Sunday, 15th December 2024

ಇದು ವಿರುದ್ದ ಆಹಾರವೆಂಬ ವಿಷದ ವಿಷಯ !

food

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

ಆಹಾರಕ್ಕೆ ಸಮನಾದ ಔಷಧ ಬೇರಾವುದೂ ಇಲ್ಲ. ನಾವು ಕೇವಲ ಅನ್ನದ/ಆಹಾರದ ಮೂಲಕ ಸಂಪೂರ್ಣ ಆರೋಗ್ಯವಂತರಾಗಿರಲು ಸಾಧ್ಯ. ಆಹಾರದ ಹೊರತು ಬೇರಾವ ಔಷಧದ ಅವಶ್ಯಕತೆಯೂ ಇಲ್ಲ ಎಂಬುದು ಶಾಸ್ತ್ರವಾಕ್ಯ. ಇದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ, ಇವತ್ತು ನಾವೆಲ್ಲರೂ ಸಾವಿರಾರು ರೀತಿಯ ಔಷಧಗಳಿಗೆ ಮೊರೆಹೋಗಿರುವುದೇಕೆ? ಕಾರಣ, ನಮಗೆ ಆಹಾರವನ್ನು ಉಪಯೋಗಿಸುವ
ಬಗೆಯೇ ಗೊತ್ತಿಲ್ಲ. ಆಯುರ್ವೇದ ಶಾಸ್ತ್ರದ ಆಹಾರ ವಿಜ್ಞಾನದ ಬಗ್ಗೆ ಅರಿವಿಲ್ಲ. ಆದ್ದರಿಂದಲೇ ಇವತ್ತು ಇಷ್ಟೊಂದು ಕಾಯಿಲೆಗಳು, ಆಸ್ಪತ್ರೆಗಳು, ಔಷಧಗಳು, ನೋವು-ನರಳಾಟ-ದುಃಖ.

ಇವನ್ನೆಲ್ಲ ನಿವಾರಿಸುವುದಕ್ಕೆ ಒಂದೇ ಉಪಾಯವೆಂದರೆ, ಆಯುರ್ವೇದ ಶಾಸ್ತ್ರದ ‘ಆಹಾರ ವಿಜ್ಞಾನ’ದ ತಿಳಿವಳಿಕೆ. ಆದರೆ ಈ ಆಹಾರ ವಿಜ್ಞಾನವೊಂದು ಮಹಾಸಾಗರ, ಎಲ್ಲವನ್ನೂ ಒಂದೇ ಬಾರಿ ತಿಳಿಹೇಳುವುದು ಕಷ್ಟದ ಕೆಲಸ. ಹಾಗಾಗಿ, ಅದರ ಒಂದು ಸಣ್ಣ ಭಾಗವಾದ ‘ವಿರುದ್ಧ ಆಹಾರ’ದ ಬಗ್ಗೆ ನಿಮ್ಮೊಂದಿಗೆ ಇಂದು ಹಂಚಿಕೊಳ್ಳುವೆ. ಅದಕ್ಕೂ ಮೊದಲು, ಒಂದಷ್ಟು ವೈಜ್ಞಾನಿಕ ಸತ್ಯಗಳನ್ನು ನಿಮ್ಮ ಮುಂದಿಡಬೇಕು. ಇಂದು
ಎಲ್ಲರಿಗೂ ಚಿರಪರಿಚಿತವಾಗಿರುವ ‘ಮಧುಮೇಹ’ ವಿಶ್ವದಲ್ಲೇ ಸುಮಾರು ೧೦ ಪ್ರತಿಶತ ಜನರನ್ನು ಬಾಧಿಸುವ ಸಮಸ್ಯೆ. ಆದರೆ, ಪಾಶ್ಚಾತ್ಯ ಸಂಶೋಧನೆಯ ಪ್ರಕಾರ ಈ ಕಾಯಿಲೆ ಸಂಭವಿಸಲು ನಿಖರ ಕಾರಣ
ತಿಳಿದಿಲ್ಲ. ಒಂದು ಬಗೆಯ ಸಂಧಿಗಳ ವ್ಯಾಧಿಯಾದ Rheumatoid Arthritis ಯಾಕೆ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ದಾರುಣವಾದ ಚರ್ಮರೋಗವಾಗಿರುವ Psoriasis ಬಗ್ಗೆ ಸಾಕಷ್ಟು ಸಂಶೋಧನೆಯಾಗಿದ್ದರೂ, ಅದರ ಹುಟ್ಟಿನ ಕಾರಣ ಸಂಪೂರ್ಣವಾಗಿ ಬೆಳಕಿಗೆ ಬಂದಿಲ್ಲ. ತಲೆಗೂದಲಿಗೆ ಸಂಬಂಧಿಸಿದ Alopecia ಎಂಬ ಆಮಯವು ಹೇಗೆ ಶುರುವಾಗುತ್ತದೆ, ಯಾಕೆ ಬರುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಹಿಡಿಯುವುದಕ್ಕೆ ಆಗಿಲ್ಲ. ಅತ್ಯಾಧುನಿಕ ರಿಸರ್ಚ್ ಲ್ಯಾಬ್‌ಗಳಿಗೆ ಕೂಡ ಮೇಲೆ ಹೇಳಿದ ಈ ರೋಗಗಳ ಕಾರಣವನ್ನು ತಿಳಿಯಲು
ಸಾಧ್ಯ ವಾಗುತ್ತಿಲ್ಲ. ಕಾರಣ ಗೊತ್ತಾಗದೆ ಅದರ ಚಿಕಿತ್ಸೆ ಸಂಪೂರ್ಣ ಸಫಲವಾಗುವುದು ಅಸಾಧ್ಯ. ಆದರೆ, ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಅವನ್ನು ಇಲ್ಲಿ ಸಂಕ್ಷಿಪ್ತವಾಗಿ ಅವಲೋಕಿಸೋಣ. ‘ಆಮವಿಷ’ ಎನ್ನುವುದರ ಬಗ್ಗೆ ಎಲ್ಲಾ ಆಯುರ್ವೇದ ಗ್ರಂಥಗಳೂ ಸವಿವರವಾಗಿ ಹೇಳಿವೆ.

ಏನಿದು ‘ಆಮವಿಷ’? ‘ಆಮ’ ಎಂದರೆ ಪಕ್ವ ಆಗಿಲ್ಲದ್ದು, ಸರಿಯಾಗಿ ಸಂಪೂರ್ಣವಾಗಿ ಪಾಕ/ಪಚನ ಆಗದೆ ಇರುವಂಥದ್ದು ಎಂದರ್ಥ. ‘ವಿಷ’ ಅಂದರೆ ಗೊತ್ತೇ ಇದೆ- ಅಂದರೆ Toxin / poison ಎಂದರ್ಥ. ನಾವು ಸೇವಿಸುವ ಆಹಾರ ದೇಹದಲ್ಲಿ ಸರಿಯಾಗಿ ಪಾಕ/ಪಚನ ಆಗದಿದ್ದಾಗ, ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿರುವ ಆಹಾರವು ಶರೀರದಲ್ಲಿ ಉತ್ಪತ್ತಿ ಮಾಡುವ ವಿಷವನ್ನು ಆಯುರ್ವೇದವು ‘ಆಮವಿಷ’ ಎನ್ನುತ್ತದೆ. ಈಗಿನ ಕ್ರಮರಹಿತ ಆಹಾರಪದ್ಧತಿ, ಅತಿಯಾದ ಒತ್ತಡದಿಂದ ನಮ್ಮ ದೇಹವು ಆಹಾರವನ್ನು ಸಂಪೂರ್ಣ ಪಚನಮಾಡುವ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿದೆ. ಈ ಅಪಕ್ವ ಆಹಾರ ದೇಹದಲ್ಲೇ ಉಳಿದು ವಿವಿಧ ವಿಷವನ್ನು ಉತ್ಪತ್ತಿ ಮಾಡುತ್ತಾ ಹೋಗುತ್ತದೆ.

ಉದಾಹರಣೆಗೆ, ನಮ್ಮ ಅಡುಗೆಮನೆಯ ಡಸ್ಟ್ ಬಿನ್‌ನಲ್ಲಿನ ತ್ಯಾಜ್ಯವು ಅಲ್ಲೇ ಇದ್ದರೆ ಹೇಗೆ ಕೊಳೆಯುತ್ತದೆಯೋ ಹಾಗೆಯೇ ದೇಹದಲ್ಲಿನ ಈ ಅಪಕ್ವ ಆಹಾರವು ಸಹ. ಸರಿಯಾಗಿ ಪಾಕವಾಗದೆ ಇರುವ ಆಹಾರದಿಂದ, ಎಂಥ ವಿಷವು ದೇಹದಲ್ಲಿ ಶೇಖರಣೆಯಾಗುತ್ತದೆ ಎಂಬುದು ಹಲವಾರು ಕಾರಣಗಳಿಂದ ನಿರ್ಧಾರವಾಗುತ್ತದೆ. ನಾವು ಸೇವಿಸುವ ಆಹಾರವಿರಬಹುದು, ಅದರ ಗುಣ, ಸಂಯೋಗ, ಪ್ರಮಾಣ, ನಮ್ಮ ಜೀರ್ಣಾಂಗದ
ಸ್ಥಿತಿ, ವಾತಾವರಣದ ಪ್ರಭಾವ, ವ್ಯಾಯಾಮ, ವಯಸ್ಸು ಇತ್ಯಾದಿಗಳಿಂದ ಯಾವ ರೀತಿಯ ವಿಷ ನಮ್ಮ ದೇಹದ ಯಾವ ಭಾಗದಲ್ಲಿ ಶೇಖರಣೆಯಾಗಿ, ಎಂಥ ಕಾಯಿಲೆಯನ್ನು ಉತ್ಪತ್ತಿ ಮಾಡುತ್ತದೆ ಎಂಬುದು ನಿರ್ಧಾರವಾಗುತ್ತದೆ. ಜಠರದಲ್ಲಿ ಶೇಖರಣೆಯಾದಂಥ ಈ ಆಮವಿಷವು ದೇಹದಲ್ಲಿ ಹರಡಲಿಕ್ಕೆ ಶುರುವಾಗುತ್ತದೆ. ಹೀಗೆ ಸಂಚರಿಸುತ್ತಾ ಅದು ಧಾತುಗಳಲ್ಲಿ ಸೇರಿಕೊಳ್ಳುತ್ತದೆ. ಆಮೇಲೆ ಆ ಆಮವಿಷ ಸುಮ್ಮನಿರುತ್ತದಾ, ಇಲ್ಲ. ಆ ಧಾತು ಗಳನ್ನು, ಅವುಗಳ ಸಹಜ ಸ್ಥಿತಿಯನ್ನು ಹಾಳುಮಾಡಲು ಶುರುಮಾಡುತ್ತದೆ. ಅವುಗಳ ಕಾರ್ಯಗಳಲ್ಲಿ ಅಡಚಣೆ ಮತ್ತು ಅವರೋಧವನ್ನು ಉಂಟುಮಾಡುತ್ತದೆ.

ಆಗ ಶುರುವಾಗುತ್ತವೆ ಬಗೆಬಗೆಯ ಕಾಯಿಲೆಗಳು. ಈ ಸ್ಥಿತಿಗೆ inflammation / auto-immunity ಹೀಗೆ ಬೇರೆ ಬೇರೆ ಹೆಸರುಗಳನ್ನು ನೀಡಬಹುದು. ನಮ್ಮ ದೇಹದಲ್ಲಿ ಯಾವ ಅವಯವ ಸ್ವಲ್ಪ ಮಟ್ಟಿಗೆ ದುರ್ಬಲ ವಾಗಿರುತ್ತೋ, ಸಾಮಾನ್ಯವಾಗಿ ಕಾಯಿಲೆಗಳು ಅಲ್ಲಿಂದಲೇ ಶುರುವಾಗುತ್ತವೆ. ಈ ಎಲ್ಲ ಕಾಯಿಲೆಗಳಿಗೂ ಮೂಲವೇ ಈ ಆಮವಿಷ. ಇದರ ಉತ್ಪತ್ತಿಗೆ ಮೊಟ್ಟಮೊದಲ ಮತ್ತು ಬಹುಮುಖ್ಯ ಕಾರಣವೆಂದರೆ ತಪ್ಪಾದ ಆಹಾರಸೇವನಾ ಕ್ರಮ. ಹಾಗಾಗಿ, ದೇಹದಲ್ಲಿ ಶೇಖರಣೆಯಾಗುವ ಆಮವಿಷವನ್ನು ಮತ್ತು ಅದರಿಂದ ಶುರುವಾಗುವ ನೂರಾರು ವ್ಯಾಧಿಗಳನ್ನು ತಡೆಯಲು ಇರುವ ಒಂದೇ ಮಾರ್ಗವೆಂದರೆ- ಸರಿಯಾದ ಆಹಾರ ಪದ್ಧತಿ. ಆಯುರ್ವೇದದ ಪ್ರಕಾರ, ನಮ್ಮ ದೇಹದಲ್ಲಿ ಈ ಆಮವಿಷ ಉತ್ಪಾದನೆ ಆಗುವುದಕ್ಕೆ, ಅದರಿಂದ ಕಾಯಿಲೆಗಳು ಮೊಳೆಯುವುದಕ್ಕೆ, ಬಹಳ ಬಲಿಷ್ಠವಾದಂಥ ಮತ್ತು ಇಂದಿನ ಆಹಾರ ಪದ್ಧತಿಯಲ್ಲಿ ಅತಿಹೆಚ್ಚು ಕಾಣುವಂಥ ಕಾರಣವೆಂದರೆ ‘ವಿರುದ್ಧ ಆಹಾರ’ ಸೇವನೆ.

ವಿರುದ್ಧ ಆಹಾರದ ಬಗ್ಗೆ ಅರಿಯುವ ಮುನ್ನ ತ್ರಿದೋಷಗಳ ಒಂದು ಪುಟ್ಟ ಪರಿಚಯ ಅಗತ್ಯ. ನಮ್ಮ ದೇಹದಲ್ಲಾಗುವ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸಂಚಾಲಕಶಕ್ತಿಗೆ ‘ದೋಷ’ ಎಂದು ಹೆಸರು. ದೇಹದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳಿವೆ. ಇವು ಸೇರಿ ನಮ್ಮ ದೇಹದ ಧಾರಣೆಯನ್ನು ಮಾಡುತ್ತವೆ. ಉಸಿರಾಟ, ಪಚನಕ್ರಿಯೆ, ರಕ್ತಸಂಚಾರ, ಮಲ-ಮೂತ್ರ ವಿಸರ್ಜನೆ, ನಿದ್ರೆ, ಎಚ್ಚರಿಕೆ, ನೆನಪಿನ ಶಕ್ತಿ, ಬುದ್ಧಿಶಕ್ತಿ, ಓಡಾಟ, ಮೈಥುನ, ಗರ್ಭಧಾರಣೆ ಈ ಎಲ್ಲ ಕೆಲಸಗಳು ನಡೆಯುತ್ತಿರುವುದು ಈ ತ್ರಿದೋಷದಿಂದಲೇ. ದೋಷಗಳು ತಮ್ಮ ಪ್ರಾಕೃತಾವಸ್ಥೆಯಲ್ಲಿದ್ದಾಗ ಅದುವೇ ‘ಆರೋಗ್ಯ’. ದೋಷಗಳು ಏರು
ಪೇರಾದಾಗಲೇ ‘ಅನಾರೋಗ್ಯ’. ‘ರೋಗಸ್ತು ದೋಷವೈಷಮ್ಯಂ ದೋಷಸಾಮ್ಯಂ ಅರೋಗತಾ’.

ಆಯುರ್ವೇದದಲ್ಲಿ ಚಿಕಿತ್ಸೆ ಎಂದರೆ, ಈ ದೋಷ ಗಳನ್ನು ವಿಧವಿಧವಾದ ಉಪಾಯ- ಉಪಚಾರಗಳ ಮೂಲಕ ಸಮಾವಸ್ಥೆಗೆ ತಂದು ಸ್ವಾಸ್ಥ್ಯವನ್ನು ಸ್ಥಾಪಿಸುವುದು. ‘ನಮ್ಮ ದೈನಂದಿನ ಆಹಾರ-ವಿಹಾರ-
ವಿಚಾರಗಳನ್ನು ಉತ್ತಮವಾಗಿ ಇಟ್ಟುಕೊಳ್ಳುವ ಮೂಲಕ ಈ ತ್ರಿದೋಷಗಳನ್ನು ಸದಾ ಸಮ ಅವಸ್ಥೆಯಲ್ಲಿಡಲು, ತನ್ಮೂಲಕ ಸದಾ ಸ್ವಸ್ಥರಾಗಿರಲು ಸಾಧ್ಯವಿದೆ’ ಎನ್ನುತ್ತದೆ ಆಯುರ್ವೇದ. ಪರಸ್ಪರ ಹೊಂದದ/ವಿರುದ್ಧ ಗುಣಗಳಿರುವ ಆಹಾರ ದ್ರವ್ಯಗಳನ್ನು ಒಮ್ಮೆಲೇ ಸಂಯೋಜಿಸಿ ಸೇವಿಸಿದಾಗ, ಅವು ದೇಹದಲ್ಲಿ ಸರಿಯಾಗಿ ಪಾಕವಾಗದೆ, ತ್ರಿದೋಷಗಳನ್ನು ಕೆರಳಿಸಿ, ಈ ತ್ರಿದೋಷಗಳು ದೇಹದಿಂದ ಆಚೆಯೂ ಹೋಗದಂತೆ ಅವರೋ
ಧಿಸಿ, ಇದರಿಂದ ರೋಗೋತ್ಪತ್ತಿಗೆ ಕಾರಣವಾಗುವ ದ್ರವ್ಯಗಳನ್ನು ‘ವಿರುದ್ಧ ಆಹಾರ’ ಎನ್ನುತ್ತೇವೆ. ನಮ್ಮ ದೇಹದಲ್ಲಿನ ದೋಷಗಳು ಹಲವು ಕಾರಣಗಳಿಂದ ಸಾಮಾನ್ಯವಾಗಿ ವಿಕೃತಗೊಳ್ಳುತ್ತವೆ. ಆದರೆ ಈ ವಿಕೃತ ತ್ರಿದೋಷಗಳನ್ನು ಸರಿಯಾದ ಉಪಚಾರ ದಿಂದ ದೇಹದಿಂದ ಹೊರಗೆ ಕಳಿಸಿ, ಯಾವುದೇ ತೊಂದರೆಯಾಗದ ರೀತಿ ಚಿಕಿತ್ಸೆ ಮಾಡಬಹುದು.

ಆದರೆ, ವಿರುದ್ಧ ಆಹಾರದ ಒಂದು ಅಪಾಯವೆಂದರೆ, ಇದು ತ್ರಿದೋಷಗಳನ್ನು ಹಾಳುಮಾಡಿ, ಹಾಳಾದ ಆ ತ್ರಿದೋಷಗಳನ್ನು ದೇಹದಿಂದಲೂ ಹೊರಹೋಗದಂತೆ ಮಾಡುತ್ತದೆ. ಹಾಗಾಗಿಯೇ ಇದು ಅತ್ಯಂತ ಹಾನಿಕಾರಕ ವಿಷವಾಗಿ ಮಾರ್ಪಡುತ್ತದೆ. ಇಂಥ ಆಹಾರ ಸಂಯೋಜನೆಗೆ ‘ವಿರುದ್ಧ ಆಹಾರ’ ಎನ್ನುತ್ತೇವೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಪ್ರತ್ಯೇಕವಾಗಿ ಆಹಾರ ದ್ರವ್ಯಗಳು ಅತ್ಯಂತ ಆರೋಗ್ಯಕರವಾಗಿ ದ್ದರೂ, ಅವನ್ನು ಒಟ್ಟಿಗೆ ಸೇವಿಸಿದಾಗ ಪರಸ್ಪರ ವಿರುದ್ಧ ಗುಣಗಳಿಂದಾಗಿ ಅನಾರೋಗ್ಯಕರವಾಗುತ್ತವೆ. ಉದಾಹರಣೆಗೆ ಹಾಲು ಮತ್ತು ಬಾಳೇಹಣ್ಣು. ಪ್ರತ್ಯೇಕವಾಗಿ ಹಾಲು ಆರೋಗ್ಯದಾಯಕ, ಹಾಗೆಯೇ ಬಾಳೇಹಣ್ಣು
ಕೂಡ. ಆದರೆ ಹಾಲನ್ನು ಬಾಳೇಹಣ್ಣಿನ ಜತೆಯಾಗಿ ಸೇವಿಸಿದಾಗ ವಿರುದ್ಧಾಹಾರವಾಗಿ ಪರಿಣಮಿಸುತ್ತದೆ. ಇಂಥ ವಿರುದ್ಧ ಆಹಾರಗಳನ್ನು ಸೇವಿಸಿದಾಗ ದೇಹದಲ್ಲಿ ೨ ಪ್ರಕ್ರಿಯೆಗಳನ್ನು ಕಾಣಬಹುದು.

೧) ಪರಸ್ಪರ ವಿರುದ್ಧ ಗುಣಗಳ ಕಾರಣ ಆ ಆಹಾರವನ್ನು ಸಮರ್ಥವಾಗಿ ಪಚನ ಮಾಡುವುದಕ್ಕೆ ನಮ್ಮ ಜಠರಾಗ್ನಿಗೆ ಆಗುವುದಿಲ್ಲ; ಇದರಿಂದ ‘ಆಮ’ದ ಉತ್ಪತ್ತಿ; ೨) ಇಂಥ ಸರಿಯಾಗಿ ಪಾಕವಾಗದ ‘ಆಮ’, ದೋಷ ಗಳನ್ನು ಕೆರಳಿಸಿ ವಿಕೃತ ಮಾಡುತ್ತದೆ. ಆಮ+ವಿಕೃತ ದೋಷಗಳು ದೇಹದಲ್ಲಿ ಸಂಚರಿಸಿ ರೋಗೋತ್ಪತ್ತಿ ಮಾಡುತ್ತವೆ. ಆಯುರ್ವೇದದಲ್ಲಿ ೧೮ ರೀತಿಯ ವಿರುದ್ಧಗಳನ್ನು ವಿವರಿಸಿದ್ದು, ಅವನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಅವಲೋಕಿಸೋಣ. ಕೆಲವು ವಿರುದ್ಧ ಆಹಾರಗಳು ತಕ್ಷಣ ಆರೋಗ್ಯದ ವ್ಯತ್ಯಾಸಗಳನ್ನು ತರುತ್ತವೆ. ಉದಾಹರಣೆಗೆ, ವಾಂತಿ, ಬೇಧಿ, ಹೊಟ್ಟೆಯುಬ್ಬರ, ಆಮ್ಲಪಿತ್ತ ಇತ್ಯಾದಿ.

ಮತ್ತೆ ಕೆಲವು, ನಿಧಾನವಿಷದ ರೀತಿಯಲ್ಲಿ ದೇಹವನ್ನು ದೀರ್ಘಕಾಲೀನ ವ್ಯಾಧಿಗಳಾಗಿ ಬಾಧಿಸುತ್ತವೆ. ವಿರುದ್ಧ ಆಹಾರವು ಸಾಮಾನ್ಯವಾಗಿ ತರುವಂಥ ವ್ಯಾಧಿಗಳೆಂದರೆ, ತೊನ್ನು, ವಿಸರ್ಪ, ಕಿಟಿಭ ಇತ್ಯಾದಿ ಚರ್ಮದ  ಕಾಯಿಲೆಗಳು, ಮಧು ಮೇಹ, ಉದರದ ಸಮಸ್ಯೆಗಳು, ನೆಗಡಿ, ಜ್ವರ, ಸಂಧಿಶೂಲ, ಬಂಜೆತನ, ಮೂಲವ್ಯಾಧಿ, ರಕ್ತಕ್ಷೀಣತೆ, ಮೂರ್ಛೆರೋಗ, ಥೈರಾಯ್ಡ್ ಸಮಸ್ಯೆ, ಕ್ರಿಮಿರೋಗ ಮತ್ತು ಮಾನಸಿಕ ಸಮಸ್ಯೆಗಳಾದ
ಉನ್ಮಾದ, ಅಪಸ್ಮಾರಗಳು ಇತ್ಯಾದಿ. ಈ ವಿರುದ್ಧ ಆಹಾರಗಳು ಸಾಮಾನ್ಯವಾಗಿ ದೇಹವನ್ನು ನಿಧಾನವಾಗಿ ಬಾಧಿಸುತ್ತವೆ. ಇವು ಸದ್ಯೋಪ್ರಾಣ ಹರಣ ವನ್ನು ಖಂಡಿತ ಮಾಡುವುದಿಲ್ಲವಾದರೂ, ಒಂದು ಬಾರಿ ಸೇವಿಸಿದರೂ ಸಾಕು ಇವು ದೋಷಗಳನ್ನು ಕೆರಳಿಸುತ್ತವೆ. ಈ ವಿಕೃತ ದೋಷಗಳು ದೇಹದಲ್ಲೇ ಶೇಖರಣೆಯಾಗುವುದಕ್ಕೆ ಪ್ರಾರಂಭವಾಗುತ್ತವೆ. ವ್ಯಕ್ತಿಯೊಬ್ಬನ ದೈಹಿಕ ಬಲ ಉತ್ತಮವಾಗಿದ್ದು, ನಿತ್ಯ ವ್ಯಾಯಾಮ ಮಾಡುತ್ತಿದ್ದು, ವ್ಯಾಧಿಕ್ಷಮತ್ವವು ಉನ್ನತ ಮಟ್ಟದಲ್ಲಿರುವ ತನಕ ಈ ಆಮವಿಷಯವು ವ್ಯಾಧಿಯ ರೂಪದಲ್ಲಿ ಸಂಪೂರ್ಣವಾಗಿ ವ್ಯಕ್ತವಾಗುವುದಿಲ್ಲ. ಒಳಗೇ ಅಡಗಿಕೊಂಡಿದ್ದು, ಸೂಕ್ತ ಕಾಲಾವಕಾಶದ ನಿರೀಕ್ಷಣೆ ಯಲ್ಲಿರುತ್ತದೆ.

ಶರೀರವು ಬೇರಾವುದೋ ಕಾಯಿಲೆ/ಅಪಘಾತ/ ಮಾನಸಿಕ ಖಿನ್ನತೆಯಿಂದ ದುರ್ಬಲವಾದಾಗ ಈ ಆಮವಿಷವು ವ್ಯಾಧಿಯ ರೂಪದಲ್ಲಿ ವ್ಯಕ್ತವಾಗತೊಡಗುತ್ತದೆ. ಇದು ಮನೆಯ ಮೂಲೆಯಲ್ಲಿ  ಅಡಗಿಸಿಟ್ಟ ಕಸದಂತೆ, ಎಂದಾದರೂ ಮೂಗಿಗೆ ಬಡಿಯಲೇಬೇಕು. ಆದರೆ ಕೆಲವರು, ‘ಅಯ್ಯೋ! ನಾವು ದಿನನಿತ್ಯ ಎಷ್ಟೋ ವಿರುದ್ಧ ಆಹಾರಗಳನ್ನು ಸೇವಿಸಿದರೂ ಆರೋಗ್ಯವಾಗೇ ಇದ್ದೀವಲ್ಲಾ?’ ಎಂದು ವಾದಿಸುತ್ತಾರೆ. ಇದು ಮೂರ್ಖತನದ
ಮಾತಷ್ಟೇ.

ಇಂದು ನಮ್ಮ ಮುಂದೆ ಕಾರಣವೇ ಗೊತ್ತಿಲ್ಲದೆ ಸವಾಲಾಗಿರುವ ಕಾಯಿಲೆಗಳಿಗೆ ಖಂಡಿತವಾಗಿಯೂ ಈ ವಿರುದ್ಧ ಆಹಾರವೇ ಬಹುಮುಖ್ಯ ಕಾರಣ. ಇಂದು ಪರಿಸ್ಥಿತಿ ಹೇಗಿದೆಯೆಂದರೆ, ವೈದ್ಯರಲ್ಲಿಗೆ ಹೋಗಿ ಕಾಯಿಲೆಗೆ ಔಷಧ ತೆಗೆದುಕೊಂಡು ಬರುತ್ತೇವೆ. ಅದನ್ನು ತೆಗೆದುಕೊಳ್ಳುವ ತನಕ ಆರೋಗ್ಯ ಚೆನ್ನಾಗಿದ್ದು, ಔಷಧವನ್ನು ನಿಲ್ಲಿಸಿದ ಕೂಡಲೇ ರೋಗಲಕ್ಷಣವೆಲ್ಲಾ ಮರುಕಳಿಸುತ್ತವೆ ಅಥವಾ ಬೇರಾವುದೋ ವ್ಯಾಧಿಯ ರೂಪದಲ್ಲಿ
ನಮ್ಮನ್ನು ಮತ್ತೆ ಬಾಧಿಸತೊಡಗುತ್ತದೆ. ಯಾಕೆಂದರೆ, ಇಂದಿನ ಚಿಕಿತ್ಸಾ ಪದ್ಧತಿಯಲ್ಲಿ, ಚಿಕಿತ್ಸೆಯ ಜತೆ ನಿದಾನದ ಪರಿವರ್ಜನೆ ಆಗುತ್ತಿಲ್ಲ. ವ್ಯಾಧಿಯನ್ನು ಉತ್ಪತ್ತಿ ಮಾಡುವ ‘ಕಾರಣ’ಗಳ ತಿಳಿವಳಿಕೆಯನ್ನು
ವೈದ್ಯರು ರೋಗಿಗಳಿಗೆ ನೀಡುತ್ತಿಲ್ಲ. ಈ ಕಾರಣ ಗಳನ್ನು ತಮ್ಮ ಆಹಾರ-ವಿಹಾರ-ವಿಚಾರಗಳ ಮೂಲಕ ನಿವಾರಿಸುವ ಉಪಾಯಗಳನ್ನು ಇಂದಿನ ವೈದ್ಯಕೀಯ ಪದ್ಧತಿ ನೀಡುತ್ತಿಲ್ಲ. ರೋಗದ ಕಾರಣಗಳನ್ನು ಸಂಪೂರ್ಣ ನಿವಾರಿಸದೆ ನಾವು ಸ್ವಸ್ಥರಾಗಲು ಹೇಗೆ ಸಾಧ್ಯ? ಹಾಗಾಗಿ, ವಿರುದ್ಧ ಆಹಾರಗಳನ್ನು ನಾವು ತ್ಯಜಿಸದೆ, ದಿನನಿತ್ಯ ವಿಷವನ್ನು ಸೇವಿಸುತ್ತಾ ಇದ್ದರೆ, ಹೀಗೆ ಒಂದರ ಮೇಲೊಂದು ಹೊಸ ಕಾಯಿಲೆಗಳು ಹುಟ್ಟಿಕೊಂಡು ನಮ್ಮ ಅಧೋಗತಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ.

ನೆನಪಿಡಿ, ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸಿ ದರೆ ಅದು ‘ಅಮೃತ’, ಇಲ್ಲವಾದರೆ ಅದು ‘ವಿಷ’.