ಸ್ವಾಸ್ಥ್ಯ ಸಂಪದ
Yoganna55@gmail.com
ಮನುಷ್ಯನ ದೇಹ ಕೊಬ್ಬಿನಾಂಶದಿಂದಲೂ ಕೂಡಿದ್ದು, ಸ್ಥೂಲಕಾಯ ಇರದಿದ್ದರೂ, ಶೇ.೧೫ರಿಂದ ೨೦ರಷ್ಟು ದೇಹದ ತೂಕ ಕೊಬ್ಬಿನಿಂದ ಕೂಡಿರು ತ್ತದೆ. ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥದಲ್ಲೂ ಕೊಬ್ಬಿನಾಂಶವಿದ್ದು, ಒಂದೊಂದು ಆಹಾರ ಪದಾರ್ಥದಲ್ಲಿ ಬೇರೆಬೇರೆ ಪ್ರಮಾಣದಲ್ಲಿರು ತ್ತದೆ. ಅವುಗಳಲ್ಲಿರುವ ಕೊಬ್ಬನ್ನು ದೃಶ್ಯ ಮತ್ತು ಅದೃಶ್ಯ ಕೊಬ್ಬುಗಳೆಂದು ವರ್ಗೀಕರಿಸಬಹುದಾಗಿದ್ದು, ದೃಶ್ಯ ಕೊಬ್ಬು ಕಣ್ಣಿಗೆ ಎದ್ದು ಕಾಣುತ್ತದೆ (ಎಣ್ಣೆ, ವನಸ್ಪತಿ, ತುಪ್ಪ, ಬೆಣ್ಣೆ ಇತ್ಯಾದಿ). ಅದೃಶ್ಯ ಕೊಬ್ಬು ಕಣ್ಣಿಗೆ ಕಾಣದ ಆದರೆ ಆಹಾರ ಪದಾರ್ಥದೊಳಗಿರುವ ಕೊಬ್ಬಾಗಿರುತ್ತದೆ.
ಇದು ಬಹುಪಾಲು ಎಲ್ಲ ಆಹಾರ ಪದಾರ್ಥಗಳಲ್ಲಿದ್ದು ಕೆಲವಲ್ಲಿ ಹೆಚ್ಚಿನ ಪ್ರಮಾಣದಲ್ಲರುತ್ತದೆ. ದೃಶ್ಯ ಕೊಬ್ಬುಳ್ಳ ಆಹಾರ ಪದಾರ್ಥಗಳ ಅತಿಯಾದ ಸೇವನೆ ಅನಾರೋಗ್ಯಕ್ಕೆ ನಾಂದಿಯಾಗುತ್ತದೆ. ಕಡ್ಲೆಕಾಯಿ ಬೀಜ, ಹುಚ್ಚೆಳ್ಳು, ಎಳ್ಳು, ಸೊಯಾಬೀನ್, ಮಾಂಸ, ಮೊಟ್ಟೆ, ಹಾಲು, ಈಲಿ ಇತ್ಯಾದಿಗಳೆಲ್ಲ ಅದೃಶ್ಯ ಕೊಬ್ಬುಗಳಾಗಿದ್ದು. ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಸುಮಾರು ಶೇ೧೦ರಿಂದ ೩೦ರಷ್ಟು ಕೊಬ್ಬಿನ ಆಹಾರ ಪದಾರ್ಥಗಳಿರಬೇಕು. ಪ್ರತಿನಿತ್ಯ ಯುವಕರಿಗೆ ೨೫ಗ್ರಾಂ ಮತ್ತು ವಯಸ್ಕರಿಗೆ ೨೦ಗ್ರಾಂ ಕೊಬ್ಬು ಅತ್ಯವಶ್ಯಕವಾಗಿ ಕೊಬ್ಬಿನಾಂಶವಿರುವ ಪದಾರ್ಥ ಬೇಕೇಬೇಕು.
ಮೊದಲ ೫ವರ್ಷದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಕೊಬ್ಬು ಅತ್ಯವಶ್ಯಕವಿರುವುದರಿಂದ ತುಸು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ನೀಡಬೇಕು. ಸೇವಿಸುವ ಆಹಾರದಲ್ಲಿ ಕನಿಷ್ಠ ೧೦ಗ್ರಾಂ ಸಸ್ಯಜನ್ಯ ಎಣ್ಣೆಗಳಿರಬೇಕು. ಸಸ್ಯಜನ್ಯ ಎಣ್ಣೆಗಳಿಂದ ಅತ್ಯವಶ್ಯಕವಾದ ಜಿಡ್ಡಿನಾಮ್ಲವಾದ ಲಿನೋಲಿಯೀಕ್ ಆಮ್ಲ ಲಭಿಸುತ್ತದೆ. ಆದರೆ, ಊಟದಲ್ಲಿ ಪ್ರಾಣಿಜನ್ಯ ಕೊಬ್ಬನ್ನು ಅತ್ಯಲ್ಪವಾದ ಪ್ರಮಾಣದಲ್ಲಿ ಸೇವಿಸಬೇಕು.
ಅಧಿಕ ಪ್ರಮಾಣದಲ್ಲಿ ಸೇವಿಸಲಾದ ಕೊಬ್ಬು ದೇಹದಲ್ಲಿ ಟ್ರೈ ಗ್ಲಿಸರೈಡ್ ರೂಪದಲ್ಲಿ ದೇಹದ ವಿವಿಧ ಭಾಗಗಳಾದ ಚರ್ಮದಡಿ, ಉದರ ಗುಡಿ ಅಂಗಾಂಗ ಗಳ ಸುತ್ತಮುತ್ತ, ಹೃದಯದ ಸುತ್ತ ಇನ್ನೂ ಅನೇಕ ಭಾಗಗಳಲ್ಲಿ ಶೇಖರಣೆಯಾಗಿ, ದೇಹಕ್ಕೆ ಅವಶ್ಯಕತೆಯಿದ್ದಾಗ ಉಪಯೋಗಿಸಲ್ಪಡುತ್ತದೆ. ಉದರ ಗುಡಿಯ ಅಂಗಾಂಗಗಳಾದ ಜೀರ್ಣಾಂಗ ವ್ಯವಸ್ಥೆಯ ವಿವಿಧ ಭಾಗಗಳ ಮೇಲೆ, ಉದರಗುಡಿಯ ಇನ್ನಿತರ ಅಂಗಾಂಗಗಳ ಸುತ್ತಮುತ್ತ ಶೇಖರಣೆಯಾಗುವ ಜಿಡ್ಡನ್ನು ಜೀವಾಂಗಗಳ ಜಿಡ್ಡು (ವಿಸರಲ್ -ಟ್) ಎನ್ನಲಾಗುತ್ತದೆ.
ಈ ಜಿಡ್ಡಿನ ಪ್ರಮಾಣ ಅತಿಯಾದಲ್ಲಿ ಉದರ ಗೋಡೆ ಉಬ್ಬಿಕೊಳ್ಳುತ್ತದೆ. ಉದರದ ಸುತ್ತಳತೆಯನ್ನು ಅಳೆದು ಈ ಕೊಬ್ಬಿನ ಪ್ರಮಾಣವನ್ನು ಪರೋಕ್ಷವಾಗಿ ತಿಳಿಯಬಹುದಾಗಿದೆ. ಗಂಡಸರಲ್ಲಿ ಉದರದ ಸುತ್ತಳತೆ ೩೦ ಅಂಗುಲ ಮತ್ತು ಸೀಯರಲ್ಲಿ ೨೫ ಅಂಗುಲಕ್ಕಿಂತ ಹೆಚ್ಚಾಗಿದ್ದಲ್ಲಿ ಜೀವಾಂಗ ಕೊಬ್ಬಿನ ಏರಿಕೆಯನ್ನು ಸೂಚಿಸುತ್ತದೆ. ಜೀವಾಂಗದ ಕೊಬ್ಬು ಇನ್ನಿತರ ಭಾಗಗಳ ಕೊಬ್ಬಿಗಿಂತ ಹೆಚ್ಚು ಕ್ರಿಯಾತ್ಮಕವಾಗಿರುವುದರಿಂದ ಈ ಕೊಬ್ಬಿನ ಹೆಚ್ಚಳ ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.
ಜೀವಾಂಗ ಕೊಬ್ಬಿನ ಏರಿಕೆ ಸಕ್ಕರೆಕಾಯಿಲೆ, ಏರುರಕ್ತ ಒತ್ತಡ, ಕ್ಯಾನ್ಸರ್, ಹೃದಯಾಘಾತ ಇನ್ನಿತರ ಕಾಯಿಲೆಗಳನ್ನು ಪ್ರಚೋದಿಸುತ್ತದೆ. ಆದುದರಿಂದ ಈ ಭಾಗದಲ್ಲಿ ಅತಿಯಾಗಿ ಕೊಬ್ಬು ಶೇಖರಣೆಯಾಗುವುದನ್ನು ನಿಯಂತ್ರಿಸಬೇಕು.
ದೇಹದ ಕೊಬ್ಬೇರಿಕೆಗೆ ಕಾರಣಗಳೇನು?
ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಶಕ್ತಿದಾಯಕ ಆಹಾರ ಪದಾರ್ಥ, ಅತಿಯಾದ ಕೊಬ್ಬಿನ ಆಹಾರ ಪದಾರ್ಥಗಳನ್ನು ಸೇವಿಸುವಿಕೆ, ದೈಹಿಕ ಶ್ರಮ ರಹಿತ ಬದುಕು, ವ್ಯಾಯಾಮವಿಲ್ಲದಿರುವಿಕೆ, ಜನ್ಮದತ್ತವಾಗಿ ಬಂದ ವಂಶವಾಹಿ ನ್ಯೂನತೆ, ಅನಿಯಂತ್ರಿತ ಸಕ್ಕರೆಕಾಯಿಲೆ, ಧೂಮಪಾನ, ಮದ್ಯಪಾನ ಮತ್ತು ಅತಿಯಾದ ಮಾನಸಿಕ ಒತ್ತಡದಿಂದ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಕೊಬ್ಬಿನ ಆಹಾರ ಪದಾರ್ಥಗಳಲ್ಲದೆ, ಅಕ್ಕಿ, ರಾಗಿ, ಸಕ್ಕರೆ, ಮಾಂಸ ಇತ್ಯಾದಿ ಆಹಾರ ಪದಾರ್ಥಗಳನ್ನು ಅವಶ್ಯಕ ಪ್ರಮಾಣಕ್ಕಿಂತ ಹೆಚ್ಚು ಸೇವಿಸಿದಲ್ಲೂ, ಹೆಚ್ಚಾದ ಪ್ರಮಾಣ ಜಿಡ್ಡಾಗಿ ಪರಿವರ್ತನೆಯಾಗಿ ಶೇಖರಿಸಲ್ಪಡುವುದರಿಂದ ಇವುಗಳ ಅಧಿಕ ಸೇವನೆಯೂ ದೇಹದ ಕೊಬ್ಬಿನ ಹೆಚ್ಚಳಕ್ಕೆ ಕಾರಣ.
ದೇಹಕ್ಕೆ ಕೊಬ್ಬು ಅಲ್ಪ ಪ್ರಮಾಣದಲ್ಲಿ ಅವಶ್ಯಕವಾಗಿರುವುದರಿಂದ ಕೊಬ್ಬಿನ ಆಹಾರಪದಾರ್ಥಗಳನ್ನು ಅವಶ್ಯಕವಿರುವಷ್ಟು ಮಾತ್ರ ಸೇವಿಸಬೇಕು. ಕೆಲವು ವಂಶಸ್ಥರಲ್ಲಿ ದೇಹದಲ್ಲಿ ಕೊಬ್ಬು ತಯಾರಿಸುವ ಸಹಜ ಕ್ರಿಯೆಯ ವೇಗ ಅತಿಯಾಗಿರುವ ವಂಶವಾಹಿಗಳಿದ್ದು, ಇವರುಗಳಲ್ಲಿ ದೇಹದೊಳಗೆ ಅಧಿಕ ಪ್ರಮಾಣದ ಕೊಬ್ಬು ಉತ್ಪತ್ತಿಯಾಗುತ್ತದೆ. ಇವರುಗಳಲ್ಲಿ ಆಹಾರದ ಮೂಲಕ ಕೊಬ್ಬನ್ನು ಸೇವಿಸದಿದ್ದರೂ ದೇಹದೊಳಗೆ ಸೇವಿಸಿದ ಇನ್ನಿತರ ಆಹಾರಪದಾರ್ಥಗಳಿಂದ ಕೊಬ್ಬು ಉತ್ಪತ್ತಿಯಾಗುತ್ತದೆ.
ಅನಿಯಂತ್ರಿತ ಸಕ್ಕರೆ ಕಾಯಿಲೆಯವರಲ್ಲಿ ಶೇಖರಣೆಯಾಗಿರುವ ಕೊಬ್ಬು ಶಕ್ತಿಗಾಗಿ ಬಿಡುಗಡೆ ಯಾಗುವುದರಿಂದ ರಕ್ತದಲ್ಲಿ ಕೊಬ್ಬಿನ ಪ್ರಮಾಣ
ಅಧಿಕವಾಗುತ್ತದೆ. ದೈನಂದಿನ ವ್ಯಾಯಾಮವಿಲ್ಲದೆ ದೀರ್ಘಕಾಲ ಕುಳಿತು ಕೆಲಸ ಮಾಡುವವರಲ್ಲೂ ದೇಹದ ಕೊಬ್ಬು ಹೆಚ್ಚಾಗುತ್ತದೆ.
ರಕ್ತದ ಜಿಡ್ಡೇರಿಸುವ ಔಷಧಗಳು
ಕೆಲವು ಔಷಧಗಳನ್ನು ದೀರ್ಘಕಾಲ ಸೇವಿಸುವವರಲ್ಲೂ ರಕ್ತದ ಜಿಡ್ಡು ಏರಿಕೆಯಾಗುತ್ತದೆ. ಉದಾ: ಏರು ರಕ್ತೊತ್ತಡ ಮತ್ತು ಹೃದ್ರೋಗಿಗಳು ಸೇವಿಸುವ ಬೀಟಾ ಅಡಚಕಗಳು, ಸ್ಟೀರಾಯ್ಡ್ ಔಷಧಗಳು, ಅಮೈಡಾರೋನ್, ಅನಬಾಲಿಕ್ ಸ್ಟೀರಾಯ್ಡ್ಗಳು, ಏಡ್ಸ್ ನಿಯಂತ್ರಕ ಔಷಧಗಳು, ಕ್ಯಾನ್ಸರ್ ನಿಯಂತ್ರಣಕ್ಕೆ ಉಪಯೋಗಿಸುವ ಕೆಲವು ಔಷಧಗಳು, ಮೂತ್ರಸುರಿಕೆಗಳು, ಸಂತಾನ ನಿಯಂತ್ರಣದ ಔಷಧಗಳು, ವೈರಸ್ ನಿರೋಧಕ ಔಷಧಗಳು, ಫಿಟ್ಸ್ ನಿರೋಧಕ ಔಷಧಗಳು ಇತ್ಯಾದಿ. ಈ ಔಷಧಗಳನ್ನು ಸೇವಿಸುವವರು ಆಗಾಗ ರಕ್ತದ ಕೊಬ್ಬನ್ನು ಪರೀಕ್ಷಿಸಿ ಕೊಂಡು, ಅದೇನಾದರೂ ಹೆಚ್ಚಾದಲ್ಲಿ ಔಷಧದ ಪ್ರಮಾಣವನ್ನು ಕಡಿಮೆಮಾಡಿಕೊಳ್ಳಬೇಕು ಅಥವಾ ಕೈಬಿಡಬೇಕು.
ಬದಲಾದ ಆಹಾರಶೈಲಿ
ಆಧುನಿಕ ಆಹಾರಶೈಲಿಯಲ್ಲಿ ಕೊಬ್ಬನ್ನು ಹೆಚ್ಚಾಗಿ ಬಳಸುವ ಪರಿಪಾಠ ವ್ಯಾಪಕವಾಗುತ್ತಿದೆ. ಅಲ್ಲದೆ ಕೃತಕ ಮತ್ತು ಕರಿದ ಆಹಾರ ಪದಾರ್ಥಗಳು, ಅತಿ
ಯಾದ ಟ್ರಾನ್ಸ್ ಜಿಡ್ಡಿರುವ ಬೇಕರಿ ಆಹಾರ(ಜಂಕ್ ಫುಡ್)ಗಳು, ಐಸ್ಕ್ರೀಂ ಇತ್ಯಾದಿಗಳನ್ನು ಇಂದು ಹೆಚ್ಚಾಗಿ ಬಳಸಲಾಗುತ್ತಿರುವುದೂ ಸ್ಥೂಲಕಾಯಕ್ಕೆ
ಕಾರಣವಾಗಿ ರಕ್ತ ಜಿಡ್ಡೇರಿಕೆಯೂ ಉಂಟಾಗುತ್ತಿದೆ. ಈಗಿನ ಕಾಲದಲ್ಲಿ ಪ್ರಪಂಚಾದ್ಯಂತ ಮಾಂಸಾಹಾರಿಗಳ ಸಂಖ್ಯೆಯೂ ಅಧಿಕವಾಗಿದ್ದು, ಉಪಯೋಗಿ ಸುವ ಮಾಂಸದ ಪ್ರಮಾಣವೂ ದಿನನಿತ್ಯ ಬಳಕೆಯಲ್ಲಿ ಹೆಚ್ಚಾಗುತ್ತಿರುವುದು ಸಹ ದೇಹದ ಜಿಡ್ಡೇರಿಕೆಗೆ ಕಾರಣವಾಗಿದೆ. ಇನ್ನು ಎಣ್ಣೆ ತುಪ್ಪಗಳಿಲ್ಲದೆ ಆಹಾರವನ್ನು ತಯಾರಿಸಲು ಸಾಧ್ಯವೇ ಇಲ್ಲ ಎಂಬ ಮನೋವೃತ್ತಿಯನ್ನು ಬೆಳಸಿಕೊಂಡು.
ಪ್ರತಿಯೊಂದು ಆಹಾರಕ್ಕೂ ಎಣ್ಣೆ ಹಾಕುವ ಪರಿಪಾಠ ಇಂದು ಹೆಚ್ಚಾಗುತ್ತಿದೆ. ಹಾಗೆ ನೋಡಿದರೆ ಯಾವ ಎಣ್ಣೆ ತುಪ್ಪಗಳಿಗೆ ತನ್ನದೇ ಆದ ರುಚಿಯಿಲ್ಲ. ಅವು ಆಹಾರಕ್ಕೆ ರುಚಿಯನ್ನು ನೀಡಲಾರವು. ಎಂಬ ವಿಚಾರವಿದ್ದರೂ ಎಣ್ಣೆ ತುಪ್ಪಗಳ ಬಳಕೆಯಂತೂ ವ್ಯಾಪಕವಾಗುತ್ತಿದೆ. ಜನರಲ್ಲಿ ಸಿಹಿತಿಂಡಿಗಳ ಉಪಯೋಗವೂ ಸಹ ದಿನೇ ದಿನೇ ಹೆಚ್ಚುತ್ತಿದೆ. ಸಭೆ ಸಮಾರಂಭಗಳಲ್ಲಂತೂ ಬಗೆ ಬಗೆಯ ಸಿಹಿತಿಂಡಿಗಳು ಪ್ರತಿಷ್ಠೆಯ ಸೂಚಕಗಳಾಗಿ ಹೊರ ಹೊಮ್ಮುತ್ತಿದೆ. ಇದು ಅಧಿಕ ಸಿಹಿ ಸೇವನೆಗೆ ಪ್ರಮುಖ ಕಾರಣವಾಗಿದೆ. ಅತಿಯಾದ ಸಿಹಿ ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಯಾಗಿ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ.
ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದಲ್ಲಿ ತಮ್ಮ ಮಕ್ಕಳು ದಷ್ಟಪುಷ್ಟರಾಗಿರುತ್ತಾರೆಂಬ ಪೋಷಕರ ಮೂಢನಂಬಿಕೆಯಿಂದ, ಪೋಷಕರು ಮಕ್ಕಳಿಗೆ ಅವಶ್ಯಕತೆಗಿಂತ ಹೆಚ್ಚಿನ ಕ್ಯಾಲೊರಿ ಪ್ರಮಾಣದ ಆಹಾರವನ್ನು ನೀಡುವುದಲ್ಲದೆ. ಬಾಲ್ಯದಿಂದಲೇ ಬೇಕರಿ ತಿಂಡಿಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದರಿಂದ ಅವರ ಬಾಲ್ಯದಲ್ಲಿಯೇ ಬೊಜ್ಜು ಹೆಚ್ಚಾಗಿ ಅನಾರೋಗ್ಯದ ಉಗಮಕ್ಕೆ ನಾಂದಿಯಾಗುತ್ತದೆ.
ಬದಲಾದ ಜೀವನಶೈಲಿ
ಆಧುನಿಕ ಮಾನವನಲ್ಲಿ ಅತ್ಯಲ್ಪ ಅವಧಿಯಲ್ಲಿ ಅತಿಹೆಚ್ಚು ಗಳಿಸಬೇಕು/ ಸಾಧಿಸಬೇಕು ಎಂಬ ಮನೋವೃತ್ತಿ ಬೆಳೆಯುತ್ತಿರುವುದರಿಂದ, ಸ್ಪರ್ಧಾತ್ಮಕ
ಬದುಕು ರೂಪುಗೊಂಡು ಎಷ್ಟೋ ಅತೀವ ಮಾನಸಿಕ ಒತ್ತಡದಿಂದ ತತ್ತರಿಸುತ್ತಿದ್ದಾರೆ. ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ದೈಹಿಕ
ಶ್ರಮ ಕಡಿಮೆ ಅಥವಾ ಏನೂ ಇಲ್ಲವಾಗಿದೆ. ಇದರಿಂದ ಅತಿಯಾದ ಮಾನಸಿಕ ಒತ್ತಡದ ನಿವಾರಣೆಗಾಗಿ ಮದ್ಯಪಾನ ಮತ್ತು ಧೂಮಪಾನಗಳಿಗೆ ಮೊರೆ
ಹೋಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರೀತಿಯ ಜೀವನಶೈಲಿ ಮತ್ತು ದುಶ್ಚಟಗಳಿಗೆ ಈಡಾಗಿರುವ ಮಾನವನ ಇಂದಿನ ಬದುಕಿಗೆ ಅತ್ಯಂತ ಮಾರಕ ಕೊಡುಗೆಯಾಗಿದ್ದು, ಇವೆಲ್ಲವೂ ದೇಹದ ಜಿಡ್ಡೇರಿಕೆಗೆ ಪ್ರಮುಖ ಕಾರಣಗಳಾಗಿವೆ. ಮಾನವ ಇದನ್ನು ಅರಿತು ತಿದ್ದುಕೊಳ್ಳದಿದ್ದಲ್ಲಿ ಅವನಿಂದಲೇ ಅವನ ನಾಶ ಖಚಿತ.
ದೃಢೀಕರಣ
ದೇಹದಲ್ಲಿ ಕೊಬ್ಬು ಹೆಚ್ಚಾಗಿರುವುದನ್ನು ರಕ್ತದಲ್ಲಿ ಕೊಬ್ಬಿನ ಪ್ರಮಾಣದ ಅಳತೆ, ಉದರದ ಸುತ್ತಳತೆ ಮತ್ತು ಕುಂಡಿಗಳ ಸುತ್ತಳತೆ ಹಾಗೂ ಬಿಎಂಐ ಗಳಿಂದ ದೃಢೀಕರಿಸಿಕೊಳ್ಳಬಹುದು. ಇದಲ್ಲದೆ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಅಳೆಯುವ ಸಲಕರಣೆಯಿಂದಲೂ ಕೊಬ್ಬಿನ ಪ್ರಮಾಣವನ್ನು ದೃಢೀಕರಿಸಿಕೊಳ್ಳಬಹುದು. ಹೊಕ್ಕಳಿನ ಮಟ್ಟದಲ್ಲಿ ಉದರದ ಸುತ್ತಳತೆ ಪುರುಷರಲ್ಲಿ ೩೦ ಅಂಗುಲ, ಸೀಯರಲ್ಲಿ ೨೫ ಅಂಗುಲ ಸಹಜವಾಗಿದ್ದು, ಇದಕ್ಕಿಂತ ಹೆಚ್ಚಾಗಿದ್ದಲ್ಲಿ ರಕ್ತದ ಜಿಡ್ಡೇರಿಕೆಯನ್ನು ಸೂಚಿಸುತ್ತದೆ.
ಇವೆರಡರ ಅನುಪಾತ ೧ಕ್ಕಿಂತಲೂ ಹೆಚ್ಚಾಗಿ ಮತ್ತು ಬಿಎಂಐ (ಬಾಡಿ ಮಸಲ್ ಇಂಡೆಕ್ಸ್) ಅಂದರೆ ದೇಹದ ತೂಕ- ಎತ್ತರಗಳ ಅನುಪಾತ ೨೫-೩೦ಕ್ಕಿಂತಲೂ ಜಾಸ್ತಿ ಯಾಗಿದ್ದಲ್ಲಿ ರಕ್ತದ ಜಿಡ್ಡೇರಿಕೆಯನ್ನು ಸೂಚಿಸುತ್ತದೆ. ಈ ಅಳತೆಗಳಿಗಿಂತ ಹೆಚ್ಚಾಗಿದ್ದಲ್ಲಿ ರಕ್ತದ ಕೊಬ್ಬೇರಿಕೆಯನ್ನು ಸೂಚಿಸುತ್ತವೆ. ಇವುಗಳಲ್ಲಿ ಎಲ್ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು, ಇದರ ಪ್ರಮಾಣ ಕಡಿಮೆಯಿದ್ದಷ್ಟೂ ಒಳ್ಳೆಯದು. ಹೆಚ್ಡಿಎಲ್ ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು, ಇದರ ಪ್ರಮಾಣ ಹೆಚ್ಚಾಗಿದ್ದಷ್ಟೂ ರಕ್ತನಾಳಗಳಲ್ಲಿ ಜಿಡ್ಡುಗಟ್ಟುವ ಸಾಧ್ಯತೆ ಅತ್ಯಲ್ಪ.
ಜಿಡ್ಡಿನಿಂದಾಗುವ ಅವ್ಯವಸ್ಥೆಗಳು
ಜೀರ್ಣಾಂಗ ವ್ಯವಸ್ಥೆಯಲ್ಲಿ ಜಿಡ್ಡಿನ ಕಿಣ್ವ ಲೈಪೇಸ್ ಮತ್ತು ಈಲಿಯ ರಸಗಳ ಕೊರತೆ ಇದ್ದಲ್ಲಿ ಜಿಡ್ಡಿನ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗದೇ ಮಲದಲ್ಲಿ ವಿಸರ್ಜನೆಯಾಗುತ್ತವೆ. ಇಂತಹ ಮಲ ಗಾತ್ರದಲ್ಲಿ ಬಹು ದೊಡ್ಡದಾಗಿದ್ದು, ದುರ್ವಾಸನೆಯಿಂದ ಕೂಡಿರುತ್ತದೆ. ರಕ್ತದ ಜಿಡ್ಡೇರಿಕೆ – ರಕ್ತದಲ್ಲಿ ಕೊಲೆಸ್ಟ್ರಾಲ್ ಎಲ್ ಡಿಎಲ್, ವಿಎಲ್ಡಿಎಲ್ ಮತ್ತು ಹೆಚ್ಡಿಎಲ್ ಜಿಡ್ಡಿನ ಪ್ರೋಟೀನ್ಗಳಲ್ಲಿದ್ದು, ಎಲ್ಡಿಎಲ್ ನಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಲ್ಲಿ ಶುದ್ಧರಕ್ತನಾಳಗಳ ಒಳಪದರದಲ್ಲಿ ಶೇಖರಣೆಯಾಗಿ ಜಿಡ್ಡಿನ ಕೆಂಪೂತುರಿಯನ್ನುಂಟುಮಾಡಿ ಜಿಡ್ಡಿನ ಗೆಡ್ಡೆ(ಅತಿರೋಮ)ಯುಂಟಾಗಿ ರಕ್ತನಾಳಗಳು ಅಡಚಣೆಗೀಡಾಗುತ್ತವೆ. ಇದನ್ನು ರಕ್ತನಾಳಗಳ ಜಿಡ್ಡುಗಡಸು ರೋಗ (ಅತಿರ್ಹೋಸ್ಕ್ಲಿರೋಸಿಸ್) ಎನ್ನಲಾಗುತ್ತದೆ.
ಹೃದಯದ ಶುದ್ಧರಕ್ತನಾಳಗಳು ಈ ಕಾಯಿಲೆಗೀಡಾಗಿ ಹೃದಯಾಘಾತ ಮತ್ತು ಮೆದುಳಿನ ರಕ್ತನಾಳಗಳು ಈ ಕಾಯಿಲೆಗೀಡಾಗಿ ಸ್ಟ್ರೋಕ್ಗಳು ಉಂಟಾಗುತ್ತವೆ. ಕೈಕಾಲಿನ ರಕ್ತನಾಳಗಳು ಈ ಕಾಯಿಲೆಗೀಡಾಗಿ ಗ್ಯಾಂಗ್ರೀನ್ ಉಂಟಾಗುತ್ತದೆ.
ಈಲಿ(ಯಕೃತ್)ಯಲ್ಲಿ ಜಿಡ್ಡು
ಶೇಖರಣೆಯಾಗಿ ಅದರಿಂದ ಈಲಿಯ ಜೀವಕೋಶಗಳು ನಾಶವಾಗಿ ಸಿರ್ಹೋಸಿಸ್ ಕಾಯಿಲೆ ಉಂಟಾಗುತ್ತದೆ.
ಜಿಡ್ಡಿನ ನಿಯಂತ್ರಣ ಹೇಗೆ?
ಜಿಡ್ಡಿನ ನಿಯಂತ್ರಣದಲ್ಲಿ ಜೀವನಶೈಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೀವನಶೈಲಿಯ ಬದಲಾವಣೆ ಅತ್ಯವಶ್ಯಕ. ಆಹಾರದಲ್ಲಿ ಕೊಬ್ಬು, ಹಾಲು, ಮೊಟ್ಟೆ ಮತ್ತು ಸಿಹಿಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಬೇಕರಿ ಆಹಾರ ಪದಾರ್ಥಗಳು ಮತ್ತು ಕೃತಕ ಪಾನೀಯಗಳನ್ನು ವರ್ಜಿಸಬೇಕು. ನಾರಿನಾಂಶ ಅಧಿಕವಾಗಿರುವ ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಮಿತಿಯಾದ ಮಾಂಸಾಹಾರವಿರಲಿ. ಮೀನು ಸೇವನೆ ಹಿತಕರ. ಮದ್ಯಪಾನ ಮತ್ತು ಧೂಮಪಾನಗಳನ್ನು ವರ್ಜಿಸಬೇಕು.
ಪ್ರತಿನಿತ್ಯ ೩೦ನಿಮಿಷದ ಯಾವುದಾದರೊಂದು ವ್ಯಾಯಾಮವನ್ನು ಕೈಗೊಳ್ಳಬೇಕು. ಸದಾಕಾಲ ಸಂತೋಷವಾಗಿರುವ ನೆಮ್ಮದಿಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ರಕ್ತದ ಜಿಡ್ಡನ್ನು ಹೆಚ್ಚಿಸುವ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆಯಂತೆ ಅವುಗಳನ್ನು ಮಿತಿಗೊಳಿಸಬೇಕು ಇಲ್ಲವೇ
ವರ್ಜಿಸಬೇಕು. ಜಿಡ್ಡು ನಿಯಂತ್ರಕ ಔಷಧಗಳು ಮೇಲಿನ ಜೀವನಶೈಲಿಯ ವಿಧಾನಗಳಿಗೆ ರಕ್ತ ಕೊಬ್ಬಿನ ಪ್ರಮಾಣ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಅವುಗಳ
ಪಾಲನೆಯ ಜೊತೆ ಜೊತೆಗೆ ರಕ್ತದ ಜಿಡ್ಡನ್ನು ಕಡಿಮೆಮಾಡುವ ಔಷಧಗಳ ಉಪಯೋಗ ಅನಿವಾರ್ಯ. ಇವು ಜೀರ್ಣಾಂಗದಲ್ಲಿ ಆಹಾರದಲ್ಲಿ ಸೇವಿಸಿದ ಕೊಬ್ಬನ್ನು ರಕ್ತಗತ ಮಾಡುವುದನ್ನು ತಡೆಗಟ್ಟಿ ಅಥವಾ ದೇಹದೊಳಗೆ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಮಾಡಿ ರಕ್ತ
ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುತ್ತವೆ.
ಉದಾ ಅಟಿರೋಸ್ಟ್ಯಾಟಿನ್, ರೋವೋಸ್ಟ್ಯಾಟಿನ್ ಇವುಗಳನ್ನು ರಾತ್ರಿ ವೇಳೆ ತೆಗೆದುಕೊಂಡರೆ ಮಾತ್ರ ಪರಿಣಾಮಕಾರಿ. ದೇಹದ ಕೊಬ್ಬಿನ ನಿಯಂತ್ರಣ ಪ್ರತಿನಿತ್ಯ ಪಾಲಿಸುವ ಜೀವನಶೈಲಿಯ ವಿಧಾನಗಳು ಕೆಲವೊಮ್ಮೆ ಜೊತೆಗೂಡಿದ ಔಷಧಗಳನ್ನು ಅವಲಂಬಿಸಿರುವುದರಿಂದ ನಿಯಂತ್ರಣ ವಿಧಾನ ಗಳನ್ನು ಚಾಚೂತಪ್ಪದೆ ಪ್ರತಿನಿತ್ಯ ಜೀವನವಿಡೀ ಪಾಲಿಸಬೇಕು.
ಇಲ್ಲದಿದ್ದಲ್ಲಿ ವ್ಯತ್ಯಾಸಗಳಾಗುತ್ತವೆ. ಕೊಬ್ಬು ಮಿತವಾಗಿದ್ದಲ್ಲಿ ದೇಹಕ್ಕೆ ಹಿತವಾಗಿಯೂ ಅತಿ ಯಾದಲ್ಲಿ ಅಹಿತವಾಗಿಯೂ ಪರಿಣಮಿಸುವುದರಿಂದ ವಿವೇಕದ ಆಯ್ಕೆ ನಿಮ್ಮ ಕೈಯಲ್ಲಿ.
Read E-Paper click here