ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಮೀನುಗಾರಿಕೆಯು ಭಾರತದಲ್ಲಿ ಆಹಾರ ಉತ್ಪಾದನೆ, ಪೌಷ್ಟಿಕಾಂಶದ ಭದ್ರತೆ, ಉದ್ಯೋಗ ಮತ್ತು ಆದಾಯದ ಪ್ರಮುಖ ಮೂಲವಾಗಿದೆ. ೨೦ ದಶಲಕ್ಷ ಕ್ಕೂ ಹೆಚ್ಚು ಮೀನುಗಾರರು ಮತ್ತು ಮೀನು ಕೃಷಿಕರಿಗೆ ಇದು ನೇರ ಜೀವನಾಧಾರವಾಗಿದೆ. ರಾಷ್ಟ್ರೀಯ ಆರ್ಥಿಕತೆಯಲ್ಲಿ ಮೀನುಗಾರಿಕೆಯು ವಿದೇಶಿ ವಿನಿಮಯ ಗಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ವಲಯವಾಗಿಯೂ ಪ್ರಾಮುಖ್ಯವನ್ನು ಪಡೆದಿದೆ.
ಹೆಚ್ಚುವರಿಯಾಗಿ, ಈ ವಲಯವು ಕೈಗಾರಿಕಾ ಉದ್ಯಮದ ಗುಣಲಕ್ಷಣಗಳನ್ನು ಹೊಂದಿದೆ. ಸಮುದ್ರ ಮತ್ತು ಒಳನಾಡು ವಲಯದಲ್ಲಿನ ಸಂಪನ್ಮೂಲ
ಗಳನ್ನು ಬಳಸಿಕೊಂಡು ಮೀನು ಉತ್ಪಾದನೆಗೆ ಬೆಂಬಲ ನೀಡುವ ಉದ್ದೇಶದಿಂದ ೧೯೫೭ರಲ್ಲಿ ಮೀನುಗಾರಿಕೆ ಇಲಾಖೆಯನ್ನು ಸ್ಥಾಪಿಸಲಾಯಿತು.
ಕರ್ನಾಟಕವು ಸುಮಾರು ೫.೭೬ ಲಕ್ಷ ಹೆಕ್ಟೇರ್ ಒಳನಾಡು ಜಲ ಸಂಪನ್ಮೂಲಗಳು, ೮೦೦೦ ಹೆಕ್ಟೇರ್ ಉಪ್ಪು ನೀರು, ೨.೩೮ ಲಕ್ಷ ಹೆಕ್ಟೇರ್ ನೀರು ಮತ್ತು ಉಪ್ಪು ಪ್ರದೇಶ ಮತ್ತು ೨೭,೦೦೦ ಚ.ಕಿ.ಮೀ. ಭೂಖಂಡ ಸೇರಿ ೩೧೩.೦೨ ಕಿ.ಮೀ. ಕರಾವಳಿಯನ್ನು ಹೊಂದಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಮೀನು ಸಂಪತ್ತು ಹೇರಳವಾಗಿದೆ.
ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನ ಮೀನುಗಾರರು ನಮ್ಮ ಕಡಲ ವ್ಯಾಪ್ತಿಗೆ ಬಂದು ಮೀನು ಹಿಡಿಯುತ್ತಾರೆ ಕೂಡ. ಆದರೆ, ರಾಜ್ಯದಲ್ಲಿ ಮೀನುಗಾರಿಕೆ ಬಂದರುಗಳ ಅಭಿವೃದ್ಧಿಯಾಗದೆ, ಮೂಲಭೂತ ಸೌಕರ್ಯ ನಿರ್ಮಿಸದೆ ಇರುವುದರಿಂದ ಇಲ್ಲಿನ ಜನರ ಬದುಕು ದುಸ್ತರವಾಗಿದೆ. ರಾಜ್ಯದ ಇತರೆ ಭಾಗಗಳಲ್ಲಿ ರೈತರಿಗೆ, ಇನ್ನುಳಿದ ಉತ್ಪಾದನಾ ವರ್ಗಗಳಿಗೆ ತೋರುವ ಒಲವನ್ನು ಸ್ವಲ್ಪಮಟ್ಟಿಗೆ ಕರಾವಳಿಗರಿಗೆ ತೋರಿ ಅಗತ್ಯ ಮೂಲಸೌಕರ್ಯ, ದೋಣಿ, ಹಡಗುತಾಣಗಳ ಅಭಿವೃದ್ಧಿ ಮತ್ತು ಜೀವವಿಮೆಗಳಂಥ ಸೌಲಭ್ಯಗಳನ್ನು ಆಳುಗರು ನೀಡಿದರೆ, ರಾಜ್ಯದ
ಮತ್ಸ್ಯೋದ್ಯಮವು ಮತ್ತಷ್ಟು ಬಲಿಷ್ಠವಾಗಿ, ರಾಜ್ಯದ ಬೊಕ್ಕಸಕ್ಕೆ ಸಿಂಹಪಾಲು ನೀಡಬಲ್ಲದು.
ರಾಜ್ಯದಲ್ಲಿ ಮೀನು ಉತ್ಪಾದನೆಯು ೮೦ರ ದಶಕದ ಆರಂಭದಲ್ಲಿ ಸುಮಾರು ೨ ಲಕ್ಷ ಟನ್‌ಗಳಷ್ಟಿದ್ದುದು ೯೦ರ ದಶಕದ ಮಧ್ಯಭಾಗದಲ್ಲಿ ೩ ಲಕ್ಷ ಟನ್‌ಗಳ ಗರಿಷ್ಠ ಮಟ್ಟವನ್ನು ತಲುಪಿತು. ಚೀನಾ, ಇಂಡೋನೇಷ್ಯಾ, ಭಾರತ, ವಿಯೆಟ್ನಾಂ, ಅಮೆರಿಕ ಕ್ರಮವಾಗಿ ವಿಶ್ವದ ೫ ಪ್ರಮುಖ ಮೀನು ಉತ್ಪಾ ದನಾ ರಾಷ್ಟ್ರಗಳಾಗಿವೆ. ಇಡೀ ಭಾರತದಲ್ಲಿ ೭೫೧೬.೬ ಕಿ.ಮೀ.ಗಳಷ್ಟು ಕರಾವಳಿ ಪ್ರದೇಶವಿದ್ದರೆ, ಕರ್ನಾಟಕದ ಕರಾವಳಿಯು ದಕ್ಷಿಣ ಕನ್ನಡ (೬೨ ಕಿ.ಮೀ.), ಉಡುಪಿ (೯೮ ಕಿ.ಮೀ.) ಮತ್ತು ಉತ್ತರ ಕನ್ನಡ (೧೬೦ ಕಿ.ಮೀ.) ಜಿಲ್ಲೆಗಳಲ್ಲಿ ಸರಿಸುಮಾರು ೩೨೦ ಕಿಲೋಮೀಟರ್ ವ್ಯಾಪಿಸಿದ್ದು, ಮೀನುಗಾರಿಕೆ ಪ್ರದೇಶವನ್ನು, ಸಮಸ್ತ ಮೀನು ಉತ್ಪಾದನೆ ಮತ್ತು ರಪ್ತು ವ್ಯವಹಾರವನ್ನು ಈ ಮೂರು ಜಿಲ್ಲೆಗಳೇ ನೋಡಿಕೊಳ್ಳುತ್ತವೆ.
ಆದರೂ, ರಾಜ್ಯ ಸರಕಾರಗಳು ನಮ್ಮ ಮೀನುಗಾರರಿಗೆ ಮತ್ತು ಸ್ಥಿರವಿಲ್ಲದ ಆದಾಯ ನಂಬಿಕೊಂಡು ಬದುಕು ಸಾಗಿಸುವ ಅವರ ಸಾಹಸಕ್ಕೆ ಬೆಂಬಲವಾಗಿ ನಿಲ್ಲದೆ ಅಸಡ್ಡೆ ಮಾಡಿವೆ. ಒಳನಾಡು ಮೀನುಗಾರಿಕೆಯನ್ನು ಸರಕಾರಗಳ ಯೋಜನಾ ಪ್ರಕ್ರಿಯೆಯಲ್ಲಿ ಕಡಿಮೆ ಪ್ರಾಮುಖ್ಯದ ಪ್ರದೇಶವೆಂದು ಪರಿಗಣಿಸ ಲಾಗುತ್ತದೆ. ಬಜೆಟ್ ಹಂಚಿಕೆಯನ್ನು ಹೆಚ್ಚಾಗಿ ಇತರೆ ಕಲ್ಯಾಣ ಚಟುವಟಿಕೆಗಳಿಗಾಗಿ ಮೀಸಲಿಡಲಾಗಿದೆ. ಸೂಕ್ತ ಮತ್ತು ಹೊಸ ತಂತ್ರಜ್ಞಾನಗಳ ವಿಸ್ತರಣೆಗೆ ಪ್ರಯತ್ನದ ಕೊರತೆಯನ್ನು ಈ ವಲಯವು ಬಹಳ ಅನುಭವಿಸುತ್ತಿದೆ.
ತಂತ್ರಜ್ಞಾನವಿಂದು ಎಲ್ಲ ತೆರನಾದ ವಿಭಾಗಗಳಲ್ಲಿ ಹಾಸುಹೊಕ್ಕಾಗಿದ್ದು, ಕುಳಿತಲ್ಲಿಂದಲೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೂಲಕ ನಿಯಂತ್ರಿಸುವ ಹಂತಕ್ಕೆ ವಿಜ್ಞಾನ ಜಗತ್ತು ತಲುಪಿದೆ. ಇಂಥ ಕೆಲ ತಂತ್ರಜ್ಞಾನಗಳನ್ನು ದೇಶದ ವಿವಿಧ ರಾಜ್ಯಗಳು ಅಳವಡಿಸಿಕೊಂಡು ಅವುಗಳ
ಕುರಿತು ಸಾರ್ವಜನಿಕರಿಗೆ ತರಬೇತಿ ನೀಡಿ, ಅಗತ್ಯ ಸೌಕರ್ಯಗಳೊಂದಿಗೆ ಅನುಷ್ಠಾನಗೊಳಿಸುತ್ತವೆ. ಆದರೆ ನಮ್ಮ ರಾಜ್ಯದಲ್ಲೋ, ಅದೇ ಓಬೀರಾಯನ ಕಾಲದ ಪದ್ಧತಿ. ಹರಿದುಹೋದ ಬಲೆಗಳು, ತುಕ್ಕು ಹಿಡಿದ ಸವಕಲು ದೋಣಿಗಳ ಮೂಲಕ ಮೀನುಗಾರಿಕೆ ಮಾಡುವಂಥ ದುರ್ದೆಸೆಯಿಂದ ನಮ್ಮ ಕರಾವಳಿ ಭಾಗವು ಇನ್ನೂ ಬಿಡುಗಡೆಯಾಗಿಲ್ಲ.
ಇಡೀ ರಾಜ್ಯದಲ್ಲಿ ಮೀನು ಉತ್ಪಾದನೆ ನಡೆಯುತ್ತಿರುವುದೇ ೩ ಜಿಲ್ಲೆಗಳ ಮೂಲಕ, ಅದೂ ನೈಸರ್ಗಿಕವಾಗಿ ದೊರೆತ ಕಡಲ ಕೃಪೆಯಿಂದ. ಇದನ್ನೂ
ನಾವು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ, ವಿವಿಧ ಉತ್ಪಾದನಾ ವಲಯಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ? ಹೀಗೆ ಕೈಕಟ್ಟಿದರೆ, ಈ ಕಸುಬನ್ನೇ ನೆಚ್ಚಿಕೊಂಡಿರುವ ಕುಟುಂಬ ಗಳು ಹೇಗೆ ಬದುಕು ಸಾಗಿಸಬೇಕು ಎಂಬ ಸೂಕ್ಷ್ಮವನ್ನೂ ಅರಿತಿಲ್ಲವಲ್ಲ ನಮ್ಮ ಸರಕಾರದ ಅಧೀನ ಇಲಾಖೆಗಳು ಮತ್ತು ಅದರ ಅಧಿಕಾರಿಗಳು ಎಂಬುದೇ ಈ ಭಾಗದ ಜನರ ಆಕ್ರೋಶ.
ಮೀನುಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಸಾಂಸ್ಥಿಕ ವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬೆಂಬಲದ ಕೊರತೆಯಾಗಿರುವುದು ಮೀನುಗಾರಿಕೆ ವಲಯದ ಕಳವಳಗಳಲ್ಲಿ ಒಂದಾಗಿದೆ. ಆದ್ದರಿಂದ, ಒಳನಾಡಿನ ಮೀನುಗಾರಿಕೆಯನ್ನೂ ಒಂದು ಕೃಷಿ ಸಂಬಂಧಿತ ಚಟುವಟಿಕೆಯಾಗಿ ಸರಕಾರ ಪರಿಗಣಿಸಿ, ಇದಕ್ಕೆ ಸಂಬಂಧಿಸಿದ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ. ಜತೆಗೆ ರಾಷ್ಟ್ರೀಯ ಮಟ್ಟದಲ್ಲಿ ಒಳನಾಡು ಮೀನುಗಾರಿಕೆ ನೀತಿಯ ಬಗ್ಗೆ ಯೋಜನೆ ರೂಪಿಸಬೇಕಾದ ಅಗತ್ಯವಿದೆ.
ಈಗ ನಮ್ಮ ವ್ಯವಸ್ಥೆಯಲ್ಲಿರುವ ವಸ್ತುಸ್ಥಿತಿಯ ಕಡೆಗೆ ಕಣ್ಣು ಹಾಯಿಸೋಣ:
? ರೈತರಿಗೆ ನೀಡುವ ನಷ್ಟ ಪರಿಹಾರ ಯೋಜನೆಗಳಂತೆ, ಪ್ರಕೃತಿ ವಿಕೋಪಕ್ಕೆ ಒಳಗಾದ ಮೀನುಗಾರರ ರಕ್ಷಣೆಗೆ ಸ್ಪಷ್ಟ ನೀತಿಯಿಲ್ಲ.
? ಒಳನಾಡು ವಲಯದಲ್ಲಿ ಮೀನುಗಳ ಉತ್ಪಾದನೆ, ಬಳಕೆ ಮತ್ತು ಮಾರುಕಟ್ಟೆಯ ಸ್ಥಿತಿಯ ಕುರಿತು ಸಮರ್ಪಕ ಡೇಟಾಬೇಸ್ ಲಭ್ಯವಿಲ್ಲ.
? ರಫ್ತು ಆಧರಿತ ಮೀನುಗಾರಿಕೆ ಉದ್ಯಮಗಳ ಉತ್ತೇಜ ನಕ್ಕೆ ಪ್ರೋತ್ಸಾಹದ ಕೊರತೆಯಿದೆ.
? ಒಳನಾಡು ಮೀನುಗಾರಿಕೆ ಅಭಿವೃದ್ಧಿಯನ್ನು ಉತ್ತೇಜಿಸಲು ಅನುವುಮಾಡಿಕೊಡುವ ಸಂಸ್ಥೆಗಳ ಸಂಖ್ಯೆ ಕಡಿಮೆಯಿದೆ.
? ಮೀನಿನ ಬೀಜ ಮತ್ತು ಆಹಾರ ಉತ್ಪಾದನೆ, ಮೀನು ಸಾಕಣೆ ಮತ್ತು ಮೀನು ಆಧರಿತ ಉದ್ಯಮಗಳ ಉತ್ತೇಜನಕ್ಕಾಗಿನ ವಿಸ್ತರಣಾ ಸೇವೆಗಳು ಕಳಪೆಯಾಗಿವೆ.
? ಮೀನಿನ ಬೀಜ, ಫೀಡ್ ಮತ್ತು ಪ್ರಭೇದಗಳ ಗುಣಮಟ್ಟಕ್ಕೆ ಯಾವುದೇ ಮಾನದಂಡಗಳಿಲ್ಲ; ಆದ್ದರಿಂದ, ಮೀನು ಉತ್ಪನ್ನದ ಮೇಲೆ ಯಾವುದೇ ಪ್ರಮಾಣೀ ಕರಣ ಉಪಕ್ರಮಗಳಿಲ್ಲ.
? ಮೀನುಗಾರಿಕೆಯು ಕೃಷಿಯ ವ್ಯಾಪ್ತಿಗೆ ಬಂದರೂ, ಉಪವಲಯಕ್ಕೆ ಕಡಿಮೆ ಸಂಖ್ಯೆಯ ನಿಬಂಧನೆಗಳನ್ನು ಮಾಡಲಾಗಿದೆ. ಡೀಸೆಲ್ ಮತ್ತು ವಿದ್ಯುತ್‌ನಲ್ಲಿ ಸಬ್ಸಿಡಿ ನೀಡಲಾಗುವುದಿಲ್ಲ.
? ವಿಮಾ ಕಂಪನಿಗಳು ಮೀನುಗಾರಿಕೆಯನ್ನು ತಮ್ಮ ವ್ಯಾಪ್ತಿಯಲ್ಲಿ ಪರಿಗಣಿಸುತ್ತಿಲ್ಲ.
? ಜಲಾನಯನ ಪ್ರದೇಶಗಳನ್ನು ಗುತ್ತಿಗೆ ಪಡೆಯುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳದ್ದೇ ಮೇಲುಗೈ ಇದೆ. ‘ಟ್ರಾಲಿಂಗ್’ ಎನ್ನುವುದು ಯಾಂತ್ರೀಕೃತ ಮೀನು ಗಾರಿಕೆಯ ಒಂದು ರೂಪವಾಗಿದ್ದು, ೧೯೫೦ರ ದಶಕದಲ್ಲಿ ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ನೀರಿನಾಳದಲ್ಲಿ ಸಕ್ರಿಯವಾಗಿ ಬಲೆ ಹಾಕಿ ಯಂತ್ರ ಗಳ ಮೂಲಕ ಎಳೆಯುವ ಮೀನುಗಾರಿಕೆ ವ್ಯವಸ್ಥೆಯಿದು. ಹೀಗೆ ಮೀನುಗಾರಿಕೆಯಲ್ಲಿ ಬಂಪರ್ ಕ್ಯಾಚ್‌ಗಳು,
ಸರಕಾರದ ಸಬ್ಸಿಡಿಗಳು, ಇಂಧನ ತೆರಿಗೆ ರಿಯಾಯಿತಿಗಳು ಮತ್ತು ಬೆಳೆಯುತ್ತಿರುವ ಸ್ಪರ್ಧೆಗಳು, ಭಾರತದ ಸಾಂಪ್ರದಾಯಿಕ ಮೀನುಗಾರರು ತಮ್ಮ ವಾಡಿಕೆಯ ದೋಣಿಗಳನ್ನು ಮೋಟಾರು ದೋಣಿಗಳನ್ನಾಗಿ ಮಾರ್ಪಡಿಸಲು ಹೆಚ್ಚೆಚ್ಚು ಪ್ರಮಾಣದಲ್ಲಿ ಆಕರ್ಷಿಸಿದವು. ಹೀಗಾಗಿ ೧೯೮೦ ಮತ್ತು ೨೦೧೪ರ ನಡುವೆ ಕೇವಲ ೯೦೦೦ದಷ್ಟಿದ್ದ ಯಾಂತ್ರೀಕೃತ ದೋಣಿಗಳ ಸಂಖ್ಯೆಯೀಗ ೭೨,೦೦೦ಕ್ಕೆ ಏರಿದೆ ಎನ್ನುತ್ತದೆ ಒಂದು ಅಂದಾಜು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತದ ಸಾಂಪ್ರದಾಯಿಕ ಮೀನುಗಾರಿಕಾ ಪದ್ಧತಿಗಳು ಮತ್ತು ಸಂಬಂಧಿತ ಸ್ಥಳೀಯ ಪರಿಸರ ವ್ಯವಸ್ಥೆಗಳು, ತಳಿಗಳ ಕುಸಿತ ಹಾಗೂ ಸಾಂಪ್ರದಾಯಿಕ ಮೀನುಗಾರರೊಂದಿಗೆ ಹೆಚ್ಚುತ್ತಿರುವ ಘರ್ಷಣೆಯ ಪರಿಣಾಮವಾಗಿ, ೧೯೮೮ರಲ್ಲಿ ಕೇರಳವು ತನ್ನ ಪ್ರಾದೇಶಿಕ ನೀರಿನಲ್ಲಿ ಯಾಂತ್ರೀಕೃತ ಮೀನುಗಾರಿಕೆಯ ಮೇಲೆ ವಾರ್ಷಿಕ ಕಾಲಮಿತಿಯ ನಿಷೇಧ ಹೇರಿದ ಮೊದಲ ರಾಜ್ಯವಾಯಿತು. ನಂತರ ಇತರೆ ರಾಜ್ಯಗಳು ಇದನ್ನು ಅನುಸರಿಸಿದವು. ಭಾರತದ ‘ಎಕ್ಸ್‌ಕ್ಲುಸಿವ್ ಇಕನಾಮಿಕ್ ಜೋನ್’ನಲ್ಲಿ (ಇಇಜಡ್) ಕಾರ್ಯನಿರ್ವಹಿಸುವ ಎಲ್ಲಾ ಯಾಂತ್ರೀಕೃತ ದೋಣಿ
ಮತ್ತು ಹಡಗುಗಳ ಮೇಲೆ ಕೇಂದ್ರವು ಏಕರೂಪದ ವಾರ್ಷಿಕ ಮೀನುಗಾರಿಕೆ ನಿಷೇಧವನ್ನು (೬೧ ದಿನಗಳು) ಸ್ಥಾಪಿಸಿತು. ಈ ನಿಷೇಧವು ೨೦೨೦ ಏಪ್ರಿಲ್ ೧೫ರಂದು ಪೂರ್ವ ಕರಾವಳಿಯಲ್ಲಿ ಪ್ರಾರಂಭವಾಯಿತು. ಈ ವ್ಯವಸ್ಥೆಯನ್ನು ಹೊರತುಪಡಿಸಿ ಅನುಮತಿಸಲಾದ ಇನ್ನುಳಿದ ಮೀನುಗಾರಿಕೆ ಪದ್ಧತಿಗಳು ತಮ್ಮನ್ನು ಮರುಸ್ಥಾಪಿಸಿ ಕೊಳ್ಳಲು ಇನ್ನೂ ಹೆಣಗಾಡುತ್ತಿವೆ.
ವಾರ್ಷಿಕ ಮೀನುಗಾರಿಕೆ ನಿಷೇಧವನ್ನು ೬೧ ದಿನ ಗಳಿಂಂದ ೪೭ ದಿನಗಳವರೆಗೆ ಕಡಿತಗೊಳಿಸುವುದು, ಕಳೆದು ಹೋದ ಮೀನುಗಾರಿಕೆ ದಿನಗಳನ್ನು ಮತ್ತೆ ಸರಿದಾರಿಗೆ ತರಲು ಇರುವ ಮತ್ತೊಂದು ಪರಿಹಾರವಾಗಿದ್ದು ಇದಕ್ಕಾದರೂ ಅನುಮತಿ ನೀಡಬೇಕೆಂಬುದು ಕಡಲಮಕ್ಕಳ ಆಗ್ರಹವಾಗಿದೆ. ಕನಿಷ್ಠಪಕ್ಷ ಇದರಿಂದಲಾದರೂ ಚಿಕ್ಕಪುಟ್ಟ ದಕ್ಕೆಲ್ಲ ಸರಕಾರವನ್ನು ನಂಬಿ ಕುಳಿತುಕೊಳ್ಳುವ/ಅವಲಂಬಿಸುವ ತೊಂದರೆ ತಪ್ಪುತ್ತದೆ ಎಂಬುದು ಮೀನುಗಾರರ
ಆಲೋಚನೆ. ಸದರಿ ನಿಷೇಧ ಪ್ರಕ್ರಿಯೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಿಕೆಯು, ಸಣ್ಣ ಪ್ರಮಾಣದ
(ಯಾಂತ್ರೀಕೃತವಲ್ಲದ) ಮೀನುಗಾರರು ಮತ್ತು ವಲಸೆ ಕಾರ್ಮಿಕರಿಗೆ ಬಲ ಒದಗಿಸುತ್ತದೆ ಕೂಡ.
ಸಮುದ್ರದಲ್ಲಿ ಇವತ್ತಲ್ಲದಿದ್ದರೆ ನಾಳೆ ಮೀನುಗಳು ಸಿಗುತ್ತವೆ; ಆದರೆ ಮೀನುಗಾರಿಕೆಯ ಬೋಟುಗಳನ್ನು ನಿಲ್ಲಿಸಲಿಕ್ಕೆ ಜಾಗ ಸಿಗುತ್ತದೆ ಎಂಬ ಭರವಸೆಯೇ ಇಲ್ಲ ಎನ್ನುತ್ತಾರೆ ಚಿಕ್ಕಪುಟ್ಟ ದೋಣಿಗಳನ್ನು ಹೊಂದಿರುವ ಮೀನುಗಾರರು. ಕಾರಣವಿಷ್ಟೇ- ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಮೀನು ಗಾರಿಕೆ ಬಂದರುಗಳಲ್ಲಿ ದೋಣಿಗಳು ನಿಲ್ಲುವುದಕ್ಕೆ ಸೂಕ್ತ ವ್ಯವಸ್ಥೆಯಿಲ್ಲ; ಕಳಪೆಯಾದ ಹಳೆಯ ದಕ್ಕೆಯಲ್ಲಿ ದೋಣಿಗಳನ್ನು ನಿಲ್ಲಿಸಲು ಜಾಗ ಸಿಗುವು ದೇ ಒಂದು ಅದೃಷ್ಟ!
ಇನ್ನು, ದೋಣಿ ಗಳನ್ನು ನಿಲ್ಲಿಸುವಾಗ/ಹೊರಗೆ ತೆಗೆಯುವಾಗ ಆಗುವ ತಾಗಾಟದಲ್ಲಿ ಹಾನಿಗೊಳಗಾಗುವ ದೋಣಿಗಳ ದುರಸ್ತಿಗೆ ೨-೩ ಲಕ್ಷ ರುಪಾಯಿ ತಗಲುವುದರಿಂದ ಹಣ ಹೊಂದಿಸುವ ಕಷ್ಟ ಹೇಳತೀರದಂತಾಗಿದೆ. ಮೀನುಗಾರಿಕೆಯನ್ನು ಉತ್ತೇಜಿಸಲು ಕೇಂದ್ರ ಸರಕಾರವು ನೀಲಿಕ್ರಾಂತಿ ಯೋಜನೆ
ಯನ್ನು ಜಾರಿಗೆ ತಂದರೂ, ಸ್ಥಳೀಯವಾಗಿ ಹೊಸದೋಣಿ ಗಳಿಗೆ ಪರವಾನಗಿ ಸಿಗುತ್ತಿಲ್ಲ. ಈ ಮುಂಚೆ, ೭ ಮೀಟರ್ ಆಚೀಚೆ ಅಳತೆಯಿರುವ ದೋಣಿಗಳಿಗೆ ಪರವಾನಗಿಯಿತ್ತು. ಈಗ ೨೪ ಮೀ. ಅಳತೆಯ ದೋಣಿಗಳಿಗೆ ಪರವಾನಗಿ ಕೊಟ್ಟಿದ್ದಾರೆ. ಇದು ಕೂಡ ೩-೪ ದೋಣಿಗಳ ಜಾಗವನ್ನಾ ಕ್ರಮಿಸುವುದರಿಂದ ಮತ್ತೆ ಜಾಗದ ಸಮಸ್ಯೆ ಉದ್ಭವಿಸುತ್ತಿದೆ.
ಇನ್ನಾದರೂ ನಮ್ಮ ವ್ಯವಸ್ಥೆ, ಸ್ಥಳೀಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವರೆಂಬ ವಿಶ್ವಾಸವನ್ನಂತೂ ಹೊಂದಲೇಬೇಕಿದೆ.