Sunday, 15th December 2024

ನಮ್ಮ ಹಳ್ಳಿಯಲ್ಲಿ ಬತ್ತ ಬೆಳೆಯುವವರ ಸಂಖ್ಯೆ ಕುಸಿತ !

ಶಶಾಂಕಣ

shashidhara.halady@gmail.com

ನಮ್ಮ ಹಳ್ಳಿಯ ಗದ್ದೆಗಳಲ್ಲಿ ಈಗ ಹೆಚ್ಚಿನವರು ಒಂದೇ ಬೆಳೆ ಬೆಳೆಯುತಿದ್ದಾರೆ, ಎರಡನೆಯ ಮತ್ತು ಮೂರನೆಯ ಬೆಳೆಯನ್ನು ಬೆಳೆಯುವ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂಬ ವಿಚಾರ ಸಾಕಷ್ಟು ಯೋಚನೆ ಗಳನ್ನು ಹುಟ್ಟುಹಾಕಿತು. ಕಳೆದ ನಾಲ್ಕೆಂಟು ವರ್ಷಗಳಿಂದ ಒಬ್ಬೊಬ್ಬರಾಗಿ ಎರಡನೆಯ ಬೆಳೆ ಬೆಳೆಯುವುದನ್ನು ನಿಲ್ಲಿಸುತ್ತಿದ್ದಾರೆ ಎಂದು ಬೇಸರದಿಂದ ನಮ್ಮ ಬಂಧುಗಳು ಹೇಳುತ್ತಿದ್ದರು; ಈಗಂತೂ ಇಡೀ ಬೈಲಿನಲ್ಲಿ ಎರಡನೆಯ ಮತ್ತು ಮೂರನೆಯ ಬೆಳೆಯನ್ನು ಬೆಳೆಯುವವರು ಕೇವಲ ಬೆರಳೆಣಿಕೆಯಷ್ಟು ಎಂಬುದು ಒಂದು ವಾಸ್ತವ.

ಇದಕ್ಕೆ ಕಾರಣವೇನು? ಬಿಡುಬೀಸಾಗಿ ಹೇಳಬೇಕೆಂದರೆ, ಹಳ್ಳಿಯನ್ನು ಬಿಟ್ಟು, ಪಟ್ಟಣವನ್ನು, ನಗರವನ್ನು ಸೇರಿದವರು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು; ಆ ರೀತಿ ನಮ್ಮೂರನ್ನು ಬಿಟ್ಟು ನಗರವನ್ನು ಸೇರಿದವರು ಹಲವರು, ನನ್ನನ್ನೂ ಸೇರಿಕೊಂಡು! ಆದರೆ, ಈ ಉತ್ತರ ಅಷ್ಟು ಸರಳವಲ್ಲ! ಅನ್ನ ನೀಡುವ ಭೂಮಿಯನ್ನು, ಎರಡನೆಯ ಬೆಳೆ ಬೆಳೆಯುವಷ್ಟು ನೀರಿನ ಸೌಕರ್ಯ ನೀಡುವ ಗದ್ದೆಯನ್ನು ನಾಟಿ ಮಾಡದೇ, ಹಾಗೆಯೇ ಬಿಡುವ, ತುಸು ನೋವಿನದ್ದೇ ಎನ್ನಬಹುದಾದ ಈ ಕ್ರಿಯೆಯು ತುಸು ಸಂಕೀರ್ಣ, ತುಸು ಕ್ಲಿಷ್ಟ.

ಮೊದಲಿಗೆ ನಮ್ಮೂರಿನಲ್ಲಿ ಹಿಂದೆ ಇದ್ದ ಬೆಳೆಯ ಪ್ಯಾಟರ್ನ್ ಗಮನಿಸೋಣ. ನಮ್ಮೂರಿನಲ್ಲಿದ್ದ ಹೆಚ್ಚು ಕಡಿಮೆ ಎಲ್ಲರೂ, ಅಂದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿದಾರರು, ಇದೇ ರೀತಿಯ ಬೆಳೆಗಳ ಆವರ್ತನವನ್ನು ಅನುಸರಿಸುತ್ತಿದ್ದುದು ಆಗಿನ ಕಾಲದ ಪದ್ಧತಿ. ನಮ್ಮ ಮನೆಯಲ್ಲಿ ಕಾಲದಿಂದ
ಕಾಲಕ್ಕೆ ಕೃಷಿ ಚಟುವಟಿಕೆಗಳ ನೇತೃತ್ವ ವಹಿಸಿದ್ದವರು, ನಮ್ಮ ಅಮ್ಮಮ್ಮ. ಅವರಿಗಾಗಲೇ ವಯಸ್ಸು ಅರವತ್ತರ ಮೇಲೆ ಆಗಿತ್ತು. ತಮ್ಮ ಹಿರಿಯರು,
ಅಂದರೆ ಅದಕ್ಕೂ ನಲವತ್ತು ಐವತ್ತು ವರ್ಷಗಳ ಹಿಂದೆ ಅನುಸರಿಸುತ್ತಿದ್ದ ಕೃಷಿ ಪದ್ಧತಿಯನ್ನು ಅವರು ತಮ್ಮ ಬುದ್ಧಿಗೆ ತೋಚಿದಷ್ಟು ಮಾರ್ಪಡಿಸಿ ಕೊಂಡು ಕೃಷಿ ಅನುಸರಿಸಿದ್ದರು.

ಅಂದರೆ, ೧೯೭೦ರ ದಶಕದಲ್ಲೂ, ಅವರು ನಡೆಸುತ್ತಿದ್ದುದು ಸ್ವಾತಂತ್ರ್ಯ ಪೂರ್ವ ಬೆಳೆ ಪದ್ಧತಿ. ನಮ್ಮ ಮನೆಯ ಎದುರು ಉತ್ತರ ದಿಕ್ಕಿಗೆ ಒಂದು
ಕಿ.ಮೀ. , ಪೂರ್ವ ದಿಕ್ಕಿಗೆ ಒಂದು ಕಿಮೀ ಬತ್ತದ ಗದ್ದೆಗಳು ಹರಡಿದ್ದವು. ಸುಮಾರು ಮುನ್ನೂರು ಅಡಿ ಅಗಲವಾಗಿದ್ದ ಆ ಗದ್ದೆ ಬೈಲಿನ ಪಟ್ಟಿಯು
ಹಾಗೆಯೇ ಸಾಗಿ ಹೋಗಿತ್ತು; ಗದ್ದೆಗಳ ಎರಡೂ ಕಡೆ ಹದವಾದ ಹಾಡಿ, ಸಣ್ಣ ಕಾಡು, ಕುಮ್ಕಿ ಜಾಗ; ಆ ಹಾಡಿಗೂ, ಗದ್ದೆ ಬಯಲಿಗೂ ನಡುವೆ
ತೋಡುಗಳು; ಈ ತೋಡುಗಳೇ ಜಲಮೂಲ. ಸಾಮಾನ್ಯವಾಗಿ ಪ್ರತಿವರ್ಷ ಜೂನ್ ಮೊದಲ ವಾರ ಮಳೆಗಾಲದ ಆರಂಭ; ಒಮ್ಮೆ ಶುರುವಾಯಿ ತೆಂದರೆ ಮುಂದಿನ ಮೂರು ಅಥವಾ ನಾಲ್ಕು ತಿಂಗಳುಗಳ ಕಾಲ ಸುರಿಯುವ ಮಳೆ; ಒಮ್ಮೊಮ್ಮೆ ಒಂದೆರಡು ದಿನ, ಒಮ್ಮೊಮ್ಮೆ ಆರೆಂಟು ದಿನ
ನಿರಂತರ ಸುರಿಯುವ ಮಳೆಯೇ ಅಲ್ಲಿನ ಜಲಮೂಲ; ಅದನ್ನು ನಂಬಿ ಗದ್ದೆಗೆ ಗೊಬ್ಬರ ಹಾಕಿ ಬತ್ತದ ನಾಟಿ ಮಾಡಿದರೆ, ಅರ್ಧಕ್ಕರ್ಧ ಗೊಬ್ಬರದ
ಅಂಶವು ಮಳೆ ನೀರಿನಲ್ಲಿ ತೊಳೆದು ಹೋಗಿ ತೋಡನ್ನು ಸೇರುತ್ತಿತ್ತು!

ಜೂನ್ ಕೊನೆ ಅಥವಾ ಜುಲೈ ಮೊದಲ ವಾರ ನಾಟಿ; ಸುರಿ ಮಳೆಯಲ್ಲೇ ಕಳೆ ಕೀಳುವಿಕೆ; ನಡುನಡುವೆ ಗೊಬ್ಬರ ನೀಡುವ ಪದ್ಧತಿ ಇಲ್ಲ – ಏಕೆಂದರೆ ಮಳೆಯಲ್ಲಿ ತೊಳೆದು ಹೋಗುತ್ತದಲ್ಲ! ಅಕ್ಟೋಬರ್ ಕೊನೆಯ ವಾರದಲ್ಲಿ ಕೊಯ್ಲು. ನಾಟಿ ಮಾಡುವುದು, ಕಳೆ ಕೀಳುವುದು, ಕೊಯ್ಲು ಮಾಡುವುದು, ಬತ್ತ ಬಡಿಯುವುದು ಇವೆಲ್ಲವೂ ಮಳೆಯು ಹೊಳವಾಗುವ ಕೃಪೆಯಲ್ಲೇ ಮಾಡಬೇಕಾದ್ದರಿಂದ, ಆ ಬೆಳೆಯಲ್ಲಿ ರೈತರ ಕೈಗೆ ಸಿಗುವುದು ಅಷ್ಟಕ್ಕಷ್ಟೇ. ಸದ್ಯ ಅಷ್ಟಾದರೂ ಬತ್ತ ಸಿಗುತ್ತದಲ್ಲಿ, ಊಟಕ್ಕೆ ಆಗುತ್ತದಲ್ಲ ಎಂಬ ಆಸೆಯಿಂದ ಮಳೆಗಾಲದ ಬತ್ತದ ಬೆಳೆಯನ್ನು ಮಾಡುತ್ತಿದ್ದರು.

ದೀಪಾವಳಿಯ ಸಮಯದಲ್ಲಿ ಕೊಯ್ಲು ಆದ ನಂತರ, ಎರಡನೆಯ ಬತ್ತದ ಬೆಳೆಗೆ ಸಿದ್ಧತೆ. ಗದ್ದೆ ಬಯಲಿನ ಅಂಚಿನುದ್ದಕ್ಕೂ ಸಾಗಿದ್ದ ತೋಡಿನಲ್ಲಿ
ನೀರು ಹರಿಯುತ್ತಿತ್ತು – ಅದು ಉಜರು ನೀರು ಅಥವಾ ಝರಿ ನೀರು. ಎರಡೂ ಕಡೆ ಇದ್ದ ಹಾಡಿ, ಹಕ್ಕಲು ಮತ್ತು ಕಾಡಿನಲ್ಲಿ ಬೆಳೆದಿದ್ದ ಮರಗಳ
ಬೇರಿನಲ್ಲಿ ಸಂಚಯಗೊಂಡ ನೀರು, ಮಳೆಗಾಲ ಮುಗಿದ ನಂತರವೂ ಅಷ್ಟಿಷ್ಟು ಹರಿಯುತ್ತಿತ್ತು. ಎಲ್ಲಾ ಗದ್ದೆ ಮಾಲಿಕರು ತಮ್ಮ ತಮ್ಮ ಅನುಕೂಲಕ್ಕೆ
ತಕ್ಕಂತೆ ಕಟ್ಟು ಹಾಕಿಕೊಂಡು, ನೀರು ಹಾಯಿಸಿ ಎರಡನೆಯ ಬೆಳೆ ಬೆಳೆಯುತ್ತಿದ್ದರು; ಈ ಬೆಳೆಗೆ ಮಳೆಯ ಕಾಟ ಇಲ್ಲ; ತೋಡಿನಿಂದ ಹಾಯಿಸಿ ಕೊಂಡ ನೀರಿನಿಂದಾಗಿ ನಿಯಂತ್ರಿತ ನೀರಾವರಿ; ಆದ್ದರಿಂದಲೇ ಈ ಎರಡನೆಯ ಬೆಳೆಯು ರೈತರಿಗೆ ತುಸು ಲಾಭ ತಂದುಕೊಡುತ್ತಿತ್ತು.

ಮಳೆಗಾಲದ ಬೆಳೆಗಿಂತಾ, ಈ ಬೆಳೆಯಿಂದ ಹೆಚ್ಚಿನ ಇಳುವರಿ ಖಚಿತ. ಸುಮಾರು ಫೆಬ್ರವರಿಯ ಸಮಯಕ್ಕೆ ಅಂದರೆ ಶಿವರಾತ್ರಿಯ ಹೊತ್ತಿಗೆ ಎರಡನೆಯ ಬೆಳೆಯ ಕುಯ್ಲು ಆಗಿ, ಬತ್ತದ ರಾಶಿ ಮನೆಗೆ ಬಂದು ಬಿದ್ದಿರುತ್ತದೆ; ಚಳಿ ಕಳೆದು ಸೆಕೆಯ ದಿನಗಳು; ಗದ್ದೆಗಳಲ್ಲಿ ಸ್ವಲ್ಪ ತಂಪು ಇರುವ ಕಾಲ. ಮೂರನೆಯ ಬೆಳೆಯಾಗಿ ಉದ್ದು, ಹೆಸರು ಕಾಳು, ಹುರುಳಿಯ ಬಿತ್ತನೆ ಮಾಡುವ ಸಮಯ. ಈ ಸಮಯದಲ್ಲಿ ಬಯಲಿ ನಂಚಿನ ತೋಡಿನಲ್ಲಿನ ನೀರು ಬಹುಮಟ್ಟಿಗೆ ಬತ್ತಿರುತ್ತದೆ; ಬಾವಿ ನೀರಿನ ಆಶ್ರಯ ಇರುವವರು ತರಕಾರಿ ಬೆಳೆಯುವುದು ಇದೇ ಸಮಯದಲ್ಲಿ.

ಗದ್ದೆಯಲ್ಲೇ ಪಾತಿ ಮಾಡಿ, ಸೌತೆ, ಕುಂಬಳ, ಅಲಸಂದೆ, ಅವಡೆ, ತೊಂಡೆಕಾಯಿ, ಬಸಳೆ, ಕೆಲವು ಕಡೆ ಈರುಳ್ಳಿ ಮೊದಲಾದ ಬೆಳೆಗಳನ್ನು ಬೆಳೆಯು ತ್ತಾರೆ. ಉದ್ದು, ಹೆಸರು ಮೊದಲಾದವು ಎಪ್ರಿಲ್ ಹೊತ್ತಿಗೆ ಕಾಳು ನೀಡುತ್ತವೆ; ಅವನ್ನು ಕಿತ್ತು, ಒಣಗಿಸಿ, ಕಾಳು ಬೇರೆ ಮಾಡಿ, ಅದರ ಒಣ ಗಿಡಗಳನ್ನು ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಸಂಗ್ರಹಿಸಿದಾಗ, ಮೂರು ಬೆಳೆಗಳ ಒಂದು ಆವರ್ತನ ಮುಗಿದಂತೆ. ಮೇ ತಿಂಗಳಿನಲ್ಲಿ ಬಿರುಬಿಸಿಲು ನೆಲವನ್ನು ಕಾಯಿಸಲು ತೊಡಗುತ್ತದೆ, ಇದೇ ದಿನಗಳಲ್ಲಿ ನೆಲವು ಒಣಗಿ, ಫಲವತ್ತತೆಗೂ ಪೂರಕವಾಗುತ್ತದೆ ಎನ್ನುತ್ತಿದ್ದರು ತಿಳಿದವರು.

ಮೇ ಮಧ್ಯದಲ್ಲಿ ಹತ್ತರವಾವಧಿಯಲ್ಲಿ ನೆಲದಲ್ಲಿ ತಂಪು ಕೂಡಿದಾಗ, ಬಿರು ಬಿಸಿಲಿದ್ದರೂ, ಅಗೇಡಿಯನ್ನು ಚೆನ್ನಾಗಿ ಉತ್ತು ಬತ್ತ ಬಿತ್ತುತ್ತಿದ್ದರು. ಯುಗಾದಿ
ಕಳೆದು ಹತ್ತು ದಿನಕ್ಕೆ ಬರುವ ಹತ್ತರಾವಧಿಯ ಸಮಯದಲ್ಲಿ, ನೆಲದಾಳದಿಂದ ತಂಪು ಮೇಲ್ಮೈಗ ಬರುತ್ತದೆ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ. ಅದೇ
ಸಮಯದ ಗುಡ್ಡದಲ್ಲಿರುವ ಗಿಡಗಳು ಸಹ ಚಿಗುರುತ್ತಿದ್ದವು; ಆ ರೀತಿ ಗದ್ದೆಯ ಮೇಲ್ಮೈಗೆ ಬರುವ ತಂಪಿನ ಲಾಭವನ್ನು ಪಡೆಯಲು, ಆ ಸಮಯದಲ್ಲಿ ಬತ್ತ ಬಿತ್ತಿ, ಸಸಿ ಮಾಡುತ್ತಿದ್ದರು.

ಅದೇ ಸಸಿಗಳು, ಜೂನ್ ಎರಡನೆಯ ವಾರದಿಂದ ಆರಂಭವಾಗುವ ನಾಟಿ ಕೆಲಸಕ್ಕೆ ಉಪಯೋಗಕ್ಕೆ ಬರುತ್ತಿದ್ದವು. ಬಿಸಿಲು ಕಾದ ನಂತರ, ಎಂತಿದ್ದರೂ ಜೂನ್ ಮೊದಲ ವಾರ ಮಳೆ ಆರಂಭವಾಗುತ್ತಿತ್ತಲ್ಲ! ಮತ್ತೊಂದು ಕೃಷಿ ಆವರ್ತನ ಆರಂಭ. ಈ ರೀತಿಯ ಸಾಂಪ್ರದಾಯಿಕ ಕೃಷಿಯಿಂದ
ಆರ್ಥಿಕ ಲಾಭ ಕಡಿಮೆ ಇದ್ದರೂ, ವರ್ಷವಿಡೀ ಕೆಲಸವಂತೂ ಇರುತ್ತಿತ್ತು. ಆದರೆ, ಬತ್ತ ನಾಟಿ ಮಾಡಿ, ಕೊಯ್ಲು ಮಾಡುವ ಕೆಲಸಕ್ಕೆ ಬೇಕಾಗುವ
ಆಳುಗಳ ಸಂಬಳವನ್ನು ಲೆಕ್ಕ ಹಾಕಿದರೆ, ನಮ್ಮ ಹಳ್ಳಿಯಲ್ಲಿ ಬತ್ತ ಬೆಳೆಯುವುದು ಆರ್ಥಿಕವಾಗಿ ನಷ್ಟ ಎಂಬುದು ಸ್ಪಷ್ಟವಾಗುತ್ತಿತ್ತು. ಅದರಿಂದಲೇ ಇರಬಹುದು, ಕಳೆದ ಮೂರು ನಾಲ್ಕು ದಶಕಗಳಲ್ಲಿ  ಒಂದೊಂದೇ ಬತ್ತದ ಗದ್ದೆಗಳು ಅಡಕೆ ತೋಟಗಳಾಗಿ ಪರಿವರ್ತನೆಯಾಗತೊಡಗಿದವು.

ಅಷ್ಟು ವರ್ಷಗಳ ಕಾಲ ಅಲ್ಲಲ್ಲಿ ಇದ್ದ ಅಡಕೆ ತೋಟಗಳು, ಈಗ ಸಾರ್ವತ್ರಿಕವಾಗತೊಡಗಿದವು. ಅಡಕೆಗೆ ಬೆಲೆ ಬಂದರೆ ಕೃಷಿಕರ ಮುಖದಲ್ಲಿ ಮಂದ ಹಾಸ ಮೂಡತೊಡಗಿತು. ಈ ನಡುವೆ ನಿಧಾನವಾಗಿ ಬತ್ತದ ಬೆಳೆ ಜನಪ್ರಿಯತೆಯನ್ನು ಕಳೆದುಕೊಳ್ಳತೊಡಗಿತು. ಈ ಪ್ರಕ್ರಿಯೆಯ ಫಲವಾಗಿ, ಈಗ ನಮ್ಮ ಹಳ್ಳಿಯ ಗದ್ದೆ ಬೈಲಿನಲ್ಲಿ ಹೆಚ್ಚಿನವರು ಮಳೆಗಾಲದಲ್ಲಿ ಮಾತ್ರ ನಾಟಿ ಮಾಡುತ್ತಾರೆ; ಇಲ್ಲಿ ಇನ್ನೊಂದು ಪ್ರಮುಖ ಬೆಳವಣಿಗೆ ಯಾಗಿರುವುದನ್ನು ಗಮನಿಸಬೇಕು.

ಇಪ್ಪತ್ತೊಂದನೆಯ ಶತಮಾನದ ಮೊದಲ ದಶಕದಲ್ಲಿ, ಒಮ್ಮೆಗೇ ನಮ್ಮೂರಿಗೆ ಜಿಂಕೆಗಳ ಆಗಮನವಾಯಿತು! ಅದಕ್ಕೂ ಹಿಂದೆ, ಬ್ರಿಟಿಷ್ ಆಡಳಿತದ
ಕಾಲದಲ್ಲೇ ನಮ್ಮೂರಿನಿಂದ ಜಿಂಕೆ, ಚಿರತೆ, ಹುಲಿಗಳು ನಿರ್ನಾಮವಾಗಿದ್ದವು. ಈಗ ಅದೆಲ್ಲಿಂದ ಬಂದವು, ಅಪರೂಪದ ಜಿಂಕೆಗಳು? ಅರಣ್ಯ
ಇಲಾಖೆಯವರು ತಂದು ಬಿಟ್ಟಿದ್ದಾರೆ ಎಂದರು ಕೆಲವರು. ಗದ್ದೆ ಬಯಲಿನ ಅಂಚಿನಲ್ಲಿ ಜಿಂಕೆಗಳು ಓಡಾಡುವುದನ್ನು ಕಂಡು ಮೊದಲಿಗೆ ಖುಷಿ; ಆದರೆ
ಒಂದೇ ವರ್ಷದಲ್ಲಿ ಗೊತ್ತಾಯಿತು, ಜಿಂಕೆಗಳ ತೊಂದರೆ ಪ್ರಮಾಣ! ಹತ್ತಾರು ಜಿಂಕೆಗಳು ರಾತ್ರಿ ಹೊತ್ತಿನಲ್ಲಿ ಕಾಡು, ಗುಡ್ಡೆ, ಹಾಡಿಯಿಂದ ಕೆಳಗಿಳಿದು
ಬಂದು, ಬತ್ತವನ್ನು, ಧಾನ್ಯದ ಗಿಡಗಳನ್ನು ತಿನ್ನತೊಡಗಿದವು.

ವರ್ಷಗಳು ಕಳೆದಂತೆ, ಅವುಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಾ ಬಂದು, ಕೊನೆ ಕೊನೆಗೆ ಒಂದೊಂದು ರಾತ್ರಿಯಲ್ಲಿ ಒಂದು ಹಿಂಡು ಜಿಂಕೆ ಗದ್ದೆಗೆ ಕಾಲಿಟ್ಟರೆ ಅರ್ಧಕ್ಕರ್ಧ ಬೆಳೆ ನಾಶ. ಕಾನೂನಿನ ಪ್ರಕಾರ ಆ ಜಿಂಕೆಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ! ಪ್ಲಾಸ್ಟಿಕ್ ಬಲೆ ಹಾಕಿ ಬತ್ತದ ಬೆಳೆಯನ್ನು, ಧಾನ್ಯವನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು; ಆ ಪ್ರಯತ್ನ ಈಗಲೂ ಅಲ್ಲಲ್ಲಿ ಮುಂದುವರಿದಿದೆ. ಆದರೆ ಈ ಎಲ್ಲಾ ತಾಪತ್ರಯ ಗಳು ಬೇಡ ಎಂದು ಹಲವರು ಅದಾಗಲೇ ಎರಡನೆಯ ಬೆಳೆಯನ್ನು, ಮೂರನೆಯ ಬೆಳೆಯನ್ನು ತೆಗೆಯುವುದನ್ನೇ ಬಿಟ್ಟು ಬಿಟ್ಟಿದ್ದಾರೆ.

ಇದೇಕೆ ಹೀಗಾಗಿ ಹೋಯಿತು? ಕೇವಲ ನಾಲ್ಕು ದಶಕಗಳಲ್ಲಿ ಒಂದು ಪ್ರದೇಶದ ಸಾಂಪ್ರದಾಯಿಕ ಬತ್ತದ ಬೆಳೆಯ ಪದ್ಧತಿಯು, ಜನಪ್ರಿಯತೆಯನ್ನು
ಪೂರ್ಣ ಕಳೆದುಕೊಂಡಿದ್ದಾದರೂ ಹೇಗೆ? ಇದಕ್ಕೆ ಉತ್ತರವನ್ನು ಅರಸುತ್ತಾ ಹೋದರೆ, ಹಲವು ಪಾರಿಸರಿಕ ಮತ್ತು ಸಮಾಜೋಆರ್ಥಿಕ ಉತ್ತರಗಳು
ಹೊಳೆಯುತ್ತವೆ. ನಮ್ಮೂರಿನ ಹಾಡಿ, ಗುಡ್ಡಗಳಲ್ಲಿ ಸರಕಾರವೇ ಬೆಳೆಸಿ, ಪೋಷಿಸಿದ ಅಕೇಶಿಯಾದ ಹಾವಳಿಯೂ ಇದಕ್ಕೆ ಒಂದು ಕಾರಣ; ಅಕೇಶಿಯಾ ಬೆಳೆದಲ್ಲಿ ಬೇರೆ ಗಿಡ ಮರ ಬಳ್ಳಿಗಳು ಬೆಳೆಯುವುದಿಲ್ಲ; ಜಿಂಕೆಗಳಿಗೆ ಅಕೇಶಿಯಾ ಕಾಡಿನಲ್ಲಿ ತಿನ್ನುವಂತಹ ಆಹಾರದ ತೀವ್ರ ಕೊರತೆ ಯಾಗಿದ್ದರಿಂದಲೇ ಅವುಗಳ ಮೊದಲ ಆದ್ಯತೆ ಗದ್ದೆಯಲ್ಲಿ ರುವ ಬೆಳೆಗಳು.

ಇನ್ನೊಂದೆಡೆ ಗದ್ದೆ ನಾಟಿ ಮಾಡುವ ಮತ್ತು ಕೊಯ್ಲು ಮಾಡುವ ಸಂಬಳದ ವಿಪರೀತ ಏರಿಕೆ; ಇದರಿಂದಾಗಿ, ಸ್ವಂತ ಜಮೀನು ಇರುವ ಸಣ್ಣ ಪುಟ್ಟ ರೈತರಿಗೆ ತಮ್ಮ ಗದ್ದೆಯಲ್ಲಿ ಬತ್ತ ಬೆಳೆಯುವುದಕ್ಕಿಂತ, ಬೇರೆ ಕಡೆ ಕೆಲಸಕ್ಕೆ ಹೋಗುವುದೇ ಹೆಚ್ಚು ಲಾಭದಾಯಕ ಎನಿಸಿದೆ. ಬಡತನದ ರೇಖೆಯ ಕೆಳಗಿರುವವರಿಗೆ ಸರಕಾರದ ಯೋಜನೆಗಳ ಮೂಲಕ ದೊರೆಯುವ ಕಡಿಮೆ ಬೆಲೆಯ ಅಕ್ಕಿಯೂ ಸಹ, ಪರೋಕ್ಷವಾಗಿ ಗದ್ದೆಗಳಲ್ಲಿನ ಶ್ರಮಭರಿತ ದಿನಗೂಲಿಗೆ ಸಿದ್ಧವಿರುವವರ ಸಂಖ್ಯೆಯನ್ನು ಕಡಿಮೆ ಮಾಡಿದೆ!

ನಮ್ಮ ಹಳ್ಳಿಯಲ್ಲಿ ಹಲವು ಪ್ರದೇಶಗಳಲ್ಲಿ ಈ ರೀತಿ ಬೆಳೆ ತೆಗೆಯದೇ ಬಿಟ್ಟ ಪಾಳು ಗದ್ದೆಗಳನ್ನು ಹಲವು ಕಡೆ ಕಾಣಬಹುದು! ಹಿಂದೆ ಬೆಳೆ ತೆಗೆಯು
ತ್ತಿದ್ದ ಜಾಗಗಳೇ ಇಂದು ಖಾಲಿಯಾಗಿ ಉಳಿದಿರುವುದು ಚೋದ್ಯ ಮಾತ್ರವಲ್ಲ, ಒಟ್ಟಾರೆ ರಾಷ್ಟ್ರೀಯ ನಷ್ಟವೂ ಹೌದು. ಅತ್ತ ಪಟ್ಟಣಗಳ, ಮುಖ್ಯ
ರಸ್ತೆಗಳ ಅಂಚಿನಲ್ಲಿ ಇರುವ ಗದ್ದೆಗಳು ಸೈಟ್ ಗಳಾಗಲು ಕಾಯುತ್ತಾ ಬಿದ್ದಿರುವುದರಿಂದಾಗಿ, ಅಲ್ಲೂ ಬೆಳೆ ಬೆಳೆಯುವವರಿಲ್ಲ. ಈ ರೀತಿ ಗದ್ದೆಗಳು
ಬೆಳೆಯಿಲ್ಲದೇ ಪಾಳು ಬಿದ್ದಿದ್ದರೂ, ನಮ್ಮ ಹಳ್ಳಿಯಲ್ಲಿ ಹಿಂದೆ ಇದ್ದ ಬಡತನದ ತೀವ್ರತೆ ಇಂದು ಇಲ್ಲ; ಕೆಲಸ ಮಾಡಲು ಇಷ್ಟಪಡುವ ಎಲ್ಲರಿಗೂ
ಕೆಲಸ ದೊರೆಯುತ್ತಿದೆ; ಸರಕಾರದ ಸಬ್ಸಿಡಿಯಿಂದ ಆಹಾರಧಾನ್ಯ ಸುಲಭವಾಗಿ ದೊರೆಯುತ್ತಿದೆ; ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿದ್ದರೂ,
ಜನರಲ್ಲಿ ಖರೀದಿಸುವ ಸಾಮರ್ಥ್ಯ ಹೆಚ್ಚಳಗೊಂಡಿದೆ.

ಕೃಷಿ ಕಾರ್ಮಿಕರಿಗೆ, ಬಡವರಿಗೆ ಕಷ್ಟ ಗಳು ಇದ್ದರೂ, ಕೆಲವು ದಶಕಗಳ ಹಿಂದೆ ಇದ್ದಂತಹ ತೀವ್ರ ಸಂಕಷ್ಟ ಇಂದು ವಿರಳ. ಎಷ್ಟೋ ಕೃಷಿ ಕಾರ್ಮಿಕರ, ಸಣ್ಣ ಹಿಡುವಳಿದಾರರ ಮಕ್ಕಳುಗಳು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಇಂಗ್ಲಿಷ್ ಕಲಿಯಲು ಹೋಗುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ, ನಮ್ಮ ಹಳ್ಳಿಯ ಸಮಾಜವು ಒಂದು ಪ್ರಮುಖ ಬದಲಾವಣೆಯ ಪ್ರಕ್ರಿಯೆಗೆ ಒಳಪಡುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿಯು ತೀವ್ರ ರೀತಿಯಲ್ಲಿ ಸ್ಥಿತ್ಯಂತರಗೊಂಡು, ಕೆಲವೆಡೆ ಆಧುನಿಕತೆಯನ್ನು ಮೈಗೂಡಿಸಿಕೊಂಡರೂ, ಇನ್ನು ಕೆಲವು ವಲಯಗಳಲ್ಲಿ ಒಟ್ಟಾರೆ
ಕೃಷಿ ಪದ್ಧತಿಯೇ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಎಲ್ಲರೂ ಸಹಜವಾಗಿ ಆರ್ಥಿಕ ಲಾಭದತ್ತ ಮುಖ ಮಾಡಿದ್ದು (ಅದು ತಪ್ಪು ಎಂದು
ಇಲ್ಲಿ ಹೇಳುತ್ತಿಲ್ಲ), ಹಳೆಯ ಪದ್ಧತಿಗಳು, ಮೌಲ್ಯಗಳು ಬೆಲೆಯನ್ನು ಕಳೆದುಕೊಳ್ಳುತ್ತಿರುವ ಸೂಕ್ಷ್ಮ ಎನ್ನಬಹುದಾದ ಸ್ಥಿತಿಯಲ್ಲಿ ನಾವಿಂದು ಇದ್ದೇವೆ.

epaper code:
Read E-Paper click here