Thursday, 19th September 2024

ಪಂಚತಾರಾ ರೆಸ್ಟ್ ರೂಮ್ ಆಗಲಿ !

ಪ್ರತಿಸ್ಪಂದನ 

ಪ್ರಕಾಶ ಹೆಗಡೆ

‘ನೂರೆಂಟು ವಿಶ್ವ’ ಅಂಕಣದ ಅಂತ್ಯದಲ್ಲಿ (ವಿಶ್ವವಾಣಿ ಮಾ.೨೧) ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರು, ‘ರಾಜಕಾರಣವೆಂದರೆ ಎಲ್ಲರನ್ನೂ ಒಳಗೊಂಡ ಮೂತ್ರಾಲಯವಿದ್ದಂತೆ’ ಎಂಬ ಪಂಚ್‌ಲೈನ್ ನೀಡಿದ್ದಾರೆ. ಜನರ ಹೊಲಸನ್ನು ಮಡಿಲಲ್ಲಿ ತುಂಬಿಕೊಳ್ಳುವ ಮೂತ್ರಾಲಯಗಳು ಸಹಜ ವಾಗಿ ಹೊಲಸಿನ ಗುಡಾಣಗಳೇ; ಆದರೆ ಪಂಚತಾರಾ ಹೋಟೆಲುಗಳ ಮೂತ್ರಾಲಯ ಗಳು ಸ್ವಚ್ಛವಾಗಿ, ಸುಂದರವಾಗಿ, ಸುವಾಸನೆಯಳ್ಳದ್ದಾಗಿರು ತ್ತವೆ. ನಾವೇಕೆ ನಮ್ಮ ರಾಜಕೀಯವನ್ನು ‘ಪಂಚತಾರಾ ರೆಸ್ಟ್ ರೂಮ್’ ಮಾಡಲು ಪ್ರಯತ್ನಿಸಬಾರದು?

ಪ್ರಜಾಪ್ರಭುತ್ವವು ಅಜ್ಞಾನಿ ಮತ್ತು ಅಡ್ಡಕಸುಬಿ ಮತದಾರರಿಂದ ಪ್ರಭಾವಿತವಾಗಿದ್ದರೆ, ಅದು ಹೊಲಸು ಶೌಚಾಲಯದಂಥ ರಾಜಕೀಯವನ್ನು
ಪ್ರಚೋದಿಸುತ್ತಿದೆ ಎಂದೇ ತಿಳಿಯಬಹುದು. ರಾಜಕೀಯ ಮೂತ್ರಾಲಯವು ಸ್ವಚ್ಛಗೊಳ್ಳದಿರುವಂತೆ ಅಡ್ಡಿಪಡಿಸುವ ವರು ಇಂಥವರೇ. ಮತದಾರರು ವಿದ್ಯಾವಂತರೂ, ಸಹಾನುಭೂತಿ ಉಳ್ಳವರೂ ಆಗಿರುವ ಕಡೆಗಳಲ್ಲಿ ರಾಜಕಾರಣವು ಪಂಚತಾರಾ ರೆಸ್ಟ್ ರೂಮ್ ರೀತಿಯಲ್ಲಿ ನಳನಳಿಸುತ್ತಿರುತ್ತದೆ.

ಇಂಥ ಮತದಾರರು ಜಾತಿ ರಾಜಕಾರಣದಿಂದಲೂ ಪ್ರಭಾವಿತರಾಗುವುದಿಲ್ಲ. ಭಾರತದಲ್ಲಿ ರಾಜಕೀಯವು ‘ಹೊಲಸು ಹಣ’ ಸಂಪಾದಿಸುವ ಕೇಂದ್ರವಾಗಿ ಬಿಟ್ಟಿದೆ; ಅದು ಕೂಡ ತೆರಿಗೆಯಿಂದ ತಪ್ಪಿಸಿಕೊಂಡ ಸಂಪತ್ತನ್ನು ಕೂಡಿಡುವ ಲಾಕರ್. ಅಜ್ಞಾನಿ-ಅಡ್ಡಕಸುಬಿ ಮತದಾರರ ‘ಹೊಲಸು ಮತ’ ಗಳಿಸಲು ಬಳಕೆಯಾಗುವುದು ಈ ‘ಹೊಲಸು ಹಣ’ವೇ. ಇಂಥ ಹಣ ವನ್ನು ಸಂಪಾದಿಸಲಾಗದಿದ್ದರೆ, ಹೊಲಸು ಮತಗಳಿಕೆಗೆ ಕಡಿವಾಣ ಬೀಳುತ್ತದೆ.

‘ಫಟಿಂಗರ ಕೊನೆಯ ಆಶ್ರಯತಾಣವೇ ರಾಜಕೀಯ’ ಎಂಬ ಚರ್ವಿತ-ಚರ್ವಣ ಮಾತಿಗೇ ಜೋತುಬಿದ್ದು ಸುಶಿಕ್ಷಿತರು ರಾಜಕಾರಣದಿಂದ ದೂರವೇ ಉಳಿದರೆ ಈ ಹೊಲಸು ವಾತಾವರಣದ ಮೂಲೋತ್ಪಾಟನೆಯಾಗುವುದಾದರೂ ಹೇಗೆ? ಸುಶಿಕ್ಷಿತರ ಪ್ರವೇಶ ದಿಂದಾಗಿ ಸ್ವಚ್ಛವಾದ ರಾಜಕೀಯ ವಾತಾ ವರಣ ಸೃಷ್ಟಿಯಾಗುತ್ತದೆ. ಅನೇಕ ದೇಶಗಳು, ರಾಜಕಾರಣಿಗಳಿಗೆ ಕಡ್ಡಾಯ ಶಿಕ್ಷಣದ ಕಾನೂ ನನ್ನು ಜಾರಿಗೆ ಅಂದಿವೆ. ಉದಾಹರಣೆಗೆ, ಅಜರ್ಬೈ ಜಾನ್ ಮತ್ತು ಇಂಡೋನೇಷ್ಯಾದಂಥ ತೃತೀಯ ಜಗತ್ತಿನ ದೇಶಗಳು ಕೂಡ, ಚುನಾ ವಣೆಯಲ್ಲಿ ಸ್ಪರ್ಧಿಸಲು ವ್ಯಕ್ತಿಯೊಬ್ಬ ಸಾಮಾನ್ಯ ಪದವಿಯೊಂದನ್ನು ಹೊಂದಿರಬೇಕೆಂದು ಕಡ್ಡಾಯ ಮಾಡಿವೆ.

ಸುಶಿಕ್ಷಿತರು ಮತ್ತು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರು ಜವಾಬ್ದಾರಿಯುತ ನಾಗರಿಕರಾಗಿರುತ್ತಾರೆ ಎಂಬುದಕ್ಕೆ ಪೂರ್ವ ನಿದರ್ಶನಗಳಿವೆ. ಇದು ಬಹಳಷ್ಟು ವೇದಿಕೆಗಳಲ್ಲಿ ಸಾಬೀತಾಗಿದೆ. ಆದ್ದರಿಂದಲೇ, ಶೈಕ್ಷಣಿಕ ಅರ್ಹತೆ ಮತ್ತು ಪಾವತಿಸಿದ ನೇರ ತೆರಿಗೆಯ ಪ್ರಮಾಣವನ್ನು ಆಧರಿಸಿದ ‘ತೂಕದ’ ಅಥವಾ ‘ಘನವಾದ’ ಮತದಾನ ವ್ಯವಸ್ಥೆಯನ್ನು ಪರಿಚಯಿಸಬೇಕು. ಉದಾಹರಣೆಗೆ ಯಾವ ತೆರಿಗೆಯನ್ನೂ ಪಾವತಿಸದ, ತಿಳಿವಳಿಕೆಯಿರದ ಮತದಾರ ನಿಗೆ ಮೂಲ ಒಂದು ಮತ ಎಂದಿಟ್ಟುಕೊಳ್ಳೋಣ. ಮುಂದುವರಿದು, ಮತದಾರನು ಸಾಕ್ಷರ ಮತ್ತು ತೆರಿಗೆದಾರನಾಗಿದ್ದರೆ ಎರಡು ಮತ ಇರಬೇಕು.

ಹೀಗೆ ಮತದಾರನ ಮತಗಳ ಮೌಲ್ಯವು ವಿವಿಧ ಮಾನದಂಡಗಳ ಆಧಾರದ ಮೇಲೆ ಏರಿಕೆಯಾಗಬೇಕು. ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯ ನೆರವಿ ನಿಂಧ ಅಂಥ ‘ಅಲ್ಗಾರಿದಮ್ ಬೇಸ್’ ವೃದ್ಧಿಸಲು ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಿದೆ. ಸಾಮಾನ್ಯ ನಿಯಮಕ್ಕೆ ವಿನಾಯಿತಿಯೆಂಬಂತೆ ಮತ್ತು ಎಲ್ಲರಿಗೂ
ತಿಳಿದಿರುವಂತೆ, ಭಾರತದ ರಾಜಕೀಯದಲ್ಲೂ ಅಪೂರ್ವ ರತ್ನದಂಥ ಜನನಾಯಕರಿದ್ದಾರೆ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ. ಅವರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ರಾಜಕೀಯದ ಪಾವಿತ್ರ್ಯವೂ ವರ್ಧಿಸತೊಡಗುತ್ತದೆ. ಇಂಥ ಅಪೂರ್ವ ರತ್ನಗಳನ್ನು ಶೋಧಿಸಿ ಹೊರತೆಗೆಯುವುದು ಮತದಾರರ ಕಶ್ಮಲರಹಿತ ಕೈಗಳಲ್ಲಿದೆ.

ನಾವೆಲ್ಲರೂ ಜವಾಬ್ದಾರಿಯುಳ್ಳವರಾಗೋಣ ಮತ್ತು ಕಶ್ಮಲರಹಿತ ಕೈಗಳುಳ್ಳ ಮತದಾರರಾಗೋಣ.

(ಲೇಖಕರು ಹವ್ಯಾಸಿ ಬರಹಗಾರರು)

 

Leave a Reply

Your email address will not be published. Required fields are marked *