Friday, 22nd November 2024

ಕೊನೆಗೂ, ನಾನು ಸಹ ಕ್ಲಬ್ ಹೌಸಿಗೆ ಬಂದೆ !

ಬೇಟೆ

ಜಯವೀರ ವಿಕ್ರಮ ಸಂಪತ್‌ ಗೌಡ, ಅಂಕಣಕಾರರು

ಸಾಮಾಜಿಕ ಜಾಲ ತಾಣದ ಬಗ್ಗೆ ನನ್ನ ನಿಲುವು ಏನು ಎಂಬುದು ಈ ಅಂಕಣ ಓದುವವರಿಗೆ ಗೊತ್ತು. ಈ ಬಗ್ಗೆ ಈಗಾಗಲೇ ನಾನು ಒಂದು ಅಂಕಣವನ್ನೇ ಬರೆದಿದ್ದೇನೆ. ಅದರ ಬಗ್ಗೆ ಒಂದಷ್ಟು ಚರ್ಚೆಗಳಾದವು ಎಂಬುದು ನನಗೆ ಗೊತ್ತಾದವು. ನಾನು ಸಾಮಾಜಿಕ ಜಾಲತಾಣಕ್ಕೆ ಬಂದರೆಷ್ಟು ಬಿಟ್ಟರೆಷ್ಟು ಎಂದು
ನಾನು ಭಾವಿಸಿದ್ದರೂ, ಅನೇಕರಿಗೆ ನಾನು ಅಲ್ಲಿರದಿರುವುದೇ ನನ್ನ ಇರುವಿಕೆಯ ಬಗ್ಗೆ ಅನುಮಾನ ಮೂಡಿದೆ.

ನಾನು ಸಾಮಾಜಿಕ ಜಾಲತಾಣಕ್ಕೆ ಬರದೇ ಇರಲು ಅದೂ ಒಂದು ಕಾರಣ. ನಾನು ಫೇಸ್ ಬುಕ್‌ನಲ್ಲಿ ಇಲ್ಲದಿದ್ದ ಮಾತ್ರಕ್ಕೆ ನನಗೆ ಮುಖ (ವ್ಯಕ್ತಿತ್ವ)ವೇ ಇಲ್ಲವಾ? ನಾನು ಇರುವುದೇ ಸುಳ್ಳಾ? ವಿಚಿತ್ರ ಜನಾರಪ್ಪಾ. ಅದೇನೇ ಇರಲಿ ನಾನು ಯಾರಿಗೂ ಉತ್ತರ ನೀಡಬೇಕಿಲ್ಲ. ನನ್ನ ಹೆಸರಿನಲ್ಲಿ ಕೆಲವರು ಫೇಸ್ ಬುಕ್ ಮತ್ತು ಟ್ವಿಟರಿನಲ್ಲಿ ಖಾತೆಗಳನ್ನು ತೆರೆದಿದ್ದಾರೆ ಎಂಬುದೂ ನನ್ನ ಗಮನಕ್ಕೆ ಬಂದಿದೆ. ಆದರೆ ನಾನಂತೂ ಯಾವ ಪ್ಲಾಟ್ ಫಾರ್ಮ್‌ನಲ್ಲೂ ಇಲ್ಲ. ಅದರಿಂದ ನನಗೆ ಸಮಾಧಾನವಿದೆ. ಕಿಂಚಿತ್ತೂ ವಿಷಾದವಿಲ್ಲ. ಆ ಸಮಯವನ್ನು ನಾನು ನಿಜಕ್ಕೂ ಉತ್ಪಾದಕ ಕೆಲಸಕ್ಕೆ ಬಳಸುತ್ತೇನೆ. ನಮಗೆ ಎಲ್ಲಿ ಸಂತಸ ಮತ್ತು ಸಮಾಧಾನ ಸಿಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಕೆಲವರಿಗೆ ನಿದ್ದೆ ಮಾಡಿದರೂ ಅದು ಸಿಗಬಹುದು. ಹಾಗಂತ ದಿನದಲ್ಲಿ ಆರೇಳು ತಾಸಿಗಿಂತ ಹೆಚ್ಚು ಮಾಡಲು ಆಗುವುದಿಲ್ಲ. ನನ್ನ ನೆಮ್ಮದಿ ಎಲ್ಲಿದೆ ಎಂಬುದು
ನನಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ ನಾನು ಅದನ್ನು ಅರಸುತ್ತಾ ಸಾಮಾಜಿಕ ಜಾಲತಾಣಗಳಿಗೆ ಬರುವುದಿಲ್ಲ. ಈಗಲೂ ಹೇಳುತ್ತೇನೆ, ಅದು ನನ್ನ ಅಭಿರುಚಿಯ ತಾಣವಲ್ಲ. ಪ್ರತಿ ಊರಲ್ಲೂ ಒಂದಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಅವೆಲ್ಲವೂ ಆಸಕ್ತಿದಾಯಕವಾಗಿರಬಹುದು. ಆದರೆ ಅವುಗಳನ್ನು ಕೇಳಲು, ತಿಳಿದುಕೊಳ್ಳಲು ಯಾರಿಗೆ ಪುರುಸೊತ್ತಿದೆ? ಅಷ್ಟಕ್ಕೂ ಅವೆಲ್ಲವನ್ನೂ ತಿಳಿದುಕೊಂಡು ಏನು ಮಾಡೋದು? ಈ ಪ್ರಶ್ನೆ ನನ್ನನ್ನು ಸದಾ ಕಾಡುತ್ತದೆ. ಸ್ವತಃ ವಿಶ್ವೇಶ್ವರ ಭಟ್ಟರು
ಹೇಳಿದರೂ ನಾನು ಜಗ್ಗಲಿಲ್ಲ. ನಂಜನಗೂಡು ಮೋಹನಣ್ಣ ಬೇರೆ ತಲೆ ಮೇಲೆ ಬೆಣ್ಣೆ ತಟ್ಟುತ್ತಾರೆ. ಇಷ್ಟಾಗಿಯೂ ನಾನು ಅಲಕ್ ನಿರಂಜನ್!

ಇವನಿಗೆ ಕೊಬ್ಬು ಅಂತ ತಿಳಿದುಕೊಂಡರೆ ತಿಳಿದುಕೊಳ್ಳಲಿ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಸೂರಿಲ್ಲದವನಿಗೆ ಆಕಾಶವೇ ಚಪ್ಪರ ಎಂದು ಭಾವಿಸಿದ ವನು ನಾನು. ನನಗೆ ireverent ಆಗಿ ಬದುಕುವುದು ಇಷ್ಟ. ಪ್ರಕೃತಿ ಇರೋದೇ ಹಾಗೆ. ಪ್ರಾಣಿಗಳಿರುವುದೂ ಹಾಗೆ. ಈ ಮನುಷ್ಯ ಮಹಾ ನಕರಾ. ಮುಂಡೇದು ಬರೀ ನಾಟಕ ಮಾಡುತ್ತೆ. ನಾಟಕ, ಪ್ರದರ್ಶನ, ಸೋಗಲಾಡಿತನದ ನಮ್ಮ ಬದುಕು ಅರ್ಧ ಕಳೆದುಬಿಡುತ್ತದೆ. ನಾವು ನಾವಾಗಿ ಇರಲು ಆಗುವುದಿಲ್ಲ. ಬೇರೆಯವ ರಿಗೆ ಬೇಸರವಾಗುವುದೋ, ಬೇರೆಯವರು ಏನೆಂದು ಭಾವಿಸುತ್ತಾರೋ ಎಂದು ನಮ್ಮ ನಡೆ-ನುಡಿಯಲ್ಲಿ ಬಹಳ ತಿದ್ದುಪಡಿ ಮಾಡಿಕೊಂಡು ನಮ್ಮದಲ್ಲದ ಬಾಳ್ವೆಯನ್ನು ಮಾಡುತ್ತೇವೆ. ಅಷ್ಟಕ್ಕೂ ನಾವು ಹೋದ ಮೇಲೆ ಯಾರೂ ನಮ್ಮನ್ನು ನೆನಪಿಸಿಕೊಳ್ಳುವುದಿಲ್ಲ.

ನೆನಪಿಸಿಕೊಂಡರೂ ಅದು ನಮಗಂತೂ ಗೊತ್ತಾಗುವುದಿಲ್ಲ. ಹೀಗಾಗಿ ನನ್ನ ಬಗ್ಗೆ ಯಾರು ಏನು ಅಂದುಕೊಂಡರೆ ನನಗೇನಾಗುತ್ತದೆ? ಆದರೂ ಮೊನ್ನೆ ಸಂಪಾದಕ ವಿಶ್ವೇಶ್ವರ ಭಟ್ಟರು ಅದೇನೋ ಕ್ಲಬ್ ಹೌಸ್‌ನಲ್ಲಿ ಮಾತಾಡುತ್ತಿದ್ದರು. ನನ್ನ ಸ್ನೇಹಿತ ಅರೇಹಳ್ಳಿ ರಾಮು, ‘ನಿನ್ನ ಎಡಿಟರ್ ಮತ್ತು ನಿನ್ನ ಸ್ನೇಹಿತರಾದ
ಮೋಹನಣ್ಣ ಮಾತಾಡುತ್ತಿದ್ದಾರೆ’ ಎಂದ. ಮಾತಾಡಿಕೊಳ್ಳಲಿ ಬಿಡು ಅಂದೆ. ನನ್ನ ಸ್ವಭಾವ ಗೊತ್ತಿದ್ದ ರಾಮು, ಹೆಚ್ಚು ಒತ್ತಾಯಿಸಲಿಲ್ಲ. ಆದರೆ ಆತನ ಮೊಬೈಲಿ ನಿಂದ ಬರುತ್ತಿದ್ದ ಮಾತುಗಳು ಕೇಳುತ್ತಿದ್ದವು. ನಾನು ನಿರುದ್ವಿಗ್ನನಾಗಿ ಅವರ ಮಾತುಗಳನ್ನು ಕೇಳುತ್ತಿದ್ದೆ.

ನಾನು ಯಾವತ್ತೂ ಗುಮಾನಿಯಿಂದಲೇ ನೋಡುವ ವಿನಯ ಗುರೂಜೀ ಮಾತಾಡುತ್ತಿದ್ದರು. ಈ ಗುರೂಜೀ, ಸ್ವಾಮಿಜೀಗಳಿಗೆ ಯಾರು ನಾಮಕರಣ ಮಾಡುತ್ತಾರೋ ಏನೋ? ನನಗೆ ಈ ಬಗ್ಗೆ ದೊಡ್ಡ ತಕರಾರಿದೆ. ಇವತ್ತಿನ ತನಕ ಸಾಮಾನ್ಯ ಮನುಷ್ಯರಿದ್ದವರು, ನಾಳೆ ಏಕಾಏಕಿ ಪೀಠಾಧಿಪತಿಗಳಾಗುತ್ತಾರೆ, ಅವರಿಗೆ ಜನ ದುಬುದುಬು ಅಡ್ಡ ಬೀಳುತ್ತಾರೆ. ಜೈಕಾರ ಕೂಗುತ್ತಾರೆ. ಇರಲಿ, ನನಗೆ ಅರ್ಥವಾಗದ ವಿಷಯ.

ಕ್ಲಬ್ ಹೌಸಿನಲ್ಲಿ ವಿನಯ ಗುರೂಜೀ ಒಂದು ಓಘದಲ್ಲಿ ಮಾತಾಡುತ್ತಿದ್ದರು. ಹೀಗೆ ಬದುಕಬೇಕು ಎಂದು ಉಪದೇಶ ಮಾಡುವುದು ಸುಲಭ. ಯಾವ ಸ್ವಾಮಿಜೀ ಗಳಿಗೂ ಸಂಸಾರ ಕಷ್ಟ ಗೊತ್ತಿರುವುದಿಲ್ಲ. ಅವರಿಗೆ ವ್ಯಾವಹಾರಿಕ ಜ್ಞಾನ ಇರುವುದಿಲ್ಲ. ಆದರೂ ಅವರು ಸುಂದರ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂದು ಭಾಷಣ ಮಾಡುತ್ತಾರೆ. ನೆಟ್ಟಗೆ ಇವರಾರಿಗೂ ತಮ್ಮ ಮಠಗಳನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಇವರೇ ನೂರೆಂಟು ರಾಜಕಾರಣ ದಲ್ಲಿ ಮುಳುಗಿರುತ್ತಾರೆ. ಇವರು ದೇವರ ಕೆಲಸ ಮಾಡುವುದೊಂದನ್ನು ಬಿಟ್ಟು ಬೇರೆಲ್ಲ ಕೆಲಸ ಮಾಡುತ್ತಾರೆ.

ಈ ವಿನಯ ಗುರೂಜೀ ಸುಮ್ಮನಿರಲು ಏನು ತೆಗೆದುಕೊಳ್ಳುತ್ತಾರೆ? ನಿಖಿಲ್ ಕುಮಾರಸ್ವಾಮಿಗೆ ಗಂಡು ಮಗುವಾದರೇನು, ಹೆಣ್ಣು ಮಗುವಾದರೇನು? ಅವನ ಹೊಟ್ಟೆಯಲ್ಲಿ ಹುಟ್ಟುವ ಮಗುವೇನು ಶ್ರೀಕೃಷ್ಣನಾ, ಶಿವಾಜಿಯಾ? ಅಷ್ಟಕ್ಕೂ ಅವನ ಪತ್ನಿ ಜೀಜಾಬಾಯಿಯಾ? ಗುರೂಜೀ ಎಂದು ಕರೆಯಿಸಿಕೊಂಡವರಿಗೆ ಮಾಡಲು ಬೇರೆ ಕೆಲಸಗಳಿಲ್ಲವಾ? ವಿನಯ ಗುರೂಜೀ ಹಾಗೆ ಮಾತಾಡಬಾರದು.

ನಾಳೆ ನಾನೂ ‘ಜಯವೀರ ಗುರೂಜಿ’ ಎಂದು ಬೋರ್ಡ್ ಹಾಕಿಕೊಂಡು, ಕಾಲಜ್ಞಾನಿ ಹರಿಶ್ಚಂದ್ರ ಗೌಡರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿದರೆ, ಬಕ್ವಾಸ್! ಮಾತಾಡುವ ಬಾಯಿಯಲ್ಲಿ ಮತ್ತೇನೋ ಬರಬಾರದು.

ನಾನ್ ಸೆನ್ಸ್! ವಿನಯ ಗುರೂಜೀ ಪ್ರಕಾರ, ಮುಂದಿನ ಚುನಾವಣೆಯ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿಯುವುದಾದರೆ, ಚುನಾವಣೆಯನ್ನಾದರೂ ಏಕೆ ಮಾಡಬೇಕು? ಇಂಥ ವಿಷಯಗಳಲ್ಲಿ ಅವರು ಸಂಯಮ ಮೆರೆಯಬೇಕು. ಹಾಗೆ ಸಾರ್ವಜನಿಕವಾಗಿ ಜ್ಯೋತಿಷ್ಯದ ಅಂಗಡಿ ತೆರೆದಿಡಬಾರದು. ವಿನಯ ಗುರೂಜೀ ಒಬ್ಬ ವ್ಯಕ್ತಿ ಹೇಗೆ ನಡೆದುಕೊಳ್ಳಬೇಕು ಎಂದು ಬಹಳ ಸೊಗಸಾಗಿ ಮಾತಾಡಿ, ಕೊನೆಯಲ್ಲಿ ಯಾವನೋ ಮನೋಜ ಎಂಬ
ಕೇಳಿದ ಪ್ರಶ್ನೆಗೆ, ತಮ್ಮ ಮನಸ್ಸಿನ ವಿಕಾರವನ್ನು ಪ್ರದರ್ಶಿಸಿಬಿಟ್ಟರು. ಅಲ್ಲಿ ತನಕ ಅವರು ಹೇಳಿದ್ದೇ ನೀರಿನಲ್ಲಿ ಹೋಮ ಮಾಡಿದಂತಾಯಿತು.

ಅದಾದ ಬಳಿಕ ರಾಮು ಬಂದು ಸುಧಾಮೂರ್ತಿಯವರ ಕಾರ್ಯಕ್ರಮವಿದೆ ಎಂದು ಹೇಳಿದ. ಅವರ ಮಾತುಗಳನ್ನು ನಾನು ಕೇಳಿರಲಿಲ್ಲ. ಅವರ ಬಗ್ಗೆ ನಾನು ಇಲ್ಲಿಯ ತನಕ ಯಾರೂ ಲಘುವಾಗಿ ಮಾತಾಡಿದ್ದನ್ನೂ ಕೇಳಿಲ್ಲ. ಆದರೂ ನನ್ನ ಒಬ್ಬ ಸ್ನೇಹಿತ, ‘ಸುಧಾಮೂರ್ತಿಯವರು ದಾನ ಮಾಡುವುದರಲ್ಲಿ ಹೆಚ್ಚು ಗಾರಿಕೆಯಿಲ್ಲ. ಜನರ ಹಣವನ್ನು ಜನರಿಗೆ ಕೊಡುತ್ತಾರೆ ಅಷ್ಟೇ’ ಎಂದಾಗ ನಾನು ಅವನ ಜತೆ ತಾರಾಮಾರಾ ಜಗಳ ತೆಗೆದಿದ್ದೆ. ಜನರಿಂದ ಬಂದ ಹಣವನ್ನು ಎಷ್ಟು ಜನ ವಾಪಸ್ ಜನರಿಗೆ ಕೊಡುತ್ತಾರೆ? ಅಷ್ಟಕ್ಕೂ ಸುಧಾಮೂರ್ತಿಯವರು ತಮಗೆ ಬಂದ ಹಣವನ್ನು ಜನರಿಗೇಕೆ ಕೊಡಬೇಕು? ಕೊಡದಿದ್ದರೆ ಯಾರಾದರೂ ಪ್ರಶ್ನಿಸುತ್ತಿದ್ದರಾ? ಆ ಹಣದಲ್ಲಿ ಅವರು ವಿದೇಶಗಳಲ್ಲಿ ವಿಲಾಸಿ ಜೀವನವನ್ನು ನಡೆಸಬಹುದಿತ್ತಲ್ಲ? ವಾರಕ್ಕೊಂದು ದೇಶಕ್ಕೆ ಹೋಗಿ ಶಾಪಿಂಗ್ ಮಾಡುತ್ತಾ
ಕಳೆಯಬಹುದಿತ್ತಲ್ಲ? ನಮ್ಮ ರಾಜ್ಯವನ್ನಾಳಿದ ರಾಜಕಾರಣಿಗಳ ಪೈಕಿ ಎಷ್ಟು ಜನ ಸುಧಾಮೂರ್ತಿಯವರಂತೆ, ಸಮಾಜಕ್ಕೆ ಕೊಟ್ಟಿದ್ದಾರೆ? ನೂರಾರು ಕೋಟಿ
ಬಾಚಿಕೊಂಡವರು ಯಾಕೆ ಬಿಡಿಗಾಸನ್ನೂ ಕೊಡದೇ ಹೋದರು? ಈ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿರಲಿಲ್ಲ.

‘ಇನ್ನೊಮ್ಮೆ ಇಂಥ ಲೂಸ್ ಟಾಕ್ ಮಾಡಬೇಡ’ ಎಂದು ಗಟ್ಟಿ ದನಿಯಲ್ಲಿ ಹೇಳಿದೆ. ಅಂದು ಸುಧಾಮೂರ್ತಿಯವರು ಹೇಳಿದ ಮಾತುಗಳನ್ನು ಕೇಳಿ ಈ ಸಮಾಜ ದಲ್ಲಿ ಮೌಲ್ಯಗಳು ದುಡ್ಡಿನ ಮುಂದೆ ಕರಗಿ ಹೋಗುವುದಿಲ್ಲ ಎಂಬುದು ಖಾತ್ರಿಯಾದಂತಾಯಿತು. ಭಾನುವಾರ ನಾನು ಬಹುದೂರ ಒಬ್ಬನೇ ಸೈಕಲ್ ಸವಾರಿ ಮಾಡುತ್ತೇನೆ. ಆ ದಿನ ವಿದ್ಯಾಭೂಷಣರ ಕ್ಲಬ್ ಹೌಸ್ ಇದೆ ಎಂದು ರಾಮು ಹೇಳಿದ. ನಿನ್ನ ಮೊಬೈಲನ್ನು ಸ್ವಲ್ಪ ಹೊತ್ತು ಕೊಡು ಎಂದೆ. ನಾನೂ ಅವರ ಮಾತು ಗಳನ್ನು ಕೇಳಬೇಕು ಎಂದು ಆತ ಹೇಳಿದ. ಆ ದಿನ ನಾನು ಸೈಕ್ಲಿಂಗ್ ಹೋಗುವುದನ್ನು ಬಿಟ್ಟು, ವಿದ್ಯಾಭೂಷಣರ ಮಾತು ಮತ್ತು ಹಾಡುಗಳಿಗೆ ಕಿವಿಯಾದೆ. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನನಗೆ ಅವರ ಬಗ್ಗೆ ವಿಶೇಷವಾದ ಗೌರವ ಮೂಡಿತು. ಆದರೆ ಕೊನೆಯಲ್ಲಿ ಅವರು ಮಾತುಗಳು ಬಹು ಯೋಚಿಸು ವಂತೆ ಮಾಡಿತು.

ಅದೇನೆಂದರೆ, ಬಾಲ್ಯ ವಿವಾಹದಂತೆ ಬಾಲ್ಯ ಸನ್ಯಾಸವನ್ನೂ ನಿಷೇಧಿಸಬೇಕು ಎಂದು ಅವರು ಹೇಳಿದರು. ಇದ್ಯಾಕೋ ಸರಿ ಎಂದು ಎನಿಸಲಿಲ್ಲ. ಇವರಿಗೆ ಬಾಲ್ಯ ಸನ್ಯಾಸ ಸರಿ ಬರಲಿಲ್ಲ ಎಂಬ ಕಾರಣಕ್ಕೆ ಅದನ್ನೇ ನಿಷೇಧಿಸಬೇಕು ಎಂದು ಹೇಳುವುದು ಎಷ್ಟು ಸರಿ? ಬಾಲ ಸನ್ಯಾಸಕ್ಕೆ ಅದರದೇ ಆದ ಮಹತ್ವವಿದೆ. ಶಾಸದಲ್ಲಿ ಆ ಬಗ್ಗೆ ಸಾಕಷ್ಟು ವಿವರಣೆಯಿದೆ. ಬಾಲ ಸನ್ಯಾಸ ಶ್ರೇಷ್ಠವಾದುದು. ಅದೊಂದು ಕಠಿಣ ತಪಸ್ಸು. ಬುದ್ಧಿ ಬಲಿಯದಿದ್ದಾಗಲೇ, ಸನ್ಯಾಸಕ್ಕೆ ಮನಸ್ಸನ್ನು ಹೊರಳಿಸು ವುದು ಶಿಕ್ಷೆಯಲ್ಲ, ಅದೊಂದು ಶಿಸ್ತು.

ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮಾನಸಿಕವಾಗಿ, ಶಾರೀರಿಕವಾಗಿ ಸ್ವಲ್ಪವೂ ಮಲೀನ ಮಾಡಿಕೊಳ್ಳದವನೇ ಸನ್ಯಾಸ. ಅವನ ಆತ್ಮ ತಿಳಿನೀರಿನಷ್ಟೇ ಪ್ರಚ್ಛನ್ನ. ಬಾಲ ಸನ್ಯಾಸಕ್ಕೆ ದಾರ್ಶನಿಕರು ಆಳವಾದ ವಿವರಣೆ ಕೊಟ್ಟಿದ್ದಾರೆ. ಶಂಕರಾಚಾರ್ಯರು ಸಹ ಈ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಹಿಂದೂ ಧರ್ಮದ ಆಚರಣೆ, ಪದ್ಧತಿಯ ಬಗ್ಗೆ ಅವರು ನೀಡಿದ ವಿವರಣಗಳು ಬಾಲ್ಯ ಸನ್ಯಾಸ ಪದ್ಧತಿಯನ್ನು ಎತ್ತಿ ಹಿಡಿಯುತ್ತವೆ. ಶಂಕರರೂ ಬಾಲ ಸನ್ಯಾಸಿಗಳೇ. ಅದರಲ್ಲಿ ದೋಷಗಳಿ ದ್ದಿದ್ದರೆ, ಅವರು ಅದನ್ನು ಖಂಡಿಸದೇ ಬಿಡುತ್ತಿರಲಿಲ್ಲ. ಈ ಎಲ್ಲಾ ಸಂಗತಿಗಳನ್ನು ಬಲ್ಲ ವಿದ್ಯಾಭೂಷಣರು ಅಂದು ಹಾಗೇಕೆ ನುಡಿದರೋ ನಾಕಾಣೆ. ಅಂದಿನಿಂದ ನನ್ನ ಸೈಕಲ್ ಸವಾರಿಗೆ, ಕ್ಲಬ್ ಹೌಸ್ ಸಾಥಿಯಾಗುತ್ತಿದೆ.

ನಾನೂ ಕ್ಲಬ್ ಹೌಸಿಗೆ ಬಂದೆ. ಆದರೆ ಸಾಮಾಜಿಕ ಜಾಲತಾಣಗಳ ಬಗ್ಗೆ ನನ್ನ ಅಭಿಪ್ರಾಯ ಬದಲಾಗಿಲ್ಲ. ಹಾಗಂತ ನನಗೆ ಕೇಳುವುದು ಇಷ್ಟವೇ ಹೊರತು
ಮಾತಾಡುವುದಲ್ಲ. ಕೆಲವು ಸಲ ನನ್ನ ಮಾತೇ ನನಗೆ ಹೇಸಿಗೆ. ನಾನು ಕಿವಿಯಾಗಿಯೇ ಇರಬೇಕು. ಒಳ್ಳೆಯ ಸಂಗತಿಗಳಿಗೆ ನಾನು ಅಣೆಕಟ್ಟೆ ಆಗಬೇಕು. ಕ್ಲಬ್ ಹೌಸ್ ಬಂದ ನಂತರ ಎಲ್ಲರೂ ಮಾತಾಡುವುದನ್ನು ಮತ್ತಷ್ಟು ಕಡಿಮೆ ಮಾಡಬೇಕು. ಆಗಲೇ ಕ್ಲಬ್ ಹೌಸ್ ಚೆನ್ನಾಗಿರುತ್ತದೆ.