ತಿಳಿರು ತೋರಣ
srivathsajoshi@yahoo.com
ಅರವಿಂದಮಶೋಕಂ ಚ ಚೂತಂ ಚ ನವಮಲ್ಲಿಕಾ| ನೀಲೋತ್ಪಲಂ ಚ ಪಂಚೈತೇ ಪಂಚಬಾಣಸ್ಯ ಸಾಯಕಾಃ – ಇದು ಅಮರಕೋಶದ ವಾಕ್ಯ. ಮನ್ಮಥನು ಪ್ರಯೋಗಿಸುವ ಹೂಬಾಣದಲ್ಲಿ ಯಾವಯಾವ ಹೂವುಗಳಿರುತ್ತವೆ ಎಂಬ ಪಟ್ಟಿ. ಅರವಿಂದ ಅಂದರೆ ತಾವರೆ.
ಅಶೋಕ ಅಂದರೆ ಅಶೋಕವೃಕ್ಷದ್ದೇ ಹೂವು, ಕೆಂಪು ಬಣ್ಣದ್ದು. ಚೂತ ಅಂದರೆ ಮಾವಿನಮರದ ಹೂವು. ನವಮಲ್ಲಿಕಾ ಅಂದರೆ ಆಗತಾನೆ ಅರಳಿದ ಮಲ್ಲಿಗೆ ಹೂವು. ನೀಲೋತ್ಪಲ ಅಂದರೆ ಕನ್ನೈದಿಲೆ, ಕಡುನೀಲಿ ಬಣ್ಣದ ನೈದಿಲೆ ಹೂವು. ಕೆಲವರು ತಾವರೆ, ನೈದಿಲೆ, ಕಮಲ ಎಲ್ಲ ಒಂದೇ ಸಸ್ಯಪ್ರಭೇದ ಎನ್ನುತ್ತಾರೆ; ತಾವರೆ ಸೂರ್ಯನನ್ನು ಕಂಡು ಹಗಲಿನಲ್ಲಿ ಅರಳುತ್ತದೆ, ನೈದಿಲೆ ಚಂದ್ರನನ್ನು ಕಂಡು ರಾತ್ರಿ ಅರಳುತ್ತದೆ ಹಾಗಾಗಿ ಅವು ಬೇರೆಬೇರೆ ಎನ್ನುವವರೂ ಇದ್ದಾರೆ. ಅಂತೂ ಮನ್ಮಥನ ಬಾಣ ಐದು ಬೇರೆಬೇರೆ ಹೂವುಗಳಿಂದಾಗಿದ್ದು ಹೌದು.
ತಾರಕಾಸುರನ ವಧೆಗಾಗಿ, ಅಂದರೆ ಕುಮಾರಸಂಭವಕ್ಕಾಗಿ, ಅಂದರೆ ಪಾರ್ವತೀ- ಪರಮೇಶ್ವರರ ಸಮಾಗಮವಾಗಲೆಂಬ ಉದ್ದೇಶದಿಂದ ಮನ್ಮಥನು ವಸಂತ ಕಾಲದಲ್ಲಿ ಬಿಟ್ಟಾಗಿನ ಬಾಣವಷ್ಟೇ ಹೀಗೆ ಐದು ಹೂವು ಗಳಿಂದಾಗಿದ್ದದ್ದೇ? ಅಥವಾ, ಒಟ್ಟಾರೆಯಾಗಿಯೂ ಮನ್ಮಥನ ಬಾಣವೆಂದರೆ ಯಾವಾಗಲೂ ಇದೇ ಐದು ಹೂವುಗಳಿಂದ ಆಗಿರುತ್ತದೆಯೇ? ಈ ಬಗ್ಗೆ ನಿಖರ ಮಾಹಿತಿ ಎಲ್ಲೂ ಇದ್ದಂತಿಲ್ಲ. ಹೂವುಗಳ ಬಾಣ ಎಷ್ಟರ ಮಟ್ಟಿಗೆ ಚುಚ್ಚೀತು ನಾಟೀತು ಎಂದು ಕೂಡ ಗೊತ್ತಿಲ್ಲ. ಅಲ್ಲದೇ, ಬಾಣವು ಹೂವುಗಳದ್ದೆಂಬುದೊಂದೇ ವಿಚಿತ್ರವಲ್ಲ, ಮನ್ಮಥನಿಗೆ ಕಬ್ಬಿನ ಜಲ್ಲೆಯೇ ಬಿಲ್ಲು.
ಆದ್ದರಿಂದಲೇ ಆತ ಇಕ್ಷುಚಾಪ. ಅದರ ಹಗ್ಗವಾದರೋ (ಮೌರ್ವೀ ಅಥವಾ ಜ್ಯಾ) ದುಂಬಿಗಳು ಒಂದಕ್ಕೊಂದು ಜೋತುಕೊಂಡು ಆಗಿರುವಂಥದ್ದಂತೆ. ರಂಜನೀಯವಾದ ರೋಮಾಂಚಕಾರಿಯಾದ ಕಲ್ಪನೆ. ಇರಲಿ, ಮನ್ಮಥನ ಬಿಲ್ಲು-ಬಾಣಗಳನ್ನು ತಮಾಷೆ ಮಾಡುವುದು ನನ್ನ ಉದ್ದೇಶವಲ್ಲ, ನನಗಿಲ್ಲಿ ಬೇಕಾದ್ದು ಹೂವುಗಳ ಹೆಸರಿನ ಉಲ್ಲೇಖ ಮಾತ್ರ. ಹೀಗೆಯೇ ಸಂಸ್ಕೃತದಲ್ಲಿ ವಿಧವಿಧ ಹೂವುಗಳ ಉಲ್ಲೇಖವಿರುವ ಇನ್ನೊಂದು ಶ್ಲೋಕವನ್ನೂ ನೆನಪಿಸಿಕೊಂಡು ಆಮೇಲೆ ಏಕಿವತ್ತು ಏಕಾಏಕಿ ಪುಷ್ಪಪ್ರೇಮ ಉಕ್ಕಿಬಂದಿತೆಂದು ವಿವರಿಸುತ್ತೇನೆ.
ದೇವರಿಗೆ ಪೂಜೆ ಮಾಡುವಾಗ ಹೇಳುವ ಶ್ಲೋಕ ವೊಂದಿದೆ: ‘ಸೇವಂತಿಕಾ ಬಕುಲ ಚಂಪಕ ಪಾಟಲಾಬ್ಜೈಃ ಪುನ್ನಾಗ ಜಾತಿ ಕರವೀರ ರಸಾಲಪುಷ್ಪೈಃ| ಬಿಲ್ವ ಪ್ರವಾಲ ತುಲಸೀದಲ ಮಾಲತೀಭಿಸ್ತ್ವಾಂ ಪೂಜಯಾಮಿ ಜಗದೀಶ್ವರ ಮೇ ಪ್ರಸೀದ’. ಯಾವಯಾವ ಹೂವು ಮತ್ತು ಪತ್ರೆಗಳನ್ನು ನಿನ್ನ ಅರ್ಚನೆಗೋಸ್ಕರ
ತಂದಿದ್ದೇನೆ ಎಂದು ದೇವರಿಗೆ ತಿಳಿಸುವ ಮಂತ್ರವಿದು. ಸೇವಂತಿಗೆ, ರೆಂಜೆ ಹೂವು, ಸಂಪಿಗೆ, ತಾಮ್ರಪುಷ್ಪ, ಪುನ್ನಾಗ, ಜಾಜಿ, ಕರವೀರ, ಮಾವಿನ ಹೂವು, ಬಿಲ್ವಪತ್ರೆ, ರಕ್ತಚಂದನದ ಪತ್ರೆ, ತುಲಸೀದಲ, ಮತ್ತು ಮಾಲತಿ ಹೂವು- ಹೀಗೆ ಪರಿಪರಿಯ ಪರಿಮಳ ಪುಷ್ಪ- ಪತ್ರೆಗಳು.
ಜಗದೊಡೆಯನು ಇವುಗಳಿಂದ ಸಂಪ್ರೀತ ಗೊಳ್ಳುತ್ತಾ ನೆಂದು ನಂಬಿಕೆ. ದೇವರು ತನಗೆ ಇಂಥಿಂಥ ಹೂವುಗಳದೇ ಅಲಂಕಾರ ಬೇಕು ಎಂದೇನೂ ಕೇಳುವುದಿಲ್ಲ. ಅದೇನಿದ್ದರೂ ಮನುಷ್ಯನ ಕಲ್ಪನೆ ಅಷ್ಟೇ. ಆದರೂ, ತುಳಸಿ ಇಲ್ಲದ ಪೂಜೆ ಹರಿ ಒಲ್ಲನು, ಶಿವನಿಗೆ ತುಂಬೆ ಹೂ ಅಂದ್ರೆ ತುಂಬ ಇಷ್ಟ, ಕೇದಗೆ ಹೂವಿಗೆ ತ್ರಿಮೂರ್ತಿಗಳ ಶಾಪವಿದ್ದು ಅದನ್ನು ಪೂಜೆಯಲ್ಲಿ ಬಳಸುವಂತಿಲ್ಲ ಅಂತೆಲ್ಲ ಸ್ವಾರಸ್ಯಕರ ನಂಬಿಕೆಗಳು ದೇವರ ಬಗೆಗಿನ ನಮ್ಮ ಕಲ್ಪನೆಯನ್ನು, ಭಕ್ತಿಶ್ರದ್ಧೆಗಳನ್ನು ಚಂದಗೊಳ್ಳುವಂತೆ ಮಾಡು ತ್ತವೆ.
ಇಂಥಿಂಥ ಹೂವುಗಳು ದೇವರಿಗೆ ಇಷ್ಟವಾಗಬಹುದು ಎಂದು ಕೊಂಡು ‘ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂದೆ ತೆರೆಯೋ ಬಾಗಿಲನು…’ ಎನ್ನುತ್ತ ಭಕ್ತಿಪೂರ್ವಕ ಪುಷ್ಪಾಂಜಲಿ ಸಲ್ಲಿಸುವುದರಲ್ಲೂ ಒಂದು ಪುಳಕ ಇದೆ, ಪುಣ್ಯ ಇದೆ. ನಿಮಗೆ ಹೇಗೋ ಗೊತ್ತಿಲ್ಲ, ನನಗಂತೂ ಹೀಗೆ ಅಕ್ಷರಗಳಲ್ಲಿ/ ಮಾತಿನಲ್ಲಿ ಹೂವುಗಳ ಹೆಸರನ್ನು ನೋಡಿದರೂ/ಕೇಳಿದರೂ ಸಾಕು, ಮನಸ್ಸಿಗೊಂದು ಹಿತಕರ ಉಲ್ಲಾಸದ ಅನುಭವವಾಗುತ್ತದೆ. ಆ ಹೂವುಗಳೆಲ್ಲ ಕಣ್ಮುಂದೆಯೇ ಬಂದವೇನೋ ಅವುಗಳ ಪರಿಮಳ ಮೂಗಿಗೆ ಅಡರಿತೇನೋ ಎಂದೆನಿಸುತ್ತದೆ.
ಅದಕ್ಕೋಸ್ಕರವೇ ಇಂದಿನ ತೋರಣದಲ್ಲಿ ಹೂವುಗಳದೇ ಒಂದು ವಿಶಿಷ್ಟ ಹೂರಣವನ್ನು ಪ್ರಸ್ತುತಪಡಿಸುತ್ತೇನೆ. ನಿಮ್ಮ ತಲೆಯೊಳಗೆ (ಕಿವಿ ಮೇಲಲ್ಲ, ಗಾಬರಿ ಯಾಗದಿರಿ!) ಹೂವಿಡುವ ಒಂದು ಮನೋರಂಜನೆ ಚಟುವಟಿಕೆಯನ್ನೂ ಸೇರಿಸುತ್ತೇನೆ. ಈ ಆಲೋಚನೆ ನನಗೆ ಬಂದಿದ್ದು ಹೇಗೆ, ಇದಕ್ಕೆ ಪ್ರೇರಣೆ ಏನು ಎಂಬು ದನ್ನೂ ಸ್ವಾರಸ್ಯಕರ ವಾಗಿ ತಿಳಿಸುತ್ತೇನೆ. ಪುಷ್ಪಪ್ರೇಮ ಪ್ರತಿಯೊಬ್ಬರಲ್ಲೂ ಇರುತ್ತದೆಂದು ನನಗೆ ಗೊತ್ತಿದೆ. ಅದು ಉದ್ದೀಪನಗೊಂಡರೆ ಇನ್ನೂ ಚಂದವೇ.
ಬೆಳಗಿನ ವಾಕ್ ವೇಳೆ ಸ್ಮಾರ್ಟ್ಫೋನ್ಗೆ ಇಯರ್ಫೋನ್ಸ್ ಸಿಕ್ಕಿಸಿಕೊಂಡು ಏನನ್ನಾದರೂ ಆಲಿಸುತ್ತ ಸಾಗುವುದು ನನ್ನ ಅಭ್ಯಾಸ. ಪ್ರವಚನಗಳು, ಭಾಷಣಗಳು, ಯಕ್ಷಗಾನ-ತಾಳಮದ್ದಳೆ, ಹರಿಕಥಾ-ಕಾಲಕ್ಷೇಪ, ಶಾಸ್ತ್ರೀಯ ಸಂಗೀತ… ಇತ್ಯಾದಿ ಆಯ್ಕೆ ಗೇನೂ ಕೊರತೆಯಿಲ್ಲ. ಅಂತರಜಾಲದಿಂದಾಗಿ ಆಕಾಶವಾಣಿಯೂ ಈಗ ಜಗದಗಲದ ಜಗುಲಿ ಬಾನುಲಿ ಆಗಿರುವುದರಿಂದ ಕರ್ನಾಟಕದ ಯಾವುದಾದರೂ ಆಕಾಶವಾಣಿ ನಿಲಯವನ್ನು ಟ್ಯೂನ್ ಮಾಡ್ಕೊಂಡು ಕೇಳುವುದೂ ಇದೆ. ಕನ್ನಡ ಚಿತ್ರಗೀತೆಗಳು, ಅದರಲ್ಲೂ ಕಳೆದ ಸಹಸ್ರಮಾನದವು ಪ್ರಸಾರವಾಗುತ್ತಿದ್ದರೆ ಸ್ಟೇಷನ್ ಬದಲಾಯಿಸಲಿಕ್ಕಿಲ್ಲ.
ಹಾಗೆ ಮೊನ್ನೆ ಒಂದು ದಿನ ಬೆಂಗಳೂರು ವಿವಿಧಭಾರತಿಯ ಸೇಫ್ಡ್ರೈವ್ ಓಲ್ಡೀಸ್ ಗೋಲ್ಡ್ ಕಾರ್ಯಕ್ರಮದಲ್ಲಿ ‘ಚೈತ್ರದ ಪ್ರೇಮಾಂಜಲಿಯ ಸುಮ ಸುಮ ಸುಮ…’ ಹಾಡು ಬರುತ್ತಿತ್ತು. ನಿಜವಾಗಿಯೂ ಅದು ಗಂಧದ ಪರಿಮಳಕಿಂತ ಘಮ ಘಮ ಘಮವೇ. ೧೯೯೨ರಲ್ಲಿ ಬಿಡುಗಡೆಯಾದ ಚೈತ್ರದ ಪ್ರೇಮಾಂಜಲಿ ಚಿತ್ರದ ಟೈಟಲ್ ಸಾಂಗ್. ಸಾಹಿತ್ಯ ಮತ್ತು ಸಂಗೀತ ಹಂಸಲೇಖ. ಈಹಿಂದೆ ಎಷ್ಟು ಬಾರಿ ಕೇಳಿ ಆನಂದಿಸಿ ದ್ದೇನೋ, ಆದರೆ ಮೊನ್ನೆ ಕೇಳಿದಾಗಲೂ ಅದರಲ್ಲೊಂದು ಹೊಸತನ ಇದೆಯೆನಿಸಿತು, ಒಂದು ಯುರೇಕಾ ಕ್ಷಣ ಗೋಚರಿಸಿತು.
ಸಾಮಾನ್ಯವಾಗಿ ನಾನು ಯಾವುದೇ ಭಾಷೆಯ ಯಾವುದೇ ಹಾಡನ್ನು ಕೇಳಿದರೂ ಸಂಗೀತಕ್ಕಿಂತ ಹೆಚ್ಚು ಸೂಕ್ಷ್ಮವಾಗಿ ಸಾಹಿತ್ಯ ವನ್ನು ಗಮನಿಸುತ್ತೇನೆ. ಹಾಡಿನ ಪ್ರತಿ ಅಕ್ಷರವನ್ನೂ ಗಾಢವಾಗಿ ಹೀರಿಕೊಳ್ಳುತ್ತೇನೆ. ಹಾಗೆ ಹೀರಿಕೊಳ್ಳುವಾಗಲೇ ಗೊತ್ತಾದದ್ದು ಚೈತ್ರದ ಪ್ರೇಮಾಂಜಲಿ ಹಾಡಿನ ಎರಡೂ ಚರಣಗಳಲ್ಲಿ ಹೂವುಗಳ
ದೊಂದು ಪಟ್ಟಿಯೇ ಇದೆಯೆಂದು! ಅದು ಸಿನಿಮಾ ನಾಯಕ ನಾಯಕಿಯನ್ನು ಹೂವಿಗೆ ಹೋಲಿಸಿ ಹೊಗಳುವುದೆಂದು ಗೊತ್ತು, ಆದರೆ ಹೂವುಗಳ ಹೆಸರುಗಳನ್ನು ಪೋಣಿಸಿದ್ದು ಅತ್ಯಾಕರ್ಷಕ ವಾಗಿದೆ. ‘ಮಲ್ಲಿಗೆಯ ಮಳ್ಳಿ ಚೆಲುವಿನಲಿ ಮೆಲ್ಲುಲಿಯ ಮೆಲ್ಲ ನಗುವಿನಲಿ… ಸಂಪಿಗೆಯ ಸೊಂಪು ಕುರುಳಿನಡಿ ತಂಪಿಡುವ
ಶಶಿಯ ವದನದಲಿ… ಮಾತನಾಡೆ ಮಂದಾರ ನಿನ್ನ ಹೆಸರೆ ಶೃಂಗಾರ… ಕನಕಾಂಬರಿ ಓ ನೀಲಾಂಬರಿ ನಿನಗೆ ನೀ ಸರಿ… ಸೇವಂತಿಗೆ ಸೂಜೀಮಲ್ಲಿಗೆ ಗಿಡವಾಗಿ ಎಲೆಯಾಗಿ ನಿನಗೆನಾ ಸರಿ’ ನೋಡಿ! ಮೊದಲ ಚರಣದಲ್ಲಿ ಐದಾರು ಹೂವುಗಳು.
ಅದೇರೀತಿ, ‘ಕಣ್ಣಲ್ಲಿ ನೀನು ಕಮಲವತಿ ಒಡಲಲ್ಲಿ ತಾಳೆ ಪುಷ್ಪವತಿ… ಭಯವೇಕೆ ಅಂಜು ಮಲ್ಲಿಗೆಯೆ ಬಾ ಏಳು ಸುತ್ತು ಮಲ್ಲಿಗೆಯೆ… ಪಾರಿಜಾತ ವರವಾಗು ಸೂರ್ಯಕಾಂತಿ ಬೆಳಕಾಗು… ಮಧು ತುಂಬಿದ ಗುಲಾಬಿ ಸುಮ ನಿನಗೆ ನೀ ಸಮ… ನಶೆ ಏರಿಸೊ ಓ ರಜನಿ ಸುಮ ಹೂದಾನಿ ಅಭಿಮಾನಿ ನಿನಗೆ ನಾ ಸಮ’ ಎಂಬ ಎರಡನೆಯ ಚರಣದಲ್ಲಿ ಮತ್ತೂ ಐದಾರು ಹೂವುಗಳು! ಇದೇನು ಮಹಾ, ಇಂತಹ ಅದೆಷ್ಟು ಹಾಡುಗಳಿಲ್ಲ ಕನ್ನಡದಲ್ಲಿ? ಎಂದು ಲಘುವಾಗಿ ಪರಿಗಣಿಸದಿರಿ. ಪಲ್ಲವಿಯಲ್ಲೋ ಚರಣ ಗಳಲ್ಲೋ ‘ಹೂವು’ ಎಂಬ ಪದ ಇರುವ, ಅಥವಾ ಮಲ್ಲಿಗೆ, ಸಂಪಿಗೆ, ಗುಲಾಬಿ, ಸೇವಂತಿಗೆ, ತಾವರೆ ಮುಂತಾದುವುಗಳ ಪೈಕಿ
ಯಾವುದಾದರೂ ಒಂದು ಹೂವಿನ ಹೆಸರಿರುವ ಹಾಡುಗಳು ನೂರಾರು ಸಾವಿರಾರು ಇವೆಯೆಂದು ನನಗೂ ಗೊತ್ತು.
ಪರಂತು ಒಂದೇ ಹಾಡಿನಲ್ಲಿ ಹೀಗೆ ಡಜನ್ಗಟ್ಟಲೆ ಹೂವುಗಳ ಹೆಸರಿರುವ ಹಾಡುಗಳನ್ನು ನೆನಪಿಸಿಕೊಳ್ಳಿ ನೋಡೋಣ? ಕಷ್ಟ ಇದೆ. ಚೈತ್ರದ ಪ್ರೇಮಾಂಜಲಿ ಹಾಡಿನಂತೆ ಪ್ರತಿ ಚರಣದಲ್ಲೂ ಹೂವುಗಳ ಗುಚ್ಛವಿರುವುದು ಸಿಗುವುದಂತೂ ತುಂಬ ಕಷ್ಟ. ನಾನು ಹುಡುಕಿದಾಗ ೨೦೧೫ರಲ್ಲಿ ಬಿಡುಗಡೆಯಾದ ‘ಕೆಂಡಸಂಪಿಗೆ’ ಚಿತ್ರದ್ದೊಂದು ಹಾಡು ಹೇಗೋ ಸಿಕ್ಕಿತು. ವಿ.ಹರಿಕೃಷ್ಣ ಸಂಗೀತನಿರ್ದೇಶನದಲ್ಲಿ ಕಾರ್ತೀಕ್ ಹಾಡಿರುವುದು. ಜಯಂತ ಕಾಯ್ಕಿಣಿಯವರ ಸಾಹಿತ್ಯ. ಇದರಲ್ಲಿ ಬರುತ್ತವೆ ಸಾಲುಸಾಲು ಹೂವುಗಳು.
ಗಮನಿಸಿ: ‘ನೆನಪೆ ನಿತ್ಯ ಮಲ್ಲಿಗೆ ಕನಸು ಕೆಂಡ ಸಂಪಿಗೆ… ಎಷ್ಟು ಚಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ… ಸರಸ ಪಾರಿಜಾತವು… ವಿರಹ ಚೂಪು ಕೇದಿಗೆ… ಸದಾ ಹೂ ಬಿಡುವ ಕಾಲ ನನ್ನ ಪ್ರೀತಿಗೆ… ನಿನ್ನ ಕೆನ್ನೆಯಿಂದ ಬಂತೆ ಬಾನಿಗೆ ಕನಕಾಂಬರ… ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ… ನಿನ್ನ ನಗುವು ಜೊಂಪೆ ಜೊಂಪೆ ನಂದಬಟ್ಟಲು… ಆಸೆ ನನಗೆ ಉಸಿರಿನಲ್ಲಿ ಮಾಲೆ ಕಟ್ಟಲು! ಎಷ್ಟು ಪಕಳೆಯುಂಟು ಹೇಳು ಸೇವಂತಿಗೆ… ಅಷ್ಟೆ ಬಗೆಯ ಸೆಳೆತ ನನಗೆ ನಿನ್ನೊಂದಿಗೆ… ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು… ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೋಸ ಹೋದವು… ಗುಟ್ಟು ಮಾಡುವಾಗ ನೀನು ದಿಟ್ಟ ಕಣಗಿಲೆ… ತೊಟ್ಟು ಜೇನಿಗಾಗಿ ನಿನ್ನ ಮುಂದೆ ಕುಣಿಯಲೆ… ಅಂಟಿಕೊಂಡ ದಿವ್ಯಗಂಧ ನೀನು ಸುರಗಿಯೆ… ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೆ… ನೆನಪು ನಿತ್ಯ ಮಲ್ಲಿಗೆ!’ ಆಹಾ ಎನ್ನುವಂತೆ ಇದೆಯಲ್ಲವೇ? ಇನ್ನೊಂದು ಹಾಡು ನೆನಪಾಗುವುದು- ಇದು ಚಿತ್ರಗೀತೆಯಲ್ಲ, ಕನ್ನಡದ ಸಾಂಸ್ಕೃತಿಕ ಅಸ್ಮಿತೆಯೆನಿಸಿರುವ ಪುಣ್ಯಕೋಟಿಯ
ಹಾಡು.
ಚಿತ್ರಗೀತೆಯಲ್ಲ ಎಂದು ಹೇಳಿದ್ದೇಕೆಂದರೆ ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ಅಳವಡಿಸಿಕೊಂಡಿರುವ ಸಂಕ್ಷಿಪ್ತ ಆವೃತ್ತಿಯಲ್ಲಿ ಈ ಚರಣಗಳಿಲ್ಲ. ವಿದ್ವಾಂಸರು ಸಂಪಾದಿಸಿರುವ, ೨೫೦ಕ್ಕೂ ಹೆಚ್ಚು ಚರಣಗಳಿರುವ ಪೂರ್ಣ ಆವೃತ್ತಿಯಲ್ಲಿ ಮಾತ್ರ ಇವೆ. ಅರುಣಾದ್ರಿ ಬೆಟ್ಟದ ತಪ್ಪಲಲ್ಲಿ ಯಾವುವೆಲ್ಲ ಹೂಗಿಡಗಳು ಕಂಗೊಳಿಸುತ್ತಿದ್ದುವು ಎಂಬ ಬಣ್ಣನೆ, ಒಂದಲ್ಲ ಎರಡಲ್ಲ ನಾಲ್ಕು ಪ್ರತ್ಯೇಕ ಚರಣಗಳಲ್ಲಿ. ‘ಮೊಲ್ಲೆ ಮಲ್ಲಿಗೆ ಮುಗುಳು ಸಂಪಿಗೆ ಚೆಲ್ವ ಜಾಜಿಯು ಸುರಗಿ ಸುರಹೊನ್ನೆ ಎಲ್ಲಿ ನೋಡಲು ದವನ ಕೇತಕಿ ಅಲ್ಲಿ ಮೆರೆದವರಣ್ಯದಿ||’, ‘ದುಂಡುಮಲ್ಲಿಗೆ ಚೆಂಡುಮಲ್ಲಿಗೆ ಕೋಲುಮಲ್ಲಿಗೆ ಕದಿರುಮಲ್ಲಿಗೆ ಹಸುರುಮಲ್ಲಿಗೆ ಸಂಜೆಮಲ್ಲಿಗೆ
ಎಸೆಯುತಿರ್ದುವು ವನದೊಳು||’, ‘ಜಾಜಿಮಲ್ಲಿಗೆ ಸೂಜಿಮಲ್ಲಿಗೆ ವರಗುಲಾಬಿಯು ಮುಗುಳುಸಂಪಿಗೆ ಪಾರಿಜಾತವು ಸೂರ್ಯ ಕಾಂತಿಯು ವನದಿ ರಂಜಿಸುತಿರ್ದುವು||’, ‘ಮರುಗ ಕೇದಗೆ ರತ್ನಗಂಧಿಯು ಸುರಗಿ ಸೇವಂತಿಗೆಯು ಕಣಗಿಲೆ ಪರಿಪರಿಯ ವರಪುಷ್ಪತರುಗಳು ಮೆರೆಯುತಿರ್ದುವು ವನದೊಳು||’ –
ಅಕ್ಷರಗಳಲ್ಲಿ ಹೂವುಗಳ ಹೆಸರನ್ನು ನೋಡಿದರೆ ಮನಸ್ಸಿಗೊಂದು ಹಿತಕರ ಉಲ್ಲಾಸದ ಅನುಭವ ಎಂದೆನಲ್ಲ, ಈ ಚರಣ ಗಳನ್ನೋದುವಾಗ ಅದು ನಿಮಗೂ ಆಗಿಯೇ ಇರುತ್ತದೆಂದು ಕೊಂಡಿದ್ದೇನೆ.
ಪ್ರೊ. ಎಂ. ವಿ. ಸೀತಾರಾಮಯ್ಯ ಅವರು ಬರೆದ ಹೂವಾಡಗಿತ್ತಿ ಪದ್ಯದಲ್ಲೂ ನಮಗೆ ಭರಪೂರ ಹೂವುಗಳು ಸಿಗುತ್ತವೆ: ‘ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು| ಘಮಘಮ ಹೂಗಳು ಬೇಕೇ ಎನ್ನುತ ಹಾಡುತ ಬರುತಿಹಳು|| ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ ಹಸುರಿನ ಹೊಸ ಮರುಗ; ಹಾಕಿ
ಕಟ್ಟಿರುವೆ ಬೇಕೇ ಎನುತ ಹಾಡುತ ಬರುತಿಹಳು|| ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಸಿನ ತಾಳೆಯಿದೆ; ಅಚ್ಚ ಮಲ್ಲೆಯಲಿ ಪಚ್ಚತೆನೆಗಳು ಸೇರಿದ ಮಾಲೆಯಿದೆ|| ಕಂಪನು ಚೆಲ್ಲುವ ಕೆಂಪು ಗುಲಾಬಿ ಅರಳಿದ ಹೊಸ ಕಮಲ; ಬಿಳುಪಿನ ಜಾಜಿ ಹಳದಿಯ ಜಾಜಿ ಅರಳಿದ ಬಿಳಿ ಕಮಲ|| ಬಗೆ ಬಗೆ ಹೂಗಳು ಬೇಕೇ ಎನ್ನುತ ಹಾಡುತ ಬರುತಿಹಳು; ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು||’ ಅಂದಹಾಗೆ ಹೂವಾಡಗಿತ್ತಿಯದೊಂದು ಹಾಡು ‘ಹೂವ ತಂದು
ಮಾರಿದಳು ಹೂವಾಡಗಿತ್ತಿ’ ೧೯೬೫ರಲ್ಲಿ ಬಿಡುಗಡೆಯಾದ ‘ಚಿನ್ನಾರಿ ಪುಟ್ಟಣ್ಣ’ ಚಿತ್ರ ದಲ್ಲೂ ಇದೆ.
ಜಿ.ವಿ. ಅಯ್ಯರ್ ಸಾಹಿತ್ಯ; ಟಿ.ಜಿ. ಲಿಂಗಪ್ಪ ಸಂಗೀತ; ಎಸ್. ಜಾನಕಿ, ರೇಣುಕಾ, ಮತ್ತು ಬೆಂಗಳೂರು ಲತಾ ಗಾಯನ. ಮೊದಲ ಚರಣದಲ್ಲಿ ‘ಒಂದು ಮಲ್ಲಿಗೆ ಅರಳೂ ಒಂದು ಸಂಪಿಗೆ ಎಸಳೂ ಒಂದು ಮರುಗದ ಕೊರಳು ಒಂದಾಗಲೂ…’ ಹೀಗೆ ಮಲ್ಲಿಗೆ, ಸಂಪಿಗೆ, ಮರುಗ ಈ ಮೂರು ಹೂವುಗಳು ಬರುತ್ತವೆ. ದಶಾವತಾರ ಚಿತ್ರದ ‘ಗೋದಾವರಿ ದೇವಿ ಮೌನವಾಂತಿಹೆ ಏಕೆ ವೈದೇಹಿ ಏನಾದಳು…’ ವಿಷಾದಛಾಯೆಯ ಗೀತೆಯಲ್ಲಿಯೂ ‘ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೆ ಎಲ್ಲ ನಗುಮೊಗವೆಲ್ಲ ತನ್ನೊಡನೆ ನಗಲೆಂದು ಶಿರದಲ್ಲಿ ಧರಿಸಿದವಳು…’ ಎಂದು ಮಲ್ಲಿಗೆ ಜಾಜಿ ಸಂಪಿಗೆ ಬರುತ್ತವೆ.
ಈ ರೀತಿ ಮೂರುನಾಲ್ಕು ಹೂವುಗಳ ಉಲ್ಲೇಖವಿರುವಂಥವನ್ನು ಕಷ್ಟಪಟ್ಟು ಒಂದಿಷ್ಟು ಹುಡುಕಬಹುದು. ಏನಿಲ್ಲೆಂದರೂ ‘ಮಾತಾಡು ಮಾತಾಡು ಮಲ್ಲಿಗೆ ಸಂಪಿಗೆ ಸೇವಂತಿಗೆ ಗುಂಪಿನಲ್ಲಿ ಕೇದಿಗೆ…’ ಎಂಬ ಜನಪದ ಗೀತೆ ಇದ್ದೇಇದೆ. ಮಾದೇವನಿಗೆ ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ತಾವರೆ ಪುಷ್ಪ ಗಳನ್ನು ಅರ್ಪಿಸುವ ‘ಸೋಜುಗದ ಸೂಜಿಮಲ್ಲಿಗೆ…’ ಸಹ ಇದೆ. ‘ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕ ವನೆರೆದವರಾರಯ್ಯ?’ ಎಂದು ಕೇಳುವ ಅಕ್ಕಮಹಾದೇವಿಯ
ವಚನ ಇದೆ. ಮತ್ತು, ‘ಅರಳುಮಲ್ಲಿಗೆ ನಾಡಿದು ಕೆಂಡ ಸಂಪಿಗೆ ನಾಡಿದು…’ ಎನ್ನುತ್ತ ‘ನಮ್ಮ ನಾಡಿದು ನಮ್ಮದು ನಮ್ಮ ಕನ್ನಡ ನಾಡಿದು ನೆಮ್ಮದಿಯ ತವರೂರಿದು’ ಎಂದು ಅಭಿಮಾನದಿಂದ ಬೀಗುವ ಮಚ್ಚಿಮಲೆ ಶಂಕರನಾರಾಯಣ ರಾವ್ ಬರೆದ ಶಿಶುಗೀತೆಯೂ ಇದೆ.
ದಾಸಸಾಹಿತ್ಯದಲ್ಲಿ ಪುಷ್ಪಗುಚ್ಛಗಳಿವೆಯೇ ಎಂದು ಹುಡುಕಿದಾಗ ಸಿಕ್ಕಿದ್ದು ಪುರಂದರದಾಸರ ‘ಒಲ್ಲನೋ ಹರಿ ಕೊಳ್ಳನೋ ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ…’ ಕೀರ್ತನೆ. ಅದರ ಚರಣದಲ್ಲಿ ‘ಕಮಲ ಮಲ್ಲಿಗೆ ಜಾಜಿ ಸಂಪಿಗೆ ಕೇದಿಗೆ ವಿಮಲ ಘಂಟೆ ಪಂಚವಾದ್ಯಗಳಿದ್ದು| ಅಮಲ ಪಂಚಪಕ್ಷ್ಯ ಪರಮಾನ್ನಗಳಿದ್ದು
ಕಮಲನಾಭನು ಶ್ರೀ ತುಳಸಿ ಇಲ್ಲದ ಪೂಜೆ||’ ಎಂದು ಬರುತ್ತದೆ. ಹಾಗೆಯೇ ಕರ್ಣಾಟಭಾರತ ಕಥಾಮಂಜರಿಯ ಅರಣ್ಯಪರ್ವ ದಲ್ಲಿನ ಒಂದು ಷಟ್ಪದಿಯಲ್ಲಿ ಕಾಣಿಸುವ ಹೂವುಗಳು, ಕುಮಾರವ್ಯಾಸನ ಕೊಡುಗೆ: ‘ತುಂಬುರರಳಿ ಲವಂಗ ಪಾದರಿ| ನಿಂಬೆ ಚೂತ ಪಲಾಶ ಪನಸಸು| ಜಂಬು ಗುಗ್ಗುಳಶೋಕ ವಟ
ಪುನ್ನಾಗ ಚಂಪಕದ| ಕುಂಬಿನಿಯೊಳುಳ್ಳಖಿಳ ವೃಕ್ಷಕ| ದಂಬದಲಿ ವನ ಮೆರೆದುದದನೇ| ನೆಂಬೆನೀ ಪರಿವಾರ ತುಂಬಿತು ಲಲಿತ ನಂದನವ||’ – ತುಂಬುರು, ಅರಳಿ, ಲವಂಗ, ಪಾದರಿ, ನಿಂಬೆ, ಮಾವು, ಮುತ್ತುಗ, ಹಲಸು, ನೇರಳೆ, ಗುಗ್ಗುಳ, ಅಶೋಕ, ಆಲ, ಪುನ್ನಾಗ, ಸಂಪಿಗೆ ಮೊದಲಾದ ವೃಕ್ಷಗಳಿಂದ ಕೂಡಿದ ಆ ವನದಲ್ಲಿ ಧರ್ಮನಂದನನ ಪರಿವಾರವು ಬಂದು ಸೇರಿತಂತೆ.
ಆಧುನಿಕ ಕಾಲಕ್ಕೆ ಬಂದರೆ ಕುವೆಂಪು ಅವರ ಅನಿಕೇತನ ಕವನಸಂಕಲನದಲ್ಲಿ ಪುಷ್ಪಪ್ರೀತಿ ಸಿಗುತ್ತದೆ, ‘ಅಲ್ಲಿ ಪಂಕ್ತಿ ಸೂರ್ಯಕಾಂತಿ; ಇಲ್ಲಿ ಪನ್ನೇರಿಳೆ; ಅಲ್ಲಿ ಹೊಂಗುಲಾಬಿ ಹಂತಿ; ಇಲ್ಲಿ ಚಿನ್ನ ವೂಮಳೆ; ಇಲ್ಲಿ ಕೆಂಪು ಅಲ್ಲಿ ಹಳದಿ; ಹಸುರು, ಪಚ್ಚೆ, ನೀಲಿ; ಹೊಸತೆ ಬಂತೊ ತಾಯ ಹರಕೆ ಹೂವ ರೂಪ ತಾಳಿ!’ ರೀತಿಯ ಕೆಲವು ಪದ್ಯಗಳಲ್ಲಿ. ಆ ಸಂಕಲನದಲ್ಲಿ ಕುವೆಂಪು ‘ಹೂವಿನ ತೋಟದಲ್ಲಿ ಪುಷ್ಪಸಮಾಧಿ’, ‘ಉದ್ಯಾನದಲ್ಲಿ ಧ್ಯಾನಯೋಗಿ’, ‘ಒಂದು ಗುಲಾಬಿ ಹೂವಿಗೆ’,
‘ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಅಥವಾ ವಿಭೂತಿ ಆಗಮನ’, ‘ಜರ್ಬರಾ’, ‘ಪುಷ್ಪ ಭಗವಾನ್’ ಮುಂತಾದ ಶೀರ್ಷಿಕೆಗಳುಳ್ಳ ಕವನಗಳನ್ನು ಬರೆದಿದ್ದಾರಾದರೂ ಒಂದೇ ಕವನದಲ್ಲಿ ಒಂದಕ್ಕಿಂತ ಹೆಚ್ಚು ಹೂವುಗಳ ಉಲ್ಲೇಖ ಸಿಗುವುದಿಲ್ಲ.
ಆದ್ದರಿಂದ ನೀವೀಗ ಹುಡುಕು-ಹ್ಯಾಟ್ ಹಾಕ್ಕೊಂಡು ಒಂದಿಷ್ಟು ಹಾಡುಗಳನ್ನು ಹುಡುಕಿಕೊಡಬೇಕಿದೆ. ಕನ್ನಡ ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಜನಪದಗೀತೆ ಯಾವುದೂ ಆಗುತ್ತದೆ. ನೆನಪಿರಲಿ-ಹೂವು ಎಂಬ ಪದ ಇರುವ ಹಾಡುಗಳನ್ನಲ್ಲ ಹುಡುಕ್ತಿರೋದು. ಹಾಗಾಗಿ ‘ಹೂವೊಂದು ಬಳಿಬಂದು ತಾಕಿತು ಎನ್ನೆದೆಯ…’ ಆಗೋದಿಲ್ಲ. ‘ಹೂವೇ ಹೂವೇ ನಿನ್ನೀ ನಗುವಿಗೆ ಕಾರಣವೇನೇ…’ ಸಹ ಆಗುವುದಿಲ್ಲ. ಹಾಗೆಯೇ ಮಲ್ಲಿಗೆ, ಸಂಪಿಗೆ, ಗುಲಾಬಿ ಮುಂತಾಗಿ ಒಂದೇ ಹೂವಿನ ಉಲ್ಲೇಖ ವಿರುವಂಥವೂ ಬೇಡ. ‘ಸಂಪಿಗೆ ಮರದ ಹಸಿರೆಲೆ ನಡುವೆ…’, ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ…’, ‘ನಲಿವ ಗುಲಾಬಿ ಹೂವೆ…’, ‘ನಮ್ಮೂರ ಮಂದಾರ ಹೂವೆ…’ ಮುಂತಾದುವೆಲ್ಲ ಔಟ್.
‘ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ…’, ‘ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ…’ ಕೂಡ ಈ ಚಟುವಟಿಕೆಯ ಮಟ್ಟಿಗೆ ಡಿಸ್ಕ್ವಾಲಿಫೈಡ್. ಹಾಂ! ಕವಿರತ್ನ ಕಾಳಿದಾಸ ಚಿತ್ರದ ‘ಸದಾ ಕಣ್ಣಲಿ ಪ್ರಣಯದ ಕವಿತೆ ಹಾಡುವೆ…’ ಆಗುತ್ತದೆ! ಅದರಲ್ಲಿ ‘ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ… ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ…’ ಎಂದು ಕಮಲ ಮತ್ತು ಸಂಪಿಗೆ ಎರಡು ಹೂವುಗಳು ಬರುತ್ತವೆ. ಒಂದು ಮುತ್ತಿನ ಕಥೆ ಚಿತ್ರದ ‘ಮಲ್ಲಿಗೆ
ಹೂವಿನಂತೆ ಅಂದ ನಿನ್ನಲ್ಲಿ ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ…’ ಸಹ ಆಗುತ್ತದೆ. ಹೀಗೆ ಒಂದಕ್ಕಿಂತ ಹೆಚ್ಚು (ಹಲವು) ಹೂವುಗಳ ಹೆಸರಿರುವ ಹಳೆಯ ಹಾಡುಗಳ ಹುಡುಕುವಿಕೆ- ಈಗ ನಿಮ್ಮಿಂದ ಆಗಬೇಕಿದೆ!