Sunday, 8th September 2024

ಇವರು ರೆಕ್ಕೆಯಿಲ್ಲದೇ ಹಾರಾಡುವವರು !

ವಿದೇಶವಾಸಿ

dhyapaa@gmail.com

ಕಲೆಗೆ ಯಾವುದೇ ಭಾಷೆಯ ಸೀಮೆಯಿಲ್ಲ, ಕಲೆ ಎಲ್ಲವನ್ನೂ ಮೀರಿ ನಿಂತದ್ದು ಎಂದು ನಾವು ಯಾವಾಗಲೂ ಕೇಳುತ್ತಿರುತ್ತೇವೆ. ಆದರೆ ನಂಬಿಕೆ ಬರುವುದು ಅಂಥ ಪ್ರಯೋಗಗಳನ್ನು ಕಂಡಾಗ. ಭಾಷೆ ಬರದವರು ಯಕ್ಷಗಾನ ಕಲಿತು ಪ್ರದರ್ಶನ ನೀಡು ವುದೇ ಆಗಲಿ, ರಷ್ಯಾದ ತುದಿಯಲ್ಲಿರುವವರು ಹಿಂದಿ ಹಾಡು ಹಾಡುವುದಾಗಲಿ ಎಲ್ಲದಕ್ಕೂ ಕಾರಣ ಕಲೆ.

ಇತ್ತೀಚೆಗೆ ಬಹ್ರೈನ್‌ನಲ್ಲಿ ನಡೆದ ಎರಡು ಕಾರ್ಯಕ್ರಮಗಳ ಕುರಿತು ನಿಮಗೆ ಹೇಳಬೇಕು. ಈ ಎರಡೂ ಅಸಾಮಾನ್ಯ ಕಾರ್ಯ ಕ್ರಮವಾಗಿದ್ದವು. ಮೊದ ಲನೆಯದಾಗಿ, ಕಳೆದ ತಿಂಗಳು ಕನ್ನಡ ಸಂಘ ಬಹ್ರೈನ್‌ನ ಆವರಣದಲ್ಲಿ ನಡೆದ ಒಂದು ಯಕ್ಷಗಾನ. ಕನ್ನಡ ಸಂಘ ಕಳೆದ ನಾಲ್ಕು ದಶಕಗಳಿಂದಲೂ ಈ ದ್ವೀಪರಾಷ್ಟ್ರದಲ್ಲಿ ಯಕ್ಷಗಾನವನ್ನು ಆಯೋಜಿಸುತ್ತಾ ಬಂದಿದ್ದು, ಸುಮಾರು ಮೂರೂ ವರೆ ದಶಕದ ಹಿಂದೆಯೇ ಇಲ್ಲಿ ಯಕ್ಷಗಾನ ತರಗತಿ ಯೂ ಆರಂಭವಾಯಿತು. ಅದೂ ಉಚಿತವಾಗಿ ಎಂದರೆ ನೀವು ನಂಬಬೇಕು.

ಈಗ ಬಹ್ರೈನ್‌ಗೆ ಯಾರೇ ಬಂದು ಆಟ (ಯಕ್ಷಗಾನವನ್ನು ಆಟ ಎಂದೂ ಹೇಳುತ್ತಾರೆ) ಮಾಡುತ್ತೇನೆಂದರೂ ಕೈಬೀಸಿ ಕೊಂಡು ಬರಬಹುದು. ಯಾಕೆಂದರೆ, ಒಂದು ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ವನ್ನು ಆಡಿ ತೋರಿಸುವ ಅಥವಾ ಮೂವತ್ತಕ್ಕೂ ಹೆಚ್ಚು ಪಾತ್ರಗಳ ವೇಷ-ಭೂಷಣ ಇಲ್ಲಿದೆ.

ಹಿಮ್ಮೇಳಕ್ಕೆ ಬೇಕಾದ ಚಂಡೆ-ಮದ್ದಳೆಯೂ ಇದೆ. ಇಲ್ಲಿ ಆಟ ನಿತ್ಯದ ಪರಿಪಾ! ಎಂದರೂ ತಪ್ಪಾಗಲಿಕ್ಕಿಲ್ಲ. ಶುಕ್ರವಾರ ಮಧ್ಯಾಹ್ನ ನೀವೇನಾದರೂ ಸಂಘಕ್ಕೆ ಭೇಟಿ ಕೊಟ್ಟರೆ ಚಂಡೆ-ಮದ್ದಳೆಯ ಜತೆಗೆ ಹೆಜ್ಜೆಯ ಸದ್ದು ನಿಮ್ಮನ್ನು ಸ್ವಾಗತಿಸುತ್ತದೆ. ನಿಜ, ಅದು ಯಕ್ಷಗಾನ ಹಿಮ್ಮೇಳ-ಮುಮ್ಮೇಳದ ತರಗತಿ. ತರಗತಿಯ ಒಳಗೆ ಇಣುಕಿ ನೋಡಿದರೆ, ಸಮವಸ್ತ್ರ ಧರಿಸಿದ ಸುಮಾರು ನಲವತ್ತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಟ್ಯಾಭ್ಯಾಸ ಮಾಡುತ್ತಿರುವುದು ಕಂಡುಬರುತ್ತದೆ.

ಒಂದು ತರಗತಿ ನಡೆಯುತ್ತಿದೆ ಎಂದರೆ, ಅದು ಪಠ್ಯಪುಸ್ತಕಕ್ಕೆ ಸಂಬಂಧಿಸಿದ್ದಾದರೆ, ಅದಕ್ಕೊಂದು ಪರೀಕ್ಷೆ, ಫಲಿತಾಂಶ, ಕಲೆಗೆ ಸಂಬಂಧಿಸಿದ್ದಾದರೆ ಪ್ರದರ್ಶನ, ಏನಾದರೂ ಒಂದು ಇರುತ್ತದೆ. ಕಥಕ್, ಭರತನಾಟ್ಯದಂಥ ಶಾಸ್ತ್ರೀಯ ನೃತ್ಯಗಳಿಗಾದರೆ ಪರೀಕ್ಷೆಯೂ ಇದೆ, ರಂಗಪ್ರವೇಶವೂ ಇದೆ. ದುರಂತ ವೆಂದರೆ, ಐದು ನೂರಕ್ಕೂ ಹೆಚ್ಚು ವರ್ಷದ ಇತಿಹಾಸವಿರುವ ಯಕ್ಷಗಾನ ಕಲೆಗೆ ಅರಂಗೇಟ್ರಮ್ಮೂ ಇಲ್ಲ, ಪರೀಕ್ಷೆಯೂ ಇಲ್ಲ. ಅಲ್ಲೇನಿದ್ದರೂ, ಪ್ರಯೋಗವೇ ರಂಗಪ್ರವೇಶ, ಪ್ರದರ್ಶನವೇ ಪರೀಕ್ಷೆ. ಈಗ
ನಾನು ಹೇಳಲು ಹೊರಟಿರುವುದು ಇಂತಹ ಒಂದು ಪ್ರವೇಶ-ಪ್ರದರ್ಶನದ ಕುರಿತಾಗಿಯೇ.

ಅದು ಕವಿ ದೇವಿದಾಸ ವಿರಚಿತ ‘ಗಿರಿಜಾ ಕಲ್ಯಾಣ’ ಆಖ್ಯಾನ. ಅದರಲ್ಲಿ ಭಾಗವಹಿಸಿದ ಎಲ್ಲರೂ ತರಗತಿಯ ವಿದ್ಯಾರ್ಥಿಗಳೇ. ಅದೇನು ಮಹಾ? ಯಾರೇ ಆಗಲಿ, ಕಲಿತ ವಿದ್ಯೆಯನ್ನು ಜನರ ಮುಂದೆ ಪ್ರಸ್ತುತಪಡಿಸುವುದು ವಿಶೇಷವಲ್ಲ. ಹಾಗೆಯೇ ಇಲ್ಲಿಯೂ ಮಾಡಿದ್ದಾರೆ. ಬಹಳ ಚೆಂದ ವಾಗಿಯೂ, ಅಚ್ಚುಕಟ್ಟಾಗಿಯೂ ಮಾಡಿದ್ದಾರೆ. ಹೊಸಬಗೆಯ ರಂಗವಿನ್ಯಾಸ, ಹೊಳೆ ಯುವ ವೇಷ-ಭೂಷಣ, ಕಿವಿಗೆ ಹಿತವಾದ ಹಿಮ್ಮೇಳ, ಕಣ್ಣಿಗೆ ಮುದನೀಡುವ ಪ್ರಸಾದನ, ಅದರಲ್ಲೂ ನಾಮ, ಮುದ್ರೆಗಳು, ಧ್ವನಿ, ಬೆಳಕು ಎಲ್ಲವೂ ಪ್ರಖಾಂಡ ಪರಿಪೂರ್ಣ.

ಎರಡೂವರೆ ತಾಸಿನ ಆಟದಲ್ಲಿ ಎಳ್ಳಷ್ಟೂ ಕುಂದಿಲ್ಲ, ಕೊಂಕಿಲ್ಲ. ಅಂದು ಪ್ರೇಕ್ಷಕ ವರ್ಗದಲ್ಲಿ ಕೆಲವರು ಜೀವನದಲ್ಲೇ ಮೊದಲ ನೆಯ ಬಾರಿ ಯಕ್ಷಗಾನಕ್ಕೆ ಬಂದವರೂ ಇದ್ದರು. ಅವರಲ್ಲಿ ಅನ್ಯಭಾಷಿಕರೂ, ಅನ್ಯಧರ್ಮದವರೂ ಇದ್ದರು. ಆದರೆ ಯಾರೂ ಕುಳಿತಲ್ಲಿಂದ ಕದಲಲಿಲ್ಲ. ಪ್ರೇಕ್ಷಕ ರಲ್ಲಿ ಕೆಲವರು ಎಲ್ಲಿ ತಪ್ಪಾಗುತ್ತದೆ ಎಂದು ನೋಡಲು ಕುಳಿತವರೂ ಇದ್ದಿರಬಹುದು! ಆದರೆ ಅದು ಹೊಟ್ಟೆಕಿಚ್ಚಿನಿಂದಲ್ಲ, ಅಳುಕಿನಿಂದ, ಆತಂಕದಿಂದ!

ಯಾಕೆಂದರೆ, ಅಂದು ಭಾಗವಹಿಸಿದ ಹದಿನಾರು ಜನರಲ್ಲಿ ಬಹುತೇಕರು ಮೊದಲ ಬಾರಿ ರಂಗಸ್ಥಳ ಏರಿದವರು. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮಕ್ಕಳು. ಕೆಲವರು ಬಹ್ರೈನ್‌ನಲ್ಲೇ ಹುಟ್ಟಿ ಬೆಳೆದವರು. ಒಂದಿಬ್ಬರನ್ನು ಬಿಟ್ಟರೆ, ಬಹುತೇಕರ
ಮಾತೃಭಾಷೆ ತುಳು. ಒಂದಿಬ್ಬರಂತೂ ಮನೆಯಲ್ಲಿ ಮಲಯಾಳಂ ಮಾತನಾಡುವವರು. ಇವರೆಲ್ಲ ಕನ್ನಡದ ಸಂಭಾಷಣೆ ಯನ್ನು ಇಂಗ್ಲಿಷ್ ನಲ್ಲಿ ಬರೆದುಕೊಂಡು ಕಲಿತವರು.

ಮೇಲ್ನೋಟಕ್ಕೆ ಇದು ಸುಲಭ ಎನಿಸಿದರೂ ಇದರಂಥ ಕಿರಿಕಿರಿ ಮತ್ತೊಂದಿಲ್ಲ. ಒಂದು ಉದಾಹರಣೆ ಹೇಳುತ್ತೇನೆ:
ಸಮರದ ಸನ್ನಿವೇಶದಲ್ಲಿ ‘ಯುದ್ಧಕ್ಕೆ ಬಾ ಮುಂದೆ’ ಎಂದು ಕರೆಯಬೇಕು ಅಂದುಕೊಳ್ಲಿ. ಅದನ್ನು ಅವರು ಇಂಗ್ಲೀಷ್‌ನಲ್ಲಿ ‘ಚಿZZ ಞ್ಠ್ಞbಛಿ’ ಎಂದು ಬರೆದುಕೊಳ್ಳಬೇಕು, ಬರೆದುಕೊಳ್ಳುತ್ತಾರೆ ಬಿಡಿ. ತೊಂದರೆ ಬರುವುದು ಉಚ್ಚಾರದಲ್ಲಿ. ‘ಮುಂದೆ’ ಎನ್ನುವ ಬದಲಾಗಿ, ‘ಮುಂಡೆ’ ಎಂದರೆ? ಹಾಗೆಯೇ, ‘ಬಂದೆ’ ಎನ್ನುವ ಬದಲಾಗಿ ‘ಬಂಡೆ’ ಎಂದರೆ? ಅಷ್ಟಾಗಿಯೂ ಕೆಲವರು ಮಾತಾಡುವಾಗ ಅವರ ಮಾತೃಭಾಷೆಯ ಛಾಯೆ ಆಗಾಗ ಇಣುಕುತ್ತಿರುತ್ತದೆ.

ರಂಗಸ್ಥಳ ಏರಿದಾಗ ಅದನ್ನೆಲ್ಲ ಮೀರಿ ನಿಲ್ಲದಿದ್ದರೆ ಆಭಾಸವಾಗುತ್ತದೆ. ಮಕ್ಕಳು ಎನ್ನುವ ಕಾರಣಕ್ಕಾಗಲಿ, ಮೊದಲ ಬಾರಿ
ಪ್ರದರ್ಶನ ನೀಡುತ್ತಿದ್ದಾರೆ ಎನ್ನುವ ನೆಪಕ್ಕಾಗಲೀ ಗುರು ದೀಪಕ್ ರಾವ್ ಪೇಜಾವರ ಸಂಭಾಷಣೆ ಬರೆಯುವಾಗ ಸ್ವಲ್ಪವೂ ಕರುಣೆ ತೋರಿಸಲಿಲ್ಲ. ಒಂದು ವೇಳೆ ಅವರು ಸುಲಭವಾದ, ಸರಳವಾದ ಸಂಭಾಷಣೆ ಬರೆದುಕೊಟ್ಟರು ಎಂದೇ ಇಟ್ಟು ಕೊಳ್ಳೋಣ, ಯಕ್ಷಗಾನ ಪದ್ಯದ ಸಾಹಿತ್ಯ ಹೇಗಿರುತ್ತದೆ ಎಂದು ನಿಮಗೆ ಪ್ರತ್ಯೇಕ ಹೇಳಬೇಕಿಲ್ಲ ತಾನೆ? ತಾನು ಬರೆದ ಪ್ರಸಂಗವನ್ನು ಮುಂದೊಂದು ದಿನ ಭಾಷೆ ಬರದವರೂ ಆಡುತ್ತಾರೆ ಎಂದು ಪ್ರಸಂಗದ ಕರ್ತೃ ದೇವಿದಾಸರು ಕನಸಿ ನಲ್ಲಿಯೂ ಯೋಚಿಸಿರಲಿಕ್ಕಿಲ್ಲ!

ಇದು ಒಂದು ಕಡೆಯಾದರೆ, ಪ್ರಸಂಗದ ಸೂತ್ರಧಾರ, ಪದ್ಯ ಹಾಡುವ ಭಾಗವತರಿಗೂ ಕನ್ನಡ ಓದಲು ಬರುವುದಿಲ್ಲ. ಅವರು ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಕನ್ನಡದ ಪದ್ಯವನ್ನು ಹಿಂದಿಯಲ್ಲಿ ಬರೆದುಕೊಂಡು, ಒಂದಿನಿತೂ ತಪ್ಪಿಲ್ಲದಂತೆ ಹಾಡುತ್ತಾರೆ. ಒಂದಲ್ಲ, ಎರಡಲ್ಲ, ಈ ಸಾಹಸವನ್ನು ಸುಲಲಿತವಾಗಿ ಅವರು ಏನಿಲ್ಲವೆಂದರೂ ವರ್ಷಕ್ಕೆ ಐದರಿಂದ ಆರು ಬಾರಿ ಮಾಡುತ್ತಾರೆ. ಈ ವಿಷಯಕ್ಕೆ ಭಾಗವತ ರೋಷನ್ ಕೋಟ್ಯಾನ್ ಅವರಿಗೆ ಸಲಾಮ್ ಹೇಳಲೇಬೇಕು. ಇಂಥ ಸವಾಲುಗಳ ನಡುವೆ ಒಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಕ್ಕೆ ಮಕ್ಕಳು ಎಷ್ಟು ಅಭಿನಂದನಾರ್ಹರೋ, ಗುರು ದೀಪಕ್ ರಾವ್, ವೇಷ-ಭೂಷಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ರಾಮ ಪ್ರಸಾದ್ ಅಮ್ಮೆನಡ್ಕ ಕೂಡ ಅಷ್ಟೇ ಅಭಿನಂದನಾರ್ಹರು.

ಅದಾಗಿ ಎರಡು ವಾರದ ನಂತರ, ಅಂದರೆ ಈ ತಿಂಗಳ ಆರಂಭದಲ್ಲಿ ‘ಆರಂಭ್’. ಆರಂಭ್ (ಆರಂಭ), ‘ತತ್ಕಾರ್ ಸ್ಕೂಲ್ ಆಫ್ ಕಥಕ್’ನ ಐದನೆಯ ವಾರ್ಷಿಕೋತ್ಸವದ ಕಾರ್ಯಕ್ರಮ. ಹೆಸರೇ ಹೇಳುವಂತೆ ಇದು ಕಥಕ್ ನೃತ್ಯ ಕಲಿಸುವ ಶಾಲೆ.
ಅಂದು ವೇದಿಕೆಯಲ್ಲಿ ತತ್ಕಾರ್‌ನ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಥಕ್ ನಾಟ್ಯ ಪ್ರದರ್ಶನ ನೀಡಿದರು. ಜತೆಗೆ, ತತ್ಕಾರ್ ಶಾಲೆಯ ಗುರು ಖಲೀಲ್ ಅಲ್‌ಅಶರ್ ಮತ್ತು ಪುಣೆಯ ಖ್ಯಾತ ಕಥಕ್ ಗುರು ತೇಜಸ್ವಿನಿ ಸಾಠೆಯವರ ಕಥಕ್ ನೃತ್ಯ, ಬೆಂಗಳೂರಿನ ಕಲಾವಿದ ರೂಪೇಶ್ ಕೆ.ಸಿ.ಯವರ ಭರತನಾಟ್ಯ ಪ್ರದರ್ಶನ ಮತ್ತು ದೀಪಕ್ ಪೇಜಾವರ ತಂಡದವರಿಂದ ಯಕ್ಷಗಾನವೂ ಇತ್ತು.

ನನಗೆ ತಿಳಿದಂತೆ ಬಹ್ರೈನ್‌ನಲ್ಲಿ ಈ ರೀತಿಯ ಕಾರ್ಯಕ್ರಮವಾದದ್ದು ಇದೇ ಮೊದಲು. ಬಹುಶಃ ಆ ಕಾರಣಕ್ಕಾಗಿಯೇ ಈ
ಕಾರ್ಯಕ್ರಮಕ್ಕೆ ‘ಆರಂಭ್’ ಎಂದು ಹೆಸರಿಟ್ಟಿರಬೇಕು. ಇರಲಿ, ಎಲ್ಲ ಸೇರಿ ಮೂರು ತಾಸಿನ ರಸಭರಿತ ಕಾರ್ಯಕ್ರಮ. ನಿಜ ಹೇಳುತ್ತೇನೆ, ನಾನು ನನ್ನ ಜೀವಮಾನದಲ್ಲಿ ಎಂದೂ ಹದಿನೈದು- ಇಪ್ಪತ್ತು ನಿಮಿಷಕ್ಕಿಂತ ಹೆಚ್ಚು ಕಥಕ್ ನೃತ್ಯ ನೋಡಿ
ದವನಲ್ಲ. ಅದರ ಬಗ್ಗೆ ಅನಾಸಕ್ತಿ ಎನ್ನುವುದಕ್ಕಿಂತಲೂ, ಅದು ನನ್ನನ್ನು ಆಕರ್ಷಿಸಲಿಲ್ಲ ಎನ್ನುವುದೇ ಸರಿಯಾದೀತು. ಆದರೆ ‘ಆರಂಭ’ವನ್ನು ನಾನು ಕೊನೆಯ ತನಕ ಕುಳಿತು ನೋಡಿದ್ದೆ.

ಅಂದಿನ ಕಾರ್ಯಕ್ರಮದಲ್ಲಿ ಬಹುಪಾಲು ಕಥಕ್ ನಾಟ್ಯವೇ ಇತ್ತು. ಸುಮಾರು ಎರಡು ಗಂಟೆಯ ಅವಧಿಯಲ್ಲಿ ಮಕ್ಕಳು ಹತ್ತಕ್ಕೂ ಹೆಚ್ಚು ನೃತ್ಯ ಮಾಡಿ ತೋರಿಸಿದ್ದರು. ನಂತರ ನೃತ್ಯ ಅಧ್ಯಾಪಕರುಗಳ ನಾಟ್ಯ. ಪ್ರತಿಯೊಂದೂ ’Pಛ್ಟ್ಛಿಛ್ಚಿಠಿಜಿಟ್ಞ ಠಿಟ ಠಿeಛಿ ಟ್ಟಛಿ!’ ಅದೇ ನನ್ನನ್ನೂ, ನನ್ನಂಥವರನ್ನೂ ಕಟ್ಟಿ ಹಾಕಿದ್ದು. ಇನ್ನೂ ಒಂದು ಸಂಗತಿಯೆಂದರೆ, ಅಂದು ನೆರೆದ ಸಭಿಕರಲ್ಲಿ, ಭಾರತದ ನಾನಾ ರಾಜ್ಯಗಳ ಜನರ ಜತೆಗೆ ಬಹ್ರೈನ್ ದೇಶದ ಸ್ಥಳೀಯ ನಾಗರಿಕರೂ ದೊಡ್ಡ ಸಂಖ್ಯೆಯಲ್ಲಿ ಇದ್ದರು.

ಸೇರಿದವರಲ್ಲಿ ಕೆಲವರಿಗೆ ಹಿಂದಿಯಾಗಲಿ, ಸಂಸ್ಕೃತವಾಗಲಿ ಅರ್ಥ ವಾಗುತ್ತಿರಲಿಲ್ಲ. ಬಹುತೇಕರಿಗೆ ಕನ್ನಡ ಅರ್ಥವಾಗು
ತ್ತಿರಲಿಲ್ಲ. ಆದರೂ ಖಲೀಲ್ ಅವರ ‘ಗುರುವೇ ನಮಃ’ಕ್ಕೆ, ತೇಜಸ್ವಿನಿ ಸಾಠೆಯವರ ‘ಗಣೇಶ ವಂದನೆ’ಗೆ, ರೂಪೇಶ್ ಅವರ ‘ಅಯಿಗಿರಿ ನಂದಿನಿ’ಗೆ, ದೀಪಕ್ ಅವರ ಶೂರ್ಪನಖಿಯ ‘ಪೂಗೋಲನುರು ಪಟ್ಟದಾನೆಯಂದದಲಿ’ಗೆ ಎಲ್ಲರೂ ಮಾರುಹೋಗಿ
ದ್ದರು. ಪ್ರತಿಯೊಂದು ನೃತ್ಯ ಪ್ರದರ್ಶನದ ನಂತರವೂ ಮುಗಿಲು ಮುಟ್ಟುವ ಕರತಾಡನ! ಕಣ್ಣು- ಕಿವಿಯ ದ್ವಾರದಿಂದ ಕಲೆ ಎದೆಯವರೆಗೂ ತಲುಪುತ್ತದೆ, ತಲುಪುವುದಷ್ಟೇ ಅಲ್ಲ, ಅಲ್ಲಿ ತಳವೂರಿಕುಳಿತುಕೊಳ್ಳುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.

ಇದಕ್ಕೆಲ್ಲ ಕಾರಣ ಏನು? ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಸಿಗುವ ಒಂದೇ ಉತ್ತರ, ಕಲೆಯ ಅಮಲು. ಕಲಾವಿದರೇ ಆಗಲಿ, ಪ್ರೇಕ್ಷಕರೇ ಆಗಲಿ, ಇವರನ್ನು ಸೆಳೆದದ್ದು, ಬಿಗಿಯಾಗಿ ಬಂಽಸಿದ್ದು, ಎರಡಕ್ಷರದ ಕಲೆ. ಇವರೆಲ್ಲ ಕಲೆಗೆ ಮಾರುಹೋದವರೇ
ವಿನಾ ಧರ್ಮಕ್ಕೆ, ಭಾಷೆಗೆ ಮಾರಾಟವಾದವರಲ್ಲ. ಇಲ್ಲವಾದರೆ ಬೇರೆ ಭಾಷೆ ಕಲಿತು, ಬೇರೆ ಧರ್ಮದವರ ಪುರಾಣಗಳನ್ನು ಓದಿ, ಬೇರೆ ಸಂಸ್ಕೃತಿಯನ್ನು ಅರ್ಥೈಸಿಕೊಂಡು ಮನಸ್ಸನ್ನು ಲೀನವಾಗಿಸಿಕೊಳ್ಳುವುದು ತಿಳಿದಷ್ಟು ಸುಲಭದ ಕೆಲಸವಲ್ಲ. ಇಂಥ ಕಲಾವಿದರೇ ಕಲೆಯ ಘಮಲಿನ ಮುಂದೆ ಯಾವ ಅಮಲೂ ಇಲ್ಲ ಎಂದು ಆಗಾಗ ತೋರಿಸಿಕೊಡುವವರು.

ಕಲೆಗೆ ಯಾವುದೇ ಭಾಷೆಯ ಸೀಮೆಯಿಲ್ಲ, ಕಲೆ ಎಲ್ಲವನ್ನೂ ಮೀರಿ ನಿಂತದ್ದು ಎಂದು ನಾವು ಯಾವಾಗಲೂ ಕೇಳುತ್ತಿರುತ್ತೇವೆ. ಆದರೆ ನಂಬಿಕೆ ಬರುವುದು ಇಂಥ ಪ್ರಯೋಗಗಳನ್ನು ಕಂಡಾಗ. ಭಾಷೆ ಬರದವರು ಯಕ್ಷಗಾನ ಕಲಿತು ಪ್ರದರ್ಶನ ನೀಡುವುದೇ ಆಗಲಿ, ರಷ್ಯಾದ ತುದಿಯಲ್ಲಿರುವವರು ಹಿಂದಿ ಹಾಡು ಹಾಡುವುದಾಗಲಿ, ಯುರೋಪ್ ದೇಶದವರು ಭಾರತದ ಪದ್ಯಕ್ಕೆ ಹೆಜ್ಜೆ ಹಾಕುವುದಾಗಲಿ, ಎಲ್ಲದಕ್ಕೂ ಕಾರಣ ಕಲೆ. ಮುಂಬೈನ ಮೂಲೆಯ ಮರಾಠಿ ಮಕ್ಕಳು ಭಾರತದ ಯಾವುದೇ ಭಾಷೆಯ ‘ಅಆಇಈ’ ಅರಿಯದ ಪಾಶ್ಚಿಮಾತ್ಯ ದೇಶದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅವರ ಬಿಟ್ಟ ಕಣ್ಣು, ತೆರೆದ ಬಾಯಿ ಮುಚ್ಚದಂತೆ ಪ್ರದರ್ಶನ ನೀಡಿ ಗಮನ ಸೆಳೆಯುತ್ತಾರೆ ಎಂದರೆ ಅದು ಕಲೆಯ ಸತ್ತ್ವ. ಈ ಕಲೆಗೆ ಕಥಕ್‌ನ ‘ಧಾಧಿನ್ ಧಿನ್‌ಧಾ’ ಅಥವಾ ಯಕ್ಷಗಾನದ ‘ತಿತ್ತಿಥೈ’ ತಿಳಿಯದ ಅರಬ್ಬಿಗಳ ಮನಮುಟ್ಟುವುದಾಗಲಿ ಚೆನ್ನಾಗಿ ಗೊತ್ತು.

ಡಾನ್ಸ್ ಮಾಡುವವರು ರೆಕ್ಕೆಯಿಲ್ಲದೇ ಹಾರಾಡಬಲ್ಲರು ಎಂಬ ಮಾತಿದೆ. ನನ್ನ ಪ್ರಕಾರ, ಉತ್ತಮ ನಾಟ್ಯಪಟುಗಳು ಪ್ರೇಕ್ಷಕರನ್ನೂ ರೆಕ್ಕೆಯಿಲ್ಲದೇ ಎಲ್ಲ ಎಲ್ಲೆ ಮೀರಿ ಹಾರಾಡುವಂತೆ ಮಾಡಬಲ್ಲರು. ಅಂದಹಾಗೆ, ಖಲೀಲ್ ಅಲ್‌ಅಶರ್ ಪಕ್ಕಾ
ಬಹ್ರೈನ್ ಪ್ರಜೆ!

error: Content is protected !!