ್ಚರಿಸಿ ಸುಮ್ಮನಿರಿಸಬೇಕಾಗಿದ್ದ ಸಭಾಧ್ಯಕ್ಷರು, ತಾವೂ ಜತೆಗೂಡಿ ನಕ್ಕಿದ್ದರು.

ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳದ ಆರೋಪಿಯಾಗಿರುವವರು ರಾಜ್ಯದ ಹಲವು ರಾಜಕಾರಣಿಗಳಿಗೆ ‘ಅಪ್ಪಾಜಿ’. ವಿಧಾನಸೌಧದಲ್ಲಿ ಬ್ಲೂ ಫಿಲಂ ನೋಡಿದವರು, ಕಾಮಕೇಳಿಯ ವಿಡಿಯೋಗಳಲ್ಲಿದ್ದ ಲಜ್ಜೆಗೆಟ್ಟವರೆಲ್ಲ ನಮ್ಮ ಮಹಾನಾಯಕರು! ‘ಅತ್ಯಾಚಾರಿಗಳಿಗೆ ನೇಣುಹಾಕಬೇಕು’ ಎಂದೇನೋ ನಾವು ಅಬ್ಬರಿಸುತ್ತೇವೆ, ಆದರೆ ಇಂಥ ಎಷ್ಟು ಶಿಕ್ಷೆಗಳಾಗಿವೆ? ಎಷ್ಟು ಮಂದಿ ಸಂತ್ರಸ್ತೆಯರಿಗೆ ನ್ಯಾಯ ಸಿಕ್ಕಿದೆ? ಬಹಳ ಹಿಂದೆ ಹೋಗುವುದು ಬೇಡ, ೧೯೭೨ರ ಮಥುರಾ ಅತ್ಯಾಚಾರ ಪ್ರಕರಣವನ್ನೇ ಪರಿಗಣಿಸೋಣ. ಮಹಾರಾಷ್ಟ್ರದ ಆದಿವಾಸಿ ಬುಡಕಟ್ಟು ಸಮುದಾಯದ ೧೬ರ ಹರೆಯದ ಮಥುರಾ ಎಂಬಾಕೆ ತನ್ನ ಸೋದರನೊಂದಿಗೆ ಇನ್ನೊಬ್ಬರ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು.

ಆಕೆಯ ಮದುವೆ ನಿಶ್ಚಯವಾಯಿತು; ಆದರೆ ಅವಳಿನ್ನೂ ಅಪ್ರಾಪ್ತೆ ಎಂದು ದೂರು ನೀಡಲು ಆಕೆಯ ಸೋದರ ಗಡಿಚಿರೋಯ್ ಜಿಲ್ಲೆಯ ದೇಸಾಯಿ ಗಂಜ್ ಪೊಲೀಸ್ ಠಾಣೆಗೆ ತೆರಳಿದ. ದೂರು ದಾರರು ಮತ್ತು ಆರೋಪಿಗಳೆಲ್ಲವನ್ನೂ ಹೊರಗೆ ಕಳಿಸಿದ ಪೊಲೀಸರು ಮಥುರಾಳನ್ನು ಮಾತ್ರ ಠಾಣೆಯಲ್ಲೇ ಇರಲು ಹೇಳಿದರು. ನಂತರ ಇಬ್ಬರು ಪೇದೆಗಳು ಆ ಮುಗ್ಧೆಯ ಮೇಲೆ ಬರ್ಬರವಾಗಿ ಅತ್ಯಾಚಾರವೆಸಗಿದರು. ಆದರೆ ಅವರ ಮೇಲೆ ಯಾವ ದೂರೂ ದಾಖಲಾಗಲಿಲ್ಲ. ಜನರು ಒಗ್ಗಟ್ಟಾಗಿ, ‘ನೀವು ದೂರು ದಾಖಲಿಸಿಕೊಳ್ಳದಿದ್ದರೆ ಪೊಲೀಸ್ ಠಾಣೆಯನ್ನೇ ಸುಟ್ಟುಬಿಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿ ದಾಗ, ‘ನಾಮ್-ಕೆ-ವಾಸ್ತೆ’ ದೂರು ದಾಖಲಿಸಿಕೊಂಡರು.

ಈ ಪ್ರಕರಣ ಸೆಷನ್ಸ್ ಕೋರ್ಟ್ ಅಂಗಳವನ್ನು ತಲುಪಿದಾಗ, ‘ಆರೋಪಿತರ ತಪ್ಪು ಯಾವ ರೀತಿಯಲ್ಲೂ ಸಾಬೀತಾಗಿಲ್ಲ. ಮಥುರಾ ಲೈಂಗಿಕವಾಗಿ ತುಂಬಾ ಉತ್ಸುಕಳಾಗಿದ್ದಳು ಮತ್ತು ಇದು ಅತ್ಯಾಚಾರದ ಪ್ರಕರಣವಲ್ಲ’ ಎಂದು ನ್ಯಾಯಾಲಯ ಷರಾ ಬರೆದು ಆರೋಪಿ ಪೇದೆಗಳನ್ನು ಬಿಡುಗಡೆ ಮಾಡಿ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದರೂ ವಿಶೇಷವೇನೂ ಘಟಿಸಲಿಲ್ಲ; ಇಬ್ಬರು ಆರೋಪಿಗಳಿಗೆ ತಲಾ ಒಂದು ವರ್ಷ
ಮತ್ತು ಐದು ವರ್ಷಗಳ ಜೈಲುಶಿಕ್ಷೆ ನೀಡಿ ನ್ಯಾಯಾಲಯ ಕೈತೊಳೆದುಕೊಂಡಿತು. ಪ್ರಕರಣ ಸರ್ವೋಚ್ಚ ನ್ಯಾಯಾ ಲಯದ ಮೆಟ್ಟಿಲೇರಿದಾಗ ಅಲ್ಲಿನ ತ್ರಿಸದಸ್ಯ ನ್ಯಾಯಪೀಠವು, ‘ಅತ್ಯಾಚಾರದ ಸಂದರ್ಭದಲ್ಲಿ ಆಕೆಯು ಪ್ರತಿಭಟಿಸಿದ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಆಕೆ ಲೈಂಗಿಕವಾಗಿ ತುಂಬಾ ಉತ್ಸುಕಳಾಗಿದ್ದಳು.

ಪೇದೆಗಳು ರಾತ್ರಿಹೊತ್ತು ಮದ್ಯ ಪಾನ ಮಾಡಿರಬೇಕು, ಈಕೆ ಅವರನ್ನು ಲೈಂಗಿಕ ಕ್ರಿಯೆಗೆ ಪ್ರೇರೇಪಿಸಿರಬಹುದು. ಇದು ಅತ್ಯಾಚಾರವಲ್ಲ’ ಎಂದು ತೀರ್ಪು ನೀಡಿತು. ಬನ್ವಾರಿ ದೇವಿ ಎಂಬ ಸಾಮಾಜಿಕ ಕಾರ್ಯಕರ್ತೆಗೆ ಸಂಬಂಧಿಸಿದ ೧೯೯೨ರ ಪ್ರಕರಣವೊಂದನ್ನು ನೋಡೋಣ. ಈಕೆ ರಾಜಸ್ಥಾನದ ಬತೇರಿ ಯಲ್ಲಿ ಬಾಲ್ಯವಿವಾಹಗಳನ್ನು ತಡೆಯುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದವರು. ಪತಿಯೊಂದಿಗೆ ಈಕೆ ಹೊಲದಲ್ಲಿ ದುಡಿಯುತ್ತಿರುವಾಗ ಬಂದ ಸ್ಥಳೀಯ ಗೂಂಡಾಗಳು ಪತಿಯನ್ನು ಥಳಿಸಿ, ಅವನ ಎದುರಿನಲ್ಲೇ ಬನ್ವಾರಿ ದೇವಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು. ದೂರು ನೀಡಲೆಂದು ಆಕೆ ಪೊಲೀಸ್ ಠಾಣೆಗೆ ಹೋದಾಗ, ದೂರು ದಾಖಲಿಸಿಕೊಳ್ಳಲು ಅಲ್ಲಿ ಮೊದಲಿಗೆ ಅಸಮ್ಮತಿ ತೋರಿದರು. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಯನ್ನೂ ಸರಿಯಾಗಿ ಮಾಡಲಿಲ್ಲ. ಆದರೆ ಆರೋಪಿಗಳು ಬಹುದೊಡ್ಡ ನ್ಯಾಯವಾದಿಗಳ ಪಡೆಯನ್ನೇ ನೇಮಿಸಿಕೊಂಡರು.

ನ್ಯಾಯಾಲಯವು, ‘ಯಾವ ಗಂಡನೂ ತನ್ನ ಹೆಂಡತಿಯ ಮೇಲಾಗುತ್ತಿರುವ ಅತ್ಯಾಚಾರವನ್ನು ನೋಡುತ್ತಾ ಸುಮ್ಮನಿರುವುದಿಲ್ಲ’ ಎಂದು ಹೇಳಿ, ಇಲ್ಲಿ ಯಾವ ಅತ್ಯಾಚಾರ ನಡೆದೇ ಇಲ್ಲವೆಂಬಂತೆ ಆರೋಪಿಗಳನ್ನು ಬಿಡುಗಡೆ ಮಾಡಿ ಆದೇಶಿಸಿತು. ಹೀಗೆ ಬಿಡುಗಡೆಯಾದ ಆರೋಪಿಗಳನ್ನು ತೊಡಗಿಸಿ ಕೊಂಡು ಸ್ಥಳೀಯ ಶಾಸಕನೊಬ್ಬ ಅಂದು ದೊಡ್ಡ ಮೆರವಣಿಗೆಯನ್ನೇ ಆಯೋಜಿಸಿದ. ಇದು ನಾವು ಅತ್ಯಾಚಾರಿಗಳನ್ನು ಶಿಕ್ಷಿಸುವ ಪರಿ! ಕೊನೆಗೆ ಜನಾಕ್ರೋಶ ಹೆಚ್ಚಿದಾಗ ಸರಕಾರವು ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಅಪೀಲು ಮಾಡಿತು.

ತೀರ್ಪು ಬರುವ ಹೊತ್ತಿಗೆ ಆರೋಪಿಗಳ ಪೈಕಿ ಇಬ್ಬರು ಕಾಲವಾಗಿದ್ದರು. ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಸರ್ವೋಚ್ಚ ನ್ಯಾಯಾಲಯವು ೧೯೯೭ರಲ್ಲಿ ಸರಕಾರಕ್ಕೆ Vishaka Guidelines ಹೆಸರಿನ, ಕಾರ್ಯವಿಧಾನದ ಮಾರ್ಗದರ್ಶಿ ಸೂತ್ರ ಗಳನ್ನು ನೀಡಿತು. ಅದು ಕಾನೂನಾಗಿ ಬಂದಿದ್ದು ೨೦೧೩ರಲ್ಲಿ. ನಮ್ಮ ಸರಕಾರ ಅಲ್ಲಿಯವರೆಗೆ ಮಾಡಿದ್ದು ಕೇವಲ ನೌಟಂಕಿ!

ನಾವೆಲ್ಲ ತಲೆ ತಗ್ಗಿಸುವಂತೆ ಮಾಡಿದ್ದು ೨೦೧೨ರ ‘ನಿರ್ಭಯಾ’ ಪ್ರಕರಣ, ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯ ವಿನಾಯಿತಿ ನೀಡಿದ ಇತ್ತೀಚಿನ ಬಿಲ್ಕಿಸ್ ಬಾನು ಪ್ರಕರಣ. ಆಗ ಕೂಡ ನಾವು ಮೋಂಬತ್ತಿ ಬೆಳಗಿಸಿ ಪ್ರತಿಭಟನೆಯ ಘೋಷಣೆಗಳನ್ನು ಕೂಗಿದ್ದೆವು. ಹಾಗೆ ನೋಡಿದರೆ, ದೇಶದ ವಿವಿಧ ನಗರ-
ಪಟ್ಟಣ-ಗ್ರಾಮಗಳಲ್ಲಿ ನಡೆವ ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಿನವು ಬೆಳಕಿಗೇ ಬರುವುದಿಲ್ಲ ಎನ್ನಬೇಕು. ಅತ್ಯಾಚಾರ ರಹಿತ ಸಮಾಜವು ಇಂದಿಗೂ ನಮ್ಮ ಯೋಗ್ಯತೆಗೆ ದಕ್ಕುತ್ತಿಲ್ಲ. ಅತ್ಯಾಚಾರದ ಸಂತ್ರಸ್ತೆಗೆ ತಕ್ಷಣ ನೀಡುವ Victim Compensation Scheme ಶೀಘ್ರವಾಗಿ ಮರು ಪರಿಶೀಲನೆಗೆ ಒಳಗಾಗುವ ಅವಶ್ಯಕತೆಯಿದೆ.

ಸಂತ್ರಸ್ತೆಗೆ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳು/ಪರೀಕ್ಷೆ, ಆಪ್ತಸಮಾಲೋಚನೆ ಇವುಗಳ ಬಗ್ಗೆ ನಮ್ಮ ಸರಕಾರಗಳು ಸೂಕ್ತ ವ್ಯವಸ್ಥೆ ಮಾಡಬೇಕು. ಮಾದಕ ವಸ್ತುಗಳ ಸಾಗಣೆ/ಮಾರಾಟ, ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆ, Pornography ಮುಂತಾದವುಗಳ ನಿಗ್ರಹಕ್ಕೆ ಕಠಿಣ ಕಾನೂನುಗಳು ಜಾರಿ ಯಾಗಬೇಕು. ಇಂಥ ಪ್ರಕರಣಗಳ ತನಿಖೆಗಾಗಿ ಅಖಿಲ ಭಾರತ ಮಟ್ಟದಲ್ಲಿ ವಿಶೇಷ ತನಿಖಾದಳವೊಂದನ್ನು ರಚಿಸ ಬೇಕು ಮತ್ತು ತನಿಖೆ, ವಿಚಾರಣೆ ಕೈಗೊಳ್ಳುವ, ಶಿಕ್ಷೆ ಪ್ರಕಟ ಮಾಡುವ ಸಂಪೂರ್ಣ ಅಽಕಾರವನ್ನು ಆ ದಳಕ್ಕೆ ನೀಡಬೇಕು.

ಅದೊಂದು Quasi Judicial Forum ರೀತಿಯಲ್ಲಿ ವರ್ತಿಸಬೇಕು. ಅದರ ತೀರ್ಪನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತ್ರವೇ ಮರು ಪರಿಶೀಲಿ ಸುವ ಅಧಿಕಾರವನ್ನು ಹೊಂದಿರಬೇಕು. ಹೆಣ್ಣುಮಕ್ಕಳನ್ನು ಅಸಹ್ಯವಾಗಿ ಬಳಸಿಕೊಳ್ಳುವ ಜಾಹೀರಾತುಗಳಿಗೆ ತಡೆ ಬೀಳಬೇಕು. ರಾಜಕೀಯ ಮತ್ತು ಸಾರ್ವಜನಿಕ ಹುದ್ದೆಯಲ್ಲಿರುವವರಿಗೆ Gender Sensitisation Code ಜಾರಿಯಾಗಬೇಕು.

ಅತ್ಯಾಚಾರದ ಸಂತ್ರಸ್ತೆಯನ್ನು ಆಕೆ ವೈದ್ಯೆ, ದಾದಿ, ವಕೀಲೆ ಎಂದು ನೋಡದೆ ಅಥವಾ ಆಯಾ ವೃತ್ತಿಪರರ ಹೋರಾಟವಾಗಿ ಪರಿಗಣಿಸದೆ, ಇವರು ನಮ್ಮಂತೆಯೇ ಮನುಷ್ಯರು ಎಂಬ ಭಾವದೊಂದಿಗೆ ಜನಾಂದೋಲನವಾಗಬೇಕು. ಅತ್ಯಾಚಾರದ ವಿರುದ್ಧದ ಹೋರಾಟಗಳು ಬೇಗ ತಣ್ಣಗಾಗದೆ ಕ್ರಾಂತಿಯ ಜನಾಂದೋಲನಗಳಾಗಿ, ನಮ್ಮ ನಮ್ಮ ಭಾಗದ ಶಾಸಕರು ಮತ್ತು ಸಂಸದರನ್ನು ಪ್ರಶ್ನಿಸುವಂತಾಗಬೇಕು; ಕಾರಣ ಅವರನ್ನು ನಮ್ಮ ಪ್ರತಿನಿಧಿ ಗಳಾಗಿ ಚುನಾಯಿಸಿ ಕಳಿಸುತ್ತಿರುವುದು ಅಸೆಂಬ್ಲಿ, ಪಾರ್ಲಿಮೆಂಟ್‌ಗೆ ಹೋಗಿ ಹವಾನಿಯಂತ್ರಿತ ಸದನದಲ್ಲಿ ಬೆಚ್ಚಗೆ ಮಲಗಲು ಅಲ್ಲ, ಜನರ
ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರರೂಪದ ಕ್ರಮಗಳು/ ಕಾನೂನುಗಳನ್ನು ರೂಪಿಸಲು. ಇಂದು ನಾವು ಪ್ರಶ್ನಿಸದಿದ್ದರೆ, ಇಂಥ ನೂರಾರು ಅತ್ಯಾ ಚಾರದ ಹೋರಾಟಗಳು ತಣ್ಣಗಾಗುತ್ತಲೇ ಹೋಗುತ್ತವೆ.

ಪ್ರತಿ ಅತ್ಯಾಚಾರದ ಪ್ರಕರಣದ ನಂತರ ಮೊಸಳೆ ಕಣ್ಣೀರನ್ನು ಸುರಿಸುತ್ತಾ, ಒಂದಿಷ್ಟು ಮೇಣದ ಬತ್ತಿಗಳನ್ನು ಬೆಳಗಬೇಕಾಗುತ್ತದೆ. ಇದು ಹೀಗೆಯೇ ಮುಂದು ವರಿದರೆ, ನಾಳೆ ನಮ್ಮ ಮನೆಗೂ ತಲುಪಬಹುದು, ಎಚ್ಚರ!

(ಲೇಖಕರು ನ್ಯಾಯವಾದಿಗಳು)

Leave a Reply

Your email address will not be published. Required fields are marked *