Saturday, 14th December 2024

ನಾವು ನೀರನ್ನು ಗೌರವಿಸಲು ಕಲಿಯಬೇಕು

ಸಂದರ್ಶನ: ರಾಜೀವ್ ರಂಜನ್‌ ಮಿಶ್ರಾ,

ಡೈರೆಕ್ಟರ್‌ ಜನರಲ್‌, ನ್ಯಾಷನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ

ಸಂದರ್ಶಕಿ: ರೇಖಾ ದೀಕ್ಷಿತ್‌

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಜಾರಿಗೊಳಿಸಿದ ಮೊದಲ ಪ್ರಮುಖ ಯೋಜನೆಗಳಲ್ಲಿ ಗಂಗಾ ನದಿಯ ಶುದ್ಧೀಕರಣವೂ ಒಂದು. ಅದಕ್ಕೆಂದೇ ಅವರೊಂದು ಹೊಸ ಸಚಿವಾಲಯವನ್ನೂ ಸೃಷ್ಟಿಸಿದರು. ಉತ್ತರ ಭಾರತದ ಜೀವನದಿಯಾದ ಗಂಗೆಯ ಶುದ್ಧೀಕರಣಕ್ಕೆ ಇದೇನೂ ಮೊದಲ ಪ್ರಯತ್ನವಾಗಿರಲಿಲ್ಲ. ತಾನು ಹುಟ್ಟುಹಾಕಿದ ಸಮೃದ್ಧಿಯ ಕಾರಣಕ್ಕೇ ಸಂತ್ರಸ್ತೆಯೂ ಆದ ನತದೃಷ್ಟ ನದಿಯಿದು. ತನ್ನ ದಡದ ಗುಂಟ ದೊಡ್ಡ ದೊಡ್ಡ ಶಹರಗಳನ್ನು ಬೆಳೆಯಲು ಬಿಟ್ಟ ಗಂಗೆ, ಆ ಶಹರಗಳ ತ್ಯಾಜ್ಯಗಳನ್ನೆಲ್ಲ ತನ್ನೊಡಲೊಳಗೆ ಸುರಿಸಿ ಕೊಳ್ಳುತ್ತಿದ್ದಾಳೆ. ಸಾವಿರಾರು ಕಾರ್ಖಾನೆಗಳು ಈ ನದಿಗೆ ತ್ಯಾಜ್ಯ ಹರಿಬಿಡುತ್ತವೆ. ಮೋದಿಯವರ ‘ನಮಾಮಿ ಗಂಗೆ’ ಯೋಜನೆ ಕೇವಲ ನದಿಯನ್ನು ಸ್ವಚ್ಛಗೊಳಿಸುವುದಷ್ಟೇ ಆಗಿರಲಿಲ್ಲ, ಬದಲಿಗೆ ಅದನ್ನು ಪುನರುಜ್ಜೀವನಗೊಳಿಸು ವುದೂ ಆಗಿತ್ತು. ಅದಕ್ಕಾಗಿ ಅವರು ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಹುಟ್ಟು ಹಾಕಿದರು. ಏಳು ವರ್ಷಗಳ ಹಿಂದೆ ಅಸಾಧ್ಯ ಎಂಬಂತಿದ್ದ ಕಾರ್ಯ ಈಗ ಅಷ್ಟಷ್ಟಾಗಿ ಫಲಿತಾಂಶ ನೀಡುತ್ತಿದೆ. ಗಂಗಾ ನದಿ ಶುದ್ಧೀಕರಣ ಕ್ಕಾಗಿನ ರಾಷ್ಟ್ರೀಯ ಮಿಷನ್‌ನ ಮಹಾನಿರ್ದೇಶಕ ರಾಜೀವ್ ರಂಜನ್ ಮಿಶ್ರಾ ಅವರು ಆ ಕುರಿತು ವಿಸ್ತೃತವಾಗಿ ಮಾತ ನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಗಂಗಾ ನದಿ ಶುದ್ಧೀಕರಣ ಯೋಜನೆ ಘೋಷಿಸಿ ಏಳು ವರ್ಷಗಳಾದವು. ಗಂಗೆಯ ನೀರು ಯಾವಾಗ ಶುದ್ಧವಾಗುತ್ತದೆ?
ನಾವು 1850ರಿಂದ ಗಂಗಾ ನದಿಯನ್ನು ಮಲಿನಗೊಳಿಸುತ್ತಾ ಬಂದಿದ್ದೇವೆ. ಅಂದಿನಿಂದ ಗಂಗೆಯ ನೀರನ್ನು ದೊಡ್ಡ ಪ್ರಮಾಣದಲ್ಲಿ ನೀರಾವರಿಗೆ ಬಳಸಿಕೊಳ್ಳುತ್ತಿದ್ದೇವೆ. ಆ ಸಮಯದಿಂದಲೂ ನಾವು ಗಂಗೆಯ ಆರೋಗ್ಯವನ್ನು ಮಾಲಿನ್ಯದ ಮೂಲಕ ಹದಗೆಡಿಸುತ್ತಲೇ ಇದ್ದೇವೆ. 150 ವರ್ಷಗಳ ಕಾಲ ಉಂಟುಮಾಡಿದ ಹಾನಿಯನ್ನು ಸರಿಪಡಿಸಲು ಸಮಯ ಹಿಡಿಯು ತ್ತದೆ. ಜನರಿಗೆ ಫಟಾಫಟ್ ಫಲಿತಾಂಶ ಬೇಕು. ಬೆಳಗಾಗುವುದರೊಳಗೆ ಗಂಗೆ ಸ್ವಚ್ಛವಾಗಿಬಿಡಬೇಕು ಎಂದು ಅವರು ನಿರೀಕ್ಷಿಸು ತ್ತಾರೆ. ಅದು ಸುಲಭವಲ್ಲ.

ಹಿಂದೆ ಗಂಗಾ ನದಿಯನ್ನು ಶುದ್ಧೀಕರಿಸಲು ಹಮ್ಮಿಕೊಂಡ ಯೋಜನೆಗಳು ಹೆಚ್ಚೇನೂ ಪರಿಣಾಮ ಬೀರಿಲ್ಲ. ಈಗಿನ ಯೋಜನೆ ಯಶಸ್ವಿಯಾಗುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ?
1985ರಿಂದಲೇ ಗಂಗಾ ನದಿಯನ್ನು ಶುದ್ಧೀಕರಿಸಲು ಪ್ರಯತ್ನಗಳು ನಡೆಯುತ್ತಿವೆ. ಅವೆಲ್ಲವೂ ವಿಫಲವಾಗಿಲ್ಲ. ಅವುಗಳಿಂದ ಅಷ್ಟಿಷ್ಟು ಫಲಿತಾಂಶ ಬಂದಿದೆ. ಸಮಸ್ಯೆಯೆಂದರೆ, ಆ ಪ್ರಯತ್ನ ನಿರಂತರವಾಗಿ ನಡೆದಿಲ್ಲ. ನಮಾಮಿ ಗಂಗೆ ಯೋಜನೆ ಜಾರಿಗೊಳಿಸಿದ ನಂತರ ನಾವು ಒಂದು ವರ್ಷದ ಕಾಲ ಹಿಂದಿನ ಪ್ರಯತ್ನಗಳು ಏಕೆ ಹೆಚ್ಚು ಫಲ ನೀಡಲಿಲ್ಲ ಎಂಬುದನ್ನೇ ಅಧ್ಯಯನ ಮಾಡಿದ್ದೇವೆ. ನಂತರ ಈ ಯೋಜನೆಗೆ ಹಿಂದೆಂದೂ ನೀಡಿರದಿದಷ್ಟು ಹಣಕಾಸು ಒದಗಿಸಿದ್ದೇವೆ.

1985ರಿಂದ 2014ರ ವರೆಗೆ ಗಂಗೆಯ ಶುದ್ಧೀಕರಣಕ್ಕೆ 4,000 ಕೋಟಿ ರು. ಮಾತ್ರ ಖರ್ಚು ಮಾಡಲಾಗಿದೆ. ಅಂದರೆ, ವರ್ಷಕ್ಕೆ ಸರಾಸರಿ 150 ಕೋಟಿ ರು. ಖರ್ಚು ಮಾಡಿದಂತಾಯಿತು. ನಾವೀಗ ಮುಂದಿನ 10 ವರ್ಷಗಳಿಗೆ ಪ್ರತಿ ವರ್ಷ 2,000 ಕೋಟಿ ರು. ಒದಗಿಸುತ್ತಿದ್ದೇವೆ. ಮಾಲಿನ್ಯ ಉಂಟುಮಾಡುತ್ತಿರುವ ಜಾಗಗಳನ್ನು ಮಾತ್ರ ನೋಡದೆ ನಾವು ಗಂಗಾ ನದಿಯ ದಡದಲ್ಲಿರುವ 97 ಪಟ್ಟಣಗಳು ಹಾಗೂ 4,500 ಹಳ್ಳಿಗಳು ಮುಂದಿನ 15 ವರ್ಷಗಳಲ್ಲಿ ಎಷ್ಟು ಬೆಳೆಯಬಹುದು, ಅವುಗಳಲ್ಲಿ ಎಷ್ಟು ತ್ಯಾಜ್ಯ
ಸೃಷ್ಟಿಯಾಗಬಹುದು ಹಾಗೂ ಅಲ್ಲಿ ಜನಸಂಖ್ಯೆ ಎಷ್ಟು ಹೆಚ್ಚಾಗಬಹುದು ಎಂಬುದನ್ನೂ ಅಂದಾಜಿಸಿ ಅದರಿಂದ ಗಂಗಾ ನದಿಯ ಮೇಲೆ ಏನು ದುಷ್ಪರಿಣಾಮ ಉಂಟಾಗಬಹುದು ಎಂಬ ವರದಿ ತಯಾರಿಸಿದ್ದೇವೆ. ನಂತರವೇ ಹಳೆಯ ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ನವೀಕರಿಸುವ ಹಾಗೂ ಹೊಸ ಘಟಕಗಳನ್ನು ಸ್ಥಾಪಿಸುವ ಕಾರ್ಯ ಆರಂಭಿಸಿದ್ದೇವೆ.

ಗಂಗಾ ನದಿಯನ್ನು ಅತಿಹೆಚ್ಚು ಮಲಿನಗೊಳಿಸುತ್ತಿರುವುದು ಯಾರು?
ನದಿ ಶೇ.70ರಷ್ಟು ಮಲಿನವಾಗುತ್ತಿರುವುದು ಜನವಸತಿ ಪ್ರದೇಶಗಳ ಚರಂಡಿ ನೀರಿನಿಂದ. ಇದನ್ನು ಬಗೆಹರಿಸಿದರೆ ನಮ್ಮ ದೊಡ್ಡ ಜವಾಬ್ದಾರಿ ಮುಗಿದಂತೆ. ಚರಂಡಿ ನೀರಿಗೆ ಹೋಲಿಸಿದರೆ ಕಾರ್ಖಾನೆಗಳಿಂದ ಗಂಗೆಗೆ ಹರಿಯುತ್ತಿರುವ ತ್ಯಾಜ್ಯ ಕಡಿಮೆಯೇ ಇದ್ದರೂ ಅವು ರಾಸಾಯನಿಕವಾಗಿ ವಿಷಕಾರಿಯಾಗಿರುತ್ತವೆ. ಹೀಗಾಗಿ ಅವು ಕೂಡ ಅಷ್ಟೇ ಅಪಾಯಕಾರಿ. ಹಾಗೆಯೇ ಕೃಷಿ ಭೂಮಿಗಳಿಂದ ಹರಿಯುವ ರಸಗೊಬ್ಬರ ಮತ್ತು ಕೀಟನಾಶಕಗಳ ಅಂಶಗಳೂ ನದಿಗೆ ಸೇರುತ್ತಿವೆ. ಜತೆಗೆ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣಿಸುವಂತಹ ಪ್ಲಾಸ್ಟಿಕ್, ಮುರಿದ ಮೂರ್ತಿಗಳು ಹಾಗೂ ಇನ್ನಿತರ ತ್ಯಾಜ್ಯಗಳೂ ನದಿಯಲ್ಲಿವೆ. ಜನರೇ ನದಿಯ
ಪುನರುಜ್ಜೀವನದಲ್ಲಿ ಕೈಜೋಡಿಸಿದರೆ ಹೀಗೆ ಕಣ್ಣಿಗೆ ಕಾಣುವ ತ್ಯಾಜ್ಯಗಳು ಇನ್ನಿಲ್ಲವಾಗುತ್ತವೆ.

ಗಂಗೆಯ ಶುದ್ಧೀಕರಣಕ್ಕೆ ನೀವು ಅಳವಡಿಸಿಕೊಂಡಿರುವ ಹೊಸ ಯೋಜನೆಗಳು ಏನೇನು?
ನಾವು ಜವಾಬ್ದಾರಿ ಕೈಗೆತ್ತಿಕೊಂಡಾಗ ಗಂಗಾ ನದಿಯ ದಡದಲ್ಲಿರುವ ಅನೇಕ ತ್ಯಾಜ್ಯ ಶುದ್ಧೀಕರಣ ಘಟಕಗಳು ಕೆಲಸ ಮಾಡುತ್ತಿಲ್ಲ ಎಂಬುದು ಕಣ್ಣಿಗೆ ಬಿತ್ತು. ಒಂದೆರಡು ಬಿಡಿ ಭಾಗ ಕೆಟ್ಟು ಎಸ್‌ಟಿಪಿ ಕೆಲಸ ಮಾಡುತ್ತಿಲ್ಲ ಅಂದರೆ ಅವುಗಳನ್ನು ನೋಡಿಕೊಳ್ಳು ವವರು ಬಾಗಿಲು ಬಂದ್ ಮಾಡಿಕೊಂಡು ಹೋಗಿ ಬಿಡುತ್ತಿದ್ದರು. ಹೀಗಾಗಿ ನಾವು ಇಂತಹ ಘಟಕಗಳನ್ನು ನವೀಕರಣಗೊಳಿಸಿ, ಹೊಸ ಘಟಕಗಳನ್ನು ಸ್ಥಾಪಿಸಿದ ಮೇಲೆ ಆಯಾ ಕಂಪನಿಗಳೇ ಮುಂದಿನ 15 ವರ್ಷಗಳ ಕಾಲ ಘಟಕದ ನಿರ್ವಹಣೆಯನ್ನು ನೋಡಿಕೊಳ್ಳಬೇಕು ಎಂಬ ನಿಯಮ ತಂದೆವು. 2016ರಲ್ಲಿ ನಾವು ಮೊದಲ ಬಾರಿಗೆ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ದಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯ ವ್ಯವಸ್ಥೆ ಜಾರಿಗೊಳಿಸಿದೆವು. ಘಟಕ ನಿರ್ಮಿಸುವಾಗ ಅದಕ್ಕೆ ತಗಲುವ ಶೇ.40ರಷ್ಟು ಹಣವನ್ನು ನಾವು ನೀಡುತ್ತೇವೆ. ಎಸ್‌ಟಿಪಿ ನಿರ್ಮಿಸುವ ಸಂಸ್ಥೆಯವರು ಇನ್ನುಳಿದ ಶೇ.60ರಷ್ಟು ವೆಚ್ಚವನ್ನು ಮುಂದಿನ 15
ವರ್ಷಗಳಲ್ಲಿ ದುಡಿದುಕೊಳ್ಳಬಹುದು. ಹೀಗಾಗಿ ಆ ಸಂಸ್ಥೆಯವರು ಮುತುವರ್ಜಿಯಿಂದ ಕೆಲಸ ಮಾಡಿ ಲಾಭ ಮಾಡಿಕೊಳ್ಳಲು ಯತ್ನಿಸುತ್ತಾರೆ. ಏಕೆಂದರೆ ಅವರ ಬಂಡವಾಳ ಆ ಘಟಕದಲ್ಲಿರುತ್ತದೆ. ಇನ್ನು, ಸರ್ಕಾರ ನೀಡುವ ಶೇ.40ರಷ್ಟು ಹಣವನ್ನು ಕೂಡ
ನಾವು ನಿರ್ಮಾಣದ ಹಂತಗಳನ್ನು ನೋಡಿಕೊಂಡು ನೀಡದೆ ಕಾರ್ಯವಿಧಾನವನ್ನು ನೋಡಿಕೊಂಡು ನೀಡುತ್ತಾ ಬಂದಿದ್ದೇವೆ.

ಹರಿದ್ವಾರದಲ್ಲಿ ಜಗಜೀತ್‌ಪುರ ಹಾಗೂ ಸರಾಯ್ ಎಸ್ ಟಿಪಿಗಳು ಅವಧಿಗಿಂತ ಮೊದಲೇ ಪೂರ್ಣಗೊಂಡಿವೆ. ಸಾಮಾನ್ಯವಾಗಿ ಸರಕಾರಿ ಯೋಜನೆಗಳು ಹೀಗೆ ಪೂರ್ಣಗೊಳ್ಳುವುದು ಅಪರೂಪ. ಹೀಗಾಗಿ ನೀತಿ ಆಯೋಗವೀಗ ಬೇರೆಯವರೂ ಇಂತಹ
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಹೈಬ್ರಿಡ್ ಮಾದರಿಯನ್ನೇ ಅನುಸರಿಸುವಂತೆ ಶಿಫಾರಸು ಮಾಡುತ್ತಿದೆ.

ಹೈದರಾಬಾದ್ ನಲ್ಲಿ ದಿನಕ್ಕೆ 300 ಮಿಲಿಯನ್ ಲೀಟರ್ ತ್ಯಾಜ್ಯ ನೀರು ಶುದ್ಧೀಕರಿಸುವ ಘಟಕ ಇತ್ತೀಚೆಗೆ ಇದೇ ಹೈಬ್ರಿಡ್ ಮಾದರಿಯಲ್ಲಿ ಕಾರ್ಯಾರಂಭ ಮಾಡಿದೆ. ಹಾಗೆಯೇ ನಾವು ಒಂದು ನಗರಕ್ಕೆ ಒಬ್ಬನೇ ಆಪರೇಟರ್ ಎಂಬ ವ್ಯವಸ್ಥೆ ಅಳವಡಿಸಿ ಕೊಂಡಿದ್ದೇವೆ. ಹೀಗಾಗಿ ಆ ನಗರಕ್ಕೆ ಸಂಬಂಧಿಸಿದಂತೆ ಗಂಗಾ ನದಿಯನ್ನು ಶುದ್ಧೀಕರಿಸುವ ಎಲ್ಲಾ ಯೋಜನೆಗಳೂ ಏಕಕಾಲಕ್ಕೆ ಸಮನ್ವಯದಿಂದ ನಡೆಯುತ್ತವೆ. ಗೊಂದಲಗಳಿರುವುದಿಲ್ಲ.

ಔದ್ಯೋಗಿಕ ತ್ಯಾಜ್ಯಗಳನ್ನು ಏನು ಮಾಡುತ್ತಿದ್ದೀರಿ?
ಗಂಗೆಯನ್ನು ಅತಿಹೆಚ್ಚು ಮಲಿನಗೊಳಿಸುವಂತಹ ಉದ್ದಿಮೆಗಳಿರುವ ನಗರಗಳಲ್ಲಿ ಕಾನ್ಪುರವೂ ಒಂದು. ಅಲ್ಲಿ ಬಹಳಷ್ಟು ಟ್ಯಾನರಿ (ಚರ್ಮ ಹದಗೊಳಿಸುವ ಕಾರ್ಖಾನೆಗಳು) ಗಳಿವೆ. ಅಲ್ಲಿ ನಾವು ಎಲ್ಲ ಕಾರ್ಖಾನೆಗಳಿಗೂ ಸೇರಿ ಒಂದು ಬೃಹತ್ ತ್ಯಾಜ್ಯ ಶುದ್ಧೀಕರಣ ಘಟಕ ಸ್ಥಾಪಿಸುತ್ತಿದ್ದೇವೆ. ಜತೆಗೆ, ಸ್ವಚ್ಛ ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು – ಉದಾಹರಣೆಗೆ ಕಡಿಮೆ
ನೀರು ಬಳಸಿ ಕಡಮೆ ತ್ಯಾಜ್ಯ ಉತ್ಪತ್ತಿ ಮಾಡುವಂತಹ ಪೇಪರ್ ಮಿಲ್‌ಗಳು – ವಿದೇಶಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ತ್ಯಾಜ್ಯ ಬಿಡುಗಡೆಯ ಮೇಲೆ ಕಣ್ಣಿಡುವ ವ್ಯವಸ್ಥೆ ಎಲೆಕ್ಟ್ರಾನಿಕ್ ವಿಚಕ್ಷಣೆಯ ರೂಪದಲ್ಲಿ ನಡೆಯುತ್ತಿದೆ. ಕಾರ್ಖಾನೆಗಳಿಗೆ ಒಳಬರುವ ನೀರು ಹಾಗೂ ಹೊರಗೆ ಹೋಗುವ ನೀರಿನ ಗುಣಮಟ್ಟ ಅಲ್ಲೇ ತಪಾಸಣೆಯಾಗುತ್ತದೆ. ಇದರ ಜತೆಗೆ ಅಧಿಕಾರಿಗಳೇ ಖುದ್ದಾಗಿ
ತಪಾಸಣೆ ಕೂಡ ನಡೆಸುತ್ತಾರೆ. ಇದಕ್ಕಾಗಿ ಐಐಟಿಯಂತಹ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಕೇವಲ ಸರ್ಕಾರಿ
ಅಧಿಕಾರಿಗಳೇ ಇದ್ದರೆ ಅವರು ಕಾರ್ಖಾನೆಗಳ ಜೊತೆ ಕೈಜೋಡಿಸಿ ಅಂಕಿ ಅಂಶಗಳನ್ನೇ ತಿರುಚಬಹುದು ಎಂಬ ಕಾರಣಕ್ಕೆ ಮೂರನೇ ಸಂಸ್ಥೆಗಳಿಂದ ತಪಾಸಣೆ ಮಾಡಿಸುವ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ.

ಯಾವುದಾದರೂ ಒಂದು ಮಾನದಂಡ ಬಳಸಿ ನಿಮ್ಮ ಕೆಲಸದ ಪ್ರಗತಿಯನ್ನು ಹೇಳುವುದಾದರೆ ಈವರೆಗೆ ಎಷ್ಟು ಪ್ರಗತಿ
ಸಾಧಿಸಿದ್ದೀರಿ?
ಸರಿ, ನಾವು ಚರಂಡಿ ತ್ಯಾಜ್ಯವನ್ನು ನದಿಗೆ ಬಿಡುಗಡೆ ಮಾಡುವ ವಿಷಯವನ್ನೇ ಗಮನಿಸೋಣ. ಉತ್ತರಾಖಂಡ ಮತ್ತು
ಜಾರ್ಖಂಡ್ ‌ಗಳಲ್ಲಿ ಬಹುತೇಕ ಎಲ್ಲ ಎಸ್‌ಟಿಪಿಗಳ ನಿರ್ಮಾಣ ಪೂರ್ಣಗೊಂಡಿದೆ. ಇನ್ನು, ಬೃಹತ್ ರಾಜ್ಯವಾದ ಉತ್ತರ
ಪ್ರದೇಶದಲ್ಲಿ ಎಲ್ಲಾ ಚರಂಡಿ ನೀರನ್ನೂ ಶುದ್ಧೀಕರಿಸುವುದು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಯಿತ್ತು. ಅಲ್ಲಿ ಶೇ.60ಕ್ಕೂ
ಹೆಚ್ಚು ಕಾರ್ಯ ಪೂರ್ಣವಾಗಿದೆ. ಇನ್ನೆರಡು ವರ್ಷದಲ್ಲಿ ಇನ್ನೆಲ್ಲಾ ಎಸ್‌ಟಿಪಿಗಳೂ ಪೂರ್ಣಗೊಳ್ಳುತ್ತವೆ. ಪ್ರಯಾಗರಾಜ್‌ನಲ್ಲಿ ನಾವು ಈಗಾಗಲೇ ಯಮುನಾ ನದಿಯ ಪ್ರದೇಶಕ್ಕೂ ಕಾಲಿಟ್ಟಿದ್ದೇವೆ. ಅಲ್ಲಿ ಕೋರ್ ಸಿಟಿ ಕೆಲಸ ಮುಗಿದಿದೆ. ಬಿಹಾರದಲ್ಲಿ ಶುದ್ಧೀ ಕರಣ ಘಟಕಗಳೇ ಇರಲಿಲ್ಲ. ಅಲ್ಲಿ ಶೂನ್ಯದಿಂದ ಆರಂಭಿಸಬೇಕಿತ್ತು. ಪಟನಾದಲ್ಲಿ ಮಾತ್ರ 60 ಎಂಎಲ್‌ಡಿ ಘಟಕವಿತ್ತು. ನಾವೀಗ 600 ಎಂಎಲ್‌ಡಿಯಷ್ಟು ತ್ಯಾಜ್ಯ ಶುದ್ಧೀಕರಿಸಲು ಯೋಜನೆ ರೂಪಿಸಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಗಂಗಾ ಕ್ರಿಯಾಯೋಜನೆಯಡಿ ಅನೇಕ ಎಸ್‌ಟಿಪಿಗಳು ಮೊದಲೇ ಸ್ಥಾಪನೆಗೊಂಡಿದ್ದವು. ನಾವು ಅವುಗಳನ್ನು ನವೀಕರಣಗೊಳಿಸಬೇಕಿದೆ.

ನಿರ್ಮಲ ಗಂಗಾ, ಅವಿರಳ ಗಂಗಾ (ಸ್ವಚ್ಛ ಗಂಗಾ, ಹರಿಯುವ ಗಂಗಾ) ಎಂಬುದು ನಿಮ್ಮ ಆರಂಭಿಕ ಘೋಷಣೆ ಯಾಗಿತ್ತು. ಈ ಅವಿರಳ ಗಂಗಾ ಬಗ್ಗೆೆ ಸ್ವಲ್ಪ ಹೇಳಿ.
ನಮಾಮಿ ಗಂಗೆ ಕೇವಲ ನದಿಯನ್ನು ಸ್ವಚ್ಛಗೊಳಿಸುವ ಯೋಜನೆಯಲ್ಲ. ಇದು ನದಿಯ ಪುನರುಜ್ಜೀವನ ಯೋಜನೆ ಕೂಡ ಹೌದು. ಮೊದಲಿಗೆ ನಾವು ಏಳು ಐಐಟಿಗಳಿಂದ ವರದಿ ಪಡೆದು ಕೆಲಸ ಆರಂಭಿಸಿದೆವು. ನದಿ ಪಾತ್ರದ ನಿರ್ವಹಣೆ ಹೇಗಿರಬೇಕೆಂದು ಅವು ವರದಿ ನೀಡಿದ್ದವು. ಅದರಂತೆ ಯೋಜನೆ ರೂಪಿಸಿದೆವು. ಹರಿಯುವ ನದಿ ತನ್ನಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ತಿಳಿ ಗೊಳಿಸುತ್ತದೆ. ನೀರು ಹರಿಯುತ್ತಿದ್ದರೆ ನದಿ ಜೀವಂತವಾಗಿರುತ್ತದೆ. ಹೀಗಾಗಿ ನಾವು ನದಿಯಲ್ಲಿ ಯಾವಾಗಲೂ ನಿರ್ದಿಷ್ಟ ಪ್ರಮಾಣದ ನೀರು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕಿತ್ತು. ಅಥವಾ ನದಿ ನೈಸರ್ಗಿಕವಾಗಿ ವರ್ಷದ ಎಲ್ಲಾ ಸಮಯದಲ್ಲೂ ಹರಿಯುತ್ತಿರುವಂತೆ ನೋಡಿಕೊಳ್ಳಬೇಕಿತ್ತು.

ಆದರೆ ನಾವು ಹರಿದ್ವಾರದಲ್ಲೇ ಗಂಗೆಯಿಂದ ಎಷ್ಟೊಂದು ನೀರನ್ನು ಹೊರಗೆಳೆದುಕೊಳ್ಳುತ್ತೇವೆ. ಹೆಚ್ಚುಕಮ್ಮಿ ಶೇ.85ರಷು ನೀರು ಅಲ್ಲಿ ಗಂಗಾ ಮೇಲ್ದಂಡೆ ಕಾಲುವೆಗೆ ಬಳಕೆಯಾಗುತ್ತದೆ. ಹೀಗಾಗಿ ಗಂಗೆಯ ನೀರನ್ನು ಮೇಲೆತ್ತುವ ಎಲ್ಲಾ ಘಟಕಗಳಿಗೆ ಹಾಗೂ
ಜಲವಿದ್ಯುತ್ ಯೋಜನೆಗಳಿಗೆ ಇಂತಿಷ್ಟೇ ನೀರು ಬಳಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದೇವೆ. ನಾವು ಕೂಡ ಹತ್ತಿರದಿಂದ ಗಮನಿಸುತ್ತಿದ್ದೇವೆ. ಅಲಕನಂದಾ ವಿದ್ಯುತ್ ನಿಗಮ ಮಾತ್ರ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದೆ. ಅದು
ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ.

ಹಾಗೆಯೇ ನದಿಯ ದಂಡೆಯುದ್ದಕ್ಕೂ ಒದ್ದೆ ಭೂಮಿ ಇರುವಂತೆ ನೋಡಿಕೊಳ್ಳುತ್ತಿದ್ದೇವೆ. ಅವು ಬೇಸಿಗೆ ಕಾಲದಲ್ಲಿ ನದಿಗೆ ಹರಿವು
ಇರುವಂತೆ ನೋಡಿಕೊಳ್ಳುತ್ತವೆ. ಜಿಐಎಸ್ ಸಹಾಯದಿಂದ ನದಿ ದಡದಲ್ಲಿರುವ ಕೃಷಿ ಭೂಮಿಗಳನ್ನೂ, ಒದ್ದೆ ಜಾಗಗಳನ್ನೂ
ಗುರುತಿಸಿದ್ದೇವೆ. ಈ ಪ್ರದೇಶಗಳಲ್ಲಿ ನಾವೀಗ ಕಾನೂನುಬದ್ಧವಾಗಿ ಹೊಸ ನಿರ್ಮಾಣ ಯೋಜನೆಗಳನ್ನು ಹಾಗೂ ಇನ್ನಿತರ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸುವ ಅಧಿಕಾರ ಹೊಂದಿದ್ದೇವೆ.

ಉತ್ತರಾಖಂಡದಲ್ಲಿ ಹಿಮಾಲಯದ ಜಲಮೂಲಗಳನ್ನು ಪುನರುಜ್ಜೀವನವೊಳಿಸುವ ಮೂಲಕ ಗಂಗೆಗೆ ಇನ್ನಷ್ಟು ನೀರು ಬರು ವಂತೆ ಮಾಡುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಇನ್ನು, ಗಂಗೆಯ ಅಕ್ಕಪಕ್ಕ ಕಾಡು ಉಳಿಸುವ ಸಮಗ್ರ ಯೋಜನೆ ಯೊಂದನ್ನು ಜಾರಿಗೊಳಿಸಿದ್ದೇವೆ. ಪರಿಸರ ಸಚಿವಾಲಯ ಈ ಯೋಜನೆಯನ್ನು ದೇಶದ ಇನ್ನೂ 13 ನದಿಗಳಿಗೆ ವಿಸ್ತರಿಸುತ್ತಿದೆ. ನದಿಯ ದಡದ ಗುಂಟ ಸಾವಯವ ಕೃಷಿಯನ್ನೂ ಪ್ರೋತ್ಸಾಹಿಸುತ್ತಿದ್ದೇವೆ. ಹೀಗಾಗಿ ನದಿಗೆ ಬಂದು ಸೇರುವ ರಸಗೊಬ್ಬರ ಹಾಗೂ ಕೀಟನಾಶಕಗಳ ರಾಸಾಯನಿಕದ ಅಂಶಗಳು ಕಡಿಮೆಯಾಗುತ್ತವೆ.

ಇಲ್ಲಿಯವರೆಗೆ ನಿಮ್ಮ ಯೋಜನೆ ಎಷ್ಟು ಯಶಸ್ವಿಯಾಗಿದೆ ಎಂದು ಪರಿಗಣಿಸಬಹುದು?
ಕಾನ್ಪುರ ಮತ್ತು ವಾರಾಣಸಿಯಲ್ಲಿ ಮೊದಲಿಗೆ ಗಂಗೆಯನ್ನು ಶುದ್ಧೀಕರಿಸುವುದು ಸಾಧ್ಯವೇ ಇಲ್ಲ ಎಂಬಂತೆ ಕಾಣಿಸಿತ್ತು. ಆದರೆ,
ನಾವು ಅಲ್ಲೀಗ ಬಹುತೇಕ ಎಲ್ಲ ನೀರನ್ನೂ ಶುದ್ಧೀಕರಿಸಿಯೇ ಗಂಗೆಗೆ ಬಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಾಗಿ
ನಮಗೂ, ಜನರಿಗೂ ಈ ಅಸಾಧ್ಯ ಕಾರ್ಯ ಸಾಧ್ಯವೆಂಬ ಭರವಸೆ ಬಂದಿದೆ. ಮಥುರಾದಲ್ಲಿ ನಾವು ಶುದ್ಧೀಕರಿಸಿದ ನೀರಿಗೆ
ಮಾರುಕಟ್ಟೆಯನ್ನೂ ಹುಡುಕಿದ್ದೇವೆ. ಅಲ್ಲಿ ಇಂಡಿಯನ್ ಆಯಿಲ್ ಕಂಪನಿಗೆ 20 ಎಂಎಲ್‌ಡಿ ಯಮುನಾ ನದಿಯ ಶುದ್ಧೀಕರಿ ಸಿದ ನೀರನ್ನು ನೀಡುತ್ತಿದ್ದೇವೆ. ವಾರಾಣಸಿಯಲ್ಲಿರುವ ದಿನಾಪುರ ಎಸ್ ಟಿಪಿಯಲ್ಲಿ ತ್ಯಾಜ್ಯ ನೀರಿನಿಂದ ವಿದ್ಯುತ್ ಉತ್ಪಾದಿಸ ಲಾಗುತ್ತಿದೆ. ಆ ಘಟಕವೀಗ ತಾನೇ ಉತ್ಪಾದಿಸಿದ ವಿದ್ಯುತ್‌ನ ಮೇಲೆ ನಡೆಯುತ್ತಿದೆ.

ಪಾಟ್ನಾದಲ್ಲಿ ಎಲ್ಲಾ 16 ಘಾಟ್‌ಗಳನ್ನೂ ಒಂದಕ್ಕೊಂದು ಸಂಪರ್ಕಿಸಿ ಜನರಿಗೆ ಸುಂದರವಾದ ಪ್ರವಾಸಿ ತಾಣವನ್ನಾಗಿ ಮಾಡಿ ದ್ದೇವೆ. ನದಿಯ ಆರೋಗ್ಯವನ್ನು ಅಲ್ಲಿನ ಜಲಚರಗಳೇ ಹೇಳುತ್ತವೆ. ಈಗೀಗ ಗಂಗಾ ನದಿಯಲ್ಲಿ ಎಷ್ಟೊಂದು ಡಾಲ್ಫಿನ್‌ಗಳು, ಆಮೆಗಳು ಹಾಗೂ ಇನ್ನಿತರ ಜಲಚರಗಳು ಕಾಣಿಸಿಕೊಳ್ಳುತ್ತಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇತ್ತೀಚೆಗೆ ವಾರಾಣಸಿಯಲ್ಲಿ ಡಾಲ್ಫಿನ್ ನೋಡಿದೆ ಎಂದು ಹೇಳಿದ್ದರು.

ನದಿ ತನ್ನನ್ನು ತಾನೇ ಶುದ್ಧೀಕರಿಸಿಕೊಳ್ಳುವಂತಹ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆೆ ನೀವೊಂದು ಅಧ್ಯಯನ ಕೈಗೊಂಡಿದ್ದೀರಿ ಎಂಬ ಮಾಹಿತಿಯಿದೆ. ಅದರ ಬಗ್ಗೆೆ ಹೇಳುತ್ತೀರಾ?
ನ್ಯಾಷನಲ್ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರೀಸರ್ಚ್ ಇನ್ ಸ್ಟಿಟ್ಯೂಟ್ (ನೀರಿ) ಎಂಬ ಸಂಸ್ಥೆ ನಾಗ್ಪುರದಲ್ಲಿದೆ. ಅದು ಈ ಬಗ್ಗೆ ಅಧ್ಯಯನ ನಡೆಸುತ್ತಿದೆ. ಅದರ ಮಧ್ಯಂತರ ವರದಿ ಈಗಾಗಲೇ ಸಲ್ಲಿಕೆಯಾಗಿದ್ದು, ಅದರಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾ ಗಳನ್ನು ಬಳಸಿ ನದಿಯಲ್ಲಿರುವ ಕೊಳೆ ನಾಶಪಡಿಸುವ ಬಗ್ಗೆ ಹೇಳಲಾಗಿದೆ. ಎಲ್ಲಾ ನದಿಗಳಲ್ಲೂ ಇಂತಹ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಗಂಗಾ ನದಿಯಲ್ಲಿ ಇಂತಹ ಹೆಚ್ಚು ಸೂಕ್ಷ್ಮಾಣು ಜೀವಿಗಳು ಇರುವುದರಿಂದ ಈ ನದಿಯ ನೀರು ಹೆಚ್ಚು ಶುದ್ಧವಾಗಿದೆ. ಇದೇ ಕಾರಣಕ್ಕೆ ಗಂಗಾ ಜಲವನ್ನು ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಈಗ ನೀರಿ ಸಂಸ್ಥೆಯು ನದಿಯ ಸಮಗ್ರ ಮೈಕ್ರೋಬಯಾಲಜಿಯ ಬಗ್ಗೆಯೇ ಅಧ್ಯಯನ ನಡೆಸುತ್ತಿದೆ.

ಕೇಂದ್ರದಲ್ಲಿ ಸರಕಾರ ಬದಲಾದರೆ ಗಂಗಾ ನದಿ ಶುದ್ಧೀಕರಣ ಯೋಜನೆಯ ಮೇಲೆ ಪರಿಣಾಮ ಉಂಟಾಗುತ್ತದೆಯೇ?
ಇಲ್ಲ. ಸರಕಾರ ಬದಲಾದರೂ ಈ ಯೋಜನೆ ಬದಲಾಗದ ರೀತಿಯಲ್ಲೇ ಇದನ್ನು ರೂಪಿಸಿದ್ದೇವೆ. ಈಗಾಗಲೇ ಮುಂದಿನ 15
ವರ್ಷಗಳಿಗೆ ಕಾಮಗಾರಿಗಳನ್ನು ಗುತ್ತಿಗೆ ನೀಡಿದ್ದೇವೆ. ಗಂಗಾ ನದಿ ಶುದ್ಧೀಕರಿಸುವ ವ್ಯವಸ್ಥೆಗೆ ಈಗಾಗಲೇ ಅದ್ಭುತವಾದ ರೀತಿಯಲ್ಲಿ
ಸಾಂಸ್ಥಿಕ ರೂಪ ನೀಡಿದ್ದೇವೆ. ಇದು ಕೇವಲ ಒಂದು ಮಿಷನ್ ಅಲ್ಲ. ಇದೊಂದು ವಿಶೇಷ ಯೋಜನೆ. ನಾವೊಂದು ಪ್ರಾಧಿಕಾರ.
ಹೀಗಾಗಿ ನಮಗೆ ಹೆಚ್ಚು ಅಧಿಕಾರವಿದೆ. ಅಷ್ಟೇಕೆ, ದೇಶದ ಪ್ರತಿಯೊಬ್ಬನಿಗೂ ಗಂಗಾ ನದಿಯ ಜತೆಗೆ ಭಾವನಾತ್ಮಕ ಸಂಬಂಧ ವಿದೆ. ಹೀಗಾಗಿ ಯಾವ ಸರಕಾರ ತಾನೇ ಈ ಯೋಜನೆಯನ್ನು ಕೈಬಿಡಲು ಸಾಧ್ಯ?

ಮುಂದಿನ ದೊಡ್ಡ ಸವಾಲು ಯಾವುದು?
ನದಿಯಲ್ಲಿ ಸದಾಕಾಲ ನೀರು ಹರಿಯುತ್ತಿರುವಂತೆ ನೋಡಿಕೊಳ್ಳುವುದು ದೊಡ್ಡ ಸವಾಲು. ಇದಕ್ಕಾಗಿ ನಾವು ಹಳೆಯ ಕಾಲದ ಕೃಷಿ ಪದ್ಧತಿಯನ್ನು ಬದಲಿಸಬೇಕು. ಮಳೆ ನೀರನ್ನು ಹಿಡಿಯಲು ಕಲಿಯಬೇಕು. ಜಲಮೂಲಗಳನ್ನು ಪುನರುಜ್ಜೀವನಗೊಳಿಸ ಬೇಕು. ನೀರನ್ನು ಗೌರವಿಸಲು ಕಲಿಯಬೇಕು. ಆಗ ಎಲ್ಲವೂ ಸಾಧ್ಯವಾಗುತ್ತದೆ.