Thursday, 12th December 2024

ಮಣಿಪುರದಲ್ಲಿ ಕಾಡಿದ ಮೀನು, ಉಪವಾಸ…

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

ಹೆಚ್ಚಿನ ಮಣಿಪುರಿಗಳು ಮಾಂಸಾಹಾರಿಗಳು ಊಟದ ಜತೆಗೆ ವಿವಿಧ ರೀತಿಯ ಸಾಂಪ್ರದಾ ಯಿಕ ಕಲೆ ಮತ್ತು ಸಂಗೀತವನ್ನು ಅವರು ಹಾಸು ಹೊಕ್ಕಾಗಿ ಬಳಸಿರುವಷ್ಟು ಬಹುಶಃ ಯಾವ ಮೂಲೆಯಲ್ಲೂ ಜೀವನ ಶೈಲಿಯಲ್ಲಿ ಬಳಸಿಕೊಂಡಿರಲಿಕ್ಕಿಲ್ಲ.

ನಾನು ಮಣಿಪುರ ಮತ್ತು ಇತರೆ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿದ್ದಷ್ಟೂ ದಿನವೂ ಕಾಡುತ್ತಿದ್ದುದು ಊಟ ಉಣಿಸಿನದ್ದು. ಅಲೆಮಾರಿಗೆ ಅವೆಲ್ಲ ಒಂದು ಲೆಕ್ಕವೇ ಅಲ್ಲ ಬಿಡಿ. ಬಿಸ್ಕೀಟು, ಚಹಾದ ಮೇಲೆ ಮೂರ್ನಾಲ್ಕು ದಿನ ದಾಟಿಸುತ್ತಿದ್ದ ನನಗೆ ನಿಜಕ್ಕೂ ಸಮಸ್ಯೆಯಾಗುತ್ತಿದ್ದುದು ಎಲ್ಲ ಇದ್ದೂ ಏನೂ ಇಲ್ಲದಂತೆ ಅರೆಬರೆ ಸ್ಥಿತಿ ಇzಗ. ಉತ್ತರ ಭಾರತದಂತೆ ಇಲ್ಲೂ ಪರಾಠ, ದಾಲ್ ವ್ಯವಸ್ಥೆ ರಸ್ತೆ ಅಂಗಡಿಗಳಲ್ಲಿ ಇತ್ತಾದರೂ ಅದೆಲ್ಲ ತಿಂದು ಜೀರ್ಣಿಸಿಕೊಳ್ಳಬಹುದಾದ ನಂಬಿಕೆ ನನಗಲ್ಲ ಯಾವ ಪ್ರವಾಸಿಗನಿಗೂ ಬರಲಾರದು.

ಕಾರಣ ಎದುರಿಗೆ ಕಾಣುವ ಕೊಚ್ಚೆ. ನಿನ್ನೆಯ ದಿನದ ತೆಗೆಯದೇ ಬಿಟ್ಟ ಗಲೀಜು, ಆಚೆ ಕಡೆಯ ಮೀನು ಮಾರ್ಕೆಟ್ಟಿನ ಪ್ಲೇವರ್ರು, ಅತೀವ್ರ ವಾಸನೆ ಎದುರೆದುರೇ ಕೈಯ್ಯಲ್ಲಿ ನಾದುತ್ತಿರುವ ಹಿಟ್ಟಿನ ಆ ಪರಾಟೆಯ ಭರಾಟೆ ನೋಡಿದರೆ ಗಂಟಲಲ್ಲಿ ಇಳಿಸಿಕೊಳ್ಳುವುದೂ ಭಾರಿ ಕಷ್ಟದ ಕೆಲಸ. ಹಾಗಾಗಿ ಬಿಸ್ಕೇಟ್ಟು ಎದುರಿಗಿಟ್ಟು ಕೊಂಡು ದೊಡ್ಡ ಕಪ್ಪಿನ ತುಂಬಾ ಬಿಸಿ ಹಬೆಯಾಡುವ ಚಹ ತುಂಬಿಕೊಂಡು ಕೂರುತ್ತಿದ್ದೆ. ಅಚೀಚೆ ಟೇಬಲ್ಲಿನ ಗ್ರಾಹಕರು, ಸ್ಥಳೀಯರು ವಿಚಿತ್ರ ಪ್ರಾಣಿ ಎಂಬಂತೆ ನೋಡುತ್ತಿದ್ದು ನನಗೆ ಗೊತ್ತಾಗುತ್ತಲೇ ಇರುತ್ತಿತ್ತು. ಆದರೆ ದೇಶದೆಡೆ ಆಗ ಹಂದಿ ಜ್ವರದ ಭರಾಟೆ ಸದ್ದು ಮಾಡುವಾಗ ಅದ್ಯಾವನಿಗೆ ಧೈರ್ಯ ಬಂದೀತು.

ನನ್ನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಈ ಅವಕಾಶವನ್ನೇ ಉಪಯೋಗಿಸಿಕೊಂಡು ‘ಅದೆಂಗೆ ಬರೀ ಹುಲ್ಲು ತಿಂದಂಗೆ ಯಾವಾಗಲೂ ಬ್ರೆಡ್ ಮತ್ತು
ತರಕಾರಿ ತಿಂತಿಯಾ..’ ಎಂದು ನನ್ನ ತರಕಾರಿ ಊಟದ ಬಗ್ಗೆ ಗೋಮ್ಸಿ ಕಮೆಂಟಿಸುತ್ತಿದ್ದರೆ, ‘ಏನು ಮಾಡಲಿ ನಿಮ್ಮಂತೆ ಮಾಂಸ ಜಗಿಯೋದು ಕಲಿತಿಲ್ಲ. ಅದರಿಂದಲೇ ನಿಮ್ಮ ಹಲ್ಲು ಬಾಯಿ ಗಲೀಜು ಆಗಿ ಹಾಳಾಗಿರೋದು..’ ಎಂದು ಛೇಡಿಸುತ್ತಿದ್ದೆ. ಮಾಂಸಾಹಾರ ಎನ್ನುವುದು ಮಣಿಪುರಿಗಳ ಜೀವನ ಭಾಗವೇ ಆಗಿದೆ. ಅಲ್ಲ ಅವರಿಗೆ ತಮ್ಮ ಪಾನು ಜಗಿಯುವುದರ ಬಗೆಗಾಗಲಿ ಅಥವಾ ಮೀನಿನಿಂದ ಊರೆಲ್ಲ ಗಬ್ಬು ನಾರುವುದರ ಬಗೆಗಾಗಲಿ ಯಾವ ಕೀಳರಿಮೆಯೂ ಇರಲಿಲ್ಲ. ಊರಿಗೆ ಊರೇ ಅದಕ್ಕೆ ಹೊಂದಿಕೊಂಡುಬಿಟ್ಟಿದೆ.

ವಾಸನೆ ಅನ್ನಿಸುವುದಾದರೂ ಹೇಗೆ..? ಕೊರೊನಾ ಬರುವ ಐದಾರು ವರ್ಷಕ್ಕೆ ಮೊದಲೇ ಮಾಸ್ಕ್ ಇಲ್ಲಿ ಕಾಮನ್ ಆಗಿತ್ತು ಮತ್ತು ಜನರೂ ಅದೆಲ್ಲ ಶಿಸ್ತಾಗಿ ಪಾಲಿಸುತ್ತಿದ್ದರು. ಮಣಿಪುರಿಗಳು ಬೆಳಗ್ಗೆದ್ದು ತಿಂಡಿ ಎನ್ನುವ ಸಾಧ್ಯತೆ ತುಂಬಾ ಕಡಿಮೆ. ಒಮ್ಮೆಲೆ ಒಂಬತ್ತು ಗಂಟೆಯ ಹೊತ್ತಿಗೆ ಹೊಟ್ಟೆ ತುಂಬ ಪರಾಠ, ಆಯ್ದ ಪಲ್ಯ ತಿಂದು ಹೊರಟು ಬಿಟ್ಟರೆ, ಮತ್ತೆ ಸಂಜೆವರೆಗೆ ಏನಿದ್ದರೂ ಚಹ, ಬೀಡಿ ಮತ್ತು ಪಾನು. ತೀರ ಹಸಿವಾದರೆ ಸಮೋಸ ಮತ್ತು ಚೋಲೆ. ಮನೆಯಲ್ಲಿ ಬಾಳೆಯ ಎಲೆಯಲ್ಲಿ ಮೀನು ಮತ್ತು ಒಂದಿಷ್ಟು ಅನ್ನ ಇಲ್ಲಿನ ಸಾದಾ ಸೀದಾ ಹೆಚ್ಚಿನ ಜನ ಇಷ್ಟ ಪಡುವ ಆಹಾರ. ಸಿಗುವ ಎಲ್ಲ ತರಹದ ಕಾಯಿ ಪಲ್ಲೆಗಳನ್ನು ಹಾಕಿ ತಯರಿಸುವ ‘ಕೋಬಾಕ್’ ಎನ್ನುವ ಪದಾರ್ಥ ಅನ್ನದ ಜತೆಗೆ ಮೀನುಗಳನ್ನು ಸೇರಿಸಿ ತಯಾರಿಸುವ ಖಾದ್ಯ ಜನಪ್ರಿಯ.

ಕಾಯಿಪ ಮಾತ್ರ ಇರುವ ಕೋಬಾಕ್ ಕೊಡು, ಎಂದರೆ ಮೀನು ಎತ್ತಿಟ್ಟು ‘ವೆಜ್ ಕೋಬಾಕ್’ ಎನ್ನಬೇಕೆ…? ಒಂದು ರೀತಿಯಲ್ಲಿ ನಮ್ಮಲ್ಲಿ ಎಲ್ಲ ಕಾಯಿಪಲ್ಯೆ ಸೇರಿಸಿ ಟೊಮೇಟೊ ಮತ್ತು ಚಿಲ್ಲಿ ಸಾಸ್ ಹಾಕಿ, ಅದಕ್ಕಿಷ್ಟು ಹಸಿ ಮೆಣಸಿನ ಖಾರ ಸುರಿದು ಕೊಟ್ಟುಬಿಡುವುದನ್ನು ತಿಂದರೆ ನಾವು ಎರಡೂ ಕೈಯಿಂದ ಬುಡ ಹಿಡಿದುಕೊಳ್ಳುವು ದಷ್ಟೆ ಬಾಕಿ. ಅಲ್ಲಿಗೆ ಪ್ರತಿ ದಿನ ನನ್ನ ಊಟವೆಂದು ಕೈಗೆ ಸಿಕ್ಕಿದ ಸೌತೆಕಾಯಿ, ಟೊಮೇಟೊ, ಪಿಜಾ ಬಾಟಮ್ಮು ಸೇರಿಸಿಕೊಂಡು ಜಗಿಯುತ್ತಿದ್ದರೆ, ಅ ಮೀನಿನ ಬೆನ್ನು ಬಗಿದು, ಮುಳ್ಳು ಎತ್ತುತ್ತ ನನ್ನನ್ನೂ ಒಂದು ಚಪ್ಪಟೆ ಮೀನಿನಂತೆ ಜನರೆಲ್ಲ ವಿಚಿತ್ರವಾಗಿ ಹಲ್ಕಿರಿಯುತ್ತ ತಂತಮ್ಮ ಭಾಷೆಯಲ್ಲಿ ಆಡಿಕೊಂಡು ನೆಗೆಯಾಡುತ್ತಿದ್ದುದು ಗೊತ್ತಾಗುತ್ತಿತ್ತು.

ಕೆಲವೊಮ್ಮೆ ಅವರ ಅಡುಗೆ ಮನೆಯಲ್ಲಿ ಇರುತ್ತಿದ್ದ ಬೇಯಿಸಿದ ಬಟಾಟೆ, ಹಸಿ ಕೊತಂಬ್ರಿಯ ಜತೆಗೆ ಉಪ್ಪು ಖಾರದ ಪುಡಿ, ಬಿಳಿ ಅನ್ನವನ್ನು ಹಾಕಿಕೊಂಡು ನಾನು ಈಚೆಗೆ ಬಂದು ತಿನ್ನುತ್ತಿದ್ದೆ. ನನ್ನ ಈ ವಿಚಿತ್ರ ಅವತಾರವನ್ನು ಇತರೇ ಗ್ರಾಹಕರೊಂದಿಗೆ ನೋಡುತ್ತಿದ್ದ, ಗಯ ಮೇಲೆ ಕೂತಿರು ತ್ತಿದ್ದ ಹಣ್ಬಾ ‘ಅವಾಂಗ್’ ಗ್ರಾಮದ ಸರ್ವರ್ ಕಮ್ ಮ್ಯಾನೇಜರ್ ದುಡ್ಡು ಕೂಡ ತೆಗೆದುಕೊಳ್ಳದೆ ಕಳಿಸುತ್ತಿದ್ದಳು. ಕಾರಣ ಆಕೆಯ ದೃಷ್ಟಿಯಲ್ಲಿ ಇದೆಂಥಾ ಊಟ. ಬರೀ ಒಂದು ಹಿಡಿ ಅನ್ನ, ಬಟಾಟೆ, ಖಾರಪುಡಿ ಮತ್ತು ಉಪ್ಪು. ಅದನ್ನು ಸೇರಿಸಿ ಕಲೆಸಿಕೊಂಡು ತಿನ್ನುವುದನ್ನೆ ಬಿದ್ದಾಡಿಕೊಂಡು ನಗುತ್ತಿದ್ದ ಮಣಿಪುರಿಗಳ ತಮಾಷೆಗೆ ನಾನೊಂದು ಮಾಡೆಲ್ ಪ್ರಾಣಿ.
‘ಈರೋಂಬಾ’ ಎನ್ನುವದೂ ಮಣಿಪುರಿಗಳು ದಿನಪ್ರತಿ ಖುಷಿಯಿಂದ ಅನುಭವಿಸುವ ಆಹಾರ.

ಇದು ಕೂಡ ಮೀನು-ಮಾಂಸ ಆಧಾರಿತ ಊಟವಾಗಿದ್ದರೆ ಇದರ ಜತೆಗೆ ಬಿದಿರಿನ ಕಳಿಲೆಯ ಕೋಲುಗಳನ್ನು ಬೇಯಿಸಿ ಕೆಲವೊಮ್ಮೆ ಉದ್ದನೆಯ ತುಂಡಿನಾ ಕಾರದಲ್ಲಿ ಬೇಯಿಸಿ ಬಳಸುವುದು ಸಾಮಾನ್ಯ. ನಾನು ಹಾಗಿದ್ದ ಜಾಗದಲ್ಲಿ ಇನ್ನೂ ಮೀನು ಸೇರಿಸದೇ ಬೇಯಿಸಿದ ಕಳಿಲೆಗೆ ಯಥಾ ಪ್ರಕಾರ ಖಾರಪುಡಿ ಉಪ್ಪು ಲಿಂಬೆಹಣ್ಣು ಹಾಕಿಕೊಳ್ಳುತ್ತಿದ್ದೆ. ಮೀನು ಮತ್ತು ಈ ಕಳಿಲೆಯ ಕೋಲಿನ ಆಹಾರಕ್ಕೆ ಅದ್ಯಾವ ಪರಿಯಲ್ಲಿ ಬೇಡಿಕೆಯಿದೆ ಯೆಂದರೆ ಇದನ್ನು ತುಂಬಾ ಚೆಂದವಾಗಿ ನಿರ್ವಹಿಸುವ ಮನೆಯೊಡತಿಗೆ ವಿಶೇಷ ಪ್ರಾಧಾನ್ಯ ಮಣಿಪುರಿಗಳಲ್ಲಿ. ಈ ಕಳಿಲೆಗಳನ್ನು ಮೀನಿನ ಬುಟ್ಟಿಗೆ ಸೇರಿಸುವ ಮೊದಲೆ ಕೈಗೆ ಎತ್ತಿಕೊಂಡು ಅದಕ್ಕೆ ಮಸಾಲೆ ಸೇರಿಸಿ, ಅದರ ತುಂಡುಗಳ ಮಧ್ಯೆ ಬೇಯಿಸಿದ ಬಟಾಟೆ ಇಟ್ಟು ತಿನ್ನಲು ಸಜ್ಜುಮಾಡಿಕೊಳ್ಳುತ್ತಿದ್ದರೆ, ನನ್ನ ಈ ಸಸ್ಯಾಹಾರದ ಅವತಾರಗಳಿಗೆ ಅಕ್ಷರಶಃ ಅಚ್ಚರಿಯಿಂದ ತಿಂದು ಮುಗಿಸುವವರೆಗೂ ನೋಡುತ್ತ ನಿಲ್ಲುತ್ತಿದ್ದರು. ಆದರೆ ಅಲ್ಲಿನ ಕಳಿಲೆ ರುಚಿ ಮತ್ತು ಅದರ ಸವಿಯೇ ಬೇರೆ.

ಹೆಚ್ಚಿನ ಮಣಿಪುರಿಗಳು ಮಾಂಸಾಹಾರಿಗಳಾದರೂ ಇವರಲ್ಲಿ ಇರುವ ಮೈಬಾಗಳ ಸಮುದಾಯ ಅಪ್ಪಟ ಸಸ್ಯಾಹಾರಿಗಳೇ. ಮುಸ್ಲಿಂರನ್ನು ‘ಪಂಗಾಳ’ ಎಂದು ಗುರುತಿಸುವ ಮಣಿಪುರಿಗಳಲ್ಲಿ, ಸರ್ವ ರೀತಿಯ ಮಾಂಸಭಕ್ಷಕರೂ ಇದ್ದಾರೆ. ಅವರ ಆಹಾರ ಪದ್ಧತಿಯೂ ಬಹುಶಃ ಅವರನ್ನು ಹೀಗೆ ಪ್ರತ್ಯೇಕ ಸಂಸ್ಕೃತಿಯ ಭಾಗವಾಗಿ ಗುರುತಿಸಲು ಕಾರಣವಾಗಿದ್ದು ಸುಳ್ಳಲ್ಲ. ಊಟದ ಜತೆಗೆ ವಿವಿಧ ರೀತಿಯ ಸಾಂಪ್ರದಾಯಿಕ ಕಲೆ ಮತ್ತು ಸಂಗೀತವನ್ನು ಅವರು ಹಾಸು ಹೊಕ್ಕಾಗಿ ಬಳಸಿರುವಷ್ಟು ಬಹುಶಃ ಯಾವ ಮೂಲೆಯಲ್ಲೂ ಜೀವನ ಶೈಲಿಯಲ್ಲಿ ಬಳಸಿಕೊಂಡಿರಲಿಕ್ಕಿಲ್ಲ.

ಹಾಗಾಗೇ ಅವರ ಶೈಲಿ ಮತ್ತು ಭಾಷೆ, ಮಣಿಪುರಿಗಳನ್ನು ಹಿಡಿದಿಟ್ಟಿರುವ ಪ್ರಮುಖ ಅಂಶವಾಗಿ ಗೋಚರಿಸುತ್ತದೆ. ಆದರೆ ಒಳಗೊಳಗೆ ಇರುವ ಹಲವು ಸಮು ದಾಯ ಮತ್ತು ಸಂಪ್ರದಾಯದ ಪಂಗಡಗಳು ಆಚರಣೆಗಳು ತಂಡದಿಂದ ತಂಡಕ್ಕೆ ಭಿನ್ನವಾಗಿದ್ದು ಪ್ರತಿ ಬುಡಕಟ್ಟು ಮತ್ತು ಸಮುದಾಯ ತನ್ನದೆ ಆದ ಭಿನ್ನಭಿನ್ನ ಆಚರಣೆಗಳನ್ನು ಹೊಂದಿದ್ದು ಅತಿಥಿಗಳನ್ನು ಸತ್ಕರಿಸುವುದರಲ್ಲಿಯೂ ವಿಭಿನ್ನತೆಯನ್ನು ಹೊಂದಿದೆ.

ಕೆಲವು ಬುಡಕಟ್ಟಿಗೆ ಅತಿಥಿ ದೇವರ ಸಮಾನವಾದರೆ, ಕೆಲವು ಸಮುದಾಯದಲ್ಲಿ ಅತಿಥಿಯನ್ನು ಸತ್ಕರಿಸುವ ಬದಲಿಗೆ, ಬಂದವರು ಸ್ವತಃ ಅಡುಗೆ ಊಟ ಮಾಡಿ ಕೊಳ್ಳುವಂತೆ ಹೇಳುವಷ್ಟು ಓಲೈಸಲಾಗುತ್ತದೆ. ಇನ್ನು ಕೆಲವರು ಅತಿಥಿಗಳನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಏನಿದ್ದರೂ ಮನೆಯಾಚೆಯ ಚಿಕ್ಕ ಜಗುಲಿ ಯಂಥಹ ಕಟ್ಟೆ ಮತ್ತು ಅದರ ಕೋಣೆಯ ಅತಿಥಿ ವಾಸಿಸಬೇಕು.

ಕಾರಣ ಅತಿಥಿ ಎಂದರೆ ಹೊರಗಿನಿಂದ ಬಂದವರು ಯಾವ ಮನಸ್ಸಿನ ಯಾವ ರೂಪದಲ್ಲಿ ಒಳಿತೋ ಕೆಡಕೋ ಗೊತ್ತಿಲ್ಲದಿರುವುದರಿಂದ ಅವರನ್ನು ಒಳಕ್ಕೆ ಸೇರಿಸುವುದಿಲ್ಲ ಎನ್ನುವುದೂ ಇದೆ. ರಿಸ್ಕ್ ಯಾಕೆ ಅಂತಾ ಇರಬಹುದಾ..? ಇನ್ನು ಕೆಲವು ಬುಡಕಟ್ಟಿನ ಸಂಪ್ರದಾಯದಲ್ಲಿ ಗೌರವ ಪೂರ್ವಕವಾಗಿ ಹೊದಿಸುವ ಶಾಲನ್ನು, ಚಳಿಗೆ ರಕ್ಷಣಾತ್ಮಕವಾಗಿ ಬಳಸಿದ ಕಾರಣ ಆ ದಿನದ ಮಟ್ಟಿಗೆ ಪೂರ್ತಿ ಊರ ನನಗೆ ಊಟಕ್ಕೆ ನೀಡಲಿಲ್ಲ. ಕಾರಣ ಊರಿನಲ್ಲಿ ಗೌರವ ಪೂರ್ವಕವಾಗಿ ನೀಡುವ ಶಾಲಿನ ಬಟ್ಟೆಯನ್ನು ಕತ್ತಿಗೆ ಏಳು ದಿನಗಳ ಕಾಲ ಹಾಕಿಕೊಂಡಿರಬೇಕು.

ನಾನು ತಕ್ಷಣ ತೆಗೆದು ಆ ಚಳಿಗೆ ನೆಮ್ಮದಿಯಾಗಿ ಹೊದ್ದುಕೊಂಡಿದ್ದೆ. ಆ ರಾತ್ರಿ ಉಪವಾಸವೇ ಆಗುತ್ತಿತ್ತು ಇದ್ದಿದ್ದರೆ. ಅದಕ್ಕೆ ರಾತ್ರೋರಾತ್ರಿ ನಾನು ಗಾಡಿಯೇರಿ ಪಕ್ಕದೂರಿಗೆ ದೌಡಾಯಿಸಿದ್ದೆ. ಅಲ್ಲಿಂದ 15 ಕಿ.ಮೀ. ದೂರದ ಕೌಲಿಂಗ್‌ಗೆ ಬಂದು ವಾಸ್ತವ್ಯ ಹೂಡಿದ್ದೆ. ಇದೆಲ್ಲ ಇನ್ನೊಂದು ವಾರಕ್ಕಿರಲಿ.