Wednesday, 18th September 2024

ಯಾರಿಗೆ ಮೂಗುದಾರ ಹಾಕಬೇಕು?

ಅಭಿಮತ

ಮೋಹನದಾಸ ಕಿಣಿ, ಕಾಪು

ಹೂವಿನ ಮಾರಾಟಗಾರರು ‘ಮೊಳ’ ಮತ್ತು ‘ಮಾರು’ ಎಂಬ ಅಳತೆಯ ಬದಲಿಗೆ ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡುವಂತೆ ನವೆಂಬರ್ ೧೬ರಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಪತ್ರಿಕಾ ವರದಿಗಳ ಆಧಾರದಲ್ಲಿ ಸಮಾಜ ಸೇವಕ ರೊಬ್ಬರು ಬರೆದ ಮನವಿಯನ್ನು ಪುರಸ್ಕರಿಸಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದೂ ತಿಳಿಸಲಾಗಿದೆ.

ಇಲಾಖೆಯ ಕಾಳಜಿ ಸರಿಯಿರಬಹುದು. ಆದರೆ ಈ ವಿಷಯದಲ್ಲಿ ನನ್ನ ಅನುಭವ ಹೀಗಿದೆ. ೨೦೨೦ರ ವರ್ಷದ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಆಗಿನ ಭ್ರಷ್ಟಾಚಾರ ನಿಗ್ರಹ ದಳದವರು, ತೂಕ ಮತ್ತು ಅಳತೆ ಇಲಾಖೆಯ ಕೆಲ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಭಾರಿ ಮೊತ್ತದ ಅಕ್ರಮ ಗಳಿಕೆಯನ್ನು ವಶಪಡಿಸಿಕೊಂಡ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಗೆ ಸಂಬಂಧಿಸಿ ಪತ್ರಿಕೆಗಳಿಗೆ ಹೀಗೆ ಬರೆದಿದ್ದೆ: ‘ಹೆಚ್ಚಿನ ಪ್ರಕರಣಗಳಲ್ಲಿ ಲಂಚ ಕೊಟ್ಟವರು ವೈಯಕ್ತಿಕ ಲಾಭಕ್ಕಾಗಿ ಕೊಟ್ಟಿದ್ದರೆ, ಪಡೆದವರು ಶ್ರೀಮಂತ ರಾದರು. ಸಾಮಾನ್ಯವಾಗಿ ಇಂಥ ವ್ಯವಹಾರದಲ್ಲಿ ಮೂರನೆಯವರಿಗೆ ನಷ್ಟವಿಲ್ಲ. ಆದರೆ, ಕಾನೂನು ಮಾಪನಶಾಸ ಇಲಾಖೆಯ ಕೆಲ ಅಧಿಕಾರಿಗಳು ಲಂಚ ಪಡೆದು ವ್ಯಾಪಾರಿಗಳ ಮಾಪಕಗಳನ್ನು ತಪ್ಪಾಗಿ ಪ್ರಮಾಣೀ ಕರಿಸಿದ ಕಾರಣಕ್ಕೆ ಗ್ರಾಹಕರಿಗಾದ ನಷ್ಟದ ಅಂದಾಜು ಹೇಗೆ? ಯಾರು ಹೊಣೆ?’. ಹೂವಿನ ಮಾರಾಟಕ್ಕೆ ಮೀಟರ್ ಪರಿಮಾಣವನ್ನು ಉಪಯೋಗಿಸಲು ಸೂಚಿಸುವ ಇಲಾಖೆಗೆ, ಕರಾವಳಿ ಜಿಲ್ಲೆ ಗಳಲ್ಲಿ ಹೆಚ್ಚಾಗಿ ಪ್ರಚಲಿತ ವಿರುವ ಮಲ್ಲಿಗೆ (ಮಂಗಳೂರು ಮತ್ತು ಭಟ್ಕಳ- ಹೀಗೆ ೨ ವಿಧ) ಮತ್ತು ಜಾಜಿ ಹೂವಿನ ಅಳತೆ ಬಗ್ಗೆ ತಿಳಿದಿದೆಯೇ? ಈ ೩ ವರ್ಗದಲ್ಲಿ ನಿರ್ದಿಷ್ಟ ಸಂಖ್ಯೆಯ ಹೂಗಳನ್ನು ಸೇರಿಸಿ ಪೋಣಿಸಿ ‘ಚೆಂಡು’ ಮತ್ತು ನಾಲ್ಕು ಚೆಂಡು ಸೇರಿಸಿ ಒಂದು ‘ಅಟ್ಟೆ’ ಎಂಬುದಾಗಿ ವಿಂಗಡಿಸಲಾಗುತ್ತದೆ.

ಇದು ಮಾರುಕಟ್ಟೆಗೆ ಬರುವ ಮೊದಲೇ ಸಿದ್ಧವಾಗಿ ಬರುವಂಥದ್ದು. ಇದಕ್ಕೆ ಮೀಟರ್ ಪರಿಮಾಣವನ್ನು ಅನ್ವಯಿಸಬೇಕೆಂದು ಇಲಾಖೆ ತಗಾದೆ ಮಾಡಿ ದರೆ ಅದು ಕಾರ್ಯಸಾಧ್ಯವೇ? ಹಾಗೆಯೇ ಬಿಡಿಹೂವು ಗಳನ್ನು, ಕೆಲವು ನಿರ್ದಿಷ್ಟ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ದೊಡ್ಡ ದೊಡ್ಡ ಮಾಲೆ ಗಳನ್ನು ಹೇಗೆ ಅಳೆಯಬೇಕು? ಇದನ್ನು ವಿವರಿಸಿದ ಉದ್ದೇಶವಿಷ್ಟೇ- ಸರಕಾರ ಕಾನೂನನ್ನೇನೋ ಮಾಡುತ್ತದೆ, ಆದರೆ ಅದನ್ನು ಜಾರಿಗೊಳಿಸುವ ಅಧಿಕಾರಿಯು ತನ್ನ ಮೂಗಿನ ನೇರಕ್ಕೆ ಅದನ್ನು ತಿರುಗಿಸಿದರೆ, ಅದು ಭ್ರಷ್ಟಾಚಾರಕ್ಕೆ ದಾರಿಮಾಡಿ ಕೊಡುತ್ತದೆ!

ಇದಿಷ್ಟು ಒಂದು ಮುಖವಾದರೆ, ಇನ್ನೊಂದು ಮುಖ ಹೀಗಿದೆ: ಬೀದಿಬದಿಯಲ್ಲಿ ಹಣ್ಣು-ಹಂಪಲು, ತರಕಾರಿ ವ್ಯಾಪಾರಿಗಳು ಉಪಯೋಗಿಸುವ ತಕ್ಕಡಿ/ತೂಕದ ಯಂತ್ರದ ಒಂದು ಬದಿಯಲ್ಲಿ ಸದಾಕಾಲ ತೂಕದ ಬಟ್ಟು ಇರುತ್ತದೆ. ಅದನ್ನು ತೆಗೆದು, ಯಂತ್ರ ಸರಿಯಾಗಿದೆಯೇ ಎಂದು ಪರಿಶೀಲಿಸಿ ಖರೀದಿಸುವ ತಾಳ್ಮೆ ಯಾರಿಗೂ ಇರುವುದಿಲ್ಲ. ಏಕೆಂದರೆ ಹೆಚ್ಚಿನವರು ಬಸ್ಸಿಗೋ ಇನ್ನೆಲ್ಲಿಗೋ ಓಡುವ ಧಾವಂತದಲ್ಲಿದ್ದು, ಹಾಗೇನಾದರೂ ಪರಿಶೀಲಿಸಿ
ದರೆ ವ್ಯಾಪಾರಿಯು ಅಂಥ ಗ್ರಾಹಕರನ್ನು ಗಮನಿಸುವುದೇ ಇಲ್ಲ.

ಅಕ್ಕಪಕ್ಕದಲ್ಲಿರುವ ಇತರ ಗ್ರಾಹಕರು ವಿಚಿತ್ರ ಪ್ರಾಣಿಯನ್ನು ನೋಡಿದಂತೆ ನಗುತ್ತಾರೆಯೇ ಹೊರತು, ತಮಗೂ ಆತ ಮೋಸ ಮಾಡಬಹುದು, ತಾವೂ ಅದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಆಲೋಚಿಸುವುದಿಲ್ಲ. ಬದಲಿಗೆ ವ್ಯಾಪಾರಿ ಕೊಟ್ಟಿದ್ದನ್ನು ಎತ್ತಿಕೊಂಡು ಜಾಗ ಖಾಲಿಮಾಡುವವರೇ ಹೆಚ್ಚು. ಇಂಥ ಯಂತ್ರಗಳಿಗೆ ಪರಿಶೀಲನೆ, ಮುದ್ರೆ ಇದೆಯೇ? ಹೂವಿನ ವ್ಯಾಪಾರದಲ್ಲಿ ಮೋಸವಾಗುವುದೆಂದು ಪತ್ರಿಕಾ ವರದಿಯ ಆಧಾರದಲ್ಲಿ ಕ್ರಮ ಕೈಗೊಂಡ
ಇಲಾಖೆಯು ಈ ವಿಚಾರದಲ್ಲಿ ೩ ವರ್ಷಗಳ ಹಿಂದೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಪತ್ರದಲ್ಲಿ ಹೇಳಿದ, ಬೀದಿಬದಿಯ ವ್ಯಾಪಾರಿಗಳ ತೂಕದ ಯಂತ್ರದ ಬಗ್ಗೆ ಯಾವುದೇ ಕ್ರಮಗಳನ್ನು ಏಕೆ ಕೈಗೊಂಡಿಲ್ಲ?

Leave a Reply

Your email address will not be published. Required fields are marked *