ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಕರೋನಾ ನಿಯಮಗಳ ವಿಷಯದಲ್ಲಿ ರಾಜ್ಯ ಸರಕಾರದ ಎಡಬಿಡಂಗಿತನ ಮತ್ತೊಮ್ಮೆ ಸಾಬೀತಾಗಿದೆ. ಚಿತ್ರರಂಗ ಕಳೆದ ವರ್ಷದ ಸಂಕಷ್ಟದಿಂದ ಚೇತರಿಸಿಕೊಂಡು ಈಗ ತಾನೇ ಪುನರುಜ್ಜೀವನಕ್ಕೆ ಸಜ್ಜಾಗುತ್ತಿರುವ ಸಮಯದಲ್ಲಿ ಸರಕಾರ ಮತ್ತೊಮ್ಮೆ ಗದಾಪ್ರಹಾರ ಮಾಡಿದೆ.
ಇತ್ತೀಚೆಗೆ ತಾನೇ ಚಿತ್ರಮಂದಿರಗಳಲ್ಲಿ ಶೇಕಡ 100ರಷ್ಟು ಹಾಜರಾತಿಗೆ ಸಮ್ಮತಿ ಕೊಟ್ಟಿತ್ತು ರಾಜ್ಯಸರಕಾರ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿನಿಮಾ ಸಮಾರಂಭಗಳಲ್ಲಿ ಭಾಗವಹಿಸಿ ಶೇಕಡಾ 100 ಹಾಜರಾತಿ ಬಗ್ಗೆ ಖಾತ್ರಿ ಮಾಡಿದ್ದರು. ಆದರೆ ಈಗ ಕರೋನಾ ಎರಡನೇ ಅಲೆಯ ನೆಪದಲ್ಲಿ ಮತ್ತೊಮ್ಮೆ ಚಿತ್ರಮಂದಿರಗಳ ಹಾಜರಾತಿಯನ್ನು ಶೇಕಡಾ 50ಕ್ಕೆ ಇಳಿಸಿದೆ ಸರಕಾರ.
ಇವರ ಮಾತನ್ನು ನಂಬಿ ಕಳೆದ ಗುರುವಾರ ಬಿಡುಗಡೆಯಾದ ಯುವರತ್ನ ಚಿತ್ರತಂಡ ಈಗ ಶಾಕ್‌ಗೆ ಒಳಗಾಗಿದೆ. ಕೈ ತುತ್ತು ತೆಗೆದುಕೊಂಡು ಇನ್ನೇನು ಬಾಯಿಗೆ ಇಡಬೇಕು ಎನ್ನುವಷ್ಟರಲ್ಲಿ ಸರಕಾರ ಅದಕ್ಕೆ ಅಡ್ಡಗಾಲು ಹಾಕಿದೆ. ಅಲ್ಲದೆ, ರಾಜಕೀಯ ಪ್ರಚಾರಗಳಿಗೆ ಇಲ್ಲದ ನಿಯಮ, ಸಿನಿಮಾ ಮಂದಿರಗಳಿಗೆ ಮಾತ್ರ ಯಾಕೆ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ.
ಈ ನಿಟ್ಟಿನಲ್ಲಿ, ಸರಕಾರ ಹೇಳೋದು ಒಳ್ಳೆಯದಕ್ಕೇ ಆಗಿದ್ದರೂ, ಸರಕಾರಿ ನಿಯಮಗಳು ಸರ್ವಾಧಿಕಾರಿ ನಿಯಮಗಳಾಗಬಾರದು. ಶೇ.50 ರೂಲ್ ಬೇಕಿದ್ರೆ ಹೊಸದಾಗಿ ಬಿಡುಗಡೆ ಆಗುವ ಸಿನಿಮಾಗಳಿಗೆ ಅನ್ವಯ ಆಗಲಿ. ಬೇಕಿದ್ರೆ ಬಿಡುಗಡೆ ಮಾಡ್ತಾರೆ, ಇಂದ್ರೆ ಇಲ್ಲ. ಆದ್ರೆ ನಿಮ್ ಮಾತು ನಂಬಿಕೊಂಡು ಈಗಾಗಲೇ ಬಿಡುಗಡೆ ಮಾಡಲಾಗಿರುವ ಸಿನಿಮಾಗಳಿಗೆ ಈಗ ಇದ್ದಕ್ಕಿದ್ದಂತೆ ತೊಂದ್ರೆ ಕೊಡೋದು ತಪ್ಪು ಎಂಬುದು ಸಿನಿಮಾರಂಗದವರ ಅಭಿಪ್ರಾಯವಾಗಿದೆ.
ಎಂದಿನಂತೆ, ನಿನ್ನೆ ತಂದ ನಿಯಮಕ್ಕೆ ಇಂದು ಉಲ್ಟಾ ಹೊಡೆದಾದರೂ, ಈ ಶೇಕಡಾ 50ರ ನಿಯಮವನ್ನು ಸರಕಾರ ಆದಷ್ಟು ಬೇಗ ವಾಪಸ್ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಚಿತ್ರರಂಗ ಕಾಯುತ್ತಿದೆ.
ನೆಟ್ ಪಿಕ್ಸ್
ಖೇಮು ಊರಿನ ಹೊರವಲಯದಲ್ಲಿ ಒಂದು ಫಾರ್ಮ್ ಹೌಸ್ ತಗೊಂಡಿದ್ದ. ಅದರಲ್ಲಿ ವಿಶಾಲವಾದ ತೋಟದ ಮಧ್ಯೆ ಈಜಾಡಲು ಒಂದು ಹೊಂಡವನ್ನೂ ಮಾಡಿಸಿದ್ದ. ಆದರೆ ಅಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದ ಕಾರಣ ಯಾರ‍್ಯಾರೋ ಅಲ್ಲಿಗೆ ಬಂದು ಈಜಾಡಿ ಹೋಗುತ್ತಿದ್ದರು. ಇದು ಖೇಮು ಗಮನಕ್ಕೆ ಬಂತು. ಹೊಂಡದ ಮುಂದೆ, ಇದು ಖಾಸಗಿ ಸ್ವತ್ತು, ಇಲ್ಲಿ ಯಾರೂ ಈಜಬಾರದು ಎಂದು ಬೋರ್ಡ್ ಹಾಕಿಸಿದ. ಪ್ರಯೋಜನ ಆಗಲಿಲ್ಲ.
ಜನ ಬರ್ತಾನೆ ಇದ್ರು. ಹೀಗೇ ಒಂದು ದಿನ ಖೇಮು ತನ್ನ ಫಾರ್ಮ್ ಹೌಸಿಗೆ ಹೋದ. ಎಂದಿನಂತೆ ಅಲ್ಲಿ ಒಂದಷ್ಟು ಜನ ಹುಡುಗಿಯರು ಬಿಂದಾಸ್ ಆಗಿ ನೀರಿಗಿಳಿದು ಈಜಾಡುತ್ತಿದ್ದರು. ಅದನ್ನು ನೋಡಿ ಖೇಮುಗೆ ಸಿಟ್ಟು ಬಂತು. ತಕ್ಷಣ ಫಾರ್ಮ್ ಹೌಸಿನ ಒಳಗೆ ಹೋದವನೇ ಒಂದು ಚೀಲದಲ್ಲಿ ಏನೋ ತಂದ. ಅದನ್ನು ಹಿಡಿದುಕೊಂಡು ಹೊಂಡದ ಹತ್ತಿರ ಬಂದ. ಇವನನ್ನು ನೋಡಿ ಅವರಿಗೆಲ್ಲ ಗಾಬರಿ, ಜತೆಗೆ ನಾಚಿಕೆ. ಹಾಗಾಗಿ ಎಲ್ಲ ಹುಡುಗಿಯರೂ ನೀರೊಳಗೆ ಬಚ್ಚಿಟ್ಟುಕೊಂಡರು. ಅದನ್ನು ನೋಡಿದ ಖೇಮು ನೀವು ಹೊರಗೆ ಬರೋವರೆಗೂ ನಾನು ಇಲ್ಲಿಂದ ಹೋಗಲ್ಲ ಅಂದ. ಅದಕ್ಕೆ ಅವರು, ಹಲೋ ನೀವು ಇಲ್ಲೇ ಇದ್ರೆ ನಾವು ಹೆಂಗೆ ಹೊರಗೆ ಬರೋಕಾಗುತ್ತೆ, ಮೊದ್ಲು ಹೋಗ್ರಿ ಇಲ್ಲಿಂದ ಅಂತ ಖೇಮುವನ್ನೇ ದಬಾಯಿಸಿದರು.
ಅದಕ್ಕೆ ಖೇಮು ಹೇಳಿದ ನಾನೇನೂ ನಿಮ್ಮನ್ನ ಇಲ್ಲಿಂದ ಹೊರಗೆ ಕಳಿಸಬೇಕು ಅಂತ ಬಂದಿಲ್ಲ. ಹೊಂಡದಲ್ಲಿರೋ ಮೊಸಳೆಗಳಿಗೆ ಊಟ ಹಾಕೋಕೆ ಬಂದಿದೀನಿ ಅಷ್ಟೇ, ಉಳಿದಿದ್ದು ನಿಮ್ಮಿಷ್ಟ. ಅಷ್ಟೇ, ಎರಡು ನಿಮಿಷದಲ್ಲಿ ಹೊಂಡದಲ್ಲಿ ಒಬ್ಬ ಹುಡುಗೀನೂ ಇರಲಿಲ್ಲ.
ಲೂಸ್ ಟಾಕ್
ಯಡಿಯೂರಪ್ಪ (ಕಾಲ್ಪನಿಕ ಸಂದರ್ಶನ)
ಜಾರಕಿಹೊಳಿ ಪ್ರಕರಣದಲ್ಲಿ ಅವರು ನಿರಪರಾಧಿಯಾಗಿ ಹೊರಗೆ ಬರ್ತಾರೆ ಅಂತ ಹೇಳಿದ್ದೀರ. ಅಂದ್ರೆ ಇನ್ ಡೈರೆಕ್ಟ್ ಆಗಿ ಅವರನ್ನ ಒಳಗ್ ಹಾಕ್ತೀವಿ ಅಂತ ನೀವೇ ಹೇಳ್ತಿದೀರಾ?
ರೀ ಹಂಗೆ ಒಳಗ್ ಹಾಕ್ತೀವಿ ಅಂತೆ ಅನ್ಬೇಡ್ರೀ, ಈ ಸಿಡಿ ಸಿನಿಮಾಗಳನ್ನ ನೋಡಿದ ಮೇಲೆ ಇದೆ ತುಂಬಾ ಅಸಹ್ಯವಾಗಿ ಕೇಳ್ಸುತ್ತೆ.
ಸರಿ, ಹೋಗ್ಲಿ ಬಿಡಿ, ಈಶ್ವರಪ್ಪ ಅವರು ನಿಮ್ಮ ವಿರುದ್ಧನೇ ತಿರುಗಿ ಬಿದ್ದಿದ್ದಾರಲ್ಲ.
ಈಶ್ವರಪ್ಪ ಅವರಿಗೆ ಅಧಿಕಾರದ ಆಸೆ ಜಾಸ್ತಿ ಆಗಿದೆ. ಈ ಅಧಿಕಾರ ಎಲ್ಲ ನಶ್ವರ ಅಂತ ಗೊತ್ತಾದ್ಮೇಲೆ ಈಶ್ವರಪ್ಪ ಸರಿ ಹೋಗ್ತಾರೆ ಬಿಡಿ.
ಅದ್ಸರಿ, ಸಿನಿಮಾ ಥಿಯೇಟರ್‌ನಲ್ಲಿ ಮತ್ತೆ 50 ಪರ್ಸೆಂಟ್ ಮಾಡಿದ್ದೀರ. ಯುವರತ್ನ ರಿಲೀಸ್ ಆಗಿರೋ ಟೈಮಲ್ಲಿ ರಾಬರ್ಟ್ ಸಿನಿಮಾ ಸ್ಟೆ ಲಲ್ಲಿ ಥರ 50 ನಂಗಿರ್ಲಿ, 50 ನಿಂಗಿರ್ಲಿ ಅಂದ್ರೆ ಹೆಂಗೆ
ನೋಡಿ, ಅವರು ಖಾಸಗೀಕರಣದ ಬಗ್ಗೆ ಮಾತಾಡೋ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅವರ ಕಾಸಗೀಕರಣಕ್ಕೆ ಹೊಡೆತ ಬಿದ್ದಿದೆ. ಇದು ಅವರವರ ಖಾಸಗಿ ಸಮಸ್ಯೆ.
ಅಂದಹಾಗೆ ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರ ರಾಜ್ಯಭಾರ ಜಾಸ್ತಿ ಆಗಿದೆ ಅಂತ ಎಲ್ಲರೂ ಕಂಪ್ಲೇಂಟ್ ಮಾಡ್ತಾ ಇದ್ದಾರಲ್ಲ.
ಏನ್ ಮಾಡೋದು. ವಿಜಯ್ ಅಂತ ಹೆಸರಿಟ್ಟಿದ್ದಕ್ಕೆ ಅಮಿತಾಭ್ ಬಚ್ಚನ್ ಥರ ಆಂಗ್ರಿ ಯಂಗ್ ಮ್ಯಾನ್ ಆದ್ರೆ ಹ್ಯಾಂಗ್ರಿ ಅಂತ ಎಲ್ಲರೂ ಕೇಳ್ತಾ ಇzರೆ. ನಂಗಂತೂ ಈ ರಾಜ್ಯಭಾರಕ್ಕಿಂತ ರಾಜ್ಯನೇ ಭಾರ ಅನ್ನಿಸ್ತಿದೆ.
ಹೋಗ್ಲಿ ಬಿಡಿ, ಜಾಸ್ತಿ ತಲೆ ಕೆಡಿಸ್ಕೊಬೇಡಿ. ಇನ್ನೇನು ಐಪಿಎಲ್ ಶುರು ಆಗ್ತಿದೆ. ನೋಡ್ಕಂಡ್ ತಣ್ಣಗ್ ಇದ್ಬಿಡಿ
ಸುಮ್ನಿರಪ್ಪ ನೀನು, ಈವಾಗ್ ಹೆಂಗೋ ತಕ್ಕ ಮಟ್ಟಿಗೆ ಇದ್ದೀನಿ. ಈ ಐಪಿಎಲ್ ಅಂದ್ ಕೂಡ್ಲೇ ನಂಗೆ ಟ್ವೆಂಟಿ ಟ್ವೆಂಟಿ ಸರಕಾರ ನೆನಪಿಗ್ ಬರುತ್ತೆ.
ಲೈನ್ ಮ್ಯಾನ್
ಕೆಟ್ಟ ಕವಿತೆಗಳನ್ನ ಬರೆದ ಕವಿಯನ್ನ ಬೈದರೆ ಅದು
ಕವಿ ತೆಗಳು
ಇಂಡಿಯಾ ಹೀನಾಯವಾಗಿ ಸೋಲುತ್ತಿರುವ ಕ್ರಿಕೆಟ್ ಮ್ಯಾಚ್ ನಡೆಯುವಾಗ ಸ್ನೇಹಿತರಿಬ್ಬರ ನಡುವೆ ಮಾತುಕತೆ
ಮಗಾ, ನಾನು ಹೊರಗಡೆ ಇದ್ದೀನಿ, ಮ್ಯಾಚ್ ನೋಡಕಾಗ್ತಿಲ್ಲ. ಮಗಾ, ನಾನು ಮನೇಲೇ ಇದ್ದೀನಿ, ಆದ್ರೂ ಈ ಮ್ಯಾಚ್ ನೋಡಕಾಗ್ತಿಲ್ಲ.
ಕರೋನಾ ಭಯ ಇದ್ರೂ ಜನ ಒಟ್ಟಾಗಿ ಸೇರಿ ಜಾತ್ರೆ, ಹಬ್ಬ ಮಾಡೋದ್ ಬಿಟ್ಟಿಲ್ಲ
ನಮ್ ಜನಕ್ಕೆ ಹಬ್ಬ ಬೇಕು, ಆದ್ರೆ ಕರೋನಾ ಹಬ್ಬಬಾರದು.
ನಿಂತ್ಕೊಳ್ಳೋಕೂ ಆಗದಷ್ಟು ಕುಡಿದು ತೂರಾಡುತ್ತಿರುವವನದ್ದು
ಸ್ಟ್ಯಾಂಡ್ ಅಪ್ ಕಾಮಿಡಿ
ಮ್ಯಾರಥಾನ್ ಓಟದ ಸ್ಪರ್ಧೆಯ ಕಾಮೆಂಟರಿ
ರನ್ನಿಂಗ್ ಕಾಮೆಂಟರಿ
ಯಾರಿಗೆ ಯಾವ ಡಿಷ್ ಇಷ್ಟ?
ಪ್ಲಂಬರ್ – ನಲ್ಲಿ ಮೂಳೆ
ಕಾರ್ಪೆಂಟರ್ – ಗ್ರಿಲ್ ಚಿಕನ್
ಚಳಿಗಾಲದಲ್ಲಿ ತಿನ್ನೋಕಾಗದ ಚಿಕನ್ ಡಿಷ್
ಚಿಲ್ಲಿ ಚಿಕನ್
ಯುವರತ್ನ ಚಿತ್ರದ ಹಾಡುಗಳು
ಯುವರತ್ನನ್ ಪದಗಳು
ವಿದ್ಯಾಭ್ಯಾಸದ ಬಗ್ಗೆ ಮಾತಾಡುವ ಯುವರತ್ನ ಮಾಸ್ ಮೂವಿ ಅಲ್ಲ
ಕ್ಲಾಸ್ ಮೂವಿ
ಮಾತ್ರೆ ತಿನ್ನುವ ಚಟದ ಪರಮಾವಧಿ
ಮೆಡಿಕಲ್ ಸ್ಟೋರಿಗೆ ಹೋಗಿ, ಯಾವುದಾದ್ರೂ ಹೊಸ ಟ್ಯಾಬ್ಲೆಟ್ ಬಂದಿದೆಯಾ ಅಂತ ಕೇಳೋದು.