Sunday, 15th December 2024

ಭಾರತದ ಪ್ರಪ್ರಥಮ, ಮೊದಲ ಮಹಿಳೆ ಯಾರು ಗೊತ್ತಾ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಈ ಪ್ರಶ್ನೆಗೆ ಎಷ್ಟು ಮಂದಿ ಸರಿ ಉತ್ತರ ಹೇಳಬಹುದು ಗೊತ್ತಿಲ್ಲ. ಇದೇನು ಪ್ರಪ್ರಥಮ ಮತ್ತು ಮೊದಲ ಅಂದರೇನು ಎಂದು ಕೇಳಬಹುದು. ಈ ಪ್ರಪ್ರಥಮ ಮೊದಲ ಮಹಿಳೆ (First Lady ಅಥವಾ First Lady Citizen) ಹನ್ನೆರಡು ವರ್ಷಗಳ ಕಾಲ ರಾಷ್ಟ್ರಪತಿ ಭವನದಲ್ಲಿದ್ದರು. ಅಂದರೆ ಇವರು ಭಾರತದ ಪ್ರಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ ಅವರ ಧರ್ಮಪತ್ನಿ.

1950 ರಿಂದ 1962 ರವರೆಗೆ ರಾಜವಂಶಿ ದೇವಿ ರಾಷ್ಟ್ರಪತಿ ಭವನದಲ್ಲಿದ್ದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು
ಅಪರೂಪ. ವಿದೇಶಿ ಗಣ್ಯರು ಬಂದಾಗಲೂ ಅವರು ಕಾಣಿಸಿಕೊಂಡವರಲ್ಲ. ಇವರ ಹೆಸರು ರಾಜವಂಶಿದೇವಿ. ರಾಷ್ಟ್ರಪತಿ ಭವನದ ಹಳೆಯ ಫೋಟೋ ಸಂಗ್ರಹವನ್ನು ತಡಕಾಡಿದರೆ, ಹೆಚ್ಚೆಂದರೆ ರಾಜವಂಶಿದೇವಿಯವರ ಒಂದು ಡಜನ್ ಫೋಟೋ ಸಿಗಬಹುದು, ಅಷ್ಟೇ. ಅತಿ ಮಹತ್ವದ ಸಂದರ್ಭ, ಔತಣಕೂಟಗಳಿಗೂ ಅವರು ಬರುತ್ತಿರಲಿಲ್ಲ.

ಅದರಲ್ಲೂ ರಾಷ್ಟ್ರಪತಿಯವರ ಜತೆ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲೇ ಇಲ್ಲ. ಡಾ.ಪ್ರಸಾದ ಮದುವೆಯಾದಾಗ
ಅವರಿಗೆ ಹನ್ನೆರಡು ವರ್ಷ. ವಿದೇಶಿ ಗಣ್ಯರ ಜತೆಗಿನ ಫೋಟೋಗಳಲ್ಲಿ ಡಾ.ಪ್ರಸಾದ ಅವರೊಬ್ಬರನ್ನೇ ಕಾಣಬಹುದು. ವಿದೇಶಿ ಗಣ್ಯರು ಸಪತ್ನಿಕರಾಗಿ ಬಂದಾಗಲೂ, ಡಾ.ಪ್ರಸಾದ ಔತಣಕೂಟಗಳಲ್ಲಿ ಒಬ್ಬರೇ ಇರುತ್ತಿದ್ದರು. ಡಾ.ಪ್ರಸಾದ ಮತ್ತು ರಾಜವಂಶಿ ದೇವಿ ಅಕ್ಕ – ಪಕ್ಕ ಕುಳಿತಿರುವ ಕೆಲವೇ ಕೆಲವು ಫೋಟೋಗಳಿವೆ. ಆದರೆ ಅವು ರಾಷ್ಟ್ರಪತಿ ಆಗುವುದಕ್ಕಿಂತ ಮೊದಲಿನವು.
ಡಾ.ಪ್ರಸಾದ ರಾಷ್ಟ್ರಪತಿಯಾಗಿದ್ದಾಗ, ಎಲ್ಲಿಗೂ ಪತ್ನಿಯನ್ನು ಕರೆದುಕೊಂಡು ಹೋಗುತ್ತಿರಲಿಲ್ಲ.

1962ರಲ್ಲಿ ಅವರು ರಾಷ್ಟ್ರಪತಿ ಸ್ಥಾನದಿಂದ ನಿವೃತ್ತಿ ಘೋಷಿಸಿದ ನಂತರ, ಪಾಟ್ನಾಕ್ಕೆ ಹೋಗಿ, ಅಲ್ಲಿನ ಬಿಹಾರ ವಿದ್ಯಾಪೀಠ ಕ್ಯಾಂಪಸ್ಸಿನಲ್ಲಿ ನೆಲೆಸಿದರು. ಅದಾಗಿ ನಾಲ್ಕು ತಿಂಗಳಿಗೆ ಅವರ ಪತ್ನಿ ತೀರಿಹೋದರು. ಅದಾಗಿ ಐದು ತಿಂಗಳಿಗೆ ಅವರೂ ನಿಧನರಾದರು. ಡಾ.ಪ್ರಸಾದ ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ, ಅವರ ಮಗನಿಗೆ ಮಗು ಹುಟ್ಟಿತು. ಅಂದರೆ, ಡಾ.ಪ್ರಸಾದ ಅಜ್ಜ ಆದರು. ಆಗ ಅವರಿಗೆ ಸಾಂಪ್ರದಾಯಿಕವಾಗಿ, ಪ್ರಮುಖ ದೇಶವೊಂದರ ರಾಷ್ಟ್ರಾಧ್ಯಕ್ಷರು ಟೆಲಿಗ್ರಾಮ್ ಮೂಲಕ ಶುಭಾಶಯ ಕಳಿಸಿದರು. ಈ ವಿಷಯ ರಾಜವಂಶಿದೇವಿಯವರಿಗೂ ಗೊತ್ತಾಯಿತು.

ಅದಕ್ಕೆ ಅವರು, ‘ನೀವು ತಾತ ಆದ್ರೆ ಅವರಿಗೇಕೆ ಸಂತಸವಾಗಬೇಕು? ಅಷ್ಟಕ್ಕೇ ಯಾಕೆ ಟೆಲಿಗ್ರಾಮ್ ಕಳಿಸಬೇಕು?’ ಎಂದು ಕೇಳಿದ್ದರಂತೆ. ಡಾ.ಎಸ್.ರಾಧಾಕೃಷ್ಣ ಅವರು ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಿಂತ ಆರು ವರ್ಷಗಳ ಮೊದಲೇ ಅವರ ಪತ್ನಿ ಶಿವಕಮು ನಿಧನರಾಗಿದ್ದರು.

ಹೀಗಾಗಿ 1962 ರಿಂದ 1967ರವರೆಗೆ ‘ಮೊದಲ ಮಹಿಳೆ’ಯೇ ಇರಲಿಲ್ಲ. ಜಾಕಿರ್ ಹುಸೇನ್ ಅವರ ಪತ್ನಿ ಶಾಹ್ ಜಹಾನ್ ಬೇಗಂ, ವಿ.ವಿ.ಗಿರಿ ಅವರ ಪತ್ನಿ ಸರಸ್ವತಿಬಾಯಿ, ಹಂಗಾಮಿ ರಾಷ್ಟ್ರಪತಿ ಮೊಹಮ್ಮದ್ ಹಿದಾಯತುಹ್ ಅವರ ಪತ್ನಿ ಪುಷ್ಪಾ ಶಾಹ್, ಫಕ್ರುದ್ದೀನ್ ಅಲಿ ಅಹಮದ್ ಅವರ ಪತ್ನಿ ಬೇಗಂ ಅಬಿದಾ ಅಹಮದ್, ಮತ್ತೊಬ್ಬ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರ ಪತ್ನಿ ಸಂಗಮ್ಮ ಜತ್ತಿ, ನೀಲಂ ಸಂಜೀವ ರೆಡ್ಡಿ ಅವರ ಪತ್ನಿ ನೀಲಂ ನಾಗರತ್ನಮ್ಮ ರೆಡ್ಡಿ, ಜೈಲ್ ಸಿಂಗ್ ಅವರ ಪತ್ನಿ ಪರ್ದನ್ ಕೌರ್, ಶಂಕರ ದಯಾಳ್ ಶರ್ಮ ಅವರ ಪತ್ನಿ ವಿಮಲಾ ಶರ್ಮ, ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ಮುಖರ್ಜಿ… ಇವರೆಲ್ಲ ಹೆಚ್ಚಾಗಿ ಕಾಣಿಸಿಕೊಂಡವರೇ ಅಲ್ಲ.

ತಮ್ಮ ಪತಿಯೊಂದಿಗೆ ರಾಷ್ಟ್ರಪತಿ ಭವನದಲ್ಲಿ ಇವರ ಫೋಟೋ ಸಿಗುವುದಿಲ್ಲ. ರಾಷ್ಟ್ರಪತಿಗಳ ಪತ್ನಿಯರ ಪೈಕಿ ಹೆಚ್ಚಾಗಿ ಕಾಣಿಸಿಕೊಂಡವರೆಂದರೆ ಕೆ.ಆರ್. ನಾರಾಯಣನ್ ಅವರ ಪತ್ನಿ ಉಷಾ ನಾರಾಯಣನ್. ಅವರು ಪ್ರಪ್ರಥಮ ವಿದೇಶಿ ಸಂಜಾತ ಮೊದಲ ಮಹಿಳೆ. (ಅವರು ಹುಟ್ಟಿದ್ದು ಅಂದಿನ ಬರ್ಮಾದಲ್ಲಿ. ಮದುವೆಗಿಂತ ಮುಂಚಿನ ಹೆಸರು ಟಿಂಟ್ ಟಿಂಟ್) ಆರ್.ವೆಂಕಟ ರಾಮನ್ ಪತ್ನಿ ಜಾನಕಿ ವೆಂಕಟರಾಮನ್ ಆಗಾಗ ಪತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು.

ಅಲ್ಲದೇ ಪತಿಯ ವಿದೇಶ ಪ್ರವಾಸದಲ್ಲಿ ಜತೆಯಾಗುತ್ತಿದ್ದರು. ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿ ಅರ್ಥಾತ್ ಮೊದಲ ಪುರುಷ ದೇವಿಸಿಂಗ್ ಶೇಖಾವತ್, ಎಡೆ ಕಾಣಿಸಿಕೊಳ್ಳುತ್ತಿದ್ದರು. ದೇಶ – ವಿದೇಶ ಪ್ರವಾಸಗಳಲ್ಲಿ ಪತ್ನಿ ಯೊಂದಿಗೆ ಹೋಗುತ್ತಿದ್ದರು. ಹಾಗೆ ನೋಡಿದರೆ, ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರೇ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಕಾಣಿಸಿಕೊಳ್ಳಬೇಕೆಂಬ ಆಸೆಯಿದ್ದರೂ ಅದು ನೆರವೇರುತ್ತಿಲ್ಲ.

ಅಕ್ಬರ್ ಜತೆ ಕೆಲ ಹೊತ್ತು
‘ಎಂಜೆ’ ಎಂದು ಖ್ಯಾತರಾದವರು ಇಬ್ಬರು. ಒಬ್ಬರು ಪ್ರಸಿದ್ಧ ಗಾಯಕ, ಡಾನ್ಸರ್ ಮೈಕೆಲ್ ಜಾನ್ಸನ್ ಮತ್ತು ಇನ್ನೊಬ್ಬರು
ಎಂ.ಜೆ.ಅಕ್ಬರ್ ! ಕಳೆದ ವಾರ ಖ್ಯಾತ ಸಂಪಾದಕ, ಕೇಂದ್ರದ ಮಾಜಿ ಸಚಿವ ಮತ್ತು ರಾಜ್ಯಸಭೆ ಹಾಲಿ ಸದಸ್ಯ ಎಂ.ಜೆ.ಅಕ್ಬರ್ (ಮೊಬಾಷೆರ್ ಜಾವೆದ್ ಅಕ್ಬರ್) ಸುಮಾರು ಅರ್ಧ ಗಂಟೆ ಮಾತಿಗೆ ಸಿಕ್ಕಿದ್ದರು. ಅಕ್ಬರ್ ನಾನು ಇಷ್ಟಪಡುವ ಸಂಪಾದಕ. ಅತಿ ಕಿರಿಯ ವಯಸ್ಸಿನಲ್ಲಿ ಸಂಪಾದಕರಾದ ಅಕ್ಬರ್, ಕಳೆದ ನಾಲ್ಕೂವರೆ ದಶಕಗಳ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ತಮ್ಮ ಛಾಪನ್ನು
ಒತ್ತಿದವರು. ಖುಷವಂತ್ ಸಿಂಗ್ ಗರಡಿಯಲ್ಲಿ ಪಳಗಿದವರು.

1976ರಲ್ಲಿ ಆನಂದ ಬಜಾರ್ ಪತ್ರಿಕಾ ಸಂಸ್ಥೆ ಕೋಲ್ಕತಾದಿಂದ ‘ಸಂಡೇ’ ವಾರಪತ್ರಿಕೆಯನ್ನು ಆರಂಭಿಸಿದಾಗ, ಅಕ್ಬರ್ ಅವರೇ
ಅದರ ಸಂಸ್ಥಾಪಕ ಸಂಪಾದಕರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ‘ಸಂಡೇ’ ವಾರಪತ್ರಿಕೆ ನಂಬರ್ ಒನ್ ಆಗಿ ಹೊರ ಹೊಮ್ಮಿದ್ದು ಪತ್ರಿಕೋದ್ಯಮ ಒಂದು ರೋಚಕ ಪಾಠ. ‘ಸಂಡೇ’ ಮೂಲಕ ಅಕ್ಬರ್ ಪತ್ರಿಕೋದ್ಯಮದಲ್ಲಿ ಹೊಸ ಅಲೆಯನ್ನೆಬ್ಬಿಸಿ ದರಷ್ಟೇ ಅಲ್ಲ, ದೇಶದ ಹೊಸ ತಲೆಮಾರಿನ ಪತ್ರಕರ್ತರ ತಂಡ ಕಟ್ಟಿದರು.

ಅನಂತರ ಅದೇ ಸಂಸ್ಥೆ, ಅಕ್ಬರ್ ನೇತೃತ್ವದಲ್ಲಿ ‘ದಿ ಟೆಲಿಗ್ರಾಫ್’ ದೈನಿಕ ಆರಂಭಿಸಿತು. ಮೂವತ್ತೊಂಬತ್ತು (1982) ವರ್ಷಗಳ
ಹಿಂದೆ, ಅಕ್ಬರ್ ‘ದಿ ಟೆಲಿಗ್ರಾಫ್’ ಆರಂಭಿಸಿದಾಗ, ದೇಶದ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಸಂಚಲನವೇ ಆಯಿತು. ಲಂಡನ್ನಿನ ‘ದಿ ಸಂಡೇ ಟೈಮ್ಸ’ ಪತ್ರಿಕೆಯ ಡಿಸೈನ್ ಡೈರೆಕ್ಟರ್ ಎಡ್ವಿನ್ ಟೇಲರ್ ಅವರನ್ನು ಕರೆಯಿಸಿ, ಅತ್ಯಂತ ಆಧುನಿಕ ಮತ್ತು ಆಕರ್ಷಕ ಪುಟ ವಿನ್ಯಾಸ, ಕಲ್ಪನೆಗಳ ಒಂದು ವಿಭಿನ್ನ ದೈನಿಕವನ್ನು ಅಕ್ಬರ್ ಕೈಗಿತ್ತರು.

ಅದು ಹೊಸ ಮನ್ವಂತರಕ್ಕೆ ಅಕ್ಬರ್ ಬರೆದ ಮುನ್ನುಡಿಯಾಯಿತು. ಈ ಪತ್ರಿಕೆ ಮೇಲೆ ಅಕ್ಬರ್ ಪಡಿಯಚ್ಚು ಹೇಗಿದೆಯೆಂದರೆ, ಅವರು ‘ದಿ ಟೆಲಿಗ್ರಾಫ್’ ಪತ್ರಿಕೆಯನ್ನು ತೊರೆದು (1989ರಲ್ಲಿ) ಮೂವತ್ತೆರಡು ವರ್ಷಗಳಾದರೂ, ಪತ್ರಿಕೆ ಇಂದಿಗೂ ಅದೇ ಅಕ್ಷರ, ವಿನ್ಯಾಸ, ರೂಪವನ್ನು ಹೊಂದಿದೆ. ಅನಂತರ ಬೇರೆಯವರು ಆ ಪತ್ರಿಕೆಯ ಸಂಪಾದಕ ರಾದರೂ, ಅವರಿಗೆ ಈ ತನಕ ಅಕ್ಬರ್ ಹಾಕಿದ ಸಂಪ್ರದಾಯವನ್ನು ಬದಲಿಸಲು ಆಗಿಲ್ಲ. ಅದು ಒಬ್ಬ ಸಂಪಾದಕನ ತಾಕತ್ತು.

ಮೊದಲಿನಿಂದಲೂ ಬರೆಯುವ ಸಂಪಾದಕ ಎಂದೇ ಸರ್ವಮಾನ್ಯರಾದ ಅಕ್ಬರ್, ರಾಜಕೀಯ ಪ್ರವೇಶಿಸಿಯೂ ಬರವಣಿಗೆ ಕಾಪಾಡಿಕೊಂಡಿರುವ, ಪತ್ರಕರ್ತನ ತಾಯಿಬೇರನ್ನು ಸಲಹಿರುವ ಒಬ್ಬ ಅಪರೂಪದ ಪ್ರತಿಭೆ. ಅವರ ಗರಡಿಯಲ್ಲಿ ಪಳಗಿದವರೇ ಇಂದು ದೇಶದ ಪತ್ರಿಕೋದ್ಯಮದ ಮುಂಚೂಣಿಯಲ್ಲಿರುವವರು. ತಮ್ಮ ಬರವಣಿಗೆಯ ಮೋಹದಿಂದಲೇ ಅಸಂಖ್ಯ ಮನಸ್ಸು ಗಳನ್ನು ಗೆದ್ದವರು.

‘ಮಿಟೂ’ ವಿವಾದದಿಂದ ಅವರು ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದ್ದು ವಿಷಾದಕರ. ಅಕ್ಬರ್ ಜತೆಗೆ ಮಾತಿಗೆ ಕುಳಿತುಕೊಳ್ಳುವುದು ಒಂದು ವಿಶೇಷ ಅನುಭೂತಿಯೇ. ಅವರು ಪತ್ರಿಕೋದ್ಯಮ, ರಾಜಕಾರಣ, ಸಾಹಿತ್ಯ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ಪತ್ರಕರ್ತನಾಗಿ ಮತ್ತು ಪತ್ರಿಕೋದ್ಯಮಿಯಾಗಿ ಕಸುಬಿನಲ್ಲಿ ಮುನ್ನಡೆ ದವರು. ಅವರಿಗೆ ವರದಿ ಮಾಡುವುದೂ ಗೊತ್ತು, ಅಂಕಣ ಬರೆಯುವುದೂ ಗೊತ್ತು. ವಿನ್ಯಾಸಕಾರನ ಪಕ್ಕದಲ್ಲಿ ಕುಳಿತು ಪುಟ ಮಾಡಿಸುವುದೂ ಗೊತ್ತು. ಪತ್ರಿಕೋದ್ಯಮದ ಎಲ್ಲಾ ವಿಭಾಗಳಲ್ಲೂ ಅವರು ಆವರಿಸಿಕೊಂಡವರು.

ಚುನಾವಣೆ ರಾಜಕಾರಣದಲ್ಲೂ ಅನುಭವ ಪಡೆದವರು. ೧೯೮೯ರಲ್ಲಿ ಬಿಹಾರದ ಕಿಶನ್ ಗಂಜ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಅವರು ಆರಿಸಿ ಬಂದಿದ್ದರು. ಹೀಗಾಗಿ ಅವರಷ್ಟು ಬಹುಶ್ರುತ ಅನುಭವವಿರುವ ಪತ್ರಕರ್ತರು ಅಪರೂಪ. ದೇಶ – ವಿದೇಶಗಳಲ್ಲಿ ಅತಿ ಗಣ್ಯರು ಮತ್ತು ಪ್ರಮುಖರೊಂದಿಗೆ ಸಂಪರ್ಕ ಹೊಂದಿರುವ ಅಕ್ಬರ್ ಜತೆ ಕೆಲ ಹೊತ್ತು ಮಾತಾಡಿ ದರೂ, ಹಲವಾರು ಹೊಸ  ವಿಷಯಗಳನ್ನು ಮೊಗೆದುಕೊಳ್ಳಬಹುದು.

ಮೊನ್ನೆ ಮಾತಾಡುವಾಗ ಅಕ್ಬರ್ ಒಂದು ಪ್ರಸಂಗವನ್ನು ಹೇಳಿದರು. 1968ರಲ್ಲಿ ಪ್ರಸಿದ್ಧ ಕಲಾವಿದ ಮತ್ತು ಶಿಲ್ಪಿ, ಪಾಬ್ಲೋ
ಪಿಕಾಸ್ಸೋ ಹೇಳಿದ್ದನಂತೆ – ‘ಕಂಪ್ಯೂಟರುಗಳಿಂದ ಏನೂ ಪ್ರಯೋಜನವಿಲ್ಲ. ಅವು ಯೂಸ್ಲೆಸ್. ಅವು ಬರೀ ಉತ್ತರಗಳನ್ನು
ಕೊಡುವ ಯಂತ್ರಗಳು.’ ಅದೇ ವರ್ಷ ಇಂಟೆಲ್ ಕಂಪನಿ ಸ್ಥಾಪನೆಯಾಯಿತು.

ಸ್ಟಾನ್ಲಿ ಕುಬ್ರಿಕ್‌ನ ‘2001 : ಸ್ಪೇಸ್ ಒಡಿಸ್ಸಿ’ ಬಿಡುಗಡೆಯಾಯಿತು. ಆದರೂ ಪಿಕಾಸ್ಸೋ ತನ್ನ ಅಭಿಪ್ರಾಯ ಬದಲಿಸಿಕೊಳ್ಳಲಿಲ್ಲ. ಅಂದಿನಿಂದ ಇಲ್ಲಿಯ ತನಕ ಕಂಪ್ಯೂಟರುಗಳು ನಮಗೆ ಉತ್ತರಗಳನ್ನು ನೀಡುವ ಹಲವಾರು ಹಂತಗಳಲ್ಲಿ ಸುಧಾರಣೆಗಳನ್ನು ಕಂಡಿವೆ. ಆದರೆ ಪ್ರಶ್ನೆಗಳನ್ನು ಕೇಳುವುದರಲ್ಲಿ ಯಾವ ಪ್ರಗತಿಯನ್ನೂ ಸಾಧಿಸಿಲ್ಲ. ಒಳ್ಳೆಯ ಪುಸ್ತಕಗಳು ಉತ್ತರಗಳನ್ನು ನೀಡಬೇಕು, ಅದಕ್ಕಿಂತ ಮುಖ್ಯವಾಗಿ ಪ್ರಶ್ನೆಗಳನ್ನು ಮೂಡಿಸಬೇಕು. ಇಂಥ ಪ್ರಶ್ನೆಗಳು ಇರಲು ಸಾಧ್ಯವಾ ಎಂಬ ಅಚ್ಚರಿಯನ್ನು ನಮ್ಮಲ್ಲಿ ಎಬ್ಬಿಸಬೇಕು. ಈ ಕಾರಣಗಳಿಂದ ಓದು ಮತ್ತು ಬರಹ ಮುಖ್ಯವೆನಿಸುತ್ತವೆ. ಪತ್ರಕರ್ತರಾದವರು ಇವೆರಡನ್ನೂ
ಯಾವತ್ತೋ ಬಿಡಬಾರದು. ಜತೆಜತೆಯ ಕರೆದುಕೊಂಡು ಹೋಗಬೇಕು.

ಇಂದಿರಾ ಮತ್ತು ಗೋಲ್ಡಾ 
ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ, ಜಗತ್ತಿನ ಮತ್ತೊಬ್ಬ ಪ್ರಭಾವಿ ಮಹಿಳಾ ಪ್ರಧಾನಿಯೆಂದರೆ ಇಸ್ರೇಲಿನ ಗೋಲ್ಡಾ ಮಿರ್. ಇಬ್ಬರದೂ ಗಟ್ಟಿಪಿಂಡ. ಧೈರ್ಯಶಾಲಿ ನಾಯಕಿಯರು. ಈ ಇಬ್ಬರೂ ನಾಯಕಿಯರು ಅಧಿಕಾರದಲ್ಲಿ ದ್ದಾಗ, ಯುದ್ಧವನ್ನು ಎದುರಿಸಿದವರು.

1971ರಲ್ಲಿ ಇಂದಿರಾ ಗಾಂಧಿ ಮತ್ತು 1973 ರಲ್ಲಿ ಗೋಲ್ಡಾ ಮಿರ್ ಯುದ್ಧಕಾಲ ದಲ್ಲಿ ತಮ್ಮ ತಮ್ಮ ದೇಶವನ್ನು ಮುನ್ನಡೆಸಿ ದವರು. ಇವರಿಬ್ಬರಿಗೂ ಪರಸ್ಪರರ ಬಗ್ಗೆ ಅಪಾರ ಅಭಿಮಾನ ಮತ್ತು ಮೆಚ್ಚುಗೆಯಿತ್ತು. ದುರಂತವೆಂದರೆ, ಇಂದಿರಾ ಮತ್ತು ಗೋಲ್ಡಾ ಎಂದೂ ಭೇಟಿಯಾಗಲೇ ಇಲ್ಲ. ಕಾರಣ, ಆಗ ಇಸ್ರೇಲಿ ನೊಂದಿಗೆ ಭಾರತ ಪೂರ್ಣ ಪ್ರಮಾಣದ ರಾಜತಾಂತ್ರಿಕ ಸಂಬಂಧವನ್ನು ಹೊಂದಿರಲಿಲ್ಲ. ಇವರಿಬ್ಬರದೂ ಒಂದೇ ಗುಣಲಕ್ಷಣ.

ಯಾರಿಗೂ ತಲೆಬಾಗಿದವರಲ್ಲ. ತಾವು ಅಂದುಕೊಂಡಿದ್ದನ್ನು ಸಾಧಿಸುವ ತನಕ ವಿರಮಿಸಿದವರೂ ಅಲ್ಲ. ತಮ್ಮ ಹಠವನ್ನೇ
ಸಾಧಿಸುವುದರಲ್ಲಿ ಸಮಾಧಾನ ಕಂಡವರು. ಇಂದಿರಾ ಬಗ್ಗೆ ಹೇಳಿದಂತೆ, ಗೋಲ್ಡಾ ಬಗ್ಗೆಯೂ, ‘ಇಸ್ರೇಲಿನ ಸಂಪುಟದಲ್ಲಿರುವ ಏಕ ಮಾತ್ರ ಗಂಡಸು’ ಎಂದು ಹೇಳುತ್ತಿದ್ದರು. ಇಬ್ಬರಿಗೂ ‘ಉಕ್ಕಿನ ಮಹಿಳೆ’ ಎಂದು ಕರೆಯಲಾಗುತ್ತಿತ್ತು. ಇಬ್ಬರ ರೂಪದಲ್ಲೂ ಸಾಮ್ಯತೆ ಇತ್ತು. ಇವರಿಬ್ಬರು ಒಮ್ಮೆಯಾದರೂ ಭೇಟಿಯಾಗಿದ್ದರೆ, ಅದರ ಪರಿಣಾಮ ಜಗತ್ತಿನ ಆಗು – ಹೋಗುಗಳ ಮೇಲಾಗದೇ ಹೋಗುತ್ತಿರಲಿಲ್ಲ.

ಒಮ್ಮೆ ಗೋಲ್ಡಾ ತೀರಾ ವಿಧೇಯನಂತೆ ನಟಿಸುವ ರಾಜಕಾರಣಿಯೊಬ್ಬನಿಗೆ ಹೇಳಿದ್ದರು – Don’t be so humble. You are not that great. ಇದನ್ನು ನನಗೆ ಹೇಳಿದವರೂ ಅಕ್ಬರ್ ಅವರೇ. ಸ್ಟುಡಿಯೋ ಜಾಹೀರಾತು ಫಲಕ ಇತ್ತೀಚೆಗೆ ನನಗೆ ಸ್ನೇಹಿತರೊಬ್ಬರು ಒಂದು ಜಾಹೀರಾತನ್ನು ಕಳಿಸಿ, ‘ಇದು Mother of All Advertisements’ ಎಂದು ಬರೆದಿದ್ದರು. ಅದು ಅಸಲಿಗೆ ‘ಫೋಟೋ ಎಕ್ಸ್‌ಪ್ರೆಸ್’ ಎಂಬ ಫೋಟೋ ಸ್ಟುಡಿಯೋ ಮುಂದೆ ಇತ್ತ ಜಾಹೀರಾತು ಫಲಕ. ಯಾವನೋ ಕಿಡಿಗೇಡಿ, ಚತುರ ಕಾಪಿ ರೈಟರ್ ಇದನ್ನು ಬರೆದಿರಬಹುದು.

‘ನಾವು ನಿಮ್ಮ ಹೆಂಡತಿಯನ್ನು ಶೂಟ್ ಮಾಡಬವು. ನಿಮ್ಮ ಅತ್ತೆಯನ್ನು ಫ್ರೇಮ್ ಮಾಡಬಲ್ಲವು. ನೀವು ಬಯಸಿದರೆ, ಇಬ್ಬರನ್ನೂ ನೇತು ಹಾಕಬವು.