ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ನಿನ್ನೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾತನಾಡುತ್ತಿದ್ದ ಆಹಾರ ತಜ್ಞ ಕೆ.ಸಿ.ರಘು ಅವರು ನಮಗೆ ಇಂದು ಅಡರಿರುವ ಪರಿಶುದ್ಧ ನೀರು ಮತ್ತು ಆಹಾರದ ಗೀಳಿನ ಕುರಿತು ಒಳ್ಳೆಯ ಮಾಹಿತಿ ನೀಡಿದರು. ಪರಿಶುದ್ಧ ಎನಿಸಿರುವ ಆರ್.ಒ.ನೀರನ್ನು ಕುಡಿಯುವ ಚಾಳಿಗೆ ನಾವೆಲ್ಲಾ ಇಂದು ಬಿದ್ದಿದ್ದೇವೆ – ನಾಡಿನಾದ್ಯಂತ ಅದೆಷ್ಟೋ
ಜಲಶುದ್ಧೀಕರಣ ಯಂತ್ರಗಳು ರಿವರ್ಸ್ ಆಸ್ಮಾಸಿಸ್ ವಿಧಾನದಿಂದ ಅತ್ಯಂತ ಪರಿಶುದ್ಧ ನೀರನ್ನು ಕೊಡುತ್ತಿದ್ದು, ಆ ನೀರೂ ಸೇರಿದಂತೆ ‘ಪರಿಶುದ್ಧ’ ಮತ್ತು ‘ಸಂಸ್ಕರಿಸಿದ್ದು’ ಎಂಬ ಎಲ್ಲವನ್ನೂ ಸೇವಿಸುವ ಖಯಾಲಿಗೆ ಬೀಳು ತ್ತಿದ್ದೇವೆ.
ಸಿಕ್ಕಾಪಟ್ಟೆ ಪರಿಶುದ್ಧ ಎನಿಸಿರುವ ಶುದ್ಧೀಕರಿಸಿದ ನೀರಿನಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ಲವಣಾಂಶಗಳೇ ಇಲ್ಲದೇ ಇರುವ ಸಾಧ್ಯತೆ ಇರುವುದರಿಂದ, ಅಂತಹ ಪರಿಶುದ್ಧ ನೀರನ್ನು ದೀರ್ಘಕಾಲ ಕುಡಿಯುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬರ್ಥದ ಮಾತುಗಳನ್ನೂ ಅವರು ಹೇಳಿದರು. ನೀರು ಸಹಜವಾಗಿರ ಬೇಕು, ಆಗಲೇ ಅದಕ್ಕೆ ರುಚಿ ಜಾಸ್ತಿ, ಅದರಲ್ಲಿನ ಶಕ್ತಿಯೂ ಜಾಸ್ತಿ. ಪರಿಶುದ್ಧ ನೀರಿನ ಸೇವನೆ ಎಂದಾಕ್ಷಣ ನನ್ನ ಮನಸ್ಸು ಥಟ್ಟನೆ ನನ್ನ ಬಾಲ್ಯಕ್ಕೆ ಜಾರುತ್ತದೆ. ಪ್ರತಿದಿನ ಶಾಲೆ ಮುಗಿಸಿ, ನಡೆದುಕೊಂಡೇ ಮೂರು ಕಿಮೀ ದೂರದ ನಮ್ಮ ನಮ್ಮ ಮನೆಗಳಿಗೆ ವಾಪಸಾಗುತ್ತಿದ್ದ ನಾವೆಲ್ಲಾ ಮಕ್ಕಳು, ಗುಡ್ಡವೊಂದರ ಕಿಬ್ಬದಿಯಲ್ಲಿ ಹರಿದು ಬರುತ್ತಿದ್ದ, ಕಲ್ಲುಗಳ ನಡುವೆ ನೆಗೆಯುತ್ತಾ ಜುಳು ಜುಳು ಸದ್ದು ಮಾಡುತ್ತಿದ್ದ ಪುಟ್ಟ ತೊರೆಯೊಂದರ ನೀರನ್ನು ಕುಡಿದು, ಬಾಯಾರಿಕೆ ತಣಿಸಿಕೊಳ್ಳುತ್ತಿದ್ದೆವು!
ಆಗೆಲ್ಲಾ ಮನೆಯಿಂದ ಕುಡಿಯುವ ನೀರನ್ನು ಶಾಲೆಗೆ ಕೊಂಡೊಯ್ಯುವ ಪದ್ಧತಿ, ಪ್ರಮೇಯ ಇರಲಿಲ್ಲ. ಏಕೆಂದರೆ, ಪ್ಲಾಸ್ಟಿಕ್ ಬಾಟಲಿಗಳು ನಮ್ಮ ನಾಡಿಗೆ ಆಗಿನ್ನೂ ಕಾಲಿಟ್ಟಿರಲಿಲ್ಲ. ಮಕ್ಕಳಿಗೆಂದೇ ಶಾಲೆಯಲ್ಲಿ ಮಣ್ಣಿನ ಹೂಜಿಯೊಂದರಲ್ಲಿ ನೀರನ್ನಿಟ್ಟಿರುತ್ತಿದ್ದರು, ಅದನ್ನು ಆಗಾಗ ಕುಡಿಯುತ್ತಿದ್ದುದುಂಟು. ಅದು ಬಿಟ್ಟರೆ, ಸಂಜೆ ಶಾಲೆ ಬಿಟ್ಟ ನಂತರ, ಮೂರು ಕಿಮೀ ದೂರ ಮನೆಗೆ ಸಾಗುವಾಗ, ಬಾಯಾರಿದರೆ, ನಡುವೆ ಸಿಗುವ ಕಾಡಿನಲ್ಲಿ ಹರಿಯುತ್ತಿದ್ದ ಪುಟ್ಟ ತೊರೆಯ ನೀರೇ ನಮಗೆ ಅಮೃತ. ಆ ನೀರು, ಆ ಸಂಜೆಯ ಹೊತ್ತಿನಲ್ಲಿ ಅದೆಷ್ಟು ರುಚಿ!
ಎರಡು ಗುಡ್ಡಗಳ ನಡುವೆಯ ಕಿರಿದಾದ ಇಳುಕಲಿನಲ್ಲಿ, ಸಣ್ಣ ಪುಟ್ಟ ಕಲ್ಲುಗಳ ನಡುವೆ ಕುಣಿದು, ಕುಪ್ಪಳಿಸಿ, ನೆಗೆದು, ಸಣ್ಣಗೆ ಸದ್ದು ಮಾಡುತ್ತಾ ಹರಿದು ಬರುತ್ತಿದ್ದ ಆ ಶುದ್ಧ ನೀರಿನಲ್ಲಿ ಅದೆಷ್ಟು ಶಕ್ತಿ ಸಂಚಯನಗೊಂಡಿರುತ್ತದೋ ಎಂದು ಈ ವಿಸ್ಮಯಪಡುತ್ತೇನೆ. ಬೆಟ್ಟದಿಂದ ಇಳಿದು ನೆಗೆಯುವಾಗ ಆ ನೀರಿನಲ್ಲಿ ಶಕ್ತಿ ತುಂಬಿಕೊಳ್ಳು ತ್ತಿದೆಯೆ? ಬೊಗಸೆಯಲ್ಲೇ ಆ ನೀರನ್ನು ತುಂಬಿಸಿಕೊಂಡು ಒಂದೆರಡು ಬಾಯಿ ಕುಡಿದು, ತಲೆ ಎತ್ತಿ ನಡೆದರೆ, ಮುಂದಿನ ಒಂದು ಕಿಮೀ ದಾರಿ ಸವೆದದ್ದೇ ಗೊತ್ತಾಗು ತ್ತಿರಲಿಲ್ಲ!
ನಮಗಾಗ ಒಂದು ಸಂಗತಿ ಗೊತ್ತಿರಲಿಲ್ಲ – ಆ ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ಹರಿಯುತ್ತಿದ್ದ ಆ ನೀರು ಖನಿಜಾಂಶಗಳ ಆಗರ, ಔಷಧಿಯಗುಣಗಳ ಖಣಿ. ಆ ಬೆಟ್ಟಗಳ ಸುತ್ತಮುತ್ತಲೂ ನಾನಾ ರೀತಿಯ ಮರಗಳು ಬೆಳೆದಿದ್ದವು; ಈಗಲೂ ಸ್ವಲ್ಪ ಮರಗಳು ಜೀವ ಉಳಿಸಿಕೊಂಡಿವೆ. ನನಗೆ ನೆನಪಾಗುವಂತೆ ಅಲ್ಲಿ ಬೋಗಿ
ಮರ, ಹಿರಾಲು ಬೋಗಿ ಮರ, ನೇರಳೆ ಮರ, ಸಳ್ಳೆ ಮರ, ದೂಪದ ಮರ, ದುಗಳದೂಪದ ಮರ, ಕಾಸಾನು ಮರ, ಮುರಿನ ಮರ, ಜುಳಕನ ಮರ, ಅಂಡಾರು ಮರ, ಕಾಟು ಮಾವಿನ ಮರ, ನೆಲ್ಲಿ ಮರ, ಜಾರು ಮರ, ಗೇರು ಮರ, ಅಂಟಿನಕಾಯಿ ಮರ, ಹಾಲೆ ಮರ, ದಾಲ್ಚಿನ್ನಿ ಮರ, ಬಾಗಾಳು ಮರ, ಇನ್ನೂ ಹಲವು ತೆರನ ಮರಗಿಡಗಳು ತುಂಬಿದ್ದವು.
ಜತೆಗೆ ಒಂದಷ್ಟು ಬಳ್ಳಿಗಳು, ಹೆಚ್ಚು ಎತ್ತರ ಬೆಳೆಯದ, ಕುರುಚಲು ಸ್ವರೂಪದ ಕಿಸ್ಕಾರ, ಬುಕ್ಕಿ, ಕಾರಿ, ಗರ್ಚನ, ಬೆಳಮಾರ, ಚಗಟೆ ಮೊದಲಾದ ಗಿಡಗಳೂ ಬೆಳೆದಿದ್ದವು. ಆ ಗಿಡಮರಬಳ್ಳಿಗಳ ಬೇರುಗಳ ಸೆಲೆಯಿಂದ ಒಂದೊಂದೇ ಹನಿ ನೀರು ಸಂಚಯನಗೊಂಡು, ಪುಟಾಣಿ ನೀರಿನ ಸೆಲೆಯ ರೂಪ ಪಡೆದು, ಮುಂದೆ
ಪುಟ್ಟ ತೊರೆಯಾಗಿ ಹರಿದು ಬರುವಾಗ, ಆ ಎಲ್ಲಾ ಸಸ್ಯರಾಶಿಯ ಅಂಶಗಳೂ ಆ ನೀರಿನಲ್ಲಿ ತುಂಬಿರುವುದು ಸಹಜ ತಾನೆ! ಅದಕ್ಕೇ ಇರಬೇಕು, ಆ ನೀರಿನಲ್ಲಿ ಅಂತಹ ಅದ್ಭುತ ರುಚಿ! ಮತ್ತು ಶಕ್ತಿ ಸಹ!
ಗುಡ್ಡ ಮತ್ತು ಕಾಡಿನ ನಡುವೆ ಹಾದುಬರುತ್ತಿದ್ದ ಆ ತೊರೆ ಮಳೆಗಾಲದಲ್ಲಿ ಮಾತ್ರವಲ್ಲ, ಮಳೆಕಳೆದು ಒಂದೆರಡು ತಿಂಗಳುಗಳ ಕಾಲ ಹರಿದುಬರುತ್ತಿತ್ತು. ಮೂರು ತಿಂಗಳು ಸುರಿದ ಮಳೆಯು ಗುಡ್ಡಗಳ ಮಣ್ಣಿನಲ್ಲಿ ಇಂಗಿ, ಅಲ್ಲಿ ಬೆಳೆದಿದ್ದ ಸಾವಿರಾರು ಗಿಡ,ಮರ, ಬಳ್ಳಿಗಳ ಬೇರಿನ ಹಂದರದಲ್ಲಿ ಸಂಗ್ರಹಗೊಂಡು, ಮಳೆನಿಂತ ಮೇಲೂ ಕೆಲವು ತಿಂಗಳುಗಳ ಕಾಲ ಹರಿಯುತ್ತಾ, ಆ ತೊರೆ ರೂಪುಗೊಂಡಿತ್ತು. ಆ ಕಿರುಕಾಡಿನ ಹಕ್ಕಿ, ಕೀಟ, ಸರಿಸೃಪ, ಪ್ರಾಣಿಗಳ ಬಾಯಾರಿಕೆ ತಣಿಸುವುದರ ಜತೆಯಲ್ಲೇ, ನಮ್ಮಂತಹ ಮಕ್ಕಳ, ದಾರಿಹೋಕರ ಮತ್ತು ಸೊಪ್ಪು, ಒಣ ಸೌದೆ ಸಂಗ್ರಹಿಸಲು ಬರುತ್ತಿದ್ದ ಕೃಷಿಕರ ಬಾಯಾರಿಕೆಯ್ನೂ ತಣಿಸುತ್ತಿತ್ತು ಆ ಕಾಡಿನ ತೊರೆ.
ಅದೇ ಕಾಡುದಾರಿಯಲ್ಲಿ ಒಂದು ನೀರಿನ ಬುಗ್ಗೆಯೂ ಇತ್ತು! ಹಾಲಾಡಿ ಶಾಲೆಯಿಂದ ನಾವೆಲ್ಲಾ ವಾಪಸಾಗುವಾಗ, ಪ್ರತಿ ಸಂಜೆ ಆ ನೀರಿನ ಬುಗ್ಗೆಯಿಂದ ಎಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತಿದೆ ಎಂದು ನೋಡುವ ಕುತೂಹಲ. ಆದರೆ ಆ ಬುಗ್ಗೆಯಲ್ಲಿ ವರ್ಷವಿಡೀ ನೀರು ಉಕ್ಕುತ್ತಿರಲಿಲ್ಲ. ಜೂನ್ ಮೊದಲ ವಾರ ಕಳೆದ ನಂತರ, ಹತ್ತಾರು ದಿನ ಮಳೆ ಸುರಿದು ಬೆಟ್ಟಗುಡ್ಡಗಳ ಗರ್ಭಗಳಲ್ಲಿ ನೀರಿನ ಸೆಲೆ ತುಂಬಿದ ನಂತರ, ದಾರಿ ಪಕ್ಕದಲ್ಲಿದ್ದ ಆ ಸಪಾಟು ಜಾಗದಲ್ಲಿ ಶುದ್ಧನೀರಿನ ಬುಗ್ಗೆ ಉಕ್ಕಲು ಆರಂಭ! ಒಂದು ದೊಡ್ಡ ಬೋಗಿ ಮರ ಅಲ್ಲಿತ್ತು ಅನಿಸುತ್ತದೆ, ಆ ಮರದ ಬೇರು ಆ ನೆಲದಲ್ಲೆಲ್ಲಾ ಹರಡಿತ್ತು ಅಂತ ಕಾಣುತ್ತದೆ, ಕಾಲಕ್ರಮೇಣ ಆ ಬೇರು ಪುಡಿಯಾಗಿ ಹೋಗಿರಬೇಕು – ಆ ಬೇರಿನ ದಾರಿ ನಿರ್ಮಿಸಿದ ಟೊಳ್ಳಿನ ಮೂಲಕ ನೀರು ಉಕ್ಕಿ ಬರುತ್ತಿತ್ತು.
ಆ ಜಾಗದ ಮೇಲ್ಭಾಗದಲ್ಲಿ ಕುರುಚಲು ಕಾಡು ಇದ್ದುದರಿಂದ, ನೆಲದಾಳಕ್ಕೆ ಇಂಗಿದ ಮಳೆನೀರು, ಭೂಮ್ಯಂತರ್ಗತವಾಗಿ ಹರಿದು ಬಂದು, ಗುಳು ಗುಳು ಎಂದು ನೆಲದಿಂದ ಉಕ್ಕುತ್ತಾ, ನಮ್ಮಂತಹ ಶಾಲಾಮಕ್ಕಳ ಕೌತುಕದ ನೋಟಕ್ಕೆ ಪಕ್ಕಾಗಿತ್ತು. ನಮ್ಮ ಜತೆಯಲ್ಲಿ ಕೆಲವು ಕೀಟಲೆಯ ಹುಡುಗರಿದ್ದರು. ಒಂದು ದಿನ ಅವರು ಒಂದು ಕಿತಾಪತಿ ಮಾಡಿದರು – ಒಂದಷ್ಟು ಕಲ್ಲುಗಳನ್ನು ತಂದು, ಆ ಬುಗ್ಗೆಗೆ ತುಂಬತೊಡಗಿದರು.‘ಬೇಡ, ಕಲ್ಲು ತುಂಬಿದರೆ ನೀರು ಉಕ್ಕುವುದು ನಿಂತು ಹೋಗ ಬಹುದು’ ಎಂದು ನಾನು ತುಸು ಗಾಬರಿಯ ಧ್ವನಿಯಲ್ಲಿ ಹೇಳಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ.
ಆದರೆ ಅವರು ದೊಡ್ಡ ಕ್ಲಾಸಿನ ಹುಡುಗರು – ನನ್ನ ಮಾತನ್ನು ಎಲ್ಲಿ ಕೇಳಿಯಾರು? ಆರೆಂಟು ಕಲ್ಲುಗಳನ್ನು ಆ ಬುಗ್ಗೆಗೆ ತುಂಬಿಯೇ ತುಂಬಿದರು. ಮರುದಿನ ನೋಡಿದರೆ, ಆ ಬುಗ್ಗೆಯಲ್ಲಿ ಹಿಂದಿನ ದಿನಕ್ಕಿಂತ ಅರ್ಧದಷ್ಟು ಮಾತ್ರ ನೀರು ಉಕ್ಕುತ್ತಿತ್ತು; ಆ ಕೀಟಲೆ ಹುಡುಗರು ಇನ್ನೂ ನಾಲ್ಕಾರು ಕಲ್ಲುಗಳನ್ನು ಆ ಬುಗ್ಗೆಯ ಬಾಯಿಗೆ ತುಂಬಿ, ಕೈಲಿದ್ದ ಕೊಡೆಯ ತುದಿಯಿಂದ ಬಲವಾಗಿ ನೂಕಿದರು. ಮರುದಿನ ಮಳೆಯೂ ಕಡಿಮೆಯಾಗಿತ್ತು, ಬುಗ್ಗೆಯ ನೀರು ನಿಂತು ಹೋಯಿತು. ಆ ನಂತರ ಆ ಬುಗ್ಗೆಯಲ್ಲೆಂದೂ ನೀರು ಉಕ್ಕಲೇ ಇಲ್ಲ!
ನಮ್ಮ ಹಳ್ಳಿಮನೆಯಲ್ಲಿ ನಾವು ವರ್ಷವಿಡೀ ಕುಡಿಯುತ್ತಿದ್ದುದು ಮಳೆನೀರು ಎಂದು ಧೈರ್ಯವಾಗಿ ಹೇಳಬಲ್ಲೆ. ನಮ್ಮ ಬಡ ಮಧ್ಯಮ ವರ್ಗದ ಕುಟುಂಬ. ಉತ್ತಮ ಗುಣಮಟ್ಟದ ಶಿಲೆಕಲ್ಲುಗಳನ್ನು ಜೋಡಿಸಿದ ಬಾವಿ ನಮಗಿರಲಿಲ್ಲ – ಮನೆ ಅಂಗಳದ ಒಂದು ಮೂಲೆಯಲ್ಲಿ, ಏಳೆಂಟು ಅಡಿ ಅಗಲದ ಸರಳ ಬಾವಿಯೇ ನಮ್ಮ ಜಲಮೂಲ. ಆ ಬಾವಿಗೆ ಕಾಡುಕಲ್ಲುಗಳನ್ನು ಒರಟೊರಟಾಗಿ ಜೋಡಿಸಿದ್ದರು. ವಿಶೇಷವೆಂದರೆ, ಅದಕ್ಕೆ ರಾಟೆ, ಸುತ್ತಲೂ ಕಟ್ಟೆ ಇರಲಿಲ್ಲ. ನೆಲಮಟ್ಟದ ಬಾವಿ – ಬಗ್ಗುಬಾವಿ ಎಂದು ಕರೆಯಬಹುದಾದ ಅನ್ವರ್ಥನಾಮ. ಬಾವಿಕಟ್ಟೆಯ ಒಂದು ಭಾಗದಲ್ಲಿ ಜೋಡಿಸಿದ್ದ ಮರದ ತೊಲೆಗಳ ಮೇಲೆ ನಿಂತು, ಸೊಂಟಬಗ್ಗಿಸಿ, ನೀರನ್ನು ಎತ್ತುವ ಕ್ರಮ.
ಪ್ರತಿವರ್ಷ ಜೂನ್ ಎರಡನೆಯ ವಾರದ ಹೊತ್ತಿಗೆ, ಆ ಬಾವಿಯ ನೀರು ಮತ್ತು ಅಂಗಳದ ನೀರುಗಳ ಸಂಗಮವಾಗುತ್ತದೆ! ಅಂದರೆ, ಒಂದೆರಡು ದಿನ ಎಡೆಬಿಡದೆ ಮಳೆ ಸುರಿದಾಗ, ಅಂಗಳದಲ್ಲಿ ಹರಿದು ಬಂದ ನೀರೆಲ್ಲವೂ ಬಾವಿಯನ್ನು ತುಂಬಿ, ಬಾವಿ ಯಾವುದು ಅಂಗಳ ಯಾವುದು ಎಂದು ಗೊತ್ತಾಗದಂತಯ ಅಯೋ ಮಯ ಸನ್ನಿವೇಶ! ಮಳೆ ನಿಂತ ನಂತರ, ಬಾವಿಯ ನೆಲ ಮಟ್ಟದ ಸಣ್ಣ ಕಟ್ಟೆ ದೇಶಭಕ್ತ ಸೈನಿಕರು ತಾಲಿಬಾನ್ ವಿರುದ್ಧ ಕಾದಾಟಕ್ಕೆ ಸಿದ್ಧರಿದ್ದಾರೆ. ಮೇಲೆದ್ದು ಕಂಡರೂ, ಮಳೆ ನೀರು ಬಾವಿಯನ್ನು ತುಂಬಿದ್ದು ನಿಜ ತಾನೆ! ಇದೇ ಬಾವಿಯ ನೀರನ್ನು ನಾವು ವರ್ಷವಿಡೀ ಕುಡಿಯುತ್ತಿದ್ದುದರಿಂದ, ನಾವು ಸದಾಕಾಲ ಮಳೆ ನೀರನ್ನೇ ಕುಡಿಯುತ್ತಿದ್ದೆವು ಎಂದು ಭಾವಿಸಿಕೊಳ್ಳಬಹುದಲ್ಲವೆ!
ಮಳೆಗಾಲದ ಆಗಸ್ಟ್ – ಸೆಪ್ಟೆಂಬರ್ ತನಕ ಆ ಬಗ್ಗುಬಾವಿಯಿಂದ ನೀರನ್ನು ಎತ್ತಲು ಹಗ್ಗದ ಅವಶ್ಯಕತೆ ಇಲ್ಲ! ಕೊಡ ಹಿಡಿದು, ಬಗ್ಗಿ ನೀರನ್ನೆತ್ತಿ ಮನೆಗೆ ತಂದು
ಉಪಯೋಗಿಸುತ್ತಿದ್ದ ಆ ಅನುಭವ ವಿಶಿಷ್ಟ. ಆ ನೀರನ್ನು ಕುದಿಸದೇ, ನೇರವಾಗಿ ಕುಡಿಯುತ್ತಿದ್ದ ನಮಗೆ, ಅದೊಂದು ಕಾರಣದಿಂದಾಗಿ ನೆಗಡಿಯಂತೂ
ಆಗುತ್ತಿರಲಿಲ್ಲ. ರುಚಿರುಚಿಯಾಗಿದ್ದ ಆ ಬಾವಿ ನೀರು, ಹಲವು ಖನಿಜಾಂಶಗಳನ್ನು ಹೊಂದಿರಲೇಬೇಕು. ಈಗ ನಮ್ಮಲ್ಲಿ ಹೆಚ್ಚಿನವರು ಕುಡಿಯುತ್ತಿರುವ
ಆರ್.ಒ. ನೀರಿಗಿಂತಲೂ ಹೆಚ್ಚಿನ ಪ್ರಾಕೃತಿಕ ಲವಣಾಂಶಗಳನ್ನು ಆ ಬಾವಿನೀರು ಪಡೆದಿರಲೇಬೇಕು.
ಅಕಸ್ಮಾತ್ ನಮಗೆ ಬೇರೆ ಕಾರಣದಿಂದ ನೆಗಡಿ, ಜ್ವರ ಬಂದಾಗ ಅದನ್ನು ಕುದಿಸಿ ಕುಡಿಯುತ್ತಿದ್ದರೂ, ಕುದಿಸಿದಾಗ ಆ ನೀರಿಗೆ ರುಚಿ ಇರುತ್ತಿರಲಿಲ್ಲ! ಈ
ಬಗ್ಗುಬಾವಿಯು ಬಡತನದ ಸಂಕೇತದಂತೆ ಕಾಣುತ್ತಿದ್ದುದರಿಂದಲೋ ಅಥವಾ ಬೇಸಗೆಯಲ್ಲಿ ಬಾವಿ ಬತ್ತಿಹೋಗುತ್ತಿದ್ದುದರಿಂದಲೋ ಏನೊ, ನಮ್ಮಪ್ಪ ಒಂದು
ದೊಡ್ಡ ಬಾವಿಯನ್ನು ಮನೆಯ ಮುಂದಿನ ಅಗೇಡಿಯಲ್ಲಿ ತೋಡಿಸಿದರು. ಆ ಬಾವಿ ತೋಡುವ ಉಸ್ತುವಾರಿ ಹೊತ್ತ ನಮ್ಮ ಅಮ್ಮಮ್ಮ ಅನುಭವಿಸಿದ ಒತ್ತಡ, ಜನರನ್ನು ಜೋಡಿಸಿ ಕಲ್ಲುಕಟ್ಟಣೆ ಮಾಡಿಸಿದ್ದು, ಬಾವಿಯ ಅಗಲ ಜಾಸ್ತಿಯಾಗಿ, ಮನೆಯ ಭಾಗವಾಗಿದ್ದ ಕೊಟ್ಟಿಗೆಯೇ ಕುಸಿಯುವ ಅಪಾಯಕ್ಕೆ ಒಳಗಾಗಿದ್ದು – ಇವನ್ನೆಲ್ಲಾ ಬರೆಯುತ್ತಾ ಹೋದರೆ, ಅದೇ ಒಂದು ಕಥೆಯಾದೀತು.
ಆದರೆ, ಆ ಬಾವಿಯ ಕೆಲಸ ಮುಗಿದು, ಅದರಲ್ಲಿ ಸಂಗ್ರಹಗೊಂಡ ಅಪಾರ ಜಲರಾಶಿಯನ್ನು ನೋಡುತ್ತಾ, ಆ ನೀರನ್ನು ಕುಡಿದರೆ, ರುಚಿ ಕಡಿಮೆ! ‘ಅಂಗಳದಲ್ಲಿದ್ದ
ಹಳೆ ಬಾವಿಯ ನೀರಿನ ರುಚಿ ಜಾಸ್ತಿ’ ಅಂದು ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದರು! ಪ್ರಾಕೃತಿಕ ನೀರಿನ ವಿಚಾರ ಬಂದಾಗ, ನಮ್ಮ ಹಳ್ಳಿಮನೆಯ ಸುತ್ತಮುತ್ತ ಹರಿಯುತ್ತಿದ್ದ ಮೂರು ತೋಡುಗಳ ವಿಚಾರ ಹೇಳಲೇಬೇಕು. (ತೋಡು=ತೊರೆ) ಹಾಗೆ ವಿಶ್ಲೇಷಿಸುತ್ತಾ ಹೋದರೆ, ನಮ್ಮ ಮನೆಯನ್ನು ನೀರಿನ ಮೇಲೆ ಕಟ್ಟಿದ್ದರು ಎಂದು ಸಹ ವಾದಿಸಬಹುದೇನೊ! ಮನೆಯ ಹೊಸ್ತಿಲಿಗೆ ಅಂಟಿಕೊಂಡಂತಿದ್ದ ಅಗೇಡಿಯಲ್ಲಿ ವರ್ಷದ ಏಳೆಂಟು ತಿಂಗಳು ನೀರು ಇರುತ್ತಿತ್ತು.
ಆದ್ದರಿಂದ, ಮನೆಯಲ್ಲಿ ಸದಾಕಾಲ ಥಂಡಿ. ಮನೆ ಎದುರಿನ ಅಂಗಳದಲ್ಲಿ ಒಂದು ಬಗ್ಗುಬಾವಿ. ಅದನ್ನು ದಾಟಿ ಕೆಲವೇ ಹೆಜ್ಜೆ ನಡೆದರೆ, ತೋಟದೊಳಗೆ ಒಂದು ತೋಡು. ಎರಡನೆಯ ಬೆಳೆ ಎನಿಸಿದ ಸುಗ್ಗಿ ಬೆಳೆಗೆ ಅನುಕೂಲವಾಗುವಂತೆ, ಮೇಲಿನ ಗಾಣದಡಿ ಬೈಲಿನಿಂದ ನೀರನ್ನು ಹಾಯಿಸಲು ಮಾಡಿದ್ದ ಪುಟ್ಟ ತೋಡು. ಅದರಲ್ಲೂ ಜೂನ್‌ನಿಂದ ಜನವರಿ ತನಕ ನೀರು ಹರಿಯುತ್ತಿತ್ತು. ಈ ಪುಟ್ಟ ತೋಡನ್ನು ಹಾದು, ಅಡಕೆ ತೋಟವನ್ನು ದಾಟಿದರೆ, ಜುಳು ಜುಳು ಹರಿಯುವ ‘ಸಣ್ಣತೋಡು.’ ಈ ಸಣ್ಣ ತೋಡು ನಮ್ಮ ಹಲವು ಅವಶ್ಯಕತೆಗಳನ್ನು ಪೂರೈಸುವ ಗಂಗೆ. ಅದರಲ್ಲಿ ಜೂನ್‌ನಿಂದ ಜನವರಿ ತನಕ ಶುದ್ಧ ನೀರು ಹರಿಯುತ್ತಿತ್ತು.
ಆದರೆ ಹಳ್ಳಿಯವರೆಲ್ಲರೂ ಆ ಶುದ್ಧ ನೀರನ್ನೇ ಪಾತ್ರೆ ತೊಳೆಯಲು, ಗಂಟಿ ಮೈ ತೊಳೆಯಲು, ಕೊನೆಗೆ ಬೆಳಗಿನ ಕೆಲಸವೂ ಸೇರಿದಂತೆ ಎಲ್ಲಾ ಕೆಲಸಗಳಿಗೂ
ಬಳಸುತ್ತಿದ್ದುದರಿಂದ ಸಣ್ಣ ತೋಡಿನ ನೀರು ಅಷ್ಟು ಚೊಕ್ಕಟ ಅಲ್ಲವೆಂಬ ಭಾವನೆ. ಈ ಸಣ್ಣ ತೋಡಿನ ನೀರು, ಎರಡು ಗದ್ದೆಸಾಲುಗಳ ನಡುವೆ ಸುಮಾರು 100 ಅಡಿ ದೂರ ಹರಿದು, ದೊಡ್ಡ ತೋಡನ್ನು ಸೇರುತ್ತಿತ್ತು. ಸಣ್ಣ ತೋಡು ನಮ್ಮ ಮನೆಯ ಹಿಂದೆಯೇ ಇದ್ದರೆ, ದೊಡ್ಡ ತೋಡಿಗೆ ಸುಮಾರು 150 ಅಡಿ ದೂರ. ಈ ರೀತಿ ನಮ್ಮ ಮನೆಯ ಸುತ್ತಲೂ ಮೂರೂ ದಿಕ್ಕಿನಲ್ಲಿ ನೀರು ಹರಿಯುವ ಒರತೆಗಳು!
ನಮ್ಮ ಮನೆಯಿದ್ದ ಬೈಲಿನುದ್ದಕ್ಕೂ ಹರಿದು ಹೋಗಿದ್ದ ದೊಡ್ಡ ತೋಡು, ಸದಾ ನೀರಿನಿಂದ ತುಂಬಿರುತ್ತಿದ್ದ ಕಾಲ ಒಂದಿತ್ತು. ನಮ್ಮ ಅಜ್ಜಿಯ ಬಾಲ್ಯದಲ್ಲಿ, ಆ ದೊಡ್ಡ
ತೋಡಿನಲ್ಲಿ ಜೂನ್ ತಿಂಗಳಿನಿಂದಾರಂಭಿಸಿ, ಮುಂದಿನ ಏಪ್ರಿಲ್ ತನಕವೂ ನೀರು ಹರಿಯುತ್ತಿತ್ತಂತೆ. ನನ್ನ ಬಾಲ್ಯದ ಕಾಲದಲ್ಲಿ, ಮಳೆಗಾಲ ಆರಂಭವಾದ ಜೂನ್
ನಿಂದ ಮುಂದಿನ ಫೆಬ್ರವರಿ ತನಕ ಅಲ್ಲಿ ನೀರು ಹರಿಯುತ್ತಿತ್ತು. ಈಗ ಆ ಫಾಸಲೆಯಲ್ಲಿ ಕಾಡುಮರಗಳ ಸಂಖ್ಯೆ ಕಡಿಮೆಯಾಗಿ, ಅಕೇಶಿಯಾ ಮರಗಳ ಹಿಂಡು
ಜಾಸ್ತಿಯಾಗಿದ್ದರಿಂದಾಗಿ, ಡಿಸೆಂಬರ್ ಹೊತ್ತಿಗೆ ದೊಡ್ಡ ತೋಡು ಒಣಗಿಹೋಗುತ್ತದೆ. ನವೆಂಬರ್ ಸಮಯದಲ್ಲಿ ದೊಡ್ಡತೋಡಿಗೆ ಅಲ್ಲಲ್ಲಿ ಮಣ್ಣಿನ ಕಟ್ಟುಗಳನ್ನು ಕಟ್ಟಿ,
ಗದ್ದೆಗೆ ನೀರು ಹಾಯಿಸಿ ಸುಗ್ಗಿ ಬೆಳೆ ಬೆಳೆಯುವ ಪರಿಪಾಠ.
ಪಂಪ್‌ಸೆಟ್ ಬಂದ ನಂತರ, ಈ ರೀತಿ ಕಟ್ಟು ಹಾಕಿ ಬೆಳೆ ಬೆಳಯುವ ಪದ್ಧತಿ ನಿಂತು ಹೋಗಿದೆ. ಅಂದಿನ ಆ ಮಣ್ಣಿನ ಕಟ್ಟಿನಲ್ಲಿ ಸಂಗ್ರಹಗೊಂಡ ನೀರು ಸಹ, ಕಾಗದದ ದೋಣಿ ಬಿಡಲು, ಬಟ್ಟೆ ಒಗೆಯಲು, ದನಕರುಗಳ ಮೈ ತೊಳೆಯಲು ಹೀಗೆ ಬಹುಪಯೋಗಿ ಎನಿಸಿದ ಪರಿ ಮಾತ್ರ ನನ್ನ ಬೆಚ್ಚಗಿನ ನೆನಪುಗಳಲ್ಲಿ
ಸೇರಿಹೋಗಿದೆ.