Saturday, 14th December 2024

ಫಿನ್’ಲ್ಯಾಂಡ್ ಮಹಿಳಾ ಪ್ರಧಾನಿ ಹೇಳುವ ಸಂತೋಷದ ಪಾಠ !

ತನ್ನಿಮಿತ್ತ

ಮಲ್ಲಿಕಾರ್ಜುನ ಹೆಗ್ಗಳಗಿ

ನಾಗರಿಕರ ಸಂತೋಷ ಕ್ರಮಾಂಕದಲ್ಲಿ ಫಿನ್ ಲ್ಯಾಂಡ್ ದೇಶ ಜಗತ್ತಿನ ಪ್ರಥಮ ಸ್ಥಾನ ಪಡೆದಿದೆ. ಫಿನ್‌ಲ್ಯಾಂಡ್ ಮಹಿಳಾ ಪ್ರಧಾನಿ
ಸನ್ನಾ ಮರಿನ್ ಅವರನ್ನು ಈಚೆಗೆ ನಡೆದ ವರ್ಚುವಲ್ ಸಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.

ಪ್ರತಿವರ್ಷ ಮಾರ್ಚ್ 20 ರಂದು ಜಗತ್ತಿನ ಸಂತೋಷದ ದಿನವಾಗಿ ಆಚರಿಸಲಾಗುತ್ತದೆ. ಫಿನ್‌ಲ್ಯಾಂಡ್ ನಾಗರಿಕರ ಸಂತೋಷ ವೃದ್ಧಿಗೆ ಮತ್ತು ಜಗತ್ತಿನ ಸಂತೋಷ ಶ್ರೇಯಾಂಕದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುವುದಕ್ಕೆ ಪ್ರಧಾನಿ ಸನ್ನಾ ಮರಿನ್ ಅವರ ಕೊಡುಗೆ ಬಹಳ ದೊಡ್ಡದು. ಪ್ರಧಾನಿ ಸನ್ನಾ ಅವರು ವಾರದ ದುಡಿಮೆಯ ಕಾಲಾವಧಿಯನ್ನು 6 ದಿನಗಳಿಗೆ ಬದಲಾಗಿ 5 ದಿನಕ್ಕೆ ಇಳಿಕೆ ಮಾಡಿದ್ದಾರೆ.

ವಾರದಲ್ಲಿ ಎರಡು ದಿನ ಕುಟುಂಬದವರೊಂದಿಗೆ ಕಳೆದರೆ ಆರೋಗ್ಯ – ಸಂತೋಷ – ನೆಮ್ಮದಿ ಮತ್ತು ಶಾಂತಿ ವೃದ್ಧಿಸುತ್ತದೆ. ಇದುವೇ ನಿಜವಾದ ಯೋಗ ಎನ್ನುವುದು ಸನ್ನಾ ಅವರ ಚಿಂತನೆಯಾಗಿದೆ. ಉತ್ತರ ಯುರೋಪಿನ ಅತ್ಯಂತ ಸುರಕ್ಷಿತ ನಾಗರಿಕ ದೇಶ ಎಂಬ ಹೆಸರು ಪಡೆದಿರುವ ಫಿನ್‌ಲ್ಯಾಂಡ್ ದೇಶದ ಪ್ರಧಾನಿಯಾಗಿ ಸನ್ನಾ ಮರಿನ್ ಕಳೆದ ಡಿಸೆಂಬರ್ 12ರಂದು
ಆಯ್ಕೆಯಾಗಿದ್ದಾರೆ.

ಕೇವಲ 34 ವರ್ಷದ ಮರಿನ್ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾಗಿದ್ದಾರೆ. ಇದಿಷ್ಟೇ ಅವರ ಹೆಗ್ಗಳಿಕೆಯಲ್ಲ, ಅವರ ಬದುಕಿನ ಕಥೆ ತುಂಬ ರೋಚಕವಾಗಿದೆ. ಧೈರ್ಯ, ತಾಳ್ಮೆ ಮತ್ತು ಬದ್ಧತೆಯಿಂದ ನಡೆದರೆ ಎಂಥದೊಡ್ಡ ಎತ್ತರಕ್ಕೆ ಏರಬಹುದು ಎಂಬುದಕ್ಕೆ ಸಾಕ್ಷಿಯಾಗಿ ಅವರು ನಿಂತಿದ್ದಾರೆ. ಫೀನ್‌ಲ್ಯಾಂಡ್ ದೇಶದ ನಾಗರಿಕ ವೇದಿಕೆ ಅವರನ್ನು 2019ನೆಯ ವರ್ಷದ ವರ್ಲ್ಡ್ ವುಮನ್ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಜನರು ತಮ್ಮ ಕುಟುಂಬ ಸದಸ್ಯರು ಮತ್ತು ಆತ್ಮೀಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ. ಸಂಸ್ಕೃತಿ ಹವ್ಯಾಸ ಗಳು ಸೇರಿದಂತೆ ಇತರೆ ಚಟುವಟಿಕೆ ಹೆಚ್ಚಿನ ಸಮಯ ಬೇಕಾಗಿದೆ. ಹೀಗಾಗಿ ಕೆಲಸದ ಅವಧಿಯನ್ನು ಕಡಿಮೆ ಮಾಡಿದ್ದೇವೆ. ಎಂದು ಅವರು ಫೀನ್‌ಲ್ಯಾಂಡ್ ಜನತೆಗೆ ಹೇಳಿದ್ದಾರೆ. ಆ ದೇಶದ ಜನ ಕೂಡ ಸಂತೋಷದಿಂದ ಕುಣಿದು ಈ ನಿರ್ಧಾರವನ್ನು ಸ್ವಾಗತಿಸಿ ದ್ದಾರೆ. ಸನ್ನಾ ಮರಿನ್ ವ್ಯಕ್ತಿತ್ವ ವಿಕಸನ ಮತ್ತು ಸಮಾಜ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ಬದುಕಿನ ಮುಖ್ಯ ಆಶಯ ಸಂತೋಷ ಪ್ರಾಪ್ತಿ. ಫೀನ್‌ಲ್ಯಾಂಡ್ ಸಂತೋಷ ಜೀವಿಗಳ ದೇಶವಾಗಿದೆ. ಜಗತ್ತಿನ ಸಂತೋಷ
ನಾಗರಿಕರ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಅದು ನಿರಂತರವಾಗಿ ಹೀಗೆ ಮುಂದುವರಿಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆ ಹೋಗಿರಿ. ಎಲ್ಲರೂ ಒಂದೆಡೆ ಕುಳಿತುಕೊಂಡು ಊಟ ಮಾಡಿ ಎನ್ನುವುದು ಅವರ ನಿರಂತರ ಸಂದೇಶವಾಗಿದೆ. ಸದಾ ನಗುವ ನಗೆಮೊಗದ ಮರಿನ್ ಬದುಕಿನ ಕಥೆ ನೋವು ಅಪಮಾನಗಳಿಂದ
ತುಂಬಿದೆ.

ಎಲ್ಲ ಕೀಳರಿಮೆಗಳ ನಡುವೆಯೂ ಅವರು ಬೌದ್ಧಿಕವಾಗಿ ಅತ್ಯಂತ ಕ್ರಿಯಾಶೀಲರಾಗಿರುವುದು ಅವರ ಗೆಲುವಿನ ಗುಟ್ಟು. ತಂದೆ ಸದಾ ಕುಡಿದು ಕೂಗಾಡುತ್ತಿದ್ದರು. ಈ ಕಾರಣಕ್ಕೆ ತಾಯಿ ವಿಚ್ಛೇದನ ಪಡೆದರು. ಹಣಕಾಸಿನ ಮುಗ್ಗಟ್ಟು ಬಹಳ ಕಾಡುತ್ತಿತ್ತು. 14 ನೇ ವಯಸ್ಸಿಗೆ ಮರಿನ್ ಖಾಸಗಿ ಬೇಕರಿಯಲ್ಲಿ ಬೆಡ್ ಬೇಯಿಸುವ ಕೆಲಸಕ್ಕೆ ಸೇರಿದರು. ವಾಸಕ್ಕೆ ಮನೆ ಇರಲಿಲ್ಲ. ಅವರ ತಾಯಿ ಸ್ನಾನಗೃಹವನ್ನೇ ವಾಸದ ಮನೆ ಮಾಡಿಕೊಂಡಿದ್ದರು. ಅವರದು ರೆಸಬೋ ಎಂಬ ತೀರ ಹಿಂದುಳಿದ, ಅಪಮಾನಕ್ಕೆ ಗುರಿಯಾದ
ಕುಟುಂಬ.

ತಮ್ಮ ಬಾಲ್ಯದ ದಿನಗಳನ್ನು ಅವರು ಬೇಕರಿಯಲ್ಲಿಯೇ ಕಳೆದರು. ಕುಟುಂಬದ ಸದಸ್ಯರು ಅನಕ್ಷರಸ್ಥರು. ಶಾಲೆ, ಓದು ಎಂದರೆ ತಾಯಿಯೇ ಸಿಡಿಮಿಡಿಗೊಳ್ಳುತ್ತಿದ್ದರು. ಶಾಲೆಯ ಸಹಪಾಠಿಗಳು ಹರಕು ಬಟ್ಟೆಯಲ್ಲಿ ಬರಿಗಾಲಿನಿಂದ ಶಾಲೆಗೆ ಬಂದು ಸಾಧಿಸುವುದು ಏನಿದೇ ಎಂದು ಕೇಳುತ್ತಿದ್ದರು. ಶಿಕ್ಷಣದಿಂದಲೇ ಈ ಎಲ್ಲ ಅಪಮಾನ ಗೆಲ್ಲಬೇಕೆಂಬ ಛಲದಿಂದ ಮರೀನ್ ಬೇಕರಿಯಲ್ಲಿ ಕೆಲಸ ಮಾಡುತ್ತಲೇ ಓದು ಮುಂದುವರಿಸಿದರು. ಇವರ ಪ್ರತಿಭೆಯನ್ನು ಗುರುತಿಸಿ ಸರಕಾರ ನೆರವಿಗೆ ಬಂದಿತು. ಯುನಿವರ್ಸಿಟಿ ಆಫ್ ಟ್ಯಾಂಪೇರ್‌ನಿಂದ ಅತಿ ಹೆಚ್ಚು ಅಂಕದೊಂದಿಗೆ ಪದವಿ ಪಡೆದರು.

ಫಿನಿಷ್, ಇಂಗ್ಲಿಷ್ ಮತ್ತು ಸ್ವೀಡಿಷ್ ಭಾಷೆಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿದರು. ಅಲ್ಲಿನ ಸಾಹಿತ್ಯ ಮತ್ತು ದೇಶದ ಹಿರಿಮೆ ಹೇಳುವ ಸಾಂಸ್ಕೃತಿಕ ಹಾಡುಗಳು ಅವರಿಗೆ ಕಂಠಪಾಠ ವಾಗಿವೆ. ದೇಶದ ಹಿರಿಮೆಯ ಹಾಡುಗಳನ್ನು ಯಾವುದೇ ಸಂಗೀತ ಹಿನ್ನೆಲೆಯಿಲ್ಲದೇ ಧ್ವನಿಪೂರ್ಣವಾಗಿ ಅವರು ಹಾಡುತ್ತಾರೆ. ಹಾಡು ಮತ್ತು ಪ್ರಭಾವಿ ಭಾಷಣಗಳಿಂದ ಬಹಳ ಬೇಗನೆ ಅವರು ಫಿನ್ ಲ್ಯಾಂಡ್ ದೇಶದ ಜನರ ಗಮನ ಸೆಳೆಯತೊಡಗಿದರು.

ಕೆಲವು ಗೆಳತಿಯರು ತುಂಬ ಜೋರು ಮಾಡಿ ಇವರನ್ನು ರಾಜಕೀಯಕ್ಕೆ ಕರೆತಂದರು. 2006ರಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ರಾಜಕೀಯ ಪಕ್ಷದ ಯುವ ವಿಭಾಗದ ನಾಯಕರಾದವರು. 2010ರಿಂದ 12ರವರೆಗೆ ಪಕ್ಷದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 2012ರಿಂದ ರಾಜಕಾರಣದಲ್ಲಿ ಅವರು ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡರು. ಮುಂದೆ ಸಿಟಿ ಕೌನ್ಸಿಲ್‌ಗೆ ಆಯ್ಕೆಯಾದರು. ಇದು ಅವರ ರಾಜಕೀಯ ಜೀವನಕ್ಕೆ ದೊಡ್ಡ ಮೆಟ್ಟಿಲಾಯಿತು.

ಕೌನ್ಸಿಲ್ ಸದಸ್ಯರೆಲ್ಲ ಒಮ್ಮತದಿಂದ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಮುನ್ಸಿಪಲ್ ಅಧ್ಯಕ್ಷರಾಗಿ ಕೇವಲ 3 ವರ್ಷ ಗಳಲ್ಲಿ ಫೀನ್ ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯನ್ನು ಆದರ್ಶ ನಗರವಾಗಿರೂಪಿಸಿದರು. ರಸ್ತೆ, ನೀರು, ವಿದ್ಯುತ್ ಸೇರಿ ಎಲ್ಲ
ವಲಯಗಳನ್ನು ಸಶಕ್ತಗೊಳಿಸಿದರು. ಮುನ್ಸಿಪಾಲ್ ಆಡಳಿತಕ್ಕೆ ಒಳಪಟ್ಟ ಶಾಲೆಗಳನ್ನು ಸುಂದರಗೊಳಿಸಿದರು. ಶಿಕ್ಷಣದಿಂದ
ಒಂದು ಮಗು ಕೂಡ ವಂಚಿತವಾಗದಂತೆ ಅವರು ನೋಡಿಕೊಂಡರು. ತಾವೇ ಸ್ವತಃ ಶಾಲೆಗಳಿಗೆ ಹೋಗಿ ಮಕ್ಕಳೆದರು ದೇಶಭಕ್ತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಹೆಲಸಿಂಕಿ ನಗರದ ಜನಜೀವನದೊಂದಿಗೆ ಅವರು ನೀರಿನಂತೆ ಬೆರತು ಹೋದರು. ಎಲ್ಲ ಕುಟುಂಬದ ಸದಸ್ಯೆ ಎನ್ನುವಂತೆ
ಅವರು ಪ್ರೀತಿಗಳಿಸಿದರು. ಫಿನ್‌ಲ್ಯಾಂಡ್‌ನಲ್ಲಿ ಈಚೆಗೆ ಪೋಸ್ಟಲ್ ಮುಷ್ಕರ ತೀವ್ರ ಸ್ವರೂಪ ಪಡೆಯಿತು. ಸರಕಾರದ ವಿರುದ್ಧ ಜನ ಧ್ವನಿ ಎತ್ತಿ ಪ್ರತಿಭಟಿಸತೊಡಗಿದರು. ಇದನ್ನು ಸರಿಯಾಗಿ ನಿರ್ವಹಣೆ ಮಾಡುವುದು ಪ್ರಧಾನಿಯಾಗಿದ್ದ ಮೇಡಂ ಅವರಿಗೆ
ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಫಿನ್‌ಲ್ಯಾಂಡ್ ಸಂಸತ್ತಿನಲ್ಲಿ 200 ಸದಸ್ಯರಿದ್ದಾರೆ. 161 ಸದಸ್ಯರು ಪರ್ಯಾಯವಾಗಿ ಸನ್ನಾ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದರು. ತೀರಾ ಚಿಕ್ಕ ವಯಸ್ಸಿಗೆ ಪ್ರಧಾನಿಯಾಗಿರುವ ನೀವು ಸರಕಾರವನ್ನು ಸಮರ್ಪಕವಾಗಿ ನಡೆಸುವಿರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ತುಂಬ ಜೋರಾಗಿ ನಕ್ಕ ಸನ್ನಾ ಧೈರ್ಯವಾಗಿ ಹೇಳಿದರು- ನಾನು ನನ್ನ ವಯಸ್ಸು ಮತ್ತು ಲಿಂಗದ ಬಗ್ಗೆ ಎಂದೂ ಯೋಚಿಸುವುದಿಲ್ಲ.

ರಾಜಕಾರಣವೇ ಇರಲಿ, ಆಡಳಿತವೇ ಇರಲಿ ಸಾಮರ್ಥ್ಯ, ವಿವೇಚನೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದು ಮುಖ್ಯ. ನಾನು
ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನನಗಿದೆ ಎಂದು ಉತ್ತರಿಸಿದರು. ಫಿನ್‌ಲ್ಯಾಂಡ್ ದೇಶದ ರಾಜಕೀಯದಲ್ಲಿ ದೊಡ್ಡ ಪ್ರಮಾಣ ದಲ್ಲಿ ಮಹಿಳೆಯರು ಸಕ್ರಿಯವಾಗಿ ತೊಡಗಿದ್ದಾರೆ. 1909ರಲ್ಲಿಯೇ ಈ ದೇಶದಲ್ಲಿ ಲಿಂಗ ತಾರತಮ್ಯವಿಲ್ಲದೆ ಮತದಾನದ ಹಕ್ಕು ಜಾರಿಯಾಗಿದೆ. ಅದರಿಂದಾಗಿ ಆ ದೇಶದಲ್ಲಿ ಮೂವರು ಮಹಿಳೆಯರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಸನ್ನಾ ಮರೀನ್ ನೇತೃತ್ವದ ಸರಕಾರದ ಸಂಪುಟದಲ್ಲಿ ಒಟ್ಟು 14 ಸಚಿವರ ಪೈಕಿ 9 ಮಹಿಳೆಯರು ಇರುವುದು ಗಮನಾರ್ಹ ಸಂಗತಿ.

ಚುನಾಯಿತ ಸಂಸ್ಥೆಗಳಲ್ಲಿ ಮತ್ತು ಆರ್ಥಿಕ ಚಟುವಟಿಕೆಯಲ್ಲಿ ಪುರುಷರಿಗೆ ಸಮ ಪ್ರಮಾಣದಲ್ಲಿ ಮಹಿಳೆಯರು ಇದ್ದಾರೆ.
ಕೆಲವು ಸಂಸ್ಥೆಗಳಲ್ಲಿ ಮಹಿಳೆಯರೇ ಹೆಚ್ಚಿಗೆ ಇರುವುದು ಈ ದೇಶದ ವಿಶೇಷವಾಗಿದೆ. ರಾಜಕಾರಣ, ಜನಸಂಪರ್ಕ, ಅಧ್ಯಯನ ಇವುಗಳೊಂದಿಗೆ ಕುಟುಂಬ ಜೀವನದ ಬಗ್ಗೆಯೂ ಅವರು ತುಂಬ ಒಲವು ಹೊಂದಿದ್ದಾರೆ. ಮಾರ್ಕೋಸ್ ರಾಯೋಸನ್ ಎಂಬ
ಅತ್ಯಂತ ಸುಂದರ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗೆ ಎಮ್ಮಾ ಎಂಬ 22 ತಿಂಗಳ ಹೆಣ್ಣು ಮಗು ವಿದೆ. ಮೊಲೆ ಉಣಿಸುವುದು ತಮಗೆ ಬಹು ಸಂತೋಷದ ಅನುಭೂತಿ ನೀಡುತ್ತದೆ ಎಂದು ಅವರು ಹೇಳುತ್ತಾರೆ.

ನ್‌ಲ್ಯಾಂಡ್ ನಾಗರಿಕರು ಆರೋಗ್ಯ ಮತ್ತು ಸಂತೋಷದ ಬದುಕಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಹೆಚ್ಚು ಸಂತೋಷಿಗಳಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತವಾಗಿದೆ ಫೀನ್‌ಲ್ಯಾಂಡ್. ಎಲ್ಲ ಅಡೆತಡೆಗಳನ್ನು ಜಯಿಸಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಧಾನಿಯಾಗಿ ರುವ ಸನ್ನಾ ಮರೀನ್ ಜಗತ್ತಿನ ಎಲ್ಲ ಯುವತಿಯರಿಗೆ ಹೊಸ ರೋಲ್‌ಮಾಡೆಲ್ ಆಗಿ ಕಾಣುತ್ತಾರೆ.